Saturday, August 31, 2013

Shrimad BhAgavata in Kannada -Skandha-01-Ch-18(6)

ಧರ್ಮಪಾಲೋ ನರಪತಿಃ ಸ ತು ಸಮ್ರಾಡ್ ಬೃಹಚ್ಛ್ರವಾಃ
ಸಾಕ್ಷಾನ್ಮಹಾಭಾಗವತೋ ರಾಜರ್ಷಿರ್ಹಯಮೇಧಯಾಟ್
ಕ್ಷುತ್ತೃಟ್ ಚ್ರಮಾನ್ವಿತೋ ದೀನೋ ನೈವಾಸ್ಮಚ್ಛಾಪಮರ್ಹತಿ ೪೬

ಪರೀಕ್ಷಿತ ಎಂತಹ ರಾಜನಾಗಿದ್ದ ಎನ್ನುವುದನ್ನು  ಇಲ್ಲಿ ಶಮೀಕರು ವಿವರಿಸಿದ್ದಾರೆ.  “ಭಗವಂತನ ಕೃಪಾಕಟಾಕ್ಷದಿಂದ ಮರುಹುಟ್ಟು ಪಡೆದ ಪರೀಕ್ಷಿತ ಪರಮ ವಿಷ್ಣುಭಕ್ತ.  ಆತ ಒಬ್ಬ ಮಹಾಜ್ಞಾನಿ. ಅಶ್ವಮೇಧಯಾಗವನ್ನು  ಮಾಡಿದ ರಾಜರ್ಷಿ. ಆತ ಸಹಜ ಸ್ಥಿತಿಯಲ್ಲಿ ಈ ರೀತಿ ಮಾಡಿಲ್ಲ, ಹಸಿವು-ಬಾಯಾರಿಕೆ ತಾಳಲಾಗದೇ ಒಂದು ಕ್ಷಣ ಪರವಶತೆಯಲ್ಲಿ ಇಂತಹ ಘಟನೆ ನಡೆಯಿತು . ಘಟನೆ ನಡೆದ ಉತ್ತರ ಕ್ಷಣದಲ್ಲಿ ಆತ ಪಶ್ಚಾತ್ತಾಪ ಪಟ್ಟಿದ್ದಾನೆ. ಹೀಗಿರುವಾಗ ನಮ್ಮಂತವರು ಶಾಪ ಕೊಡುವ ವ್ಯಕ್ತಿ ಅವನಲ್ಲ. ಅವನಿಗೆ ಶಾಪ ಕೊಡಬಾರದಿತ್ತು” ಎಂದು ಮರುಗುತ್ತಾರೆ ಶಮೀಕ ಮುನಿ. ಬಹಳ ಸುಂದರವಾದ ಮಾತುಗಳಿವು. ಏಕೆಂದರೆ ಯಾವುದೇ ಒಂದು ಸಂಗತಿಯನ್ನು ಎಷ್ಟು ಭಿನ್ನ ಆಯಾಮಗಳಿಂದ ನೋಡಬಹುದು ಎನ್ನುವುದನ್ನು ನಾವಿಲ್ಲಿ ಕಾಣಬಹುದು. ಸಮಾಧಿಸ್ಥಿತಿಯಲ್ಲಿ ಧ್ಯಾನಮಗ್ನನಾಗಿದ್ದ ಋಷಿಯ ಹೆಗಲ ಮೇಲೆ ಸತ್ತ ಹಾವನ್ನು ಹಾಕಿರುವುದು ನಮಗೆ ತಪ್ಪಾಗಿ ಕಾಣುತ್ತದೆ. ಆದರೆ ಶಮೀಕರು ಹೇಳುತ್ತಾರೆ: “ಪರೀಕ್ಷಿತ ಏನೂ ತಪ್ಪು ಮಾಡಿಲ್ಲ” ಎಂದು. ಅವರ ದೃಷ್ಟಿಯಲ್ಲಿ ಅದು ಸತ್ತ ಹಾವು. ಅದರಿಂದ ಯಾವ ಅಪಾಯವೂ ಆಗಿಲ್ಲ, ದೈನ್ಯಾವಸ್ಥೆಯಲ್ಲಿ ಪರೀಕ್ಷಿತ ಆ ರೀತಿ ನಡೆದುಕೊಂಡ ಅಷ್ಟೇ.

ಅಪಾಪೇಷು ಸ್ವಭೃತ್ಯೇಷು ಬಾಲೇನಾಪಕ್ವಬುದ್ಧಿನಾ
ಪಾಪಂ ಕೃತಂ ತದ್ಭಗವಾನ್ ಸರ್ವಾತ್ಮಾ ಕ್ಷಂತುಮರ್ಹತಿ ೪೭

 ಶಮೀಕರು ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ: “ಯಾವ ತಪ್ಪೂ ಮಾಡದ, ಪರಮಭಕ್ತನಾದ ಪರೀಕ್ಷಿತನಿಗೆ ತಿಳಿಗೇಡಿ ಹುಡುಗನೊಬ್ಬ ಶಾಪ ಕೊಟ್ಟುಬಿಟ್ಟ. ಪರಿಹಾರವಿಲ್ಲದ ತಪ್ಪು ನಡೆದುಹೋಯಿತು. ಎಲ್ಲರ ಅಂತರ್ಯಾಮಿಯಾಗಿ ನಿಂತು ಎಲ್ಲವನ್ನೂ ನಡೆಸುವ ನೀನು ಆತನನ್ನು ಕ್ಷಮಿಸಿ ಉದ್ಧರಿಸು” ಎಂದು.

ಸಾಧವಃ ಪ್ರಾಯಶೋ ಲೋಕೇ ಪರೈರ್ದ್ವಂದ್ವೇಷು ಯೋಜಿತಾಃ
ನ ವ್ಯಥಂತಿ ನ ಹೃಷ್ಯಂತಿ ಯತ ಆತ್ಮಾಗುಣಾಶ್ರಯಃ ೫೦

