Saturday, April 27, 2013

Shrimad BhAgavata in Kannada -Skandha-01-Ch-12(4)


ಸುಮಾರು ೧೧೭ ವಯಸ್ಸಿನ ವೃದ್ಧ ಧೃತರಾಷ್ಟ್ರ ವಾನಪ್ರಸ್ಥ ಸ್ವೀಕರಿಸಿ ಅಧ್ಯಾತ್ಮ ಚಿಂತನೆಯಲ್ಲಿ ತೊಡಗುವುದನ್ನು ಬಿಟ್ಟು, ಅರಮನೆಯ ಭೋಗದಲ್ಲಿ ಜೀವನ ಸಾಗಿಸುತ್ತಿರುವುದು ಅಂದಿನ ಕಾಲದಲ್ಲಿ ವಿಚಿತ್ರ ಸಂಗತಿ. ಆತನಿಗೆ ಇನ್ನೂ ವೈರಾಗ್ಯ ಬಂದಿಲ್ಲದ್ದನ್ನು ನೋಡಿ, ಒಮ್ಮೆ ಭೀಮ ಆತನಿಗೆ ಕೇಳಿಸುವಂತೆ ಹೇಳುತ್ತಾನೆ: “ಈತನ ಮಕ್ಕಳೆಲ್ಲಾ ಈ ನನ್ನ ತೋಳಿನ ನಡುವೆ ಸಿಕ್ಕಿಯೇ ಸತ್ತಿರುವುದು” ಎಂದು. ಇಂತಹ ಮಾತನ್ನೂ ಕೇಳಿಸಿಕೊಂಡೂ ಧೃತರಾಷ್ಟ್ರ ಅರಮನೆಯಲ್ಲಿಯೇ ವಾಸವಿರುತ್ತಾನೆ! ಇನ್ನೊಮ್ಮೆ ಧೃತರಾಷ್ಟ್ರ ದುರ್ಯೋಧನನ ಶ್ರಾದ್ಧ ಮಾಡಿಸಲು ಅಗತ್ಯ ಸಾಮಾನು ಕಳುಹಿಸಬೇಕೆಂದು ಕೇಳಿಕೊಳ್ಳುತ್ತಾನೆ. ಆಗ  ರಾಜಕೋಶದ ಜವಾಬ್ಧಾರಿ ಹೊತ್ತ ಭೀಮ ಹೇಳುತ್ತಾನೆ: “ಅಯೋಗ್ಯನಾದ ಆ ದುರ್ಯೋಧನನ ಶ್ರಾದ್ಧಕ್ಕಾಗಿ ಸಮಾಜದ ದುಡ್ದನ್ನೇಕೆ ವ್ಯರ್ಥ ಮಾಡಬೇಕು? ಸಮಾಜದ ಧರ್ಮ ರಕ್ಷಣೆಗಿರುವ ಸಂಪತ್ತನ್ನು ಒಬ್ಬ ನೀಚನ ಶ್ರಾದ್ಧಕ್ಕೋಸ್ಕರ ಬಳಸುವುದು ಸಾಧ್ಯವಿಲ್ಲ. ಒಬ್ಬ ಸಮಾಜಕಂಟಕನಾಗಿ ಬದುಕಿದ ದುರ್ಯೋಧನನ ಶ್ರಾದ್ಧ ಮಾಡಿ ಏನು ಉಪಯೋಗ” ಎಂದು. ಈ ಎಲ್ಲಾ ಘಟನೆಗಳಿಂದ ಧೃತರಾಷ್ಟ್ರನಿಗೆ ಅವಮಾನವಾಗುತ್ತದೆ ಮತ್ತು ಆತ ಈ ವಿಚಾರವನ್ನು ವಿದುರನಲ್ಲಿ ಹೇಳಿಕೊಳ್ಳುತ್ತಾನೆ.
ಧೃತರಾಷ್ಟ್ರನ ಮಾತನ್ನು ಕೇಳಿದ ವಿದುರ ಹೇಳುತ್ತಾನೆ: ಭೀಮಸೇನ ಮಾಡಿರುವುದು ತಪ್ಪಲ್ಲ. ಏಕೆಂದರೆ ಭೀಮಸೇನನ ನ್ಯಾಯ ದಾಕ್ಷಿಣ್ಯದ ನ್ಯಾಯವಲ್ಲ. ಆತ ದಾಕ್ಷಿಣ್ಯಕ್ಕೋಸ್ಕರ ಅನ್ಯಾಯದ ಜೊತೆಗೆ ಎಂದೂ ರಾಜಿ ಮಾಡಿಕೊಂಡವನಲ್ಲ. ಭೀಮ ಎಂತಹ ಸಂದರ್ಭದಲ್ಲೂ ನಿಷ್ಠುರವಾಗಿ ಮಾತನಾಡುವವನಾದ್ದರಿಂದ ನಿರ್ದಾಕ್ಷಿಣ್ಯವಾಗಿ ಮಾತನಾಡಿದ ಮತ್ತು ಅದೇ ನಿಜವಾದ ಭಾಗವತ ಧರ್ಮ. ಇಷ್ಟು ವಯಸ್ಸಾದರೂ ನಿನಗೆ ವೈರಾಗ್ಯ ಬರುತ್ತಿಲ್ಲ. ಅದಕ್ಕಾಗಿ  ಚುಚ್ಚು ಮಾತಿನಿಂದಾಗಿಯಾದರೂ ನೀನು ವೈರಾಗ್ಯ ತಾಳಿ ಉದ್ಧಾರವಾಗಲಿ ಎಂದು ಆತ ಆಡಿದ ಮಾತುಗಳವು. ಆತನ ಮಾತಿನ ಹಿಂದಿರುವುದು ನಿನ್ನ ಒಳಿತಿನ ಒಳ ದೃಷ್ಟಿಯೇ ಹೊರತು, ದ್ವೇಷ-ಅಸೂಯೆ ಅಲ್ಲ. ನಿನಗೆ ಇನ್ನಾದರೂ ವೈರಾಗ್ಯ ಬರಬೇಕು. ಇಷ್ಟೆಲ್ಲಾ ಘಟನೆ ನಡೆದರೂ, ನೀನಿನ್ನೂ ಅರಮನೆಯಲ್ಲಿರಲು ಬಯಸುತ್ತಿದ್ದೀಯಲ್ಲ-ಎಂದು ಕೇಳುತ್ತಾನೆ.

