Wednesday, August 26, 2015

Shrimad BhAgavata in Kannada -Skandha-02-Ch-07(23)

೨೦. ರಾಮಾವತಾರ

ಭಗವಂತನ ಒಂದು ಅವತಾರದಲ್ಲೇ ಇನ್ನೊಂದು ಅವತಾರದ ಬೀಜಕ್ಷೇಪವಿರುತ್ತದೆ. ಅದೇ ರೀತಿ ಪರಶುರಾಮ ಅವತಾರ ರಾಮಾವತಾರಕ್ಕೆ ಬೀಜಕ್ಷೇಪ. ಎಲ್ಲಾ  ಕ್ಷತ್ರಿಯರನ್ನು ಕೊಂದ ಪರಶುರಾಮ ರಾವಣನನ್ನು ಕೊಲ್ಲಲಿಲ್ಲ. ಅಷ್ಟೇ ಅಲ್ಲ, ಕ್ಷತ್ರಿಯರನ್ನು ಬೇಟೆಯಾಡುತ್ತಾ ಅಯೋಧ್ಯೆಗೆ ಹೋದ ಪರಶುರಾಮ ಅಲ್ಲಿ ರಘುವಂಶದ ಪ್ರಾಚೀನ ಒಬ್ಬ ರಾಜ ಹೆಣ್ಣುಮಕ್ಕಳ ಕೋಣೆಯಲ್ಲಿ  ಅವಿತು ಕುಳಿತಿರುವುದು ತಿಳಿದಿದ್ದರೂ ಅವನನ್ನು ಕೊಲ್ಲಲಿಲ್ಲ. (ಹೆಣ್ಣು ಮಕ್ಕಳ ನಡುವೆ ಕುಳಿತು ಪಾರಾದ ಆ ರಾಜ ನಾರೀಕವಚ ಎಂದು ಹೆಸರಾದ). ಇಪ್ಪತ್ತೊಂದು ಬಾರಿ ಕ್ಷತ್ರಿಯ ಸಂಹಾರ ಮಾಡಿದ ಪರಶುರಾಮ ಇಪ್ಪತ್ತೆರಡನೇ ಬಾರಿ ಸಂಹಾರಕ್ಕೆ ಕೈ ಹಾಕಲಿಲ್ಲ.  ಹೀಗಾಗಿ ನಾರೀಕವಚನ ವಂಶ ಬೆಳೆದು, ಅದರಿಂದ ರಘುವಂಶ  ಬೆಳೆದು, ಆ ವಂಶದಲ್ಲೇ ಭಗವಂತ ಶ್ರೀರಾಮಚಂದ್ರನಾಗಿ ಅವತರಿಸಿದ.
ಇಲ್ಲಿ ಮೂರೇ ಶ್ಲೋಕಗಳಲ್ಲಿ ಚತುರ್ಮುಖ ಇಡೀ ರಾಮಾಯಣದ ಮುಖ್ಯ ಅಂಶಗಳನ್ನು ನಾರದರ ಮುಂದಿಡುವುದನ್ನು  ನಾವು ಕಾಣುತ್ತೇವೆ. ಇಡೀ ರಾಮಾಯಣದ ಒಟ್ಟು ಉದ್ದೇಶ ಹಾಗೂ ಪ್ರಾರಂಭದ ಹಂತದ ಮುಖ್ಯ ಬೆಳವಣಿಗೆಯ ಪೂರ್ಣ ಚಿತ್ರಣವನ್ನು ಮೊದಲನೇ ಶ್ಲೋಕ ನಮಗೆ ನೀಡುತ್ತದೆ.

ಕೃತ್ಸ್ನಪ್ರಸಾದಸುಮುಖಃ ಕಲಯಾ ಕಲೇಶ ಇಕ್ಷ್ವಾಕುವಂಶ ಅವತೀರ್ಯ ಗುರೋರ್ನಿದೇಶೇ
ತಿಷ್ಠನ್ ವನಂ ಸದಯಿತಾನುಜ ಆವಿವೇಶ ಯಸ್ಮಿನ್ ವಿರುಧ್ಯ ದಶಕಂಧರ ಆರ್ತಿಮಾರ್ಚ್ಛತ್ ೨೩

