ತೃತೀಯೋSಧ್ಯಾಯಃ
ಉದ್ಧವ ವಿದುರ ಸಂವಾದ-ಶ್ರೀಕೃಷ್ಣನ ಅವತಾರ ಲೀಲೆಗಳು
ಉದ್ಧವ ಉವಾಚ
ಸಮಾಹುತಾ[1] ಭೀಷ್ಮಕಕನ್ಯಯಾ ಯೇ ಶ್ರಿಯಃ
ಸವರ್ಣೇನ ಜಿಹೀರ್ಷಯೈಷಾಮ್[2] ।
ಗಾನ್ಧರ್ವವೃತ್ತ್ಯಾ ಮಿಷತಾಂ ಸ್ವಭಾಗಂ ಜಹ್ರೇ ಪದಂ ಮೂರ್ಧ್ನಿ
ದಧತ್ ಸುಪರ್ಣಃ ॥೦೩॥
ವಿದುರನಿಗೆ ಶ್ರೀಕೃಷ್ಣನ ಅವತಾರದ ಲೀಲೆಗಳನ್ನು ವಿವರಿಸುತ್ತಿರುವ ಉದ್ಧವ ಇಲ್ಲಿ ರುಗ್ಮಿಣಿ
ಸ್ವಯಂವರದ ಕುರಿತು ಹೇಳುತ್ತಾನೆ. ಭೀಷ್ಮಕ ರಾಜನ ಮಗಳು ರುಗ್ಮಿಣಿ [ರುಕ್ಮಿಣಿ ಎನ್ನುವುದು
ಅಪಶಬ್ದ. ಸರಿಯಾದ ಶಬ್ದ ರುಗ್ಮಿಣಿ*]. ರುಗ್ಮಿಣಿಯನ್ನು ‘ಭ್ಯಷ್ಮೀ’ ಎಂದೂ ಕರೆಯುತ್ತಾರೆ. ಭೀಷ್ಮಕರಾಜ ತನ್ನ ಮಗಳ ಸ್ವಯಂವರ ಏರ್ಪಡಿಸಿ,
ಅದರ ನಿಮಿತ್ತ ಎಲ್ಲಾ ಕ್ಷತ್ರಿಯರಿಗೂ ಆಹ್ವಾನವನ್ನು ಕಳುಹಿಸಿದ್ದ. ಈ ಸಂದರ್ಭದಲ್ಲಿ ರುಗ್ಮಿಣಿಯ
ಅಣ್ಣ ರುಗ್ಮ ಜರಾಸಂಧನ ನೇತ್ರತ್ವದಲ್ಲಿ ರುಗ್ಮಿಣಿಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ
ಶಿಶುಪಾಲನಿಗೆ ಮದುವೆ ಮಾಡಿಸುವ ಪಿತೂರಿ ಮಾಡಿದ್ದ. ಈ ಕಾರಣದಿಂದ ರುಗ್ಮಿಣಿ ಪ್ರೀತಿಸುತ್ತಿದ್ದ
ಶ್ರೀಕೃಷ್ಣನನ್ನು ಅವರು ಸ್ವಯಂವರಕ್ಕೆ ಆಹ್ವಾನ ಮಾಡಿರಲಿಲ್ಲ. ಅಷ್ಟೇ ಅಲ್ಲ, ಒಂದು ವೇಳೆ
ಆಹ್ವಾನವಿಲ್ಲದೇ ಶ್ರೀಕೃಷ್ಣ ಬಂದರೂ ಕೂಡಾ, ಆತನಿಗೆ ಅಲ್ಲಿ ಯಾವುದೇ ಆಸನವಿರದಂತೆ ವ್ಯವಸ್ಥೆ
ಮಾಡಲಾಗಿತ್ತು. ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಹೇಳಿದಂತೆ: ಭೀಷ್ಮಕಕನ್ಯಾಯಾ
ಅರ್ಥೇ[3]
ಸವರ್ಣಮಾತ್ರಯೋಗ್ಯತಯಾ[4]
ಆಹೂತಾಃ | ಏಷಾಂ ಶ್ರಿಯೋ ಜಿಹೀರ್ಷಯಾSSಹ್ವಾನಬುದ್ಧಿರ್ಭಗವತಾ ಕೃತಾ | ಅಲ್ಲಿ ಸೇರಲಿದ್ದವರು ಕೇವಲ ಕ್ಷತ್ರಿಯರಾಗಿದ್ದುದರಿಂದ ಆಹ್ವಾನಿತರಾಗಿದ್ದರೇ ಹೊರತು, ರುಗ್ಮಿಣಿಯನ್ನು ವರಿಸಲು
ಯೋಗ್ಯರು ಎಂದಲ್ಲ. ಅಂತಹ ಕ್ಷತ್ರಿಯರ ಅಹಂಕಾರವನ್ನು ಮುರಿಯುವ ಇಚ್ಛೆಯಿಂದ ಅವರನ್ನು ಆಹ್ವಾನಿಸಲು
ಭೀಷ್ಮಕನಿಗೆ ಭಗವಂತನೇ ಪ್ರೇರಣೆ ನೀಡಿದ್ದ.