ಪ್ರತಿಕ್ರಿಯಾ ನ ಯಸ್ಯೇಹ ಕುತಶ್ಚಿತ್ ಕರ್ಹಿಚಿತ್ ಪ್ರಭೋ
ಸ ಏಷ ಭಗವಾನ್ ಕಾಲಃ ಸರ್ವೇಷಾಂ ನಃ ಸಮಾಗತಃ ೨೦

ಯಾವುದನ್ನು ನಾವು ಮುಂದೂಡಲಾರೆವೋ, ಯಾವುದನ್ನು ತಡೆಹಿಡಿಯುವ ಶಕ್ತಿ ಈ ಪ್ರಪಂಚದಲ್ಲಿ ಯಾವ ಕಾಲದಲ್ಲೂ ಇಲ್ಲವೋ, ಅಂತಹ ಕಾಲಪುರುಷನಾದ ಭಗವಂತ “ನಮ್ಮ ಅವಸಾನಕಾಲ ಸಮೀಪಿಸಿತು” ಎಂದು ಸೂಚಿಸುತ್ತಿದ್ದಾನೆ. ನಾವು ಅದಕ್ಕೆ ಪ್ರತಿಸ್ಪಂದಿಸಬೇಡವೇ? “ನೀನಿನ್ನೂ ಅರಮನೆಯ ಭೋಗದಲ್ಲೇ ಮುಳುಗಿದ್ದೀಯ. ಕೊನೆಗಾಲದಲ್ಲಿ ಭಗವಂತನ ಚಿಂತನೆಯತ್ತ ನಿನ್ನ ಮನಸ್ಸೇಕೆ ಹೊರಳಲಿಲ್ಲ” ಎಂದು ಧೃತರಾಷ್ಟ್ರನನ್ನು ಪ್ರಶ್ನಿಸುತ್ತಾನೆ ವಿದುರ.

