Saturday, February 21, 2015

Shrimad BhAgavata in Kannada -Skandha-02-Ch-06(07)

ನ ಭಾರತೀ ಮೇSಙ್ಗ ಮೃಷೋಪಲಕ್ಷ್ಯತೇ ನ ಕರ್ಹಿಚಿನ್ಮೇ ಮನಸೋ ಮೃಷಾ ಗತಿಃ ।
ನ ಮೇ ಹೃಷೀಕಾಣಿ ಪತಂತ್ಯಸತ್ಪಥೇ ಯನ್ಮೇ ಹೃದೌತ್ಕಂಠ್ಯವತಾ ಧೃತೋ ಹರಿಃ  ॥೩೩॥

ನಾರದರಿಗೆ ಸೃಷ್ಟಿ ರಹಸ್ಯವನ್ನು ವಿವರಿಸುತ್ತಿರುವ ಚತುರ್ಮುಖ ಇಲ್ಲಿ ಒಂದು ರೋಚಕವಾದ ಮಾತನ್ನಾಡುತ್ತಾನೆ: “ನಾನೆಂದೂ ಹುಸಿ ನುಡಿಯುವುದಿಲ್ಲ ಮತ್ತು ನನ್ನ ನುಡಿ ಎಂದೂ ಹುಸಿ ಆಗುವುದಿಲ್ಲ”  ಎನ್ನುತ್ತಾನೆ ಚತುರ್ಮುಖ. ಸಾಮಾನ್ಯವಾಗಿ ನಾವು ಹಿಂದೆ ನಡೆದಿದ್ದನ್ನು ಕಷ್ಟಪಟ್ಟು ನಮ್ಮ ತಿಳುವಳಿಕೆಯ ಮಟ್ಟದಲ್ಲಿ ಸತ್ಯ ನುಡಿಯಬಹುದು. ಆದರೆ ಮುಂದಿನದನ್ನು ಸತ್ಯವಾಗಿಸುವುದು ನಮ್ಮ ಕೈಯಲ್ಲಿರುವುದಿಲ್ಲ. ಉದಾಹರಣೆಗೆ ನಾವು ಒಬ್ಬರಿಗೆ  “ಮುಂದೆ ಎಲ್ಲವೂ ಒಳ್ಳೆಯದಾಗುತ್ತದೆ” ಎನ್ನುತ್ತೇವೆ. ಆದರೆ ಅಲ್ಲಿ ಒಳ್ಳೆಯದಾಗದೇ ಕೆಟ್ಟದ್ದೂ ಆಗುವ ಸಾಧ್ಯತೆಗಳಿವೆ. ಆದರೆ ಚತುರ್ಮುಖನ ಮಾತು ಹಾಗಲ್ಲ.  ಹಿಂದೆ ನಡೆದಿದ್ದರಲಿ ಅಥವಾ ಮುಂದಿನ ಭವಿಷ್ಯವಿರಲಿ. ಆತನ ಮಾತೆಂದೂ ಹುಸಿಯಾಗದು. ಸಾಮಾನ್ಯ ಮನುಷ್ಯರು ವಿಷಯಗಳಿಗೆ ಬೇಕಾದ ಶಬ್ದಗಳನ್ನೂ ಹುಡುಕಿ ಮಾತನಾಡುತ್ತಾರೆ. ಆದರೆ ಜ್ಞಾನಿಗಳು ಮಾತನಾಡಿದ್ದಕ್ಕೆ ಸರಿಯಾಗಿ ಅರ್ಥ ಬಂದು ಕೂಡುತ್ತದೆ. ಅವರು ಏನು ನುಡಿಯುತ್ತಾರೋ ಅದೇ ನಡೆಯುತ್ತದೆ. ಉತ್ತರ ರಾಮಚರಿತದಲ್ಲಿ ಭವಭೂತಿ ಇದೇ ಮಾತನ್ನು ಹೇಳುವುದನ್ನು ನಾವು ಕಾಣುತ್ತೇವೆ: ಲೌಕಿಕಾನಾಂ ಹಿ ಸಾಧೂನಾಂ ಅರ್ಥಂ ವಾಕ್ ಅನುವರ್ತತೇ । ಋಷೀನಾಂ ಪುನರಾದ್ಯಾನಾಂ ವಾಚಂ ಅರ್ಥೋನುಧಾವತಿ ॥
“ಕೇವಲ ಮಾತಷ್ಟೇ ಅಲ್ಲ, ನನ್ನ ಮನಸ್ಸೂ ಕೂಡಾ ಎಂದೂ ಅಲ್ಲದ್ದನ್ನು, ಇಲ್ಲದ್ದನ್ನು ಮತ್ತು ಸಲ್ಲದ್ದನ್ನು ಯೋಚಿಸುವುದಿಲ್ಲ; ಇಂದ್ರಿಯಗಳು ಎಂದೆಂದಿಗೂ ತಪ್ಪುದಾರಿಯಲ್ಲಿ ಸಾಗುವುದಿಲ್ಲ” ಎನ್ನುತ್ತಾನೆ ಚತುರ್ಮುಖ.  ಎಲ್ಲಕ್ಕೂ ಮುಖ್ಯವಾದುದು ಮನಸ್ಸಿನ ನಿಯಂತ್ರಣ ಮತ್ತು ಶುದ್ಧತೆ. ನಮ್ಮ ಇಂದ್ರಿಯಗಳು ಕುದುರೆಗಳಿದ್ದಂತೆ ಹಾಗೂ ನಮ್ಮ ಮನಸ್ಸು ಅದರ ಕಡಿವಾಣವಿದ್ದಂತೆ. ಮನಸ್ಸು ನಮ್ಮ  ನಿಯಂತ್ರಣದಲ್ಲಿದ್ದಾಗ ಇಂದ್ರಿಯಗಳು ದಾರಿತಪ್ಪುವ ಪ್ರಶ್ನೆಯೇ ಇಲ್ಲ.  ಒಟ್ಟಿನಲ್ಲಿ “ನನ್ನ ಮನಸ್ಸು ಮತ್ತು ಇಂದ್ರಿಯಗಳು ತಪ್ಪು ದಾರಿಯಲ್ಲಿ ಸಾಗುವುದಿಲ್ಲ, ಬಾಯಿ ತಪ್ಪನ್ನು ನುಡಿಯುವುದಿಲ್ಲ, ನಾನು ನುಡಿದದ್ದು ಸುಳ್ಳಾಗುವುದಿಲ್ಲಾ. ನಾನು ಕಾಯೇನ-ವಾಚಾ-ಮನಸಾ ಶುದ್ಧ ಮತ್ತು ಸತ್ಯ” ಎಂದಿದ್ದಾನೆ ಚತುರ್ಮುಖ.

ಚತುರ್ಮುಖನ ಈ ಮೇಲಿನ ಮಾತುಗಳು ಆತ ಹೆಗ್ಗಳಿಕೆಯಿಂದ ಆಡಿದ ಮಾತುಗಳಲ್ಲ. ತಾನು ಏಕೆ ಹೀಗಿದ್ದೇನೆ ಎನ್ನುವುದನ್ನೂ ಆತ ಇಲ್ಲಿ ವಿವರಿಸಿದ್ದಾನೆ. ಚತುರ್ಮುಖ ಹೇಳುತ್ತಾನೆ: “ಇವೆಲ್ಲವೂದಕ್ಕೂ ಕಾರಣ ನನ್ನೊಳಗೆ ತುಂಬಿರುವ ಭಗವಂತ. ನಾನು ನನ್ನ ಹೃದಯದಲ್ಲಿ ತುಂಬಿರುವ ಹರಿಯನ್ನು ಸದಾ ಉತ್ಕಂಠ್ಯದಿಂದ ಚಿಂತನೆ ಮಾಡುತ್ತಿರುತ್ತೇನೆ” ಎಂದು. ಸದಾ ಭಕ್ತಿಯಿಂದ ಭಗವದ್ ಚಿಂತನೆ ಮಾಡುವವನಿಗೆ ಕೆಟ್ಟದ್ದನ್ನು ಯೋಚಿಸಲು ಸಾಧ್ಯವಿಲ್ಲಾ, ಕೆಟ್ಟದ್ದನ್ನು ಆಡಲು ಸಾಧ್ಯವಿಲ್ಲಾ. ಭಗವಂತನನ್ನೇ ಸರ್ವಸ್ವವಾಗಿರಿಸಿಕೊಂಡಿರುವ ವ್ಯಕ್ತಿ ಆಡುವ ಮಾತು ಸುಳ್ಳಾಗದು. “ನಾನು ನಿರಂತರ ಭಗವಂತನನ್ನು ನೋಡುತ್ತಾ ಆರಾಧಿಸುತ್ತಿರುತ್ತೇನೆ. ಆತ ನನ್ನಲ್ಲೂ ತುಂಬಿದ್ದಾನೆ, ಸರ್ವಸಾಕ್ಷಿಯಾಗಿ ಎಲ್ಲೆಡೆ ತುಂಬಿ ಎಲ್ಲವನ್ನೂ ನೋಡುತ್ತಿದ್ದಾನೆ ಎನ್ನುವ ಅರಿವು ನನ್ನಲ್ಲಿದೆ” ಎಂದಿದ್ದಾನೆ ಚತುರ್ಮುಖ. ಇದು ಬಹಳ ಮುಖ್ಯವಾದ ಮಾತು ಅನನ್ಯಯೋಗೇನ ಭಕ್ತಿಃ ಅವ್ಯಭಿಚಾರಿಣೀ ಎಂದು ಶ್ರೀಕೃಷ್ಣ ಗೀತೆಯಲ್ಲಿ ಹೇಳುವಂತೆ, ಅನನ್ಯವಾದ ಭಗವದ್ಭಕ್ತಿ ಇಲ್ಲದೆ ಪೂರ್ಣ ಪ್ರಾಮಾಣಿಕತೆ ಸಾಧ್ಯವಿಲ್ಲಾ. ಭಗವಂತ ನನ್ನಲ್ಲೂ ತುಂಬಿದ್ದಾನೆ ಮತ್ತು ಎಲ್ಲೆಲ್ಲೂ ತುಂಬಿದ್ದಾನೆ ಎನ್ನುವ ಅರಿವು ಗಟ್ಟಿಗೊಂಡಾಗ ನಿಜವಾದ ಪ್ರಾಮಾಣಿಕತೆಯ ಅರ್ಥ ನಮಗಾಗುತ್ತದೆ. ಭಗವದ್ ಪ್ರಜ್ಞೆಯಿಂದ ಬರುವ ನೈತಿಕತೆ ಮಾತ್ರ  ಸಹಜವಾದುದು. 

