Wednesday, March 20, 2013

Shrimad BhAgavata in Kannada -Skandha-01-Ch-08(06)


ನಮಃ ಪಂಕಜನಾಭಾಯ ನಮಃ ಪಂಕಜಮಾಲಿನೇ
ನಮಃ ಪಂಕಜನೇತ್ರಾಯ ನಮಸ್ತೇ ಪಂಕಜಾಂಘ್ರಯೇ ೨೫

ಭಗವಂತನ ಅನುಸಂಧಾನ ಹೇಗಿರಬೇಕು ಎನ್ನುವುದನ್ನು ನಾವು ಈ ಶ್ಲೋಕದಲ್ಲಿ ಕಾಣುಬಹುದು. ಮೇಲ್ನೋಟದಲ್ಲಿ ನೋಡಿದರೆ ಈ ಶ್ಲೋಕ ತೀರ ಸರಳವಾದ ಶ್ಲೋಕ.  ಇಲ್ಲಿ ಭಗವಂತನನ್ನು “ನೀನು ಪಂಕಜನಾಭ, ನೀನು ಪಂಕಜಮಾಲಿ, ನೀನು ಪಂಕಜನೇತ್ರ, ನೀನು ಪಂಕಜಾಂಘ್ರ. ನಿನಗೆ ನಮಸ್ಕಾರ” ಎಂದು ಕುಂತಿ ಸ್ತುತಿಸಿದ್ದಾಳೆ. ಅಂದರೆ: “ನೀನು ಹೊಕ್ಕುಳಲ್ಲಿ ಕಮಲ ಉಳ್ಳವನು, ಕೊರಳಲ್ಲಿ ತಾವರೆಯ ಮಾಲೆ ಧರಿಸಿದವನು, ತಾವರೆಯಂತಹ ಕಣ್ಣುಳ್ಳವನು ಮತ್ತು ತಾವರೆಯಂತಹ ಪಾದವುಳ್ಳವನು” ಎಂದರ್ಥ.  ಆದರೆ ಈ ಶ್ಲೋಕಕ್ಕೆ ಇಷ್ಟೇ ಅರ್ಥವಲ್ಲ. ಇದರ ಹಿಂದೆ ಅಡಗಿರುವ ಅರ್ಥಸಾರವನ್ನು ನಾವು ಕೆದಕಿ ನೋಡಿದರೆ ಇಲ್ಲಿ ಭಗವಂತನ ಅನುಸಂಧಾನದ ಒಂದು ಸುಂದರ ಚಿತ್ರಣ ಕಾಣುತ್ತದೆ.
“ನಮಃ ಪಂಕಜನಾಭಾಯ” ಎಂದರೆ ನಾಭಿಯಲ್ಲಿ ತಾವರೆಯುಳ್ಳ ನಿನಗೆ ನಮಸ್ಕಾರ ಎಂದರ್ಥ. ಭಗವಂತನ ಈ ನಾಮ ವೈದಿಕ ಉಪಾಸನೆ ಹೇಗಿರಬೇಕು ಎನ್ನುವುದನ್ನು ವಿವರಿಸುತ್ತದೆ. ವೇದದಲ್ಲಿ ವಿಶ್ವಕರ್ಮ ಸೂಕ್ತ ಎನ್ನುವ ಸೂಕ್ತವೊಂದಿದೆ. ಅಲ್ಲಿ ಭಗವಂತನ ವರ್ಣನೆ ಮಾಡಿ, ಆತನನ್ನು ಹೇಗೆ ಉಪಾಸನೆ ಮಾಡಬೇಕು ಎಂದು ವಿವರಿಸಿದ್ದಾರೆ. ಅಲ್ಲಿ ಹೇಳುವಂತೆ: “ಅಜಸ್ಯ ನಾಭಾವಧ್ಯೇಕಮರ್ಪಿತಂ ಯಸ್ಮಿನ್ವಿಶ್ವಾನಿ ಭುವನಾನಿ ತಸ್ಥುಃ” ಅಂದರೆ “ಯಾವುದರಲ್ಲಿ ಆ ಹದಿನಾಲ್ಕು