Wednesday, April 3, 2013

Shrimad BhAgavata in Kannada -Skandha-01-Ch-09(02)


ನೈನೋ ರಾಜ್ಞಃ ಪ್ರಜಾಭರ್ತುಃ ಧರ್ಮ್ಯೋ ಯುದ್ಧೇ ವಧೋ ದ್ವಿಷಾಮ್
ಇತಿ ಮೇ ನ ತು ಬೋಧಾಯ ಕಲ್ಪತೇ ಶಾಶ್ವತಂ ವಚಃ                        

ಋಷಿಗಳು ವಿವಿಧ ರೀತಿಯಲ್ಲಿ ಧರ್ಮರಾಯನಿಗೆ ತಿಳಿಹೇಳುತ್ತಾರೆ. ವೇದದ ಉಕ್ತಿಗಳಿಂದ ಅವನನ್ನು ಸಂತೈಸುತ್ತಾರೆ. ವೇದದಲ್ಲಿ ಹೇಳುವಂತೆ: ಅನ್ಯಾಯದ ವಿರುದ್ಧ ಹೋರಾಡುವಾಗ ಒಬ್ಬ ಸೈನಿಕನನ್ನು ಕೊಂದರೆ ಅದು ಒಬ್ಬ ವೈದಿಕ ಚಾತುರ್ಮಾಸ ಆಚರಣೆ ಮಾಡಿದ ಪುಣ್ಯಕ್ಕೆ ಸಮಾನ; ಒಬ್ಬ ಕುದುರೆ ಸವಾರನನ್ನು ಕೊಂದರೆ ಅಗ್ನಿಷ್ಟೋಮಯಾಗ ಮಾಡಿದಷ್ಟು ಪುಣ್ಯ; ಒಬ್ಬ ಆನೆ ಸವಾರ ಅಥವಾ ಒಬ್ಬ ರಥಿಕನನ್ನು ಕೊಂದರೆ ಅಶ್ವಮೇಧಯಾಗ ಮಾಡಿದಷ್ಟು ಪುಣ್ಯ. ಆದರೆ ಇಲ್ಲಿ ಭಯಗ್ರಸ್ತನಾದ ಧರ್ಮರಾಯನಿಗೆ ಅನಾಧಿನಿತ್ಯವಾದ, ಅಪೌರುಷೇಯವಾದ ವೇದದ ಮಾತೇ ತಿಳಿಯುತ್ತಿಲ್ಲ. “ಅದು ಹೇಗೆ ಪಾಪವಲ್ಲ? ನನಗೇನೂ ಅರ್ಥವಾಗುತ್ತಿಲ್ಲ” ಎನ್ನುತ್ತಾನೆ ಆತ.  
ಧರ್ಮರಾಯನ ಮಾತನ್ನು ಕೇಳಿದ ಋಷಿಗಳು  “ನೀನು ಪುಣ್ಯ ಸಂಪಾದನೆಗಾಗಿ ಅಶ್ವಮೇಧಯಾಗ ಮಾಡು” ಎನ್ನುವ ಸಲಹೆ ಕೊಡುತ್ತಾರೆ.

ಯಥಾ ಪಂಕೇನ ಪಂಕಾಂಭಃ ಸುರಯಾ ವಾ ಸುರಾಕೃತಮ್
ಭೂತಹತ್ಯಾಂ ತಥೈವೈನಾಂ ನ ಯಜ್ಞೋ ಮಾರ್ಷ್ಟುಮರ್ಹತಿ

ಋಷಿಗಳ ಮಾತನ್ನು ಕೇಳಿ ಧರ್ಮರಾಯನಿಗೆ ಇನ್ನಷ್ಟು ಗಾಬರಿಯಾಗುತ್ತದೆ. “ಇಲ್ಲಿಯ ತನಕ ನರಹತ್ಯೆ ಮಾಡಿದ್ದಾಯ್ತು, ಇನ್ನು ಆ ಪಾಪ ಪರಿಹಾರಕ್ಕಾಗಿ ಮತ್ತಷ್ಟು ಮೂಕ ಪ್ರಾಣಿಗಳನ್ನು ಕೊಲ್ಲಬೇಕೆ? ಕೈ ಕೆಸರಾಯಿತು ಎಂದು ಮತ್ತೆ ಕೆಸರಿನಲ್ಲಿ ಕೈ ಮುಳುಗಿಸುವುದೇ? ಸುರಪಾನ ಮಾಡಿದ ತಪ್ಪಿಗೆ ಮತ್ತೆ ಪಾನ ಮಾಡುವುದೇ? ಯಾವ ಯಜ್ಞವೂ ನನ್ನನ್ನು ಉದ್ಧಾರ ಮಾಡಲಾರದು” ಎಂದು ಹೆದರಿ ನುಡಿಯುತ್ತಾನೆ ಯುದಿಷ್ಠಿರ.

