Monday, April 1, 2013

Shrimad BhAgavata in Kannada -Skandha-01-Ch-09(01)


ನವಮೋSಧ್ಯಾಯಃ

ಧರ್ಮರಾಯನಿಗೆ ರಾಜ್ಯಾಭಿಷೇಕವಾಗಿದೆ. ಎಲ್ಲರೂ ಆನಂದವಾಗಿದ್ದಾರೆ. ಆದರೆ ಧರ್ಮರಾಯ ಮಾತ್ರ ತಲೆಕೆಡಿಸಿಕೊಂಡು ಕುಳಿತಿದ್ದಾನೆ. ಆತನಿಗೆ ಸಮಾಧಾನವಿಲ್ಲ. ಇಷ್ಟು ದೊಡ್ಡ ಹತ್ಯಾಕಾಂಡಕ್ಕೆ ತಾನು ಜವಾಬ್ದಾರ ಎನ್ನುವ ಅಪರಾಧಿ ಪ್ರಜ್ಞೆ ಅವನನ್ನು ಕಾಡುತ್ತಿದೆ.
  
ಸೂತ ಉವಾಚ-
ವ್ಯಾಸಾದ್ಯೈರೀಶ್ವರೇಹಾಜ್ಞೈಃ ಕೃಷ್ಣೇನಾದ್ಭುತಕರ್ಮಣಾ
ಪ್ರಬೋಧಿತೋSಪೀತಿಹಾಸೈಃ` ನಾಬುಧ್ಯತ ಶುಚಾರ್ಪಿತಃ

ವೇದವ್ಯಾಸರು, ಭಗವಂತನ ಸಂಕಲ್ಪ ತಿಳಿದ ಅನೇಕ ಋಷಿಗಳು ಧರ್ಮರಾಯನನ್ನು ಸಂತೈಸುತ್ತಾರೆ. ಸ್ವಯಂ ಶ್ರೀಕೃಷ್ಣ  ಸಮಾಧಾನ ಹೇಳುತ್ತಾನೆ. “ನೀನು ಯುದ್ಧ ಮಾಡಲು ಬಯಸಲಿಲ್ಲ. ನಿನ್ನ ಮೇಲೆ ಯುದ್ಧ ಹೇರಲಾಯಿತು” ಎಂದು ಅನೇಕ ರೀತಿಯಲ್ಲಿ ಸಂತೈಸುತ್ತಾರೆ. ಅನ್ಯಾಯದ ವಿರುದ್ಧ ಹೋರಾಡುವುದು ಪಾಪವಲ್ಲ ಎಂದು ಇತಿಹಾಸದ ಉದಾಹರಣೆಯೊಂದಿಗೆ ಹೇಳಿದರೂ ಕೂಡಾ, ಆತನ ಮನಸ್ಸು ಸಮಾಧಾನವಾಗುವುದಿಲ್ಲ.

ಅಹೋ ಮೇ ಪಶ್ಯತಾಜ್ಞಾನಂ ಹೃದಿ ರೂಢಂ ದುರಾತ್ಮನಃ
ಪಾರಕ್ಯಸ್ಯೈವ ದೇಹಸ್ಯ ಬಹ್ವ್ಯೋ ಮೇSಕ್ಷೌಹಿಣೀರ್ಹತಾಃ

ಬಾಲದ್ವಿಜಸುಹೃನ್ಮಿತ್ರ ಪಿತೃಭ್ರಾತೃಗುರುದ್ರುಹಃ
ನ ಮೇ ಸ್ಯಾನ್ನಿರಯಾನ್ಮೋಕ್ಷೋ ಹ್ಯಪಿ ವರ್ಷಶತಾಯುತೈಃ

“ನನಗಾಗಿ ಹದಿನೆಂಟು ಅಕ್ಷೋಹಿಣಿ ಸೇನೆ ನಾಶವಾಯಿತಲ್ಲಾ, ರಾಜ್ಯದ ಲೋಭದಿಂದ ಯುದ್ಧ ವಿರಾಮ ಘೋಷಣೆ ಮಾಡದೇ, ನನ್ನ ಅಜ್ಞಾನದಿಂದ ರಕ್ತಪಾತಕ್ಕೆ ನಾನು ಕಾರಣನಾದೆ” ಎಂದು ತನ್ನನ್ನೇ ತಾನು ಹಳಿದುಕೊಳ್ಳುತ್ತಾನೆ ಧರ್ಮರಾಯ. “ನಾನು ಮಾಡಿದ ಪಾಪಕ್ಕೆ ನನಗೆ ನರಕ ಕಟ್ಟಿಟ್ಟ ಬುತ್ತಿ. ನರಕದಲ್ಲಿ ಲಕ್ಷಾಂತರ ವರ್ಷ ಕಳೆದರೂ ಅಲ್ಲಿಂದ ನನಗೆ ಬಿಡುಗಡೆ ದೊರೆಯದು” ಎಂದು ಆತ ಪರಿತಪಿಸುತ್ತಾನೆ.

No comments:

Post a Comment