ಭಗವಂತ ತನ್ನ ಒಂದೊಂದು ಅವತಾರದಲ್ಲಿ ಒಂದೊಂದು ವೈಶಿಷ್ಟ್ಯವನ್ನು ಅಭಿವ್ಯಕ್ತಗೊಳಿಸುತ್ತಾನೆ. ಭಗವಂತನ ರಾಮಾವತಾರದ ಒಂದು ವೈಶಿಷ್ಟ್ಯ ಏನೆಂದರೆ:  ಎಂಥಹ ಕಠಿಣ ಪ್ರಸಂಗದಲ್ಲೂ ಪ್ರಸನ್ನ ಚಿತ್ತನಾಗಿರುವುದು . ನಗು- ನಗುತ್ತಾ ಜೀವನದಲ್ಲಿ ಬರುವ ಎಲ್ಲಾ ದುಃಖವನ್ನೂ ಸ್ವೀಕರಿಸುವ ನಿಲುವು. ಅದನ್ನೇ ಇಲ್ಲಿ “ಕೃತ್ಸ್ನಪ್ರಸಾದಸುಮುಖಃ” ಎಂದಿದ್ದಾರೆ. ಅಂದರೆ ಪೂರ್ಣ ಪ್ರಸನ್ನತೆ. ಯಾವಾಗಲೂ ಮನಸ್ಸು ತಿಳಿಯಾಗಿರುವುದು. ಇಂಥಹ ಸದಾ ಪ್ರಸನ್ನಚಿತ್ತತೆ ಶ್ರೀರಾಮಚಂದ್ರನದಾಗಿತ್ತು.
ಎಂಥಹ ಸಂದರ್ಭದಲ್ಲೂ ಕೂಡಾ ರಾಮ ಪ್ರಸನ್ನಚಿತ್ತನಾಗಿರುತ್ತಿದ್ದ ಎನ್ನುವುದಕ್ಕೆ ಆತನ ಪಟ್ಟಾಭಿಷೇಕ ನಿಂತುಹೋದ ಘಟನೆ ಒಂದು ಉತ್ತಮ ಉದಾಹರಣೆ. ಶ್ರೀರಾಮನಿಗೆ ಮದುವೆಯಾಗಿರುವುದು ಹದಿನಾಲ್ಕನೇ ವಯಸ್ಸಿನಲ್ಲಿ. ಆಗ ಸೀತೆಗೆ ಸುಮಾರು ಎಂಟು ವರ್ಷ. ಮದುವೆಯಾಗಿ ಸುಮಾರು ೧೨ ವರ್ಷ ರಾಮ ತಂದೆಯ ಜೊತೆಗಿದ್ದ. ರಾಮನಿಗೆ ಇಪ್ಪತ್ತಾರು ವರ್ಷ ಕಳೆದು  ಇಪ್ಪತ್ತೇಳನೇ ಹುಟ್ಟುಹಬ್ಬದ ದಿನ (ಪುನರ್ವಸು ನಕ್ಷ್ಗತ್ರ)  ದಶರಥ ಅಲ್ಲಿ ನೆರೆದ ಸಮಸ್ತ ಜನರನ್ನುದ್ದೇಶಿಸಿ ಹೇಳುತ್ತಾನೆ: “ಪಾನ್ದುರಸ್ಯ ಆತಪತ್ರಸ್ಯ ಛಾಯಾಯಾಂ ಜರಿತಂ ಮಯಾ (ಅಯೋಧ್ಯ ೨.೭)”  “ಬೆಳ್ಕೊಡೆಯ ಅಡಿಯಲ್ಲಿ ನನ್ನ ತಲೆ ಬೆಳ್ಳಗಾಯಿತು. ಇನ್ನು  ನನಗೆ ವಿಶ್ರಾಂತಿ ಬೇಕು” ಎಂದು. ಆಗ ಅಲ್ಲಿ ನೆರೆದ ಎಲ್ಲರೂ “ಅಧಿಕಾರವನ್ನು ಶ್ರೀರಾಮಚಂದ್ರನಿಗೆ ಒಪ್ಪಿಸಬಹುದು” ಎನ್ನುವ ಪ್ರಸ್ತಾಪ ಮುಂದಿಡುತ್ತಾರೆ. ರೋಗಿ ಬಯಸಿದ್ದೂ ಹಾಲು ವೈದ್ಯ ಕೊಟ್ಟಿದ್ದೂ ಹಾಲು ಎನ್ನುವಂತೆ ಜನರ ಪ್ರಸ್ತಾಪದಿಂದ ದಶರಥನಿಗೆ ಸಂತೋಷವಾಗುತ್ತದೆ. ಏಕೆಂದರೆ ಆತನ ಅಂತರಂಗದ ಬಯಕೆಯೂ ಅದೇ ಆಗಿತ್ತು. ಆದರೂ ಕೂಡಾ ಮತ್ತೆ ಕೇಳುತ್ತಾನೆ: “ಏಕೆ? ನನ್ನ ಆಡಳಿತ ನಿಮಗೆ ಹಿಡಿಸಲಿಲ್ಲವೇ” ಎಂದು. ಆಗ ಜನ ಹೇಳುತ್ತಾರೆ: “ಶ್ರೀರಾಮಚಂದ್ರನಂಥಹ ವ್ಯಕ್ತಿ ನಮ್ಮ ಸಮಕಾಲಿನವನಾಗಿ ಸಿಕ್ಕಿರುವುದು ನಮ್ಮ ಭಾಗ್ಯ.  ಹೀಗಾಗಿ ನಾವು ಅದರ ಸದುಪಯೋಗ ಮಾಡಿಕೊಳ್ಳಬೇಕು” ಎಂದು. ಆಗ ದಶರಥ ಜನರ ಅಭಿಲಾಷೆಯಂತೆ, ಮರುದಿನವೇ (ಪುಷ್ಯ ನಕ್ಷತ್ರ , ಅಂದರೆ ಜನ್ಮ ಸಂಪತ್ತು) ಪಟ್ಟಾಭಿಷೇಕ ನಿಗದಿ ಮಾಡಿಬಿಡುತ್ತಾನೆ. ಈ ವಿಷಯವನ್ನು ದಾಸಿ (ಮಂತರೆ) ತಕ್ಷಣ ಭರತನ ತಾಯಿ ಕೈಕೇಯಿಗೆ ತಿಳಿಸುತ್ತಾಳೆ. ಭರತನೇ ದೇಶದ ಮುಂದಿನ ಅಧಿಪತಿ ಎಂದು ಕನಸು ಕಟ್ಟಿಕೊಂಡು ಕುಳಿತಿದ್ದ ಕೈಕೇಯಿಗೆ ಈ ವಿಷಯ ಕೇಳಿ ನಿರಾಶೆಯಾಗುತ್ತದೆ. ಇದರಿಂದ ಕೋಪಗೊಂಡ ಆಕೆ ಕೋಪದ ಮನೆಯಲ್ಲಿ ಹೋಗಿ ನೆಲದ ಮೇಲೆ ಮಲಗಿ ಪ್ರತಿಭಟಿಸುತ್ತಾಳೆ.
ದಶರಥ ಸಂಜೆ ಅಂತಃಪುರಕ್ಕೆ ಬಂದಾಗ ಆತನಿಗೆ ಕೈಕೈಯಿ ಕೋಪಗೊಂಡ ವಿಷಯ ತಿಳಿಯುತ್ತದೆ ಮತ್ತು ಆತ  ಕೈಕೇಯಿ ಇದ್ದಲ್ಲಿಗೆ ಹೋಗುತ್ತಾನೆ. ಅಲ್ಲಿ ಆತ ಕೈಕೇಯಿಯ ಮನಸ್ಸಿನಲ್ಲಿನ ವೈಷಮ್ಯದ ಆಳವನ್ನು ಅರಿಯದೇ ಆಕೆಯನ್ನು ಸಂತೈಸಲಿಕ್ಕಾಗಿ “ರಾಮಚಂದ್ರನ ಆಣೆಗೂ ನೀನು ಹೇಳಿದಂತೆ ಮಾಡುತ್ತೇನೆ” ಎಂದು ಮಾತು ಕೊಡುತ್ತಾನೆ. ಆಗ ಕೈಕೇಯಿ ಹೇಳುತ್ತಾಳೆ: “ರಾಮನನ್ನು ಈಗಿಂದೀಗ ಕಾಡಿಗೆ ಕಳುಹಿಸಿ ರಾಜ್ಯವನ್ನು ನನ್ನ ಮಗ ಭರತನಿಗೆ ಒಪ್ಪಿಸಬೇಕು” ಎಂದು. ಈ ಮಾತನ್ನು ಕೇಳಿ ದಶರಥನಿಗೆ ದಿಗ್ಭ್ರಮೆಯಾಗುತ್ತದೆ. ಆತ ಆಕೆಯಲ್ಲಿ ನಿರ್ಧಾರ ಬದಲಿಸುವಂತೆ  ಪರಿಪರಿಯಿಂದ ಕೇಳಿಕೊಳ್ಳುತ್ತಾನೆ. ಆದರೆ ಕೈಕೇಯಿ ಅದ್ಯಾವುದಕ್ಕೂ ಒಪ್ಪದೆ ಹಠ ಹಿಡಿಯುತ್ತಾಳೆ. ಒಂದು ವೇಳೆ ರಾಮನನ್ನು ಕಾಡಿಗೆ ಕಳುಹಿಸಿದರೆ ದಶರಥ ಜೀವಂತ ಉಳಿಯುವುದಿಲ್ಲ, ನೀನು ವಿದವೆಯಾಗುತ್ತೀಯ” ಎಂದೂ ದಶರಥ ಎಚ್ಚರಿಸುತ್ತಾನೆ. ಆದರೆ ಆಶ್ಚರ್ಯ ಎನ್ನುವಂತೆ ಕೈಕೈಯಿ ಹೇಳುತ್ತಾಳೆ: “ನನ್ನ ಹಣೆಯಲ್ಲಿ ಏನು ಬರೆದಿದೆಯೋ ಅದೇ ಆಗುತ್ತದೆ. ಅದನ್ನು ಬದಲಿಸುವುದು ಸಾಧ್ಯವಿಲ್ಲ” ಎಂದು.  ಇಂಥಹ  ಕಠಿಣ ಪರಿಸ್ಥಿತಿಯೊಂದಿಗೆ ದಶರಥ ನಿದ್ರೆ ಇಲ್ಲದೇ ರಾತ್ರಿ ಕಳೆಯುತ್ತಾನೆ. ಅತ್ತ ಅರಮನೆಯಲ್ಲಿ ರಾಮನ ಪಟ್ಟಾಭಿಷೇಕದ ಸಂಭ್ರಮ. ಎಲ್ಲರೂ ದಶರಥನಿಗಾಗಿ ಕಾದಿದ್ದಾರೆ. ಆದರೆ ರಾಜನ ಪತ್ತೆ ಇಲ್ಲ. ಆಗ ಮಂತ್ರಿ ಸುಮಂತ್ರ ಮಹಾರಾಜರನ್ನು ಹುಡುಕಿಕೊಂಡು ಅಂತಃಪುರಕ್ಕೆ ಬರುತ್ತಾನೆ. ಅಲ್ಲಿ ಆಘಾತದಿಂದ ಬಿದ್ದಿರುವ ದಶರಥನನ್ನು ಕಂಡು “ಏನಾಯಿತು” ಎಂದು ಕೇಳುತ್ತಾನೆ ಸುಮಂತ್ರ. ಆಗ ಕೈಕೇಯಿ ಹೇಳುತ್ತಾಳೆ: “ಈ ತನಕ ತುಂಬಾ ಕುಷಿಯಿಂದ ಮಾತನಾಡಿಕೊಂಡಿದ್ದರು, ಈಗಷ್ಟೇ ಅವರಿಗೆ ಮಂಪರು ಬಂದಿದೆ. ರಾಮಚಂದ್ರನ್ನು ಕರೆದುಕೊಂಡು ಬಾ, ನಾನು ಅವನಲ್ಲಿ ಮಾತನಾಡಬೇಕು” ಎಂದು. ಆದರೆ ಕೈಕೇಯಿಯ ಸ್ವಭಾವವನ್ನು ಅರಿತಿದ್ದ ಸುಮಂತ್ರ ಆಕೆಯ ಮಾತನ್ನು ನಂಬುವುದಿಲ್ಲ. ಆತ “ಕಹಿಬೇವಿನ ಮರದಲ್ಲಿ ಎಂದೂ ಸಿಹಿನೀರು ಬರಲಾರದು. ನೀನು ಸುಳ್ಳು ಹೇಳುತ್ತಿರುವೆ” ಎಂದು ಕಟುವಾಗಿ ಮಾತನಾಡುತ್ತಾನೆ. ಆಗ ದಶರಥ ಸುಮಂತ್ರನಲ್ಲಿ ಶ್ರೀರಾಮನನ್ನು ಕರೆತರುವಂತೆ ಹೇಳುತ್ತಾನೆ. ಪಟ್ಟಾಭಿಷೇಕಕ್ಕೆ ಸಿದ್ಧನಾಗಿ ನಿಂತಿದ್ದ ಶ್ರೀರಾಮಚಂದ್ರ ದಶರಥನಲ್ಲಿಗೆ ಬರುತ್ತಾನೆ. ಆದರೆ ದಶರಥ ರಾಮನಲ್ಲಿ ಮಾತನಾಡದೇ ಕುಸಿದು ಬೀಳುತ್ತಾನೆ. ಆಗ ಕೈಕೈಯೇ ಹೇಳುತ್ತಾಳೆ: “ಮಹಾರಾಜರಿಗೆ ಭರತನೆ ರಾಜನಾಗಬೇಕು ಎನ್ನುವ ಬಯಕೆ. ಆದರೆ ಆ ಮಾತನ್ನು ನಿನಗೆ ಹೇಳಿದರೆ ನೀನು ಬೇಸರಿಸಬಹುದು ಎಂದು ಹೇಳುತ್ತಿಲ್ಲ ಅಷ್ಟೇ. ಅವರ ಬಯಕೆಯನ್ನು ನೀನು ಈಡೇರಿಸಬೇಕು” ಎನ್ನುತ್ತಾಳೆ. ಅದಕ್ಕೆ ಶ್ರೀರಾಮಚಂದ್ರ ಒಪ್ಪುತ್ತಾನೆ. ಅಷ್ಟಕ್ಕೇ ನಿಲ್ಲದ ಆಕೆ:  “ನೀನು ತಕ್ಷಣ ಕಾಡಿಗೆ ಹೋಗಬೇಕು” ಎನ್ನುತ್ತಾಳೆ. ಆಗ ರಾಮಚಂದ್ರ ಪಟ್ಟಾಭಿಷೇಕದ ಉಡುಗೆಯನ್ನು ತೊರೆದು ಕಾಡಿಗೆ ಹೋಗುವ ತಯಾರಿಯಿಂದ ಹೊರ ಬರುತ್ತಾನೆ. ಈ ಘಟನೆಯ ನಂತರ ಅಲ್ಲಿ ನೆರೆದ ಜನಸ್ತೋಮಕ್ಕೆ ಆಘಾತವಾಗುತ್ತದೆ. ಆದರೆ ಶ್ರೀರಾಮನ ಮುಖದಲ್ಲಿ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ಅದೇ ನಗು ಮೊಗದಿಂದ ಹೊರಬಂದ ರಾಮಚಂದ್ರ ಕಾಡಿಗೆ ಹೋಗಲು ಸಿದ್ಧನಾಗುತ್ತಾನೆ. ಈ ರೀತಿಯ ಪ್ರಸನ್ನಚಿತ್ತತೆಯನ್ನು ಇಲ್ಲಿ ಕೃತ್ಸ್ನಪ್ರಸಾದಸುಮುಖಃ ಎಂದು ವರ್ಣಿಸಲಾಗಿದೆ. ಇಷ್ಟೇ ಅಲ್ಲದೇ, ಅನೇಕ ಮಂದಿ ಋಷಿಗಳು ರಾವಣನ ಕಾಟದಿಂದ ಹಿಂಸೆಗೊಳಗಾಗಿ ಭಗವಂತ ಅವತರಿಸಿ ಬರಬೇಕು,  ಆತನ ದರ್ಶನವಾಗಬೇಕು ಎಂದು ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದರು.  ಅಂಥಹ ಋಷಿಗಳ ಮೇಲಿನ ಕರುಣೆಯಿಂದ ಶ್ರೀರಾಮ ಪ್ರಸನ್ನಚಿತ್ತನಾಗಿ ಕಾಡಿಗೆ ತೆರಳಿದ ಎನ್ನುವ ಅರ್ಥವನ್ನೂ ಕೃತ್ಸ್ನಪ್ರಸಾದಸುಮುಖಃ. ಎನ್ನುವ ಪದ ತಿಳಿಸುತ್ತದೆ. ಭಗವಂತ ಸ್ವಯಂ ಕೃತ್ಸ್ನಪ್ರಸಾದಸುಮುಖಃ. ಅಂದರೆ ಪೂರ್ಣಾನಂದ. ರಾಮ ಎನ್ನುವ ನಾಮ ಕೂಡಾ ಇದನ್ನೇ ಹೇಳುತ್ತದೆ. ರಂ ಎಂದರೆ ಆನಂದ. (ರಂ-ಕ್ರೀಡಾಯಾಂ/ ರಮಣ) ಅಮ= ಅಮಿತ. ಹೀಗಾಗಿ ರಾಮ ಎಂದರೆ ಅನಂತವಾದ ಆನಂದಸ್ವರೂಪ ಎಂದರ್ಥ. ಈ ರೀತಿ ಕೃತ್ಸ್ನಪ್ರಸಾದಸುಮುಖಃ ಎನ್ನುವುದು ಒಂದು ಶಬ್ದದ ಮೂಲಕ ಎಲ್ಲವನ್ನೂ ಹೇಳುವ ಅದ್ಭುತ ಶಬ್ದ. ಇದನ್ನು ಬಗೆದಷ್ಟೂ ಹೊಸ ಹೊಸ ಅರ್ಥಗಳು ಕಾಣಿಸಿಕೊಳ್ಳುತ್ತವೆ.