ಲೋಕಗಳು ಸೇರಿಕೊಂಡಿವೆಯೋ ಅದು ಹುಟ್ಟದವನ ಹೊಕ್ಕುಳಲ್ಲಿ ಹುಟ್ಟಿ ಬಂತು” ಎಂದರ್ಥ. ಇದು ವೇದ ಭಾಷೆ. ನಮಗೆ ತಕ್ಷಣ ಈ ಭಾಷೆ ಅರ್ಥವಾಗುವುದಿಲ್ಲ. ಅದಕ್ಕಾಗಿ ವೇದವ್ಯಾಸರು ಇದಕ್ಕೆ ಸ್ಕಾಂಧಪುರಾಣದಲ್ಲಿ ವ್ಯಾಖ್ಯಾನ ನೀಡಿದ್ದಾರೆ. ಅಲ್ಲಿ ಹೇಳುವಂತೆ: ಭಗವಂತನ ಉದರದಿಂದ ಈ ಪ್ರಪಂಚ ಸೃಷ್ಟಿಯಾಯಿತು. ಅದು ಕಮಲ ರೂಪದಲ್ಲಿ ಆತನ ನಾಭಿಯಿಂದ ಹೊರ ಚಿಮ್ಮಿತು. ಹೀಗೆ ಹೊರ ಹೊಮ್ಮಿದ ಕಮಲದಲ್ಲಿ ಇಡೀ ವಿಶ್ವ ಸೂಕ್ಷ್ಮರೂಪದಲ್ಲಿದ್ದು, ಅದರ ಜೊತೆಗೆ ಚತುರ್ಮುಖ ಬ್ರಹ್ಮ ಕೂಡಾ ಸೃಷ್ಟನಾದ. ಹೀಗೆ ಸೃಷ್ಟನಾದ ಚತುರ್ಮುಖ ಬ್ರಹ್ಮನೊಳಗೆ ತಾನೂ ನಿಂತು, ಸೂಕ್ಷ್ಮಪ್ರಪಂಚಕ್ಕೆ ಸ್ಥೂಲ ರೂಪವನ್ನು ಭಗವಂತ ನೀಡಿದ. ಇದು ಭಗವಂತನ ‘ಪಂಕಜನಾಭಃ ಅಥವಾ ಪದ್ಮನಾಭಃ’ ಎನ್ನುವ ನಾಮದ ಸಂಕ್ಷಿಪ್ತ ವಿವರಣೆ. ಇಲ್ಲಿ ಸೃಷ್ಟಿ ನಿರ್ಮಾಣ ಪ್ರಕ್ರಿಯೆಯ ವಿವರಣೆ ಅಡಗಿದೆ.
ಈ ಸೃಷ್ಟಿ ನಿರ್ಮಾಣಕ್ಕೆ ಮೊದಲು ಎಲ್ಲವೂ ಭಗವಂತನ ಉದರದಲ್ಲಿತ್ತು. ನಂತರ ಭಗವಂತನ ನಾಭಿಕಮಲದಿಂದ ಪ್ರಪಂಚ ಸೃಷ್ಟಿಯಾಯಿತು. ಮುಂದೆ ಮಹಾಪ್ರಳಯದಲ್ಲಿ ಈ ವಿಶ್ವ ನಾಶವಾಗುತ್ತದೆ. ಆ ನಂತರ ಪ್ರಳಯಕಾಲದ ನಂತರ ಮರಳಿ ಭಗವಂತನಿಂದ ಈ ಸೃಷ್ಟಿ ಪುನಃ ನಿರ್ಮಾಣವಾಗುತ್ತದೆ. ಹೀಗೆ ಅನಂತಕೋಟಿ ಕಾಲದಲ್ಲಿ ಅನಂತಕೋಟಿ ಬ್ರಹ್ಮಾಂಡ ಸೃಷ್ಟಿಯಾಗಿ ನಾಶವಾಗುತ್ತಿರುತ್ತದೆ. ಇದೊಂದು ನಿರಂತರ ಪ್ರವಾಹ. ಅನಾದಿ-ಅನಂತಕಾಲದಲ್ಲಿ ಅನಂತ ಬ್ರಹ್ಮಾಂಡದ ಮಾಲೆಯ ಪರಂಪರೆಯನ್ನು ಸೃಷ್ಟಿ-ಸಂಹಾರ ಮಾಡುವ ಅನಾದಿ-ಅನಂತ ತತ್ತ್ವ ಭಗವಂತ ‘ಪಂಕಜಮಾಲಿ’.
