ಮಹಾಭಾರತದಲ್ಲಿ
ಹೇಳುವಂತೆ: ಅಶ್ವತ್ಥಾಮ ತನ್ನ ಜಿದ್ದನ್ನು ಬಿಡದೆ “ಪಾಂಡವರ ವಂಶವನ್ನು ನಿರ್ವಂಶ
ಮಾಡಬೇಕೆನ್ನುವುದು ನನ್ನ ಸಂಕಲ್ಪ” ಎಂದು ಹೇಳಿದಾಗ, ಕೃಷ್ಣ ಒಂದು ಮಾತನ್ನು ಹೇಳುತ್ತಾನೆ:
“ತಿಳಿಗೇಡಿತನದಿಂದ ಹುಚ್ಚು-ಹುಚ್ಚಾಗಿ ಮಾತನಾಡುತ್ತಿರುವ ನಿನಗೆ ಕೃಷ್ಣ ಅಂದರೆ ಏನು ಎಂದು
ತೋರಿಸುವ ಅಗತ್ಯವಿದೆ. ನಿನಗೆ ಅದೇನು ಮಾಡಲು ಶಕ್ಯವೋ ಅದನ್ನು ಮಾಡು, ಆದರೆ ಪಾಂಡವರ ವಂಶ
ಉಳಿಯುತ್ತದೆ. ಇದು ನನ್ನ ಸಂಕಲ್ಪ” ಎಂದು. ಈ ಮಾತಿಗನುಗುಣವಾಗಿ ಇಲ್ಲಿ ಚಕ್ರಧಾರಿ ರೂಪನಾಗಿ
ಕೃಷ್ಣ ಪರೀಕ್ಷಿತನ ರಕ್ಷಣೆಗೆ ನಿಂತ.
ಯದ್ಯಪ್ಯಸ್ತ್ರಂ
ಬ್ರಹ್ಮಶಿರಸ್ತ್ವಮೋಘಂ ಚಾಪ್ರತಿಕ್ರಿಯಮ್ ।
ವೈಷ್ಣವಂ ತೇಜ ಆಸಾದ್ಯ
ಸಮಶಾಮ್ಯದ್ ಭೃಗೂದ್ವಹ ॥೧೮॥
ಬ್ರಹ್ಮಾಸ್ತ್ರವನ್ನು
ತಡೆಯುವುದು ಸಾಧಾರಣವಾದ ಕೆಲಸವಲ್ಲ. ಇಲ್ಲಿ ಅಸ್ತ್ರ ಪ್ರಯೋಗಿಸಿದವರು ಸ್ವಯಂ ರುದ್ರ ದೇವರ
ಅವತಾರ. ಬ್ರಹ್ಮಾಸ್ತ್ರದ ಋಷಿ ಚತುರ್ಮುಖ ಮತ್ತು ದೇವತೆ ಸ್ವಯಂ ನಾರಾಯಣ. ಇದು ತ್ರಿಮೂರ್ತಿ
ಸಂಗಮ. ಇಂತಹ ಶಕ್ತಿ ಎಂದೂ ಹುಸಿಯಾಗದು. ಆದರೆ ಇದು ವಿಷ್ಣುವನ್ನು ಅಭಿಮಂತ್ರಿಸಿದ ತೇಜಸ್ಸು.
ಇಂತಹ ತೇಜಸ್ಸನ್ನು ಸ್ವಯಂ ವಿಷ್ಣುವೇ ತೇಜಸ್ಸಾಗಿ ನಿಂತು ತಡೆದಾಗ ಆ ಅಸ್ತ್ರ ಉಪಶಮನವಾಗುತ್ತದೆ.
