Thursday, April 4, 2013

Shrimad BhAgavata in Kannada -Skandha-01-Ch-09(03)


ಭೀಷ್ಮಾಚಾರ್ಯರ ಧರ್ಮೋಪದೇಶ

ಭೀಷ್ಮ ಉವಾಚ-
ಯತ್ರ ಧರ್ಮಸುತೋ ರಾಜಾ ಗದಾಪಾಣಿರ್ವೃಕೋದರಃ
ಕೃಷ್ಣೋSಸ್ತ್ರೀ ಗಾಂಡಿವಂ ಚಾಪಂ ಸುಹೃತ್ ಕೃಷ್ಣಸ್ತತೋ ವಿಪತ್ ೨೨

ಭೀಷ್ಮಾಚಾರ್ಯರು ಧರ್ಮರಾಯನಿಗೆ ಹೇಳುತ್ತಾರೆ: “ಎಲ್ಲವೂ ಕಾಲಪುರುಷನ ಮಹಿಮೆ. ಇಲ್ಲದಿದ್ದರೆ ನಿಮ್ಮಂತವರಿಗೂ  ಈ ರೀತಿ ಆಗುವುದೇ? ಇದು ನಂಬಲಸಾಧ್ಯ. ಸ್ವಯಂ ಧರ್ಮದೇವತೆ ರಾಜನಾಗಿದ್ದು, ಜಗತ್ತನ್ನು ನಡುಗಿಸಬಲ್ಲ ವೃಕೋಧರ ಭೀಮ; ಗಾಂಡೀವಧಾರಿ, ಅಸ್ತ್ರವಿದ್ಯಾ ಪ್ರವೀರ ಅರ್ಜುನ ರಕ್ಷಕರಾಗಿದ್ದು; ಸ್ವಯಂ ಶ್ರೀಕೃಷ್ಣ ಮಾರ್ಗದರ್ಶಕನಾಗಿ ಜೊತೆಗಿದ್ದರೂ ಕೂಡಾ, ಇಷ್ಟೆಲ್ಲಾ ವಿಪತ್ತು ಬಂದಿತಲ್ಲಾ? ಕಾಲಪುರುಷನ ಸಂಕಲ್ಪವನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ. ಭಗವಂತ ಕಾಲಪುರುಷನಾಗಿ ಏನು ಮಾಡಬಯಸಿದ್ದಾನೆ ಎನ್ನುವುದು ಯಾರಿಂದಲೂ ತಿಳಿಯಲು ಸಾಧ್ಯವಿಲ್ಲ. ತಿಳಿದರೂ,  ಅದನ್ನು ತಡೆಯಲು ಸಾಧ್ಯವಿಲ್ಲ. ಇಡೀ ಜಗತ್ತು ಭಗವಂತನ ಸಂಕಲ್ಪದಂತೆ ನಡೆಯುತ್ತದೆ ಹಾಗೂ ಅದಕ್ಕನುಗುಣವಾಗಿ ನಾವು ನಡೆಯಬೇಕು ಅಷ್ಟೇ. ಹಾಗಾಗಿ ಅನಾಥರಾದ ಜನರನ್ನು ರಕ್ಷಣೆ ಮಾಡುವ ಹೊಣೆ ನಿನ್ನದು. ಅದನ್ನು ಭಗವಂತನ ಮೇಲೆ ಭಾರ ಹಾಕಿ ನಿರ್ವಹಿಸು. ಪ್ರಜಾರಕ್ಷಣೆ ಮಾಡು” ಎನ್ನುತ್ತಾರೆ.

