ಸಂಜಯ ಉವಾಚ--
ಅಹಂ ಚ ವ್ಯಂಸಿತೋ
ರಾಜನ್ ಪಿತ್ರೋರ್ವಃ ಕುಲನಂದನ ।
ನ ವೇದ ಸಾಧ್ವಾ
ಗಾಂಧಾರ್ಯಾ ಮುಷಿತೋSಸ್ಮಿ ಮಹಾತ್ಮಭಿಃ ॥೩೭॥
ಈ ಶ್ಲೋಕವನ್ನು
ಮೇಲ್ನೋಟದಲ್ಲಿ ನೋಡಿದರೆ: “ಅವರು ಎಲ್ಲಿಗೆ ಹೋದರು
ಎನ್ನುವುದು ನನಗೂ ತಿಳಿದಿಲ್ಲ” ಎಂದು ಸಂಜಯ ಉತ್ತರಿಸಿದಂತೆ ಕಾಣುತ್ತದೆ. ಆದರೆ ಮಹಾಭಾರತದಲ್ಲಿ
ಹೇಳುವಂತೆ: ಸಂಜಯ ಧೃತರಾಷ್ಟ್ರಾದಿಗಳು ಗಾಳ್ಗಿಚ್ಚಿನಲ್ಲಿ ದೇಹತ್ಯಾಗ ಮಾಡಿರುವುದನ್ನು
ಕಂಡಿದ್ದಾನೆ. ಆದ್ದರಿಂದ ಆತ ಇಲ್ಲಿ ಹೇಳುತ್ತಿರುವುದು: ಸತ್ತ ನಂತರ ಅವರು ಯಾವ ಗತಿಯನ್ನು
ಪಡೆದರು ಎನ್ನುವುದು ನನಗೆ ತಿಳಿದಿಲ್ಲ ಎಂದೇ ಹೊರತು, ಅವರು ಎಲ್ಲಿದ್ದಾರೆಂದು ನನಗೆ ಗೊತ್ತಿಲ್ಲ
ಎಂದಲ್ಲ. ಆತ ಹೇಳುತ್ತಾನೆ: “ ಕುಂತಿ-ಧೃತರಾಷ್ಟ್ರ
ಮತ್ತು ಗಾಂಧಾರಿಯನ್ನು ಕಳೆದುಕೊಂಡು ನಾನು ಒಂದು ಕೈ ಮುರಿದವನಂತಾಗಿದ್ದೇನೆ. ಅವರು ನನ್ನನ್ನು
ಬಿಟ್ಟು ಹೊರಟು ಹೋದರು” ಎಂದು.
ಸೂತ ಉವಾಚ—
ಏತಸ್ಮಿನ್ನಂತರೇ
ವಿಪ್ರಾ ನಾರದಃ ಪ್ರತ್ಯದೃಶ್ಯತ ।
ವೀಣಾಂ
ತ್ರಿತಂತ್ರೀಂ ಧನ್ವಯನ್ ಭಗವಾನ್ ಸಹತುಂಬುರುಃ ॥೩೮॥
ಈ ರೀತಿ ಸಂಜಯ
ಮತ್ತು ಧರ್ಮರಾಯ ಮಾತನಾಡುತ್ತಿರುವಾಗ ಅಲ್ಲಿಗೆ ತುಂಬುರನೊಂದಿಗೆ, ತನ್ನ ವೀಣೆಯಲ್ಲಿ ವೇದಮಂತ್ರಗಳನ್ನು
ಮೂರು ಸ್ವರದಲ್ಲಿ ನುಡಿಸುತ್ತಾ, ನಾರದರು ಆಗಮಿಸುತ್ತಾರೆ. [ಇಲ್ಲಿ ಓದುಗರು ಒಂದು ವಿಷಯವನ್ನು
ಗಮನಿಸಬೇಕು. ನಾರದರ ವೀಣೆ ಏಳು ತಂತಿಯ ವೀಣೆ. ಅದನ್ನು ‘ವಿಪಂಚಿ’ ಎಂದು ಕರೆಯುತ್ತಾರೆ. ಆದರೆ
ಇಲ್ಲಿ ‘ತ್ರಿತಂತಿ’ ಎನ್ನುವ ಶಬ್ದ ಬಳಸಲಾಗಿದೆ. ನಾರದರು ಮೂರು ಸ್ವರಗಳಲ್ಲಿ ವೇದ ಮಂತ್ರಗಳನ್ನು ಗಾನ ಮಾಡುತ್ತಾ ಬಂದರು ಎನ್ನುವುದು ‘ತ್ರಿತಂತಿ’
ಎನ್ನುವ ಶಬ್ದದ ಹಿಂದಿರುವ ಒಂದು ಅರ್ಥ. ಇದಕ್ಕೆ ಇನ್ನೂ ಅನೇಕ ಒಳಾರ್ಥಗಳಿರಬಹುದು. ಇನ್ನು ಇಲ್ಲಿ
ನಾರದರನ್ನು ಭಗವಾನ್ ಎನ್ನುವ ವಿಶೇಷಣದಿಂದ ಸಂಬೋಧಿಸಲಾಗಿದೆ. ಇದರ ಅರ್ಥ ಭಗವಂತನನ್ನು ತಿಳಿದವರು,
ಸದಾ ಭಗವಂತನ ಭಜನೆ ಮಾಡುವವರು, ಇತ್ಯಾದಿ]
ಯುಧಿಷ್ಠಿರ ಉವಾಚ--
ನಾಹಂ ವೇದ ಗತಿಂ
ಪಿತ್ರೋರ್ಭಗವನ್ ಕ್ವ ಗತಾವಿತಃ ।
ಕರ್ಣಧಾರ ಇವಾಪಾರೇ
ಸೀದತಾಂಪಾರದರ್ಶನಃ ॥೪೦॥
ನಾರದರು ಆಗಮಿಸಿದ ತಕ್ಷಣ ಧರ್ಮರಾಯ ನಾರದರಲ್ಲಿ ಕೇಳುತ್ತಾನೆ: “ನಮ್ಮ
ತಂದೆ ತಾಯಿಯರ ಗತಿ ಏನಾಯ್ತು? ಅವರಿಗೆ ಸದ್ಗತಿ ದೊರೆಯಿತೇ? ದಿಕ್ಕೆಟ್ಟು ನಿಂತ ನಮ್ಮಲ್ಲಿಗೆ ದಡಹಾಯಿಸುವ
ಅಂಬಿಗನಂತೆ ನೀವು ಬಂದಿದ್ದೀರಿ. ನೀವೇ ನಮಗೆ ದಾರಿ ತೋರಿಸಬೇಕು” ಎಂದು
No comments:
Post a Comment