ಮಾ ಮಂಸ್ಥಾ ಹ್ಯೇತದಾಶ್ಚರ್ಯಂ
ಸರ್ವಾಶ್ಚರ್ಯಮಯೇSಚ್ಯುತೇ ।
ಯ ಇದಂ ಮಾಯಯಾ ದೇವ್ಯಾ
ಸೃಜತ್ಯವತಿ ಹಂತ್ಯಜಃ ॥೧೯॥
ಶೌನಕರು
ಹೇಳುತ್ತಾರೆ: “ಬ್ರಹ್ಮಾಸ್ತ್ರವನ್ನು ಕೃಷ್ಣ
ಉಪಶಮನ ಮಾಡಿರುವುದನ್ನು ನಂಬಲಾರದ ವಿಸ್ಮಯ ಎಂದುಕೊಳ್ಳಬೇಡಿ” ಎಂದು ಏಕೆಂದರೆ ಭಗವಂತ
ಸ್ವಯಂ ‘ಅಚ್ಚರಿ’. ಆತ ವಿಸ್ಮಯ. ಅಂತಹ ‘ಅದ್ಭುತ’ ಭಗವಂತ ಬ್ರಹ್ಮಾಸ್ತ್ರವನ್ನು ತಡೆದ ಎಂದರೆ
ಅಲ್ಲಿ ಯಾವ ಅಚ್ಚರಿಯೂ ಇಲ್ಲ. ಇಚ್ಛಾಮಾತ್ರದಿಂದ, ಪ್ರಕೃತಿಯ ಮುಖೇನ ಇಡೀ ಬ್ರಹ್ಮಾಂಡವನ್ನು ನಿರ್ಮಿಸಿದವ ಆತ. ಒಂದು ದಿನ ಈ
ಬ್ರಹ್ಮಾಂಡವನ್ನು ಕಬಳಿಸುವವನೂ ಆತನೇ. ಇಂತಹ ಹುಟ್ಟು-ಸಾವಿಲ್ಲದ ಭಗವಂತ ಬ್ರಹ್ಮಾಸ್ತ್ರದಿಂದ
ಪಾಂಡವ ಸಂತತಿ ಉಳಿಸಿದ ಎನ್ನುವುದು ಆತನ ಒಂದು ಅದ್ಭುತ ಲೀಲೆ.
ಬ್ರಹ್ಮತೇಜೋವಿನಿರ್ಮುಕ್ತೈರಾತ್ಮಜೈಃ
ಸಹ ಕೃಷ್ಣಯಾ ।
ಪ್ರಯಾಣಾಭಿಮುಖಂ
ಕೃಷ್ಣಮಿದಮಾಹ ಪೃಥಾ ಸತೀ ॥೨೦॥
ಉತ್ತರೆಯ
ಗರ್ಭದಲ್ಲಿನ ಶಿಶುವನ್ನು ಸಂರಕ್ಷಿಸಿದ ಘಟನೆಯನ್ನು ನೋಡಿ ಎಲ್ಲರೂ ಸಂತೋಷ ಪಡುತ್ತಾರೆ.
ಪ್ರಯಾಣಕ್ಕೆ ಮುಂಚಿತವಾಗಿ ಕುಂತಿ ಕೃಷ್ಣನನ್ನು ವಿಶೇಷವಾಗಿ ಸ್ತುತಿಸುತ್ತಾಳೆ.
ಪ್ರಥೋವಾಚ-
ನಮಸ್ಯೇ ಪುರುಷಂ
ತ್ವಾದ್ಯಮೀಶ್ವರಂ ಪ್ರಕೃತೇಃ ಪರಮ್ ।
ಅಲಕ್ಷ್ಯಂ ಸರ್ವಭೂತಾನಾಮಂತರ್ಬಹಿರಪಿ
ಧ್ರುವಮ್ ॥೨೧॥
ಉಪನಿಷತ್ತಿನ ಸಾರ
ತುಂಬಿದ, ಅಪೂರ್ವ ಪದಗುಚ್ಛಗಳಿಂದ ಕೂಡಿದ ಶ್ಲೋಕಗಳಿಂದ ಕೃಷ್ಣನನ್ನು ಸ್ತೋತ್ರಮಾಡುತ್ತಿರುವ ಕುಂತಿಯ
ವೈದೂಷ್ಯವನ್ನು ನಾವಿಲ್ಲ ಕಾಣಬಹುದು. ಕುಂತಿ ಹೇಳುತ್ತಾಳೆ: ಗುಣತ್ರಯ(ಪ್ರಕೃತಿ)ಗಳಿಂದ ದೇಹವನ್ನು
ಸೃಷ್ಟಿಮಾಡಿ, ಆ ದೇಹದೊಳಗೆ ನಮ್ಮನ್ನಿಟ್ಟು, ನಮ್ಮೊಳಗೆ ಅಂತರ್ಯಾಮಿಯಾಗಿ ನೆಲೆಸಿದ ‘ಪುರುಷಃ’
ನೀನು” ಎಂದು. ಈ ಬ್ರಹ್ಮಾಂಡ ಸೃಷ್ಟಿಗೂ ಮೊದಲು ಬ್ರಹ್ಮಾಂಡಕ್ಕಿಂತಲೂ ದೊಡ್ಡದಾಗಿ, ಅನಂತ ಆಕಾಶದಲ್ಲಿ
ತುಂಬಿರುವ ಭಗವಂತ ಪುರುಷಃ. ಇಂತಹ ಭಗವಂತ ಬ್ರಹ್ಮಾಂಡ ಸೃಷ್ಟಿ ಮಾಡಿ, ಬ್ರಹ್ಮಾಂಡದೊಳಗೆ ತುಂಬಿದ.
