ಜನ್ಮ ಕರ್ಮ ಚ ವಿಶ್ವಾತ್ಮನ್ನಜಸ್ಯಾಕರ್ತುರಾತ್ಮನಃ ।
ತಿರ್ಯಙ್
ನೃಪಯಾದಸ್ಸು ತದತ್ಯಂತವಿಡಂಬನಮ್ ॥೩೩॥
ಭಗವಂತ ಏನೂ
ಮಾಡುವುದಿಲ್ಲ ಆದರೆ ಎಲ್ಲವನ್ನೂ ಮಾಡುತ್ತಾನೆ! ಅವನಿಗೆ ಹುಟ್ಟಿಲ್ಲ, ಆದರೆ ಆತ ಭೂಮಿಯಲ್ಲಿ
ಹುಟ್ಟಿ ಬರುತ್ತಾನೆ. ಎಲ್ಲರೊಳಗೆ ಅಂತರ್ಯಾಮಿಯಾಗಿರುವ
ಭಗವಂತನೇಕೆ ಹುಟ್ಟಿಬರಬೇಕು? ಎಲ್ಲಾಕಡೆ ತುಂಬಿರುವ ಭಗವಂತನೇಕೆ ಎಲ್ಲೋ ಒಂದು ಕಡೆ ಜನಿಸುತ್ತಾನೆ?
ಸಂಕಲ್ಪಮಾತ್ರದಿಂದ ಎಲ್ಲವನ್ನೂ ಮಾಡಬಲ್ಲ ಭಗವಂತ ಭೂಮಿಯಲ್ಲೇಕೆ ಹುಟ್ಟುತ್ತಾನೆ? ಕೆಲವೊಮ್ಮೆ ಜಲಚರರೂಪದಲ್ಲಿ, ಇನ್ನು ಕೆಲವೊಮ್ಮೆ ಪಶು ಅಥವಾ
ಮಾನವ ರೂಪದಲ್ಲಿ ಭಗವಂತನೇಕೆ ಅವತಾರ ಮಾಡುತ್ತಾನೆ ಎನ್ನುವುದನ್ನು ಇಲ್ಲಿ ಕುಂತಿ ತನ್ನ ಸ್ತುತಿಯಲ್ಲಿ
ವಿವರಿಸುವುದನ್ನು ಕಾಣುತ್ತೇವೆ.
ಕೇಚಿದಾಹುರಜಂ ಜಾತಂ
ಪುಣ್ಯಶ್ಲೋಕಸ್ಯ ಕೀರ್ತಯೇ ।
ಯದೋಃ ಪ್ರಿಯಸ್ಯಾನ್ವವಾಯೇ
ಮಲಯಸ್ಯೇವ ಚಂದನಮ್ ॥೩೫॥
ಹುಟ್ಟೇ ಇಲ್ಲದ ಭಗವಂತ
ಯದುವಂಶದಲ್ಲಿ ವಾಸುದೇವ-ದೇವಕಿಯರ ಮಗನಾಗಿ ಹುಟ್ಟಿಬಂದ. ಏಕೆಂದರೆ ಆತನಿಗೆ ತನ್ನ ಭಕ್ತರಾದ ಅವರನ್ನು
ಉದ್ಧರಿಸಬೇಕಾಗಿತ್ತು. ಅವರ ಮನೋಭಿಲಾಷೆಯನ್ನು ಪೂರೈಸುವುದಕ್ಕಾಗಿ ಆತ ಹಾಗೆ ಹುಟ್ಟಿ ಬಂದ. ನಾವು ಯದುವಿನ
ಕಥೆಯನ್ನು ನೋಡಿದರೆ ಆತ ತಂದೆಯಿಂದ ಶಾಪಕ್ಕೊಳಗಾದವ. ಆತನ ತಂದೆ ಯಯಾತಿಗೆ ಇಬ್ಬರು ಹೆಂಡತಿಯರು.
