Friday, January 18, 2013

Shrimad BhAgavata in Kannada -Skandha-01 -Ch-03(01)


ತೃತಿಯೋSಧ್ಯಾಯಃ

ಶೌನಕಾದಿಗಳು ಕೇಳಿದ ಭಗವಂತನ ಅವತಾರಗಳ ವಿವರವನ್ನು ಈ ಅಧ್ಯಾಯದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಇಲ್ಲಿ ಭಗವಂತನ ಮೂಲರೂಪವನ್ನೊಳಗೊಂಡ ಇಪ್ಪತ್ಮೂರು ಅವತಾರಗಳನ್ನು ವಿವರಿಸಲಾಗಿದೆ. ಈ ಅವತಾರಗಳಲ್ಲಿ ನರ-ನಾರಾಯಣ ರೂಪದಲ್ಲಿನ ಭಗವಂತನ ಆವೇಶಾವತಾರವಾದ ‘ನರ’ ರೂಪವನ್ನು ಸೇರಿಸಿದರೆ, ಒಟ್ಟು ಇಪ್ಪತ್ನಾಲ್ಕು ಅವತಾರಗಳ ವಿವರಣೆ ಇಲ್ಲಿದೆ. ಅಖಂಡವಾಗಿರುವ ಭಗವಂತ ಮೊಟ್ಟಮೊದಲು ಸೃಷ್ಟಿ ನಿರ್ಮಾಣ ಮಾಡುವುಕ್ಕೋಸ್ಕರ ತಳೆದ ಅವತಾರದ ವಿವರಣೆಯೊಂದಿಗೆ ಈ ಅಧ್ಯಾಯ ಆರಂಭವಾಗುತ್ತದೆ.

ಭಗವದವತಾರಗಳು

ಸೂತ ಉವಾಚ:
ಜಗೃಹೇ ಪೌರುಷಂ ರೂಪಂ ಭಗವಾನ್ಮಹದಾದಿಭಿಃ       ।
ಸಂಭೂತಂ ಷೋಡಶಕಲಮಾದೌ ಲೋಕಸಿಸೃಕ್ಷಯಾ ॥೧॥

ಯಸ್ಯಾಂಭಸಿ ಶಯಾನಸ್ಯ ಯೋಗನಿದ್ರಾಂ ವಿತನ್ವತಃ ।
ನಾಭಿಹ್ರದಾಂಬುಜಾದಾಸೀದ್ಬ್ರಹ್ಮಾ ವಿಶ್ವಸೃಜಾಂ ಪತಿಃ             ॥೨॥

ಜಗತ್ತಿನ ಸೃಷ್ಟಿಗಾಗಿ ಭಗವಂತ ವಿಶೇಷ ರೂಪದಲ್ಲಿ ಆವಿರ್ಭಾವಗೊಂಡ ರೂಪವೇ ಆತನ ‘ಪುರುಷಃ’ ನಾಮಕ ರೂಪ. ಇದು ಎಲ್ಲಕ್ಕಿಂತ ಮೊದಲ ಅವತಾರರೂಪ. ಭಗವಂತನ ಈ ರೂಪಕ್ಕೆ ಇನ್ನೊಂದು ಹೆಸರು ‘ಪದ್ಮನಾಭ’. ಜಗತ್ತನ್ನು ಸೃಷ್ಟಿಮಾಡುವ ಮೊದಲು ತಾನೊಂದು ರೂಪಧರಿಸಿ, ತನ್ನ ನಾಭಿಯಿಂದ ಚತುರ್ಮುಖನನ್ನು ಸೃಷ್ಟಿಮಾಡಿ, ಬ್ರಹ್ಮಾಂಡವನ್ನು ಸೃಷ್ಟಿಮಾಡಿದ ರೂಪವೇ ಈ ಪದ್ಮನಾಭ ರೂಪ.
ಶಾಸ್ತ್ರಕಾರರು ಸೃಷ್ಟಿಗೆ ಕಾರಣವಾಗಿರುವ ಮೂರು ಪುರುಷರೂಪಗಳನ್ನು ಉಲ್ಲೇಖಿಸುತ್ತಾರೆ. ೧. ನಾಭಿಕಮಲದಿಂದ ಚತುರ್ಮುಖಬ್ರಹ್ಮನನ್ನು ಸೃಷ್ಟಿಮಾಡಿದ ರೂಪ. ೨. ಚತುರ್ಮುಖನ ಮುಖೇನ ಸೃಷ್ಟಿಯಾದ ಬ್ರಹ್ಮಾಂಡದೊಳಗೆ ತುಂಬಿದ ರೂಪ. ೩. ಬ್ರಹ್ಮಾಂಡದೊಳಗೆ ಅನಂತಾನಂತ ಪಿಂಡಾಂಡವನ್ನು ಸೃಷ್ಟಿಮಾಡಿ, ಆ ಪಿಂಡಾಂಡದೊಳಗೆ ತುಂಬಿದ ಪುರುಷರೂಪ. ಮೇಲಿನ ಶ್ಲೋಕದಲ್ಲಿ ಹೇಳಿರುವ ಪುರುಷರೂಪ ಮೊಟ್ಟಮೊದಲು ಮಹತತ್ತ್ವ ಧ್ಯೇಯನಾದ ಚತುರ್ಮುಖಬ್ರಹ್ಮನನ್ನು ನಾಭಿಕಮಲದಿಂದ ಸೃಷ್ಟಿ ಮಾಡಿದ ರೂಪ.
 ಇಲ್ಲಿ “ಜಗೃಹೇ ಪೌರುಷಂ ರೂಪಂ” ಎನ್ನುವಲ್ಲಿ  “ಭಗವಂತ ಪುರುಷನಾಮಕ ರೂಪವನ್ನು ಗ್ರಹಣ ಮಾಡಿದ” ಎಂದಿದ್ದಾರೆ. ಗ್ರಹಣಮಾಡುವುದು ಎಂದರೆ ‘ಸ್ವೀಕರಿಸುವುದು’ ಎಂದರ್ಥ. ಇಲ್ಲಿ ಭಗವಂತ ರೂಪವನ್ನು ಸ್ವೀಕರಿಸುವುದು ಅಂದರೆ: ಆತನ ಒಂದು ರೂಪದಿಂದ ಇನ್ನೊಂದು ರೂಪ ಅಭಿವ್ಯಕ್ತವಾಗುವುದು. ಸೃಷ್ಟಿಯ ಮೊದಲು ಎಲ್ಲವೂ ಕತ್ತಲು. ಸೃಷ್ಟಿಯ ಆರಂಭ ಎಂದರೆ ಅದು ರಾತ್ರಿ ಕಳೆದು ಅರುಣೋದಯವಾದಂತೆ. ಕತ್ತಲನ್ನು ಕಳೆದು ಪದ್ಮನಾಭರೂಪನಾಗಿ ಭಗವಂತ ಅಭಿವ್ಯಕ್ತನಾಗುವುದನ್ನೇ ಇಲ್ಲಿ  ‘ಗ್ರಹಣ’ ಮಾಡುವುದು ಎಂದಿದ್ದಾರೆ.
ಸೃಷ್ಟಿಯ ಆದಿಯಲ್ಲಿ ಎಲ್ಲವೂ ಭಗವಂತನ ಉದರದಲ್ಲಿದ್ದು, ಪ್ರಪಂಚದ ಸೃಷ್ಟಿಗಾಗಿ ಭಗವಂತ ಸಮಸ್ತ ಪ್ರಕೃತಿ ವಿಕಾರಗಳ ಮೂಲವಾದ  ಷೋಡಶಕಲೆಗಳ ಸಂಗತನಾಗಿ ಪದ್ಮನಾಭ ರೂಪಧಾರಣೆ ಮಾಡಿದ. ಈ  ಷೋಡಶಕಲೆಗಳ ವಿವರವನ್ನು ನಾವು ವೇದದಲ್ಲಿ  ಕಾಣಬಹುದು. ಅಲ್ಲಿ ಹೇಳುತ್ತಾರೆ: “ಪ್ರಾಣಾಚ್ಛ್ರದ್ಧಾಂ ಖಂ ವಾಯುರ್ಜ್ಯೋತಿರಾಪಃ ಪೃಥಿವೀಂದ್ರಿಯಂ ಮನೋSನ್ನಮನ್ನಾದ್ ವೀರ್ಯಂ ತಪೋ ಮಂತ್ರಾಃ ಕರ್ಮ ಲೋಕಾ ಲೋಕೇಷು ನಾಮ ಚ” ಎಂದು. ಜೀವ, ಶ್ರದ್ಧೆ, ಖಂ(ಆಕಾಶ), ವಾಯು, ಜ್ಯೋತಿ, ಆಪಃ, ಪ್ರಥಿವೀ, ಇಂದ್ರಿಯ, ಮನಃ, ಅನ್ನ, ವೀರ್ಯ, ತಪಃ, ಮಂತ್ರಾಃ, ಕರ್ಮ, ಲೋಕಾಃ ಮತ್ತು ನಾಮ ಇವೇ ಆ ಹದಿನಾರು ಕಲೆಗಳು.[ಈ ಕುರಿತ ವಿವರವಾದ ವಿವರಣೆ ಪ್ರಶ್ನೋಪನಿಷತ್ತಿನ ಆರನೇ ಪ್ರಶ್ನೆಯಲ್ಲಿ ಕಾಣಬಹುದು]. ಅಭಿಮಾನಿದೇವತೆಗಳನ್ನೊಳಗೊಂಡ ಈ ಷೋಡಶಕಲೆ ಭಗವಂತನ ಉದರದಲ್ಲಿದ್ದು, ಅದಕ್ಕೆ ಅಭಿವ್ಯಕ್ತಿಕೊಡುವ ಸ್ಥಿತಿಯಲ್ಲಿ ಪುರುಷನಾಮಕ ರೂಪ ಧಾರಣೆ ಮಾಡಿದ ಭಗವಂತ, ಮಹತತ್ತ್ವದ ಸೃಷ್ಟಿಮಾಡಿ, ಬ್ರಹ್ಮಾಂಡದ ಸೃಷ್ಟಿಮಾಡಿದ.

ಯಸ್ಯಾವಯವಸಂಸ್ಥಾನೈಃ ಕಲ್ಪಿತೋ ಲೋಕವಿಸ್ತರಃ   ।
ತದ್ವೈ ಭಗವತೋ ರೂಪಂ ವಿಶುದ್ಧಂ ಸತ್ತ್ವಮೂರ್ಜಿತಮ್          ॥೩॥

ಪಶ್ಯಂತ್ಯದೋ ರೂಪಮದಭ್ರಚಕ್ಷುಷಃ ಸಹಸ್ರಪಾದೋರುಭುಜಾನನಾದ್ಭುತಮ್      ।
ಸಹಸ್ರಮೂರ್ಧಶ್ರವಣಾಕ್ಷಿನಾಸಿಕಂ ಸಹಸ್ರಮೌಳ್ಯಂಬರಕುಂಡಲೋಲ್ಲಸತ್            ॥೪॥

ಭಗವಂತನ ಬೇರೆಬೇರೆ ಅವಯವಗಳ ನೆಲೆಯಿಂದ ಬೇರೆಬೇರೆ ಲೋಕಗಳ ಸೃಷ್ಟಿಯಾಯಿತು. ಭಗವಂತನ ಪಾದದಿಂದ ಭೂಮಿಯ ಸೃಷ್ಟಿ, ನಾಭಿಯಿಂದ ಅಂತರಿಕ್ಷ ಸೃಷ್ಟಿ, ಶಿರಸ್ಸಿನಿಂದ ಸ್ವರ್ಗದ ಸೃಷ್ಟಿ. ಅರ್ಥಾತ್: ಸಮಸ್ತ ಬ್ರಹ್ಮಾಂಡದೊಳಗೆ ಭಗವಂತ ವಿರಾಡ್ರೂಪದಿಂದ ವ್ಯಾಪಿಸಿನಿಂತ. ರೂಪದೋಷ ರಹಿತನಾದ ಆತನ  ಆಯಾ ಅವಯವಗಳೇ ಆಯಾ ಲೋಕಗಳ ಉತ್ಪತ್ತಿಸ್ಥಾನ.  ಇದೇ ಆತನ ಎರಡನೇ ಪುರುಷರೂಪ.

