ದ್ವಾದಶೋSಧ್ಯಾಯಃ
ಹಸ್ತಿನಾಪುರಕ್ಕೆ ವಿದುರನ ಆಗಮನ
ಪರೀಕ್ಷಿತನ ಜನನಾನಂತರ ಧರ್ಮರಾಯ ಮೂರು ಅಶ್ವಮೇಧಯಾಗ ಮಾಡುತ್ತಾನೆ. ಅಷ್ಟೇ ಅಲ್ಲ, ಹಸ್ತಿನಾಪುರದಲ್ಲಿ ನಿರಂತರ ಯಜ್ಞ-ಯಾಗಾದಿಗಳು ನಡೆಯುತ್ತಿರುತ್ತವೆ. ಪ್ರತಿಯೊಂದು ಯಜ್ಞ-ಯಾಗದಿಗಳಲ್ಲಿ ಶ್ರೀಕೃಷ್ಣ ಪಾಂಡವರ ಜೊತೆಗಿರುತ್ತಿದ್ದ.
ಪರೀಕ್ಷಿತನಿಗೆ ಸುಮಾರು
ಹತ್ತು ವರ್ಷ ಹಾಗೂ ಧರ್ಮರಾಯನಿಗೆ ಸುಮಾರು ಎಂಬತ್ತೆರಡು ವರ್ಷವಾಗಿರುವಾಗ ಯಾದವ ವಂಶದಲ್ಲಿ ಒಂದು ಘಟನೆ ನಡೆಯುತ್ತದೆ. ಜಾಂಬವಂತಿ
ಪುತ್ರ ‘ಸಾಂಬ’ ಋಷಿಗಳಿಂದ ಶಾಪಗ್ರಸ್ಥನಾಗುತ್ತಾನೆ. “ಇವನ ಹೊಟ್ಟೆಯಲ್ಲಿ ಹುಟ್ಟುವ ಸಂತಾನದಿಂದಲೇ
ಯದುವಂಶ ನಾಶವಾಗಲಿ” ಎಂದು ಋಷಿಗಳು ಶಾಪವೀಯುತ್ತಾರೆ. ಈ ಶಾಪದ ವಿಚಾರ ಉದ್ಧವನಿಗೆ ತಿಳಿಯುತ್ತದೆ. ಇದು ಭಗವಂತನ
ಲೀಲೆ, ಶ್ರೀಕೃಷ್ಣ ತನ್ನ ಅವತಾರ ಸಮಾಪ್ತಿ ಮಾಡುತ್ತಿದ್ದಾನೆ ಎನ್ನುವ ಸತ್ಯವನ್ನು ಆತ ಅರಿಯುತ್ತಾನೆ.
ಉದ್ಧವವನ ಪ್ರಾರ್ಥನೆಯಂತೆ
ಶ್ರೀಕೃಷ್ಣ ಆತನಿಗೆ ಜ್ಞಾನೋಪದೇಶ ಮಾಡುತ್ತಾನೆ ಮತ್ತು ಅದನ್ನು ಬದರಿಗೆ ಹೋಗಿ ಅಲ್ಲಿರುವ ಋಷಿಗಳಿಗೆ
ಉಪದೇಶಿಸಬೇಕೆಂದು ಹೇಳುತ್ತಾನೆ.[ಈ ಕುರಿತ ಅದ್ಭುತ ವಿವರಣೆ, ಉದ್ಧವಗೀತೆ, ಭಾಗವತದ ಹನ್ನೊಂದನೇ ಸ್ಕಂಧದಲ್ಲಿದೆ].
ಉದ್ಧವ ಶ್ರೀಕೃಷ್ಣನ ಆದೇಶದಂತೆ ಬದರಿಗೆ ಹೋಗಿ ಅಲ್ಲಿರುವ ಋಷಿಗಳಿಗೆ ಭಗವಂತನ ಜ್ಞಾನಸಂದೇಶವನ್ನು
ಬಿತ್ತರಿಸಿ, ಮರಳಿ ಬಂದು ಶ್ರೀಕೃಷ್ಣನ ಜೊತೆಗೇ ಇರುತ್ತಾನೆ.
