Download in PDF Format :

ಸುಮಾರು ಐದು ಸಾವಿರ ವರ್ಷಗಳ ಹಿಂದೆ, ದ್ವಾಪರದ ಕೊನೆಯಲ್ಲಿ, ವೇದಗಳನ್ನು ವಿಂಗಡಿಸಿ ಬಳಕೆಗೆ ತಂದ ಮಹರ್ಷಿ ವೇದವ್ಯಾಸರೇ ಅವುಗಳ ಅರ್ಥವನ್ನು ತಿಳಿಯಾಗಿ ವಿವರಿಸಲು ಹದಿನೆಂಟು ಪುರಾಣಗಳನ್ನು ರಚಿಸಿದರು. ಈ ಪುರಾಣಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಹಾಗೂ ಪುರಾಣಗಳ ರಾಜ ಎನ್ನಬಹುದಾದ ಮಹಾಪುರಾಣ ಭಾಗವತ.
ಸಾವು ಎನ್ನುವ ಹಾವು ಬಾಯಿ ತೆರೆದು ನಿಂತಿದೆ. ಜಗತ್ತಿನ ಎಲ್ಲಾ ಜೀವಜಾತಗಳು ಅಸಾಯಕವಾಗಿ ಅದರ ಬಾಯಿಯೊಳಗೆ ಸಾಗುತ್ತಿವೆ. ಈ ಹಾವಿನಿಂದ ಪಾರಾಗುವ ಉಪಾಯ ಉಂಟೇ? ಉಂಟು, ಶುಕಮುನಿ ನುಡಿದ ಶ್ರೀಮದ್ಭಾಗವತವೇ ಅಂಥಹ ದಿವ್ಯೌಷಧ. ಜ್ಞಾನ-ಭಕ್ತಿ ವಿರಳವಾಗಿರುವ ಕಲಿಯುಗದಲ್ಲಂತೂ ಇದು ತೀರಾ ಅವಶ್ಯವಾದ ದಾರಿದೀಪ.
ಇಲ್ಲಿ ಅನೇಕ ಕಥೆಗಳಿವೆ. ಆದರೆ ನಮಗೆ ಕಥೆಗಳಿಗಿಂತ ಅದರ ಹಿಂದಿರುವ ಸಂದೇಶ ಮುಖ್ಯ. ಒಂದು ತತ್ತ್ವದ ಸಂದೇಶಕ್ಕಾಗಿ ಒಂದು ಕಥೆ ಹೊರತು, ಅದನ್ನು ವಾಸ್ತವವಾಗಿ ನಡೆದ ಘಟನೆ ಎಂದು ತಿಳಿಯಬೇಕಾಗಿಲ್ಲ.
ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಶುದ್ಧ. ಮನಸ್ಸು ಮಲೀನವಾದರೆ ಮೈತೊಳೆದು ಏನು ಉಪಯೋಗ? ನಮ್ಮ ಮನಸ್ಸನ್ನು ತೊಳೆದು ಶುದ್ಧ ಮಾಡುವ ಸಾಧನ ಈ ಭಾಗವತ. ಶ್ರದ್ಧೆಯಿಂದ ಭಾಗವತ ಓದಿದರೆ ಮನಸ್ಸು ಪರಿಶುದ್ಧವಾಗಿ ಭಗವಂತನ ಚಿಂತನೆಗೆ ತೊಡಗುತ್ತದೆ. ಬಿಡುಗಡೆಯ ದಾರಿಯನ್ನು ತೆರೆದು ತೋರಿಸುತ್ತದೆ.
ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಭಾಗವತ ಪ್ರವಚನದಲ್ಲಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಿದ ಭಾಗವತದ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಚಿತ್ರಕೃಪೆ: ಅಂತರ್ಜಾಲ.
Download in PDF Format :
Skandha-01:All 20 Chapters e-Book
Skandha-02 All 10 chapters e-Book

Note: due to unavoidable reason we are unable to publish regular posts. But we will come back soon.......