ಏತನ್ನಾನಾವತಾರಾಣಾಂ ನಿಧಾನಂ ಬೀಜಮವ್ಯಯಮ್           ।
ಯಸ್ಯಾಂಶಾಂಶೇನ ಸೃಜ್ಯಂತೇ ದೇವತಿರ್ಯಙ್ನರಾದಯಃ         ॥೫॥

ಭಗವಂತನ ಪುರುಷರೂಪವೇ ಮುಂದಿನ ಎಲ್ಲಾ ರೂಪಗಳ ಬೀಜ. ಆತನ ಪುರುಷರೂಪದಿಂದಲೇ ಇತರ ರೂಪಗಳ ಅಭಿವ್ಯಕ್ತವಾಗುತ್ತದೆ. ಇದು ಒಂದು ದೀಪದಿಂದ ಇನ್ನೊಂದು ದೀಪ ಹಚ್ಚಿದಂತೆ. ಹೇಗೆ ಎಲ್ಲಾ ರೂಪಗಳು ಪುರುಷರೂಪದಿಂದ ಅಭಿವ್ಯಕ್ತವಾಗುತ್ತವೋ, ಅದೇ ರೀತಿ ಕೊನೆಗೆ ಹೋಗಿ ಸೇರುವುದು ಅದೇ ಪುರುಷರೂಪದಲ್ಲಿ. ಭಗವಂತ ಈ ಬ್ರಹ್ಮಾಂಡದಲ್ಲಿ ದೇವತೆಗಳು, ಪ್ರಾಣಿಗಳು, ಮನುಷ್ಯರು ಹಾಗೂ ಅಸಂಖ್ಯ ಜೀವಜಾತಗಳನ್ನು ಸೃಷ್ಟಿಸಿ, ತನ್ನ ಅನಂತ ಅಂಶಗಳಿಂದ ಪ್ರತಿಯೊಂದು ಜೀವರೊಳಗೆ ತುಂಬಿದ. ಇದು ಸೃಷ್ಟಿಗೆ ಕಾರಣವಾದ ಮೂರನೇ ಪುರುಷರೂಪ.
ಸೃಷ್ಟಿಯ ಮೊದಲ ಮನ್ವಂತರ ಸ್ವಾಯಂಭುವ ಮನ್ವಂತರ. ಆನಂತರ ಸ್ವಾರೋಚಿಷ, ಉತ್ತಮ, ರೈವತ, ತಾಪಸ, ಚಾಕ್ಷುಷ ಮನ್ವಂತರಗಳು. ಈ ಆರು ಮನ್ವಂತರಗಳು ಈ ಕಲ್ಪದಲ್ಲಿ ಈಗಾಗಲೇ ಸಂದುಹೋದ ಮನ್ವಂತರಗಳು. ಈಗ ನಡೆಯುತ್ತಿರುವ ಮನ್ವಂತರ-ವೈವಸ್ವತ ಮನ್ವಂತರ. [ಭೂಮಿಯ ಆಯಸ್ಸು ಒಂದು ದಿನಕಲ್ಪ. ಅದು  ಚತುರ್ಮುಖನ ಒಂದು ಹಗಲು. ಒಂದು ದಿನ ಕಲ್ಪದಲ್ಲಿ ೧೪ ಮನ್ವಂತರಗಳು. ಈ ೧೪ ಮನ್ವಂತರಗಳನ್ನು ೧೪ ಮಂದಿ ಮನುಗಳು ನಿಯಂತ್ರಿಸುತ್ತಾರೆ. ಒಂದು ಮನ್ವಂತರಕಾಲ ಎಂದರೆ ಸುಮಾರು ೭೧ ಯುಗಚಕ್ರ ಅಥವಾ ೩೦,೮೫,೭೦,೦೦೦ ವರ್ಷಗಳು. ಇಂತಹ ೧೪ ಮನ್ವಂತರಗಳು ಹಾಗೂ ಮನ್ವಂತರಗಳ ನಡುವಿನ ಪ್ರಳಯಕಾಲ (೨೦,೦೦೦ವರ್ಷಗಳು) ಸೇರಿದಾಗ ಅದು ಒಂದು ದಿನಕಲ್ಪ. ಅಂದರೆ ೪೩೨ಕೋಟಿ ವರ್ಷಗಳು.]

ಸ ಏವ ಪ್ರಥಮಂ ದೇವಃ ಕೌಮಾರಂ ಸರ್ಗಮಾಸ್ಥಿತಃ   ।
ಚಚಾರ ದುಶ್ಚರಂ ಬ್ರಹ್ಮಾ ಬ್ರಹ್ಮಚರ್ಯಮಖಂಡಿತಮ್              ॥೬॥

ತಾನು ಸೃಷ್ಟಿಸಿದ ಪ್ರಪಂಚದಲ್ಲಿ ಮೊಟ್ಟಮೊದಲು ಸ್ವಾಯಂಭುವ ಮನ್ವಂತರದಲ್ಲಿ  ಭಗವಂತ ಸನತ್ಕುಮಾರನಾಗಿ ಅವತರಿಸಿದ. ಇದನ್ನು ಕೆಲವರು ಚತುರ್ಸನಾವತಾರ ಎಂದು ಹೇಳುತ್ತಾರೆ. ಸನಕ-ಸನಂದನ-ಸನಾತನ-ಸನತ್ಕುಮಾರ ಈ ನಾಲ್ಕು ಮಂದಿ ‘ಸನ’ರಲ್ಲಿನ ಸನತ್ಕುಮಾರನೇ-ಭಗವಂತನ ರೂಪ ಎಂದು ಹಲವು ವ್ಯಾಖ್ಯಾನಕಾರರು ಹೇಳಿದ್ದಾರೆ. ಆದರೆ ಅದು ಸರಿಯಲ್ಲ. ಏಕೆಂದರೆ ಆ ಸನತ್ಕುಮಾರ ಒಬ್ಬ ಋಷಿ. ಆತ ಬ್ರಹ್ಮಪುತ್ರ. ಅವನೇ ವಿಷ್ಣುಪುತ್ರನಾಗಿ  ಕಾಮನಾದ, ಶಿವಪುತ್ರನಾಗಿ ಷಣ್ಮುಖ/ಸ್ಕಂಧನಾದ. ಆದ್ದರಿಂದ ಆ ಋಷಿಯೇ ಬೇರೆ, ಭಗವಂತನ ಈ ಅವತಾರವೇ ಬೇರೆ. ಬ್ರಹ್ಮಪುರಾಣದಲ್ಲಿ ಹೇಳುವಂತೆ: ಸನತ್ಕುಮಾರ ಋಷಿಗೆ ಬ್ರಹ್ಮಚರ್ಯದ ಉಪದೇಶ ಮಾಡಿದ ಮನ್ವಂತರದ ಮೊಟ್ಟಮೊದಲ ಭಗವಂತನ ಅವತಾರವೇ ‘ಸನತ್ಕುಮಾರ ರೂಪ’. ಈ ರೂಪದಲ್ಲೇ ಭಗವಂತ ಚತುರ್ಮುಖನಿಗೆ ವೇದೋಪದೇಶ ಮಾಡಿದ. ಅಖಂಡ ಬ್ರಹ್ಮಚರ್ಯ ಸಾಧನೆಯನ್ನು ನಡೆದು ತೋರಿದ ಅವತಾರವಿದು. ಇದು ಸುಮಾರು ಇನ್ನೂರು ಕೋಟಿ ವರ್ಷಗಳ ಹಿಂದೆ ನಡೆದ ಮನ್ವಂತರದ ಮೊದಲ ಅವತಾರ.

ದ್ವಿತೀಯಂ ತು ಭವಾಯಾಸ್ಯ ರಸಾತಳಗತಾಂ ಮಹೀಮ್        ।
ಉದ್ಧರಿಷ್ಯನ್ನುಪಾದತ್ತ ಯಜ್ಞೇಶಃ ಸೌಕರಂ ವಪುಃ                     ॥೭॥

ಭಗವಂತನ ಎರಡನೇ ಅವತಾರ ವರಾಹ ಅವತಾರ. ಭಗವಂತ ವರಾಹ ರೂಪಿಯಾಗಿ ಎರಡು ಬಾರಿ ಅವತರಿಸಿರುವುದನ್ನು ಕಾಣುತ್ತೇವೆ. ಒಂದು ಸ್ವಾಯಂಭುವ ಮನ್ವಂತರದಲ್ಲಿ ಹಾಗು ಇನ್ನೊಂದು ವೈವಸ್ವತ ಮನ್ವಂತರದಲ್ಲಿ. ಸ್ವಾಯಂಭುವ ಮನ್ವಂತರದಲ್ಲಿ ಮೊದಲ ವರಾಹ ಅವತಾರವಾಗಿರುವುದರಿಂದ  ಅದು ಭಗವಂತನ ಎರಡನೇ ಅವತಾರ[Chronologically]. ದೈತ್ಯ ಶಕ್ತಿಯ ಪ್ರಭಾವದಿಂದಾಗಿ ಈ ಭೂಮಿ ತನ್ನ ಕಕ್ಷೆಯಿಂದ ಕಳಚಿಕೊಂಡಾಗ, ವರಾಹರೂಪದಲ್ಲಿ ಬಂದು ಭೂಮಿಯನ್ನು ಮರಳಿ ಕಕ್ಷೆಯಲ್ಲಿಟ್ಟ ಅವತಾರವಿದು. ಸ್ವಾಯಂಭುವ ಮನ್ವಂತರದಲ್ಲಿ ಬ್ರಹ್ಮಪುತ್ರನಾದ ಆದಿದೈತ್ಯ ಹಿರಣ್ಯಾಕ್ಷನನ್ನು ವರಾಹರೂಪನಾಗಿ ಭಗವಂತ ಸಂಹಾರ ಮಾಡಿದರೆ, ವೈವಸ್ವತ ಮನ್ವಂತರದಲ್ಲಿ ಅದಿತಿ-ಕಾಶ್ಯಪರ ಮಗನಾದ ಹಿರಣ್ಯಾಕ್ಷನನ್ನು ಮರಳಿ ವರಾಹರೂಪಿಯಾಗಿ ಸಂಹರಿಸಿದ. [ಭೂಮಿ ಎರಡು ಬಾರಿ ಕಕ್ಷೆಯಿಂದ ಕಳಚಿಕೊಂಡಿರುವುದು ಮತ್ತು ಅದು ಮರಳಿ ತನ್ನ ಕಕ್ಷೆಗೆ ಮರಳಿರುವ ಕುರಿತು Velikovsky ಬರೆದಿರುವ  ‘Words in collision’ ಪುಸ್ತಕದಲ್ಲಿ ಪ್ರಸ್ತಾಪವಿದೆ. ಅಲ್ಲಿ ಆತ  ಭಾಗವತವನ್ನು ಉಲ್ಲೇಖಿಸಿರುವುದನ್ನು ಕಾಣಬಹುದು]