ಸೂತ ಉವಾಚ-
ಇತಿ ಭೀತಃ ಪ್ರಜಾದ್ರೋಹಾತ್ ಸರ್ವಧರ್ಮವಿವಿತ್ಸಯಾ
ತತೋ ವಿಶಸನಂ ಪ್ರಾಯಾದ್ ಯತ್ರ ದೇವವ್ರತೋSಪತತ್

ಈ ರೀತಿ ಜನಾಂಗ ಹತ್ಯೆಯ ಭಯದಲ್ಲಿರುವ ಧರ್ಮರಾಯನನ್ನು ಕಂಡ ಕೃಷ್ಣ, ಆತನಿಗೆ ಆತನ ವಿರೋಧಪಕ್ಷದಲ್ಲಿ  ನಿಂತು ಯುದ್ಧ ಮಾಡಿದ ಬೀಷ್ಮಾಚಾರ್ಯರಿಂದಲೇ ಉಪದೇಶ ನೀಡಬೇಕು ಎನ್ನುವ ನಿರ್ಧಾರ ಮಾಡುತ್ತಾನೆ. ಇತ್ತ ಧರ್ಮರಾಯ ಭೀತಿಯಿಂದ ಏನೇನೋ ಯೋಚಿಸುತ್ತಿದ್ದಾನೆ. ಆತನಿಗೆ ಧರ್ಮದ ಸೂಕ್ಷ್ಮತೆಯನ್ನು ವಿಶ್ಲೇಷಿಸಲು ಸಾಧ್ಯವಾಗದೇ ಧರ್ಮದ ಎಲ್ಲಾ ಮುಖಗಳನ್ನು ತಿಳಿದುಕೊಳ್ಳಬೇಕು ಎನ್ನುವ ಆಸೆ ಹುಟ್ಟುತ್ತದೆ.