Tuesday, April 23, 2013

Shrimad BhAgavata in Kannada -Skandha-01-Ch-12(2)


ಪ್ರತ್ಯುಜ್ಜಗ್ಮುಃ ಪ್ರಹರ್ಷೇಣ ಪ್ರಾಣಾಂಸ್ತನ್ವ ಇವಾಗತಾನ್
ಅಭಿಸಂಗಮ್ಯ ವಿಧಿವತ್ ಪರಿಷ್ವಂಗಾಭಿವಾದನೈಃ

ಹಸ್ತಿನಾಪುರಕ್ಕೆ ಆಗಮಿಸಿದ ವಿದುರನನ್ನು ಎಲ್ಲರೂ ಅತ್ಯಂತ ಸಂಭ್ರಮದಿಂದ ಸ್ವಾಗತಿಸುತ್ತಾರೆ. ಪ್ರಾಣಶಕ್ತಿ ಇಲ್ಲದೇ ನಿಸ್ತೇಜವಾಗಿರುವ ಶರೀರದೊಳಗೆ ಪ್ರಾಣಶಕ್ತಿ ಪ್ರವೇಶಿಸಿದರೆ ಹೇಗೆ ಆ ಶರೀರ ಎದ್ದು ನಿಲ್ಲಬಹುದೋ, ಆ ರೀತಿ ಪಾಂಡವರಿಗೆ  ವಿದುರನ ಆಗಮನದಿಂದ  ಸಂತೋಷವಾಗುತ್ತದೆ. ಕಿರಿಯರು ನಮಸ್ಕರಿಸುವ ಮೂಲಕ, ಹಿರಿಯರು ಒಬ್ಬರನ್ನೊಬ್ಬರು ತಬ್ಬಿಕೊಳ್ಳುವ ಮುಖೇನ ಬಹಳ ಸಂಭ್ರಮದಿಂದ ವಿದುರನನ್ನು ಸ್ವಾಗತಿಸಲಾಗುತ್ತದೆ.
ಇಲ್ಲಿ ಕೊಟ್ಟಿರುವ ದೃಷ್ಟಾಂತ  “ಪ್ರಾಣಾಂಸ್ತನ್ವ ಇವಾಗತಾನ್” ಉಪನಿಷತ್ತಿನಲ್ಲಿ ಉಕ್ತವಾಗಿದೆ. ಪ್ರಶ್ನೋಪನಿಷತ್ತಿನಲ್ಲಿ ಪ್ರಾಣದೇವರ ಮಹಿಮೆಯನ್ನು ವಿವರಿಸುವ ಒಂದು ಕಥೆಯಿದೆ. ಅಲ್ಲಿ ಹೇಳುವಂತೆ: ಎಲ್ಲಾ ತತ್ತ್ವಾಭಿಮಾನಿ ದೇವತೆಗಳು ದೇಹವನ್ನು ಪ್ರವೇಶಿಸದರೂ ಕೂಡಾ ದೇಹ ಎದ್ದು ನಿಲ್ಲುವುದಿಲ್ಲ. ಆದರೆ ಪ್ರಾಣ ದೇವರು ಪ್ರವೇಶಿಸಿದಾಗ- “ತತ್ ಪ್ರಾಣೇ ಪ್ರಪನ್ನ ಉದತಿಷ್ಠತ್” -ಶರೀರ ಎದ್ದು ನಿಲ್ಲುತ್ತದೆ(ಪ್ರಶ್ನೋಪನಿಷತ್-ಅಧ್ಯಾಯ-೨). ಇಲ್ಲಿ ಆ ಕಥೆಯನ್ನೇ ದೃಷ್ಟಾಂತವಾಗಿ ಹೇಳಲಾಗಿದೆ. ಇಂದ್ರಿಯ ದೇವತೆಗಳು  ಪ್ರಾಣದೇವರನ್ನು  ಇದಿರುಗೊಂಡಂತೆ, ಪ್ರಾಣದೇವರು ಬ್ರಹ್ಮ ಶರೀರ ಪ್ರವೇಶಿಸಿದಾಗ ಆ ಶರೀರ ಹೇಗೆ ಎದ್ದು ನಿಲ್ಲುತ್ತದೋ ಹಾಗೆ ಪಾಂಡವರು ವಿದುರನನ್ನು ಸ್ವಾಗತಿಸಿದರು ಎಂದಿದ್ದಾರೆ.
ವಿದುರನನ್ನು ಸ್ವಾಗತಿಸಿ ಕರೆತಂದ ಧರ್ಮರಾಯ ಆತನಲ್ಲಿ ತೀರ್ಥಯಾತ್ರೆಯ ವಿವರವನ್ನೂ, ಯಾದವರ ಕ್ಷೇಮ ಸಮಾಚಾರದ ವಿವರವನ್ನೂ ಕೇಳುತ್ತಾನೆ.