ಇಲ್ಲಿ ಉಗ್ರಶ್ರವಸ್ಸು ಶಮೀಕರ ನಡೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಸಜ್ಜನರ ಸ್ವಭಾವವನ್ನು ವಿವರಿಸಿದ್ದಾರೆ. ಸಜ್ಜನರಿಂದಲೂ ಒಮ್ಮೊಮ್ಮೆ ಅಪಚಾರವಾಗುತ್ತದೆ, ಇಲ್ಲವೆಂದಿಲ್ಲ. ಆದರೆ ಸುಮಾರಾಗಿ ಸಜ್ಜನರ ಸ್ವಭಾವೇನೆಂದರೆ- ಸಜ್ಜನರು ತಮಗೆ ದುಃಖ ಕೊಟ್ಟವರ ಮೇಲೆ ಕೋಪಿಸಿಕೊಳ್ಳುವುದಾಗಲಿ, ಉಪಕಾರವಾದಾಗ ಕುಣಿದು ಕುಪ್ಪಳಿಸುವುದಾಗಲಿ ಮಾಡುವುದಿಲ್ಲ. ಏಕೆಂದರೆ ನಾವು ಮಾಡಿದ ಪಾಪ-ಪುಣ್ಯಗಳಿಗೆ ನಾವೇ ಹೊಣೆಗಾರರು ಹೊರತು ಇನ್ನೋಬ್ಬರಲ್ಲ ಎನ್ನುವ ಸತ್ಯ ಅವರಿಗೆ ತಿಳಿದಿರುತ್ತದೆ. ಒಳ್ಳೆಯದನ್ನು ಮಾಡಿದರೆ ಒಳ್ಳೆಯದನ್ನು ಪಡೆಯುತ್ತೇವೆ, ಕೆಟ್ಟದ್ದನ್ನು ಮಾಡಿದರೆ ಕೆಟ್ಟದ್ದನ್ನು ಪಡೆಯುತ್ತೇವೆ. ನಾವು ಮಾಡದೇ ಇದ್ದದ್ದನ್ನು ಇನ್ನೊಬ್ಬರು ನಮಗೆ ಕೊಡುವುದು ಸಾಧ್ಯವಿಲ್ಲ. ಇನ್ನೊಬ್ಬರು ನಮಗೆ ತೊಂದರೆ ಕೊಟ್ಟರೆ ಅದಕ್ಕೆ ಮೂಲಭೂತ ಕಾರಣ ನಾವು ಹಿಂದೆ ಮಾಡಿದ ಪಾಪವೇ ಹೊರತು ಇನ್ನೊಬ್ಬರಲ್ಲ. ನಾವು ಮಾಡಿದ ಪಾಪ ಪಕ್ವವಾಗಿ ನಾವದನ್ನು ಅನುಭವಿಸುವ ಕಾಲ ಬಂದಾಗ, ಅದಕ್ಕೆ ಯಾರೋ ಒಬ್ಬರು ನೆಪವಾಗುತ್ತಾರೆ ಅಷ್ಟೇ. ನಾವು ದುಃಖಕ್ಕೊಳಗಾಗುವ ಪ್ರರಾಬ್ಧಕರ್ಮ ನಮ್ಮಲಿಲ್ಲದಿದ್ದರೆ ಯಾರೂ ನಮಗೆ ದುಃಖ ಕೊಡಲು ಸಾಧ್ಯವಿಲ್ಲ. ಹೀಗಾಗಿ ಇನ್ನೊಬ್ಬರು ಅನ್ಯಾಯ ಮಾಡಿದಾಗ ನಾವು ನಮ್ಮೊಳಗೊಮ್ಮೆ ನೋಡಿಕೊಳ್ಳಬೇಕು. ಇಂತಹ ದುಃಖವನ್ನು ಅನುಭವಿಸಬೇಕಾದ ಪಾಪ ನನ್ನಿಂದ ನಡೆದಿತ್ತು, ಅದಕ್ಕೆ ಭಗವಂತ ಈ ಶಿಕ್ಷೆ ಕೊಟ್ಟ ಅನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಇದನ್ನು ಶಮೀಕರು ತಿಳಿದಿದ್ದರು. ಆದ್ದರಿಂದ ಅವರಿಗೆ ಕೋಪ ಬರಲಿಲ್ಲ.
ಶಮೀಕರು ನಡೆದ ಅಚಾತುರ್ಯವನ್ನು ಪರೀಕ್ಷಿತನಿಗೆ ತಲುಪಿಸುತ್ತಾರೆ. “ತನ್ನ ಮಗ ಅಚಾತುರ್ಯದಿಂದ ಶಾಪವನ್ನಿತ್ತಿದ್ದಾನೆ, ಆ ಶಾಪವನ್ನು ಹಿಂದೆ ತೆಗೆದುಕೊಳ್ಳುವ ಶಕ್ತಿ ನನ್ನಲ್ಲಿಲ್ಲ.  ನಿನ್ನಲ್ಲೀಗ ಉಳಿದಿರುವುದು ಕೇವಲ ಏಳೇ ದಿನಗಳು. ಅದಕ್ಕಾಗಿ ದಯವಿಟ್ಟು ಬೇಕಾದ ವ್ಯವಸ್ಥೆ ಮಾಡಿಕೋ” ಎಂದು ರಾಜನಿಗೆ ಹೇಳಿ ಕಳುಹಿಸುತ್ತಾರೆ.

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ಅಷ್ಟಾದಶೋSಧ್ಯಾಯಃ
ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಹದಿನೆಂಟನೇ ಅಧ್ಯಾಯ ಮುಗಿಯಿತು.
*********

Shrimad BhAgavata in Kannada -Skandha-01-Ch-18(5)

ಇದೇ ಸಮಯದಲ್ಲಿ ಇತ್ತ ಶಮೀಕ ಮುನಿಯ ಆಶ್ರಮದಲ್ಲಿ ಸತ್ತ ಹಾವನ್ನು ಪರೀಕ್ಷಿತ ತಂದೆಯ ಹೆಗಲ ಮೇಲೆ ಹಾಕಿರುವ ವಿಷಯ ಶಮೀಕನ ಮಗ ಶೃಂಗಿಗೆ ತಿಳಿಯುತ್ತದೆ. ದೂರದಲ್ಲಿ ಋಷಿ ಕುಮಾರರೊಂದಿಗೆ ಆಟವಾಡುತ್ತಿದ್ದ ಆತನಿಗೆ ಈ ಸುದ್ದಿ ಕೇಳಿದ ತಕ್ಷಣ ಕೋಪ ಬರುತ್ತದೆ. ಕೋಪದಲ್ಲಿ ಆತ ಹೇಳುತ್ತಾನೆ: “ರಾಜರುಗಳಿಗೆ ತಪಸ್ಸು ಮಾಡಿ ಶಕ್ತಿ ಕೊಡುವವರು ನಾವು; ನಮ್ಮ ಮನೆ ಕಾಯುವ ನಾಯಿಗಳು ಮನೆಯೊಳಗೆ ಬಂದು ನಮ್ಮ ಮೇಲೇ ಸವಾರಿ ಮಾಡುತ್ತವೆ” ಎಂದು.

ಕೃಷ್ಣೇ ಗತೇ ಭಗವತಿ ಶಾಸ್ತರ್ಯುತ್ಪಥಗಾಮಿನಾಮ್
ತಾನ್ ಭಿನ್ನಸೇತೂನದ್ಯಾಹಂ ಶಾಸ್ಮಿ ಪಶ್ಯತ ಮೇ ಬಲಮ್ ೩೫

 “ಶ್ರೀಕೃಷ್ಣನಿದ್ದಾಗ ಈ ಎಲ್ಲಾ ಕ್ಷತ್ರಿಯರು ಹೆದರಿ ಓಡುತ್ತಿದ್ದರು. ಆಗ ಯಾರೂ ಅನ್ಯಾಯ ಮಾಡುತ್ತಿರಲಿಲ್ಲ. ಏಕೆಂದರೆ ದಾರಿ ತಪ್ಪಿದವರಿಗೆ ಶ್ರೀಕೃಷ್ಣ ತಕ್ಕ ಶಾಸ್ತಿ ಮಾಡುತ್ತಿದ್ದ. ಆದರೆ ಶ್ರೀಕೃಷ್ಣ ಹೊರಟುಹೋದ ಮೇಲೆ, ಇವರಿಗೆಲ್ಲಾ ಬಾರೀ ಧೈರ್ಯ ಬಂದಿದೆ. ಈ ದಾರಿ ತಪ್ಪಿದ ಮಂದಿಗೆ ಶ್ರೀಕೃಷ್ಣ ಇರುತ್ತಿದ್ದರೆ ಏನು ಮಾಡುತ್ತಿದ್ದನೋ, ಅದನ್ನು ನಾನು ಮಾಡುತ್ತೇನೆ” ಎಂದು ಅಹಂಕಾರದಿಂದ ನುಡಿಯುತ್ತಾನೆ ಮುನಿಕುಮಾರ. “ಮುನಿಕುಮಾರನ ಸಿಟ್ಟೆಂದರೆ ಏನೆಂಬುದನ್ನು ನೀವೂ ನೋಡಿ” ಎಂದು ತನ್ನ ಸ್ನೇಹಿತರ ಮುಂದೆ ಬಡಾಯಿ ಕೊಚ್ಚಿಕೊಳ್ಳುತ್ತಾನೆ ಆತ.