ಇನ್ನೊಂದೆಡೆ ಭೀಷ್ಮಾಚಾರ್ಯರು ಶರಶಯ್ಯೆಯಲ್ಲಿ ಮಲಗಿದ್ದಾರೆ. ಉತ್ತರಾಯಣ ಸಮೀಪಿಸುತ್ತಿರುವುದರಿಂದ  ಅವರು ತಮ್ಮ ಹೆಚ್ಚಿನ ಕ್ಷಣವನ್ನು ಭಗವಂತನ ಧ್ಯಾನದಲ್ಲಿ ಕಳೆಯಬೇಕು ಎಂದು ಕಣ್ಮುಚ್ಚಿ ಧ್ಯಾನ ಮಾಡುತ್ತಿದ್ದಾರೆ. ಶರಶಯ್ಯೆಯಲ್ಲಿ ಭೀಷ್ಮಾಚಾರ್ಯರು ಮಾಡಿದ ಭಗವಂತನ ಸ್ತೋತ್ರವನ್ನು ಭೀಷ್ಮಸ್ತವರಾಜ ಎಂದು ಕರೆಯುತ್ತಾರೆ. ಇತಿಹಾಸದಲ್ಲಿ ಇಂತಹ ಎರಡು ಭೀಷ್ಮಸ್ತವರಾಜವನ್ನು ನಾವು ಕಾಣಬಹುದು. ಒಂದು ಪಾಂಡವರಿಗೆ ಧರ್ಮೋಪದೇಶ ಮಾಡುವ ಮೊದಲು ಭೀಷ್ಮಾಚಾರ್ಯರು ಮಾಡಿದ ಭಗವಂತನ ಸ್ತೋತ್ರ ಹಾಗೂ ಇನ್ನೊಂದು ಧರ್ಮೋಪದೇಶ ಮಾಡಿದ ನಂತರ ಮಾಡಿದ ಸ್ತೋತ್ರ. ಒಂದು ಭಾರತದಲ್ಲಿ ದಾಖಲೆಯಾಗಿದ್ದರೆ, ಇನ್ನೊಂದು ಭಾಗವತದಲ್ಲಿ ದಾಖಲಾಗಿದೆ. ಎರಡೂ ಒಂದಕ್ಕೊಂದು ಪೂರಕ.
ಇತ್ತ ಭೀಷ್ಮಾಚಾರ್ಯರು ಶರಶಯ್ಯೆಯಲ್ಲಿ ಮಲಗಿ ಭಗವಂತನ ಧ್ಯಾನ ಮಾಡುತ್ತಿದ್ದರೆ, ಅತ್ತ ಪಾಂಡವರು ಅರಮನೆಯಲ್ಲಿದ್ದಾರೆ. ಶ್ರೀಕೃಷ್ಣ ಕೂಡಾ ಹಸ್ತಿನಾಪುರದಲ್ಲೇ ಇದ್ದಾನೆ. ಒಂದು ದಿನ ಧರ್ಮರಾಯ ಕೃಷ್ಣನನ್ನು ಭೇಟಿಯಾಗಲು ಬಂದಾಗ ಆತ ಕೃಷ್ಣ ಅತ್ಯಂತ ಗಂಭೀರವಾಗಿರುವುದನ್ನು ನೋಡುತ್ತಾನೆ. ಕಾರಣವೇನೆಂದು ಕೇಳಿದಾಗ ಕೃಷ್ಣ  ಹೇಳುತ್ತಾನೆ: “ಜ್ಞಾನದ ಸೂರ್ಯ ಮುಳುಗುತ್ತಿದ್ದಾನೆ. ಆತ ಮುಳುಗಿದರೆ ಈ ದೇಶದಲ್ಲಿ ಜ್ಞಾನ ಪರಂಪರೆ ಮುಳುಗಿ ಹೋಗುತ್ತದೆ. ಹಾಗಾಗಿ ಆತ ಮುಳುಗುವ ಮೊದಲು ಅಲ್ಲಿರುವ ಜ್ಞಾನವನ್ನು ಹೀರಿಕೋ. ತಕ್ಷಣ ಹೊರಡು” ಎಂದು. ಆದರೆ ಧರ್ಮರಾಯ ಭೀಷ್ಮಾಚಾರ್ಯರ ಬಳಿ ಹೋಗಲು ಹಿಂಜರಿದಾಗ, ಸ್ವಯಂ ಶ್ರೀಕೃಷ್ಣ ಆತನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಭೀಷ್ಮಾಚಾರ್ಯರಿದ್ದೆಡೆಗೆ ಬರುತ್ತಾನೆ. ಅಲ್ಲಿಯೂ ಕೂಡಾ ಧರ್ಮರಾಯ ಭೀಷ್ಮಾಚಾರ್ಯರಿಗೆ ಮುಖ ತೋರಿಸಲು ಹಿಂಜರಿಯುತ್ತಾನೆ. ಆಗ ಕೃಷ್ಣ ಭೀಷ್ಮಾಚಾರ್ಯರಿದ್ದಲ್ಲಿಗೆ ಹೋಗಿ, “ಧರ್ಮರಾಯ ಬಂದಿದ್ದಾನೆ, ಆದರೆ ನೀವು ಬಯ್ಯುತ್ತೀರಿ ಎಂದು ಅಲ್ಲೇ ನಿಂತಿದ್ದಾನೆ” ಎನ್ನುತ್ತಾನೆ. ಆಗ  ಧರ್ಮದ ಪರ ಹೋರಾಡಿ ಗೆದ್ದ ಧರ್ಮರಾಯನನ್ನು ಭೀಷ್ಮಾಚಾರ್ಯರು ಕೊಂಡಾಡುತ್ತಾರೆ. "ಒಂದು ವೇಳೆ ನೀನು ಅನ್ಯಾಯದ ವಿರುದ್ಧದ ಈ ಯುದ್ಧದಲ್ಲಿ ಹೋರಾಡದೇ ಇದ್ದಿದ್ದರೆ ನಿನ್ನನ್ನು ಹೇಡಿ ಎನ್ನುತ್ತಿದ್ದೆ" ಎನ್ನುತ್ತಾರೆ ಭೀಷ್ಮಾಚಾರ್ಯರು. ಈ ಮಾತಿನಿಂದ ಧರ್ಮರಾಯನಲ್ಲಿದ್ದ ಪಾಪಪ್ರಜ್ಞೆ ಹೊರಟುಹೋಗಿ ಆತ ತನಗೆ ಧರ್ಮೋಪದೇಶ ಮಾಡಬೇಕೆಂದು ಭೀಷ್ಮಾಚಾರ್ಯರಲ್ಲಿ ಕೇಳಿಕೊಳ್ಳುತ್ತಾನೆ. ಈ ರೀತಿ ಭೀಷ್ಮಾಚಾರ್ಯರ ಧರ್ಮೋಪದೇಶ ಪ್ರಾರಂಭವಾಗುತ್ತದೆ.

No comments:

Post a Comment