ಇತ್ಯುಕ್ತೋ ಧರ್ಮರಾಜೇನ ಸರ್ವಂ ತತ್ ಸಮವರ್ಣಯತ್
ಯಥಾನುಭೂತಂ ಭ್ರಮತಾ ವಿನಾ ಯದುಕುಲಕ್ಷಯಮ್೧೨

ಧರ್ಮರಾಯನಿಗೆ ವಿದುರ ತಾನು ತನ್ನ ತೀರ್ಥಯಾತ್ರೆಯಲ್ಲಿ ಕಂಡ ಘಟನೆಗಳನ್ನೂ, ಅನುಭವಗಳನ್ನೂ ಸುವಿವರವಾಗಿ ಹೇಳುತ್ತಾನೆ. ಆದರೆ ಆತ ಮುಂದೆ ಆಗಲಿರುವ ಯದುವಂಶ ನಾಶದ ವಿಚಾರವನ್ನು ಮಾತ್ರ ಹೇಳುವುದಿಲ್ಲ! ಏಕೆಂದರೆ ಧರ್ಮರಾಯನಿಗೆ  ‘ಶ್ರೀಕೃಷ್ಣ ಅವತಾರ ಸಮಾಪ್ತಿ ಮಾಡಲಿದ್ದಾನೆ’ ಎನ್ನುವ ವಿಚಾರವನ್ನು ಕೇಳಿ ಸಹಿಸಿಕೊಳ್ಳುವ ಶಕ್ತಿ ಇಲ್ಲ  ಎನ್ನುವ  ಸತ್ಯ ವಿದುರನಿಗೆ ಗೊತ್ತಿತ್ತು.
ಕೆಲವು ಭಾಷ್ಯಕಾರರು “ಯದುಕುಲ ಕ್ಷಯವಾದ ವಿಚಾರವನ್ನು ವಿದುರ ಧರ್ಮರಾಯನಿಗೆ ಹೇಳಲಿಲ್ಲ” ಎಂದು ಬರೆಯುತ್ತಾರೆ. ಈ ರೀತಿ ಹೇಳಿದರೆ ‘ವಿದುರ ಧರ್ಮರಾಯನನ್ನು ಭೇಟಿಯಾಗುವ ಮೊದಲೇ ಯದುಕುಲ ನಾಶವಾಗಿತ್ತು’ ಎಂದರ್ಥವಾಗುತ್ತದೆ. ಆದರೆ ಆ ವಿಚಾರ ಸರಿಯಲ್ಲ. ಏಕೆಂದರೆ ವಿದುರ ದೇಹತ್ಯಾಗ ಮಾಡಿ ಹಲವು ವರ್ಷಗಳ ನಂತರ ಯದುಕುಲ ಕ್ಷಯವಾಗುತ್ತದೆ. ಈ ವಿಷಯ ಮುಂದೆ ಭಾಗವತದಲ್ಲೇ ನಮಗೆ ತಿಳಿಯುತ್ತದೆ.