ಏಷ ವೈ ಭಗವಾನ್ ಸಾಕ್ಷಾದಾದ್ಯೋ ನಾರಾಯಣಃ ಪುಮಾನ್
ಮೋಹಯನ್ ಮಾಯಯಾ ಲೋಕಂ ಗೂಢಶ್ಚರತಿ ವೃಷ್ಣಿಷು ೨೫

ಶ್ರೀಕೃಷ್ಣನನ್ನು ತೋರಿಸಿ, ಭೀಷ್ಮಾಚಾರ್ಯರು ಹೇಳುತ್ತಾರೆ: “ಇವನ್ಯಾರು ಗೊತ್ತಾ? ಈತ ನಿನ್ನ ಸಹೋದರಮಾವನ ಮಗನಲ್ಲ. ಭೂಮಿಗಿಳಿದು ಬಂದ ಭಗವಂತ ಈತ. ಈ ಲೋಕದಲ್ಲಿ ಮಾಯೆಯನ್ನು ತುಂಬಿ, ತನ್ನ ವ್ಯಕ್ತಿತ್ತ್ವವನ್ನು ತೋರ್ಪಡದೇ, ಒಬ್ಬ ಸಾಮಾನ್ಯ ಮನುಷ್ಯನಂತೆ ನಮಗೆ ಕಾಣಿಸುತ್ತಿದ್ದಾನೆ” ಎಂದು.

ಯಂ ಮನ್ಯಸೇ ಮಾತುಲೇಯಂ ಪ್ರಿಯಂ ಮಿತ್ರಂ ಸುಹೃತ್ತಮಮ್
ಅಕರೋಃ ಸಚಿವಂ ದೂತಂ ಸೌಹೃದಾದಥ ಸಾರಥಿಮ್ ೨೭

ಯಾರನ್ನು ನಿನ್ನ ಸಂಬಂಧಿ ಎಂದು ನೀನು ತಿಳಿದಿದ್ದೀಯೋ, ಆತ ನಿನ್ನ ಬಹಳ ಹತ್ತಿರದ ಗೆಳೆಯ. ನಿನ್ನ ಸಾರಥಿಯಾಗಿರುವಷ್ಟು ಸಲಿಗೆ ಕೊಟ್ಟವನು ಆತ. ಆದರೆ ಆತ ನಿನ್ನ ಸಹೋದರಮಾವನ ಮಗನೂ ಅಲ್ಲ, ನಿನ್ನ ಸಾರಥಿಯೂ ಅಲ್ಲ. ಆತ ಸ್ವಯಂ ಭಗವಂತ.

ತಥಾಪ್ಯೇಕಾಂತಭಕ್ತೇಷು ಪಶ್ಯ ಭೂಪಾನುಕಂಪಿತಮ್
ಯನ್ಮೇSಸೂಂಸ್ತ್ಯಜತಃ ಸಾಕ್ಷಾತ್ ಕೃಷ್ಣೋ ದರ್ಶನಮಾಗತಃ ೨೯