Saturday, January 3, 2015

Shrimad BhAgavata in Kannada -Skandha-02-Ch-06(06)

ನಾರಾಯಣೇ ಭಗವತಿ ತದಿದಂ ವಿಶ್ವಮಾಹಿತಮ್ ।
ಗೃಹೀತಮಾಯೋರುಗುಣೇ ಸರ್ಗಾದಾವಗುಣೇ ಸ್ವತಃ  ॥೩೦॥

ಸೃಷ್ಟಿಕರ್ತ ಯಾರು ಮತ್ತು ಈ ಸೃಷ್ಟಿ ಹೇಗೆ ನಿರ್ಮಾಣವಾಯಿತು ಎಂದು ನಾರದನಿಗೆ ವಿವರಿಸುತ್ತಿರುವ ಚತುರ್ಮುಖ ಮುಂದುವರಿದು ಹೇಳುತ್ತಾನೆ: “ಇಡೀ ವಿಶ್ವ, ಸಮಸ್ತ ಜೀವಜಾತ, ಜಡಪ್ರಪಂಚ ಎಲ್ಲವೂ ಭಗವಂತನಲ್ಲೇ ಇವೆ” ಎಂದು. ಚತುರ್ಮುಖ ಬ್ರಹ್ಮ, ಸಮಸ್ತ ದೇವತೆಗಳು ಋಷಿಗಳು ಎಲ್ಲರೂ ಭಗವಂತನಲ್ಲಿ ವಿಶ್ವವನ್ನು ಕಂಡು ಆರಾಧನೆ ಮಾಡಿದರು. ಈ ರೀತಿ ಭಗವಂತನಲ್ಲಿ ಎಲ್ಲವನ್ನೂ ಕಾಣುವುದು ಕೇವಲ ಸೃಷ್ಟಿಯ ಆದಿಗಷ್ಟೇ  ಮೀಸಲಲ್ಲಾ. ಇದು ಇಂದಿಗೂ ಎಂದೆಂದಿಗೂ ಸತ್ಯ.
ಭಗವಂತ ಸ್ವಂತ ಇಚ್ಛೆಯಿಂದ ಪ್ರಕೃತಿಯ ಸತ್ವ-ರಜಸ್ಸು-ತಮಸ್ಸನ್ನು ಬಳಸಿ ಮೂರು ವಿಧವಾದ ಕ್ರಿಯೆ ಮಾಡಿಸುತ್ತಿದ್ದಾನೆ. ಆದರೆ ಆತನಿಗೆ ಈ ತ್ರಿಗುಣದ ಸ್ಪರ್ಶವೇ ಇಲ್ಲ. “ಸೃಷ್ಟಿಯ ಆದಿಯಲ್ಲೇ ಭಗವಂತ ಇಂಥ ಲೀಲೆ ಮಾಡಿ ತೋರಿದ” ಎನ್ನುತ್ತಾನೆ ಚತುರ್ಮುಖ.

ಸೃಜಾಮಿ ತನ್ನಿಯುಕ್ತೋSಹಂ ಹರೋ ಹರತಿ ತದ್ವಶಃ ।
ವಿಶ್ವಂ ಪುರುಷರೂಪೇಣ ಪರಿಪಾತಿ ತ್ರಿಶಕ್ತಿಧೃಕ್  ॥೩೧॥

ಚತುರ್ಮುಖನಿಂದಲೇ ಸೃಷ್ಟಿ ನಡೆಯುತ್ತದೆ ಎನ್ನುವಂತೆ ಪ್ರಶ್ನಿಸಿದ್ದ ನಾರದರಿಗೆ ಚತುರ್ಮುಖ ಉತ್ತರಿಸುತ್ತಾ ಹೇಳುತ್ತಾನೆ:  “ನಾನು ಭಗವಂತನ ಕೈಯಲ್ಲಿನ ಒಂದು ಸಾಧನ(Instrument). ನನ್ನೊಳಗೆ ಕುಳಿತು ಭಗವಂತ ನನ್ನನ್ನು ಪ್ರೇರೇಪಿಸಿ ಸೃಷ್ಟಿ ಮಾಡುತ್ತಾನೆ. ಹೀಗಾಗಿ ನನ್ನ ಮುಖೇನ ಸೃಷ್ಟಿಯಾದಂತೆ ಕಾಣುತ್ತದೆ. ಇಲ್ಲಿ ನಾನು ಭಗವಂತನ ಆಜ್ಞಾಪಾಲಕ. ನಾನು ಸ್ವತಂತ್ರ ಸೃಷ್ಟಾರ ಅಲ್ಲ. ಇದೇ ರೀತಿ ಭಗವಂತ ಶಿವನೊಳಗೆ ಕುಳಿತು ಸಂಹಾರ ಮಾಡುತ್ತಾನೆ” ಎಂದು. ಸೃಷ್ಟಿ-ಸಂಹಾರವನ್ನು ಬ್ರಹ್ಮ-ಶಿವನೊಳಗೆ ನಿಂತು ಮಾಡಿಸುವ  ಭಗವಂತ ಹುಟ್ಟು-ಸಾವಿನ ನಡುವಿನ ಪಾಲನೆಯನ್ನು ಮಾತ್ರ ತಾನೇ ನೇರವಾಗಿ ಮಾಡುತ್ತಾನೆ. ರಜಸ್ಸನ್ನು ಚತುರ್ಮುಖನಲ್ಲಿ ತುಂಬಿ ಆತನಲ್ಲಿ ಸೃಷ್ಟಿ, ತಮಸ್ಸನ್ನು ಶಿವನಲ್ಲಿ ತುಂಬಿ ಆತನಿಂದ ಸಂಹಾರ ಕಾರ್ಯ ಮಾಡಿಸುವ ಭಗವಂತ ಸತ್ತ್ವವನ್ನು ಬಳಸಿ, ಅದರಿಂದ ಪ್ರಭಾವಿತನಾಗದೇ ಪಾಲನೆ ಮಾಡುತ್ತಾನೆ.     