ಅಬಿಭ್ರದರ್ಯಮಾ ದಂಡಂ ಯಥಾಘಮಘಕಾರಿಷು
ಯಾವದ್ ಬಭಾರ ಶೂದ್ರತ್ವಂ ಶಾಪಾದ್ ವರ್ಷಶತಂ ಯಮಃ ೧೫

ಪಾಂಡವರಿಗೆ ಮಾರ್ಗದರ್ಶಕನಾಗಿದ್ದು, ಹಲವು ಬಾರಿ ಅವರನ್ನು ಆಪತ್ತಿನಿಂದ ರಕ್ಷಿದ ವಿದುರ ಏಕೆ ಒಬ್ಬ ಶೂದ್ರ ಯೋನಿಯಲ್ಲಿ ಹುಟ್ಟಿ, ಶೂದ್ರನಂತೆ ಬದುಕಿದ ಎನ್ನುವ ಪ್ರಶ್ನೆಗೆ  ಇಲ್ಲಿ ಉತ್ತರವಿದೆ. ಒಮ್ಮೆ ಮಾಂಡವ್ಯ ಮಹರ್ಷಿಗಳ ಮೇಲೆ ಕಳ್ಳತನದ ಆರೋಪ ಬರುತ್ತದೆ. ಹಾಗಾಗಿ ಅಲ್ಲಿಯ ಅರಸ ಅವರನ್ನು ಶೂಲಕ್ಕೇರಿಸಲು ಆಜ್ಞೆ ಮಾಡುತ್ತಾನೆ. ಆದರೆ ಶೂಲಕ್ಕೇರಿಸಿದ ಸಮಯದಲ್ಲಿ ಅರಸನಿಗೆ ಮುನಿವರ್ಯರು ನಿರಪರಾಧಿ ಎನ್ನುವ ಸತ್ಯ ತಿಳಿಯುತ್ತದೆ. ತಕ್ಷಣ ಅರಸ ತನ್ನ ತಪ್ಪನ್ನು ತಿದ್ದಿಕೊಂಡು ಋಷಿಗಳಲ್ಲಿ ಕ್ಷೆಮೆ ಯಾಚಿಸುತ್ತಾನೆ. ಆದರೆ ಮಾಂಡವ್ಯರಿಗೆ ಅರಸನ ಕ್ಷಮೆಯಾಚನೆಯಿಂದ ಸಮಾಧಾನವಾಗುವುದಿಲ್ಲ. ಅವರು ನೇರವಾಗಿ ಯಮಧರ್ಮರಾಯನಲ್ಲಿಗೆ ಹೋಗಿ “ನನಗೇಕೆ ಈ ಶಿಕ್ಷೆ” ಎಂದು ಕೇಳುತ್ತಾರೆ. ಅದಕ್ಕೆ ಯಮ ವಿನೋದವಾಗಿ “ನೀವು ನಿಮ್ಮ ಬಾಲ್ಯದಲ್ಲಿ ಒಂದು ಪತಂಗದ ರೆಕ್ಕೆಯನ್ನು ದರ್ಭೆಯಿಂದ ಚುಚ್ಚಿ ಹಿಂಸಿದ್ದೀರಿ ಅದಕ್ಕೆ ಈ ಶಿಕ್ಷೆ” ಎನ್ನುತ್ತಾನೆ. ಈ ಉತ್ತರದಿಂದ ಮಾಂಡವ್ಯ ಮುನಿಗೆ ಕೊಪ ಬರುತ್ತದೆ. ಯಾವಾಗಲೂ, ಹದಿನಾಲ್ಕು ವಯಸ್ಸಿನ ಮೊದಲು ತಿಳಿಯದೇ ಮಾಡುವ ಬಾಲಾಪರಾಧಗಳಿಗೆ ಕರ್ಮಫಲವಿಲ್ಲ. ಹಾಗಿರುವಾಗ ಬಾಲ್ಯದಲ್ಲಿ ತಿಳಿಯದೇ ಮಾಡಿದ ತಪ್ಪಿಗೆ ಇದೆಂತಹ ಶಿಕ್ಷೆ ಎಂದು ಪ್ರಶ್ನಿಸಿದ ಅವರು “ನೀನು ಭೂಲೋಕದಲ್ಲಿ ಶೂದ್ರಯೋನಿಯಲ್ಲಿ ಜನಿಸಿ ಶತವರ್ಷ ಬದುಕಿರು” ಎಂದು ಯಮನಿಗೆ ಶಾಪವನ್ನೀಯುತ್ತಾರೆ.  ಈ ಕಾರಣದಿಂದ ಯಮ ವಿದುರನಾಗಿ ಹುಟ್ಟಿ ಶೂದ್ರನಂತೆ ಬದುಕುತ್ತಾನೆ. ಇದೊಂದು ದೈವ ಲೀಲೆ. ವೇದವ್ಯಾಸರ ಮಗನಾಗಿ ಹುಟ್ಟಿದ ವಿದುರ ಶೂದ್ರನಂತೆ ನೂರು ವರ್ಷ ಭೂಲೋಕದಲ್ಲಿ ಬದುಕಿದ.
