ಕಾಡಿಗೆ ಹೋದ
ಸುಮಾರು ಆರು ತಿಂಗಳಲ್ಲಿ ವಿದುರ ದೇಹತ್ಯಾಗ ಮಾಡಿ
ಧರ್ಮರಾಯನಲ್ಲಿ ಐಕ್ಯನಾಗುತ್ತಾನೆ. ಇತರರು ತಮ್ಮ ತಪಸ್ಸನ್ನು ಮುಂದುವರಿಸುತ್ತಾರೆ. ಹೀಗೆ ಸುಮಾರು
ಮೂರು ವರ್ಷ ಕಳೆಯುತ್ತದೆ. ಧೃತರಾಷ್ಟ್ರನಿಗೆ ಸುಮಾರು ೧೨೦ವರ್ಷ, ಧರ್ಮರಾಯನಿಗೆ ಸುಮಾರು ೯೦ ಮತ್ತು ಪರೀಕ್ಷಿತನಿಗೆ ಸುಮಾರು ಹದಿನೆಂಟರ ಪ್ರಾಯ.
ಈ ಸಂದರ್ಭದಲ್ಲಿನ ಒಂದು ಘಟನೆ ಘಟಿಸುತ್ತದೆ.
ಅಜಾತಶತ್ರುಃ ಕೃತಮೈತ್ರೋ
ಹುತಾಗ್ನಿರ್ವಿಪ್ರಾನ್ ನತ್ವಾ ತಿಲಗೋವಸ್ತ್ರರುಗ್ಮೈಃ ।
ಗೃಹಾನ್ ಪ್ರವಿಷ್ಟೋ
ಗುರುವಂದನಾಯ ನ ಚಾಪಶ್ಯತ್ ಪಿತರೌ ಸೌಬಲೀಂ ಚ ॥೩೧॥
ಎಂದೂ ಯಾರನ್ನೂ ಹಗೆಯೆಂದು
ಕಾಣದ ಅಜಾತಶತ್ರು ಧರ್ಮರಾಯ ಒಂದು ದಿನ ಎಂದಿನಂತೆ ಸೂರ್ಯನಲ್ಲಿರುವ ಸೂರ್ಯನಾರಾಯಣನನ್ನು ಗಾಯತ್ತ್ರಿ ಮಂತ್ರದಿಂದ
ಉಪಾಸನೆ ಮಾಡಿ, ಅಗ್ನಿಮುಖೇನ ಭಗವಂತನನ್ನು ಆರಾಧಿಸಿ, ವಿಪ್ರರಿಗೆ(ವಿಷ್ಣುವಿನ ಪರಮಪದವನ್ನು
ತಿಳಿದವರು) ನಮಸ್ಕರಿಸಿ, ಅಲ್ಲಿ ಸೇರಿದ್ದ ವಿದ್ವಾಂಸರಿಗೆ ತಿಲ/ವಸು(ಸಂಪತ್ತು), ಗೋವು,
ಭೂಮಿ/ವಸ್ತ್ರ, ರುಗ್ಮೈ(ಚಿನ್ನ) ದಾನ ಮಾಡಿ, ತನ್ನ ಹಿರಿಯರನ್ನು ಅವರ ಆಸನ ಪ್ರತೀಕದಲ್ಲಿ
ನಮಸ್ಕರಿಸಲು ಧೃತರಾಷ್ಟ್ರನಿದ್ದ ಕೋಣೆಗೆ ಹೋಗುತ್ತಾನೆ. ಆಗ ಎಂದಿನಂತೆ ಆತನ ಅಂತರಂಗಕ್ಕೆ ಕುಂತಿ-ಧೃತರಾಷ್ಟ್ರ(ಪಿತರೌ)
ಮತ್ತು ಗಾಂಧಾರಿಯ ದರ್ಶನವಾಗುವುದಿಲ್ಲ.
ಇದರಿಂದಾಗಿ ಆತ ಗಾಭರಿಯಿಂದ ಹೊರಬರುತ್ತಾನೆ. ಹೊರಬಂದು ನೋಡಿದರೆ ಅಲ್ಲಿ ಕುರುಡ ಧೃತರಾಷ್ಟ್ರನಿಗೆ
ಕಾಡಿನಲ್ಲಿ ಸೇವಕನಾಗಿ ಕಾರ್ಯನಿರ್ವಹಿಸುತ್ತಿದ್ದ ಗಾವದ್ಗಣನ ಪುತ್ರ ಸಂಜಯ ಕಾಣಿಸುತ್ತಾನೆ.