ಇಲ್ಲಿ ಒಂದು ಅಂಶದಲ್ಲಿ ಭಗವಂತ ರಾಮನಾಗಿ ಅವತರಿಸಿ ಬಂದ ಎಂದಿದ್ದಾರೆ.  ಅಂದರೆ ಆತ ವೈಕುಂಠವನ್ನು ತೊರೆದು ಬಂದಿಲ್ಲ, ಆತ ಅಲ್ಲಿಯೂ ಇದ್ದಾನೆ ಇಲ್ಲಿಯೂ ಇದ್ದಾನೆ ಎಂದರ್ಥ. ಭಗವಂತನ ಅಂಶ ಮತ್ತು ಭಗವಂತ ಬೇರೆಬೇರೆ ಅಲ್ಲ. ಆತನ ಅಂಶವೂ ಮೂಲರೂಪದಷ್ಟೇ ಪೂರ್ಣ.
ಶ್ರೀರಾಮಚಂದ್ರನನ್ನು ಚತುರ್ಮುಖ ಕಲೇಶ ಎಂದು ಸಂಬೋಧಿಸಿದ್ದಾನೆ. ನಮಗೆ ತಿಳಿದಂತೆ ಕಲೆಗಳು ಹದಿನಾರು.  ಷಟ್ ಪ್ರಶ್ನ ಉಪನಿಷತ್ತಿನಲ್ಲಿ  ಈ ಹದಿನಾರು ಕಲೆಗಳ ವಿವರ ಬರುತ್ತದೆ. ಸ ಪ್ರಾಣಮಸೃಜತ ಪ್ರಾಣಾಚ್ಛ್ರದ್ಧಾಂ ಖಂ ವಾಯುರ್ಜ್ಯೋತಿರಾಪಃ ಪೃಥಿವೀಂದ್ರಿಯಂ ಮನೋSನ್ನಮನ್ನಾದ್ ವೀರ್ಯಂ ತಪೋ ಮಂತ್ರಾಃ ಕರ್ಮ ಲೋಕಾ ಲೋಕೇಷು ನಾಮ ಚ ೬-೪   ಸೃಷ್ಟಿ ಪ್ರಾರಂಭದಲ್ಲಿ ಭಗವಂತ ತನ್ನೊಂದಿಗೆ ಸದಾ ಇರುವ ಒಬ್ಬ ಒಡನಾಡಿ ಬೇಕು ಎಂದು ಇಚ್ಛೆಪಟ್ಟು ಪ್ರಾಣದೇವರನ್ನು ಸೃಷ್ಟಿ ಮಾಡಿದ. ಪ್ರಪಂಚ ಸೃಷ್ಟಿಯಲ್ಲಿ ಪ್ರಾಣದಸೃಷ್ಟಿ ಎಂದರೆ ಜೀವಕಲೆಯ ಸೃಷ್ಟಿ. ಅಂದರೆ ಜೀವರುಗಳ ಸೃಷ್ಟಿ. ಈ ಸಮಸ್ತ ಜೀವರುಗಳಿಗೆ ಅಭಿಮಾನಿ ದೇವತೆ ಪ್ರಾಣದೇವರು.  ಷೋಡಶಕಲೆಗಳಲ್ಲಿ ‘ಜೀವ’ ಹದಿನಾರನೇ ಕಲೆ ಹಾಗೂ ಇದೊಂದೇ ಚೇತನ. ಉಳಿದ ಹದಿನೈದು ಕಲೆಗಳೆಂದರೆ: ಶ್ರದ್ಧೆ, ಖಂ, ವಾಯು, ಜ್ಯೋತಿ, ಆಪಃ, ಪ್ರಥಿವೀ, ಇಂದ್ರಿಯ, ಮನಃ, ಅನ್ನ, ವೀರ್ಯ, ತಪಃ, ಮಂತ್ರಾಃ, ಕರ್ಮ, ಲೋಕಾಃ ಮತ್ತು ನಾಮ. ‘ಜೀವ’ ಈ ಹದಿನೈದು ಕಲೆಗಳ ನಡುವೆ ನಿಂತಿರುವ ಸಂಸಾರಿ. ಈ ಬೇಲಿಯಿಂದ ಬಿಡುಗಡೆಯಾದಾಗ ಜೀವನಿಗೆ ಮೋಕ್ಷಪ್ರಾಪ್ತಿಯಾಗುತ್ತದೆ. ಇಂಥಹ ಜೀವನಿಗೆ ಅಭಿಮಾನಿಯಾದ ಪ್ರಾಣದೇವರು ಅಂದರೆ ಹನುಮಂತನ ಈಶನಾಗಿ (ಕಲೇಶ) ಭಗವಂತ ಅವತರಿಸಿ ಬಂದ.
ಇಲ್ಲಿ ವ್ಯಾಕರಣವನ್ನು ಮುರಿದು ಇಕ್ಷ್ವಾಕುವಂಶ ಅವತೀರ್ಯ ಎಂದಿದ್ದಾರೆ. ಇಂಥಹ ಪ್ರಯೋಗವನ್ನು ವೇದವ್ಯಾಸರಷ್ಟೇ ಮಾಡಬಲ್ಲರು. ಭಗವಂತ ಅವತರಿಸಿರುವುದು ಇಕ್ಷ್ವಾಕುವಂಶದಲ್ಲಿ. ಆದರೆ ಆತ ಇಕ್ಷ್ವಾಕು ವಂಶದ ಒಬ್ಬ ರಾಜಕುಮಾರನಲ್ಲ. ಆತ ಇಡೀ ಜಗತ್ತಿನ ನಿಯಾಮಕ ಶಕ್ತಿ. ಇದನ್ನು ತೋರಿಸುವುದಕ್ಕಾಗಿಯೇ ಇಲ್ಲಿ ಇಂಥಹ ಪ್ರಯೋಗ ಮಾಡಲಾಗಿದೆ. ಇಂಥಹ  ಶ್ರೀರಾಮಚಂದ್ರ ತನ್ನ ಬದುಕಿನಲ್ಲಿ ತಂದೆಯ ಆದೇಶಕ್ಕೆ ಬದ್ದನಾಗಿ ವನವಾಸ ಮಾಡಿದ.
ತನ್ನ ಪತ್ನಿ ಮತ್ತು ತಮ್ಮ ಲಕ್ಷ್ಮಣಯೊಂದಿಗೆ ವನವಾಸ ಮಾಡುತ್ತಿರುವಾಗ ರಾವಣ ರಾಮಚಂದ್ರನನ್ನು ಎದುರು ಹಾಕಿಕೊಂಡ. ಇದಕ್ಕೆ ವಿಶೇಷ ಕಾರಣ ರಾವಣನ ತಂಗಿ ಹಾಗೂ ವಿದ್ಯುಜ್ಜಿಹ್ವನ ಪತ್ನಿ ಶೂರ್ಪನಖಿ. ವಿದ್ಯುಜ್ಜಿಹ್ವ ಯಾವಾಗಲೂ ರಾವಣನ ಜೊತೆಗೆ ಯುದ್ಧಕ್ಕೆ ಹೋಗುತ್ತಿದ್ದ. ಆದರೆ ಒಮ್ಮೆ ರಾವಣ ವಿದ್ಯುಜ್ಜಿಹ್ವನನ್ನು ಶತ್ರುವೆಂದು ತಪ್ಪಾಗಿ ತಿಳಿದು ಹತ್ಯೆ ಮಾಡುತ್ತಾನೆ. ಈ ರೀತಿ ಗಂಡನನ್ನು ಕಳೆದುಕೊಂಡ ಶೂರ್ಪನಖಿ ವಿದವೆಯಾಗುತ್ತಾಳೆ. ರಾವಣ ಆಕೆಯಲ್ಲಿ ಆಕೆಗೆ ಇಷ್ಟವಾದ ಗಂಡನ್ನು  ಮದುವೆಯಾಗುವಂತೆ ಹೇಳುತ್ತಾನೆ. ಇಂಥಹ ಶೂರ್ಪನಖಿ ಒಮ್ಮೆ ವಿಹಾರ ಮಾಡುತ್ತಿದ್ದಾಗ ಶ್ರೀರಾಮನನ್ನು ಕಂಡು ಮೋಹಿತಳಾಗುತ್ತಾಳೆ. ಆಕೆ ನೇರವಾಗಿ ಶ್ರೀರಾಮನ ಬಳಿ ಬಂದು “ತನ್ನನ್ನು ಮದುವೆಯಾಗು” ಎಂದು ಕೇಳಿಕೊಳ್ಳುತ್ತಾಳೆ. ಆಗ ಸೀತೆಯ ಜೊತೆಗಿದ್ದ ರಾಮ ವಿನೋದವಾಗಿ ಹೇಳುತ್ತಾನೆ: “ನನ್ನ ಪತ್ನಿ ನನ್ನೊಂದಿಗಿದ್ದಾಳೆ. ಹೀಗಾಗಿ ನನಗೆ ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ. ಬೇಕಿದ್ದರೆ ಲಕ್ಷ್ಮಣನನ್ನು ಕೇಳು” ಎಂದು. ಆಗ ಶೂರ್ಪನಖಿ ಲಕ್ಷ್ಮಣನ ಬಳಿ ಹೋಗಿ ತನ್ನ ಇಚ್ಛೆಯನ್ನು ಮುಂದಿಡುತ್ತಾಳೆ. ಮಾಯಾವಿ ಶೂರ್ಪನಖಿಯ ದುಷ್ಟತನವನ್ನು ಅರಿತಿದ್ದ ಶ್ರೀರಾಮಚಂದ್ರ ಲಕ್ಷ್ಮಣನಿಗೆ ಸನ್ನೆ ಮಾಡುತ್ತಾನೆ ಮತ್ತು ಅದರಂತೆ ಲಕ್ಷ್ಮಣ ಆಕೆಯ ಮೂಗನ್ನು ಕತ್ತರಿಸುತ್ತಾನೆ. ಇದರಿಂದ ಕೋಪಗೊಂಡ ಶೂರ್ಪನಖಿ ನೇರವಾಗಿ ತನ್ನ ಸಹೋದರರಾದ ಖರ-ದುಷಣರಲ್ಲಿ  ರಾಮ-ಲಕ್ಷ್ಮಣರನ್ನು ಮುಗಿಸಿಬಿಡುವಂತೆ ಕೇಳಿಕೊಳ್ಳುತ್ತಾಳೆ. ಆದರೆ ಶ್ರೀರಾಮ ಖರ-ದುಷಣರು ಮತ್ತು ಅವರ ಹದಿನಾಲ್ಕುಸಾವಿರ ಸೈನಿಕರನ್ನು ನಾಶಮಾಡುತ್ತಾನೆ. ಇದರಿಂದ ಮತ್ತೆ ಅವಮಾನಗೊಂಡ ಶೂರ್ಪನಖಿ ನೇರವಾಗಿ ಲಂಕೆಗೆ ಬಂದು ರಾವಣನಲ್ಲಿ ಸುಳ್ಳು ಹೇಳುತ್ತಾಳೆ! ಆಕೆ ಹೇಳುತ್ತಾಳೆ: “ಅಣ್ಣಾ, ನಾನು ಕಾಡಿನಲ್ಲಿ ವಿಹರಿಸುತ್ತಿರುವಾಗ ಅತ್ಯಂತ ಸುಂದರಿಯಾದ ಸೀತೆಯನ್ನು ಕಂಡೆ. ಆಕೆಯ ಸೌಂದರ್ಯವನ್ನು ಕಂಡಾಗ ನನಗೆ ಆಕೆ ನಿನ್ನ ಪಟ್ಟದ ರಾಣಿ ಆಗಬೇಕು ಎನಿಸಿತು. ನಾನು ಈ ಮಾತನ್ನು ಹೇಳಿದಾಗ ಆಕೆಯ ಜೊತೆಗಿದ್ದ ರಾಮ-ಲಕ್ಷ್ಮಣರು ನನ್ನ ಮೂಗನ್ನು ಕತ್ತರಿಸಿದರು. ಸೀತೆ ನಿನ್ನ ಪತ್ನಿ ಆಗಬೇಕು ಎಂದು ಕೇಳಿಕೊಂಡಿದ್ದಕ್ಕಾಗಿ ನನ್ನ ಮೂಗನ್ನು ಕತ್ತರಿಸಲಾಯಿತು. ಇದು ಅವರು ನಿನಗೆ ಮಾಡಿದ ಅವಮಾನ” ಎಂದು. ಇಲ್ಲಿ ಆಕೆ ಎಲ್ಲಿಯೂ ತಾನು ಶ್ರೀರಾಮನನ್ನು ಬಯಸಿದೆ ಎಂದು ಹೇಳುವುದಿಲ್ಲ. ಈ ಘಟನೆಯನ್ನು ಮೇಲಿನ ಶ್ಲೋಕದಲ್ಲಿ   ಚುಟುಕಾಗಿ ವಿವರಿಸಲಾಗಿದೆ.  “ಹೆಣ್ಣಿನ ಸುಳ್ಳು ಮಾತನ್ನು ಕೇಳಿದ  ರಾವಣ ಶ್ರೀರಾಮನ ವಿರೋಧ ಕಟ್ಟಿಕೊಂಡು ಸೀತೆಯನ್ನು ಮಾರುವೇಷದಲ್ಲಿ ಬಂದು ಅಪಹರಿಸಿ ಜೀವನದಲ್ಲಿ ದುರಂತವನ್ನು ತಂದುಕೊಂಡ”. ಸೀತೆಯನ್ನು ಅಪಹಾರ ಮಾಡಿರುವುದು ರಾವಣ ತನ್ನ ಜೀವಮಾನದಲ್ಲಿ ಮಾಡಿದ ದೊಡ್ಡ ತಪ್ಪು. ಈ ಮಾತನ್ನು ಮುಂದೆ ಮಂಡೋದರಿ ಹೇಳುವುದನ್ನು ನಾವು ರಾಮಾಯಣದಲ್ಲಿ ಕಾಣುತ್ತೇವೆ. ಮಂಡೋದರಿ ಒಬ್ಬ ಸಂಯಮದ ಆದರ್ಶ ಮಹಿಳೆ. ಆಕೆ ಎಂದೂ ದಾರಿತಪ್ಪಿ ಮಾತನಾಡಿದವಳಲ್ಲ.  ಇಂಥಹ ಮಂಡೋದರಿಗೆ  ಹನುಮಂತ ಲಂಕೆಯನ್ನು ಸುಟ್ಟ ವಿಷಯವನ್ನು ತಿಳಿಸಿದಾಗ ಹೇಳುತ್ತಾಳೆ: “ಲಂಕೆ ಇಂದು ಸುಟ್ಟುಹೋಗಿರುವುದಲ್ಲ. ಸೀತೆಯನ್ನು ರಾವಣ ಅಪಹರಿಸಿದ ದಿನವೇ ಸುಟ್ಟುಹೋಗಿದೆ” ಎಂದು. ಈ ರೀತಿ ಲಂಕೆಗೆ ಕುತ್ತನ್ನು ಸೀತೆಯ ರೂಪದಲ್ಲಿ ರಾವಣನೇ ಹೊತ್ತುತಂದಿದ್ದ.