ಭಗವಂತನಿಗೆ ತನ್ನ ಭಕ್ತರಮೇಲೆ ಅದೆಂತಹ ಕಾರುಣ್ಯ? ನಾನು 'ಅಂತ್ಯಕಾಲದಲ್ಲಿ ಕೃಷ್ಣನ ಸ್ಮರಣೆ ಮಾಡಬೇಕು' ಎಂದುಕೊಂಡಾಕ್ಷಣ ನನ್ನ ಮುಂದೇ ಬಂದು ನಿಂತನಲ್ಲಾ! ಇದು ಸಾಮಾನ್ಯವಾದ ಕಾರುಣ್ಯವೇ? ಎಂದು ಹೇಳಿದ ಭೀಷ್ಮಾಚಾರ್ಯರು, ಧರ್ಮರಾಯನಿಗೆ ರಾಜಧರ್ಮ, ಸ್ತ್ರೀಧರ್ಮ, ಪುರುಷಧರ್ಮ, ಆಪದಧರ್ಮ, ದಾನಧರ್ಮ, ಭಗವದ್ ಧರ್ಮ, ಮೋಕ್ಷಧರ್ಮ, ಸಮಾಜಧರ್ಮ,  ಎಲ್ಲವನ್ನೂ ಉಪದೇಶ ಮಾಡುತ್ತಾರೆ.[ಇದು ಮಹಾಭಾರತದ ಶಾಂತಿಪರ್ವ ಮತ್ತು ಅನುಶಾಸನಪರ್ವದಲ್ಲಿ ವಿಸ್ತಾರವಾಗಿ ಬಂದಿದೆ]
ಭೀಷ್ಮಾಚಾರ್ಯರ ಈ ಉಪದೇಶ ಅಲ್ಲಿ ಸೇರಿದ ಸಮಸ್ತ ಋಷಿಸಮುದಾಯ ಮತ್ತು ವೇದವ್ಯಾಸರ ಸಮ್ಮುಖದಲ್ಲಿ ಅನೇಕದಿನಗಳ ಕಾಲ ನಿರಂತರ ನಡೆಯುತ್ತದೆ.  ಎಲ್ಲಾ ಧರ್ಮದ ಉಪದೇಶ ಮುಗಿದ ನಂತರ, ಉತ್ತರಾಯಣ ಪುಣ್ಯಕಾಲ ಬಂದು ತನ್ನ ಅವಸಾನ ಕಾಲ ಸಮೀಪಿಸಿತು ಎನ್ನುವಾಗ, ಭೀಷ್ಮಾಚಾರ್ಯರು ಮೌನವ್ರತದಲ್ಲಿ ಕಣ್ಮುಚ್ಚಿ ಭಗವಂತನ ಧ್ಯಾನ ಮಾಡಲಾರಂಭಿಸುತ್ತಾರೆ. ಆದರೆ ಆಶ್ಚರ್ಯವೆಂದರೆ ಅವರಿಗೆ ತಾನು ಬಯಸಿದ ಭಗವಂತನ ರೂಪ ಕಾಣುವುದಿಲ್ಲ! ಬದಲಾಗಿ ತಾನು ಮಾಡಿದ ಪಾಪಪ್ರಜ್ಞೆ ಕಾಡುತ್ತದೆ. ನಗುತ್ತಿರುವ ಕೃಷ್ಣನ ಬದಲು ‘ಯುದ್ಧರಂಗದಲ್ಲಿ ನಿಂತ ಕೃಷ್ಣ’ ಕಾಣುತ್ತಾನೆ!
ಭೀಷ್ಮ ನಿರ್ಯಾಣ

ಭೀಷ್ಮ ಉವಾಚ-
ಸಪದಿ ಸಖಿವಚೋ ನಿಶಮ್ಯ ಮಧ್ಯೇ ನಿಜಪರಯೋರ್ಬಲಯೋ ರಥಂ ಪ್ರವೇಶ್ಯ
ಸ್ಥಿತವತಿ ಪರಸೈನಿಕಾಯುರಕ್ಷ್ಣಾ ಹೃತವತಿ ಪಾರ್ಥಸಖೇ ರತಿರ್ಮಮಾಸ್ತು ೪೨