ಇತಿ ತೇSಭಿಹಿತಂ ತಾತ ಯಥೇದಮನುಪೃಚ್ಛಸಿ ।
ನಾನ್ಯದ್ ಭಗವತಃ ಕಿಂಚಿದ್ ಭಾವ್ಯಂ ಸದಸದಾತ್ಮಕಮ್ ॥೩೨॥

“ನೀನು ಕೇಳಿದ್ದನ್ನೆಲ್ಲವನ್ನೂ ಹೇಳಿದೆ. ‘ಚತುರ್ಮುಖನೇ ಸೃಷ್ಟಿ ಮಾಡುತ್ತಾನೆ ಎಂದು ನಾನು ತಿಳಿದಿದ್ದೇನೆ’ ಎಂದು ನೀನು ಹೇಳಿದೆಯಲ್ಲಾ. ನಾನು ಏನನ್ನೂ ಸ್ವತಂತ್ರವಾಗಿ ಮಾಡುವುದಿಲ್ಲ. ಆ ಭಗವಂತ ನನ್ನನ್ನು ಸಾಧನವಾಗಿ ಬಳಸಿ ಏನನ್ನು ಮಾಡಿಸುತ್ತಾನೋ ಅದನ್ನಷ್ಟೇ ನಾನು ಮಾಡುತ್ತೇನೆ. ಅದೇ ರೀತಿ ಶಿವ ಕೂಡಾ. ಇದು ಸೃಷ್ಟಿ ರಹಸ್ಯ. ಹೀಗಾಗಿ ಸದಸದಾತ್ಮಕವಾದ ಈ ಪ್ರಪಂಚದಲ್ಲಿ ನಾವು ಚಿಂತಿಸಬೇಕಾದುದು ಎಲ್ಲವನ್ನೂ ನಿಯಂತ್ರಿಸುವ ಆ ಭಗವಂತನನ್ನೇ ಹೊರತು ಬೇರೇನನ್ನೂ ಅಲ್ಲ. ಭಗವಂತನನ್ನು ಬಿಟ್ಟು ಸ್ವತಂತ್ರವಾಗಿ ಯಾವ ದೇವತೆಗಳಾಗಲೀ, ಜೀವಜಾತಗಳಾಗಲೀ ಇಲ್ಲಾ.  ಈ ಪ್ರಪಂಚದಲ್ಲಿನ ಎಲ್ಲವೂ ಭಗವಂತನಿಂದಲೇ ಬಂದವುಗಳು. ಅದನ್ನು ಅವನಿಗೇ ಅರ್ಪಿಸಿ ಅವನನ್ನು ನಾವು ಪೂಜಿಸಬೇಕು” ಎಂದು ಚತುರ್ಮುಖ ನಾರದರಿಗೆ ವಿವರಿಸುತ್ತಾನೆ.

ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಇನ್ನ್ಯಾರೋ ಹೊಣೆಗಾರರಲ್ಲ. ಎಲ್ಲವುದರ ಹಿಂದೆ ಆ ಭಗವಂತನಿದ್ದಾನೆ. ಪ್ರಪಂಚದಲ್ಲಿರುವ ಎಲ್ಲವೂ ಅವನಲ್ಲೇ ಇರುವಂತಹದ್ದು. ಆದ್ದರಿಂದ ನಾವು ಹೊರಗಿಂದ ಆತನಿಗೆ ಕೊಡುವಂತಹದ್ದು ಏನೂ ಇಲ್ಲಾ. “ನೀನು ನೀಡಿರುವುದನ್ನು ನಿನಗೆ ಅರ್ಪಿಸಿದ್ದೇನೆ. ನೀನು ನನ್ನನ್ನು ಉದ್ಧರಿಸು” ಎಂದು ಭಗವಂತನಿಗೆ ನಮ್ಮ ಇಡೀ ಬದುಕನ್ನು ಅರ್ಪಿಸಿಕೊಳ್ಳುವುದೇ ಒಂದು ಮಹಾಯಜ್ಞ. ಇದೇ ಸೃಷ್ಟಿಯ ಆದಿಯಿಂದ ಅಂತ್ಯದ ತನಕ ನಿರಂತರ ನಡೆಯಬೇಕಾದ ಮಹಾಪೂಜೆ. ಇದು ದ್ರವ್ಯಗಳಿಂದಲೇ ಮಾಡಬೇಕಾಗಿರುವ ಯಜ್ಞವಲ್ಲ. ಇದೊಂದು ಮಾನಸಪೂಜೆ. ಹಸುವಿಗೆ ತಿನ್ನಲು ಚಿಗುರನ್ನು ನೀಡುವ ವಸಂತಕಾಲವೇ ನಿನಗೆ ತುಪ್ಪ; ಬೇಸಿಗೆಯಲ್ಲಿ ಒಣಗುವ ಮರಗಳೇ  ನಿನ್ನ ಯಜ್ಞದ ಕಟ್ಟಿಗೆ; ಶರತ್ಕಾಲದಲ್ಲಿ ಸಂಗ್ರಹಿಸುವ ಹೊಸ ದಾನ್ಯಗಳೇ ನಿನಗೆ ಹವಿಸ್ಸು; ಎಲ್ಲಾ ಕಾಲದ ಸಂಪತ್ತೂ ನಿನ್ನದೇ ಮತ್ತು ಅದು ನಿನಗೆ ಅರ್ಪಿತ ಎಂದು ಸಮಸ್ತ ವೇದಸಾರವಾದ ಪುರುಷಸೂಕ್ತದ ಅನುಸಂಧಾನದೊಂದಿಗೆ ನಾವು ಅಂದಿಗೂ ಇಂದಿಗೂ ಎಂದೆಂದಿಗೂ ಮಾಡಬೇಕಾದ ನಿತ್ಯಯಜ್ಞವಿದು.

Friday, January 2, 2015

Shrimad BhAgavata in Kannada -Skandha-02-Ch-06(05)

ಪುರುಷಸೂಕ್ತದಲ್ಲಿ ಮುಂದೆ ಯಜ್ಞದ ಬಗ್ಗೆ ವಿವರಣೆ ಬರುತ್ತದೆ: ಯತ್ಪುರುಷೇಣ ಹವಿಷಾ ದೇವಾ ಯಜ್ಞಮತನ್ವತ । ವಸಂತೋ ಅಸ್ಯಾಸೀದಾಜ್ಯಂ ಗ್ರೀಷ್ಮ ಇಧ್ಮಃ ಶರದ್ಧವಿ: ।।೬।। ತಂ ಯಜ್ಞ೦ ಬರ್ಹಿಷಿ ಪ್ರೌಕ್ಷನ್ ಪುರುಷಂ ಜಾತಮಗ್ರತಃ । ತೇನ ದೇವಾ ಆಯಜಂತ ಸಾಧ್ಯಾ ಋಷಯಶ್ಚ ಯೇ ।।೭।। ಇಲ್ಲಿ ವಸಂತವೇ ತುಪ್ಪ, ಗ್ರೀಷ್ಮವೇ ಕಟ್ಟಿಗೆ, ಶರತ್ತೇ ಹವಿಸ್ಸು ಇತ್ಯಾದಿಯಾಗಿ  ವಿವರಿಸಲಾಗಿದೆ.  ಇಲ್ಲಿ ಬರುವ ಪ್ರತಿ ಶಬ್ದದ ಅರ್ಥವನ್ನು ಕೊಡತಕ್ಕ ವಿವರಣೆಯನ್ನು ಭಾಗವತ ನೀಡಿಲ್ಲವಾದರೂ ಕೂಡಾ ಯಜ್ಞದ ಪರಿಕಲ್ಪನೆಯನ್ನು ಮುಂದೆ ವಿವರಿಸುವುದನ್ನು ನಾವು ಕಾಣಬಹುದು.