Monday, January 14, 2013

Shrimad BhAgavata in Kannada -Skandha-01 -Ch-02(07)


ಭೇಜಿರೇ ಮುನಯೋSಥಾಗ್ರೇ ಭಗವಂತಮಧೋಕ್ಷಜಮ್ ।
ಸತ್ತ್ವಂ ವಿಶುದ್ಧಂ ಕ್ಷೇಮಾಯ ಕಲ್ಪತೇ ನೇತರಾವಿಹ                  ॥೨೬॥

ಸಾತ್ತ್ವಿಕ ಸ್ವಭಾವದವರು ‘ಅದೋಕ್ಷಜಃ’ ಭಗವಂತನನ್ನು ಉಪಾಸನೆ ಮಾಡಿಯೇ ಉನ್ನತಿಗೇರಿದರು. ವಾಸುದೇವನಲ್ಲಿ ಭಕ್ತಿ ಕೇವಲ ಸಾತ್ತ್ವಿಕ ಸ್ವಭಾವದವರಿಗೆ ಮಾತ್ರ ಹುಟ್ಟುತ್ತದೆ. ಅಂತಹ ಸಾತ್ತ್ವಿಕರ ಮನಸ್ಸು ರಜಸ್ಸು-ತಮಸ್ಸುಗಳಿಂದ ಕಲುಷಿತವಾಗಿರುವುದಿಲ್ಲ ಮತ್ತು ಸತ್ತ್ವ ಗುಣವೇ ಅವರಿಗೆ ಮೊಕ್ಷ ಸಾಧನವಾಗುತ್ತದೆ. ಇವರು ಸತ್ವದ ಮಹತ್ವದಿಂದ , ಸತ್ವದ ನಿಯಾಮಕನಾಗಿರುವ, ಸತ್ವಗುಣವನ್ನು ನಮ್ಮಲ್ಲಿ ಬೆಳೆಸತಕ್ಕಂತಹ ನಾರಾಯಣ ರೂಪವನ್ನು ಉಪಾಸನೆ ಮಾಡುತ್ತಾರೆ. 

ಮುಮುಕ್ಷವೋ ಘೋರಮೂಢಾನ್ ಹಿತ್ವಾ ಭೂತಪತೀನಥ ।
ವಾಸುದೇವಕಲಾಃ ಶಾಂತಾ ಭಜಂತಿ ಹ್ಯನಸೂಯವಃ              ॥೨೭॥

ರಜಸ್ತಮಃಪ್ರಕೃತಯಃ ಸಮಶೀಲಾನ್  ಭಜಂತಿ ವೈ ।
ಪಿತೃಭೂತಪ್ರಜೇಶಾದೀನ್ ಶ್ರೀಯೈಶ್ವರ್ಯಪ್ರಜೇಪ್ಸವಃ             ॥೨೮॥

ಯಾರ ಮೇಲೂ ಅಸೂಯೆ-ದ್ವೇಷಲ್ಲದವರು, ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎನ್ನುವ ಖಚಿತ ಅರಿವು ಉಳ್ಳವರು, ಮೊಕ್ಷಸಾಧನೆಯಲ್ಲಿ ತಮಸ್ಸು ಮತ್ತು ರಜಪ್ರವೃತ್ತಕ ರೂಪದಿಂದ ಭಗವಂತನನ್ನು ಉಪಾಸನೆ ಮಾಡುವುದಿಲ್ಲ.  ಘೋರ ರೂಪಗಳು ನಮ್ಮಲ್ಲಿ ಕ್ರೌರ್ಯವನ್ನೂ ಹಾಗೂ ಮೂಢ ರೂಪಗಳು ನಮ್ಮಲ್ಲಿ ಮೌಡ್ಯವನ್ನೂ ಪ್ರಚೋದಿಸುತ್ತವೆ. ಇಂತಹ ಘೋರ ಮತ್ತು ಮೂಢವಾದ ಭೂತ-ಪ್ರೇತ-ಪಿಶಾಚಿ ಪೂಜೆ ಎಂದೂ ನಮ್ಮನ್ನು ಭಗವಂತನತ್ತ ಕೊಂಡೊಯ್ಯುವುದಿಲ್ಲ. ಪರಮ ಪ್ರಸನ್ನವಾದ ಭಗವಂತನ ರೂಪವನ್ನು ನಾವು ಅಂತರಂಗದಲ್ಲಿ ಕಾಣಬೇಕು. “ಭಗವಂತ ಪ್ರಸನ್ನನಾಗಿ ಅನುಗ್ರಹ ದೃಷ್ಟಿಯಿಂದ ಕಣ್ಣರಳಿಸಿ, ಪ್ರೀತಿಯಿಂದ ನನ್ನನ್ನು ನೋಡುತ್ತಿದ್ದಾನೆ.” ಎಂದು ಅವನ ಕಣ್ಣನ್ನು ನಾವು ನಮ್ಮ ಹೃದಯದಲ್ಲಿ ಧ್ಯಾನ ಮಾಡಬೇಕು.
ಕೆಲವರು ಅರ್ಥ-ಕಾಮಕ್ಕಾಗಿ ಪಿತೃದೇವತೆಗಳ ಆರಾಧನೆ ಮಾಡುತ್ತಾರೆ. ಇದಲ್ಲದೆ ಕ್ಷುದ್ರ-ವಿಕೃತ ಉಪಾಸನೆ ಮಾಡುವವರೂ ಇದ್ದಾರೆ. ಇಂತಹ ರಾಜಸ/ತಾಮಸ ಉಪಾಸನೆಯಿಂದ ಬಯಕೆ ಈಡೇರಬಹುದು. ಆದರೆ ಆತ್ಮೋದ್ಧಾರವಿಲ್ಲ.  ಹಾಗಾಗಿ ಇಂತಹ ಕೆಟ್ಟ ಉಪಾಸನೆಯನ್ನು ಬಿಟ್ಟು, ದ್ವೇಷ-ಅಸೂಯೆ ಇಲ್ಲದ, ಸ್ವಚ್ಛ ಮನಸ್ಸಿನಿಂದ, ಸಾತ್ವಿಕ ಉಪಾಸನೆ ಮಾಡಬೇಕು. ಸಾತ್ವಿಕತೆ ಕಲಿಯದೇ ಅಧ್ಯಾತ್ಮವಿಲ್ಲ.    

ನಾರಾಯಣಪರಾ ವೇದಾ ನಾರಾಯಣಪರಾ ಮಖಾಃ ।
ನಾರಾಯಣಪರಾ ಯೋಗಾ ನಾರಾಯಣಪರಾಃ ಕ್ರಿಯಾಃ           ॥೨೯॥

ನಾರಾಯಣಪರಂ ಜ್ಞಾನಂ ನಾರಾಯಣಪರಂ ತಪಃ ।
ನಾರಾಯಣಪರೋ ಧರ್ಮೋ ನಾರಾಯಣಪರಾ ಗತಿಃ              ॥೩೦॥