ನಂತರ ಬ್ರಹ್ಮಾಂಡದಲ್ಲಿ ಸಮಸ್ತ ಪಿಂಡಾಂಡಗಳನ್ನು ಸೃಷ್ಟಿಸಿ, ಪ್ರತಿಯೊಂದು ಪಿಂಡಾಂಡದಲ್ಲಿ ತುಂಬಿದ. ಪ್ರಕೃತಿಯಿಂದ ದೇಹವನ್ನು ಸೃಷ್ಟಿಮಾಡಿ ಅದರೊಳಗೆ
ತಾನೂ ಸೇರಿದ ಭಗವಂತ ಪ್ರಕೃತಿಗೆ ಬದ್ಧನಾಗಿಲ್ಲ. ಏಕೆಂದರೆ ಆತ ಗುಣಾತೀತ. ಹೀಗೆ ಗುಣದ ಲೇಪವಿಲ್ಲದೆ,
ಗುಣಬದ್ಧ ಶರೀರದಲ್ಲಿ ಭಗವಂತ ನೆಲೆಸಿದ್ದಾನೆ. ಇಲ್ಲಿ ಕುಂತಿ ಹೇಳುತ್ತಾಳೆ “ನಮಗೆ ಅಗೋಚರನಾಗಿ
ನಮ್ಮ ಮಾತು-ಮನಗಳಿಗೆ ಮೀರಿ ನಮ್ಮೊಳಗೆ ನೀನು ತುಂಬಿದ್ದೀಯ” ಎಂದು. ಭಗವಂತ ಎಲ್ಲರೊಳಗೂ ತುಂಬಿದ್ದಾನೆ. ಆದರೆ ಆತ ಎಲ್ಲರಿಗೂ ಅಗೋಚರ.
ಅವನನ್ನು ಕಾಣುವುದು, ‘ಹೀಗೇ ಇದ್ದಾನೆ’ ಎಂದು ಹೇಳುವುದು ಅಸಾಧ್ಯ. ಆತನನ್ನು ಮನಸ್ಸು ಗ್ರಹಿಸಲಾರದು.
ಮಾಯಾಯವನಿಕಾಚ್ಛನ್ನೋ
ಮಾಯಾSಧೋಕ್ಷಜ ಮರ್ತ್ಯಯಾ ।
ನ ಲಕ್ಷ್ಯಸೇ ಮೂಢದೃಶಾ
ನಟೋ ನಾಟ್ಯಚರೋ ಯಥಾ ॥೨೨॥
ಮುಂದುವರಿದು ಕುಂತಿ
ಹೇಳುತ್ತಾಳೆ: “ಮಾಯೆಯ ಪರದೆಯ ಮರೆಯಲ್ಲಿ ಮರೆಯಾಗಿ ನಿಂತವನು ನೀನು” ಎಂದು. ನಮಗೂ ಭಗವಂತನಿಗೂ ನಡುವೆ
ಅಜ್ಞಾನವೆಂಬ ಪರದೆ ಇದೆ. ಹಾಗಾಗಿ ಆತ ನಮ್ಮೆದುರೇ ಇದ್ದರೂ ನಮಗೆ ಕಾಣುವುದಿಲ್ಲ. ಋಗ್ವೇದದಲ್ಲಿ ಹೇಳುವಂತೆ:
“ನ ತಂ ವಿದಾಥ ಯ ಇಮಾ ಜಜಾನಾನ್ಯದ್ಯುಷ್ಮಾಕಮಂತರಂ ಬಭೂವ । ನೀಹಾರೇಣ
ಪ್ರಾವೃತಾ ಜಲ್ಪ್ಯಾ ಚಾಸುತೃಪ ಉಕ್ಥಶಾಸಶ್ಚರಂತಿ ॥೧೦.೦೮೨.೦೭ ॥” ಭಗವಂತ ನಮಗೆ ತಿಳಿದ ಯಾವ ವಸ್ತುವೂ ಅಲ್ಲ. ಆತ ಎಲ್ಲವುದಕ್ಕಿಂತ ಭಿನ್ನ.