 ಯದಾSಸ್ಯ ನಾಭ್ಯಾನ್ನಳಿನಾದಹಮಾಸಂ ಮಹಾತ್ಮನಃ ।
ನಾವಿಂದಂ ಯಜ್ಞಸಂಭಾರಾನ್ ಪುರುಷಾವಯವಾನೃತೇ ॥೨೨॥

ತೇಷು ಯಜ್ಞಾಶ್ಚ ಪಶವಃ ಸವನಸ್ಪತಯಃ ಕುಶಾಃ ।
ಇದಂ ಚ ದೇವಯಜನಂ ಕಾಲಶ್ಚೋರುಗುಣಾನ್ವಿತಃ  ॥೨೩॥

ವಸೂನ್ಯೋಷಧಯಃ ಸ್ನೇಹಾ ರಸಲೋಹಮೃದೋ ಜಲಮ್ ।
ಋಚೋ ಯಜೂಂಷಿ ಸಾಮಾನಿ ಚಾತುರ್ಹೋತ್ರಂ ಚ ಸತ್ತಮ ॥೨೪॥

ಚತುರ್ಮುಖ ಹುಟ್ಟಿದ ತಕ್ಷಣ, ಏನೂ ಇಲ್ಲದ ಆ ಸಮಯದಲ್ಲಿ  ಆತನಿಗೆ ತನ್ನನ್ನು ಹುಟ್ಟಿಸಿದ ತಂದೆಯನ್ನು ಯಾಜ್ಞಿಕವಾಗಿ ಪೂಜಿಸಬೇಕು ಎನ್ನುವ ಅನುಸಂಧಾನವಾಯಿತು. ಇಂಥಹ ಸಮಯದಲ್ಲಿ ಸೃಷ್ಟಿ ಪ್ರಕ್ರಿಯೆಯನ್ನೇ  ಯಾಜ್ಞಿಕ ಪ್ರಕ್ರಿಯೆಯಾಗಿ ಚತುರ್ಮುಖ ನೋಡಿರುವುದನ್ನು ಇಲ್ಲಿ ಕಾಣುತ್ತೇವೆ.
ಮೊದಲು ಚತುರ್ಮುಖ ಮೊಟ್ಟೆಯೊಳಗಿನಿಂದ ಹುಟ್ಟಿದ ಎನ್ನುವುದನ್ನು ಈ ಹಿಂದೆ ನೋಡಿದ್ದೇವೆ. ಹೀಗೆ ಮೊಟ್ಟೆಯೊಳಗಿದ್ದ  ಚತುರ್ಮುಖ ಮೊಟ್ಟೆಯೊಡೆದು ಮತ್ತೊಮ್ಮೆ ಹುಟ್ಟಿದ. ಮೊಟ್ಟೆ ಒಡೆಯುವುದು ಅಂದರೆ ಕಮಲ ಅರಳುವುದು. “ಅರಳಿದ ಕಮಲದಲ್ಲಿ ನಾನು ಮತ್ತೆ ಹುಟ್ಟಿದೆ”  ಎಂದಿದ್ದಾನೆ ಚತುರ್ಮುಖ. ಮೊಟ್ಟೆಯೊಡೆದು ಬಂದ ಚತುರ್ಮುಖನಿಗೆ ಸೃಷ್ಟಿಯ ಆದಿಯಲ್ಲಿ ಭಗವಂತನ ಪಾದಪೂಜೆಗೆ ಬೇಕಾದ ಸಾಮಗ್ರಿಗಳಿರಲಿಲ್ಲ. ಹೀಗಿರುವಾಗ ಆತನಿಗೆ ತನ್ನೆದುರು ಸಹಸ್ರಾರು ಕರಚರಣಗಳಿಂದ  ತುಂಬಿ ನಿಂತಿರುವ ಭಗವಂತನ ಅವಯವಗಳಲ್ಲಿ ಪ್ರಪಂಚದ ಅನಂತ ವಸ್ತುಗಳೂ ಮೂಲರೂಪದಲ್ಲಿ ಸೃಷ್ಟಿಯಾಗುತ್ತಿರುವುದು  ಕಾಣುತ್ತದೆ. ಇಂಥಹ ಭಗವಂತನಿಗೆ ಹೊರಗಿನಿಂದ ಕೊಡುವುದಕ್ಕೇನಿದೆ? ಮುಂದೆ ಹುಟ್ಟಿ ಬರುವ ಸಮಸ್ತ ವಸ್ತುವೂ ಕೂಡಾ ಸೂಕ್ಷ್ಮರೂಪದಲ್ಲಿ ಆತನಲ್ಲೇ ತುಂಬಿರುವುದನ್ನು ಚತುರ್ಮುಖ ಕಂಡ.
ಯಜ್ಞ ಅಂದ ಮೇಲೆ ಅಲ್ಲಿ ಬಲಿ ಎನ್ನುವುದೊಂದಿದೆ. ನಮ್ಮಲ್ಲಿರುವ ಪಶುತ್ವವನ್ನು ಬಲಿಕೊಡುವುದು ಈ ಬಲಿಯ ಹಿಂದಿನ ತಾತ್ಪರ್ಯ. ಇಲ್ಲಿ ಅದನ್ನೇ ಪುರುಷಮೇಧ ಎಂದಿದ್ದಾರೆ. ಪುರುಷಮೇಧ ಎಂದರೆ ನರಮೇಧ ಅಥವಾ ನರಬಲಿಯಲ್ಲ. ನಮ್ಮಲ್ಲಿರುವ ದೋಷವನ್ನು ಪರಿಹಾರ ಮಾಡು ಎಂದು ನಮ್ಮನ್ನು ನಾವು ಸಂಪೂರ್ಣವಾಗಿ ಭಗವಂತನಿಗೆ ಅರ್ಪಿಸಿಕೊಳ್ಳುವುದೇ ಪುರುಷಮೇಧ.

ನಾಮಧೇಯಾನಿ ಮಂತ್ರಾಶ್ಚ ದಕ್ಷಿಣಾಶ್ಚ ವ್ರತಾನಿ ಚ ।
ದೇವತಾನುಕ್ರಮಃ ಕಲ್ಪಃ ಸಂಕಲ್ಪ ಸೂತ್ರಮೇವ ಚ ॥೨೫॥

ಯಜ್ಞ ಮಾಡಲು ಅಲ್ಲಿ ನಾಮಧೇಯಗಳು ಬೇಕು, ದಕ್ಷಿಣೆ ಬೇಕು, ಮಂತ್ರಗಳು ಬೇಕು. ಸೃಷ್ಟಿಯ ಆದಿಯಲ್ಲಿ ನಡೆದ ಈ ಯಜ್ಞದಲ್ಲಿ ಭಗವಂತನ  ಮುಖದಿಂದ ಹೊಮ್ಮಿದ ವೇದವಾಣಿಯೇ  ನಾಮಧೇಯವಾಯಿತು. ಆ ಒಂದೊಂದು ಸೂಕ್ತವೇ ಮಂತ್ರವಾಯಿತು. ಪ್ರಪಂಚದಲ್ಲಿ ಭಗವಂತ ಸೃಷ್ಟಿಮಾಡಿದ ಅನಂತ ಸಂಪತ್ತೇ ಆ ಯಜ್ಞದ ದಕ್ಷಿಣೆಯಾಯಿತು. ಈ ರೀತಿ “ನೀನು ಕೊಟ್ಟ ಸಂಪತ್ತು ನಿನಗೆ ಅರ್ಪಿತ;  ನಿನ್ನ ಬಾಯಿಯಿಂದ ಬಂದ ನಾಮಧೇಯಗಳೇ ನಿನ್ನ ನಾಮಧೇಯಗಳು; ಆ ಮಂತ್ರಗಳೇ ನಿನ್ನ ಸ್ತೋತ್ರಗಳು ಎನ್ನುವ ಅನುಸಂಧಾನದೊಂದಿಗೆ ಭಗವಂತನ ಅವಯವಗಳಿಂದ ಬಂದದ್ದನ್ನೇ ಅವನಿಗೆ ಅರ್ಪಿಸಿ ನಾನು ಯಜ್ಞಮಾಡಿದೆ” ಎನ್ನುತ್ತಾನೆ ಚತುರ್ಮುಖ.