ಈ ಶ್ಲೋಕದಲ್ಲಿ “ಯಮ-ಶಾಪದಿಂದಾಗಿ ಶೂದ್ರನಾಗಿ ಭೂಮಿಯಲ್ಲಿ ೧೦೦ ವರ್ಷಗಳ ಕಾಲ  ಇದ್ದ ಸಮಯದಲ್ಲಿ, ಆತನ ಸ್ಥಾನದಲ್ಲಿ ಅರ್ಯಮ ಎನ್ನುವ ಆದಿತ್ಯ ಆತನ ಪ್ರಭಾರನಾಗಿ(Incharge) ಕೆಲಸ ಮಾಡಿದ; ಪಾಪ ಮಾಡಿದವರಿಗೆ ಅವರ ಪಾಪಕ್ಕೆ ತಕ್ಕನಾದ ದಂಡನೆ ಕೊಡುವ ಹೊಣೆಗಾರಿಕೆಯನ್ನು ಅರ್ಯಮ ವಹಿಸಿದ” ಎಂದು ಹೇಳಿದಂತೆ ಕಾಣುತ್ತದೆ. ಆದರೆ ಈ ರೀತಿ ಅರ್ಥ ಚಿಂತನೆ ಸರಿಯಲ್ಲ. ಏಕೆಂದರೆ ದೇವತೆಗಳು ಎಂದೂ  ಪೂರ್ಣರೂಪದಲ್ಲಿ ಭೂಮಿಗಿಳಿದು ಬರುವುದಿಲ್ಲ. ಅವರು ಒಂದು ಅಂಶದಲ್ಲಿ ದೇವಲೋಕದಲ್ಲಿದ್ದರೆ ಇನ್ನೊಂದು ರೂಪದಲ್ಲಿ ಭೂಲೋಕದಲ್ಲಿರಬಲ್ಲರು. ಇದಕ್ಕಾಗಿ ಅವರಿಗೆ ‘ಸಾಂಶ ಜೀವರು’ ಎಂದು ಕರೆಯುತ್ತಾರೆ. ಹೀಗಾಗಿ ದೇವತೆಗಳು ಭೂಲೋಕದಲ್ಲಿ ಅವತಾರವೆತ್ತಿದಾಗ ಅವರ ಪದವಿಗೆ ಇನ್ನೊಬ್ಬ ಪ್ರಭಾರ ಇರುವುದಿಲ್ಲ. ಅವರು ತಮ್ಮ ಪದವಿಯನ್ನು ಸ್ವಯಂ ನಿರ್ವಹಿಸುತ್ತಿರುತ್ತಾರೆ. ಅವರು ಏಕಕಾಲದಲ್ಲಿ ಅನೇಕ ರೂಪಧಾರಣೆ ಮಾಡಬಲ್ಲರು.
ಮೇಲಿನ ಶ್ಲೋಕದಲ್ಲಿ “ಅರ್ಯಮ ದಂಡವನ್ನು ಧಾರಣೆ ಮಾಡಿದ” ಎಂದಿದ್ದಾರೆ. ಇಲ್ಲಿ ಅರ್ಯಮ ಎಂದರೆ ದ್ವಾದಶಾದಿತ್ಯರಲ್ಲಿ ಒಬ್ಬನಲ್ಲ, ಬದಲಿಗೆ ಸೂರ್ಯಪುತ್ರನಾದ ಯಮನನ್ನೇ ಇಲ್ಲಿ ಅರ್ಯಮ ಎಂದು ಕರೆದಿರುವುದು. ‘ಅರ್ಯಮ’ ಎಂದರೆ ಸಂಹಾರ ಶಕ್ತಿ ಎಂದರ್ಥ. ಸಂಹಾರಶಕ್ತಿಯಾದ ಭಗವಂತನ ಸಂಕರ್ಷಣ ರೂಪಕ್ಕೂ ಕೂಡಾ ‘ಅರ್ಯಮ’ ಎನ್ನುತ್ತಾರೆ. ನಾವು ಮಾಡಿದ ಪಾಪ-ಪುಣ್ಯಗಳಿಗೆ ಫಲವನ್ನು ಕೊಡುವ ಯಮನೂ ಅರ್ಯಮ.   ಯಾರು ಪಾಪಿಗಳಿಗೆ ದಂಡನೆ ಕೊಡುವ ಯಮನೋ, ಅವನೇ ಮಾಂಡವ್ಯ ಮುನಿಯ ಶಾಪದಿಂದಾಗಿ ಭೂಲೋಕದಲ್ಲಿ ವಿದುರನಾಗಿ ಶೂದ್ರಯೋನಿಯಲ್ಲಿ ಜನಿಸಿ, ನೂರು ವರ್ಷಗಳ ಕಾಲ ಬದುಕಿದ.  ಧರ್ಮರಾಯ ಕೂಡಾ ಯಮನ ಇನ್ನೊಂದು ಅವತಾರ ರೂಪ.