ಯಸ್ಮಾ ಅದಾದುದಧಿರೂಢಭಯಾಂಗವೇಪೋ ಮಾರ್ಗಂ ಸಪದ್ಯರಿಪುರಂ ಹರವದ್ ದಿಧಕ್ಷೋಃ
ದೂರೇಸುಹೃನ್ಮಥಿತರೋಷಸುಶೋಷದೃಷ್ಟ್ಯಾ ತಾತಪ್ಯಮಾನಮಕರೋರಗನಕ್ರಚಕ್ರಃ ೨೪

ರಾವಣ ಸೀತೆಯನ್ನು ಅಪಹಾರ ಮಾಡಿದ ವಿಷಯ ತಿಳಿದಾಗ ಶ್ರೀರಾಮಚಂದ್ರ ಲಂಕೆಯನ್ನು ಸುಟ್ಟು ನಿರ್ನಾಮ ಮಾಡಿಬಿಡಬೇಕೆಂದು ತೀರ್ಮಾನ ಮಾಡುತ್ತಾನೆ.  ಆತನ ಸಂಕಲ್ಪವನ್ನು ಮೊದಲು ಆಂಜನೇಯ ಲಂಕಾದಹನದ ಮೂಲಕ ನೆರವೇರಿಸುತ್ತಾನೆ. (ಇಲ್ಲಿ ದಿಧಕ್ಷೋಃ ಎನ್ನುವ ಪ್ರಯೋಗ ರಾಮಾಯಣದ ಇಡೀ ಸುಂದರಕಾಂಡವನ್ನು ಸೂಚಿಸುತ್ತದೆ).  ಆನಂತರ ಶ್ರೀರಾಮಚಂದ್ರ ಹೇಗೆ ತ್ರಿಪುರಾಂತಕನಾದ ಶಿವ ತ್ರಿಪುರಾಸುರರ ಮೂರು ಪುರಗಳನ್ನು ಸುಟ್ಟನೋ ಹಾಗೆ ಲಂಕೆಯನ್ನು ಸುಟ್ಟುಬಿಡಬೇಕೆಂದು ತೀರ್ಮಾನ ಮಾಡಿ ಲಂಕಾಮಾರ್ಗವಾಗಿ ಸಮುದ್ರ  ತಟಿಗೆ ಬರುತ್ತಾನೆ. (ಇಂದಿನ ಮದುರೆಯಲ್ಲಿನ ದರ್ಭಶಯನ ಎನ್ನುವ ಸ್ಥಳಕ್ಕೆ ಬಂದು ಮಲಗಿ ರಾಮ ವಿಶ್ರಾಂತಿ ಪಡೆದ ಎನ್ನುತ್ತಾರೆ)  ಈ ರೀತಿ ಪತ್ನಿಯನ್ನು ಕಳೆದುಕೊಂಡು ಲಂಕೆಗೆ ಹೊರಟಿರುವ ರಾಮಚಂದ್ರ ಸಮುದ್ರ ತೀರಕ್ಕೆ ಬಂದು ಕಾದು ನಿಂತರೂ  ಸಮುದ್ರರಾಜ ವರುಣನಿಂದ ಯಾವ ಪ್ರತಿಕ್ರಿಯೆಯೂ ಬರುವುದಿಲ್ಲ. ಇದರಿಂದಾಗಿ ರಾಮನ ಮನಸ್ಸು ಕದಡುತ್ತದೆ ಮತ್ತು ಅದು ಕೋಪದ ಬೆಂಕಿಯ ಕಿಡಿಯಾಗಿ ಆತನ ಕಣ್ಣಿನಿಂದ ಹೊರಬರುತ್ತದೆ. ಆ ಕೊಪಾಗ್ನಿಯಲ್ಲಿ ಸಮುದ್ರದಲ್ಲಿನ ಸಮಸ್ತ ಜೀವಿಗಳು ಬೆಂದು ವಿಲವಿಲ ಒದ್ದಾಡುತ್ತವೆ.  ಆಗ ಸಮುದ್ರರಾಜ ಭಯಭೀತನಾಗಿ ನಡುಗುತ್ತಾ  ಶ್ರೀರಾಮನ ಮುಂದೆ ಬಂದು ನಿಂತು ಕ್ಷೆಮೆ ಬೇಡಿ  ಸೇತುವೆ ಕಟ್ಟಬೇಕು ಎಂದು ನಿವೇದಿಸಿಕೊಳ್ಳುತ್ತಾನೆ. ಈ ರೀತಿ  ಸೇತುವೆ ನಿರ್ಮಾಣವಾಗುತ್ತದೆ.

ವಕ್ಷಃಸ್ಥಲಸ್ಪರ್ಶರುಗ್ಣ  ಮಹೇಂದ್ರವಾಹ ದಂತೈರ್ವಿಳಂಬಿತಕಕುಬ್ಜಯರೂಢಹಾಸಃ
ಸದ್ಯೋSಸುಭಿಃ ಸಹ ವಿನೇಷ್ಯತಿ ದಾರಹರ್ತುರ್ವಿಸ್ಫೂರ್ಜಿತೈರ್ಧನುಷ ಉಚ್ಚರಿತ್ಯೆಃ ಸಸೈನ್ಯಃ ೨೫