ಇತ್ಯುಕ್ತ್ವಾ ರೋಷತಾಮ್ರಾಕ್ಷೋ ವಯಸ್ಯಾನೃಷಿಬಾಲಕಾನ್
ಕೌಶಿಕ್ಯಾಪ ಉಪಸ್ಪೃಶ್ಯ ವಾಗ್ವಜ್ರಂ ವಿಸಸರ್ಜ ಹ ೩೬

ಶೃಂಗಿ ಇನ್ನೂ ಚಿಕ್ಕ ಹುಡುಗ. ಆದರೆ ಬಾಲ್ಯದಿಂದಲೂ ಸಾಧನೆ ಮಾಡಿ ಆತನಲ್ಲಿ ತಪಃಶಕ್ತಿ ಬೆಳೆದಿದೆ. ಇಲ್ಲಿ ಕೋಪಗೊಂಡ ಆತನ ಕಣ್ಣುಗಳು ಕೆಂಪಾಗಿವೆ. ಆತ ಕೋಪದಿಂದ ದುಡುಕಿ ಶಾಪವೆನ್ನುವ ವಜ್ರಾಯುಧವನ್ನು ಪರೀಕ್ಷಿತನತ್ತ ಎಸೆಯುತ್ತಾನೆ.
ಅನೇಕ ಭಾಷ್ಯಾಕಾರರು ಈ ಶ್ಲೋಕದಲ್ಲಿ ಬಂದಿರುವ  “ಕೌಶಿಕ್ಯಾಪ ಉಪಸ್ಪೃಶ್ಯ” ಎನ್ನುವ ಮಾತನ್ನು “ಕೌಶಿಕ ನದಿಯ ನೀರಿನಿಂದ ಆಚಮನ ಮಾಡಿ” ಎಂದು ಅರ್ಥೈಸಿದ್ದಾರೆ. ಆದರೆ ನಮಗೆ ತಿಳಿದಂತೆ ಪರೀಕ್ಷಿತ ರಾಜ ಎಲ್ಲೂ ನೀರನ್ನು ಕಾಣದೇ ಮುನಿಯ ಆಶ್ರಮ ಪ್ರವೇಶಿಸಿದ್ದ. ಇದರಿಂದ ನಮಗೆ ಅಲ್ಲಿ ಹತ್ತಿರದಲ್ಲಿ ಎಲ್ಲೂ ನದಿ ಇರಲಿಲ್ಲ ಎನ್ನುವುದು ತಿಳಿಯುತ್ತದೆ. ಹಾಗಾಗಿ ಆಚಾರ್ಯ ಮಧ್ವರು  “ಕೌಶಿಕ್ಯಾಪ ಉಪಸ್ಪೃಶ್ಯ” ಎಂದರೆ “ಕೌಶಿಕೀ ಕುಶಪಾಣಿಃ ” ಎಂದು ವಿವರಿಸಿದ್ದಾರೆ.  ಅಂದರೆ “ಕುಶದಿಂದ(ದರ್ಭೆಯಿಂದ) ನಿರ್ಮಿತವಾದ (ಕೌಶಿಕೀ) ‘ಪವಿತ್ರ’ವನ್ನು ಕೈಯಲ್ಲಿ ಧರಿಸಿ” ಎಂದರ್ಥ.  ಶೃಂಗಿ ‘ಪವಿತ್ರ’ವನ್ನು ಕೈಯಲ್ಲಿ ಧರಿಸಿ, ಮಂತ್ರಸ್ನಾನ(ಆಚಮನ) ಮಾಡಿ, ಪರೀಕ್ಷಿತನಿಗೆ ಶಾಪವನ್ನಿತ್ತ.
[ಧರ್ಭೆಯ ‘ಪವಿತ್ರ’ವನ್ನು ಕೈಯಲ್ಲಿ ಧರಿಸುವುದರಿಂದ ಅಲ್ಲಿ ದುಷ್ಟ ಶಕ್ತಿಗಳ ಪ್ರವೇಶವಾಗುವುದಿಲ್ಲ. ಇನ್ನು ಆಚಮನ ಎಂದರೆ- ಭಗವಂತನ ನಾಮ ಮತ್ತು ವೇದ ಮಂತ್ರಗಳಿಂದ ಅಂಗಾಂಗಗಳಲ್ಲಿ ಭಗವಂತನ ಚಿಂತನೆ ಮಾಡಿ, ಭಗವಂತ ತನ್ನನ್ನು ಶುದ್ಧಗೊಳಿಸಲಿ ಎಂದು ಅಂತರಂಗದಲ್ಲಿ ಸ್ಮರಣೆ ಮಾಡುವುದು].  

ಇತಿ ಲಂಘಿತಮರ್ಯಾದಂ ತಕ್ಷಕಃ ಸಪ್ತಮೇSಹನಿ
ದಂಕ್ಷ್ಯತಿ ಸ್ಮ ಕುಲಾಂಗಾರಂ ಚೋದಿತೋ ಮೇ ಪಿತೃದ್ರುಹಮ್ ೩೭