ಇಲ್ಲಿ ನಾರಾಯಣಪರಾ ವೇದಾಃ ಎಂದಿದ್ದಾರೆ. ಈ ಕುರಿತ ವಿಶ್ಲೇಷಣೆಯನ್ನು ಮಂಗಲ ಪದ್ಯದಲ್ಲಿ ಸ್ವಲ್ಪ ಮಟ್ಟಿಗೆ ನೋಡಿದ್ದೇವೆ. ಸಾತ್ತ್ವಿಕರಾದ ಉಪಾಸಕರಿಗೆ ವೇದದ ಯಾವ ಮಂತ್ರವನ್ನು ಓದಿದರೂ ನಾರಾಯಣನ ರೂಪ, ಅವನ ಗುಣಮಹತ್ತ್ವ ಕಾಣಬೇಕು. ನಾವು ಸಮಸ್ತ ವೇದದಲ್ಲೂ ನಾರಾಯಣನನ್ನು ಕಾಣಬೇಕು. ಐತರೇಯ ಅರಣ್ಯಕದಲ್ಲಿ ಹೇಳುವಂತೆ: “ಸರ್ವೇ ಘೋಷಾಃ ಸರ್ವೇ ವೇದಾಃ ಸರ್ವಾಃ ರಚಃ ಎಕೈವ ವ್ಯಾಹೃತಿಃ...” ಪ್ರಕೃತಿಯಲ್ಲಿನ ಸರ್ವಶಬ್ದಗಳು, ಸರ್ವ  ನಾದಗಳು ಭಗವಂತನನ್ನು ಹೇಳುತ್ತವೆ. ವೇದದಲ್ಲಿನ ಎಲ್ಲಾ ಶಬ್ದಗಳು, ಎಲ್ಲಾ ಅಕ್ಷರಗಳು, ಎಲ್ಲಾ ನಾದಗಳೂ ನಾರಾಯಣ ಪರ. ಎಲ್ಲಾ ದೇವತೆಗಳ ನಾಮ ಧರಿಸಿದವನು ಭಗವಂತ ಮತ್ತು ಎಲ್ಲಾ ದೇವತೆಗಳಿಗೆ ನಾಮವನ್ನು ಕೊಟ್ಟವನು ಭಗವಂತ. ಹಾಗಾಗಿ ಎಲ್ಲಾ ದೇವತೆಗಳ ಹೆಸರೂ ಆ ಭಗವಂತನ ಹೆಸರು.  ನಾರಾಯಣ ಸೂಕ್ತದಲ್ಲಿ ಹೇಳುವಂತೆ:  
ನಾರಾಯಣ ಪರೋ ಜ್ಯೋತಿರಾತ್ಮಾ ನಾರಾಯಣಃ ಪರಃ ।
ನಾರಾಯಣ ಪರಂ ಬ್ರಹ್ಮ ತತ್ತ್ವಂ ನಾರಾಯಣಃ ಪರಃ ।
ನಾರಾಯಣ ಪರೋ ಧ್ಯಾತಾ ಧ್ಯಾನಂ ನಾರಾಯಣಃ ಪರಃ ॥ 
ಯಚ್ಚ ಕಿಂಚಿತ್ ಜಗತ್ ಸರ್ವಂ ದೃಶ್ಯತೇ ಶ್ರೂಯತೇಽಪಿ ವಾ । 
ಅಂತರ್ಬಹಿಶ್ಚ ತತ್ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ ॥ 
ಸಮಸ್ತ ವೇದಗಳೂ ನಾರಾಯಣನನ್ನು ಹೇಳುತ್ತವೆ. ಈ ಕುರಿತು ಇನ್ನೂ ವಿವರವಾಗಿ ನಾವು ಭಾಗವತದಲ್ಲಿ ಮುಂದೆ ಉದ್ಧವಗೀತೆಯಲ್ಲಿ ಕಾಣಬಹುದು. ಅಲ್ಲಿ ಕೃಷ್ಣ ಹೇಳುತ್ತಾನೆ: “ಮಾಂ ವಿಧತ್ತೇಽಭಿಧತ್ತೇ ಮಾಂ ವಿಕಲ್ಪ್ಯಾಪೋಹ್ಯತೇ ತ್ವಹಂ ।  ಏತಾವಾನ್ಸರ್ವವೇದಾರ್ಥಃ ಶಬ್ದ ಆಸ್ಥಾಯ ಮಾಂ ಭಿದಾಂ”. ಎಂದು.
ನಾರಾಯಣ ಪರಾ ಮಖಾಃ : ಇಲ್ಲಿ ಮಖಾ ಎಂದರೆ ಯಜ್ಞಗಳು. ಎಲ್ಲ ಯಜ್ಞ-ಯಾಗಾದಿಗಳೂ ನಾರಾಯಣನ ಪ್ರೀತಿಗೋಸ್ಕರವೇ ಇರುವಂತಹದ್ದು. ಯಜುರ್ವೇದ ಯಜ್ಞದ ಕುರಿತು ವಿವರಿಸುತ್ತದೆ. ಅಲ್ಲಿ ಕರ್ಮವಾಚಕವಾದ ಏನೇನು ಪದಗಳಿವೆ, ಅವು ಅಂತತಃ ಭಗವಂತನನ್ನು ಹೇಳುತ್ತವೆ. ಉದಾಹರಣೆಗೆ:  “ವಸಂತೇ ವಸಂತೇ ಜ್ಯೋತಿಷಾ ಯಜೇತಾ”: ಇದರ ನೇರ ಅರ್ಥ: “ಪ್ರತಿಯೊಂದು ವಸಂತದಲ್ಲೂ ಜ್ಯೋತಿಷ್ಟೋಮಯಾಗ ಮಾಡು” ಎಂದರ್ಥ. ಇಲ್ಲಿ ಬರುವ ಪ್ರತಿಯೊಂದು ಪದವನ್ನೂ ಭಗವಂತನ ಪರ ಅರ್ಥ ಮಾಡಿದಾಗ ಈ ಶ್ಲೋಕ ಭಗವಂತನನ್ನು ಹೇಳುತ್ತದೆ ಎನ್ನುವುದು ತಿಳಿಯುತ್ತದೆ. ಹಾಗೆ ಮಾಡಿದಾಗ: ವಸಂತೇ ಅಂದರೆ: ಎಲ್ಲವುದರ ಒಳಗೂ ವಾಸ ಮಾಡುವವನು, ಎಲ್ಲೆಡೆ ತುಂಬಿರುವವನು ಎನ್ನುವ ಅರ್ಥವನ್ನು ಕೊಡುತ್ತದೆ. ಅದೇ ರೀತಿ  ‘ಜ್ಯೋತಿಷಾ’. ಇಲ್ಲಿ ಷ-ಕಾರೋ ಪ್ರಾಣೋ ಆತ್ಮಾ. ಅಂದರೆ ಸರ್ವಚೇಷ್ಠಕತ್ವ. ಆದ್ದರಿಂದ ಸ್ವಯಂ ಪ್ರಕಾಶಸ್ವರೂಪನೂ ಸರ್ವಚೇಷ್ಠಕನೂ ಆದವ ಜ್ಯೋತಿಷಾ. ಇನ್ನು ‘ಆಯುಜೇತಾ’ ಎಂದರೆ: ಎಲ್ಲಾ ಯಜ್ಞಗಳಿಂದ ಪೂಜಿತನಾದವನು ಎಂದರ್ಥ. ಈ ಎಲ್ಲಾ ಅರ್ಥಗಳಿಂದ ನೋಡಿದಾಗ, ಮೇಲಿನ ಮಂತ್ರ ಸಂಪೂರ್ಣ ಭಗವದ್ ಪರ ಅರ್ಥವನ್ನು ಕೊಡುತ್ತದೆ.
ನಾರಾಯಣಪರಾ ಯೋಗಾಃ: ವೇದದಲ್ಲಿ ಅನೇಕ ಯೋಗಗಳನ್ನು ಹೇಳಲಾಗಿದೆ. ಉದಾಹರಣೆಗೆ ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗ ಇತ್ಯಾದಿ. ಇಲ್ಲಿ ಹೇಳುತ್ತಾರೆ: ಯಾವ ಯೋಗವೇ ಇರಲಿ,  ಅದು ಭಗವಂತನೆಡೆಗೆ ಹೋಗಲು ಇರುವ ಯೋಗವೇ ಹೊರತು ಇನ್ನೇನೂ ಅಲ್ಲಾ ಎಂದು. “ತಸ್ಯ ಬ್ರಹ್ಮಣಿ ಸಂಯೋಗಃ  ಯೋಗ್ಯೇತ ಧೀಯತೇ” ಚಿತ್ತವೃತ್ತಿಗೂ ಭಗವಂತನಿಗೂ ಸಂಯೋಗವಾಗುವುದಕ್ಕೆ ಯೋಗ ಎನ್ನುತ್ತಾರೆ. ಈ ಸಂಯೋಗವಿಲ್ಲದೆ ಯಾವ ಯೋಗವೂ ಇಲ್ಲ. ಯಾವ ಸಾಧನೆಯ ಮಾರ್ಗವೇ ಇರಲಿ, ಅದು ಅಂತತಃ ನಾರಾಯಣನಲ್ಲಿಗೆ ಕೊಂಡೊಯ್ಯಬೇಕು. ಇಲ್ಲದಿದ್ದರೆ ಪೂರ್ಣತೆ ಇಲ್ಲ.
ನಾರಾಯಣಪರಾ ಕ್ರಿಯಾಃ : ಕೇವಲ ಯಜ್ಞ-ಯಾಗಗಳಷ್ಟೇ ಅಲ್ಲ, ನಾವು ಮಾಡುವ ಸಮಸ್ತ ಕರ್ಮಗಳೂ ಕೂಡಾ ಭಗವಂತನ ಪರವಾಗಬೇಕು. ಇದನ್ನೇ ಗೀತೆಯಲ್ಲಿ ಕೃಷ್ಣ ಹೀಗೆ ಹೇಳಿದ್ದಾನೆ:
ಯತ್ ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್ ।
ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಮ್            ॥೯-೨೭॥
ನಾವು ತಿನ್ನುವುದು ಆ ವೈಶ್ವಾನರನಿಗೆ ಆಹುತಿ; ನಡೆಯುವುದು ಆ ಭಗವಂತನಿಗೆ ಪ್ರದಕ್ಷಿಣೆ; ಮಲಗುವುದು ಭಗವಂತನಿಗೆ ಸಾಷ್ಟಾಂಗ ನಮಸ್ಕಾರ; ಮಾತನಾಡುವುದು ಭಗವಂತನ ಕೀರ್ತನೆ. ಹೀಗೆ ಎಲ್ಲವೂ ಭಗವಂತನ ಪೂಜೆಯಾಗಬೇಕು.
ನಾರಾಯಣಪರಂ ಜ್ಞಾನಂ: ಎಲ್ಲಾ ಅರಿವು ಯಾವ ಅರಿವಿಗೆ ಮೆಟ್ಟಿಲೋ ಅದು ಶ್ರೇಷ್ಠವಾದ ಅರಿವು. ಅಧಿಭೂತದ ಅರಿವು, ಅಧ್ಯಾತ್ಮದ ಅರಿವು, ಅಧಿದೈವದ ಅರಿವು, ಅಧಿಯಜ್ಞದ ಅರಿವು, ಕರ್ಮಬ್ರಹ್ಮದ ಅರಿವು, ಇತ್ಯಾದಿ ಅರಿವು ಸಾಧನೆಯ ಒಂದೊಂದು ಮೆಟ್ಟಿಲುಗಳು. ಈ ಕುರಿತು ವಿಸ್ತಾರವಾದ ವಿವರಣೆಯನ್ನು ಭಗವದ್ಗೀತೆಯ ಎಂಟನೇ ಅಧ್ಯಾಯದಲ್ಲಿ ಕಾಣಬಹುದು. ಒಟ್ಟಿನಲ್ಲಿ ಹೇಳಬೇಕೆಂದರೆ: ಎಲ್ಲಾ ಜ್ಞಾನಗಳ ಕೊನೇ ಗುರಿ ಆ ಭಗವಂತ.
ನಾರಾಯಣಪರಂ ತಪಃ : ತಪಸ್ಸು ಅಂದರೆ ಚಿಂತನೆ. ಮನಸ್ಸಿನಿಂದ ಬರುವ ನಿರ್ಧಾರ-ಚಿಂತನೆಗಳೇ ತಪಸ್ಸು. ನಮ್ಮ ಮನಸ್ಸಿನ ಚಿಂತನೆಯ ಕೊನೆ ಆ ಭಗವಂತನಾಗಿರಬೇಕು. ಕಠೋಪನಿಷತ್ತಿನಲ್ಲಿ ಹೇಳುವಂತೆ:  “ತಪಾಂಸಿ ಸರ್ವಾಣಿ ಚ ಯದ್ವದಂತಿ”(೧-೨-೧೫). ಎಲ್ಲಾ ತರ್ಕಗಳು ಎಲ್ಲಿ ಕೊನೆಯಾಗುತ್ತವೋ ಅದು ಭಗವಂತ.
ನಾರಾಯಣಪರೋ ಧರ್ಮಃ : ಈ ಹಿಂದೆ ವಿಶ್ಲೇಷಿಸಿಸಿದಂತೆ ಯಾವುದು ನಮ್ಮನ್ನು ಭಗವಂತನೆಡೆಗೆ ಕೊಂಡೊಯ್ಯುತ್ತದೋ ಅದು ಧರ್ಮ. ಯಾವ ನಡೆಯಲ್ಲಿ ಭಗವಂತನ ಕಡೆಗೆ ನಮ್ಮ ಮನಸ್ಸು ಹರಿಯುತ್ತದೋ ಅದೇ ನಮ್ಮ ಧರ್ಮ. ಎಲ್ಲಾ ಧರ್ಮಗಳಿರುವುದು ಭಗವಂತನನ್ನು ತಿಳಿಯುವುದಕ್ಕೋಸ್ಕರ ಹೊರತು ಧರ್ಮಕ್ಕೋಸ್ಕರ ಧರ್ಮವಲ್ಲ. ಒಟ್ಟಿನಲ್ಲಿ ಹೇಳಬೇಕೆಂದರೆ: ಧರ್ಮಕ್ಕೋಸ್ಕರ ಧರ್ಮವಲ್ಲ,  ಜ್ಞಾನಕ್ಕೋಸ್ಕರ ಜ್ಞಾನವಲ್ಲ, ಕರ್ಮಕ್ಕೋಸ್ಕರ ಕರ್ಮವಲ್ಲ, ತಪಸ್ಸಿಗೋಸ್ಕರ ತಪಸ್ಸಲ್ಲ. ಭಗವಂತನನ್ನು ತಿಳಿಯುವುದಕ್ಕೋಸ್ಕರ, ಆತನ ಅನುಗ್ರಹವನ್ನು ಪಡೆಯುವುದಕ್ಕೋಸ್ಕರ ಇವೆಲ್ಲವೂ ಇದೆ. ಹೀಗಾಗಿ  ಇಲ್ಲಿ ಹೇಳುತ್ತಾರೆ: “ನಾರಾಯಣಪರಾ ಗತಿಃ” ಎಂದು. ನಮ್ಮ ಸಾಧನೆಯ ಕೊನೇ ಗುರಿ ಆ ಭಗವಂತ. ನಮ್ಮೆಲ್ಲಾ ನಡೆಯೂ ಆ ಭಗವಂತನನ್ನು ಸೇರುವುದಕ್ಕೆ ಪೋಷಕವಾಗಿರಬೇಕು. ಹೀಗೆ ಉಗ್ರಶ್ರವಸ್ಸ್ ನಮ್ಮ ಅಂತರಂಗದ ಶ್ರೇಯಸ್ಸಿನ ದಾರಿಯನ್ನು ಬಹಳ ಸುಂದರವಾಗಿ ವರ್ಣಿಸಿದ್ದಾರೆ.
[ಓದುಗರಿಗೆ ಸೂಚನೆ: ಇಲ್ಲಿ ಭಗವಂತನನ್ನು ‘ನಾರಾಯಣ’ ಎನ್ನುವ ಶಬ್ದ ಬಳಸಿ ವಿವರಿಸಲಾಗಿದೆ. ನಾರಾಯಣ ಶಬ್ದವನ್ನು ‘ವಾಸುದೇವ’ ಶಬ್ದದಿಂದ ಬಳಸಿಕೊಳ್ಳುವುದು ಇನ್ನೊಂದು ಮುಖ. ಒಂದು ರೀತಿಯಿಂದ ನೋಡಿದರೆ ವಾಸುದೇವ ಪದದ ನಿರ್ವಚನವೇ ನಾರಾಯಣ. ‘ವಾಸು’ ಅಂದರೆ ಒಳಗೆ ವಾಸ ಮಾಡುವವನು. ‘ದೇವ’ ಅಂದರೆ ಹೊರಗಡೆ ಎಲ್ಲಾ ಕಡೆ ತುಂಬಿರುವವನು.  ಆದ್ದರಿಂದ ವಾಸುದೇವ ಎಂದರೆ ಒಳಗೂ ಹೊರಗೂ ತುಂಬಿರುವವನು ಎಂದರ್ಥ. ಅದೇ ರೀತಿ ಯಾರು ‘ನಾರನೋ’; ಯಾರು ‘ಅಯನನೋ’ ಅವನು ನಾರಾಯಣ. ನಾರ ಎಂದರೆ ಒಳಗಡೆ ತುಂಬಿರುವವ. ಅಯನ ಎಂದರೆ ಎಲ್ಲಾ  ಕಡೆ ವ್ಯಾಪಿಸಿರುವವ.]  