ಅನಾದಿಕಾಲದಿಂದ ಅನಂತ ಕಾಲದ ತನಕ ಸೃಷ್ಟಿ-ಸಂಹಾರ-ನಿಯಮನ ಮಾಡುವ ಭಗವಂತನನ್ನು ನಾವು ಕಾಣುವ ಬಗೆ ಹೇಗೆ? ಈ ಹಿಂದೆ ಹೇಳಿದಂತೆ ಜ್ಞಾನಾನಂದಮಯನಾದ ಭಗವಂತನನ್ನು ನಾವು ನಮ್ಮ ಆತ್ಮಸ್ವರೂಪದ ಕಣ್ಣಿನಿಂದ ಕಾಣಬೇಕು. ಆದರೆ ಇಲ್ಲಿ ಇನ್ನೊಂದು ಪ್ರಶ್ನೆ ಬರುತ್ತದೆ. ಅದೇನೆಂದರೆ: ಜ್ಞಾನಾನಂದಮಯನಾದ ಭಗವಂತನಿಗೆ ಆಕಾರವುಂಟೇ? ಈ ವಿಚಾರವಾಗಿ ಅನೇಕ ಭಿನ್ನಾಭಿಪ್ರಾಯಗಳಿವೆ. ಅನೇಕರು ಹೇಳುವಂತೆ: ಭಗವಂತನಿಗೆ ಆಕಾರವಿಲ್ಲ. ಆಕಾರವೆನ್ನುವುದು ಪಂಚಭೂತಗಳಿಂದ ಸೃಷ್ಟಿಯಾದ ದೇಹಕ್ಕೆ ಮಾತ್ರ ಇರುವಂತಹದ್ದು. ಆಕಾರ ಎಂದರೆ ಅದು ಸೀಮಿತವಾದುದು. ಆದರೆ ಜ್ಞಾನಾನಂದಮಯನೂ, ಸರ್ವಗತನೂ ಆದ ಭಗವಂತನಿಗೆ ಆಕಾರವಿಲ್ಲ ಎನ್ನುವುದು ಹಲವರ ವಾದ. ಆದರೆ ಈ ಕಲ್ಪನೆಯನ್ನು ಶಾಸ್ತ್ರದ ಮರ್ಮವನ್ನು ತಿಳಿದವರು ಒಪ್ಪುವುದಿಲ್ಲ. ಭಗವಂತ ಜ್ಞಾನಾನಂದಮಯನೂ ಹೌದು, ಸರ್ವಗತನೂ ಹೌದು. ಆದರೆ ಅವನಿಗೆ ಆಕಾರವಿದೆ. ಇದಕ್ಕೆ ಉದಾಹರಣೆ ಇಲ್ಲಿ ಕುಂತಿ ಕಾಣುತ್ತಿರುವ ಕೃಷ್ಣ. ಆಕೆಗೆ ಕೃಷ್ಣ ಸರ್ವಗತನಾಗಿ ಕಾಣುತ್ತಿಲ್ಲ. ಆಕೆಗೆ ಭಗವಂತ ಸರ್ವಗತ ಎನ್ನುವುದು ತಿಳಿದಿದೆ ಆದರೆ ಆತನನ್ನು ಆಕೆ ತನ್ನ ಮುಂದೆ ಸೀಮಿತವಾದ ಪ್ರದೇಶದಲ್ಲಿ ಕಾಣುತ್ತಿದ್ದಾಳೆ.