ದೇವಯಾನಿ ಮತ್ತು ಶರ್ಮಿಷ್ಠೆ. ಇವರಿಗೆ ಐದು ಮಂದಿ ಮಕ್ಕಳು. ಯದು, ತುರ್ವಸು, ದ್ರುಹ್ಯು, ಅನು ಮತ್ತು
ಪುರು. ಒಮ್ಮೆ ಯಯಾತಿ ತನ್ನ ಮಕ್ಕಳಲ್ಲಿ ಅವರ ಯೌವನವನ್ನು ತನಗೆ ಕೊಡುವಂತೆ ಕೇಳುತ್ತಾನೆ. ಆಗ ಯದು
ಹಾಗೂ ಇತರ ಮೂರು ಮಂದಿ ಮಕ್ಕಳು ಇದಕ್ಕೆ ಒಪ್ಪುವುದಿಲ್ಲ. ಕೊನೆಯ ಮಗ ‘ಪುರು’ ತಂದೆಯ ಮುದಿತನವನ್ನು
ತಾನು ಸ್ವೀಕರಿಸಿ, ತನ್ನ ಯೌವನವನ್ನು ತಂದೆಗೆ ಧಾರೆಯರೆಯಲು ಒಪ್ಪುತ್ತಾನೆ. ಆಗ ಯಯಾತಿ ‘ಪುರು’ವನ್ನು
ತನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸುತ್ತಾನೆ ಹಾಗೂ ಇತರ ನಾಲ್ವರನ್ನು ನೀವು ರಾಜ್ಯಬ್ರಷ್ಟರಾಗಿ ಎಂದು
ಶಪಿಸುತ್ತಾನೆ. ತಂದೆಯ ಆಶೀರ್ವಾದ ಪಡೆದ ‘ಪುರು’ ವಂಶದಲ್ಲಿ ಪಾಂಡವರು ಜನಿಸುತ್ತಾರೆ. ಶಾಪಕ್ಕೊಳಗಾದ
ನಾಲ್ವರಲ್ಲಿ ‘ಯದು’ ಮಹಾನ್ ವಿಷ್ಣುಭಕ್ತನಾಗಿದ್ದುದರಿಂದ ಭಗವಂತ ಆತನ ವಂಶದಲ್ಲಿ ಅವತಾರವೆತ್ತಿ
ಆತನನ್ನು ಉದ್ಧರಿಸುತ್ತಾನೆ. “ಹೇಗೆ ಗಂಧದ ಮರಗಳಿಂದ ಮಲಯ ಪರ್ವತದ ಹೆಸರು ಅಜರಾಮರವಾಯಿತೋ ಹಾಗೆ ನಿನ್ನ
ಅವತಾರ ಯದುವಂಶದಲ್ಲಾದ್ದರಿಂದ ಆ ವಂಶದ ಹೆಸರು ಕೀರ್ತಿಭಾಜನವಾಯಿತು” ಎನ್ನುತ್ತಾಳೆ ಕುಂತಿ.
ಅಪರೇ ವಸುದೇವಸ್ಯ
ದೇವಕ್ಯಾಂ ಯಾಚಿತೋSಭ್ಯಗಾತ್ ।
ಅಜಸ್ತ್ವಮಸ್ಯ ಕ್ಷೇಮಾಯ
ವಧಾಯ ಚ ಸುರದ್ವಿಷಾಮ್ ॥೩೬॥
ಭಾರಾವತರಣಾಯಾನ್ಯೇ
ಭುವೋ ನಾವ ಇವೋದಧೌ ।
ಸೀದಂತ್ಯಾ ಭೂರಿಭಾರೇಣ
ಜಾತೋ ಹ್ಯಾತ್ಮಭುವಾSರ್ಥಿತಃ ॥೩೭॥
ಭಗವಂತ ತನ್ನ ಕೃಷ್ಣಾವತಾರದಲ್ಲಿ
ಕೇವಲ ಯದುವನ್ನಷ್ಟೇ ಉದ್ಧರಿಸಿದ್ದಲ್ಲ, ವಾಸುದೇವ-ದೇವಕಿಯರ ಅಭಿಲಾಷೆಯನ್ನೂ ಈಡೇರಿಸಿದ.