ತನ್ನ ಇಚ್ಛೆಗೆ ವಿರುದ್ಧವಾಗಿ ತನ್ನ ಮದುವೆಯ ತಯಾರಿ ನಡೆದಿರುವುದು ರುಗ್ಮಿಣಿಗೆ
ಗೊತ್ತಿತ್ತು. ಆಕೆ ತಾನು ಪ್ರೀತಿಸಿದ ಶ್ರೀಕೃಷ್ಣನಿಗೆ ಪತ್ರ ಬರೆದು: “ನಾನು ನಿನ್ನನ್ನು ಬಯಸಿದವಳು. ಆದರೆ ನನ್ನನ್ನು ಶಿಶುಪಾಲನಿಗೆ
ಕೊಟ್ಟು ಮದುವೆ ಮಾಡಿಸುವ ತಯಾರಿ ನಡೆಸಲಾಗಿದೆ. ನೀನು ಬಂದು ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಬೇಕು.
ನೀನು ಬರಲಿಲ್ಲ ಎಂದರೆ ನಾನು ದೇಹತ್ಯಾಗ ಮಾಡುತ್ತೇನೆ ಹೊರತು, ಆ ನರಿಯನ್ನು(ಶಿಶುಪಾಲನನ್ನು) ಮದುವೆಯಾಗಲಾರೆ” ಎಂದು
ತಿಳಿಸಿದ್ದಳು.
ಸ್ವಯಂವರದ ವ್ಯವಸ್ಥೆ, ಅದರ ಹಿಂದಿನ ಪಿತೂರಿಯನ್ನು ತಿಳಿದಿದ್ದ ಶ್ರೀಕೃಷ್ಣ, ಸ್ವಯಂವರ
ಮಂಟಪಕ್ಕೆ ಬರಲಿಲ್ಲ. ಮದುವೆಗೆ ಮೊದಲು ಕನ್ಯೆ ದೇವಸ್ಥಾನಕ್ಕೆ ಬರುವ ಕಾರ್ಯಕ್ರಮವಿದ್ದು, ಆ
ಸಮಯದಲ್ಲಿ ಶ್ರೀಕೃಷ್ಣ ಉದ್ಯಾನವನದಲ್ಲಿ ರುಗ್ಮಿಣಿಯನ್ನು ಗಾಂಧರ್ವ ರೀತಿಯಲ್ಲಿ ಮದುವೆಯಾಗಿ,
ಆಕೆಯನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು
ಕರೆದುಕೊಂಡು ಹೋಗುತ್ತಾನೆ. ಈ ವಿಷಯ ತಡವಾಗಿ ಸ್ವಯಂವರ ಮಂಟಪದಲ್ಲಿ ಸೇರಿದ್ದ ಕ್ಷತ್ರಿಯರಿಗೆ
ತಿಳಿಯುತ್ತದೆ. ಅವರು ಶ್ರೀಕೃಷ್ಣನ ಬೆನ್ನು ಹತ್ತುತ್ತಾರೆ. ಕೃಷ್ಣ ಎಲ್ಲರನ್ನೂ
ನಿರ್ದಾಕ್ಷಿಣ್ಯವಾಗಿ ಸೋಲಿಸಿ, ಅವರ ತಲೆಯ ಮೇಲೆ ಕಾಲಿಟ್ಟು ತನ್ನ ಪತ್ನಿಯಾದ ರುಗ್ಮಿಣಿಯನ್ನು
ಕರೆದುಕೊಂಡು ಹೋಗುತ್ತಾನೆ.
