Thursday, March 28, 2013

Shrimad BhAgavata in Kannada -Skandha-01-Ch-08(08)


ನಮೋSಕಿಂಚನವಿತ್ತಾಯ ನಿವೃತ್ತಗುಣವೃತ್ತಯೇ
ಆತ್ಮಾರಾಮಾಯ ಶಾಂತಾಯ ಕೈವಲ್ಯಪತಯೇ ನಮಃ ೩೦
ಇಲ್ಲಿ ಕುಂತಿ ಭಗವಂತನನ್ನು  “ನೀನು ಅಕಿಂಚನ ವಿತ್ತ (ಬಡವರ ಸಂಪತ್ತು)” ಎಂದು ಸ್ತುತಿಸುತ್ತಿದ್ದಾಳೆ. ಮನುಷ್ಯನಿಗೆ ಜೀವನದಲ್ಲಿ ದೊಡ್ಡ ಸಂಪತ್ತು ಎಂದರೆ ಆನಂದ. ಆತ ದುಡ್ಡನ್ನು ಬಯಸುವುದು ಸುಖಪಡುವುದಕ್ಕಾಗಿ. ಸುಖದಲ್ಲಿ ಅತ್ಯಂತ ಶ್ರೇಷ್ಠ ಸುಖ ದುಃಖದ ಸ್ಪರ್ಶವೇ ಇಲ್ಲದ ಮೋಕ್ಷ ಸುಖ. ಅಂತಹ ಮೋಕ್ಷವನ್ನು ಕೊಡುವವನು ಆ ಭಗವಂತ. ಹೀಗಾಗಿ ಭಗವಂತನಿಗಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ.  ಯಾರು ಪ್ರಾಪಂಚಿಕ ಸಂಪತ್ತನ್ನು  ತೊರೆಯುತ್ತಾರೋ ಅವರ ಅಪೂರ್ವ ಮತ್ತು ಅನಂತ ಸಂಪತ್ತಾಗಿ ಭಗವಂತನಿರುತ್ತಾನೆ. ಇಂತಹ ಭಗವಂತನನ್ನು ಇಲ್ಲಿ ಕುಂತಿ “ನಿವೃತ್ತಗುಣವೃತ್ತ” ಎಂದು ಸ್ತುತಿಸಿದ್ದಾಳೆ. ನಮಗೆ ತಿಳಿದಂತೆ ಪ್ರಾಪಂಚಿಕ ಸಂಪತ್ತು ಮೂರು ಗುಣಗಳ ಪ್ರವೃತ್ತಿಯನ್ನೊಳಗೊಂಡಿದೆ. ದುಡ್ಡಿನ ಬಗ್ಗೆ ಮೋಹ ತಮೋಗುಣ, ದುಡ್ಡು ಗಳಿಸುವುದಕ್ಕಾಗಿ ಮಾಡುವ ಸಾಹಸ ರಜೋಗುಣ. ದುಡ್ಡನ್ನು ಒಳ್ಳೆಯದಕ್ಕಾಗಿ ಬಳಸುವುದು ಸತ್ತ್ವಗುಣ. ಹೀಗೆ ದುಡ್ಡಿನಲ್ಲಿ ಮೂರು ಗುಣಗಳಿದ್ದರೂ ಸಹ ಅಲ್ಲಿ ರಜಸ್ಸು ಮತ್ತು ತಮಸ್ಸಿನ ಪ್ರಭಾವವೇ ಹೆಚ್ಚು. ಆದರೆ ಭಗವಂತನೆಂಬ ಸಂಪತ್ತಿನಲ್ಲಿ ಈ ಯಾವ ಗುಣದ ಲೇಪವೂ ಇಲ್ಲ. ಅವನು ಗುಣಾತೀತ ತತ್ತ್ವ. ಇಲ್ಲಿ ಗುಣಾತೀತ ಅಂದರೆ ಆತನಲ್ಲಿ ಯಾವ ಗುಣವೂ ಇಲ್ಲ ಎಂದರ್ಥವಲ್ಲ. ಆತ ತ್ರಿಗುಣಾತೀತ ಮತ್ತು ಸರ್ವಗುಣಪೂರ್ಣ.
ತನ್ನ ಸ್ವರೂಪಾನಂದದಲ್ಲೇ ರಮಿಸುವ ಭಗವಂತನನ್ನು ಇಲ್ಲಿ ಕುಂತಿ  “ಆತ್ಮಾರಾಮ” ಎಂದು ಸ್ತುತಿಸಿದ್ದಾಳೆ. ಆನಂದದಲ್ಲಿ ಎರಡು ವಿಧ. ಒಂದು ಹೊರಗಿನಿಂದ ಪಡೆಯುವ ಆನಂದ ಹಾಗೂ ಇನ್ನೊಂದು ಒಳಗೇ ಇರುವ ಆನಂದ. ನಾವು ನಮ್ಮೊಳಗೇ ಇರುವ ಆನಂದವನ್ನು ಮರೆತಾಗ ಹೊರಗಿನ ಆನಂದವನ್ನು ಪಡೆಯಲು ಬಯಸುತ್ತೇವೆ. ಸಂಸ್ಕೃತದಲ್ಲಿ ಬಾಹ್ಯಾನಂದವನ್ನು ‘ಮೋದ’ ಎಂದು ಕರೆಯುತ್ತಾರೆ. ಆದ್ದರಿಂದ ‘ಆನಂದ’ ಎನ್ನುವ ಸಂಸ್ಕೃತ ಪದ ಕೇವಲ ಅಂತರಂಗದ ಆನಂದವನ್ನು ಹೇಳುವ ಪದ.  ಆದರೆ ಸಂಕೀರ್ಣವಾಗಿ ಇಂದು ಆನಂದ ಎನ್ನುವ ಪದವನ್ನು ಎಲ್ಲವುದಕ್ಕೂ ಬಳಸುತ್ತಾರೆ. ನಮ್ಮೊಳಗೆ ತಾನೇ ತಾನು ಆನಂದಮಯನಾಗಿರುವ ಭಗವಂತ “ಆತ್ಮಾರಾಮ”. ಇದನ್ನೇ ಆಚಾರ್ಯ ಮಧ್ವರು ದ್ವಾದಶಸ್ತೋತ್ರದಲ್ಲಿ ಹೀಗೆ ಹಾಡಿದ್ದಾರೆ:

ಸ್ವಜನೋದಧಿಸಂವೃದ್ಧಿ ಪೂರ್ಣಚಂದ್ರೋಗುಣಾರ್ಣವಃ
ಅಮನ್ದಾನಂದ ಸಾಂದ್ರೋ ನಃ ಸದಾSವ್ಯಾದಿನ್ದಿರಾಪತಿಃ

ಅಮನ್ದಗುಣಸಾರೋSಪಿ ಮಂದಹಾಸೇನ ವೀಕ್ಷಿತಃ
ನಿತ್ಯಮಿಂದರಯಾSನಂದ ಸಾಂದ್ರೋ ಯೋ ನೌಮಿ ತಂ ಹರಿಮ್

ಭಗವಂತನ ಆನಂದ ಸ್ವರೂಪಭೂತವಾದಂತಹದ್ದು. ಆತ್ಮಸ್ವರೂಪವೂ ಕೂಡಾ ಆನಂದಮಯ. ಆದರೆ ಭಗವಂತ ಆನಂದದ ಪರಾಕಾಷ್ಠೆ. ಹಾಗಾಗಿ ಕುಂತಿ ಕೃಷ್ಣನನ್ನು “ಶಾಂತಾಯ” ಎಂದು ಸ್ತುತಿಸಿದ್ದಾಳೆ. ಇಲ್ಲಿ ‘ಶಂ’ ಎಂದರೆ ಆನಂದ, ‘ಅಂತ’ ಎಂದರೆ ತುತ್ತತುದಿ. ಭಗವಂತ ಪೂರ್ಣಾನಂದಸ್ವರೂಪ.  ಇಂತಹ ಭಗವಂತ ನಮಗೆ ದುಃಖರಹಿತ ಆನಂದವನ್ನು ಕೊಡುವ  ‘ಕೈವಲ್ಯಪತಿ’. ಹೀಗೆ “ದುಃಖದ ಸ್ಪರ್ಶವೇ ಇಲ್ಲದ ಸುಖಸ್ವರೂಪ ನೀನು”ಎಂದು  ಭಗವಂತನನ್ನು ಕುಂತಿ ಸ್ತೋತ್ರ ಮಾಡುತ್ತಾಳೆ.

No comments:

Post a Comment