ಇಲ್ಲಿ ರಾವಣ ಎಂಥಹ ಪರಾಕ್ರಮಿ ಎನ್ನುವುದನ್ನು ಚತುರ್ಮುಖ ವಿವರಿಸಿರುವುದನ್ನು ಕಾಣುತ್ತೇವೆ. ರಾವಣ ದೇವಲೋಕದ ಮೇಲೆ  ದಾಳಿ ಇಟ್ಟ ಸಮಯದಲ್ಲಿ ಇಂದ್ರ ಐರಾವತದ ಮೇಲೆ ಬಂದು ರಾವಣನೊಂದಿಗೆ ಯುದ್ಧ ಮಾಡುತ್ತಾನೆ. ಇಂದ್ರನ ಆನೆ ರಾವಣನ ವಕ್ಷಸ್ಥಳಕ್ಕೆ ತಿವಿಯುತ್ತದೆ. ಆದರೆ ಈ ತಿವಿತದಿಂದ ಆನೆಯ ದಾಡೆಗೆ ನೋವಾಯಿತೇ ವಿನಃ ರಾವಣನಿಗೆ ಏನೂ ಆಗುವುದಿಲ್ಲ. ಆನೆಯ ತಿವಿತದಿಂದ ಸ್ವಲ್ಪ ವಿಳಂಭವಾದರೂ ಕೂಡಾ ನಗುವಿನ ಅಟ್ಟಹಾಸದೊಂದಿಗೆ ರಾವಣ ಅಷ್ಟದಿಕ್ಕುಗಳನ್ನೂ ಗೆಲ್ಲುತ್ತಾನೆ. ಇಂಥಹ ಪರಾಕ್ರಮಶಾಲಿ ರಾವಣ ತನ್ನ ಹೆಂಡತಿಯನ್ನು ಮರಳಿ ಪಡೆಯುವುದಕ್ಕೆ ಬಂದ ಶ್ರೀರಾಮಚಂದ್ರನ ಬಿಲ್ಲಿನ  ಠೇಂಕಾರಕ್ಕೆ ನಡುಗಿ ಹೋಗುತ್ತಾನೆ. ಕೇವಲ ಬಿಲ್ಲಿನ ಜೇಂಕಾರಕ್ಕೆ ಆತನ ಇಂದ್ರಿಯಗಳು ಉಡುಗಿ ಹೋಗುತ್ತವೆ. ಆತನ ಕೋಟಿ-ಕೋಟಿ ಸೇನೆ ತತ್ತರಿಸಿ ಹೋಗುತ್ತದೆ. ಯುದ್ಧಕ್ಕೂ ಮೊದಲು  “ನನ್ನ ಕಥೆ ಮುಗಿಯಿತು” ಎಂದು ರಾವಣ ಕಂಗಾಲಾಗುತ್ತಾನೆ. “ಇಂಥಹ ಪರಾಕ್ರಮಿ ಶ್ರೀರಾಮಚಂದ್ರನಾಗಿ ಭಗವಂತ ಭೂಮಿಯಲ್ಲಿ ಅವತರಿಸಿದ” ಎಂದಿದ್ದಾನೆ ಚತುರ್ಮುಖ.

Sunday, August 16, 2015

Shrimad BhAgavata in Kannada -Skandha-02-Ch-07(22)

೧೯. ದುಷ್ಟ  ಕ್ಷತ್ರಿಯರನ್ನು ಸಂಹಾರ ಮಾಡಿದ ಪರಶುರಾಮ ರೂಪ

ಕ್ಷತ್ರಂ ಕ್ಷಯಾಯ ವಿಧಿನೋಪಹೃತಂ ಮಹಾತ್ಮಾ ಬ್ರಹ್ಮಧ್ರುಗುಜ್ಝಿತಪಥಂ ನರಕಾರ್ತಿ ಲಿಪ್ಸು
ಉದ್ಧಂತ್ಯಸಾವವನಿಕಂಟಕಮುಗ್ರವೀರ್ಯಸ್ತ್ರಿಃಸಪ್ತಕೃತ್ವ ಉರುಧಾರಪರಶ್ವಧೇನ ೨೨

ಈ ಹಿಂದೆ ಹೇಳಿದಂತೆ ಭಗವಂತ ರಾಜರಾಜೇಶ್ವರ ರೂಪದಲ್ಲಿ ಕ್ಷತ್ರಿಯ ರಾಜರೊಳಗೆ ಕುಳಿತು ಧರ್ಮ ಸ್ಥಾಪನೆ ಮಾಡಿದ. ಆದರೆ ದೇಶವನ್ನು ಆಳುವ ನೆಪದಲ್ಲಿ ದೇಶವನ್ನೇ ದೋಚಿ ಅದರಿಂದ ನಾಶವಾಗಲಿ ಎಂದೇ ವಿಧಿ(ಭಗವಂತ) ಅನೇಕ ಲೋಕ ಕಂಟಕ ಕ್ಷತ್ರಿಯರನ್ನೂ  ಸೃಷ್ಟಿಸಿತ್ತು. ಇಂಥಹ ದುಷ್ಟ ಜೀವರನ್ನು ಸಂಹಾರ ಮಾಡಲೆಂದೇ ಭಗವಂತ ಪರಶುರಾಮನಾಗಿ ಅವತರಿಸಿದ. ನರಕವನ್ನೇ ಬಯಸಿ, ಭಗವಂತನನ್ನು, ಆತನನ್ನು ತಿಳಿಸುವ ವೈದಿಕ ವಿದ್ಯೆಯನ್ನು ಮತ್ತು ವೈದಿಕ ಸಂಪ್ರದಾಯವನ್ನು ಇಂಥಹ ದುಷ್ಟ ಕ್ಷತ್ರಿಯರು ದ್ವೇಶಿಸಿದಾಗ ಭಗವಂತ ಉಗ್ರರೂಪ ತಾಳಿದ.

ಕ್ಷತ್ರಿಯರು ನಾನಾ ವಿಧದ ಆಯುಧಗಳನ್ನು ಉಪಯೋಗಿಸಿ ಯುದ್ಧ ಮಾಡುವುದನ್ನು ನಾವು ತಿಳಿದಿದ್ದೇವೆ. ಆದರೆ ಯಾರೂ ಕೊಡಲಿಯನ್ನು ತಮ್ಮ ಆಯುಧವಾಗಿ ಬಳಸಿರುವುದು ಕಂಡು ಬರುವುದಿಲ್ಲ. ಸಾಮಾನ್ಯವಾಗಿ ಕೊಡಲಿ  ಬಳಕೆ ಮರ ಕಡಿಯಲಿಕ್ಕಾಗಿ. ಋಷಿ-ಮುನಿಗಳು ಯಜ್ಞದ ಸಮಿದೆಗಾಗಿ ಕೊಡಲಿಯನ್ನು ಬಳಸುತ್ತಿದ್ದರು. ಬ್ರಾಹ್ಮಣ ವಂಶದಲ್ಲಿ ಅವತರಿಸಿ ಬಂದ ಪರಶುರಾಮ ಇದೇ ಕೊಡಲಿಯನ್ನು ತನ್ನ ಆಯುಧವನ್ನಾಗಿಸಿಕೊಂಡು ಇಪ್ಪತ್ತೊಂದು ಬಾರಿ ದುಷ್ಟ ಕ್ಷತ್ರಿಯರ ಸಂಹಾರ ಮಾಡಿದ. [ ಪರುಶುರಾಮ ಅವತಾರದ ವಿಸ್ತಾರವಾದ ವಿವರಣೆಯನ್ನು ವ್ಯಾಸರು ಬ್ರಹ್ಮಾಂಡ ಪುರಾಣದಲ್ಲಿ ಅನೇಕ ಅಧ್ಯಾಯಗಳಲ್ಲಿ ನೀಡಿದ್ದಾರೆ ]    

Saturday, August 15, 2015

Shrimad BhAgavata in Kannada -Skandha-02-Ch-07(21)

೧೮. ಅಮೃತಕಲಶ ಹಿಡಿದುಬಂದ ಆಯುರ್ವೇದ ಪ್ರವಿಷ್ಟ ಧನ್ವಂತರಿ ರೂಪ

ಧನ್ವಂತರಿಶ್ಚ ಭಗವಾನ್ ಸ್ವಯಮಾಸ ದೇವೋ ನಾಮ್ನಾ ನೃಣಾಂ ಪುರುರುಜಾಂ ರುಜ ಆಶು ಹಂತಿ
ಯಜ್ಞೇ ಚ ಭಾಗಮಮೃತಾಯುರವಾಪ ಚಾದ್ಧಾ ಆಯುಶ್ಚ ವೇದಮನುಶಾಸ್ತ್ಯವತೀರ್ಯ ಲೋಕೇ ೨೧

ಸಮುದ್ರಮಥನ ಕ್ರಿಯೆಯೊಂದರಲ್ಲೇ ನಾವು ಭಗವಂತನ ಅನೇಕ ರೂಪಗಳನ್ನು ಕಾಣುತ್ತೇವೆ. ಕಡೆಯಲು ಕಡಗೋಲಾದ ಮಂದರ ಪರ್ವತಕ್ಕೆ ಮಥನ ಶಕ್ತಿ ಕೊಟ್ಟು ಭಗವಂತ ಪರ್ವತದಲ್ಲಿ ಸನ್ನಿಹಿತನಾಗಿ ನಿಂತ.  ಪರ್ವತ  ಕಡಲಲ್ಲಿ ಮುಳುಗಿಹೋಗದಂತೆ ಕೂರ್ಮರೂಪಿಯಾಗಿ ಅದನ್ನು ಎತ್ತಿ ಹಿಡಿದ.  ಸಮುದ್ರ ಮಥನ ಮಾಡಿದ ದೇವತೆಗಳ ಒಳಗೆ ಸನ್ನಿಹಿತನಾಗಿ ದೇವತೆಗಳಿಗೆ ಬಲವನ್ನು ನೀಡಿದ್ದಷ್ಟೇ ಅಲ್ಲ, ಸ್ವಯಂ ‘ಅಜಿತ’ ನಾಮಕನಾಗಿ ದೇವತೆಗಳ ಪರ ಮಥನ ಮಾಡಿದ ಭಗವಂತ. ಕೊನೆಗೆ ಅಮೃತವನ್ನು ರಾಕ್ಷಸರು ಅಪಹರಿಸಿದಾಗ ಸ್ವಯಂ ಮೋಹಿನಿ ರೂಪ ಧರಿಸಿ ಅದನ್ನು ದೇವತೆಗಳಿಗೆ ನೀಡಿದ. ಈ ರೀತಿ ನಡೆದ ಸಮುದ್ರ ಮಥನದಲ್ಲಿ ಅಮೃತ ಕಲಶವನ್ನು ಕೈಯಲ್ಲಿ ಹಿಡಿದು  ಬಂದ ಭಗವಂತನ ವಿಶೇಷ ರೂಪವೇ ಧನ್ವಂತರಿ ರೂಪ.
ಇಲ್ಲಿ ಚತುರ್ಮುಖ “‘ಸ್ವಯಂ ಭಗವಂತ’ ಧನ್ವಂತರಿ ರೂಪದಲ್ಲಿ ಅಮೃತಕಲಶ ಹಿಡಿದು ಬಂದ” ಎಂದು ಒತ್ತಿ ಹೇಳಿರುವುದನ್ನು ಕಾಣುತ್ತೇವೆ.  ಈ ರೀತಿ ಹೇಳಲು ಒಂದು ವಿಶೇಷ ಕಾರಣವಿದೆ. ಧನ್ವಂತರಿ ಎನ್ನುವ ಭಗವಂತನ ಎರಡು ರೂಪಗಳಿವೆ. ರೋಗ ಪರಿಹಾರಕ್ಕಾಗಿ ಯಜ್ಞದಲ್ಲಿ ಧನ್ವಂತರಿಗೆ ಪ್ರತ್ಯೇಕ ಆಹುತಿ ಕೊಡುವ ಸಂಪ್ರದಾಯ ನಮಗೆಲ್ಲಾ ತಿಳಿದೇ ಇದೆ. ಇದಕ್ಕೆ ಕಾರಣ ಏನೆಂದರೆ: ಸಾವಿಲ್ಲದ ಅಮೃತವನ್ನು ದೇವತೆಗಳಿಗೆ ನೀಡಿದ್ದಲ್ಲದೇ ಜಗತ್ತಿನ ರೋಗ-ರುಜಿನಗಳಿಗೆ ಮೂಲ ಪರಿಹಾರವನ್ನು ಕೊಟ್ಟವನೂ ಆ ಭಗವಂತ. ಆತ  ಕಾಶಿ ಪಟ್ಟಣದಲ್ಲಿ ಆಯುರ್ವೇದ ಪ್ರವರ್ತಕನಾಗಿದ್ದ ಧನ್ವಂತರಿ ಎನ್ನುವ  ರಾಜನಲ್ಲಿ ವಿಶೇಷವಾಗಿ ಸನ್ನಿಹಿತನಾಗಿದ್ದು ಜಗತ್ತಿಗೆ ಆಯುರ್ವೇದ ವಿದ್ಯೆಯನ್ನು ನೀಡಿದ. ಇದು ಭಗವಂತನ ಆವೇಶಾವತಾರ.  ಆದರೆ ಅಮೃತ ಕಲಶವನ್ನು ಹಿಡಿದು ಬಂದಿರುವ ಧನ್ವಂತರಿ ಭಗವಂತನ ಪೂರ್ಣಾವತಾರ.  