ಈ ಶ್ಲೋಕದಲ್ಲಿ ಶ್ರೀಕೃಷ್ಣನನ್ನು ಸುಪರ್ಣಃ
ಎಂದು ಸಂಬೋಧಿಸಿದ್ದಾರೆ. ಪದ್ಮಪುರಾಣದಲ್ಲಿ ಹೇಳುವಂತೆ: ಸುಪರ್ಣಃ
ಸುಪರಾನನ್ದಾತ್ ಕಾಕುತ್ಸ್ಥೋ ವಾಚಿ ಸಂಸ್ಥಿತೇ[5]. ಸದಾ ಆನಂದಸ್ವರೂಪನಾದ ಶ್ರೀಕೃಷ್ಣ ‘ಸುಪರ್ಣಃ’. ಯಾರು ಸುಪರ್ಣನೋ ಆತನೇ
‘ಕಾಕುತ್ಸ್ಥ’. ಶ್ರೀರಾಮಚಂದ್ರನನ್ನು ಕಾಕುತ್ಸ್ಥ ಎಂದು ಕರೆಯುತ್ತಾರೆ. ಸರ್ವಶಬ್ದವಾಚ್ಯನಾದ ಭಗವಂತ ಕಾಕುತ್ಸ್ಥ.
[*ಮೇಲೆ ಹೇಳಿದಂತೆ ರುಕ್ಮಿಣಿ ಎನ್ನುವುದು ಅಪಶಬ್ದ. ಸರಿಯಾದ ಶಬ್ದ ರುಗ್ಮಿಣಿ. ಚಿನ್ನ
ಎನ್ನುವ ಅರ್ಥದಲ್ಲಿ ‘ರುಕ್ಮ’ ಎನ್ನುವ ಪದ ಈಗ ಬಳಕೆಯಲ್ಲಿದೆ. ಇದರಿಂದ ರುಕ್ಮಿ, ರುಕ್ಮಿಣಿ,
ರುಕ್ಮವತಿ, ರುಕ್ಮಾಂಗದ, ಇಂತಹ ಅನೇಕ ಹೆಸರುಗಳು ಪ್ರಸಿದ್ಧವಾಗಿವೆ. ಆದರೆ ಪ್ರಾಚೀನರು ರುಕ್ಮದ
ಬದಲು ‘ರುಗ್ಮ‘ ಎನ್ನುತ್ತಿದ್ದರು ಎನ್ನುವುದಕ್ಕೆ ಅನೇಕ ಪುರಾವೆಗಳಿವೆ. ಪ್ರಾಚೀನ ಪುರಾಣಗಳ
ಪಾಠದಂತೆ ಭೀಷ್ಮಕನ ಮಗ ‘ರುಕ್ಮಿ’ ಅಲ್ಲ,
ರುಗ್ಮಿ. ಮಗಳು ರುಕ್ಮಿಣಿ ಅಲ್ಲ, ರುಗ್ಮಿಣಿ.