ಸೂತ ಉವಾಚ--
ವಿದುರಸ್ತೀರ್ಥಯಾತ್ರಾಯಾಂ
ಮೈತ್ರೇಯಾದಾತ್ಮನೋ ಗತಿಮ್ ।
ಜ್ಞಾತ್ವಾSSಗಾದ್ಧಾಸ್ತಿನಪುರಂ
ತಯಾSವಾಪ್ತವಿವಿತ್ಸಿತಃ ॥೧॥
ಉದ್ಧವನಿಗೆ ಉಪದೇಶ
ಮಾಡಿದ ಕಾಲದಲ್ಲೇ ಶ್ರೀಕೃಷ್ಣ ವೇದವ್ಯಾಸ ಶಿಷ್ಯ ಮೈತ್ರೇಯನಿಗೂ ಜ್ಞಾನೋಪದೇಶ ಮಾಡಿರುತ್ತಾನೆ
ಮತ್ತು ಆ ಅಧ್ಯಾತ್ಮ ಸಂದೇಶವನ್ನು ವಿದುರನಿಗೆ ತಲುಪಿಸುವಂತೆ ಹೇಳಿರುತ್ತಾನೆ. ಭಗವಂತನ ಆದೇಶದಂತೆ ಮೈತ್ರೇಯ ಶ್ರೀಕೃಷ್ಣನ ಜ್ಞಾನಸಂದೇಶವನ್ನು ವಿದುರನಿಗೆ ಉಪದೇಶಿಸುತ್ತಾನೆ. [ಈ ಕುರಿತ ಅದ್ಭುತ ವಿವರಣೆ ಭಾಗವತದ ಮೂರು ಮತ್ತು ನಾಲ್ಕನೇ ಸ್ಕಂಧದಲ್ಲಿದೆ]
ಕುರುಕ್ಷೇತ್ರ
ಯುದ್ಧ ಪ್ರಾರಂಭವಾದಂದಿನಿಂದ ವಿದುರ ತನ್ನ ಹೆಚ್ಚಿನ ಸಮಯವನ್ನು ತೀರ್ಥಯಾತ್ರೆಯಲ್ಲಿ ಕಳೆಯುತ್ತಿದ್ದ ಮತ್ತು ಆಗಾಗ ಹಸ್ತಿನಾಪುರಕ್ಕೂ ಬಂದು ಹೋಗುತ್ತಿದ್ದ. ಹೀಗೆ ತೀರ್ಥಯಾತ್ರೆಯಲ್ಲಿರುವಾಗ ಒಮ್ಮೆ ಆತ ಉದ್ಧವನನ್ನು ಭೇಟಿಯಾಗುತ್ತಾನೆ. ಶ್ರೀಕೃಷ್ಣ ತನ್ನ ಅವತಾರ
ಸಮಾಪ್ತಿ ಮಾಡುವ ವಿಚಾರವನ್ನು ಉದ್ಧವ ಮತ್ತು ಇನ್ನು ಕೆಲವು ಅಂತರಂಗ ಭಕ್ತರಿಗಷ್ಟೇ
ಹೇಳಿರುತ್ತಾನೆ. ಇಂತಹ ದುಃಖದ ವಿಷಯವನ್ನು ಉದ್ಧವ ತಡೆಯಲಾಗದೇ, ಪರಮ ಆತ್ಮೀಯನಾದ ವಿದುರನಿಗೆ ತಿಳಿಸುತ್ತಾನೆ.
ಈ ವಿಚಾರವನ್ನು ತಿಳಿದ ವಿದುರ ಹಸ್ತಿನಾಪುರಕ್ಕೆ ಬಂದಿದ್ದಾನೆ.
No comments:
Post a Comment