Monday, August 10, 2015

Shrimad BhAgavata in Kannada -Skandha-02-Ch-07(20)

೧೭. ಚಕ್ರವರ್ತಿಗಳೊಳಗೆ ಚಕ್ರವರ್ತಿಯಾಗಿ ನಿಂತ ರಾಜರಾಜೇಶ್ವರ ರೂಪ

ಚಕ್ರಂ ಚ ದಿಕ್ಷ್ವವಿಹತಂ ದಶಸು ಸ್ವತೇಜೋ ಮನ್ವಂತರೇಷು ಮನುವಂಶಧರೋ ಬಿಭರ್ತಿ
ದುಷ್ಟೇಷು ರಾಜಸು ದಮಂ ವಿದಧತ್ ಸ್ವಕೀರ್ತಿಂ ಸತ್ಯೇ ನಿವಿಷ್ಟ ಉಶತೀಂ ಪ್ರಥಯಂಶ್ಚರಿತ್ರೈಃ ೨೦

ಭಗವಂತನ ಇನ್ನೊಂದು ವಿಶಿಷ್ಟ ಅವತಾರದ ವಿವರಣೆಯನ್ನು ನಾವು ಈ ಶ್ಲೋಕದಲ್ಲಿ ಕಾಣುತ್ತೇವೆ. ಇಲ್ಲಿಯೂ ಕೂಡಾ ಚತುರ್ಮುಖ ಈ ರೂಪದ ಹೆಸರನ್ನು ಹೇಳಿಲ್ಲವಾದುದರಿಂದ ಮೇಲ್ನೋಟಕ್ಕೆ ಇದು ಯಾವ ರೂಪ ಎನ್ನುವುದು ತಿಳಿಯುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸುತ್ತಾ  ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಪ್ರಮಾಣ ಸಹಿತ ಇದು ಭಗವಂತನ ರಾಜರಾಜೇಶ್ವರ ರೂಪ ಎಂದು ವಿವರಿಸುವುದನ್ನು ನಾವು ಕಾಣುತ್ತೇವೆ.  ಮನ್ವನ್ತರೇಷು ಭಗವಾನ್ ಚಕ್ರವರ್ತಿಷು ಸಂಸ್ಥಿತಃ ಚತುರ್ಭುಜೋ ಜುಗೋಪೈತದ್ದುಷ್ಟರಾಜನ್ಯನಾಶಕಃ ರಾಜರಾಜೇಶ್ವರೇತ್ಯಾಹುರ್ಮುನಯಶ್ಚಕ್ರವರ್ತಿನಾಮ್ ವೀರ್ಯದಂ ಪರಮಾತ್ಮಾನಂ ಶಂಖಚಕ್ರಗಧಾಧರಮ್   ‘ಇತಿ ಸತ್ಯಸಂಹಿತಾಯಾಮ್’  

ನಾವು ಮನ್ವಂತರ ಪರಂಪರೆಯಲ್ಲಿ  ಇಕ್ಷ್ವಾಕು, ಪ್ರಿಯವ್ರತ, ಉತ್ತಾನಪಾದ ಇತ್ಯಾದಿ  ಅನೇಕ ಚಕ್ರವರ್ತಿಗಳನ್ನು ಕಾಣುತ್ತೇವೆ. ಇವರು ಇಡೀ ಭೂಮಂಡಲದ ನಿಯಂತ್ರಣ ಸಾಧಿಸಿ, ತಡೆಯಿಲ್ಲದ ಆದೇಶ ಹಾಗೂ ಸತ್ಯ-ಧರ್ಮದಿಂದ ದೇಶವನ್ನಾಳಿದರು.  ಇಲ್ಲಿ ಚತುರ್ಮುಖ ಹೇಳುತ್ತಾನೆ: “ಶಂಖ-ಚಕ್ರ-ಗದಾಧಾರಿಯಾದ ಅಭಯಪ್ರದ ಶ್ರೀಹರಿ  ಈ ಎಲ್ಲಾ ರಾಜರುಗಳ ತೇಜಸ್ಸಿಗೆ ಕಾರಣನಾಗಿ ಅವರೊಳಗೆ ರಾಜರಾಜೇಶ್ವರ ರೂಪದಲ್ಲಿ ನಿಂತ” ಎಂದು. ಈ ರೀತಿ ನೆಲೆನಿಂತ ಭಗವಂತ ದುಷ್ಟ ಸಮಾಜಕಂಟಕರನ್ನು ಧಮನ  ಮಾಡಿ, ನ್ಯಾಯ-ನೀತಿ-ಧರ್ಮ ಸ್ಥಾಪನೆ ಮಾಡಿದ. ಹೀಗೆ ಚಕ್ರವರ್ತಿಗಳ ಒಳಗಿದ್ದು ಎಲ್ಲರೂ ಬಯಸುವ ತನ್ನ ಅನಂತ ಮಹಿಮೆಯನ್ನು ತನ್ನ ರಾಜರಾಜೇಶ್ವರ ರೂಪದಿಂದ ತೋರಿದ ಭಗವಂತ.  

Friday, August 7, 2015

Shrimad BhAgavata in Kannada -Skandha-02-Ch-07(19)

೧೬. ನಾರದರಿಗೆ ವೈಷ್ಣವ ಯೋಗವನ್ನು ಉಪದೇಶಿಸಿದ ಐತರೇಯ ರೂಪ

ತುಭ್ಯಂ ಚ ನಾರದ ಭೃಶಂ ಭಗವಾನ್ ವಿವೃದ್ಧಭಾವೇನ ಸಾಧು ಪರಿತುಷ್ಟ ಉವಾಚ ಯೋಗಮ್
ಜ್ಞಾನಂ ಚ ಭಾಗವತಮಾತ್ಮಸುತತ್ವದೀಪಂ ಯದ್ ವಾಸುದೇವಶರಣಾ ವಿದುರಂಜಸೈವ ೧೯