 “ಒಬ್ಬ ರಾಜನಾಗಿ ಮಹರ್ಷಿಗಳಿಗೆ ಹೇಗೆ ಗೌರವ ಸಲ್ಲಿಸಬೇಕು ಅನ್ನುವುದನ್ನು ಅರಿಯದೇ, ಸಂಪ್ರದಾಯವನ್ನು ಮುರಿದು, ನನ್ನ ತಂದೆಗೆ ದ್ರೋಹ ಬಗೆದ ಪರೀಕ್ಷಿತನನ್ನು, ಇಂದಿನಿಂದ ಏಳನೇ ದಿನಕ್ಕೆ, ನನ್ನ ಪ್ರೇರಣೆಯಂತೆ, ನಾಗರ ಕಚ್ಚಿ ನಾಶಮಾಡಲಿ” ಎಂದು ಮುನಿಕುಮಾರ ಶಾಪವನ್ನೀಯುತ್ತಾನೆ. ಇಂತಹ ಘೋರ ಶಾಪವನ್ನಿತ್ತ ಬಳಿಕ ಶೃಂಗಿ ತಂದೆಯ ಬಳಿ ಬಂದು ಅಳುತ್ತಾ ಕೂರುತ್ತಾನೆ.
ಸಮಾಧಿ ಸ್ಥಿತಿಯಿಂದ ಈಚೆ ಬಂದ ಶಮೀಕ ಮುನಿಗೆ ತನ್ನ ಹೆಗಲ ಮೇಲೆ ಸತ್ತ ಹಾವಿರುವುದು ತಿಳಿಯುತ್ತದೆ. ಆತ ತಕ್ಷಣ ಆ ಹಾವನ್ನು ದೂರ ಎಸೆಯುತ್ತಾನೆ. ಅದೇ ಸಮಯದಲ್ಲಿ ಆತ ತನ್ನೆದುರು ಅಳುತ್ತಾ ಕುಳಿತಿರುವ ತನ್ನ ಮಗನನ್ನು ಕಂಡು “ಏಕೆ ಅಳುತ್ತಿರುವೆ? ಏನಾಯ್ತು?” ಎಂದು ಕೇಳುತ್ತಾನೆ. ಆಗ ಮುನಿಕುಮಾರ ಹೇಳುತ್ತಾನೆ: “ಒಂದು ಅನ್ಯಾಯ ನಡೆದು ಹೋಯಿತು. ನಮ್ಮ ಕಾಲಿಗೆ ಬೀಳಬೇಕಾದ ಪರೀಕ್ಷಿತ ನಿಮ್ಮ ಹೆಗಲ ಮೇಲೆ ಸತ್ತ ಹಾವನ್ನು ಹಾಕಿ ನಮಗೆ ಅವಮಾನ ಮಾಡಿದ. ಈ ರೀತಿ ನಮ್ಮನ್ನು ಅವಮಾನಗೊಳಿಸಿದ ಆತನಿಗೆ ನಾನು ಶಾಪ ಕೊಟ್ಟೆ” ಎಂದು.
ತನ್ನ ಪುತ್ರ ಶೃಂಗಿಯ ಮಾತನ್ನು ಕೇಳಿಸಿಕೊಂಡ ಶಮೀಕ ಮುನಿ ಹೇಳುತ್ತಾನೆ: “ಎಂತಹಾ ತಪ್ಪು ಮಾಡಿಬಿಟ್ಟೆ? ಪರೀಕ್ಷಿತ ನಮಗೆ ಏನು ಅನ್ಯಾಯ ಮಾಡಿದ? ಆತ ಹಾಕಿರುವುದು ಸತ್ತ ಹಾವನ್ನು. ಆ ಸತ್ತ ಹಾವಿನಿಂದ ನಮ್ಮ ಬದುಕಿನಲ್ಲಿ ಯಾವ ವ್ಯತ್ಯಯವಾಯಿತು? ಏನೂ ಅನ್ಯಾಯ ಮಾಡದ ಅವನಿಗೆ ಇಂತಹ ಘೋರ ಶಾಪವನ್ನಿತ್ತ ನೀನು ಮೂರ್ಖ” ಎಂದು.

ಅರಕ್ಷಮಾಣೇ ನರದೇವನಾಮ್ನಿ ರಥಾಂಗಪಾಣಾವಯಮಂಗ ಲೋಕಃ
ತದಾ ಹಿ ಚೋರಪ್ರಚುರೋ ವಿನಂಕ್ಷ್ಯತ್ಯರಕ್ಷ್ಯಮಾಣೋ ವಿವರೂಥವತ್ ಕ್ಷಣಾತ್ ೪೩

 “ರಾಜಾ ಪ್ರತ್ಯಕ್ಷ ದೇವತಾ” ಎನ್ನುವ ಮಾತೊಂದಿದೆ. ಪರೀಕ್ಷಿತ ರಾಜ ಎಂದರೆ ಅಂತಿಂತಹ ಮನುಷ್ಯನಲ್ಲ. “ಅವನು ನರದೇವ” ಎನ್ನುತ್ತಾನೆ ಶಮೀಕ. ಅಂದರೆ: ಮನುಷ್ಯ ರೂಪದಲ್ಲಿ ರಕ್ಷಣೆ ಮಾಡಲು ಬಂದಿರುವ ದೇವಾಂಶ ಸಂಭೂತ. ಚಕ್ರಪಾಣಿಯಾದ ಭಗವಂತ ಪ್ರತಿಯೊಬ್ಬ ಕ್ಷತ್ರಿಯನಲ್ಲೂ ಕೂಡಾ ‘ರಾಜರಾಜೇಶ್ವರ’ ನಾಮಕನಾಗಿ ಸನ್ನಿಹಿತನಾಗಿದ್ದಾನೆ. “ಹೀಗಿರುವಾಗ ಭಗವದ್ ಸನ್ನಿಧಾನಕ್ಕೆ ಪಾತ್ರನಾಗಿರುವ ಪರೀಕ್ಷಿತನಿಗೆ ನೀನು ಶಾಪ ಕೊಟ್ಟೆಯಲ್ಲಾ” ಎಂದು ಮರುಗುತ್ತಾನೆ ಮುನಿ.  “ನಿನ್ನ ಶಾಪದಿಂದ ಮಹಾತ್ಮನಾದ ಪರೀಕ್ಷಿತ ಏಳು ದಿನಗಳಲ್ಲಿ ಸಾಯುತ್ತಾನೆ. ಆಗ ಈ ದೇಶದಲ್ಲಿ ಅರಾಜಕತೆ ಉಂಟಾಗುತ್ತದೆ. ಇದರಿಂದಾಗಿ ದೇಶದಾದ್ಯಂತ ಕಳ್ಳ-ಕಾಕರು ತುಂಬಿ ದೇಶವನ್ನು ದೋಚುತ್ತಾರೆ. ಯಾರೂ ಮರ್ಯಾದೆಯಿಂದ ಬದುಕಲು ಸಾಧ್ಯವಿಲ್ಲದಾಗುತ್ತದೆ. ಇಂತಹ ಸ್ಥಿತಿಗೆ ಈ ದೇಶವನ್ನು ತಳ್ಳಿದೆ ನೀನು” ಎನ್ನುತ್ತಾನೆ ಶಮೀಕ.
ಈ ಶ್ಲೋಕದಲ್ಲಿ ‘ವಿವರೂಥ’ ಎನ್ನುವ ಪದ ಬಳಕೆಯಾಗಿದೆ. ಇದೊಂದು ಅಪೂರ್ವವಾದ ಶಬ್ದ. ಸಂಸ್ಕೃತದಲ್ಲಿ ‘ವರೂಥಿನಿ’ ಎಂದರೆ ಸೇನೆ. ‘ವರೂಥ’ ಎಂದರೆ ಸಾಮಾನ್ಯವಾಗಿ ರಕ್ಷಣೆ ಎಂದರ್ಥ. ಸೇನೆಯ ಮೂಲಕ ರಕ್ಷಣೆ ಅಥವಾ ವ್ಯೂಹ ರಚಿಸಿ ಸೇನೆಗೆ ರಕ್ಷಣೆ ನೀಡುವುದನ್ನು ‘ವರೂಥ’ ಎನ್ನುತ್ತಾರೆ. ಅಭೇಧ್ಯ ಕೋಟೆ  ‘ವರೂಥ’ . ಒಟ್ಟಿನಲ್ಲಿ ವರೂಥ ಎಂದರೆ ಆವರಣ ಅಥವಾ ತಡೆ. ಕಳ್ಳ-ಕಾಕರನ್ನು ತಡೆಯುವ ವ್ಯವಸ್ಥೆ ಇಲ್ಲದಿರುವುದು ‘ವಿವರೂಥ’.
ರಕ್ಷಕನಾದ ರಾಜ ಇಲ್ಲದಾದಾಗ ಆ ದೇಶ ನಾಶವಾಗುತ್ತದೆ. “ನಿನ್ನ ಶಾಪದಿಂದಾಗಿ ಇಡೀ ದೇಶಕ್ಕೆ ಅನ್ಯಾಯವಾಯಿತು. ಪರೀಕ್ಷಿತ ರಾಜ  ಧರ್ಮದ ಪ್ರಕಾರ ದೇಶವನ್ನು ರಕ್ಷಣೆ ಮಾಡುತ್ತಿರುವವನು. ಆತನಿಂದಾಗಿ ನಾವಿಲ್ಲಿ ನಿರಾತಂಕವಾಗಿ ತಪಸ್ಸು ಮಾಡುತ್ತಿದ್ದೇವೆ. ಅಂತಹ ಸಜ್ಜನ ಸಾಯುವಂತೆ ಮಾಡಿ ಬಹಳ ದೊಡ್ಡ ಅನ್ಯಾಯ ಮಾಡಿದೆ ನೀನು” ಎನ್ನುತ್ತಾನೆ ಶಮೀಕ.