ವ್ರತಗಳು ಸೃಷ್ಟಿಯಾದವು, ಯಜ್ಞದ ಹೆಸರುಗಳು ಸೃಷ್ಟಿಯಾದವು, ಯಜ್ಞದಿಂದ ಆರಾಧಿಸಲ್ಪಡುವ ದೇವ-ದೇವತೆಯರ ಹೆಸರು ಎಲ್ಲವೂ ಭಗವಂತನಿಂದ ಆವಿಷ್ಕಾರವಾದ ವೇದವಾಣಿಯಲ್ಲಿ ಸಿಕ್ಕಿತು. ಯಾರನ್ನು ಕುರಿತು ಯಜ್ಞಮಾಡಬೇಕೋ ಆತನೇ ಸಹಸ್ರಶೀರ್ಷಾ ಪುರುಷನಾಗಿ ಎದುರಿಗೇ ನಿಂತಿದ್ದಾನೆ. ಇನ್ನು ಪರಿವಾರ ದೇವತೆಗಳು, ಆವಾಂತರ ದೇವತೆಗಳು ಎಲ್ಲರೂ ಭಗವಂತನ ಅವಯವಗಳಿಂದ ದೇವತಾ ತಾರತಮ್ಯಕ್ಕನುಗುಣವಾಗಿ ಸೃಷ್ಟಿಯಾಗುತ್ತಿದ್ದಾರೆ. ದೇವ-ದೇವತೆಯರನ್ನು ಹೇಗೆ ಉಪಾಸನೆ ಮಾಡಬೇಕು, ಹೇಗೆ ಆಹುತಿಕೊಡಬೇಕು ಎನ್ನುವುದನ್ನು ಭಗವಂತ ಸೃಷ್ಟಿಯ ಆದಿಯಲ್ಲೇ ಒಂದು ಕ್ರಮದಲ್ಲಿ ಸೃಷ್ಟಿಸಿದ. [ಇದನ್ನೇ ಮುಂದೆ ದೇವಮೀಮಾಂಸೆ ಎನ್ನುವ ಗ್ರಂಥರೂಪದಲ್ಲಿ ಋಷಿಗಳು ನಮಗೆ ನೀಡಿದರು]. ಯಾವ ಕ್ರಮದಲ್ಲಿ ಹೋಮ ಮಾಡಬೇಕು, ಯಾವ ಮಂತ್ರವನ್ನು ಎಲ್ಲಿ ಬಳಸಬೇಕು, ಇತ್ಯಾದಿ ಭಗವದ್ ಸಂಕಲ್ಪದಿಂದ ವೇದೋಚ್ಛಾರ ಕಾಲದಲ್ಲೇ ವ್ಯವಸ್ಥೆಯಾಗಿ ಬಿಟ್ಟಿತು. ಯಾವುದನ್ನೂ ಹೊರಗಿನಿಂದ ತರಬೇಕಾಗಿರಲಿಲ್ಲ- ಎಲ್ಲವೂ ಭಗವಂತನಲ್ಲೇ ತುಂಬಿತ್ತು.
ಕಲ್ಪ ಸೂತ್ರಗಳ ಸಂಕಲ್ಪ ಭಗವಂತನಿಂದಾಯಿತು [ಇದನ್ನೇ ಮುಂದೆ ಗ್ರಹ್ಯಸೂತ್ರ,  ಶ್ರುತಸೂತ್ರ ಇತ್ಯಾದಿ ಸೂತ್ರ(Rituals)  ರೂಪದಲ್ಲಿ ರಚಿಸಿ ಋಷಿಗಳು ನಮ್ಮ ಮುಂದಿಟ್ಟರು]. ಹೀಗೆ ಮುಂದೆ ರಚನೆಯಾಗುವ ಗ್ರಂಥಗಳ, ವ್ಯಾಖ್ಯಾನಗಳ, ಭಾಷ್ಯಗಳ ಸಂಕಲ್ಪ ಭಗವಂತನಿಂದಾಯಿತು. ಬ್ರಹ್ಮಸೂತ್ರ ಕೂಡಾ ಇದೇ ಕಾಲದಲ್ಲಿ ನಿರ್ಮಾಣವಾಯಿತು.[ಇದನ್ನೇ ವೇದವ್ಯಾಸರು ದ್ವಾಪರದ ಅಂತ್ಯದಲ್ಲಿ ಮತ್ತೆ ರಚಿಸಿ ನಮಗೆ ಕೊಟ್ಟಿರುವುದು]. ಇವೆಲ್ಲವನ್ನೂ ಬಳಸಿ ಚತುರ್ಮುಖ ಆದಿ ಯಜ್ಞ ನೆರವೇರಿಸಿದ.
ನಮಗೆ ತಿಳಿದಂತೆ ಯಜ್ಞ ಎಂದ ಮೇಲೆ ಅಲ್ಲಿ  ‘ಸಂಕಲ್ಪ’ ಮಾಡಬೇಕು. “ಸಂಕಲ್ಪಃ ಕರ್ಮ ಮಾನಸಂ” ಎನ್ನುವ ಮಾತಿದೆ. ‘ಮಾಡಬೇಕು’ ಎಂದು ಮನಸ್ಸಿನಲ್ಲಿ ನಿರ್ಧರಿಸುವುದೇ ಸಂಕಲ್ಪ. ಮೊದಲು ಮಾನಸಿಕವಾಗಿ ನಿರ್ಧರಿಸುವುದು, ಆಮೇಲೆ ದೈಹಿಕವಾಗಿ ಮಂತ್ರರೂಪದಲ್ಲಿ ಧೀಕ್ಷಾಬದ್ಧನಾಗುವುದೇ ನಿಜವಾದ ಸಂಕಲ್ಪ. ಇಲ್ಲಿ ಯಜ್ಞಕ್ಕೆ ಬೇಕಾದ ಸಂಕಲ್ಪ ಚತುರ್ಮುಖನಿಗೆ ಭಗವಂತನಿಂದ ದೊರೆಯಿತು. ಹೀಗೆ ಏನೂ ಇಲ್ಲದೇ ಇರುವಲ್ಲಿ ಎಲ್ಲವೂ ಇದ್ದು  ಆದಿ ಯಜ್ಞ ನೆರವೇರಿತು. ಚತುರ್ಮುಖ ತನ್ನನ್ನೇ ತಾನು ಪಶುವಾಗಿ ಭಗವಂತನಿಗೆ ಅರ್ಪಿಸಿ ಯಜ್ಞ ನೆರವೇರಿಸಿದ.
ಈ ರೀತಿಯ ವ್ಯವಸ್ಥೆ ಕೇವಲ ಆದಿ ಯಜ್ಞಕ್ಕೆ ಮಾತ್ರ ಮೀಸಲಲ್ಲ. ಇಂದೂ ಕೂಡಾ ಇದು ಸಾಧ್ಯ.  ಒಂದು ಒಳ್ಳೆಯ ಕಾರ್ಯ ಮಾಡಬೇಕು ಎನ್ನುವ ಅಚಲ ಸಂಕಲ್ಪ ಜೀವಕ್ಕೆ ಬಂದರೆ ಆ ಕಾರ್ಯಕ್ಕೆ ಬೇಕಾದ ಎಲ್ಲವನ್ನೂ ಭಗವಂತ   ಒದಗಿಸಿ ಕೊಡುತ್ತಾನೆ. ಇದೇ ಈ ಆದಿ ಯಜ್ಞ ನಮಗೆ ಕೊಡುವ ಸಂದೇಶ.

Tuesday, September 23, 2014

Shrimad BhAgavata in Kannada -Skandha-02-Ch-06(04)

ಪಾದೋSಸ್ಯ ಸರ್ವಭೂತಾನಿ ಪುಂಸಃ ಸ್ಥಿತಿವಿದೋ ವಿದುಃ ।
ಅಮೃತಂ ಕ್ಷೇಮಮಭಯಂ ತ್ರಿಮೂರ್ಧ್ನೋSಧಾಯಿ ಮೂರ್ಧಸು  ॥೧೮॥

ಪುರುಷಸೂಕ್ತದ ಮುಂದಿನ ಸಾಲಿನ ವಿವರಣೆಯೇ ಮೇಲಿನ ಶ್ಲೋಕ. ಪುರುಷ ಸೂಕ್ತ ಹೀಗೆ ಹೇಳುತ್ತದೆ:  ಪಾದೋsಸ್ಯ ವಿಶ್ವಾ ಭೂತಾನಿತ್ರಿಪಾದಸ್ಯಾಮೃತಂ ದಿವಿ ।।೩।। ತ್ರಿಪಾದೂರ್ಧ್ವ ಉದೈತ್ಪುರುಷಃಪಾದೋsಸ್ಯೇಹಾಭವಾತ್ಪುನಃ । ಇದೇ ಮಾತನ್ನು ಇಲ್ಲಿ ಚತುರ್ಮುಖ ನಾರದರಿಗೆ ವಿವರಿಸಿ ಹೇಳುತ್ತಿದ್ದಾನೆ. “ಪ್ರಪಂಚದ ಸಮಸ್ತ ಜೀವಜಾತಗಳ ಒಳಗೆ ತುಂಬಿರುವುದು ಭಗವಂತನ ಒಂದು ಪಾದ” ಎಂದು. ಸಾಮಾನ್ಯವಾಗಿ ಪಾದ ಎಂದರೆ ನಾಲ್ಕನೇ ಒಂದು ಅಂಶ. ಆದರೆ ಮೇಲಿನ ಶ್ಲೋಕದಲ್ಲಿ ಆ ಅರ್ಥದಲ್ಲಿ ಈ ಶಬ್ದ ಬಳಕೆಯಾಗಿಲ್ಲ. ಇಲ್ಲಿ ಪಾದ ಎಂದರೆ ಒಂದು ಚಿಕ್ಕ ಅಂಶವಷ್ಟೇ. ಈ ಅಂಶವನ್ನು ನಾವು ಶಬ್ದದಿಂದ ವರ್ಣಿಸುವುದು ಸಾಧ್ಯವಿಲ್ಲ. ಅದು ಸಮುದ್ರದಲ್ಲಿನ ಒಂದು ಬಿಂದುವಿನಂತೆ, ಮಹಾ ಜ್ವಾಲೆಯ ಒಂದು ಕಿಡಿಯಂತೆ.
ನಮಗೆ ಪ್ರಪಂಚದ ಸಂಪೂರ್ಣ ವಸ್ತುಸ್ಥಿತಿ ತಿಳಿದಿಲ್ಲ. ಪ್ರಪಂಚದ ಸಮಸ್ತ ವಸ್ತುಸ್ಥಿತಿಯನ್ನು ತಿಳಿದವನು ಆ ಭಗವಂತನೊಬ್ಬನೇ. ನಾವು ತಿಳಿದಿರುವುದು ಕೇವಲ ಮಲ್ನೋಟವನ್ನಷ್ಟೇ.  ಇಂದು ನಮ್ಮೆಲ್ಲಾ ಸಮಸ್ಯೆಗಳಿಗೆ ಕಾರಣ ನಾವು ಸಮಸ್ತ ವಸ್ತುಸ್ಥಿಯನ್ನು ತಿಳಿದಿಲ್ಲಾ ಎನ್ನುವ ವಿಷಯವನ್ನೂ ನಾವು ತಿಳಿಯದೇ ಇರುವುದು! ಏನೂ ತಿಳಿಯದೇ ಇರುವ ಮೂಢನಾಗಿದ್ದರೂ ತೊಂದರೆಯಿಲ್ಲಾ, ತನಗೆ ಎಲ್ಲವೂ ತಿಳಿದಿಲ್ಲಾ ಎನ್ನುವ ಸತ್ಯವನ್ನರಿತ ಜ್ಞಾನಿಯಾಗಿದ್ದರೂ ಅಡ್ಡಿಯಿಲ್ಲಾ. ಆದರೆ ಇವೆರಡರ ಮಧ್ಯದಲ್ಲಿದ್ದು ಅಹಂಕಾರಿಯಾಗಿದ್ದರೆ ಕಷ್ಟ. ಭಾಗವತದ ಮೂರನೇ ಸ್ಕಂಧದಲ್ಲಿ ಬರುವ ಒಂದು ಶ್ಲೋಕ ಈ ರೀತಿ ಹೇಳುತ್ತದೆ: ಯಶ್ಚ ಮೂಢತಮೋ ಲೋಕೇ ಯಶ್ಚ ಬುದ್ಧೇಃ ಪರಂ ಗತಃ । ತಾವುಭೌ ಸುಖಮೇಧೇತೇ ಕ್ಲಿಶ್ಯತ್ಯಂತರಿತೋ ಜನಃ  ||೩-೭-೧೭||  “ಮೂಢ ಮತ್ತು ಜ್ಞಾನಿ  ಇವರಿಬ್ಬರು ಲೋಕದಲ್ಲಿ ಸುಖದಿಂದ ಬದುಕಬಲ್ಲರು.  ಆದರೆ ಇವರಿಬ್ಬರ ಮಧ್ಯದಲ್ಲಿರುವವರು-ಜೀವನದ ಅರ್ಥ ತಿಳಿಯದೆ ಮೋಹಕ್ಕೆ ಬಲಿಯಾಗಿ ದುಃಖ ಅನುಭವಿಸುತ್ತಾರೆ” ಎಂದು! ಮೇಲಿನ ಶ್ಲೋಕದಲ್ಲಿ: “ಈ ಪ್ರಪಂಚದೊಳಗೆ ಭಗವಂತ ತುಂಬಿದ್ದಾನೆ ಎಂದು ‘ಬಲ್ಲವರು’ ಹೇಳುತ್ತಾರೆ” ಎಂದಿದ್ದಾನೆ ಚತುರ್ಮುಖ. ಭಗವಂತನಿಂದ ನೇರ ಉಪದೇಶ ಪಡೆದ, ಸಮಸ್ತ ಜ್ಞಾನಿಗಳಿಗೂ ಹಿರಿಯನಾದ ಚತುರ್ಮುಖ ಇಲ್ಲಿ ‘ಬಲ್ಲವರು’ ಎಂದು ಭಗವಂತನನ್ನು ಕುರಿತೇ ಹೇಳಿದ್ದಾನೆ.
ಅಮೃತ, ಕ್ಷೇಮ ಮತ್ತು ಅಭಯ ಎನ್ನುವ ಮೂರು ಲೋಕಗಳನ್ನು ಭಗವಂತ ತನ್ನ ತಲೆಯ ಮೇಲೆ ಹೊತ್ತಿದ್ದಾನೆ ಎಂದು ಚತುರ್ಮುಖ ಇಲ್ಲಿ ವಿವರಿಸುತ್ತಾನೆ.  ಅಮೃತ, ಕ್ಷೇಮ ಮತ್ತು ಅಭಯ ಎನ್ನುವುದು ಮುಕ್ತರು ಮಾತ್ರ ಹೋಗಬಹುದಾದ  ಎತ್ತರದ ಸ್ಥಾನ. ಈ ಮೂರು ಸ್ಥಾನಗಳನ್ನು ಶಾಸ್ತ್ರಕಾರರು ಶ್ವೇತದ್ವೀಪ, ಅನಂತಾಸನ,  ವೈಕುಂಠ ಎಂದೂ ಕರೆಯುತ್ತಾರೆ. ಶ್ವೇತದ್ವೀಪ ಎನ್ನುವುದು ಭೂಮಿಯಲ್ಲೇ ಇರುವ ಮುಕ್ತಸ್ಥಾನವಾದರೂ ಕೂಡಾ ಇದು ನಮ್ಮ ಕಣ್ಣಿಗೆ ಕಾಣದು. ಭೂಮಿಯಲ್ಲೇ ಇರುವ ಸೂಕ್ಷ್ಮ ಸ್ಥಾನಗಳ ಕುರಿತು ವಿಷ್ಣುಪುರಾಣ ವಿವರಿಸುತ್ತದೆ. ಅಲ್ಲಿ ಹೇಳುವಂತೆ:  ಭೂಮಿಯಲ್ಲಿ ಎರಡು ವಿಧವಾದ ಅಸ್ತಿತ್ವವಿದೆ. ಸ್ಥೂಲವಾಗಿ ನಮ್ಮ ಕಣ್ಣಿಗೆ ಕಾಣುವ ಭೂಮಿಯ ಭಾಗ ಒಂದಾದರೆ, ನಮ್ಮ ಕಣ್ಣಿಗೆ ಕಾಣದ ಸೂಕ್ಷ್ಮ ಲೋಕ ಕೂಡಾ ಭೂಮಿಯಲ್ಲಿದೆ. ಇಂಥಹ ಒಂದು ಸೂಕ್ಷ್ಮಲೋಕ ಶ್ವೇತದ್ವೀಪ. ಶ್ವೇತದ್ವೀಪಕ್ಕೆ ಇನ್ನೊಂದು ಹೆಸರು ನಾರಾಯಣಪುರ. ಶಾಸ್ತ್ರಕಾರರು ಹೇಳುವಂತೆ  ಮುಕ್ತಿಗೆ ಹೋಗುವಾಗ ಮೊತ್ತಮೊದಲು ಶ್ವೇತದ್ವೀಪದಲ್ಲೇ ಭಗವಂತನ ಮೊದಲ ದರ್ಶನ. ಶ್ವೇತದ್ವೀಪಕ್ಕೆ ಹೋಗದೇ ಮುಕ್ತಿ ಇಲ್ಲಾ. ಇದು ಭೂಮಿಗೆ ಸಂಬಂಧಿಸಿದ ಮುಕ್ತಸ್ಥಾನವಾದರೆ,  ಇದೇ ರೀತಿ ಅಂತರಿಕ್ಷಕ್ಕೆ ಸಂಬಂಧಿಸಿದ ಮೋಕ್ಷ ಸ್ಥಾನ ಅನಂತಾಸನ. ಶ್ವೇತದ್ವೀಪದಲ್ಲಿನ ಭಗವಂತನ ರೂಪವನ್ನು ನಾರಾಯಣ ಹಾಗೂ  ಪದ್ಮನಾಭ ಎಂದೂ ಕರೆಯುತ್ತಾರೆ. ಅನಂತಾಸನದಲ್ಲಿ ಭಗವಂತ ವಾಸುದೇವ ರೂಪದಿಂದಿದ್ದಾನೆ. ವೈಕುಂಠದಲ್ಲಿರುವ ಭಗವಂತನ ರೂಪಕ್ಕೆ ವೈಕುಂಠ ಎಂದೇ ಹೆಸರು. ಈ ಮೂರು ದಿವ್ಯ ರೂಪಗಳದ್ದೇ ನಾಮಾಂತರ:  ಅಮೃತ, ಕ್ಷೇಮ ಮತ್ತು ಅಭಯ. ಈ ಅಪೂರ್ವವಾದ ಹೆಸರನ್ನು ಕೇವಲ ಭಾಗವತವಷ್ಟೇ ವಿವರಿಸಿ ಹೇಳುತ್ತದೆ.

ಲೋಕಾಸ್ತ್ರಯೋ ಬಹಿಶ್ಚಾಸನ್ನಪ್ರಜಾನಾಂ ಯ ಆಶ್ರಮಾಃ ।
ಅಂತಸ್ತ್ರಿಲೋಕ್ಯಾಸ್ತ್ವಪರೋ ಗೃಹಮೇಧೈರ್ಬೃಹದ್ ಹುತಃ  ॥೧೯॥