ಭಗವಂತನ ಅವತಾರಗಳನ್ನು ನಾರದರಿಗೆ ವಿವರಿಸುತ್ತಿರುವ ಚತುರ್ಮುಖ ಹೇಳುತ್ತಾನೆ: “ಇದು ವಿಶೇಷವಾಗಿ ನಾರದರಿಗೆ ಉಪದೇಶ ನೀಡಲು ಭಗವಂತ ತಳೆದ ಅವತಾರ” ಎಂದು.  ಇಲ್ಲಿ ಚತುರ್ಮುಖ ಅವತಾರದ ಹೆಸರನ್ನು ಹೇಳಿಲ್ಲವಾದುದರಿಂದ ಇದು ಯಾವ ಅವತಾರ ಎನ್ನುವ ಬಗ್ಗೆ ವ್ಯಾಖ್ಯಾನಕಾರರಲ್ಲಿ ಅನೇಕ ಗೊಂದಲವಿದೆ. ಕೆಲವರು ಈ ಅವತಾರವನ್ನು ‘ಹಂಸ’ ನಾಮಕ ಅವತಾರ ಎಂದೂ ಕರೆದರು. ಆದರೆ ಭಗವಂತನ ‘ಹಂಸ’ ರೂಪ ಕೇವಲ ನಾರದರಿಗೆ  ಉಪದೇಶ ಕೊಟ್ಟ ರೂಪವಲ್ಲವಾದ್ದರಿಂದ ಅದು ಇಲ್ಲಿ ಸರಿ ಹೊಂದಲಿಲ್ಲ. ಈ ಗೊಂದಲವನ್ನು ನಿಶ್ಚಿತವಾಗಿ ಪ್ರಮಾಣ ಸಹಿತ ನಿವಾರಿಸಿದವರು ಆಚಾರ್ಯ ಮಧ್ವರು. ಐತರೇಯೋ ಹರಿಃ ಪ್ರಾಹ ನಾರದಾಯ ಸ್ವಕಾಂ ತನುಂ  ಯತ್ ಪ್ರಾಪುರ್ವೈಷ್ಣವಾ ನಾನ್ಯೇ ಯದೃತೇ ನ ಸುಖಂ ಪರಂ  ಇತಿ ಬ್ರಾಹ್ಮೇ : ಇದು ಭಗವಂತನ ಐತರೇಯ--ಮಹಿದಾಸ ರೂಪ. ಈ ರೂಪದಲ್ಲಿ ಹರಿ ನಾರದರಿಗೆ ತನ್ನ ಸ್ವರೂಪವನ್ನು(ವೈಷ್ಣವ ಯೋಗವನ್ನು) ಉಪದೇಶಿಸಿದ ಎಂದು ಸ್ಪಷ್ಟವಾಗಿ ಬ್ರಹ್ಮಪುರಾಣದಲ್ಲಿ ಹೇಳಿದ್ದಾರೆ. [ಐತರೇಯ-ಮಹಿದಾಸನ ಕುರಿತಾಗಿ ಪುರಾಣದಲ್ಲಿ ಒಂದು ರೋಚಕವಾದ ಕಥೆ ಇದೆ. ಆ ಕಥೆಯನ್ನು  ನಾವು ಈಗಾಗಲೇ ಮೊದಲನೇ ಸ್ಕಂಧದಲ್ಲಿ(೧.೩.೮) ನೋಡಿದ್ದೇವೆ].
ಋಕ್ ಸಂಹಿತೆಯ ಪ್ರಾಚೀನ ಹೆಸರು ಐತರೇಯ ಸಂಹಿತ. ಭಗವಂತ ತನ್ನ  ಐತರೇಯ ರೂಪದಲ್ಲಿ ಸಮಗ್ರ ವೇದದ ಆವಿಷ್ಕಾರ ಮಾಡಿದ ಮತ್ತು ಬ್ರಹ್ಮಾದಿ ಸಕಲ ದೇವತೆಗಳೂ ಕುಳಿತು ಅದನ್ನು ಆಲಿಸಿದರು. ನಾರದರಿಗೆ ಭಗವಂತ ತನ್ನ ಸ್ವರೂಪದ ಉಪದೇಶ ಮಾಡಿರುವುದು ಐತರೇಯ ರೂಪದಲ್ಲಿ ನಡೆದ ಒಂದು ವಿಶೇಷ ಕಾರ್ಯ.  ಇದನ್ನೇ ಮೇಲಿನ ಶ್ಲೋಕದಲ್ಲಿ ಚತುರ್ಮುಖ ವಿವರಿಸಿದ್ದಾನೆ.
ಭಗವಂತ ಮರುಳಾಗುವುದು ಭಕ್ತಿಗೆ. ಇದನ್ನು  “ಅಹಂ ಭಕ್ತ ಪರಾಧೀನಃ” ಎಂದು ಭಗವಂತನೇ ಹೇಳಿದ್ದಾನೆ. ನಾರದರಲ್ಲಿ ಬೆಳೆದು ನಿಂತಿದ್ದ ಅಸಾಧಾರಣ ಭಕ್ತಿಗೆ ಭಗವಂತ ಸಂತುಷ್ಟನಾಗಿ, ಅವರಿಗೆ ವೈಷ್ಣವ ಯೋಗೋಪದೇಶವನ್ನು ನೀಡಿದ.  ಇದು ಭಗವಂತನಿಗೆ ಸಂಬಂಧಿಸಿದ, ಭಗವದ್ ವಿಷಯಿಕವಾದ ಜ್ಞಾನವಾಗಿತ್ತು. ಭಗವಂತನನ್ನು ಹೇಗೆ ತಿಳಿದುಕೊಳ್ಳಬೇಕು, ಹೇಗೆ ಉಪಾಸನೆ ಮಾಡಬೇಕು ಎನ್ನುವುದರ ಪೂರ್ಣ ಅರಿವು; ಎಲ್ಲವನ್ನೂ ನಿಯಂತ್ರಿಸುವ ಸರ್ವತಂತ್ರ ಸ್ವತಂತ್ರ ಶಕ್ತಿ ಭಗವಂತ ಮತ್ತು ಸಮಸ್ತ ಜೀವಜಾತಗಳೂ ಆತನ ಅಧೀನ ಎನ್ನುವ ಅಪೂರ್ವ ಪರಮಾತ್ಮ ತತ್ತ್ವವನ್ನು ಭಗವಂತ ಐತರೇಯ ರೂಪದಲ್ಲಿ ನಾರದರಿಗೆ ಉಪದೇಶಿಸಿದ.  ಈ ಜ್ಞಾನ ಮತ್ತೆ ನಾರದರಿಂದ ಭೂಮಿಗೆ ಹರಿದು ಬಂತು. ಇಲ್ಲಿ ಚತುರ್ಮುಖ ಹೇಳುತ್ತಾನೆ: “ವಾಸುದೇವನಲ್ಲಿ ಶರಣಾದವರಿಗೆ ಮಾತ್ರ ಈ ವಿಷಯ ಅರ್ಥವಾಗುತ್ತದೆ” ಎಂದು. ಯಾವುದೇ ವಿಷಯ ನಮಗೆ ಅರ್ಥವಾಗಬೇಕಾದರೆ ಅಲ್ಲಿ ಭಗವಂತನ ಅನುಗ್ರಹ ಅತ್ಯಗತ್ಯ. ಅದನ್ನು ಬಿಟ್ಟು ತನ್ನ ಪಾಂಡಿತ್ಯದಿಂದಲೇ ಎಲ್ಲವನ್ನೂ ತಿಳಿದುಕೊಳ್ಳುತ್ತೇನೆಂದು ಅಹಂಕಾರ ತೋರಿದರೆ ಏನೂ ಅರ್ಥವಾಗುವುದಿಲ್ಲ. ಅಷ್ಟೇ ಅಲ್ಲ, ಭಗವಂತನ ಅನುಗ್ರಹ ಇಲ್ಲದ ವಿದ್ಯೆ  ನಮ್ಮನ್ನು ಹಣದಾಸೆಗೆ ತಳ್ಳಿ ಭಗವಂತನಿಂದ ದೂರ ಮಾಡುವ ಸಾಧ್ಯತೆಯೂ ಇದೆ. ಹೀಗಾಗಿ ನಮಗೆ ಅಧ್ಯಾತ್ಮ ವಿದ್ಯೆ ಅರ್ಥವಾಗಬೇಕಾದರೆ ಭಗವಂತನ ಕೃಪಾ ದೃಷ್ಟಿ ಅತ್ಯಗತ್ಯ. ಭಗವಂತನಲ್ಲಿ ಶರಣಾದವರಿಗೆ ಭಗವಂತ ಒಲಿಯುತ್ತಾನೆ ಮತ್ತು ಭಗವಂತನ ಒಲುಮೆಯಿಂದ ಶಾಸ್ತ್ರ ಅರ್ಥವಾಗುತ್ತದೆ.

ಇಲ್ಲಿ ಬಳಕೆಯಾದ ವಾಸುದೇವ ಎನ್ನುವ ಪದಕ್ಕೆ ಇನ್ನೂ ಒಂದು ವಿಶೇಷವಾದ ಅರ್ಥವಿದೆ. ವಸು+ದೇವ= ವಸುದೇವ. ವಸು ಎಂದರೆ ಸಂಪತ್ತು, ದೇವ ಎಂದರೆ ಬೆಳಗಿಸುವವನು. ಭಗವಂತ ಎನ್ನುವ ಸಂಪತ್ತನ್ನು ಬೆಳಗಿಸಿ ತೋರಿಸುವ ನಿರ್ಮಲವಾದ ಮನಸ್ಸಿಗೆ ವಸುದೇವ ಎಂದು ಹೆಸರು. ಇಂಥಹ ಶುದ್ಧ ಮನಸ್ಸಿನಲ್ಲಿ ಕಾಣಿಸಿಕೊಳ್ಳುವ ಭಗವಂತ ವಾಸುದೇವ. ಒಟ್ಟಿನಲ್ಲಿ ಹೇಳಬೇಕೆಂದರೆ: ಶುದ್ಧ ಮತ್ತು ಸಾತ್ತ್ವಿಕ ಮನಸ್ಸಿನಿಂದ ಭಗವಂತನಲ್ಲಿ ಶರಣಾದಾಗ ಭಗವಂತನ ಅನುಗ್ರಹ ನಮ್ಮ ಮೇಲಾಗುತ್ತದೆ. ಇಂಥಹ ಶುದ್ಧ ಮನಸ್ಸಿನ ಪರಮ ಭಕ್ತನಾಗಿದ್ದ ನಾರದರಿಗೆ ಅನುಗ್ರಹಿಸಿದ ಭಗವಂತ ಐತರೇಯ ರೂಪದಲ್ಲಿ ಅವತರಿಸಿ ಅವರಿಗೆ ವೈಷ್ಣವ ಯೋಗವನ್ನು ಉಪದೇಶಿಸಿದ.  

Monday, August 3, 2015

Shrimad BhAgavata in Kannada -Skandha-02-Ch-07(18)

೧೫. ತ್ರಿವಿಕ್ರಮನಾಗಿ ಬಲಿ ಚಕ್ರವರ್ತಿಯನ್ನು ಉದ್ದರಿಸಿದ ವಾಮನ ಅವತಾರ

    ಜ್ಯಾಯಾನ್ ಗುಣೈರವರಜೋSಪ್ಯದಿತೇಃ ಸುತಾನಾಂ ಲೋಕಾನ್ ವಿಚಕ್ರಮ ಇಮಾನ್ ಯದಥೋSಧಿಯಜ್ಞಃ
    ಕ್ಷ್ಮಾಂ ವಾಮನೇನ ಜಗೃಹೇ ತ್ರಿಪದಚ್ಛಲೇನ ಯಾಂಚಾಮೃತೇ ಪಥಿ ಚರನ್ ಪ್ರಭುಭಿರ್ನ ಚಾಲ್ಯಃ ೧೭

    ನಾರ್ಥೋ ಬಲೇರಯಮುರುಕ್ರಮಪಾದಶೌಚ ಮಂಭಃ ಶಿವಂ ಧೃತವತೋ ವಿಬುಧಾಧಿಪತ್ಯಮ್
    ಯೋ ವೈ ಪ್ರತಿಶ್ರುತಮೃತೇSಪಿ ಚ ಶೀರ್ಷಮಾಣ ಮತ್ಮನ್ಯಮಂಗ ಮನಸಾ ಹರಯೇSಭಿಮೇನೇ ೧೮