ತದದ್ಯ ನಃ ಪಾಪಮುಪೈತ್ಯನನ್ವಯಂ ಯನ್ನಷ್ಟನಾಥಸ್ಯ ಪಶೋರ್ವಿಲುಂಪಕಾಃ
ಪರಸ್ಪರಂ ಘ್ನಂತಿ ಶಪಂತಿ ವೃಂಜತೇ ಪಶೂನ್ ಸ್ತ್ರೀಯೋSರ್ಥಾನ್ ಪುರುದಸ್ಯವೋ ಜನಾಃ ೪೪

“ನೀನು ಮಾಡಿದ ಈ ತಪ್ಪಿನಿಂದಾಗಿ ನಾನು ಪರಿಹಾರವಿಲ್ಲದ ಪಾಪಕ್ಕೆ ಬಲಿಯಾದೆ. ಈ ತಪ್ಪಿಗೆ ಪ್ರಾಯಶ್ಚಿತವಿಲ್ಲ. ನೇತಾರನಿಲ್ಲದ ರಾಷ್ಟ್ರವನ್ನು ದರೋಡೆಕೋರರು ದೋಚುತ್ತಾರೆ. ಪುಂಡ-ಪೋಕರಿಂದ ದೇಶದ ನಾಗರೀಕ ವ್ಯವಸ್ಥೆ ಅಸ್ತವ್ಯಸ್ತವಾಗುತ್ತದೆ. ಅವರು ಪಶುಗಳನ್ನೂ, ಸ್ತ್ರೀಯರನ್ನೂ ಮತ್ತು ಸಂಪತ್ತನ್ನೂ ದೋಚುತ್ತಾರೆ. ಜನ ಒಬ್ಬರಿಗೊಬ್ಬರು ಜಗಳಾಡಿಕೊಂಡು ಶಾಪ ಹಾಕಿಕೊಂಡು ಬದುಕುತ್ತಾರೆ.    ಇಂತಹ ಘೋರ ಅಪರಾಧ ಮಾಡಿದೆಯಲ್ಲಾ” ಎಂದು ಮಗನನ್ನು ಬಯ್ಯುತ್ತಾನೆ ಶಮೀಕ ಮುನಿ.

ಈ ಶ್ಲೋಕದಲ್ಲಿ ‘ಪಶೋರ್ವಿಲುಂಪಕಾಃ’ ಎನ್ನುವ ಪದ ಬಳಕೆಯನ್ನು ಮೇಲ್ನೋಟದಲ್ಲಿ ನೋಡಿದರೆ “ದರೋಡೆಕೋರರು ಪಶುಗಳನ್ನು ದೋಚುತ್ತಾರೆ” ಎಂದು ಹೇಳಿದಂತೆ ಕಾಣುತ್ತದೆ. ಆದರೆ ಇಲ್ಲಿ  ‘ಪಶು’ ಎನ್ನುವ ಪದಕ್ಕೆ ಒಂದು ವಿಶಿಷ್ಠವಾದ ಅರ್ಥ ವಿವರಣೆಯನ್ನು ಆಚಾರ್ಯ ಮಧ್ವರ ತಾತ್ಪರ್ಯ ನಿರ್ಣಯದಲ್ಲಿ ಕಾಣುತ್ತೇವೆ. ಅಲ್ಲಿ ಆಚಾರ್ಯರು ‘ಪಶು’ ಶಬ್ದಕ್ಕೆ ಕೊಶವನ್ನು  ನೀಡಿದ್ದಾರೆ. ವಿಡ್ ರಾಷ್ಟ್ರಂ ಪಶುರುತ್ಸೇಕೋ ಭ್ರಮರಶ್ಚೇತಿ ಕಥ್ಯತೇ ಅಂದರೆ ವಿಡ್, ರಾಷ್ಟ್ರ, ಪಶು, ಉತ್ಸೇಕ  ಮತ್ತು ಭ್ರಮರ  ಇವು ಸಮಾನಾರ್ಥಕ ಪದಗಳು ಎಂದರ್ಥ. ಆದ್ದರಿಂದ ‘ಪಶೋರ್ವಿಲುಂಪಕಾಃ’ ಎಂದರೆ ಪಶುಗಳನ್ನು ದೋಚುತ್ತಾರೆ ಎಂದರ್ಥವಲ್ಲ, ರಾಷ್ಟ್ರವನ್ನು ದೋಚುತ್ತಾರೆ ಎಂದರ್ಥ.

Sunday, August 25, 2013

Shrimad BhAgavata in Kannada -Skandha-01-Ch-18(4)

