ಅಥ ವಿಶ್ವೇಶ ವಿಶ್ವಾತ್ಮನ್
ವಿಶ್ವಮೂರ್ತೇ ಸ್ವಕೇಷು ಮೇ ।
ಸ್ನೇಹಪಾಶಮಿಮಂ
ಛಿಂಧಿ ದೃಢಂ ಪಾಂಡುಷು ವೃಷ್ಣಿಷು ॥೪೪॥
ಇಲ್ಲಿ ಕುಂತಿ ಕೃಷ್ಣನಲ್ಲಿ
ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾಳೆ: “ನಾನು ‘ಇಂತಹ ಮನೆತನಕ್ಕೆ ಸೇರಿದವಳು’ ಎನ್ನುವ ಭಾವನೆಯನ್ನು
ಅಳಿಸಿ ಹಾಕು ಕೃಷ್ಣ” ಎಂದು. ಭಗವಂತ ಯದುವಂಶ ಅಥವಾ ಪುರುವಂಶಕ್ಕಷ್ಟೇ ಮೀಸಲಾದವನಲ್ಲ. ಆತ ಇಡೀ ವಿಶ್ವದ
ಸೊತ್ತು. ಆತ ವಿಶ್ವೇಶ. ವಿಶ್ವದ ಒಡೆಯನಾಗಿ ಇಡೀ ವಿಶ್ವದಲ್ಲಿ ತತ್ತದ್ ರೂಪದಲ್ಲಿ ತುಂಬಿರುವವನು ಆತ.
ಆದ್ದರಿಂದ “ನನ್ನ ಕುಲ ಎನ್ನುವ ಸ್ನೇಹಪಾಶ ನನ್ನನ್ನು ಕಾಡದಂತೆ ಅದನ್ನು ಹರಿದುಬಿಡು. ಈ ಸ್ನೇಹಪಾಶ
ಮತ್ತೆ ನನ್ನನ್ನು ಸಂಸಾರದಲ್ಲಿ ಸಿಲುಕಿಸುವುದು ಬೇಡ” ಎಂದು ಕುಂತಿ ಪ್ರಾರ್ಥಿಸುತ್ತಾಳೆ. ಮಹಾಭಾರತದಲ್ಲಿ ನಾವು ಕುಂತಿಯ ಕಥೆಯನ್ನು ನೋಡಿದರೆ, ಕೊನೆಯಲ್ಲಿ
ಆಕೆ ಎಲ್ಲಾ ಸ್ನೇಹಪಾಶವನ್ನು ಕಳಚಿಕೊಂಡು, ಸರ್ವಸ್ವವನ್ನೂ ತೊರೆದು, ಕಾಡಿಗೆ ಹೋಗುವುದನ್ನು ಕಾಣುತ್ತೇವೆ.
ಅಂತಹ ಮಹಾಯೋಗಿನಿ ಆಕೆ.
ಶ್ರೀಕೃಷ್ಣ ಕೃಷ್ಣಸಖ
ವೃಷ್ಣಿವೃಷ ಅವನಿಧ್ರುಗ್ರಾಜನ್ಯವಂಶದಹನ ಅಮರವಂದ್ಯವೀರ್ಯ ।
ಗೋವಿಂದ ಗೋದ್ವಿಜಸುರಾರ್ತಿಹರಾವತಾರ
ಯೋಗೇಶ್ವರ ಅಖಿಲಗುರೋ ಭಗವನ್ನಮಸ್ತೇ ॥೪೬॥
ಇಲ್ಲಿ ಕುಂತಿ ಕೃಷ್ಣನನ್ನು
ಸ್ತುತಿಸುತ್ತಿದ್ದಾಳೆ: ಅರ್ಜುನನ ಸಖನಾಗಿ ನಿಂತು, ಅವನನ್ನು ಉದ್ದರಿಸಿದ ಕೃಷ್ಣನೇ, ವೃಷ್ಣಿ
ವಂಶದ ತಿಲಕಪ್ರಾಯನಾಗಿ ಅವತರಿಸಿ ಬಂದ ಭಗವಂತನೇ, ಭೂಮಿಗೆ ದ್ರೋಹ ಮಾಡಿದ ದುಷ್ಟ ಕ್ಷತ್ರಿಯರನ್ನು ಸುಟ್ಟು
ನಾಶಮಾಡಿದವನೇ, ಜ್ಞಾನಿಗಳ ಮತ್ತು ಸುರರ ದುಃಖವನ್ನು
ಪರಿಹರಿಸಿ, ಗೋವುಗಳಿಗೆ ಹಾಗೂ ಭೂಮಿಗೆ ಸಂತಸವನ್ನು ಕೊಟ್ಟ ಗೋವಿಂದನೇ, ಸಮಸ್ತ ಯೋಗಮಾರ್ಗ ಪ್ರವೃತ್ತಕ ಯೋಗೇಶ್ವರನೇ, ಇಡೀ ಜಗತ್ತಿಗೆ
ಗುರುವಾಗಿರುವ ಪ್ರಾಣದೇವರಿಗೂ ಗುರುವಾಗಿರುವ ಭಗವಂತನೇ ನಿನಗೆ ನಮಸ್ಕಾರ.