ಸ ಏವೇದಂ ಸಸರ್ಜಾಗ್ರೇ ಭಗವಾನಾತ್ಮಮಾಯಯಾ ।
ಸದಸದ್ರೂಪಯಾ ಚಾಸೌ ಗುಣಮಯ್ಯಾSಗುಣೋ ವಿಭುಃ          ॥೩೧॥

ಈ ಪ್ರಪಂಚ ನಿರ್ಮಾಣಕ್ಕೆ ನಿಮಿತ್ತ ಕಾರಣ ಭಗವಂತ ಎನ್ನುವುದು ನಮಗೆ ತಿಳಿಯಿತು. ಹಾಗಾದರೆ ಇದರ ಉಪಾದಾನ ಕಾರಣ ಯಾರು? ಭಗವಂತನೆಂಬ ಕುಂಬಾರ ಈ ಬ್ರಹ್ಮಾಂಡವೆಂಬ ಮಡಕೆಯನ್ನು ಯಾವ ಮಣ್ಣಿನಿಂದ ಮಾಡಿದ? ಈ ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾ ಹೇಳುತ್ತಾರೆ: “ಆತ್ಮಮಾಯಾಯಾ” ಎಂದು. ಅಂದರೆ ಭಗವಂತನ ಅಧೀನವಾಗಿರುವ ಜಡಪ್ರಕೃತಿಯನ್ನು ಉಪಾದಾನ ಕಾರಣವಾಗಿಟ್ಟುಕೊಂಡು ಈ ಜಗತ್ತನ್ನು ಭಗವಂತ ಸೃಷ್ಟಿಮಾಡಿದ. ಈ ಜಡಪ್ರಕೃತಿ ಎನ್ನುವುದು ಕಾರ್ಯ-ಕಾರಣ ರೂಪ.  ಸೂಕ್ಷ್ಮರೂಪದಿಂದಲೇ ಸ್ಥೂಲ ರೂಪದ ಸೃಷ್ಟಿ.
ಈ ಪ್ರಪಂಚ ಮೊದಲು ಗುಣತ್ರಯಾತ್ಮಕವಾಗಿದ್ದು, ಏನೂ ಕಾಣಿಸುತ್ತಿರಲಿಲ್ಲ. ನಂತರ ಅದರ ವಿಕಾರದಿಂದ ಮಹತತ್ತ್ವ ಸೃಷ್ಟಿಯಾಯಿತು. ನಂತರ ಪಂಚಭೂತಗಳ ಸೃಷ್ಟಿಯಾಯಿತು; ಪಂಚಭೂತಗಳಿಂದ ಪ್ರಪಂಚ ಸೃಷ್ಟಿಯಾಯಿತು. ಈ ರೀತಿ ಕಣ್ಣಿಗೆ ಕಾಣುವ ಬೃಹತ್ ವಿಶ್ವ ನಿರ್ಮಾಣವಾಯಿತು. ಒಂದು ವಸ್ತು ಇನ್ನೊಂದು ವಸ್ತುವಿಗೆ ಕಾರ್ಯವಾದರೆ, ಅದೇ ವಸ್ತು ಮತ್ತೊಂದು ವಸ್ತುವಿಗೆ ಕಾರಣವಾಗಿರುತ್ತದೆ. ಆದರೆ ಗುಣತ್ರಯಗಳು ಎಲ್ಲಾ ವಸ್ತುಗಳಿಗೂ ಮೂಲ ಕಾರಣ. ಹೀಗೆ ಒಂದು ಕಾರ್ಯ, ಆ ಕಾರ್ಯದಿಂದ ಇನ್ನೊಂದು ಕಾರ್ಯ, ಹೀಗೆ ಎಲ್ಲವೂ ಕಾರ್ಯ-ಕಾರಣವಾಗಿ ಬೆಳೆಯುತ್ತಾ ಇಡೀ ಬ್ರಹ್ಮಾಂಡ ನಿರ್ಮಾಣವಾಯಿತು. ಜಡಪ್ರಕೃತಿ ಎನ್ನುವುದು ಪ್ರಪಂಚ ಸೃಷ್ಟಿಗೆ ಉಪಾದಾನ ಕಾರಣವಾಯಿತು.  ಜಡಪ್ರಕೃತಿಯನ್ನು ಉಪಾದಾನ ಕಾರಣವಾಗಿಟ್ಟುಕೊಂಡು, ತನ್ನ ಇಚ್ಛೆ, ಸಾಮರ್ಥ್ಯ ಮತ್ತು ಜ್ಞಾನದಿಂದ ಭಗವಂತ ಈ ಪ್ರಪಂಚ ನಿರ್ಮಾಣ ಮಾಡಿದ. ಇಂತಹ ಭಗವಂತನಿಗೆ ಈ ತ್ರಿಗುಣಗಳ ಸ್ಪರ್ಶವೇ ಇಲ್ಲ. ಆತ ತ್ರಿಗುಣಾತೀತ ಎನ್ನುವುದನ್ನು ಈ ಶ್ಲೋಕ ಸ್ಪಷ್ಟವಾಗಿ ಹೇಳುತ್ತದೆ.

ತಯಾ ವಿಲಸಿತೇಷ್ವೇಷು ಗುಣೇಷು ಗುಣವಾನಿವ ।
ಅಂತಃಪ್ರವಿಷ್ಟ ಆಭಾತಿ ವಿಜ್ಞಾನೇನ ವಿಜೃಂಭಿತಃ                      ॥೩೨॥

ಇಲ್ಲಿ “ಈ ಪ್ರಪಂಚ ಎನ್ನುವುದು ಪ್ರಕೃತಿಯ ವಿಲಾಸ” ಎಂದಿದ್ದಾರೆ. ‘ವಿಲಾಸ’ ಎನ್ನುವುದು ಸಾಖ್ಯಸಿದ್ಧಾಂತದ ನೆನಪನ್ನು ಕೊಡುವ ಶಬ್ದ. ವಿಲಾಸ ಎಂದರೆ ‘ವಿಚಾರ’ ಎಂದರ್ಥ. ಸಾಂಖ್ಯದಲ್ಲೊಂದು ಮಾತಿದೆ. ಅಲ್ಲಿ ಹೇಳುತ್ತಾರೆ: “ಈ ಪ್ರಕೃತಿ ಎನ್ನುವುದು ನೃತ್ಯಗಾರ್ತಿ ಇದ್ದ ಹಾಗೆ ಹಾಗೂ ಪುರುಷ ಒಬ್ಬ ಪ್ರೇಕ್ಷಕನಂತೆ; ಪುರುಷನ ಮುಂದೆ ನಾಟ್ಯವಾಡಿ ಅವನನ್ನು ಮರುಳುಗೊಳಿಸುವುದು ಪ್ರಕೃತಿ” ಎಂದು.  ಪ್ರಕೃತಿ ನಾನಾ ವಿಲಾಸಗಳಿಂದ ನಮ್ಮನ್ನು ಮೋಹಗೊಳಿಸುತ್ತದೆ. ಜಡಪ್ರಕೃತಿಗೆ ಸ್ವಯಂ ಕರ್ತೃತ್ವವಿಲ್ಲದ ಕಾರಣ ಭಗವಂತ ಈ ಪ್ರಪಂಚದಲ್ಲಿ ಹಾಗೂ ಪ್ರತಿಯೊಬ್ಬ ಜೀವನೊಳಗೆ ತುಂಬಿ ಈ ಕ್ರಿಯೆಯನ್ನು ಮಾಡಿಸುತ್ತಾನೆ. ಹೀಗೆ ತ್ರಿಗುಣಾತ್ಮಕವಾದ ಪ್ರಪಂಚದಲ್ಲಿ ಹಾಗೂ ತ್ರಿಗುಣಾತ್ಮಕವಾದ ದೇಹದಲ್ಲಿ ಭಗವಂತ ತುಂಬಿರುವುದರಿಂದ ನಮಗೆ ಅವನೂ ಕೂಡಾ ಗುಣಬದ್ಧ ಎಂದು ಕಾಣುತ್ತದೆ. ಆದರೆ ಭಗವಂತನ ಜ್ಞಾನದ ವಿಜೃಂಭಣೆಯಲ್ಲಿ ತ್ರಿಗುಣದ ಸ್ಪರ್ಶವೇ ಇರುವುದಿಲ್ಲ.

ಅಸೌ ಗುಣಮಯೈರ್ಭಾವೈರ್ಭೂತಸೂಕ್ಷ್ಮೇಂದ್ರಿಯಾತ್ಮಭಿಃ ।
ಸ್ವನಿರ್ಮಿತೇಷು ನಿರ್ವಿಷ್ಟೋ ಭುಂಕ್ತೇ ಭೂತೇಷು ತದ್ಗುಣಾನ್      ॥೩೪॥

ಭಗವಂತ ಈ ತ್ರಿಗುಣಾತ್ಮಕ ಪ್ರಪಂಚವನ್ನು ತಾನೇ ನಿರ್ಮಾಣ ಮಾಡಿ, ಅದರೊಳಗೆ ಪ್ರವೇಶಮಾಡಿ, ಆನಂದಪಾನ ಮಾಡುತ್ತಿದ್ದಾನೆ. ಆದರೂ ಕೂಡಾ ಅವನಿಗೆ ಈ ತ್ರಿಗುಣಗಳ ಸ್ಪರ್ಶವಿಲ್ಲ. ಆತ ತ್ರಿಗುಣಗಳಿಂದ ನಿರ್ಮಾಣವಾದ ಪಂಚಭೂತಗಳು, ಪಂಚತನ್ಮಾತ್ರೆಗಳು ಹಾಗೂ ಮನಸ್ಸು ಇವುಗಳಿರುವ ದೇಹವನ್ನು ನಿರ್ಮಾಣಮಾಡಿ, ಅದರೊಳಗೆ ನಿರ್ವಿಷ್ಟನಾಗಿದ್ದಾನೆ. ಇಲ್ಲಿ ‘ನಿರ್ವಿಷ್ಟ’ ಎಂದರೆ ಕೇವಲ ನೆಲೆಸುವುದಲ್ಲ, ಆನಂದವಾಗಿ ನೆಲೆಸುವುದು. ಈ ಆನಂದಕ್ಕೆ ಯಾವುದೇ ದೋಷದ ಸ್ಪರ್ಶವಿಲ್ಲ. ಹೀಗೆ ಪ್ರತಿಯೊಬ್ಬರ ಒಳಗೂ ತ್ರೈಗುಣ್ಯವರ್ಜಿತನಾಗಿ ನೆಲೆಸಿದ್ದಾನೆ ಆ ಭಗವಂತ.  