ಪಿತೃಭ್ರಾತೃಸುಹೃತ್ಪುತ್ರಾ ಹತಾಸ್ತೇ ವಿಗತಂ ವಯಃ
ಆತ್ಮಾ ಚ ಜರಯಾ ಗ್ರಸ್ತಃ ಪರಗೇಹಮುಪಾಸಸೇ ೨೨

ವಿದುರ ಸದ್ಯದ ಧೃತರಾಷ್ಟ್ರನ ಪರಿಸ್ಥಿತಿ ಏನೆಂಬುದನ್ನು ಅವನಿಗೆ ಮನವರಿಕೆ ಮಾಡಿಸುತ್ತಾನೆ. ತಂದೆ ಸ್ಥಾನದಲ್ಲಿದ್ದ ಭೀಷ್ಮಾದಿಗಳು ಹೊರಟುಹೋದರು; ಪಾಂಡು ಇತ್ಯಾದಿ ಸಹೋದರರೂ ಇಲ್ಲ; ಪ್ರೀತಿಸುವ ಆತ್ಮೀಯರು, ಪುತ್ರರು ಎಲ್ಲರನ್ನೂ ಆತ ಕಳೆದುಕೊಂಡಿದ್ದಾನೆ. “ಆದರೂ ಈ ಸಂಸಾರ ನಶ್ವರ ಎನ್ನುವ ಸತ್ಯ ನಿನಗೆ ಹೊಳೆಯಲಿಲ್ಲವಲ್ಲಾ” ಎಂದು ಪ್ರಶ್ನಿಸುತ್ತಾನೆ ವಿದುರ. ಎಲ್ಲವನ್ನೂ ಕಳೆದುಕೊಂಡು ಪಾಂಡವರ ಮನೆಯಲ್ಲಿ ವಾಸಿಸುತ್ತಿರುವ ಧೃತರಾಷ್ಟ್ರನಿಗೆ ಎಂದೂ ತಪಸ್ಸನ್ನಾಚರಿಸಬೇಕು ಎಂದು ಹೊಳೆಯಲೇ ಇಲ್ಲವಲ್ಲಾ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾನೆ ಆತ.