ಇದು ‘ರುಜ’ಧಾತುವಿನಿಂದ ಬಂದ ಪದ. ರುಜಧಾತು ದೈಹಿಕವಾಗಿ ಮಾನಸಿಕವಾಗಿ ನೆಮ್ಮದಿ
ಕೆಡಿಸುವುದು ಎನ್ನುವ ಅರ್ಥವನ್ನು ಕೊಡುತ್ತದೆ. ಬಂಗಾರ ಎಂದರೆ ಹಾಗೆಯೇ. ನೆಮ್ಮದಿ ಕೆಡಿಸುವ
ಸಂಗತಿಗಳಲ್ಲಿ ಅದಕ್ಕೆ ಮೊದಲ ಮಣೆ. ಇದ್ದರೂ ಚಿಂತೆ, ಇರದಿದ್ದರೂ ಚಿಂತೆ! ಅಣ್ಣ-ತಮ್ಮಂದಿರರಲ್ಲಿ,
ಬಂಧು-ಬಳಗದಲ್ಲಿ ಮನಸ್ತಾಪ; ಮನೆ ಒಡೆದು ಪಾಲುಪಟ್ಟಿ; ಇದಕ್ಕೆಲ್ಲವೂ ಬಂಗಾರ ಕಾರಣವಾಗುತ್ತದೆ. ರುಜೋ ಭಂಗೇ !
ರುಜತೀತಿ ರುಗ್ಮಮ್.
ರುಗ್ಮಿಣಿ ಎಂದರೆ ಬಂಗಾರ ಉಳ್ಳವಳು ಎಂದರ್ಥ. ಆದರೆ ಈಕೆಯ ಬಂಗಾರ ಲೋಹವಲ್ಲ, ಭಗವಂತ.
ಜ್ಞಾನಾನಂದಮಯನಾದ ಭಗವಂತನನ್ನೇ ಬಂಗಾರವಾಗಿ ಕಂಡ ಭೀಷ್ಮಕನ ಮಗಳು ‘ರುಗ್ಮಿಣಿ’]
ರುಗ್ಮಿಣಿ ವಿವಾಹದ ನಂತರ ಶ್ರೀಕೃಷ್ಣ ಷಣ್ಮಹಿಷಿಯರನ್ನು ವರಿಸುತ್ತಾನೆ. (ನೀಳಾ, ಭದ್ರಾ, ಮಿತ್ರವಿಂದಾ, ಕಾಳಿಂದೀ, ಲಕ್ಷಣಾ
ಮತ್ತು ಜಾಂಬವತೀ ಇವರು ಷಣ್ಮಹಿಷಿಯರು). ಈ ಹಿಂದೆ ಎರಡನೇ ಸ್ಕಂಧದಲ್ಲಿ ಹೇಳಿರುವಂತೆ: ನಗ್ನಜಿತ್
ರಾಜನ ಮಗಳು ನೀಳಾ ಷಣ್ಮಹಿಷಿಯರಲ್ಲಿ ಒಬ್ಬಳು.
ಬಾಲ್ಯದಲ್ಲಿ ಕೃಷ್ಣನ ಸ್ನೇಹಿತೆಯಾಗಿರುವ
ಇನ್ನೊಬ್ಬಳು ನೀಳಾಳನ್ನೂ ನಾವು ಕಾಣುತ್ತೇವೆ. ಅವಳು ಯಶೋದೆಯ ಅಣ್ಣನ ಮಗಳು. ಈ ಇಬ್ಬರೂ
ಮೂಲತಃ ಒಂದೇ ಸ್ವರೂಪ. ಬಾಲ್ಯದಲ್ಲಿ ಕೃಷ್ಣನನ್ನು ಪ್ರೀತಿಸುವುದಕ್ಕಾಗಿ ಆಕೆ ಇಲ್ಲಿ ನೀಳಾಳಾಗಿ
ಹುಟ್ಟಿದರೆ, ಅಲ್ಲಿ
ಸ್ವಯಂವರದ ವಧುವಾಗುವ ಭಾಗ್ಯಕ್ಕಾಗಿ ಇನ್ನೊಂದು ರೂಪದಲ್ಲಿ ಹುಟ್ಟಿದ್ದಳು. ಕೊನೆಗೆ ಬಾಲ್ಯದ ನೀಳಾ
ಸ್ವಯಂವರದ ವಧು ನೀಳಾಳಲ್ಲಿ ಐಕ್ಯಹೊಂದಿದಳು ಎನ್ನುತ್ತಾರೆ ಶಾಸ್ತ್ರಕಾರರು. ಸಾಮಾನ್ಯವಾಗಿ
ಉತ್ತರಭಾರತದವರು ‘ರಾಧೆ’ ಎನ್ನುವ ಹೆಸರನ್ನು ನೀಳಾಳಿಗೆ ಬಳಸುತ್ತಾರೆ. ಆದರೆ ಆಚಾರ್ಯತ್ರಯರು
‘ರಾಧಾ’ ಶಬ್ದವನ್ನು ಎಲ್ಲಿಯೂ ಬಳಸಿಲ್ಲ. ಭಾಗವತದಲ್ಲೂ ಈ ಹೆಸರು ಬಂದಿಲ್ಲ.