ಇನ್ನು ಸರ್ವಗತನಾದ ಭಗವಂತ ಬರುವುದು ಹೋಗುವುದು ಅಂದರೇನು? ಇಲ್ಲಿ ಕೃಷ್ಣ ಹಸ್ತಿನಾಪುರದಿಂದ ದ್ವಾರಕೆಗೆ ಹೊರಟ ಎಂದಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಈ ಪ್ರಶ್ನೆಗೆ ಕಠೋಪನಿಷತ್ತು ಉತ್ತರಿಸುತ್ತದೆ. ಅಲ್ಲಿ ಯಮ ನಚಿಕೇತನಿಗೆ ಕೊಡುವ ವಿವರಣೆ ಹೀಗಿದೆ: “ಆಸೀನೋ ದೂರಂ ವ್ರಜತಿ ಶಯಾನೋ ಯಾತಿ ಸರ್ವತಃ । ಕಸ್ತಂ ಮದಾಮದಂ ದೇವಂ ಮದನ್ಯೋ ಜ್ಞಾತುಮರ್ಹತಿ” ॥ಕಠ-೧-೨-೨೧॥ ಅಂದರೆ: ಭಗವಂತ ಇದ್ದಲ್ಲೇ ಇರುತ್ತಾನೆ, ಆದರೆ ಎಷ್ಟು ದೂರ ಬೇಕಾದರೂ ಹೋಗುತ್ತಾನೆ. ಒಂದು ಕಡೆ ಇರುತ್ತಾನೆ, ಆದರೆ ಎಲ್ಲಾ ಕಡೆ ತುಂಬಿದ್ದಾನೆ. ಇದು ಮೇಲ್ನೋಟಕ್ಕೆ ವಿರೋಧಾಭಾಸ ಹೇಳಿಕೆಯಂತೆ ಕಾಣುತ್ತದೆ. ಆದರೆ ಸರ್ವಗತನಾದ ಭಗವಂತ ಸರ್ವಸಮರ್ಥ ಎನ್ನುವುದನ್ನು ನಾವು ಮರೆಯಬಾರದು. ಸರ್ವಗತನಾದ ಭಗವಂತ ತನ್ನ ಭಕ್ತನಿಗಾಗಿ ಒಂದು ಕಡೆ ವಿಶಿಷ್ಠವಾಗಿ ಕಾಣಿಸಿಕೊಳ್ಳಬೇಕಾಗದ ಸನ್ನಿವೇಶ ಬಂದಾಗ, ಆತ ತನ್ನ ಭಕ್ತ ಕಾಣಿಸಿಕೊಳ್ಳಬಹುದಾದ ರೂಪದಲ್ಲಿ ಕಾಣಿಸಿಕೊಳ್ಳಬಲ್ಲ. ಭಗವಂತ ಸೀಮಿತರೂಪದಲ್ಲಿ ನಮಗೆ ಕಾಣಿಸಿಕೊಳ್ಳಬಲ್ಲನೇ   ಹೊರತು, ಆತನ ರೂಪ  ಸೀಮಿತವಲ್ಲ. ಆತ ಅಣೋರಣೀಯನೂ ಹೌದು, ಮಹತೋಮಯನೂ ಹೌದು.
ಭಗವಂತ ನಮಗೆ ಸೀಮಿತವಾದ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ ನಿಜ, ಆದರೆ ಹಾಗೆ ಕಾಣುವ ಆತನ ರೂಪ ಪಂಚಭೂತಗಳಿಂದಾಗಿಲ್ಲ. ಉಪನಿಷತ್ತಿನಲ್ಲಿ ಹೇಳುವಂತೆ: “ಯತ್ತೇ ರೂಪಂ ಕಲ್ಯಾಣತಮಮಮ್ ತತ್ತೇ ಪಶ್ಯಾಮಿ”.  ಅದು ಜ್ಞಾನಿಗಳು ಕಾಣುವ ಪರಮಮಾಂಗಲಿಕ ರೂಪ.  