ಇಲ್ಲಿ ಇನ್ನೊಂದು ಪ್ರಶ್ನೆ ಏನೆಂದರೆ: ವಿದುರ ದೃತರಾಷ್ಟ್ರನೊಂದಿಗೆ ಕಾಡಿಗೆ  ಹೊರಟಾಗ ಧರ್ಮರಾಯನಿಗೆ ಸುಮಾರು ೮೭ ವರ್ಷ.  ಕಾಡಿಗೆ ಹೋದ ಸುಮಾರು ಆರು ತಿಂಗಳಲ್ಲಿ ವಿದುರ ದೇಹತ್ಯಾಗ ಮಾಡುತ್ತಾನೆ. ವಿದುರ ಭೂಮಿಯಲ್ಲಿ ಇದ್ದದ್ದು ಒಂದು ಶತಮಾನ ಕಾಲ. ಹಾಗಿದ್ದರೆ ಧರ್ಮರಾಯನ ಚಿಕ್ಕಪ್ಪನಾದ ವಿದುರನಿಗೆ ಧರ್ಮರಾಯ ಹುಟ್ಟುವಾಗ ಕೇವಲ ೧೨ ವರ್ಷ ವಯಸ್ಸಾಗಿತ್ತೆ? ವಿದುರನಿಗಿಂತ ಒಂದು ವರ್ಷ ಹಿರಿಯನಾದ ವಿದುರನ ಅಣ್ಣ ಪಾಂಡು ರಾಜ ಹದಿಮೂರು ವರ್ಷ ವಯಸ್ಸಿನವನಿದ್ದಾಗ ಧರ್ಮರಾಯನ ಜನನವಾಯಿತೆ? ಇತ್ಯಾದಿ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಇದು ಸರಿಯಾಗಿ ಅರ್ಥವಾಗಬೇಕಾದರೆ ನಾವು ಇಲ್ಲಿ ಹೇಳಿರುವ ‘ಶತಮಾನ’ ಪದದ ಅರ್ಥ ತಿಳಿಯಬೇಕು. ವೇದದಲ್ಲಿ ಮನುಷ್ಯನ ಬದುಕೆಂದರೆ ಅದು ‘ಶತಮಾನಂ ಭವತಿ’ ಎನ್ನುತ್ತಾರೆ. ಅದೇ ವೇದದಲ್ಲಿ ಇನ್ನೊಂದು ಕಡೆ ಮನುಷ್ಯನ ಬದುಕಿನಲ್ಲಿ ೨೪ ವರ್ಷ ಪ್ರಾತಃಸವನ, ೪೪ ವರ್ಷ ಮಾದ್ಯಂದಿನ ಸವನ, ೪೮ ವರ್ಷ ಸಾಯಂಸವನ  ಎನ್ನಲಾಗಿದೆ. ಅಂದರೆ ಒಟ್ಟು ೧೧೬ ವರ್ಷಗಳು. ಆದ್ದರಿಂದ ಇಲ್ಲಿ ಶತಮಾನಂ ಎಂದರೆ ಶಾಸ್ತ್ರೀಯ ಪರಿಭಾಷೆಯಲ್ಲಿ ನೂರಕ್ಕಿಂತ ಸ್ವಲ್ಪ ಹೆಚ್ಚು ವರ್ಷಗಳಾಗುತ್ತದೆ. ಗ್ರಹಚಕ್ರದ ಒಂದು ಪರಿಭ್ರಮಣೆಗೆ ೧೨೦ ವರ್ಷಗಳು. ಅದನ್ನೂ ಕೂಡಾ ಒಂದು ಶತಮಾನ ಎಂದು ಕರೆಯಲಾಗುತ್ತದೆ. ಈ ರೀತಿ ಸಮನ್ವಯ ಮಾಡಿಕೊಂಡು ನೋಡಿದಾಗ ಧರ್ಮರಾಯನಿಗೆ ೮೭ ವರ್ಷವಿದ್ದಾಗ ವಿದುರನಿಗೆ ಸುಮಾರು ೧೧೬ ವರ್ಷ ಮತ್ತು ದೃತರಾಷ್ಟ್ರನಿಗೆ ೧೧೮ ವರ್ಷ.

No comments:

Post a Comment