Thursday, April 18, 2013

Shrimad BhAgavata in Kannada -Skandha-01-Ch-11(1)


ಏಕಾದಶೋSಧ್ಯಾಯಃ

ಉಗ್ರಶ್ರವಸ್ಸರ ಮಾತನ್ನು ಆಲಿಸುತ್ತಿರುವ ಶೌನಕಾದಿಗಳು ಸೂತ ಪುರಾಣಿಕರಲ್ಲಿ ಅಶ್ವತ್ಥಾಮನ ಬ್ರಹ್ಮಾಸ್ತ್ರದಿಂದ ಸಂರಕ್ಷಿಸಲ್ಪಟ್ಟ ಮಗುವಿನ ಕಥನವನ್ನು ಕೇಳಲು ಇಚ್ಛಿಸುತ್ತಾರೆ. ಅವರ ಇಚ್ಛೆಗನುಗುಣವಾಗಿ ಸೂತರು ಮಗುವಿನ ಜನ್ಮ ಕಥನವನ್ನು ವಿವರಿಸುತ್ತಾರೆ:
ತಾಯಿಯ ಗರ್ಭದಲ್ಲಿರುವಾಗಲೇ ಭಗವಂತನ ದರ್ಶನಭಾಗ್ಯ ಪಡೆದ ಪಾಂಡವರ ವಂಶದ ಕುಡಿ ಪರೀಕ್ಷಿತನ ಜನನ ಒಂದು ಶುಭ ಘಳಿಗೆಯಲ್ಲಿ ಆಗುತ್ತದೆ. ಉತ್ತರೆಗೆ ಪ್ರಸವವಾದಾಗ ಮಗು ಉಸಿರಾಡುತ್ತಿರಲಿಲ್ಲ. ಆದರೆ ಶ್ರೀಕೃಷ್ಣ ಆ ಮಗುವನ್ನು ತನ್ನ ಕೈಯಿಂದ ಎತ್ತಿಹಿಡಿದು ಮರುಜೀವ ತುಂಬುತ್ತಾನೆ.   ಮಹಾವಿಷ್ಣುವಿನ ಕೃಪಾಕಟಾಕ್ಷದಿಂದ ಸಂರಕ್ಷಿಸಲ್ಪಟ್ಟು ಹುಟ್ಟಿರುವುದರಿಂದ ಆ ಮಗು ‘ವಿಷ್ಣುರಾತ’ ಎನ್ನುವ ಹೆಸರನ್ನು ಪಡೆಯುತ್ತದೆ. ಪಾಂಡವರ ವಂಶದ ಕುಡಿ ಭೂಮಿಯಲ್ಲಿ ಜನಿಸಿದಾಗ ಎಲ್ಲರಿಗೂ ಅಪಾರ ಆನಂದವಾಗುತ್ತದೆ. ಧರ್ಮರಾಯನಿಗಂತೂ ಮುಂದೆ ದೇಶವನ್ನಾಳುವ ಈ ಮಗುವಿನ ಭವಿಷ್ಯ ತಿಳಿದುಕೊಳ್ಳಬೇಕು ಎನ್ನುವ ಆಸೆ. ಅದಕ್ಕಾಗಿ ಆತ ತಮ್ಮ ಮನೆತನದ ದೈವಜ್ಞ(ಜ್ಯೋತಿಷಿ)ರನ್ನು ಕರೆಸಿ ಮಗುವಿನ ಭವಿಷ್ಯವನ್ನು ತಿಳಿಸಬೇಕಾಗಿ ಕೇಳಿಕೊಳ್ಳುತ್ತಾನೆ.