ಈ ರೂಪವನ್ನು ಜ್ಞಾನಿ ತನ್ನ ಸ್ವರೂಪಭೂತವಾದ ಕಣ್ಣಿನಿಂದ ಧ್ಯಾನದಲ್ಲಿ ಕಾಣುತ್ತಾನೆ. ಇದನ್ನೇ ಇಲ್ಲಿ ಕುಂತಿ ‘ಪಂಕಜನೇತ್ರಾಯ, ಪಂಕಜಾಂಘ್ರಯ’ ಎಂದು ಸ್ತುತಿಸಿದ್ದಾಳೆ. ಅಂದರೆ ಅರಳಿದ ತಾವರೆ ಎಸಳಿನಂತಹ ವಿಶಾಲವಾದ ಕಣ್ಣುಳ್ಳವನು, ತಾವರೆ ಮೊಗ್ಗಿನಂತಹ ಪಾದವುಳ್ಳವನು ಎಂದರ್ಥ.   ಸೌಂದರ್ಯಕ್ಕೆ ಸಂಕೇತ ಕಣ್ಣು. ‘ಅರಳಿದ ತಾವರೆಯ ಎಸಳಿನಂತಹ ವಿಶಾಲವಾದ ಕಣ್ಣು’ ಇದು ವೈದಿಕವಾಗಿ ಭಗವಂತನ ರೂಪವನ್ನು ಕಾಣುವ ಬಗೆ. ಇದನ್ನೇ ಛಾಂದೋಗ್ಯ ಉಪನಿಷತ್ತಿನಲ್ಲಿ ಹೀಗೆ ಹೇಳಿದ್ದಾರೆ: “ತಸ್ಯ ಯಥಾ ಕಪ್ಯಾಸಂ ಪುಂಡರೀಕಮೇವಮಕ್ಷಿಣೀ” (೧.೬.೭). ಧ್ಯಾನದಲ್ಲಿ ನಾವು ಭಗವಂತನ ಸರ್ವಾಂಗವನ್ನು(ಪ್ರತೀಕವನ್ನು) ಕಾಣುವುದು ಅಷ್ಟು ಸುಲಭವಲ್ಲ. ಹಾಗಾಗಿ ಮೊದಲು ಆತನ ಒಂದು ಅಂಗವನ್ನು ಕೇಂದ್ರೀಕರಿಸಿ ಧ್ಯಾನ ಮಾಡಬೇಕು. ನಮ್ಮ ಮೇಲೆ ಅನುಗ್ರಹದ ವೃಷ್ಟಿಯನ್ನು ಸುರಿಸುವ ಭಗವಂತನ ಅರಳುಗಣ್ಣನ್ನು ಧ್ಯಾನದಲ್ಲಿ ಕಾಣಲು ಪ್ರಯತ್ನಿಸಬೇಕು. ಭಗವಂತ ನಮ್ಮನ್ನು ನೋಡುತ್ತಿದ್ದಾನೆ, ಅವನ ಅನುಗ್ರಹ ನಮ್ಮ ಮೇಲೆ ಬೀಳುತ್ತಿದೆ. ಆತನ ಪಾದದ ಅಂಗುಷ್ಠ, ಅಂಗುಷ್ಠದ ಕೆಂಪು ಮಣಿಯಂತಹ ನಕಾಗ್ರ, ಆ ನಕಾಗ್ರದಿಂದ ಉದಿಸುವ ಸೂರ್ಯನಂತೆ ಕೆಂಪು ಕಿರಣಗಳು ಚಿಮ್ಮುತ್ತಿವೆ ಎನ್ನುವುದನ್ನು ನಾವು ಅನುಭವಿಸಬೇಕು.
ಪಂಕಜನೇತ್ರ ಎನ್ನುವ ಭಗವಂತನ ನಾಮವನ್ನು ಇನ್ನೊಂದು ಆಯಾಮದಲ್ಲಿ ನೋಡಿದರೆ: ಅದು ಭಗವಂತನ ವಿಶ್ವ ನಿಯಮನವನ್ನು ಹೇಳುತ್ತದೆ. “ನೇತೃತ್ವಾತಮ್ ನೇತ್ರಂ” .  ನಾಭಿಯಲ್ಲಿ ಅರಳಿದ  ಕಮಲರೂಪಿ ಬ್ರಹ್ಮಾಂಡವನ್ನು ನಿಯಮನ ಮಾಡುವ ನೀನು ಪಂಕಜನೇತ್ರಃ. ಇಂತಹ ನಿನಗೆ ಈ ಬ್ರಹ್ಮಾಂಡ(ಪಂಕಜ) ಎನ್ನುವುದು, ನಿನ್ನ ಪಾದದ ಕಿರುಬೆರಳಿನ ಸಂದಿಯಲ್ಲಿನ(ಅಂಘ್ರ) ಒಂದು ಪುಟ್ಟ ಧೂಳಿನ ಕಣವಿದ್ದಂತೆ (ಪಂಕಜಾಂಘ್ರಯಃ). ಎಂದು ಕುಂತಿ ಕೃಷ್ಣನನ್ನು ಸ್ತುತಿಸುತ್ತಾಳೆ.

No comments:

Post a Comment