ಅಹೋ ಮಹೀಯಸೀ ಜಂತೋರ್ಜೀವಿತಾಶಾ ಯಯಾ ಭವಾನ್
ಭೀಮಾಪವರ್ಜಿತಂ ಪಿಂಡಮಾದತ್ತೇ ಗೃಹಪಾಲವತ್ ೨೩

ಆಶ್ಚರ್ಯದ ಉದ್ಗಾರದೊಂದಿಗೆ ವಿದುರ ಹೇಳುತ್ತಾನೆ: ಒಂದು ಪ್ರಾಣಿಗೆ ‘ಬದುಕಬೇಕು’ ಎನ್ನುವ ಆಸೆ ಅದೆಷ್ಟು ಭಯಾನಕ? ಭೀಮ ಕಳುಹಿಸುವ ಪಿಂಡಕ್ಕಾಗಿ ಕಾದುಕುಳಿತಿರುವ ಮನೆ ನಾಯಿಯಂತೆ ಬದುಕುತ್ತಿದ್ದೀಯಲ್ಲಾ? ಇದಕ್ಕಿಂತ ಹೆಚ್ಚಿನ ನಾಚಿಕೆಗೇಡು ಇನ್ನೇನಿದೆ? ಏಕೆ ಬೇಕು ನಿನಗೆ ಇಂತಹ ಬದುಕು? ಎಂದು ಧೃತರಾಷ್ಟ್ರನತ್ತ ಮಾತಿನ ಚಾಟಿ ಬೀಸುತ್ತಾನೆ ವಿದುರ.
ವಿದುರನ ತೀಕ್ಷ್ಣವಾದ ಮಾತಿನ ಚಾಟಿಯಿಂದ, “ಬಾ, ನಾನೂ ನಿನ್ನೊಂದಿಗೆ ಬರುತ್ತೇನೆ, ಕಾಡಿಗೆ ಹೋಗೋಣ” ಎನ್ನುವ ಹುರಿದುಂಬಿಸುವ ಹಿತನುಡಿಯಿಂದಾಗಿ, ಧೃತರಾಷ್ಟ್ರನಿಗೆ ಜ್ಞಾನೋದಯವಾಗುತ್ತದೆ. ನಾಚಿಕೆಯಿಂದ ಆತ ಹೇಳುತ್ತಾನೆ: “ಹೌದು, ನಾನೆಂದೂ ಈ ಬಗ್ಗೆ ಯೋಚಿಸಿರಲಿಲ್ಲ. ಸಾಯುವ ಕಾಲದಲ್ಲಿ ಭಗವಂತನ ಸ್ಮರಣೆಯಲ್ಲಿ ಕಾಲ ಕಳೆಯಬೇಕು ಎನ್ನುವ ವಿಚಾರವೇ ನನಗೆ ಹೊಳೆಯಲಿಲ್ಲ. ಬಹಳ ಒಳ್ಳೆಯ ಮಾತನ್ನಾಡಿ ನನ್ನ ಕಣ್ಣು ತೆರೆಸಿದೆ ನೀನು” ಎಂದು. ಇಷ್ಟು ಹೇಳಿ ಧೃತರಾಷ್ಟ್ರ “ಖಂಡಿತವಾಗಿ ಕಾಡಿಗೆ ಹೋಗೋಣ” ಎಂದು ಎದ್ದು ನಿಲ್ಲುತ್ತಾನೆ.
ಧೃತರಾಷ್ಟ್ರ ವಿದುರನೊಂದಿಗೆ ಕಾಡಿಗೆ ಹೊರಟು ನಿಂತಾಗ ಅವರ ಜೊತೆಗೆ ಗಾಂಧಾರಿ, ಸಂಜಯ ಮತ್ತು ಕುಂತಿ ತಾವೂ ಬರುತ್ತೇವೆಂದು ಹೊರಟು ನಿಲ್ಲುತ್ತಾರೆ. ಈ ಹಿಂದೆ ಹೇಳಿದಂತೆ-ಕುಂತಿ ಒಬ್ಬ ಮಹಾಮಹಿಳೆ. ಆಕೆ ತನ್ನ ಜೀವಮಾನದುದ್ದಕ್ಕೂ ಕಷ್ಟವನ್ನು ಎದುರಿಸಿದವಳು. ಇದೀಗ ತನ್ನ ಮಗ ರಾಜ್ಯಭಾರ ಮಾಡುತ್ತಿದ್ದರೂ, ಆ ರಾಜಭೋಗದ ಆಸೆ ಅವಳನ್ನು ಕಾಡಲಿಲ್ಲ. “ನನ್ನ ಮಗ ಸಿಂಹಾಸನವೇರಿರುವುದನ್ನು, ಆತ ನಿಜವಾದ ವೀರಪುರುಷ ಎನ್ನುವುದನ್ನು ಕಂಡೆ. ಕ್ಷತ್ರಿಯ ವಂಶದಲ್ಲಿ ಹುಟ್ಟಿದ್ದಕ್ಕೆ ಸಾರ್ಥಕವಾಯಿತು. ಇನ್ನೇನಾಗಬೇಕು ನನಗೆ”  ಎಂದು ಕುಂತಿ ಎಲ್ಲರೊಂದಿಗೆ ಕಾಡಿಗೆ ಹೊರಡಲು ಸಿದ್ಧಳಾಗುತ್ತಾಳೆ.
ಎಲ್ಲರೂ ಕಾಡಿಗೆ ಹೊರಡಲು ಸಿದ್ಧರಾಗಿ ಧರ್ಮರಾಯನಲ್ಲಿ ಅನುಮತಿ ಬೇಡುತ್ತಾರೆ. ಆದರೆ ಧರ್ಮರಾಯ ಒಪ್ಪಿಗೆ ಕೊಡುವುದಿಲ್ಲ. “ನೀವೆಲ್ಲರೂ ಹಿರಿಯರು. ನಿಮ್ಮನ್ನು ಕಾಡಿಗೆ ಕಳುಹಿಸಿ ನಾನು ರಾಜ್ಯಭಾರ ಮಾಡಲಾರೆ. ನೀವು ನನ್ನ ಕಣ್ಮುಂದೆ ಇರಬೇಕು, ನಾನು ನಿಮ್ಮ ಶುಶ್ರೂಷೆ ಮಾಡಿಕೊಂಡು ಆಡಳಿತ ಮಾಡಬೇಕು. ಇದನ್ನು ಬಿಟ್ಟು ನಿಮ್ಮನ್ನೆಲ್ಲಾ ಕಾಡಿಗೆ ಕಳುಹಿಸಿ ನಾನು ರಾಜ್ಯಭಾರ ಮಾಡಲಾಗದು. ನಾನೂ ನಿಮ್ಮೊಂದಿಗೆ ಕಾಡಿಗೆ ಬರುತ್ತೇನೆ” ಎಂದು ಹಠತೊಡುತ್ತಾನೆ ಆತ. ಯಾರು ಏನೇ ಹೇಳಿದರೂ ಧರ್ಮರಾಯ ಒಪ್ಪುವುದಿಲ್ಲ. ಆಗ ಧೃತರಾಷ್ಟ್ರ: “ಕಾಡಿಗೆ ಹೋಗಲು ಅನುಮತಿ ಕೊಡದೇ ಇದ್ದರೆ ನಾನು ಊಟ ಮಾಡುವುದಿಲ್ಲ” ಎಂದು ಸತ್ಯಾಗ್ರಹ ಮಾಡುತ್ತಾನೆ. ಆಗ ಧರ್ಮರಾಯ  ಅನುಮತಿ ನೀಡುತ್ತಾನೆ.