ತತ್ರ ಸಂಜಯಮಾಸೀನಂ
ಪಪ್ರಚ್ಛೋದ್ವಿಗ್ನಮಾನಸಃ ।
ಗಾವದ್ಗಣೇ ಕ್ವ
ನಸ್ತಾತೋ ವೃದ್ಧೋ ಹೀನಶ್ಚ ನೇತ್ರಯೋಃ ।
ಅಂಬಾ ವಾ ಹತಪುತ್ರಾರ್ತಾ
ಪಿತೃವ್ಯಃ ಕ್ವ ಗತಃ ಸುಹೃತ್ ॥೩೨॥
ಯಾವುದೋ ಕೆಟ್ಟ ವಿಷಯದ
ಮುನ್ಸೂಚನೆಯಿಂದ ಹೊರಬಂದ ಧರ್ಮರಾಯನಿಗೆ ಸಂಜಯನನ್ನು ನೋಡಿ ಮತ್ತಷ್ಟು ಗಾಭರಿಯಾಗುತ್ತದೆ. ಆತ ಉದ್ವಿಗ್ನತೆಯಿಂದ
ಕೇಳುತ್ತಾನೆ: ಎಲ್ಲಿ ನಮ್ಮ ಅಪ್ಪ? ನೀನು ಅಪ್ಪನ ಜೊತೆಗಿದ್ದವನು ಒಬ್ಬನೇ ಏಕೆ ಬಂದೆ? ಕಣ್ಣಿಲ್ಲದ
ನಮ್ಮ ಅಪ್ಪ, ಮಕ್ಕಳನ್ನು ಕಳೆದುಕೊಂಡ ದುರ್ದೈವಿ ದೊಡ್ಡಮ್ಮ ಎಲ್ಲಿ? ಸಾಮ್ರಾಜ್ಯಕಟ್ಟಿಯೂ ತಾಯಿಯನ್ನು
ಸುಖವಾಗಿಡದ ನಮ್ಮಂತಹ ದುರ್ದೈವಿ ಮಕ್ಕಳನ್ನು ಪಡೆದ ನಮ್ಮ ತಾಯಿ ಎಲ್ಲಿ?” ಎಂದು. [ಇಲ್ಲಿ ಪಿತೃವ್ಯಃ
ಎಂದರೆ ಗಾಂಧಾರಿ ಮತ್ತು ಧೃತರಾಷ್ಟ್ರ,
ದೊಡ್ಡಪ್ಪನನ್ನು ಧರ್ಮರಾಯ ಅಪ್ಪ ಎಂದು ಸಂಬೋಧಿಸಿದ್ದಾನೆ]
ಪಿತರ್ಯುಪರತೇ ಪಾಂಡೌ
ಸರ್ವಾನ್ ನಃ ಸುಹೃದಃ ಶಿಶೂನ್ ।
ಅರಕ್ಷತಾಂ ವ್ಯಸನತಃ
ಪಿತೃವ್ಯೌ ಕ್ವ ಗತಾವಿತಃ ॥೩೪॥
ನಮ್ಮನ್ನು ತಂದೆ-ತಾಯಿರಂತೆ
ಸಾಕಿ, ಎಲ್ಲಾ ಕಷ್ಟ ಕಾಲದಲ್ಲಿ ನಮ್ಮ ರಕ್ಷಣೆಗೆ ನಿಂತ ಹಿರಿಯರಾದ ನಮ್ಮ ದೊಡ್ಡಪ್ಪ ದೊಡ್ಡಮ್ಮ ಎಲ್ಲಿದ್ದಾರೆ?
ಹೇಗಿದ್ದಾರೆ ಹೇಳು ಎಂದು ಧರ್ಮರಾಯ ಉದ್ವಿಗ್ನತೆಯಿಂದ
ಸಂಜಯನಲ್ಲಿ ಕೇಳುತ್ತಾನೆ.
No comments:
Post a Comment