ಮೇಲೆ ವಿವರಿಸಿದ ಮೂರು ಲೋಕಗಳು ವಿಶೇಷವಾಗಿ ಪ್ರಜೆಗಳಿಲ್ಲದವರು ಹೋಗಿ ಸೇರುವ ಸ್ಥಾನ. ಇಲ್ಲಿ ಪ್ರಜೆಗಳಿಲ್ಲದವರು ಎಂದರೆ ದೇವತೆಗಳು. ದೇವತೆಗಳಿಗೆ ಮಕ್ಕಳಿದ್ದರೂ ಕೂಡಾ ಮಕ್ಕಳಿಗೆ ತಂದೆ-ತಾಯಿಯ ದಾಯೆ(ಪಾಲುಪಟ್ಟಿ) ಇಲ್ಲದ ಕಾರಣ ಅವರನ್ನು ಪ್ರಜೆಗಳಿಲ್ಲದವರು ಎನ್ನುತ್ತಾರೆ.  ಉದಾಹರಣೆಗೆ  ಶಿವನ ಮಗ ಗಣಪತಿ. ಆದರೆ ಗಣಪತಿಗೆ ಎಂದೂ ಶಿವ ಪದವಿ ಸಿಗುವುದಿಲ್ಲಾ. ಶಿವ ಪದವಿ ಶಿವನಿಗೇ ಹೊರತು ಗಣಪತಿಗಲ್ಲ. ದೇವತೆಗಳಲ್ಲದೆ ಗ್ರಹಸ್ಥರಾದವರು ಹೋಗಿ ಸೇರುವ ಮುಕ್ತ ಸ್ಥಾನಗಳೂ ಇವೆ. ಅಗ್ನಿ ಮುಖದಿಂದ ಭಗವಂತನ ಆರಾಧನೆ ಮಾಡುವವರು ಇಂದ್ರ ಲೋಕದ ಸಮೀಪವಿರುವ ಭಗವಂತನ ಲೋಕವನ್ನು ಸೇರುತ್ತಾರೆ. ಅದೇ ರೀತಿ ಯತಿಗಳಾದವರು ದ್ರುವಲೋಕದಲ್ಲಿ, ಬ್ರಹ್ಮಚಾರಿಗಳು ಸೂರ್ಯ ಮಂಡಲದಲ್ಲಿ, ವಾನಪ್ರಸ್ಥರು ಮೇರುಶಿಖರದಲ್ಲಿನ  ಭಗವಂತನ ಸ್ಥಾನವನ್ನು ಹೋಗಿ ಸೇರುತ್ತಾರೆ. ಈ ರೀತಿ ಬೇರೆಬೇರೆ ಸಾಧನೆ ಮಾಡಿದವರಿಗೆ ಬೇರೆಬೇರೆ ಸ್ಥಾನಗಳಿದ್ದರೂ ಸಹ, ಎಲ್ಲರೂ ಶ್ವೇತದ್ವೀಪದ ಮುಖೇನವೇ ಹೋಗಬೇಕು. ಇವೆಲ್ಲವೂ ಮುಕ್ತಿಗೆ ಸಂಬಂಧಿಸಿದ ಮತ್ತು ಮಾನುಷ ಕಲ್ಪನೆಗೆ ಮೀರಿದ ವಿಚಾರ.

ಸೃತೀ ವಿಚಕ್ರಮೇ ವಿಷ್ವಙ್ ಸಾಶನಾನಶನೇ ಅಭಿ  ।
ಯದವಿದ್ಯಾ ಚ ವಿದ್ಯಾ ಚ ಪುರುಷಸ್ತೂಭಯಾಶ್ರಯಃ  ॥೨೦॥

“ತತೋ ವಿಷ್ವಙ್ ವ್ಯಕ್ರಾಮತ್ಸಾಶನಾನಶನೇ ಅಭಿ” ಎಂದು ಪುರುಷ ಸೂಕ್ತ ಹೇಳಿದ ಮಾತನ್ನೇ ಇಲ್ಲಿ ಚತುರ್ಮುಖ ವಿವರಿಸಿದ್ದಾನೆ. ಇಲ್ಲಿ ಸಾಶನ ಎಂದರೆ ಕರ್ಮಫಲವನ್ನುನ್ನುಣ್ಣುವ ಅಜ್ಞಾನಿಗಳು ಹಾಗೂ ಅನಶನ ಎಂದರೆ ಕರ್ಮಬಂಧವನ್ನು ದಾಟಿದ ಅಪರೋಕ್ಷಜ್ಞಾನಿಗಳು. ಸಾಶನರು ಎಂದರೆ ಸಂಸಾರಿಗಳು, ಅಸಶನರು ಎಂದರೆ ಮುಕ್ತರು ಎನ್ನುವುದೂ  ಈ  ವಿವರಣೆಯ ಇನ್ನೊಂದು ಅರ್ಥ. ಇಲ್ಲಿ ಚತುರ್ಮುಖ ಹೇಳುತ್ತಾನೆ: “ಅವಿದ್ಯೆಗೆ ಒಳಗಾದವರು ಮತ್ತು ವಿದ್ಯೆಯಿಂದ ಪಾರಾದವರು ಎಲ್ಲರಿಗೂ ಪುರುಷ ಶಬ್ದವಾಚ್ಯನಾದ ಭಗವಂತನೇ ಆಶ್ರಯ.   ಭಗವಂತ ಸಾಶನಾನಶನರನ್ನೊಳಗೊಂಡ ಸಮಸ್ತ ಪ್ರಪಂಚವನ್ನು ವ್ಯಾಪಿಸಿ ನಿಂತಿದ್ದಾನೆ” ಎಂದು.

ತಸ್ಮಾದಂಡಾದ್ ವಿರಾಡ್ ಜಜ್ಞೇ ಭೂತೇಂದ್ರಿಯಗುಣಾಶ್ರಯಃ ।
ತದ್ ದ್ರವ್ಯಮತ್ಯಗಾದ್ ವಿಶ್ವಂ ಗೋಭಿಃ ಸೂರ್ಯ ಇವಾಶ್ರಯಮ್ ॥೨೧॥

ಪುರುಷಸೂಕ್ತದಲ್ಲಿ  ಬಂದಿರುವ ಅಪೂರ್ವ ಸಂಗತಿಗಳನ್ನು ಬೇರೆ ಶಬ್ದಗಳಿಂದ ಚತುರ್ಮುಖ ಇಲ್ಲಿ ವಿವರಿಸುವುದನ್ನು ಕಾಣುತ್ತೇವೆ. ಪುರುಷಸೂಕ್ತ ಹೀಗೆ ಹೇಳುತ್ತದೆ: ತಸ್ಮಾದ್ವಿರಾಳಜಾಯತ ವಿರಾಜೋ ಅಧಿ ಪೂರುಷಃ । ಸ ಜಾತೋ ಅತ್ಯರಿಚ್ಯತ ಪಶ್ಚಾದ್ಭೂಮಿಮಥೋ ಪುರಃ ।।೫।। ಮೊಟ್ಟಮೊದಲು ಅಂಡದಲ್ಲಿ ತುಂಬಿರುವ ಭಗವಂತನಿಂದ ಚತುರ್ಮುಖ ಹುಟ್ಟಿದ.  ಹೀಗೆ ಹುಟ್ಟಿದ ಚತುರ್ಮುಖ ಪ್ರಪಂಚದಲ್ಲಿನ ಪಂಚಭೂತಗಳು, ಪಂಚತನ್ಮಾತ್ರೆಗಳು, ಸರ್ವ ಕರ್ಮೇಂದ್ರಿಯಗಳು, ಜ್ಞಾನೇಂದ್ರಿಯಗಳು, ಇವೆಲ್ಲವಕ್ಕೂ ಅಧಿಷ್ಠಾನವಾಗಿರುವ ಸಮಸ್ತಜೀವಜಾತಗಳಿಗೆ ಆಶ್ರಯನಾಗಿ, ಬ್ರಹ್ಮಾಂಡ,  ಪಿಂಡಾಂಡ, ಸಮಸ್ತ ದ್ರವ್ಯಗಳೆಲ್ಲವನ್ನೂ ಮೀರಿ ನಿಂತ. ಇಲ್ಲಿ ದ್ರವ್ಯ ಎಂದರೆ ಧಾವಿಸಿ ಪಡೆಯುವ/ಸೇರುವ  ವಸ್ತು. ಅಂದರೆ ನಮ್ಮ ಚಲನೆಯಿಂದ ನಾವು ಹೋಗಿ ಪಡೆಯಬಹುದಾದ ಅಥವಾ ಮುಟ್ಟಬಹುದಾದ  ವಸ್ತುಗಳು ದ್ರವ್ಯ. ಅಂದರೆ ಪಂಚಭೂತಗಳು ಮತ್ತು ಅದರಿಂದಾದ ಸಮಸ್ತ ಪದಾರ್ಥಗಳು ಎಂದರ್ಥ.  ಹೇಗೆ ಸೂರ್ಯ ತನ್ನ ಕಿರಣಗಳಿಂದ ಅಂತರಿಕ್ಷವನ್ನು ಬೆಳಗಿಸಿ ಮೀರಿ ನಿಲ್ಲುತ್ತಾನೋ ಹಾಗೇ ಈ ಜಗತ್ತಿನ ಆದಿಜೀವನಾದ  ಚತುರ್ಮುಖ ಸಮಸ್ತ ಬ್ರಹ್ಮಾಂಡ ಪಿಂಡಾಂಡವನ್ನು ಮೀರಿ ನಿಂತ. ಇಂಥಹ ಚತುರ್ಮುಖನನ್ನೂ ಮೀರಿ ನಿಂತವವನು ಪುರುಷ ಶಬ್ದವಾಚ್ಯನಾದ ಆ ಭಗವಂತ.  ಇಲ್ಲಿ ‘ವಿರಾಟ್’ ಎನ್ನುವ ವಿಶೇಷಣ ಬಳಕೆಯಾಗಿದೆ. ವಿಶೇಷವಾಗಿ ವಿರಾಟ್ ಎಂದರೆ ಬೆಳಗುವವನು ಎಂದರ್ಥ. 