ರುಗ್ಮಿಣಿ-ಸತ್ಯಭಾಮೆಯರು ಶ್ರೀಕೃಷ್ಣನ ಮಹಾಮಹಿಷಿಯರಾದರೆ, ಮೇಲೆ ಹೇಳಿದ ಆರುಮಂದಿ ಆತನ
ಮಹಿಷಿಯರಾಗಿದ್ದರು. ಶ್ರೀಕೃಷ್ಣ ಸತ್ಯಭಾಮೆಯನ್ನು ಮದುವೆಯಾದ ಮೇಲೆ ಆಕೆಯನ್ನು ದೇವಲೋಕಕ್ಕೆ
ಕರೆದುಕೊಂಡು ಹೋಗಿ, ಅಲ್ಲಿನ ಪಾರಿಜಾತ ವೃಕ್ಷವನ್ನು ದ್ವಾರಕೆಗೆ ತರುತ್ತಾನೆ. ನಂತರ ನರಕಾಸುರನನ್ನು
ಕೊಂದು ಆತನ ಸೆರೆಮನೆಯಲ್ಲಿದ್ದ ಹದಿನಾರು ಸಾವಿರದ ನೂರು ಮಂದಿ ರಾಜಕುಮಾರಿಯರನ್ನು
ಬಿಡುಗಡೆಗೊಳಿಸುತ್ತಾನೆ ಶ್ರೀಕೃಷ್ಣ. ಆದರೆ ಆ ರಾಜಕುಮಾರಿಯರು ಸಮಾಜದಲ್ಲಿ ತಮಗೆ ಯಾವ
ಸ್ಥಾನಮಾನವೂ ಸಿಗಲಾರದು ಮತ್ತು ನರಕಾಸುರನ ಸೆರೆಮನೆಯಲ್ಲಿದ್ದ ತಮ್ಮನ್ನು ಯಾರೂ ಮದುವೆಯಾಗಲಾರರು
ಎನ್ನುವ ಆತಂಕ ವ್ಯಕ್ತಪಡಿಸಿ ತಮ್ಮ ದೇಶಕ್ಕೆ ಹಿಂದಿರುಗಲು ಒಪ್ಪದೇ ಇದ್ದಾಗ, ಶ್ರೀಕೃಷ್ಣ ಅವರಿಗೆ ತನ್ನ ಪಟ್ಟದರಸಿಯರ ಸ್ಥಾನ ಕಲ್ಪಿಸಿ ಕಾಪಾಡುತ್ತಾನೆ.