ಇಲ್ಲಿ ಸರ್ವೇಸಾಮಾನ್ಯವಾಗಿ ನಮಗೊಂದು ಪ್ರಶ್ನೆ ಬರುತ್ತದೆ. ಅದೇನೆಂದರೆ: ಕಲಿಯನ್ನು ನಿಗ್ರಹ ಮಾಡಿದ್ದ ಪರೀಕ್ಷಿತನೊಳಗೆ ಕಲಿ ಹೇಗೆ ಪ್ರವೇಶಿಸಿದ ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರಿಸಬೇಕಾದರೆ ನಾವು ಭಾಗವತವನ್ನು ಸ್ವಲ್ಪ ವಿಶ್ಲೇಷಣೆ ಮಾಡಿ ನೋಡಬೇಕು. ಈ ಹಿಂದೆ ಹೇಳಿದಂತೆ ಪರೀಕ್ಷಿತ ಕಲಿ ಮತ್ತು ಆತನ ಪರಿವಾರದ ವಾಸಕ್ಕೆ ಐದು ಸ್ಥಾನಗಳನ್ನು ಕೊಟ್ಟಿದ್ದ. ಅವುಗಳೆಂದರೆ ದ್ಯೂತ, ಮದ್ಯ, ಸ್ತ್ರೀ, ಮಾಂಸ ಮತ್ತು ಚಿನ್ನ. ಶಾಸ್ತ್ರದಲ್ಲಿ ಹೇಳುವಂತೆ ಈ ಐದು ಸ್ಥಾನಗಳು ಕಲಿಯ ಆಕ್ರಮಣ ಸ್ಥಾನವಾಗಿರುವುದರಿಂದ, ಜೀವನದಲ್ಲಿ ಎತ್ತರಕ್ಕೇರ ಬಯಸುವವರು ಇವುಗಳ ಬೆನ್ನು ಹತ್ತಬಾರದು. ವಿಶೇಷವಾಗಿ ರಾಜರುಗಳಿಗೆ ಈ ಸ್ಥಾನಗಳ ಸೆಳೆತ ಹೆಚ್ಚು. ಅವರು ಅನೇಕ ಮಂದಿ ಸ್ತ್ರೀಯರ ನಡುವೆ ಮಾಂಸ-ಮದ್ಯ ಸೇವನೆ ಮಾಡಿಕೊಂಡು ಇರುವವರು. ಅವರಿಗೆ ಅದು ನಿಷಿದ್ಧವೂ ಅಲ್ಲ. ಆದ್ದರಿಂದ ಧರ್ಮಶೀಲ ರಾಜನಾದವನಿಗೆ  ಇವುಗಳ ಅಪಾಯ ಹೆಚ್ಚು ಮತ್ತು ಆತ ಆ ಕುರಿತು ಅತಿ ಹೆಚ್ಚು ಎಚ್ಚರ ವಹಿಸಬೇಕು. ಇಷ್ಟೇ ಅಲ್ಲದೆ, ಗೀತೆಯಲ್ಲಿ ಕೃಷ್ಣ ಹೇಳುವಂತೆ: ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ । ಸ ಯತ್ ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ   ॥೩-೨೧॥ ಲೋಕಪಾಲಕ ರಾಜ ಏನನ್ನು ಪಾಲನೆ ಮಾಡುತ್ತಾನೋ ಅದನ್ನೇ ಆತನ ಪ್ರಜೆಗಳು ಪಾಲಿಸುತ್ತಾರೆ. ಅವನು ಯಾವುದನ್ನು ಆಧಾರವಾಗಿ ಬಳಸುತ್ತಾನೋ ಜನತೆ ಅದನ್ನೇ ಬೆನ್ನು ಹತ್ತುತ್ತದೆ. ಅಥೈತಾನಿ ನ ಸೇವೇತ ಬುಭೂಷುಃ ಪುರುಷಃ ಕ್ವಚಿತ್ ವಿಶೇಷತೋ ಧರ್ಮಶೀಲೋ ರಾಜಾ ಲೋಕಪತಿರ್ಗುರುಃ ಭಾಗವತ-೦೧-೧೭-೪೦ ರಾಜನಾದವನು ಪ್ರಜಾಪಾಲಕ. ಆತ ಪ್ರಜೆಗಳ ಮಾರ್ಗದರ್ಶಕ ಮತ್ತು ಗುರು. ಹಾಗಾಗಿ ಸಾಮಾನ್ಯರಿಗಿಂತ ಮುಂದಾಳುವಾದವನ ಹೊಣೆಗಾರಿಕೆ ದೊಡ್ಡದು.
ಈ ಹಿಂದೆ ವಿಶ್ಲೇಶಿಸಿದಂತೆ: ಇಲ್ಲಿ ಕಲಿಸ್ಥಾನಗಳನ್ನು ಬಳಸಬಾರದು ಎಂದರೆ ಅವಿಹಿತವಾದುದನ್ನು ಬಳಸಬಾರದು ಎಂದರ್ಥ. (“ವಿಹಿತಾತಿರೇಕೇಣ ನ ಸೇವೇತೇತಿ”). ಆದ್ದರಿಂದ ಯಾವುದು ಯಾರಿಗೆ ವಿಹಿತ ಎನ್ನುವುದನ್ನು ತಿಳಿಯುವುದು ಬಹಳ ಮುಖ್ಯ. ಉದಾಹರಣೆಗೆ ಮದ್ಯಪಾನ, ಮಾಂಸಭಕ್ಷಣೆ ಮತ್ತು ಸ್ತ್ರೀಸಂಗ. ಇದು ಯಾರಿಗೆ ವಿಹಿತ ಮತ್ತು ಎಷ್ಟು ವಿಹಿತ? ಇವೆಲ್ಲವನ್ನೂ ಪೂರ್ಣವಾಗಿ ಬಿಡಬೇಕು ಎಂದು ಶಾಸ್ತ್ರ ಹೇಳುವುದಿಲ್ಲ. ಎಲ್ಲವದಕ್ಕೂ ಒಂದು ವ್ಯವಸ್ಥೆಯನ್ನು ಶಾಸ್ತ್ರ ಹೇಳುತ್ತದೆ. ಈ ಎಲ್ಲಾ ಸ್ಥಾನಗಳು ಭಗವಂತನ ಪೂಜಾರೂಪವಾದಾಗ ವಿಹಿತವಾಗುತ್ತದೆ ಮತ್ತು ಚಟವಾದಾಗ ದೋಷವಾಗುತ್ತದೆ. ಈ ಕುರಿತು ಆಚಾರ್ಯ ಮಧ್ವರು ಭಾಗವತ ತಾತ್ಪರ್ಯ ನಿರ್ಣಯದಲ್ಲಿ(ಹನ್ನೊಂದನೇ ಸ್ಕಂಧ- ಅಧ್ಯಾಯ ಐದು, ಶ್ಲೋಕ-ಹನ್ನೊಂದು)  ಪ್ರಮಾಣಶ್ಲೋಕದೊಂದಿಗೆ ಸುಂದರ ವಿವರಣೆಯೊಂದನ್ನು ನೀಡಿದ್ದಾರೆ:  
