ದಶಮೋSಧ್ಯಾಯಃ
ಹಸ್ತಿನಾವತಿಯಿಂದ
ಬೀಳ್ಕೊಂಡು ದ್ವಾರಕೆಗೆ ಬಂದಿಳಿದ ಶ್ರೀಕೃಷ್ಣ
ಸೂತ ಉವಾಚ-
ನಿಶಮ್ಯ ಭೀಷ್ಮೋಕ್ತಮಥಾಚ್ಯುತೋದಿತಂ ಪ್ರವೃತ್ತವಿಜ್ಞಾನವಿಧೂತವಿಭ್ರಮಃ
।
ಶಶಾಸ ಗಾಮಿಂದ್ರ ಇವಾಜಿತಾಶ್ರಯಃ ಪಣಿಧ್ಯುಪಾತ್ತಾಮನುಜಾನುವರ್ತಿತಃ
॥೪॥
ಶ್ರೀಕೃಷ್ಣನ
ಸಮ್ಮುಖದಲ್ಲಿ ಭೀಷ್ಮರಿಂದ ಉಪದೇಶ ಪಡೆದ ಧರ್ಮರಾಯ ತನ್ನೆಲ್ಲಾ ಭ್ರಮೆಯನ್ನು ನಿವಾರಿಸಿಕೊಂಡ ಹಾಗೂ
ಮುಂದೆ ಇಂದ್ರ ಸ್ವರ್ಗವನ್ನಾಳುವಂತೆ ತಮ್ಮಂದಿರ
ಸಹಾಯದಿಂದ ‘ಪಣಿಧಿ’ಯಿಂದ
ಕೂಡಿದ ದೇಶವನ್ನಾಳಿದ. ಇಲ್ಲಿ ‘ಪಣಿಧಿ’
ಎಂದರೆ ಏನು ಎನ್ನುವುದರ ವಿವರಣೆ ಬ್ರಹ್ಮಾಂಡ ಪುರಾಣದಲ್ಲಿ ಬರುತ್ತದೆ. ಅಲ್ಲಿ ಹೇಳುವಂತೆ: ಅಮಾತ್ಯಾ,
ಮಂತ್ರಿಣೋ ದೂತಾಃ ಶ್ರೇಣಯಶ್ಚ ಪುರೋಹಿತಾಃ । ಪುರಂ ಜನಪದಂ
ಚೇತಿ ಸಪ್ತ ಪ್ರಣಿಧಯಃ ಸ್ಮೃತಾಃ ।: ಅಂದರೆ ಅಮಾತ್ಯರು, ಮಂತ್ರಿಗಳು, ದೂತರು,
ಅಂಗರಕ್ಷಕರು, ಪುರೋಹಿತರು, ರಾಜಧಾನಿ ಮತ್ತು ದೇಶ
ಹೀಗೆ ಏಳು ಬಗೆಯಲ್ಲಿ ರಾಜನಿಗೆ ಪಣಿಧಿಗಳಿರುತ್ತದೆ.