[ಹಿಂದೆ ರಾಜನಾದವನು ಅನೇಕ ಮದುವೆಯಾಗುವುದು ಸಾಮಾಜಿಕವಾಗಿ ಪ್ರಚಲಿತದಲ್ಲಿದ್ದು,
ಶ್ರೀಕೃಷ್ಣ ರಾಜಕುಮಾರಿಯರ ಉದ್ಧಾರಕ್ಕಾಗಿ
೧೬,೧೦೮ ಮಂದಿಯನ್ನು ಮದುವೆಯಾಗಿರುವುದು ಅಂದಿನ ಕಾಲದ
ಸಾಮಾಜಿಕ ಪದ್ದತಿಗೆ ಪೂರಕವಾದ ವಿಷಯವೇ
ಆಗಿದೆ]
ತಾಸ್ವಪತ್ಯಾನ್ಯಜನಯದಾತ್ಮತುಲ್ಯಾನಿ ಸರ್ವತಃ[6] ।
ಏಕೈಕಸ್ಯಾಂ ದಶದಶ ಪ್ರಕೃತೇರ್ವಿಬುಭೂಷಯಾ ॥೦೯॥
ಶ್ರೀಕೃಷ್ಣ ೧೬,೧೦೮ ಮಂದಿ ರಾಜಕುಮಾರಿಯರನ್ನು ಮದುವೆಯಾಗಿದ್ದಷ್ಟೇ ಅಲ್ಲ, ಅವರೆಲ್ಲರಿಗೂ
ವಾಸಮಾಡಲು ಪ್ರತ್ಯೇಕ ಮನೆಯನ್ನು ಮಾಡಿಸಿ ಕೊಟ್ಟಿದ್ದ. ದಶಮ ಸ್ಕಂಧದಲ್ಲಿ ಹೇಳುವಂತೆ: ಶ್ರೀಕೃಷ್ಣ
ಇಷ್ಟೊಂದು ಮಂದಿ ಪತ್ನಿಯರ ಜೊತೆ ಹೇಗೆ ಸಂಸಾರ ಮಾಡುತ್ತಾನೆ ಎನ್ನುವ ಕುತೂಹಲದಿಂದ ನಾರದರು
ಪ್ರತಿಯೊಂದು ಮನೆಗೂ ಭೇಟಿ ಕೊಟ್ಟು ನೋಡಿದರೆ, ಅವರಿಗೆ ಅಲ್ಲಿ ಎಲ್ಲಾ ಮನೆಗಳಲ್ಲೂ ಶ್ರೀಕೃಷ್ಣನಿರುವುದು ಕಂಡು ಆಶ್ಚರ್ಯವಾಗುತ್ತದೆ.
ಈ ರೀತಿ ಶ್ರೀಕೃಷ್ಣ ತಾನೂ ಕೂಡಾ ೧೬,೧೦೮ ರೂಪದಿಂದ ಇದ್ದು, ಎಲ್ಲರನ್ನು ಸಂತೋಷವಾಗಿರಿಸಿ,
ಪ್ರತಿಯೊಬ್ಬರಿಗೂ ತನ್ನಂತೆ ಇರುವ ಹತ್ತು-ಹತ್ತು ಮಂದಿ ಮಕ್ಕಳನ್ನು ಕರುಣಿಸುತ್ತಾನೆ.
ಈ ಮೇಲಿನ ಶ್ಲೋಕದಲ್ಲಿ “ತನಗೆ ಸದೃಶರಾದ ಮಕ್ಕಳನ್ನು ಶ್ರೀಕೃಷ್ಣ ನೀಡಿದ” ಎಂದು ಹೇಳಲಾಗಿದೆ.
ಮೇಲ್ನೋಟಕ್ಕೆ “ಶ್ರೀಕೃಷ್ಣನಿಗೆ ಸಮನಾದ ಮಕ್ಕಳನ್ನು ಅವರೆಲ್ಲರೂ ಪಡೆದರು” ಎಂದು ಹೇಳಿದಂತೆ ಕಾಣುತ್ತದೆ.
ಆದರೆ ಭಗವಂತನಿಗೆ ಸಮನಾದ ಇನ್ನೊಂದು ಜೀವವಿಲ್ಲ. ಈ ಮಾತಿನ ಒಳಾರ್ಥವನ್ನು ಆಚಾರ್ಯ ಮಧ್ವರು
ಅಗ್ನಿಪುರಾಣದ ಪ್ರಮಾಣ ಸಹಿತ ವಿವರಿಸಿ ಹೇಳಿದ್ದಾರೆ. ಅಗ್ನಿಪುರಾಣದಲ್ಲಿ ಹೇಳುವಂತೆ:
ಉತ್ತಮೈಃ ಸರ್ವತಃ ಸಾಮ್ಯಂ ಕಿಞ್ಚಿತ್ ಸಾಮ್ಯಮುದೀರಿತಮ್[7] | ಆ ಮಕ್ಕಳೆಲ್ಲರೂ ಶ್ರೀಕೃಷ್ಣನ ಮಕ್ಕಳಾಗಲು ಯೋಗ್ಯರಾದ ದೈವಾಂಶ
ಸಂಭೂತರಾಗಿದ್ದರು. ಪ್ರಕೃತಿಯ ವೈಭವಕ್ಕಾಗಿ, ದೇವಲೋಕದ
ವೈಭವವನ್ನು ಶ್ರೀಕೃಷ್ಣ ಭೂಮಿಯ ಮೇಲೆ ತೋರಿಸಿದ.