ವ್ಯವಾಯಾಮಿಷಮದ್ಯಾನಿ ಹರೇಃ ಪೂಜಾರ್ಥಮೇವ ತು   ಸ್ತ್ರೀ-ಪುರುಷ ಸಮಾಗಮ, ಮದ್ಯಪಾನ ಮತ್ತು ಮಾಂಸಭಕ್ಷಣೆಯನ್ನು ಭಗವಂತನ ಪೂಜಾರೂಪವಾಗಿ ಬಳಸುವಂತಹ ಒಂದು ವಿಧಿ ಇದೆ. ಅಂತಹ ಸಂದರ್ಭದಲ್ಲಿ ಇವು ದೋಷವಾಗುವುದಿಲ್ಲ. ವಾಮದೇವ್ಯೋ ನಾಮ ಯಜ್ಞೋ ವ್ಯವಾಯೋ ಹರಿಪೂಜನಮ್ ಉಪನಿಷತ್ತಿನಲ್ಲಿ ವಾಮದೇವ ಎನ್ನುವ ಯಜ್ಞದ ಕುರಿತು ಹೇಳುತ್ತಾರೆ. ಇದು ಸ್ತ್ರೀ-ಪುರುಷ ಸಮಾಗಮವನ್ನು ಭಗವಂತನ ಯಜ್ಞರೂಪದಲ್ಲಿ ಅನುಸಂಧಾನ ಮಾಡುವ ವಿಧಾನ. ದಂಪತಿಗಳು “ಲಕ್ಷ್ಮೀನಾರಾಯಣರು ನಮ್ಮೊಳಗಿದ್ದು, ನಮ್ಮನ್ನು ಪ್ರತೀಕವಾಗಿ ಬಳಸಿ, ಪ್ರಜಾವೃದ್ಧಿಗಾಗಿ ನಮ್ಮಿಂದ ಈ ಪವಿತ್ರ ಕಾರ್ಯ ಮಾಡಿಸುತ್ತಿದ್ದಾರೆ” ಎನ್ನುವ ಅನುಸಂಧಾನದಿಂದ  ಒಂದಾದಾಗ ಅದು ಭಗವಂತನ ಪೂಜೆಯಾಗುತ್ತದೆ. ಈ ರೀತಿ ಭೋಗದ ಹಿಂದೆ ಭವ್ಯವಾದ ಅನುಸಂಧಾನವಿದ್ದಾಗ ಅದು ಹರಿಪೂಜೆಯಾಗುತ್ತದೆ.  ಪಿತೃ ಯಜ್ಞೋ ದೇವ ಯಜ್ಞೋ ಮಾಂಸೇನ ಪರಿಪೂಜನಮ್ ಪಿತೃಯಜ್ಞ ಮತ್ತು ದೇವಯಜ್ಞದಲ್ಲಿ ಪ್ರಾಣಿಗಳನ್ನು ಬಲಿ ಕೊಡುವ ವಿಧಾನವಿದೆ. ಈ ರೀತಿಯ ಯಜ್ಞವನ್ನು ಕ್ಷತ್ರಿಯರು ಮಾಡುತ್ತಿದ್ದರು. ಇಲ್ಲಿ ಅವರು ತಾವು ತಿನ್ನುವ ಆಹಾರವನ್ನು ಭಗವಂತನಿಗೆ ಅರ್ಪಿಸಿ, ಅದನ್ನು ಭಗವಂತನ ಪ್ರಸಾದ ರೂಪವಾಗಿ ಸೇವಿಸುತ್ತಾರೆ. ಈ ರೀತಿಯ ಪ್ರಾಣಿಹಿಂಸೆ ಅಥವಾ  ಮಾಂಸಾಹಾರ ಅವಿಹಿತವಲ್ಲ. ಆದರೆ ಇಲ್ಲಿ ಒಂದು ಎಚ್ಚರ ಅಗತ್ಯ. ಯಾರಿಗೆ ಮಾಂಸ ಭಕ್ಷಣೆ ಅವಿಹಿತವೋ(ಉದಾಹರಣೆಗೆ ವಿಪ್ರರು) ಅವರು ಈ ರೀತಿ ದೇವರಿಗೆ ಅರ್ಪಿಸಿ ಸೇವಿಸುವಂತಿಲ್ಲ. ಕೇವಲ ಮಾಂಸಭಕ್ಷಣೆ ಮಾಡುವವರು ಮಾತ್ರ ಅದನ್ನು ದೇವರಿಗೆ ಅರ್ಪಿಸಿ ಸೇವಿಸಬಹುದು ಅಷ್ಟೇ.  ವ್ಯವಾಯಯಜ್ಞೇ ಮದ್ಯಂ ತು ಸೋಮಾತ್ಮಕತಯೇಷ್ಯತೇ  ಕ್ಷತ್ರಿಯರಿಗೆ ಮದ್ಯಪಾನ ನಿಷಿದ್ಧವಲ್ಲ. ಅವರು ಸ್ತ್ರೀ-ಪುರುಷ ಸಮಾಗಮದ ಪೂರ್ವಭಾವಿಯಾಗಿ ಮದ್ಯಪಾನ ಮಾಡಬಹುದು. ಅವರಿಗೆ ಸೃಷ್ಟಿಯಜ್ಞವಾದ ಸ್ತ್ರೀ-ಪುರುಷ ಸಮಾಗಮದಲ್ಲಿ  ಮದ್ಯ ಹವಿಸ್ಸಿನಂತೆ. ಆದರೆ ಇಂತಹ ಸೇವನೆ ಅಧ್ಯಯನ, ಅಧ್ಯಾಪನ ಮುಂತಾದ ಭೌದ್ಧಿಕ ಕಾರ್ಯ ಮಾಡುವವರಿಗೆ ನಿಷಿದ್ಧ. ಕ್ಷತ್ರಿಯಾದೇರ್ನ ವಿಪ್ರಾಣಾಂ ವಿಪ್ರೋ ದೋಷೇಣ ಲಿಪ್ಯತೇ ಒಂದು ವೇಳೆ ಕ್ಷತ್ರಿಯರು ಪ್ರಾಣಿಯನ್ನು ಯಜ್ಞದಲ್ಲಿ ಬಳಸಿದರೆ, ಅವರು ಅದನ್ನು ಸೇವಿಸಬಹುದು. ಆದರೆ ಅಲ್ಲಿ ಪೌರೋಹಿತ್ಯ ಮಾಡಿದ ಋತ್ವಿಜರು ಅದನ್ನು ಸೇವಿಸುವಂತಿಲ್ಲ. ಆರಾಗತಃ ಪ್ರವೃತ್ತಿಃ ಸ್ಯಾದ್ರಾಗೋ ದೋಷಸ್ಯ ಕಾರಣಮ್ ಪ್ರಾಣಭಕ್ಷೋSಥವಾ ಯಜ್ಞೇ ದೈವೇ ಸರ್ವಸ್ಯ ಚೇಷ್ಯತಿ  ಪೈಷ್ಟಮದ್ಯಸ್ಯ ಮಾಧ್ವ್ಯದಿ ಕ್ಷತ್ರಿಯಸ್ಯ  ನ ದುಷ್ಯತಿ ವೇದದಲ್ಲಿ ಸೌತ್ರಾಮಣಿ ಯಜ್ಞದ ಪ್ರಸ್ತಾಪವಿದೆ. ಅದು ಮದ್ಯವನ್ನು ಬಳಸಿ ಮಾಡುವ ಯಜ್ಞ. ಆ ರೀತಿ ಯಜ್ಞ ಮಾಡಿದಾಗ ಅದನ್ನು ಮಾಡುವ ಋತ್ವಿಜರು ಯಜ್ಞ ಶೇಷವಾಗಿ ಮದ್ಯ ಸೇವನೆ ಮಾಡುವಂತಿಲ್ಲ. ಒಂದು ವೇಳೆ ಅಲ್ಲಿ ಬಳಸಿದ ಮದ್ಯ ಕಡಿಮೆ ಮದ್ಯಸಾರದಿಂದ(alcohol) ಕೂಡಿದ್ದರೆ, ಅದನ್ನು ಪುರೋಹಿತರು ಕೇವಲ ಆಘಾಣಿಸಬಹುದು ಅಷ್ಟೇ. ಇಲ್ಲದಿದ್ದರೆ  ಅದನ್ನು ಮೂಸುವುದೂ ನಿಷಿದ್ಧ.
ಇಲ್ಲಿ ನಾವು ತಿಳಿಯಬೇಕಾಗಿರುವುದು ಪರೀಕ್ಷಿತ ರಾಜ ಮಾಡಿರುವ ಅವಿಹಿತ ಕಾರ್ಯ. ಆತ ಬೇಟೆಯ ಪೂರ್ವದಲ್ಲಿ ಮದ್ಯವನ್ನು ಭಗವಂತನ ಪ್ರಸಾದ ರೂಪದಲ್ಲಿ ಸೇವಿಸುವ ಬದಲು, ಅತಿಸೇವನೆ ಮಾಡಿರಬೇಕು. ಹಾಗಾಗಿ ಅಲ್ಲಿ ಕಲಿಗೆ ಅವಕಾಶ ಸಿಕ್ಕಿರುವುದು.