Saturday, September 20, 2014

Shrimad BhAgavata in Kannada -Skandha-02-Ch-06(03)

ಸ್ವಧಿಷ್ಣ್ಯಂ ಪ್ರತಪನ್ ಪ್ರಾಣೋ ಬಹಿಶ್ಚ ಪ್ರತಪತ್ಯಸೌ ।
ಏವಂ ವಿರಾಜಂ ಪ್ರತಪಂಸ್ತಪತ್ಯಂತರ್ಬಹಿಃ ಪುಮಾನ್  ॥೧೬॥

ನಮ್ಮ ದೇಹ ಭಗವಂತನ ವಾಸಸ್ಥಾನ. ಈ ಶರೀರವೇ ಆತನ ಮನೆ! “ಆತ ತನ್ನ ಮನೆಯನ್ನು ತಾನೇ ತುಂಬಿ ಬೆಳಗಿದ”  ಎನ್ನುತ್ತಾನೆ ಚತುರ್ಮುಖ. ಬೆಳಕು ಹಾಯಿಸಿ ಆತ ಎಲ್ಲವನ್ನೂ ಕಂಡನಂತೆ. ಇದಕ್ಕಾಗಿ ಆತನನ್ನು ಕ್ಷೇತ್ರಜ್ಞ ಎನ್ನುತ್ತಾರೆ.  ನಾವು ಕೇವಲ ಕ್ಷೇತ್ರಸ್ಥರು. ನಮ್ಮ ದೇಹದೊಳಗೇನಿದೆ, ಅದು ಹೇಗೆ ಕೆಲಸ ಮಾಡುತ್ತದೆ ಎನ್ನುವ ವಿಷಯವೇ ನಮಗೆ ತಿಳಿದಿಲ್ಲ. ಭಗವಂತ ಪ್ರಾಣಶಕ್ತಿಯಾಗಿ ನಮ್ಮ ದೇಹದೊಳಗೆ ತುಂಬಿ ನಮಗೆ ಚೈತನ್ಯ ಕೊಟ್ಟ, ಚಲನವಲನವನ್ನು ಕೊಟ್ಟ.  ಹೀಗೆ ಪಿಂಡಾಂಡ ಬ್ರಹ್ಮಾಂಡದ ಒಳಗೂ ಹೊರಗೂ ತುಂಬಿ, ಒಳಗೂ ಹೊರಗೂ ಬೆಳಕು ತುಂಬಿಸಿ, ಎಲ್ಲವನ್ನೂ ಕಾಣುತ್ತಾ, ಸಾಕ್ಷಿಯಾಗಿ   ನಿಂತುಬಿಟ್ಟ ಭಗವಂತ.

ಸೋSಮೃತಸ್ಯಾಭಯಸ್ಯೇಶೋ ಮರ್ತ್ಯಮನ್ನಂ ಯದತ್ಯಗಾತ್ ।
ಮಹಿಮೈಷ ತತೋ ಬ್ರಹ್ಮನ್ ಪುರುಷಸ್ಯ ದುರತ್ಯಯಃ  ॥೧೭॥

ಪುರುಷಸೂಕ್ತ ಹೀಗೆ ಹೇಳುತ್ತದೆ: ಉತಾಮೃತತ್ವಸ್ಯೇಶಾನೋ ಯದನ್ನೇನಾತಿರೋಹತಿ ।।೨।। ಏತಾವಾನಸ್ಯ ಮಹಿಮಾSತೋ ಜ್ಯಾಯಾಂಶ್ಚ ಪೂರುಷಃ । ಇದೇ ಮಾತನ್ನು ಇಲ್ಲಿ ಚತುರ್ಮುಖ ವಿವರಿಸುವುದನ್ನು ಕಾಣುತ್ತೇವೆ. ಸಾವಿಲ್ಲದ  ಅಭಯ ಸ್ಥಿತಿ ಎಂದರೆ ಮೋಕ್ಷ. ಇಂಥಹ ಮೋಕ್ಷ ಸ್ಥಿತಿಯಲ್ಲೂ ನಮ್ಮನ್ನು ನಿಯಂತ್ರಿಸುವವನು ಆ ಭಗವಂತ. ಇದನ್ನೇ ವಿಷ್ಣುಸಹಸ್ರನಾಮದಲ್ಲಿ  “ಮುಕ್ತಾನಾಂ ಪರಮಾಗತಿಃ” ಎಂದು ಹೇಳಲಾಗಿದೆ. ಬ್ರಹ್ಮಸೂತ್ರ ಕೂಡಾ “ಮುಕ್ತೋಪಸೃಪ್ಯವ್ಯಪದೇಶಾತ್” (ಮುಕ್ತರು ಹೋಗಿ ಸೇರಬೇಕಾದ ‘ಆಶ್ರಯ’) ಎಂದು ಇದೇ ಮಾತನ್ನು ಹೇಳುತ್ತದೆ. ಒಟ್ಟಿನಲ್ಲಿ ಹೇಳಬೇಕಾದರೆ ಮುಕ್ತಾಮುಕ್ತ ನಿಯಾಮಕ ಆ ಭಗವಂತ.

ಮೇಲಿನ ಶ್ಲೋಕದಲ್ಲಿ “ಭಗವಂತ ಅನ್ನವನ್ನು ಮತ್ತು ಮರ್ತ್ಯವನ್ನು ಮೀರಿ ನಿಂತಿದ್ದಾನೆ” ಎಂದು ವರ್ಣಿಸಿದ್ದಾರೆ. ಇಲ್ಲಿ ಮರ್ತ್ಯ ಎಂದರೆ ಮರಣಶೀಲ ಮತ್ತು ಅನ್ನ (ಅದ್ಯತೇ) ಎಂದರೆ ನಾಶಕ್ಕೊಳಗಾಗುವಂಥಹದ್ದು ಎಂದರ್ಥ. ಆದರೆ ಈ ರೀತಿ ಅರ್ಥ ಮಾಡಿದರೆ ಈ ಎರಡೂ ಪದಗಳು ಸುಮಾರಾಗಿ ಒಂದೇ ಅರ್ಥವನ್ನು ನೀಡುತ್ತವೆ. ಹಾಗಾಗಿ ಇಲ್ಲಿ ಅನ್ನಂ ಎನ್ನುವ ಪದವನ್ನು ಒಂದು ವಿಶೇಷ ಅರ್ಥದಲ್ಲಿ ಬಳಸಲಾಗಿದೆ ಎನ್ನುವುದು ತಿಳಿಯುತ್ತದೆ. ಐತಾರೇಯ ಬ್ರಾಹ್ಮಣ ದಲ್ಲಿ ಹೇಳುವಂತೆ “ಮೇ ಅನ್ನಂ ದಕ್ಷಿಣಾ”  “ನಾನು ಹೆಚ್ಚು ಆಸ್ವಾದಿಸುವ ತತ್ತ್ವ ದಕ್ಷಿಣಾ” ಎನ್ನುತ್ತಾನೆ ಭಗವಂತ.  ಇಲ್ಲಿ ದಕ್ಷಿಣಾ ಎಂದರೆ ಶ್ರೀಲಕ್ಷ್ಮಿ. ಹೀಗಾಗಿ ಭಗವಂತ ಅನ್ನವನ್ನು ಮತ್ತು ಮರ್ತ್ಯವನ್ನು ಮೀರಿ ನಿಂತಿದ್ದಾನೆ ಎಂದರೆ  ಹುಟ್ಟುಸಾವಿಗೆ ಒಳಗಾಗುವ ಬ್ರಹ್ಮಾದಿ ಸಮಸ್ತ ಜೀವರು(ಮರ್ತ್ಯರು) ಮತ್ತು ಜಗತ್ತಿನ ತಾಯಿಯಾದ ಚಿತ್ ಪ್ರಕೃತಿ(ಅನ್ನಂ) ರಮಾದೇವಿಯನ್ನೂ ಕೂಡಾ ಮೀರಿ ನಿಂತಿದ್ದಾನೆ ಎಂದರ್ಥ. ಚತುರ್ಮುಖನನ್ನು ಹಿಡಿದು ಸಮಸ್ತ ಜೀವರೂ ಕ್ಷರರು, ಚಿನ್ಮಯಿಯಾದ ಶ್ರೀಲಕ್ಷ್ಮಿ ನಿತ್ಯಮುಕ್ತಳು. ಎಲ್ಲರನ್ನೂ ಮೀರಿ ನಿಂತಿರುವ ಆ ಭಗವಂತ(ಅಕ್ಷರ) ಮುಕ್ತ ನಿಯಾಮಕ. “ಇಷ್ಟು ಹಿರಿದಾದ ತತ್ತ್ವವನ್ನು ಶಬ್ದಗಳಿಂದ ವರ್ಣಿಸುವುದಾಗಲಿ,  ಆತನ ಮಹಿಮೆಯನ್ನು ಹೇಳಿ ಮುಗಿಸುವುದಾಗಲಿ ಯಾರಿಂದಲೂ ಸಾಧ್ಯವಿಲ್ಲಾ” ಎನ್ನುತ್ತಾನೆ ಚತುರ್ಮುಖ.