ಸೂತ ಉವಾಚ-
ಪೃಥಯೇತ್ಥಂ ಕಳಪದೈಃ
ಪರಿಗೀತಾಖಿಲೋದಯಃ ।
ಮಂದಂ ಜಹಾಸ ವೈಕುಂಠೋ
ಮೋಹಯನ್ ಯೋಗಮಾಯಯಾ ॥೪೭॥
ತಾಂ ಬಾಢಮಿತ್ಯುಪಾಮಂತ್ರ್ಯ
ಪ್ರವಿಶ್ಯ ಗಜಸಾಹ್ವಯಮ್ ।
ಸ್ತ್ರಿಯಶ್ಚ ಸ್ವಪುರಂ
ಯಾಸ್ಯನ್ ಪ್ರೇಮ್ಣಾ ರಾಜ್ಞಾ ನಿವಾರಿತಃ ॥೪೮॥
ಕುಂತಿಯ ಸ್ತೋತ್ರವನ್ನು
ಕೃಷ್ಣ ನಕ್ಕು ಸ್ವೀಕರಿಸಿದನಂತೆ. ಆ ನಂತರ ಹೊರಟುನಿಂತ ಕೃಷ್ಣನನ್ನು ದ್ರೌಪದಿ ಮೊದಲಾದ ಅಂತಃಪುರದ
ಸ್ತ್ರೀಯರು ಹಠಮಾಡಿ, ಹಸ್ತಿನಾಪುರದಲ್ಲೇ ಇರಬೇಕೆಂದು
ಪ್ರಾರ್ಥಿಸಿಕೊಂಡಾಗ, ಕೃಷ್ಣ ಅಲ್ಲೇ ನಿಲ್ಲುತ್ತಾನೆ. ಮಹಾಭಾರತದ ಈ ಹಂತದಲ್ಲಿ ಇನ್ನೂ ಭೀಷ್ಮರ ಉಪದೇಶ
ಭಾಗ ಮುಗಿದಿಲ್ಲ. ಅದು ಮುಗಿಯುವ ತನಕ ಕೃಷ್ಣ ಹಸ್ತಿನಾಪುರದಲ್ಲೇ ನಿಲ್ಲಬೇಕಾಗಿದೆ ಅದಕ್ಕೋಸ್ಕರ ಆತ
ನಿಲ್ಲುತ್ತಾನೆ.
॥ ಇತಿ ಶ್ರೀಮದ್ಭಾಗವತೇ
ಮಹಾಪುರಾಣೇ ಪ್ರಥಮಸ್ಕಂಧೇ ಅಷ್ಟಮೋSಧ್ಯಾಯಃ ॥
ಭಾಗವತ ಮಹಾಪುರಾಣದ
ಮೊದಲ ಸ್ಕಂಧದ ಎಂಟನೇ ಅಧ್ಯಾಯ ಮುಗಿಯಿತು.
*********
No comments:
Post a Comment