ಆತನನ್ನು ಎಲ್ಲೋ ಹುಡುಕುವುದು ಬೇಡ. ಆತ ನಮ್ಮೊಳಗೇ ಇದ್ದಾನೆ. ಆದರೆ ಮಂಜುಕವಿದ ಕಣ್ಣು ನಮ್ಮದು.
ಆದ್ದರಿಂದ ಆತ ನಮ್ಮೆದುರೇ ಇದ್ದರೂ ನಾವು ಆತನನ್ನು ಕಾಣಲಾರೆವು. ಇಲ್ಲಿ ಕುಂತಿ ಹೇಳುತ್ತಾಳೆ:
ನಾವು ಹುಟ್ಟು-ಸಾವಿಗೆ ಬದ್ಧರಾದವರು. ಆದರೆ ನೀನು ಪ್ರತ್ಯಕ್ಷಕ್ಕೆ ಗೋಚರನಾಗದ ಅಧೋಕ್ಷಜ. ಇಂತಹ ನಿನ್ನನ್ನು
ಒಬ್ಬ ಸಾಮಾನ್ಯಳಾದ ನಾನು ಕಾಣುವುದುಂಟೇ? ಪರದೆಯ ಹಿಂದಿರುವ ನಟನಂತೆ, ನಮ್ಮ ಎದುರಿಗಿದ್ದರೂ ನಮಗೆ
ಗೋಚರನಾಗದ ಕೃಷ್ಣ ನೀನಲ್ಲವೇ?” ಎಂದು ಪ್ರಶ್ನಿಸುತ್ತಾಳೆ ಕುಂತಿ.
ತಥಾ ಪರಮಹಂಸಾನಾಂ ಮುನೀನಾಮಮಲಾತ್ಮನಾಮ್ ।
ಭಕ್ತಿಯೋಗವಿಧಾನಾರ್ಥಂ
ಕಥಂ ಪಶ್ಯೇಮ ಹಿ ಸ್ತ್ರಿಯಃ ॥೨೩॥
“ಸಂಸಾರದಲ್ಲಿ ಮುಳುಗಿದ ಒಬ್ಬ ಸಾಮಾನ್ಯ ಸ್ತ್ರೀ ನಾನು.
ಆದರೆ ನೀನು ಪರಮಹಂಸರ, ಮುನಿಗಳ ಮತ್ತು ಅಮಲಾತ್ಮರ ಭಕ್ತಿಗೆ ವಿಷಯಿಕನಾದವನು. ಇಂತಹ ನಿನ್ನನ್ನು
ನನ್ನಂತ ಸಾಮಾನ್ಯ ಸ್ತ್ರೀ ಅರಿಯಲು ಸಾಧ್ಯವೇ?” ಎಂದು ತನ್ನ ಅಸಾಯಕತೆಯನ್ನು ವ್ಯಕ್ತಪಡಿಸುತ್ತಾಳೆ
ಕುಂತಿ. ಇಲ್ಲಿ ಅಮಲಾತ್ಮರು ಎಂದರೆ ಕಾಮ-ಕ್ರೋಧಾದಿಗಳನ್ನುಗಳನ್ನು ಗೆದ್ದು, ರಜಸ್ಸು-ತಮಸ್ಸುಗಳನ್ನು
ಸೆಳೆದು, ಶುದ್ಧ ಸಾತ್ತ್ವಿಕ ಮನಸ್ಸನ್ನು ಗಳಿಸಿದವರು. ಇಂತಹ ಅಮಲಾತ್ಮರು ನಿರಂತರ ಭಗವಂತನ ಚಿಂತನೆ
ಮಾಡಿ ಮುನಿಗಳಾಗಿ ನಂತರ ಪರಮಹಂಸರಾಗುತ್ತಾರೆ.
ಸತ್ತ್ವ-ರಜಸ್ಸು-ತಮಸ್ಸಿನ ಮಿಶ್ರಣದಲ್ಲಿ ಕೇವಲ ಸತ್ತ್ವವನ್ನಷ್ಟೇ ಹೀರಿ ಅದರಲ್ಲೇ ಸದಾ ನೆಲೆನಿಲ್ಲಬಲ್ಲ
ವಿರಕ್ತರನ್ನು ಪರಮಹಂಸರು ಎನ್ನುತ್ತಾರೆ. ಭಗವಂತನನ್ನು ಬಿಟ್ಟು ಇತರ ವಿಷಯ ಇವರ ಮನಸ್ಸಿಗೆ ಸುಳಿಯುವುದಿಲ್ಲ.
No comments:
Post a Comment