ಅಥೋದೀಚೀಂ ದಿಶಂ ಯಾತು ಸ್ವೈರಜ್ಞಾತಗತಿರ್ಭವಾನ್
ಇತೋSರ್ವಾಕ್ ಪ್ರಾಯಶಃ ಕಾಲಃ ಪುಂಸಾಂ ಗುಣವಿಕರ್ಷಣಃ ೨೮

ಕಾಡಿನಲ್ಲಿ ಎಲ್ಲಿ ತಪಸ್ಸನ್ನಾಚರಿಸಬಹುದು ಎನ್ನುವುದನ್ನು ವಿವರಿಸುತ್ತಾ ವಿದುರ ಹೇಳುತ್ತಾನೆ: “ಉತ್ತರ ದಿಕ್ಕಿನಲ್ಲಿ ತಪಸ್ಸಿಗೆ ಯೋಗ್ಯವೆಂದು ಕಾಣುವ ಒಂದು ಸ್ಥಳದಲ್ಲಿ ಕುಳಿತು ತಪಸ್ಸು ಮಾಡೋಣ” ಎಂದು. [ಹಸ್ತಿನಾಪುರದಿಂದ ಉತ್ತರ ದಿಕ್ಕಿರುವುದು ಹಿಮಾಲಯ. ಹಸ್ತಿನಾಪುರದಿಂದ ಹರಿದ್ವಾರಕ್ಕಿರುವುದು ಸುಮಾರು ೬೦ ಕಿ.ಮೀ ದೂರ ಎನ್ನುವುದನ್ನು ಓದುಗರು ಗಮನಿಸಬೇಕು].
ಈ ಶ್ಲೋಕದಲ್ಲಿ  “ಸ್ವೈರಜ್ಞಾತಗತಿ” ಎನ್ನುವ ಪದ ಬಳಕೆಯಾಗಿದೆ. ಇದನ್ನು ಸ್ವೈಃ-ಅಜ್ಞಾತಗತಿಃ ಎಂದು ಪದಚ್ಛೇದ ಮಾಡಿ ಕೆಲವರು ಬಳಸುತ್ತಾರೆ. ಹಾಗೆ ಮಾಡಿದರೆ ‘ಕಾಡಿನಲ್ಲಿ ಯಾರಿಗೂ ತಿಳಿಯದ ಅಜ್ಞಾತ ಸ್ಥಳ’ ಎಂದಾಗುತ್ತದೆ. ಆದರೆ ಇದು ಮಹಾಭಾರತಕ್ಕೆ ವಿರೋಧ. ನಮಗೆ ತಿಳಿದಂತೆ ಮಹಾಭಾರತದಲ್ಲಿ ‘ಪಾಂಡವರು ಧೃತರಾಷ್ಟ್ರ ಮತ್ತು ಇತರರನ್ನು ತಪಸ್ಸು ಮಾಡುವ ಸ್ಥಳಕ್ಕೆ ಬಿಟ್ಟು ಬಂದರು ಮತ್ತು ಧರ್ಮರಾಯ ಆಗಾಗ ಆ ಸ್ಥಳಕ್ಕೆ ಭೇಟಿ ಕೊಡುತ್ತಿದ್ದ’ ಎಂದಿದೆ. ಆದ್ದರಿಂದ ಅದು ಯಾರಿಗೂ ತಿಳಿಯದ ಅಜ್ಞಾತ ಸ್ಥಳವಲ್ಲ. ಆಚಾರ್ಯರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಈ ಶಬ್ದದ ಪದಚ್ಛೇದವನ್ನು “ಸ್ವೈರಜ್ಞಾತಗತಿಃ ವಿವಿಕ್ತಗತಿಃ” ಎಂದು ವಿವರಿಸಿದ್ದಾರೆ. ಅಂದರೆ ಸ್ವೈರ--ಜ್ಞಾತಗತಿಃ “ಯಾವ ಸ್ಥಳದಲ್ಲಿ ತಪಸ್ಸುಮಾಡೋಣ ಅನಿಸುತ್ತದೋ ಅಲ್ಲಿ ತಪಸ್ಸುಮಾಡೋಣ” ಎಂದರ್ಥ. 

No comments:

Post a Comment