ಅಶ್ರೂಯಂತಾಶಿಷಃ
ಸತ್ಯಾಸ್ತತ್ರತತ್ರ ದ್ವಿಜೇರಿತಾಃ ।
ನಾನುರೂಪಾನುರೂಪಾಶ್ಚ ನಿರ್ಗುಣಸ್ಯ ಗುಣಾತ್ಮನಃ ॥೨೦॥
ಹಸ್ತಿನಾಪುರದಲ್ಲಿ ಇನ್ನೂ ಸ್ವಲ್ಪ ಕಾಲ ಇದ್ದ ಕೃಷ್ಣ ದ್ವಾರಕೆಗೆ ಹೊರಟು
ರಥವನ್ನೇರಿದ. ಆಗ ದ್ವಿಜರು ಮಾಡಿದ ನಿರ್ಗುಣನೂ- ಸರ್ವಗುಣಪೂರ್ಣನೂ, ಅನುರೂಪ-ಅನನುರೂಪನೂ ಆದ
ಭಗವಂತನ ಗುಣಗಾನ ಕೇಳಿಬರುತ್ತದೆ. [ಇಲ್ಲಿ ಭಗವಂತನನ್ನು ನಿರ್ಗುಣ ಎಂತಲೂ ಗುಣಾತ್ಮನಃ ಎಂತಲೂ
ಹೇಳಿದ್ದಾರೆ. ನಾವು ಈ ಕುರಿತ ವಿವರಣೆಯನ್ನು ಈ ಹಿಂದೆಯೇ ನೋಡಿದ್ದೇವೆ]. ಇಲ್ಲಿ ಭಗವಂತನನ್ನು ಅನುರೂಪ-ಅನನುರೂಪ ಎಂದು ಹೇಳಿರುವುದನ್ನು
ಕಾಣುತ್ತೇವೆ. ಪದ್ಮ ಪುರಾಣವನ್ನು ಪ್ರಮಾಣವಾಗಿರಿಸಿಕೊಂಡು ಆಚಾರ್ಯರು ಈ ಕುರಿತು ವಿವರಿಸುತ್ತಾ
ಹೀಗೆ ಹೇಳುತ್ತಾರೆ: ಪಾಲನಾನುಗ್ರಹ ಜಯಾನ
ಗೌಣೇSOಡೇ ಸಂಸ್ಥಿತೋ ಹರಿಃ । ಕರೋತ್ಯಸೌ ಬಹಿಃ ಸಂಸ್ಥೋ ನ ಕರೋತೀವ ನಿರ್ಗುಣಃ ॥ ಇತಿ ಪಾದ್ಮೇ । ಅತೋ ನಾನುರೂಪಾನುರೂಪಾಶ್ಚ ॥
ಸ್ತ್ರಿಯ ಊಚುಃ
ಸ ವೈ ಕಿಲಾಯಂ ಪುರುಷಃ ಪುರಾತನೋ ಯ ಏಕ ಆಸೀದವಿಶೇಷ ಆತ್ಮನಿ
।
ಅಗ್ರೇ ಗುಣೇಭ್ಯೋ ಜಗದಾತ್ಮನೀಶ್ವರೇ ನಿಮೀಲಿತಾತ್ಮಾನಿಶಿ
ಸುಪ್ತಶಕ್ತಿಷು ॥೨೨॥
ಸ ಏವ ಭೂಯೋ ನಿಜವೀರ್ಯಚೋದಿತಾಂ
ಸ್ವಜೀವಮಾಯಾಂ ಪ್ರಕೃತಿಂ ಸಿಸೃಕ್ಷತೀಮ್ ।
ಅನಾಮರೂಪಾತ್ಮನಿ ರೂಪನಾಮನೀ ವಿಧಿತ್ಸಮಾನೋSನುಸಸಾರ ಶಾಸ್ತಿಕೃತ್ ॥೨೩॥
ರಥವನ್ನೇರಿ
ದ್ವಾರಕೆಗೆ ಹೊರಟು ನಿಂತ ಕೃಷ್ಣನನ್ನು ಕುರಿತು ಹಸ್ತಿನಾವತಿಯ ಸ್ತ್ರೀಯರು ಮಾತನಾಡಿಕೊಳ್ಳುತ್ತಾರೆ. ಅವರು ಹೇಳುತ್ತಾರೆ: “ಮಹಾಪ್ರಳಯ
ನಂತರ ಸತ್ವಾದಿ ಗುಣಗಳು ಇನ್ನೂ ಸುಪ್ತವಾಗಿರುವಾಗ ಯಾರು ಆ ಪ್ರಳಯ ಸಾಗರದಲ್ಲಿ ಪವಡಿಸಿ ಯೋಗನಿದ್ರೆಯಲ್ಲಿರುತ್ತಾನೋ ಆ ಪುರುಷೋತ್ತಮನೇ ಈ
ಶ್ರೀಕೃಷ್ಣ” ಎಂದು. ಇಲ್ಲಿ “ನಿಶಿ ಸುಪ್ತಶಕ್ತಿಷು” ಎಂದರೆ ಸತ್ವಾದಿ ಶಕ್ತಿಷು
॥ ಎನ್ನುವ
ವಿವರಣೆಯನ್ನು ಆಚಾರ್ಯರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ನೀಡಿದ್ದಾರೆ.