ವಾಸುದೇವ-ದೇವಕಿಯರು ಮೂಲರೂಪದಲ್ಲಿ (ಕಶ್ಯಪ-ಅದಿತಿ) ಭಗವಂತನೇ ತಮ್ಮ ಮಗನಾಗಿ ಹುಟ್ಟಬೇಕೆಂದು
ತಪಸ್ಸು ಮಾಡಿದ್ದರು. “ಅವರ ಪ್ರಾರ್ಥನೆಯನ್ನು ಮನ್ನಿಸಿ ನೀನು ಅವರಲ್ಲಿ ಹುಟ್ಟಿ ಬಂದೆ”
ಎನ್ನುತ್ತಾಳೆ ಕುಂತಿ. ಯದುವನ್ನು ಉದ್ದರಿಸುವುದು,
ಅದಿತಿ-ಕಶ್ಯಪರ ಪ್ರಾರ್ಥನೆಯನ್ನು ಈಡೇರಿಸುವುದಷ್ಟೇ ಭಗವಂತನ ಅವತಾರದ ಉದ್ದೇಶವಲ್ಲ. ಭಗವಂತನ ಸಮಸ್ತ
ಅವತಾರವು ಭೂ-ಭಾರದ ಹರಣಕ್ಕೋಸ್ಕರವಾಗುತ್ತದೆ. ಈ ಭೂಮಿ ಒಂದು ದೋಣಿಯಂತೆ. ಅಲ್ಲಿ ಅಧರ್ಮ
ಹೆಚ್ಚಾದಾಗ ಆ ಭಾರವನ್ನು ಭೂತಾಯಿ ಹೊರಳಾರಲು. ಭೂಮಿಯಲ್ಲಿ ದೌರ್ಜನ್ಯ ಹೆಚ್ಚಾಗಿ ಅದು ಮುಳುಗುವ ಪರಿಸ್ಥಿತಿ
ಬಂದಾಗ ಭಗವಂತ ಭೂಮಿಯ ಮೇಲೆ ಅವತಾರ ರೂಪಿಯಾಗಿ ಇಳಿದು ಬರುತ್ತಾನೆ. “ಬ್ರಹ್ಮ-ರುದ್ರಾದಿಗಳ ಪ್ರಾರ್ಥನೆಯನ್ನು
ಮನ್ನಿಸಿ, ಭೂಮಿಯಲ್ಲಿ ಅವತರಿಸಿ, ಧರ್ಮ ಸಂಸ್ಥಾಪನೆ ಮಾಡಿ, ಭೂಮಿಯ ಭಾರವನ್ನು ಕಡಿಮೆ ಮಾಡುವುದು ನಿನ್ನ
ಅವತಾರದ ಮೂಲ ಉದ್ದೇಶ” ಎನ್ನುತ್ತಾಳೆ ಕುಂತಿ.
ಭವೇSಸ್ಮಿನ್ ಕ್ಲಿಶ್ಯಮಾನಾನಾಮವಿದ್ಯಾಕಾಮಕರ್ಮಭಿಃ ।
ಶ್ರವಣಸ್ಮರಣಾರ್ಹಾಣಿ
ಕರಿಷ್ಯನ್ನಿತಿ ಕೇಚನ ॥೩೮॥
ಕೇವಲ ಭೂಮಿಯ ಭಾರವನ್ನು
ಇಳಿಸಲಿಕ್ಕಾಗಿ ಭಗವಂತ ಅವತರಿಸುವುದಲ್ಲ. ಆತನ ಅವತಾರದ ಮೂಲ ಉದ್ದೇಶ: ಸಂಸಾರದಲ್ಲಿ ಅವಿದ್ಯೆ-ಕಾಮ-ಕರ್ಮದಲ್ಲಿ
ತೊಡಗಿದ ಜನರಿಗೆ ತನ್ನ ಮಹಿಮೆಯ ಜ್ಞಾನವನ್ನು ಒದಗಿಸಿ, ತನ್ನ ಲೀಲೆಗಳಿಂದ ಒಂದೊಂದು ಜೀವಕ್ಕೂ ತನ್ನನ್ನು
ಪ್ರತ್ಯಕ್ಷ ಕಾಣುವ, ಪ್ರತ್ಯಕ್ಷ ಕೇಳಿ ಸ್ಮರಿಸುವ ಆನಂದ ಕೊಡುವುದು. ನಾವು ಭಗವಂತನ ಅವತಾರದ ಕಥೆಗಳನ್ನು
ಕೇಳಿ, ಧ್ಯಾನದಲ್ಲಿ ಅದನ್ನು ಅಳವಡಿಸಿಕೊಂಡು ಆಧ್ಯಾತ್ಮಿಕವಾಗಿ ಮುಂದುವರಿದು, ಸಂಸಾರದಿಂದ ಬಿಡುಗಡೆ
ಹೊಂದಲಿ ಎನ್ನುವ ಕಾರುಣ್ಯಕ್ಕಾಗಿ ಆತ ಭೂಮಿಯಲ್ಲಿ ಅವತರಿಸುತ್ತಾನೆ. ಈ ಅವತಾರಗಳಿಂದಾಗಿ ನಮಗೆ
ಆತನನ್ನು ಧ್ಯಾನದಲ್ಲಿ ಸ್ಮರಿಸುವ ಅವಕಾಶ ಲಭಿಸಿದೆ. ಒಂದು ವೇಳೆ ಭಗವಂತ ಕೃಷ್ಣಾವತಾರ ಮಾಡದೇ
ಇದ್ದಿದ್ದರೆ ಇಂದು ನಾವು ಧ್ಯಾನದಲ್ಲಿ ಕೊಳಲನ್ನೂದುವ ಆ ಸುಂದರ ಮೂರ್ತಿಯನ್ನು ಕಾಣಲು
ಸಾಧ್ಯವಿತ್ತೇ?
No comments:
Post a Comment