ಅದಿತಿ-ಕಾಶ್ಯಪರ ದಾಂಪತ್ಯ ಫಲದಲ್ಲಿ ಹುಟ್ಟಿದ ಹನ್ನೆರಡು ಮಂದಿ ಪುತ್ರರಲ್ಲಿ ಕೊನೇಯ ಪುತ್ರ ವಾಮನ. [ಈ ಹನ್ನೆರಡು ಮಂದಿಯನ್ನು ದ್ವಾದಶಾದಿತ್ಯರೆನ್ನುತ್ತಾರೆ. ಕೆಲವರು ದ್ವಾದಶಾದಿತ್ಯರನ್ನು ಹನ್ನೆರಡು ಮಂದಿ ಸೂರ್ಯರು ಎಂದು ಹೇಳುವುದುಂಟು. ಆದರೆ ಅದು ಸರಿಯಲ್ಲ.  ಸೂರ್ಯ ಒಬ್ಬನೇ ಮತ್ತು ಆತ ಈ ಹನ್ನೆರಡು ಮಂದಿಯಲ್ಲಿ ಒಬ್ಬ]. ಇಂದ್ರನಿಗೂ ತಮ್ಮನಾಗಿ ಹುಟ್ಟಿದ ವಾಮನನಿಗೆ ಉಪೇಂದ್ರ ಎನ್ನುವ ಹೆಸರಿದೆ. ಅಜಗನ್ಯೋ ಜಗನ್ಯಜಃ ಎನ್ನುವಂತೆ ಆತ ಕೊನೆಯಲ್ಲಿ ಹುಟ್ಟಿದ ಇಂದ್ರನ ತಮ್ಮನೂ ಹೌದು(ಉಪ/Sub),  ಎಲ್ಲರಿಗಿಂತ ಎತ್ತರದಲ್ಲಿರುವವನೂ(ಉಪರಿ) ಹೌದು. ಆತ ಹುಟ್ಟಿನಲ್ಲಿ ಕೊನೆಯವ ಆದರೆ ಗುಣದಲ್ಲಿ ಮೊದಲಿಗ. ಬ್ರಹ್ಮಾಂಡದಲ್ಲಿ ಮೂರು ಲೋಕಗಳನ್ನೂ ತುಂಬಿ ನಿಂತ ವಾಮನ ನಮ್ಮ ಪಿಂಡಾಂಡದಲ್ಲೂ ತುಂಬಿದ್ದಾನೆ. ದೇಹದ ಧಾರಕ ಶಕ್ತಿಯಾಗಿ ಪಾದದಲ್ಲಿ, ದೇಹದ ಮುಖ್ಯಶಕ್ತಿಯಾಗಿ ಹೃದಯ ಮಧ್ಯೆ ಮತ್ತು ಸೌಂದರ್ಯ ಸಂಕೇತವಾಗಿ ಕಣ್ಣಿನಲ್ಲಿ  ವಾಮನ ತುಂಬಿದ್ದಾನೆ.
ಬೀದಿಯಲ್ಲಿ ನಡೆದುಬಂದ ವಾಮನ ಬೇರೆ ಯಾರಲ್ಲೂ ಭಿಕ್ಷೆ ಕೇಳದೆ, ನೇರವಾಗಿ ಬಲಿಯ ಬಳಿ ಬಂದು, ಅಗ್ನಿ ಕಾರ್ಯಕ್ಕೆ ಮೂರು ಹೆಜ್ಜೆ ಸ್ಥಳ ಬೇಕು ಎನ್ನುವ ನೆಪದಲ್ಲಿ ಮೂರು ಲೋಕದ ಒಡೆತನವನ್ನು ಬಲಿಯಿಂದ ಕಿತ್ತುಕೊಂಡ!  ಈ ರೀತಿ ಮಾಡಲು ಒಂದು ಕಾರಣ ಪ್ರಹ್ಲಾದ.  ಪ್ರಹ್ಲಾದ ಭಗವಂತನಲ್ಲಿ “ನನ್ನ ವಂಶದ ಮೇಲೆ ನಿನ್ನ ಅನುಗ್ರಹ ಇರಲಿ” ಎಂದು ಕೇಳಿಕೊಂಡಿದ್ದರಿಂದ, ಬಲಿ ತಪ್ಪು ಮಾಡಿದ್ದರೂ ಕೂಡಾ ಆತನನ್ನು ನಿಗ್ರಹಿಸಿ ತುಳಿಯಲಿಲ್ಲ. ಬದಲಿಗೆ ಆತನಲ್ಲಿ ಭಿಕ್ಷೆ ಬೇಡುವ ನಪದಿಂದ ಆತನ ತಲೆಯಮೇಲೆ ತನ್ನ ಪಾದವನ್ನಿತ್ತು ಅನುಗ್ರಹಿಸಿದ. ಇದು ಭಗವಂತನ ಭಕ್ತೊದ್ಧಾರಕ ಪರಿ. ಈ ರೀತಿ ಇಂದ್ರ ಪದವಿಯನ್ನು ಆಕ್ರಮಿಸಿ ಕುಳಿತಿದ್ದ ಬಲಿಯನ್ನು ಕೆಳಗಿಳಿಸಿ, ಇಂದ್ರನಿಗೆ ಪದವಿಯನ್ನು ಮರಳಿ ನೀಡಿದ ಭಗವಂತ, ಬಲಿಗೆ ಮುಂದಿನ ಮನ್ವಂತರದಲ್ಲಿ ಇಂದ್ರ ಪದವಿಯನ್ನು ಅನುಗ್ರಹಿಸಿದ. ಇಲ್ಲಿ ನಮಗೆ ತಿಳಿಯುವುದೇನೆಂದರೆ ಬಲಿಗೆ ಇಂದ್ರ ಪದವಿಯೇರುವ ಅರ್ಹತೆ ಇದಿದ್ದರೂ ಕೂಡಾ, ಸರದಿಗೂ ಮುನ್ನ ಪದವಿಯನ್ನು ಅಪಹರಿಸಿದ್ದು ಆತ ಮಾಡಿದ ತಪ್ಪಾಗಿತ್ತು.
“ಭಗವಂತ ಬಲಿಗೆ ಇಂದ್ರ ಪದವಿ ನೀಡಿರುವುದು ದೊಡ್ಡ ಸಂಗತಿ ಅಲ್ಲ” ಎನ್ನುತ್ತಾನೆ ಚತುರ್ಮುಖ. ಬ್ರಹ್ಮಚಾರಿ ರೂಪದಲ್ಲಿ ಭಿಕ್ಷೆಗೆ ಬಂದ ಭಗವಂತನ ಪಾದ ತೊಳೆದು ಆ ಪಾದೋದಕವನ್ನು ಶಿರಸ್ಸಿನಲ್ಲಿ ಹೊತ್ತವನಿಗೆ ಇಂದ್ರ ಪದವಿ ಯಾವ ಗಿಡದ ತಪ್ಪಲು? ಆತ ಮೂರು ಹೆಜ್ಜೆ ಭೂಮಿಯನ್ನು ದಾನ ಕೊಡುತ್ತೇನೆ ಎಂದಿದ್ದನೇ ಹೊರತು,  ತನ್ನ ತಲೆಯನ್ನು ಕೊಡುತ್ತೇನೆ ಎಂದು ಪ್ರತಿಜ್ಞೆ ಮಾಡಿರಲಿಲ್ಲ. ಆದರೆ ಭಗವಂತನ ಪಾದವನ್ನಿಡಲು ತನ್ನ ತಲೆಯನ್ನೇ ಕೊಟ್ಟ ಬಲಿ. ಮನಃಪೂರ್ವಕವಾಗಿ ಸಂತೋಷದಿಂದ ಭಗವಂತನಿಗೆ ತನ್ನನ್ನು ತಾನು ಅರ್ಪಿಸಿಕೊಂಡ. ಇದು ಭಕ್ತಿಯ ಕೊನೇಯ ಮಜಲಾದ ಆತ್ಮನಿವೇದನ. ಈ ರೀತಿ ತನ್ನಲ್ಲಿ ಭಗವಂತನನ್ನು ಕಂಡು ತನ್ನನ್ನು ಭಗವಂತನಿಗೆ ಅರ್ಪಿಸಿಕೊಂಡ ಬಲಿಗೆ ಇಂದ್ರ ಪದವಿ ದೊಡ್ಡ ಉಡುಗೊರೆ ಅಲ್ಲ. ಭಗವಂತ ಬಲಿಯ ಭಕ್ತಿಗೆ ಒಲಿದ ಮತ್ತು ಬಲಿಗೆ ಇದರಿಂದಾಗಿ ಭಗವಂತನ ಲೋಕ ಪ್ರಾಪ್ತಿಯಾಗುವಂತಾಯಿತು. ಮೇಲ್ನೋಟಕ್ಕೆ ಭಗವಂತ ಇಂದ್ರ ಪದವಿಯನ್ನು ಕಿತ್ತುಕೊಂಡಂತೆ ಕಂಡರೂ ಕೂಡಾ, ಭಗವಂತ ಬಲಿಗೆ  ಎಲ್ಲವನ್ನೂ ಕೊಟ್ಟು ಉದ್ಧಾರ ಮಾಡುವುದನ್ನು ನಾವು ಕಾಣುತ್ತೇವೆ. ಭಗವಂತ ಕಷ್ಟ ಕೊಡುವುದರಲ್ಲೂ ಉದ್ಧಾರದ ಹೆಜ್ಜೆ ಇದೆ. ಹೀಗಾಗಿ ಭಗವಂತನ ಪ್ರತಿಯೊಂದು ಹೆಜ್ಜೆಯಲ್ಲೂ ನಾವು ಉದ್ಧಾರದ ಮಜಲನ್ನು ನೋಡಬೇಕೇ ಹೊರತು, ಭಗವಂತ ನನಗೇಕೆ ಕಷ್ಟ ಕೊಟ್ಟ ಎಂದು ಯೋಚಿಸಬಾರದು. ಕಷ್ಟದಲ್ಲೂ  ಉದ್ಧಾರದ ಮೆಟ್ಟಿಲಿದೆ ಎನ್ನುವ ಸತ್ಯವನ್ನು ತಿಳಿದು ನಾವು ಮುನ್ನೆಡೆಯಬೇಕು.

ಬಲಿ ಚಕ್ರವರ್ತಿಯ ಕಥೆಯನ್ನು ನಾವು ಸ್ವಲ್ಪ ಆಳವಾಗಿ ವಿಶ್ಲೇಷಿಸಿದರೆ ಇದರ ಹಿಂದಿರುವ ಆಧ್ಯಾತ್ಮಿಕ ಗುಹ್ಯ  ತಿಳಿಯುತ್ತದೆ. ಸಂಸಾರ ಸಾಗರದಲ್ಲಿ ಮುಳುಗಿರುವ ನಾವೆಲ್ಲರೂ ಒಂದು ರೀತಿಯಲ್ಲಿ ಬಲಿಗಳು. ಭಗವಂತನ ಸಾಕ್ಷಾತ್ಕಾರವಾಗಲು ನಾವೆಲ್ಲರೂ ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಬಲಿಷ್ಟರಾಗಬೇಕು. ಉಪಾಸನೆಯಲ್ಲಿ ಪ್ರಮುಖವಾಗಿ ಮೂರು ಹೆಜ್ಜೆಗಳಿವೆ. ಮೊದಲನೆಯದು ಭಗವಂತನ ಪುಟ್ಟ (ವಾಮನ) ಮೂರ್ತಿಯನ್ನು ದೇವರು ಎಂದು ಆರಾಧಿಸುವುದು; ಎರಡನೆಯದು ಉಪಾಸನೆ ಮಾಡುತ್ತಾ-ಮಾಡುತ್ತಾ ಭಗವಂತ ಕೇವಲ ಮೂರ್ತಿಯಲ್ಲಿ ಅಲ್ಲದೇ, ಇಡೀ ಲೋಕದಲ್ಲಿ ವ್ಯಾಪಿಸಿರುವ ಶಕ್ತಿ ಎಂದು ತಿಳಿಯುವುದು. ಪ್ರಮುಖವಾದ ಮೂರನೇ ಹೆಜ್ಜೆ- ಭಗವಂತ ಸರ್ವಾಂತರ್ಯಾಮಿ, ಆತ ನನ್ನೊಳಗೂ ತುಂಬಿದ್ದಾನೆ ಎಂದು ತಿಳಿದು, ಆ ಪರಶಕ್ತಿಗೆ ತಲೆ ಬಾಗುವುದು. ಆಗ ನಮಗೆ ನಿಜವಾದ ಭಗವಂತನ ಸಾಕ್ಷಾತ್ಕಾರವಾಗುತ್ತದೆ ಮತ್ತು  ಭಗವಂತ ನಮ್ಮನ್ನು ಉದ್ಧರಿಸುತ್ತಾನೆ. ಈ ಮೇಲಿನ ಮೂರು ವಿಕ್ರಮಗಳಿಂದ ನಮ್ಮನ್ನು ಉದ್ಧರಿಸುವವನು ತ್ರಿವಿಕ್ರಮನಾದ ವಾಮನ ರೂಪಿ ಭಗವಂತ.