ಬ್ರಾಹ್ಮಣಾ ಊಚುಃ
ಪಾರ್ಥ ಪ್ರಜಾವಿತಾ ಸಾಕ್ಷಾದಿಕ್ಷ್ವಾಕುರಿವ ಮಾನವಃ
ಬ್ರಹ್ಮಣ್ಯಃ ಸತ್ಯಸಂಧಶ್ಚ ರಾಮೋ ದಾಶರಥಿರ್ಯಥಾ೧೯

ದೈವಜ್ಞರು ಮಗುವಿನ ಜನ್ಮಕ್ಕನುಗುಣವಾಗಿ, ಅವನ ಗ್ರಹಗತಿಯನ್ನು ನುಡಿಸಿ ಹೇಳುತ್ತಾರೆ: “ಇವನು ಮುಂದೆ ಪ್ರಜೆಗಳ ರಕ್ಷಕನಾಗಿ ಒಳ್ಳೆಯ ರಾಜ ಎನಿಸುತ್ತಾನೆ” ಎಂದು. ಎಷ್ಟು ಒಳ್ಳೆಯ ರಾಜನಾಗುತ್ತಾನೆ ಎಂದರೆ, ಈ ಮನ್ವಂತರದ ಮೊದಲಿಗ, ವೈವಸ್ವತ ಮನುವಿನ ಪುತ್ರ ಇಕ್ಷ್ವಾಕುವಿನಂತೆ  ಪ್ರಸಿದ್ಧನಾಗುತ್ತಾನೆ ಎನ್ನುತ್ತಾರೆ ದೈವಜ್ಞರು. ಅಷ್ಟೇ ಅಲ್ಲ, ದಶರಥಪುತ್ರ ಶ್ರೀರಾಮಚಂದ್ರನಂತೆ ಇವನು ಬ್ರಹ್ಮಣ್ಯನೂ ಸತ್ಯಸಂಧನೂ ಆಗುತ್ತಾನೆ ಎನ್ನುತ್ತಾರೆ. ನಮಗೆ ತಿಳಿದಂತೆ ಶ್ರೀರಾಮಚಂದ್ರ ಒಮ್ಮೆ ಆಡಿದ ಮಾತನ್ನು ಮತ್ತೆ ಹಿಂದೆಗೆದುಕೊಂಡವನಲ್ಲ. ರಾಮಾವತಾರವಾಗಿರುವುದೇ ಸತ್ಯದ ಆವಿಷ್ಕಾರಕ್ಕಾಗಿ. ಸತ್ಯವನ್ನು ಪೂರ್ಣಪ್ರಮಾಣದಲ್ಲಿ ತನ್ನ ಅವತಾರದಲ್ಲಿ ನಡೆದು ತೋರಿದ ರಾಮಚಂದ್ರ ಸತ್ಯಸಂಧತೆಯ ಪರಾಕಾಷ್ಠೆ. “ಅಂತಹ ಶ್ರೀರಾಮಚಂದ್ರನಂತೆ ಈ ಮಗು ಬ್ರಹ್ಮಣ್ಯನೂ, ಸತ್ಯಸಂಧನೂ ಆಗುತ್ತಾನೆ” ಎನ್ನುತ್ತಾರೆ ದೈವಜ್ಞರು.  ಇಲ್ಲಿ ಬ್ರಹ್ಮಣ್ಯಃ ಎಂದರೆ ಭಗವಂತನನ್ನು ಪ್ರತಿಪಾದಿಸುವ ವೇದಗಳನ್ನು ಬಲ್ಲ ಜ್ಞಾನಿಗಳನ್ನು ಸದಾ ಗೌರವಿಸುವವ ಎಂದರ್ಥ.
ಇಲ್ಲಿ ಪರೀಕ್ಷಿತನನ್ನು ಶ್ರೀರಾಮಚಂದ್ರನಿಗೆ ಹೋಲಿಸಲಾಗಿದೆ. ಇಂತಹ ಉಪಮಾನ ಹೇಗೆ ಸಾಧ್ಯ? ಪರೀಕ್ಷಿತನೆಲ್ಲಿ, ಶ್ರಿರಾಮಚಂದ್ರನೆಲ್ಲಿ ಎನ್ನುವ ಪ್ರಶ್ನೆ ಪ್ರತಿಯೊಬ್ಬರಿಗೂ ಬರುತ್ತದೆ. ಇದಕ್ಕೆ ಆಚಾರ್ಯರು ತಾತ್ಪರ್ಯ ನಿರ್ಣಯದಲ್ಲಿ ಸುಂದರವಾದ ವಿವರಣೆ ನೀಡಿದ್ದಾರೆ. ದೃಷ್ಟಾಂತದಲ್ಲಿ ಮೂರು ವಿಧ. ಅಧಿಕ, ಸಮ ಮತ್ತು ಹೀನ. ಉದಾಹರಣೆಗೆ ಜೀವರಿಗೆ ಭಗವಂತನ ದೃಷ್ಟಾಂತ ಅಧಿಕ ದೃಷ್ಟಾಂತ, ಭಗವಂತನ ಒಂದು ರೂಪಕ್ಕೆ ಆತನ ಇನ್ನೊಂದು ರೂಪದ ದೃಷ್ಟಾಂತ ಸಮ ದೃಷ್ಟಾಂತ ಮತ್ತು ಭಗವಂತನಿಗೆ ಜೀವದ ದೃಷ್ಟಾಂತ ಹೀನ ದೃಷ್ಟಾಂತ. ಇಲ್ಲಿ ಕಥಾನಾಯಕನಾದ ಪರೀಕ್ಷಿತ ರಾಜನ  ಹಿರಿಮೆಯನ್ನು ಒತ್ತಿ  ಹೇಳುವುದಕ್ಕಾಗಿ ಅಧಿಕ ದೃಷ್ಟಾಂತವನ್ನು ಬಳಸಲಾಗಿದೆ.
ದೈವಜ್ಞರು ‘ವಿಷ್ಣುರಾತ’ನ ಭವಿಷ್ಯವನ್ನೂ ವಿವರಿಸುತ್ತಾ ಹೇಳುತ್ತಾರೆ: “ಈತ ಅತ್ಯಂತ ಯಶಸ್ವಿ ರಾಜನಾಗುತ್ತಾನೆ. ಆದರೆ, ಒಂದು ದಿನ ಋಷಿ ಶಾಪಕ್ಕೊಳಗಾಗಿ ಸರ್ಪದೋಷದಿಂದ ಸಾಯುತ್ತಾನೆ. ಇದಕ್ಕೆ ಯಾವುದೇ ಪರಿಹಾರವಿಲ್ಲ” ಎಂದು! ವಿಷ್ಣುರಾತನ ಕುರಿತಾದ ಈ ಭವಿಷ್ಯ ಎಲ್ಲರಿಗೂ ತಿಳಿದಿತ್ತು. ಆದ್ದರಿಂದ ಆತ ದೊಡ್ಡವನಾದಾಗ ಆತನಿಗೂ ಈ ವಿಚಾರ ತಿಳಿಯಿತು. ಹಾಗಾಗಿ ಆತನಿಗೆ ಯಾವಾಗಲೂ ಹಾವಿನ ನೆನಪು ಕಾಡುತ್ತಿತ್ತು. ಇದರಿಂದಾಗಿ ವಿಷ್ಣುರಾತ ಹೆಜ್ಜೆ ಇಡುವಾಗಲೆಲ್ಲಾ ಪರೀಕ್ಷಿಸಿ ಹೆಜ್ಜೆ ಇಡುತ್ತಿದ್ದ. ಹೀಗೆ ಪರೀಕ್ಷಿಸಿ ಹೆಜ್ಜೆ ಇಡುತ್ತಿದ್ದರಿಂದ ಆತನಿಗೆ 'ಪರೀಕ್ಷಿತ' ಎನ್ನುವ ಹೆಸರು ಬರುತ್ತದೆ ಮತ್ತು ಆತ ಅದೇ ಹೆಸರಿನಿಂದ ವಿಖ್ಯಾತನಾಗುತ್ತಾನೆ.

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ಏಕಾದಶೋSಧ್ಯಾಯಃ
ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಹನ್ನೊಂದನೇ ಅಧ್ಯಾಯ ಮುಗಿಯಿತು.

*********

No comments:

Post a Comment