ಭಾವಯನ್ನೇಷ ಸತ್ತ್ವೇನ ಲೋಕಾನ್ ವೈ ಲೋಕಭಾವನಃ ।
ಲೀಲಾವತಾರಾನು ಗತಸ್ತಿರ್ಯಙ್ನರಸುರಾದಿಷು                       ॥೩೫॥

ಭಗವಂತ ಪ್ರಪಂಚ ಸೃಷ್ಟಿ ಮಾಡಿ ಅದರೊಳಗೆ ಸೇರಿಕೊಂಡ. ನಂತರ ಪ್ರತಿಯೊಂದು ಜೀವರೊಳಗೂ ಬಿಂಬರೂಪನಾಗಿ ತುಂಬಿದ. ಇಷ್ಟೇ ಅಲ್ಲದೆ ಮತ್ತೆ ನಮ್ಮ ಕಣ್ಣೆದುರಿಗೆ ಅವತಾರರೂಪಿಯಾಗಿ ಧರೆಗಿಳಿದು ಬಂದ. ಸರ್ವಸಮರ್ಥನಾದ ಭಗವಂತ ಏಕೆ ಅವತಾರ ತಾಳಿ ಭೂಮಿಗೆ ಇಳಿದು ಬರುತ್ತಾನೆ ಎನ್ನುವ ಪ್ರಶ್ನೆಗೆ ಉಗ್ರಶ್ರವಸ್ ಇಲ್ಲಿ ಉತ್ತರಿಸಿದ್ದಾರೆ.  ಈ ಭೂಮಿಯಲ್ಲಿ ಕೆಲವೊಮ್ಮೆ ಗುಣತ್ರಯಗಳ ಸಂಘರ್ಷವಾಗುತ್ತದೆ. ಈ ರೀತಿ ಸಂಘರ್ಷದಲ್ಲಿ ತಮೋಗುಣದ ಪ್ರಭಾವ ಹೆಚ್ಚಿ, ದುಷ್ಟಶಕ್ತಿಗಳ ಕೈವಾಡ ಮೇಲಾದಾಗ, ಸತ್ತ್ವಗುಣವನ್ನು ಮರಳಿ ಸ್ಥಾಪಿಸಿ ಜಗತ್ತನ್ನು ಉಳಿಸುವುದಕ್ಕಾಗಿ ಭಗವಂತ ಇಳಿದುಬರುತ್ತಾನೆ. ಸರ್ವಸಮರ್ಥನಾದ ಭಗವಂತ ಧರ್ಮರಕ್ಷಣೆಯನ್ನು ಅವತಾರ ತಾಳದೇ ಮಾಡಬಲ್ಲ. ಆದರೆ ಆತ ಅವತಾರ ತಾಳುವುದು ಭಕ್ತರಿಗೆ  ತನ್ನ ಲೀಲೆಯನ್ನು ತೋರುವುದಕ್ಕಾಗಿ. ಆತ ತಾಳುವ ಅವತಾರದಿಂದ ಕಣ್ಣಿಗೆ ಕಾಣದ ಭಗವಂತನನ್ನು ವಿಧವಿಧವಾಗಿ ಉಪಾಸನೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ದೇವಲೋಕದಲ್ಲಿ ಆವಿರ್ಭಾವನಾಗಿ, ಪ್ರಾಣಿಗಳಲ್ಲಿ ಆವಿರ್ಭಾವನಾಗಿ, ನರರೂಪನಾಗಿ  ತನ್ನ ಲೀಲೆಯನ್ನು ಭಕ್ತರಿಗಾಗಿ ಬಿತ್ತರಿಸುತ್ತಾನೆ ಭಗವಂತ. ಆತನ ವಿವಿಧ ಅವತಾರದ ವಿವರವನ್ನು ಮುಂದಿನ ಅಧ್ಯಾಯದಲ್ಲಿ ಕಾಣಬಹುದು.

॥ಇತಿ ಶ್ರೀಮದ್ಭಾಗವತೇ ಮಹಾ ಪುರಾಣೇ ಪ್ರಥಮಸ್ಕಂಧೇ ದ್ವಿತಿಯೋಧ್ಯಾಯಃ॥

ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಎರಡನೇ ಅಧ್ಯಾಯ ಮುಗಿಯಿತು.


*******

Sunday, January 6, 2013

Shrimad BhAgavata in Kannada -Skandha-01 -Ch-02(06)


ಸತ್ತ್ವಂ ರಜಸ್ತಮ ಇತಿ ಪ್ರಕೃತೇರ್ಗುಣಾಸ್ತೈರ್ಯುಕ್ತಃ ಪರಃ ಪುರುಷ ಏಕ ಇಹಾಸ್ಯ ಧತ್ತೇ ।
ಸ್ಥಿತ್ಯಾದಯೇ ಹರಿವಿರಿಂಚಿಹರೇತಿ ಸಂಜ್ಞಾಃ ಶ್ರೇಯಾಂಸಿ ತತ್ರ ಖಲು ಸತ್ತ್ವತನೌ ನೃಣಾಂ ಸ್ಯುಃ॥೨೪॥

ಈ ಹಿಂದೆ ‘ಉಪಾಸನೆಯಲ್ಲಿ ನಮ್ಮ ಮನಸ್ಸು ರಜಸ್ಸು-ತಮಸ್ಸನ್ನು ಮೀರಿ ಸತ್ತ್ವಗುಣದಲ್ಲೇ ನೆಲೆ ನಿಲ್ಲಬೇಕು’ ಎನ್ನುವ ವಿವರಣೆಯನ್ನು ನೋಡಿದೆವು. ಅದನ್ನೇ ಇನ್ನೂ ವಿವರವಾಗಿ ಈ ಶ್ಲೋಕದಲ್ಲಿ ವಿವರಿಸಲಾಗಿದೆ. ನಮಗೆ ತಿಳಿದಿರುವಂತೆ ಈ ಪ್ರಪಂಚ ತ್ರಿಗುಣಾತ್ಮಕವಾದುದು. ಪ್ರಾಕೃತ ಪ್ರಪಂಚದಲ್ಲಿ ಸತ್ತ್ವ-ರಜಸ್ಸು-ತಮಸ್ಸು ಇವು ಒಂದನ್ನು ಬಿಟ್ಟು ಒಂದಿಲ್ಲ. ಭಗವಂತ ಈ ಮೂರು ಗುಣಗಳನ್ನೇ ಬಳಸಿ ಸೃಷ್ಟಿ-ಸ್ಥಿತಿ-ಸಂಹಾರವನ್ನು ಮಾಡುತ್ತಾನೆ. ಭಗವಂತ ಪ್ರಪಂಚ ನಿಯಮನ(ಸ್ಥಿತಿ)ವನ್ನು ಸತ್ತ್ವಗುಣವನ್ನು ಆಧಾರವಾಗಿಟ್ಟುಕೊಂಡು ಸ್ವರೂಪತಃ ವಿಷ್ಣು(ಹರಿ) ರೂಪದಲ್ಲಿ ಮಾಡಿದರೆ, ಸೃಷ್ಟಿ ಮಾಡುವಾಗ ರಜೋಗುಣವನ್ನು  ಆಧಾರವಾಗಿಟ್ಟುಕೊಂಡು, ಚತುರ್ಮುಖಬ್ರಹ್ಮನ(ವಿರಂಚ) ಅಂತರ್ಯಾಮಿಯಾಗಿ ಸೃಷ್ಟಿ ಮಾಡುತ್ತಾನೆ. ಅದೇ ರೀತಿ ಸಂಹಾರ ಕಾರ್ಯವನ್ನು ತಮೋಗುಣವನ್ನು ಆಧಾರವಾಗಿಟ್ಟುಕೊಂಡು, ಶಿವನ(ಹರನ) ಅಂತರ್ಯಾಮಿಯಾಗಿ ನಿಂತು ನಿರ್ವಹಿಸುತ್ತಾನೆ.
ಈ ಶ್ಲೋಕವನ್ನು ಮೇಲ್ನೋಟದಲ್ಲಿ ನೋಡಿದರೆ ಇಲ್ಲಿ ಹರಿ-ವಿರಿಂಚ-ಹರ ಎನ್ನುವ ಮೂರು ಸಂಜ್ಞೆಗಳನ್ನು ಒಬ್ಬನೇ ಭಗವಂತ ಧರಿಸುತ್ತಾನೆ ಎಂದು ಹೇಳಿದಂತೆ ಕಾಣುತ್ತದೆ. ಆದರೆ ಅದು ಈ ಶ್ಲೋಕದ ಒಳಾರ್ಥವಲ್ಲ. ಈ ಶ್ಲೋಕದ ಅರ್ಥ ವಿಶೇಷ ನೋಡುವಾಗ ನಾವು ಈ ಹಿಂದೆ ಹೇಳಿದ ಮಾತನ್ನು ನೆನಪಿಸಿಕೊಂಡು ಅದಕ್ಕನುಗುಣವಾಗಿಯೇ ಅರ್ಥಚಿಂತನೆ ಮಾಡಬೇಕು.  ಈ ಹಿಂದೆ ಹೇಳಿದಂತೆ:  “ವೇದ್ಯಂ ವಾಸ್ತವಮತ್ರ ವಸ್ತು ಶಿವದಂ”: ಎಂದರೆ ಆಯಾ ವಸ್ತುವಿನ ಒಳಗೆ ಆಯಾ ರೂಪದಲ್ಲಿ ಅಂತರ್ಯಾಮಿಯಾಗಿ ಭಗವಂತ ನೆಲೆಸಿ ನಿಯಮಿಸುತ್ತಾನೆ. ಹಾಗಾಗಿ ಬ್ರಹ್ಮನೊಳಗೆ ಬ್ರಹ್ಮನಾಮಕನಾಗಿ, ಶಿವನೊಳಗೆ ಶಿವ ನಾಮಕನಾಗಿ ಭಗವಂತನಿದ್ದಾನೆ. ಇದನ್ನು ವಾಮನಪುರಾಣದಲ್ಲಿ ಸ್ಪಷ್ಟವಾಗಿ ಹೀಗೆ ಹೇಳಿದ್ದಾರೆ: “ಬ್ರಹ್ಮಣಿ ಬ್ರಹ್ಮರೂಪೋSಸೌ ಶಿವರೂಪೀ ಶಿವೇ ಸ್ಥಿತಃ”. ಭಾಗವತದಲ್ಲೇ ಮುಂದೆ ಈ ಬಗ್ಗೆ ವಿವರಣೆ ಬರುತ್ತದೆ. ಆದ್ದರಿಂದ ಭಗವಂತ ಬ್ರಹ್ಮನೊಳಗಿದ್ದು ಬ್ರಹ್ಮನಾಮಕನಾಗಿ ಸೃಷ್ಟಿ ಮಾಡಿದರೆ, ಶಿವನೊಳಗೆ ಶಿವನಾಮಕನಾಗಿ ಸಂಹಾರ ಮಾಡುತ್ತಾನೆ ಮತ್ತು ಸ್ವರೂಪಭೂತವಾದ ವಿಷ್ಣುನಾಮಕನಾಗಿ ಪಾಲನೆ ಮಾಡುತ್ತಾನೆ.
ಈ ಜಗತ್ತು ತ್ರಿಗುಣಗಳ ಆಲಂಬನೆಯಲ್ಲೇ ನಿಂತಿದ್ದರೂ ಸಹ, ಒಬ್ಬ ಸಾಧಕ, ಸಾಧನೆಯ ಹಾದಿಯಲ್ಲಿ ಸತ್ತ್ವಪ್ರದನಾಗಿ ಸಾಧನೆ ಮಾಡಿದರೆ ಮಾತ್ರ ಶ್ರೇಯಸ್ಸು. ಇದನ್ನು ಬಿಟ್ಟು ರಜಸ್ಸು-ತಮಸ್ಸಿನ ಮಾರ್ಗದಲ್ಲಿ ಸಾಗಿದರೆ ಎಂದೆಂದಿಗೂ ಉದ್ಧಾರವಿಲ್ಲ. ಹೀಗೆ ಸಾತ್ತ್ವಿಕತೆಯೇ ಸಾಧನೆಯ ಹಾದಿಯಲ್ಲಿ ಮುಖ್ಯವಾಗುತ್ತದೆ.

