ಸ ರಾಜಪುತ್ರೋ ವವೃಧ
ಆಶು ಶುಕ್ಲ ಇವೋಡುಪಃ ।
ಆಪೂರ್ಯಮಾಣಃ ಪಿತೃಭಿಃ
ಕಾಷ್ಠಾಭಿರಿವ ಸೋSನ್ವಹಮ್ ॥೧೧-೩೧॥
ಹದಿನೈದು ವರ್ಷ ತುಂಬಿ
ಹದಿನಾರಕ್ಕೆ ಕಾಲಿಡುತ್ತಿರುವ ಪರೀಕ್ಷಿತ ಹೇಗೆ ಕಾಣುತ್ತಿದ್ದ ಎನ್ನುವುದನ್ನು ಈ ಶ್ಲೋಕದಲ್ಲಿ ಒಂದು ಸುಂದರವಾದ ದೃಷ್ಟಾಂತದೊಂದಿಗೆ ವರ್ಣಿಸಲಾಗಿದೆ. ಇಲ್ಲಿ ಹೇಳುತ್ತಾರೆ:. “ಹೇಗೆ ದಿಗ್ದೇವತೆಗಳಿಂದ
ಶುಕ್ಲಪಕ್ಷದ ಚಂದ್ರ ಶಕ್ತಿ ಪಡೆಯುತ್ತಾನೋ ಹಾಗೆ, ಪಂಚಪಾಂಡವರಿಂದ ಶಕ್ತಿ ಪಡೆದು, ಪೂರ್ಣಚಂದ್ರನಂತೆ ಪರೀಕ್ಷಿತ ಬೆಳೆದ” ಎಂದು.
ಇಲ್ಲಿ ಬಳಸಿರುವ ‘ಚಂದ್ರನ’
ಉಪಮಾನದ ಹಿಂದೆ ಒಂದು ವಿಶಿಷ್ಠ ವಿಚಾರವಿದೆ. ಚಂದ್ರ ವನಸ್ಪತಿಗಳ ದೇವತೆ. ವನಸ್ಪತಿಗಳಿಗೆ ವಿಶೇಷ ಶಕ್ತಿ
ಬರುವುದು ಚಂದ್ರನಿಂದ. ಚಂದ್ರನಿಂದ ಬರುವ ಬೆಳಕು ಬರೀ ಬೆಳದಿಂಗಳಲ್ಲ. ಅದು ಧನ್ವಂತರೀ ಶಕ್ತಿ;
ಅಮೃತಕಲಶದಿಂದ ಸುರಿಯುವ ಅಮೃತಪಾನವದು. ಚಂದ್ರ ನಮ್ಮ ಮನಸ್ಸಿನ ದೇವತೆ ಕೂಡಾ ಹೌದು. ಅಮಾವಾಸ್ಯೆಯಿಂದ
ಹುಣ್ಣಿಮೆ ತನಕ ಚಂದ್ರನಿಂದಾಗುವ ಶಕ್ತಿ ಪಾತದಲ್ಲಿ ಪ್ರತೀದಿನ ವ್ಯತ್ಯಾಸವಾಗುತ್ತದೆ.
ಪೂರ್ಣಚಂದ್ರನಿಂದಾಗುವ ಶಕ್ತಿಪಾತ ಅಪಾರ. ಅದು ಇತರ ದಿನಗಳಲ್ಲಿರುವುದಿಲ್ಲ. ಈ ಶಕ್ತಿ ಚಂದ್ರನಿಗೆ
ದಿಗ್ದೇವತೆಗಳಾದ ಯಮ, ಮಿತ್ರ, ವರುಣ,ಮತ್ತು ಕುಬೇರ-ಇವರಿಂದ ಬರುತ್ತದೆ. ಇದೇ ರೀತಿ ಇಲ್ಲಿ ಹದಿನೈದು ವರ್ಷ ತುಂಬಿ ಹದಿನಾರಕ್ಕೆ ಕಾಲಿಟ್ಟಿರುವ
ಪರೀಕ್ಷಿತ, ಪಂಚ ಪಾಂಡವರಿಂದ ಶಕ್ತಿ ಪಡೆದು, ಪೂರ್ಣಚಂದ್ರನಂತೆ ಕಂಗೊಳಿಸುತ್ತಿದ್ದಾನೆ. “ಅಜ್ಜಂದಿರರಾದ
ಪಂಚಪಾಂಡವರು ತಂದೆಯಂತೆ ಆತನನ್ನು ಬೆಳೆಸಿದರು” ಎನ್ನುತ್ತಾರೆ ವ್ಯಾಸರು. ಇಂತಹ ಸಂದರ್ಭದಲ್ಲಿ ವಿದುರ ಹಸ್ತಿನಾಪುರದಲ್ಲಿದ್ದಾನೆ.
ದೃತರಾಷ್ಟ್ರ ನಿಶ್ಚಿಂತನಾಗಿ ಅರಮನೆಯಲ್ಲಿ
ಕಾಲಹರಣ ಮಾಡುತ್ತಿದ್ದಾನೆ.
No comments:
Post a Comment