ಹಸ್ತಿನಾವತಿಯ
ನಾರಿಯರು ಮುಂದುವರಿದು ಹೇಳುತ್ತಾರೆ: ಶ್ರೀಕೃಷ್ಣ ಕೇವಲ ಸಂಹಾರಕರ್ತನಲ್ಲ, ಸೃಷ್ಟಿಕರ್ತನೂ ಅವನೇ
ಎಂದು. ಸರ್ವನಿಯಾಮಕನಾದ ಶ್ರೀಹರಿ ನಾಮಾತ್ಮಕ ಮತ್ತು ರೂಪಾತ್ಮಕ ಪ್ರಪಂಚ ನಿರ್ಮಾಣದ ಸಂಕಲ್ಪ ತೊಟ್ಟು
ತನ್ನ ಪತ್ನಿ, ಪ್ರಕೃತಿಮಾತೆ, ಜೀವಮಾಯೆ ಶ್ರೀಲಕ್ಷ್ಮಿಯಲ್ಲಿ ಗರ್ಭಾಧಾನ ಮಾಡಿದ. ಆ ಶ್ರೀಹರಿಯೇ ಈ ಶ್ರೀಕೃಷ್ಣ; ದುಷ್ಟಸಂಹಾರಕ್ಕಾಗಿ
ನಾನಾ ಅವತಾರಗಳನ್ನು ತಾಳುವ ಈ ಶ್ರೀಕೃಷ್ಣನ ಪತ್ನಿಯರು ಧನ್ಯರು ಎಂದು ಹೊಗಳುತ್ತಾರೆ
ಹಸ್ತಿನಾವತಿಯ ಸ್ತ್ರೀಯರು.
ಹೀಗೆ ಎಲ್ಲರಿಂದ
ಬೀಳ್ಕೊಂಡು, ಧರ್ಮರಾಯ ಸ್ನೇಹಮಾತ್ರದಿಂದ ಕಳುಹಿಸಿದ ಚತುರಂಗ ಸೇನೆಯೊಂದಿಗೆ ಹಸ್ತಿನಾವತಿಯಿಂದ ಹೊರಟು, ಅನೇಕ ದೇಶಗಳನ್ನು ದಾಟಿ,
ದ್ವಾರಕೆಯನ್ನು ತಲುಪುತ್ತಾನೆ ಶ್ರೀಕೃಷ್ಣ. ದ್ವಾರಕೆಯ ಪ್ರಜೆಗಳು ಭಕ್ತಿಪೂರ್ವಕವಾಗಿ
ಶ್ರೀಕೃಷ್ಣನನ್ನು ಸ್ವಾಗತಿಸುತ್ತಾರೆ. ಶ್ರೀಕೃಷ್ಣನನ್ನು ಕಾಣದ ದಿನಗಳು ಅವರ ಪಾಲಿಗೆ ಕೋಟಿ ವರ್ಷದಷ್ಟು ಧೀರ್ಘವಾಗಿ ಕಂಡಿದ್ದರಿಂದ, ಅವರು ಇಲ್ಲಿ
ಕೃಷ್ಣನನ್ನು ಕಂಡು ಬಹಳ ಸಂತಸಗೊಳ್ಳುತ್ತಾರೆ. ದ್ವಾರಕೆಯಲ್ಲಿ ತನ್ನ ಪತ್ನಿಯರೊಂದಿಗಿದ್ದೂ, ಯಾವ ಲೇಪವೂ
ಇಲ್ಲದೇ ತನ್ನ ಸರ್ವೋತ್ತಮತ್ವವನ್ನು ಮೆರೆಯುತ್ತಾನೆ ಶ್ರೀಕೃಷ್ಣ.
॥ ಇತಿ ಶ್ರೀಮದ್ಭಾಗವತೇ
ಮಹಾಪುರಾಣೇ ಪ್ರಥಮಸ್ಕಂಧೇ ದಶಮೋSಧ್ಯಾಯಃ ॥
ಭಾಗವತ ಮಹಾಪುರಾಣದ
ಮೊದಲ ಸ್ಕಂಧದ ಹತ್ತನೇ ಅಧ್ಯಾಯ ಮುಗಿಯಿತು.
*********
No comments:
Post a Comment