ಶ್ರೀಲಕ್ಷ್ಮಿ ಕೂಡಾ ಶ್ರೀ-ಭೂ-ದುರ್ಗಾ ರೂಪದಲ್ಲಿ ಭೂಮಿಯಲ್ಲಿ ಅವತರಿಸಿದಳು. ಈ ರೀತಿ
ಭೂಮಿ ದೇವತೆಗಳ ನಾಡಾಗಿ ಕಂಗೊಳಿಸಿತು. [ದೇವತೆಗಳ ವೈಭವವನ್ನು ಭೂಮಿಯಲ್ಲಿ ತೋರಿಸಲು ಶ್ರೀಕೃಷ್ಣ
ಅಷ್ಟು ಮಕ್ಕಳನ್ನು ಕರುಣಿಸಿದ. ಆದರೆ “ಆ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳದ ಮೂಢರು
ಕೃಷ್ಣನನ್ನು ಹೆಣ್ಣು ಮರುಳ ಎಂದು ತಿಳಿದರು” ಎನ್ನುವ ನೋವಿನ ಧ್ವನಿ ಉದ್ಧವನ ಮಾತಿನಲ್ಲಿದೆ].
ಶ್ರೀಕೃಷ್ಣನ ಮಹಿಮೆಯನ್ನು ಹೇಳುತ್ತಾ ಉದ್ಧವ: ಶಿಶುಪಾಲ,
ದಂತವಕ್ರ ಮತ್ತು ಜರಾಸಂಧನಂತಹ ದೈತ್ಯರ ಸಂಹಾರವನ್ನು, ಭೀಮ-ಅರ್ಜುನರನ್ನು ಮಾಧ್ಯಮವಾಗಿ ಬಳಸಿ
ಹದಿನೆಂಟು ಅಕ್ಷೋಹಿಣಿ ಸೇನೆಯ ಆಯಸ್ಸನ್ನು ಶ್ರೀಕೃಷ್ಣ ತನ್ನ ಕಣ್ಣಿನಿಂದ ಹೀರಿ ಸಂಹಾರ ಮಾಡಿದ
ಘಟನೆಗಳನ್ನು, ಪಾಂಡವರ ಸಂತತಿಯಾದ ಪರೀಕ್ಷಿತನನ್ನು
ಗರ್ಭದಲ್ಲಿ ನಿಂತು ರಕ್ಷಿಸಿದ ಆತನ ಮಹಿಮೆಯನ್ನು ಜ್ಞಾಪಿಸಿಕೊಳ್ಳುತ್ತಾನೆ.
[1] “ಸಮಾಹೃುತಾಃ” ಎಂದೂ ಕೆಲವರು ಕರೆಯುತ್ತಾರೆ.
[2] “ಬುಭೂಷಯೈಷಾಮ್” - ಪ್ರಚಲಿತ ಪಾಠ
[3] “ಭೀಷ್ಮಕಕನ್ಯಾಕಾಯಾ
ಅರ್ಥೇ” ಎಂದು ಕೆಲವು ಪ್ರಾಚೀನ ಪಾಠ
[4] “ಸವರ್ಣಮಾತ್ರತಯಾ” – ಪಾಠಾನ್ತರ
[5] “ಸಂಸ್ಥಿತಃ” ಎಂದು ಕೆಲವರು.
[6] “ಸರ್ವಶ” ಪಾಠಾನ್ತರ
[7] “ಸಾಮ್ಯಮುದೀರ್ಯತೇ” – ಪ್ರಚಲಿತ ಪಾಠ