ಪಾರ್ಥಿವಾದ್ ದಾರುಣೋ ಧೂಮಸ್ತಸ್ಮಾದಗ್ನಿಸ್ತ್ರಯೀಮಯಃ ।
ತಮಸಸ್ತು ರಜಸ್ತಸ್ಮಾತ್ ಸತ್ತ್ವಂ ಯದ್ ಬ್ರಹ್ಮದರ್ಶನಮ್          ॥೨೫॥

ಇಲ್ಲಿ ಸತ್ತ್ವ, ರಜಸ್ಸು ಮತ್ತು ತಮಸ್ಸನ್ನು ಕ್ರಮವಾಗಿ ಬೆಂಕಿ, ಹೊಗೆ ಮತ್ತು ಕಟ್ಟಿಗೆಗೆ ಹೋಲಿಸಿದ್ದಾರೆ. ಕಟ್ಟಿಗೆ ತಮಸ್ಸಿನ ಪ್ರತೀಕ. ಅದು ಯಾವಾಗಲೂ ಕೆಳಕ್ಕೆಳೆಯುತ್ತದೆ. ನಂತರ ಹೊಗೆ. ಇದು ರಜಸ್ಸಿನ ಪ್ರತೀಕ. ಇದು ಕಟ್ಟಿಗೆಯಂತೆ ಕೆಳಕ್ಕೆಳೆಯದಿದ್ದರೂ ಕೂಡಾ, ಎಲ್ಲೆಂದರಲ್ಲಿ ಹಬ್ಬುತ್ತದೆ. ಕಟ್ಟಿಗೆ ಕತ್ತಲೆಯ ಪ್ರತೀಕವಾದರೆ, ಹೊಗೆ ಬೆಳಕನ್ನು ಮುಚ್ಚುವ ರಜಸ್ಸಿನ ಪ್ರತೀಕ. ಆದರೆ ಕಟ್ಟಿಗೆ ಮತ್ತು ಹೊಗೆಯಿಂದ ಹುಟ್ಟುವ, ಸದಾ ಊರ್ಧ್ವಮುಖವಾಗಿರುವ  ಬೆಂಕಿ ಸತ್ತ್ವದ ಪ್ರತೀಕ. ಇದು ಕಟ್ಟಿಗೆ(ತಮಸ್ಸು)ಯನ್ನು ಸುಟ್ಟು, ಹೊಗೆಯನ್ನು(ರಜಸ್ಸನ್ನು) ಮೀರಿ ಮೂಡಿಬರುವ ಬೆಳಕು. ಪ್ರಪಂಚದಲ್ಲಿ ನಮ್ಮ ಸಾಧನೆ ಕೂಡಾ ಹೀಗೇ ಇರಬೇಕು. ನಾವು ಎಚ್ಚರಿಕೆಯಿಂದ ರಜಸ್ಸು-ತಮಸ್ಸನ್ನು ಮೀರಿ ಸತ್ತ್ವದಲ್ಲೇ ಮನಸ್ಸು ನಿಲ್ಲುವಂತೆ ಪ್ರಯತ್ನಮಾಡಿ ಸಾಧನೆ ಮಾಡಿದರೆ ಭಗವಂತನ ದರ್ಶನ ಸಾಧ್ಯವಾಗುತ್ತದೆ.

Shrimad BhAgavata in Kannada -Skandha-01 -Ch-02(05)


ಶುಶ್ರೂಷೋಃ ಶ್ರದ್ದಧಾನಸ್ಯ ವಾಸುದೇವಕಥಾರತಿಃ  ।
ಸ್ಯಾನ್ಮಹತ್ಸೇವಯಾ ವಿಪ್ರಾಃ ಪುಣ್ಯತೀರ್ಥನಿಷೇವಣಾತ್            ॥೧೭॥

ಇಂದು ಸಾಮಾನ್ಯವಾಗಿ ಭಗವಂತನಲ್ಲಿ ಶ್ರದ್ಧೆಯುಳ್ಳ ಹೆಚ್ಚಿನವರನ್ನು ಕಾಡುವ ಒಂದು ಸರ್ವೇಸಾಮಾನ್ಯ ಸಮಸ್ಯೆ ಏನೆಂದರೆ: ಶಾಸ್ತ್ರಶ್ರವಣ ಮಾಡಬೇಕು, ಭಗವಂತನ ಕುರಿತು ಕೇಳಬೇಕು ಎನ್ನುವ ಬಯಕೆ ಇರುತ್ತದೆ, ಆದರೆ  ಕೇಳುವಾಗ ಆಸಕ್ತಿ ಬರುವುದಿಲ್ಲ! ಈ ರೀತಿ ಸಮಸ್ಯೆ ಇದ್ದಾಗ ಹೇಗೆ ಆಸಕ್ತಿ ಬೆಳೆಸಿಕೊಳ್ಳುವುದು ಎನ್ನುವುದು ಇಲ್ಲಿರುವ ಪ್ರಶ್ನೆ. ಇದು ಬಹಳ ಮಹತ್ವವಾದ ಪ್ರಶ್ನೆ. ಈ ಪ್ರಶ್ನೆಗೆ ಮೇಲಿನ ಶ್ಲೋಕದಲ್ಲಿ ಉತ್ತರವಿದೆ.  ನಮಗೆ ತಿಳಿದಂತೆ ನಮ್ಮ ಮನಸ್ಸಿಗೆ ಸ್ವಂತ ನಿರ್ಧಾರವಿಲ್ಲ. ಅದು ನಾವು ಯಾವುದನ್ನು ತರಬೇತಿ ಮಾಡಿದೆವೋ ಅದನ್ನು ಮೆಚ್ಚಿಕೊಳ್ಳುತ್ತದೆ. ಹೀಗಾಗಿ ಮನಸ್ಸಿನಲ್ಲಿ ಆಸಕ್ತಿ ಹುಟ್ಟಿಸಬೇಕಾದರೆ ನಿರಂತರ ಶ್ರವಣ ಅಗತ್ಯ. ಕೇಳಿ-ಕೇಳಿಯೇ ಆಸಕ್ತಿ ಹುಟ್ಟಬೇಕು. ಆದರೆ ಇಲ್ಲಿ ಇನ್ನೊಂದು ಸಮಸ್ಯೆ ಇದೆ. ಕೆಲವೊಮ್ಮೆ  ಕೇಳುವುದರಿಂದಲೇ  ವೇದಾಂತ ಬೇಡ ಅನಿಸಬಹುದು! ಇದು ಬಹಳ ಅಪಾಯಕಾರಿ. ಅದಕ್ಕಾಗಿ ಇಲ್ಲಿ ಹೇಳುತ್ತಾರೆ: “ಸ್ಯಾನ್ಮಹತ್ಸೇವಯಾ ವಿಪ್ರಾಃ ಪುಣ್ಯತೀರ್ಥನಿಷೇವಣಾತ್” ಎಂದು. ಅಂದರೆ ನಮ್ಮಲ್ಲಿ ನಿರಂತರ ಆಸಕ್ತಿ ಬೆಳೆಯಲಿಕ್ಕಾಗಿ ನಾವು ಪುಣ್ಯತೀರ್ಥಗಳ ಸ್ನಾನ-ಪಾನ ಮಾಡಬೇಕು ಮತ್ತು ಮಹಾತ್ಮರಾದ ಜ್ಞಾನಿಗಳ ಸೇವೆ ಮಾಡಬೇಕು. ಈ ರೀತಿ ಮಾಡುವುದರಿಂದ ಭಗವಂತನ ಬಗೆಗೆ ಮತ್ತು ಭಗವಂತನ ಕಥೆಯ ಬಗ್ಗೆ ಆಸಕ್ತಿ, ಅಭಿರುಚಿ ಹುಟ್ಟುತ್ತದೆ.
ಇಲ್ಲಿ ತೀರ್ಥ ಎಂದರೆ ನದಿಗಳೂ ಹೌದು, ಶಾಸ್ತ್ರಗಳೂ ಹೌದು. ಅಷ್ಟೇ ಅಲ್ಲ, ದೇವಸ್ಥಾನಗಳಲ್ಲಿ ಕೊಡುವ ಪುಣ್ಯದ್ರವ ಕೂಡಾ ತೀರ್ಥ. ಪುಣ್ಯನದಿಗಳಲ್ಲಿ ಮುಳುಗಿ ಸ್ನಾನ ಮಾಡುವುದರಿಂದ ಕೇವಲ ನಮ್ಮ ಬಾಹ್ಯ ಕೊಳೆ ಮಾತ್ರ ಹೋಗುವುದಲ್ಲ, ನಮ್ಮ ಮನಸ್ಸಿನ ಮಲೀನತೆಯನ್ನು ತೊಳೆದು ಅಲ್ಲಿ ಭಗವಂತನ ಬಗೆಗೆ ಆಸಕ್ತಿ ಹುಟ್ಟಿಸುವ ಅಪೂರ್ವ ಶಕ್ತಿ ತೀರ್ಥದಲ್ಲಿರುವ ಸಾತ್ತ್ವಿಕ ಕಂಪನದಲ್ಲಿದೆ.