ಅರ್ಜುನನ ಬಯಕೆಯಂತೆ ಸೇನೆಯ ಮಧ್ಯದಲ್ಲಿ ರಥವನ್ನು ನಿಲ್ಲಿಸಿದ ಕೃಷ್ಣ, ಅರ್ಜುನನಿಗೆ ಉಭಯ ಪಂಗಡಗಳಲ್ಲಿರುವ ವೀರರನ್ನು ತೋರಿದ.  ಈ ರೀತಿ ತೋರಿಸಿ, ತಾನೂ ಕೂಡಾ ಕೌರವರ ಕಡೆಗಿನ ಹನ್ನೊಂದು ಅಕ್ಷೋಹಿಣಿ ಸೈನ್ಯವನ್ನು ನೋಡಿದ. ಆಗಲೇ ಆತ ಆ ಹನ್ನೊಂದು ಅಕ್ಷೋಹಿಣಿ ಸೈನ್ಯದ ಆಯಸ್ಸನ್ನು ಹೀರಿದ್ದ! ಅರ್ಜುನನಿಗೆ ಮೋಹ ಬಂದಾಗ ಅವನಿಗೆ ಭಗವದ್ಗೀತೆಯ ಉಪದೇಶ ಮಾಡಿ, ಆತನನ್ನು ತತ್ತ್ವಜ್ಞಾನದ ದಾರಿಯಲ್ಲಿ ನಿಲ್ಲಿಸಿದ ಕೃಷ್ಣ. ತಾನು ಅಸ್ತ್ರ ಹಿಡಿಯುವುದೇ ಇಲ್ಲ ಎಂದು ಪ್ರತಿಜ್ಞೆ ಮಾಡಿದ್ದರೂ ಕೂಡಾ, ತನ್ನ ಭಕ್ತನ ಪ್ರತಿಜ್ಞೆಯನ್ನು ಈಡೇರಿಸುವುದಕ್ಕಾಗಿ ತನ್ನ ಪ್ರತಿಜ್ಞೆಯನ್ನು ಮುರಿದು, ರಥದ ಚಕ್ರವನ್ನೇ ಅಸ್ತ್ರವಾಗಿರಿಸಿಕೊಂಡು ಮುನ್ನುಗ್ಗಿಬಂದ ಕರುಣಾಳು ಆತ. ಹೀಗೆ ಬೀಷ್ಮಾಚಾರ್ಯರಿಗೆ ಇಲ್ಲಿ ಯುದ್ಧರಂಗದ ದೃಶ್ಯ ಹಾಗೂ ತನ್ನ ಬಾಣದಿಂದ ಗಾಯಗೊಂಡು ರಕ್ತಸುರಿಯುತ್ತಿರುವ ಮೈಯ ಕೃಷ್ಣ ಕಾಣಿಸುತ್ತಿದ್ದಾನೆ. “ಇಂತಹ ದ್ರೋಹಿಯ ಮೇಲೆ ಕೂಡಾ ಅದೆಂತಹ ಕರುಣೆ, ಆ ಮೋಕ್ಷಪ್ರದ ಭಗವಂತ ಎಲ್ಲರಿಗೂ ಆನಂದವನ್ನು ಕೊಡಲಿ” ಎನ್ನುತ್ತಾ ಭೀಷ್ಮಾಚಾರ್ಯರು ದೇಹತ್ಯಾಗ ಮಾಡುತ್ತಾರೆ.
ಧರ್ಮರಾಯ ತನ್ನೆಲ್ಲಾ ಹಿರಿಯರೊಡಗೂಡಿ, ಬಂಧುಬಳಗದೊಂದಿಗೆ ಬೀಷ್ಮಾಚಾರ್ಯರ ಅಂತ್ಯಕ್ರಿಯೆ ಮಾಡುತ್ತಾನೆ. ಆನಂತರ ದೃತರಾಷ್ಟ್ರ ಗಾಂಧಾರಿಯನ್ನು ಎಲ್ಲರೂ ಸಂತೈಸುತ್ತಾರೆ.

ಸೂತ ಉವಾಚ-
ಪಿತ್ರಾ ಚಾನುಮತೋ ರಾಜಾ ವಾಸುದೇವಾನುಮೋದಿತಃ
ಚಕಾರ ರಾಜ್ಯಂ ಧರ್ಮೇಣ ಪಿತೃಪೈತಾಮಹಂ ವಿಭುಃ ೫೭

ಧರ್ಮರಾಯ ದೃತರಾಷ್ಟ್ರನ ಅನುಮತಿ ಪಡೆದು, ವಾಸುದೇವನ ಅನುಮೋದನೆ ಪಡೆದು, ಧರ್ಮದಿಂದ ತಮ್ಮ ಪಿತೃಪಿತಾಮಹರಿಂದ ಹರಿದುಬಂದಂತಹ ರಾಜ್ಯವನ್ನು, ಧರ್ಮಬದ್ಧವಾಗಿ, ಧಾರ್ಮಿಕವಾಗಿ, ಜನತೆಗೆ ಹಿತಕರವಾಗುವ ರೀತಿಯಲ್ಲಿ  ರಾಜ್ಯಭಾರ ಮಾಡುತ್ತಾನೆ.

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ನವಮೋSಧ್ಯಾಯಃ
ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಒಂಬತ್ತನೇ ಅಧ್ಯಾಯ ಮುಗಿಯಿತು.
*********

No comments:

Post a Comment