ಶೃಣ್ವತಾಂ ಸ್ವಕಥಾಂ ಕೃಷ್ಣಃ ಪುಣ್ಯಶ್ರವಣಕೀರ್ತನಃ ।
ಹೃದ್ಯಂತಃಸ್ಥೋ ಹ್ಯಭದ್ರಾಣಿ ವಿಧುನೋತಿ ಸುಹೃತ್ ಸತಾಮ್     ॥೧೮॥

ಭಗವಂತನ ಕೀರ್ತನ, ಕಥಾಶ್ರವಣ ಎಲ್ಲಿ ನಡೆಯುತ್ತದೋ ಅಲ್ಲಿ ಭಗವಂತನ ಸನ್ನಿಧಾನವಿರುತ್ತದೆ. ಯಾರ ಶ್ರವಣ ಕೀರ್ತನದಿಂದ ನಾವು ಪಾವನರಾಗುತ್ತೇವೋ ಅಂತಹ ‘ಕೃಷ್ಣ’ ಬಂದು ನಮ್ಮ ಹೃದಯದಲ್ಲಿ ನೆಲೆಸಿಬಿಡುತ್ತಾನೆ. ಸಜ್ಜನರ ಪ್ರಿಯ ಸಖನಾದ ಭಗವಂತ ನಮ್ಮೊಳಗಿದ್ದು, ನಮ್ಮೊಳಗಿನ ಕೊಳೆಯನ್ನು ಸ್ವಚ್ಛಗೊಳಿಸುತ್ತಾನೆ!  

ನಷ್ಟಪ್ರಾಯೇಷ್ವಭದ್ರೇಷು ನಿತ್ಯಂ ಭಾಗವತಸೇವಯಾ ।
ಭಗವತ್ಯುತ್ತಮಶ್ಲೋಕೇ ಭಕ್ತಿರ್ಭವತಿ ನೈಷ್ಠಿಕೀ                          ॥೧೯॥
                                                            
ಭಗವಂತನ ಕಥಾಶ್ರವಣ, ಕೀರ್ತನ ಮತ್ತು ಭಗವದ್ಭಕ್ತರ ಸೇವೆಯಿಂದ, ಎಲ್ಲಾ  ಅಭದ್ರ-ಅಮಂಗಲಗಳೂ ತೊಳೆದುಹೋಗುತ್ತವೆ. ಭಾಗವತ ಗ್ರಂಥದ ನಿರಂತರ ಸೇವನೆಯಿಂದ, ಭಗವಂತ ಹೃದಯದಲ್ಲಿ ಸನ್ನಿಹಿತನಾಗುವುದರಿಂದ, ನಾವು ನಮ್ಮೆಲ್ಲಾ ಕೊಳೆಗಳನ್ನು ತೊಳೆದುಕೊಳ್ಳುತ್ತೇವೆ ಮತ್ತು ಅದರಿಂದ ನೈಷ್ಠಿಕ(ಅಚಲ) ಭಕ್ತಿ ಬೆಳೆಯುತ್ತದೆ. ಮನಸ್ಸು ಅಛೇದ್ಯ-ಅಭೇದ್ಯವಾಗಿ ಭಗವಂತನಲ್ಲಿ ಸ್ಥಿರಗೊಳ್ಳುತ್ತದೆ.

ತದಾ ರಜಸ್ತಮೋಭಾವಾಃ ಕಾಮಲೋಭಾದಯಶ್ಚ ಯೇ ।
ಚೇತ ಏತೈರನಾವಿದ್ಧಂ ಸ್ಥಿತಂ ಸತ್ತ್ವೇ ಪ್ರಸೀದತಿ                     ॥೨೦॥

ಮನಸ್ಸು ಸ್ವಚ್ಛವಾದಾಗ ಮನಸ್ಸಿನಲ್ಲಿರುವ ರಜಸ್ಸು-ತಮಸ್ಸು ತಮ್ಮ ಸತ್ವವನ್ನು ಕಳೆದುಕೊಳ್ಳುತ್ತವೆ. ಇದರಿಂದಾಗಿ ರಜಸ್ಸು ತಮಸ್ಸಿನಿಂದಾಗಿ ಬರುವ ಮಾನಸಿಕ ವಿಕಾರಗಳಾದ ಕಾಮ-ಕ್ರೋಧ-ಲೋಭಗಳು ಮನಸ್ಸಿಗೆ ಅಂಟುವುದಿಲ್ಲ. ಮನಸ್ಸು ಸ್ಥಿರವಾಗಿ ಸತ್ತ್ವಗುಣದಲ್ಲಿ/ಭಗವಂತನಲ್ಲಿ ನೆಲೆಸಿಬಿಡುತ್ತದೆ. ನಮಗೆ ಒಮ್ಮೆ ಈ ಸತ್ತ್ವವಾದ ಬೆಳಕಿನ ಅನುಭವವಾದಾಗ, ಮುಂದೆಂದೂ ರಜಸ್ಸು-ತಮಸ್ಸಿನ ಕತ್ತಲೆ ಬೇಡವೇ ಬೇಡ ಎನಿಸುತ್ತದೆ.

ಏವಂ ಪ್ರಸನ್ನಮನಸೋ ಭಗವದ್ಭಕ್ತಿಯೋಗತಃ ।
ಭಗವತ್ತತ್ತ್ವವಿಜ್ಞಾನಂ ಮುಕ್ತಸಂಗಸ್ಯ ಜಾಯತೇ                      ॥೨೧॥

ಮನಸ್ಸು ಪ್ರಸನ್ನವಾದಾಗ ನಮ್ಮ ಮುಖ ಅರಳುತ್ತದೆ.  ಈ ರೀತಿ ಪ್ರಸನ್ನಚಿತ್ತರಾದವರನ್ನು ನೋಡುವುದೂ ಒಂದು ಆನಂದದ ಅನುಭವ. ಪ್ರಸನ್ನವಾದ ಮನಸ್ಸಿಗೆ ಭಗವದ್ ತತ್ತ್ವದ ಅರಿವು ಉಂಟಾಗುತ್ತದೆ. ಜ್ಞಾನದಿಂದ ಭಕ್ತಿ ಮತ್ತು ಭಕ್ತಿಯಿಂದ ವಿಶಿಷ್ಠಜ್ಞಾನ. ಈ ವಿಶಿಷ್ಠಜ್ಞಾನವೇ ಭಗವಂತನ ಸಂಗ-ಸಾಧನವಾದ ಮೊಕ್ಷಮಾರ್ಗ.

ಭಿದ್ಯತೇ ಹೃದಯಗ್ರಂಥಿಶ್ಛಿದ್ಯಂತೇ ಸರ್ವಸಂಶಯಾಃ ।
ಕ್ಷೀಯಂತೇ ಚಾಸ್ಯ ಕರ್ಮಾಣಿ ದೃಷ್ಟ ಏವಾತ್ಮನೀಶ್ವರೇ              ॥೨೨॥

ಭಗವಂತನನ್ನು ನಮ್ಮ ಅಂತರಂಗದಲ್ಲಿ ಹೇಗೆ ಕಾಣಬೇಕು ಎನ್ನುವುದನ್ನು ಈ ಶ್ಲೋಕ ವಿವರಿಸುತ್ತದೆ. ಭಾಗವತದಲ್ಲಿನ ಈ ಶ್ಲೋಕ ವೇದದಲ್ಲಿಯೂ ಬಂದಿದೆ. ಮುಂಡಕ ಉಪನಿಷತ್ತಿನಲ್ಲಿ ಹೇಳುವಂತೆ:

ಭಿದ್ಯತೇ ಹೃದಯಗ್ರಂಥಿಶ್ಛಿದ್ಯಂತೇ ಸರ್ವಸಂಶಯಾಃ |
ಕ್ಷೀಯಂತೇ ಚಾಸ್ಯ ಕರ್ಮಾಣಿ ತಸ್ಮಿನ್ ದೃಷ್ಟೇ ಪರಾವರೇ ||೨-೨-೯||

ವೇದದಲ್ಲಿ  “ತಸ್ಮಿನ್ ದೃಷ್ಟೇ ಪರಾವರೇ” ಎಂದರೆ ಇಲ್ಲಿ “ದೃಷ್ಟ ಏವಾತ್ಮನೀಶ್ವರೇ” ಎಂದಿದ್ದಾರೆ. ನಾವು ನಮ್ಮ ಜೀವಸ್ವರೂಪದಲ್ಲಿ ಭಗವಂತನನ್ನು ಕಾಣಬೇಕು. ನಮ್ಮೊಳಗೆ ಬಿಂಬರೂಪನಾಗಿರುವ ನಮ್ಮ ಸ್ವಾಮಿಯನ್ನು ನಾವು ‘ಆತ್ಮಾ’ ಎಂದು ಉಪಾಸನೆ ಮಾಡಬೇಕು. ಇದನ್ನೇ ಬ್ರಹ್ಮಸೂತ್ರದಲ್ಲಿ ಈ ರೀತಿ ಹೇಳಲಾಗಿದೆ: “ಓಂ ಆತ್ಮೇತಿ ತೋಪಗಚ್ಚಂತಿ ಗ್ರಾಹಯಂತಿ ಚ ಓಂ  ||೩-೪೮೭ ||” ಎಂದು.  ಶ್ರುತಿಗಳಲ್ಲಿ ಹೇಳುವಂತೆ: “ಆತ್ಮಾ ವಾSರೇ ದೃಷ್ಟವ್ಯಃ ಶ್ರೋತವ್ಯೋ ಮನ್ತವ್ಯೋ ನಿದಿಧ್ಯಾಸಿತವ್ಯಃ”. ಇಲ್ಲಿ ‘ಆತ್ಮಾ’ ಎಂದರೆ ನಮ್ಮೊಳಗಿದ್ದು ನಮ್ಮನ್ನು ನಿಯಮಿಸುವ ಸರ್ವಶ್ರೇಷ್ಠವಸ್ತು; ನಮ್ಮೆಲ್ಲರ ಸ್ವಾಮಿ ಭಗವಂತ. ಜಗತ್ತಿನ ಎಲ್ಲಾ ಈಶ ಶಕ್ತಿಗಳಿಗೂ(ಬ್ರಹ್ಮಾದಿ ಸಕಲ ದೇವತೆಗಳಿಗೂ) ವರನಾದ, ಎಲ್ಲರನ್ನೂ ನಿಯಂತ್ರಿಸುವ ಪರಮೇಶ್ವರ ಭಗವಂತ ನಮ್ಮೆಲ್ಲರ ಅಂತರ್ಯಾಮಿ ಎಂದು ತಿಳಿದು ನಾವು ಉಪಾಸನೆ ಮಾಡಬೇಕು.
ಇಂತಹ ಬಿಂಬರೂಪಿ ಭಗವಂತನನ್ನು ನಾವು ನಮ್ಮ ಅಂತರಂಗದಲ್ಲಿ ಕಂಡಾಗ ನಮ್ಮ ಹೃದಯದಲ್ಲಿನ ಅಜ್ಞಾನದ ಗಂಟು ಒಡೆದು ಹೋಗಿ, ನಮ್ಮೆಲ್ಲಾ ಸಂಶಯಗಳೂ ಪೂರ್ಣವಾಗಿ ಪರಿಹಾರವಾಗುತ್ತದೆ. ಭಗವಂತನ ಅಂತರಂಗ ದರ್ಶನದಿಂದಾಗಿ, ಪ್ರರಾಬ್ಧಕರ್ಮವನ್ನು ಹೊರತುಪಡಿಸಿ ಇತರ ಎಲ್ಲಾ ಕರ್ಮಗಳು ನಾಶವಾಗಿ, ಕರ್ಮದ ಲೇಪದಿಂದ ತೊಡೆದುಕೊಂಡು ಜೀವ ಭಗವಂತನಲ್ಲಿ ನೆಲೆಗೊಳ್ಳುತ್ತದೆ.