ಅಭೂತಪೂರ್ವಃ ಸಹಸಾ ಕ್ಷುತ್ತೃಡ್ಭ್ಯಾಮರ್ದಿತಾತ್ಮನಃ
ಬ್ರಾಹ್ಮಣಂ ಪ್ರತ್ಯಭೂದ್ ಬ್ರಹ್ಮನ್ ಮತ್ಸರೋ ಮನ್ಯುರೇವ ಚ ೧೮-೨೯

ಈತನಕ ಪರೀಕ್ಷಿತ ಎಂದೂ ಇಂತಹ ಪ್ರಮಾದ ಮಾಡಿರಲಿಲ್ಲ. ಆದರೆ ಅತಿಯಾದ ಹಸಿವು-ಬಾಯಾರಿಕೆ ನಡುವೆ ಅವನಿಂದ ಇಂತಹ ಒಂದು ಪ್ರಮಾದ ನಡೆಯುವಂತೆ ಕಲಿ ಪ್ರೇರೇಪಿಸುತ್ತಾನೆ. ಕಲಿಯ ಪ್ರಭಾವದಿಂದಾಗಿ ಆತನಿಗೆ ಶಮೀಕ ಮುನಿಯ ಮೇಲೆ ಮತ್ಸರ ಮತ್ತು ಕೋಪ ಬರುತ್ತದೆ. ಇಲ್ಲಿ ಮತ್ಸರ ಎಂದರೆ  ಹೊಟ್ಟೆಕಿಚ್ಚು ಎಂದರ್ಥವಲ್ಲ. [ಅಸೂಯೆ ಎಂದರೆ ಹೊಟ್ಟೆಕಿಚ್ಚು]. ಇಲ್ಲಿ ಮತ್ಸರ ಎಂದರೆ ನಮ್ಮ ಅಧೀನವಿರುವ ಒಬ್ಬ ವ್ಯಕ್ತಿ ನಮ್ಮ ಅಪೇಕ್ಷೆಯಂತೆ ನಡೆದುಕೊಳ್ಳದೇ ಇದ್ದಾಗ ನಮಗಾಗುವ ಅಸಮಾಧಾನ. ತನ್ನ ರಾಜ್ಯದ ಒಬ್ಬ ಪ್ರಜೆ ನನಗೆ ಸತ್ಕಾರ ಮಾಡಲಿಲ್ಲ ಎನ್ನುವ ಅಸಮಾಧಾನ ಪರೀಕ್ಷಿತನನ್ನು ಕಾಡುತ್ತದೆ ಮತ್ತು ಕಲಿಯ ಪ್ರಭಾವದಿಂದ ಆತನಿಗೆ ಕೊಪ ಬಂದು ಪ್ರಮಾದವೆಸಗುತ್ತಾನೆ.  

Tuesday, August 20, 2013

Shrimad BhAgavata in Kannada -Skandha-01-Ch-18(3)

ಅಹಂ ಹಿ ಪೃಷ್ಟೋSಸ್ಯ ಗುಣಾನ್ ಭವದ್ಭಿರಾಚಕ್ಷ ಆತ್ಮಾವಗಮೋSತ್ರ ಯಾವಾನ್
ನಭಃ ಪತಂತ್ಯಾತ್ಮಸಮಂ ಪತತ್ತ್ರಿಣಸ್ತಥಾ ಸಮಂ ವಿಷ್ಣುಗತಿಂ ವಿಪಶ್ಚಿತಃ ೨೩

“ಭಗವಂತನ ಕಥೆಯನ್ನು ಕೇಳುವುದು ಎಷ್ಟು ಆನಂದವೋ, ಹೇಳುವುದೂ ಅಷ್ಟೇ ಆನಂದ. ನೀವು ಪರೀಕ್ಷಿತ ರಾಜನ ಕಥೆಯನ್ನು ಕೇಳಬೇಕು ಎನ್ನುವ ಅಭಿಲಾಷೆಯನ್ನು ಮುಂದಿಟ್ಟಿದ್ದೀರಿ. ನಾನು ನನಗೆ ತಿಳಿದಷ್ಟನ್ನು ನಿಮಗೆ ಹೇಳುತ್ತೇನೆ” ಎನ್ನುತ್ತಾರೆ ಉಗ್ರಶ್ರವಸ್ಸು. ಈ ಮಾತಿನಲ್ಲಿ ಉಗ್ರಶ್ರವಸ್ಸಿನ ಸೌಜನ್ಯವನ್ನು ನಾವು ಗಮನಿಸಬೇಕು. ವೇದವ್ಯಾಸರ ಮತ್ತು ರೋಮಹರ್ಷಣರ ಒಡನಾಟದಲ್ಲಿದ್ದು, ಅನೇಕ ಪುರಾಣ ಪ್ರವಚನ ಮಾಡಿದ್ದ ಮಹಾಜ್ಞಾನಿ ಉಗ್ರಶ್ರವಸ್ಸು ಇಲ್ಲಿ ಹೇಳುತ್ತಾರೆ: “ಅನಂತ ಆಕಾಶದಲ್ಲಿ ಹೇಗೆ ಪ್ರತಿಯೊಂದು ಪಕ್ಷಿಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹಾರುತ್ತವೋ- ಹಾಗೆ, ಭಗವಂತನ ಮತ್ತು ಭಗವದ್ ಭಕ್ತರ ಅನಂತ ಮಹಿಮೆಯನ್ನು ಯಥಾಶಕ್ತಿ ನಿಮಗೆ ಹೇಳುತ್ತೇನೆ” ಎಂದು.  ಈ ಮಾತು ಪರೀಕ್ಷಿತ ರಾಜನ ಎತ್ತರವನ್ನೂ ಸೂಚಿಸುತ್ತದೆ. 
ಈ ಹಿಂದೆ ಹೇಳಿದಂತೆ ಪರೀಕ್ಷಿತ ರಾಜ ತನ್ನ ಅರವತ್ತೈದನೆ ವಯಸ್ಸಿನ ತನಕ ಧರ್ಮದಿಂದ ರಾಜ್ಯಭಾರ ಮಾಡುತ್ತಾನೆ. ಹೀಗೆ ರಾಜ್ಯಭಾರ ನಡೆಸುತ್ತಿರುವಾಗ ಒಂದು ವಿಚಿತ್ರ ಘಟನೆ ನಡೆಯುತ್ತದೆ. ಯಾರು ಕಲಿಯನ್ನು ನಿಗ್ರಹ ಮಾಡಿದನೋ, ಅಂತಹ ಪರೀಕ್ಷಿತ ರಾಜನೊಳಗೆ ಕಲಿಪ್ರವೇಶವಾಗಿ, ಅವನ ಸಾವಿಗೆ ಕಾರಣವಾಗುವ ಘಟನೆ ನಡೆಯುತ್ತದೆ!

ಏಕದಾ ಧನುರುದ್ಯಮ್ಯ ವಿಚರನ್ ಮೃಗಯಾಂ ವನೇ
ಮೃಗಾನನುಗತಃ ಶ್ರಾಂತಃ ಕ್ಷುಧಿತಸ್ತೃಷಿತೋ ಭೃಶಮ್ ೨೪

ಒಮ್ಮೆ ಮೃಗ ಬೇಟೆಗಾಗಿ ಪರೀಕ್ಷಿತ ಕಾಡಿಗೆ ಹೋಗುತ್ತಾನೆ. [ಬೇಟೆಯಲ್ಲಿ ಎರಡು ವಿಧ. ಒಂದು ಮೋಜಿಗಾಗಿ ಬೇಟೆ, ಇನ್ನೊಂದು ಪ್ರಜಾರಕ್ಷಣೆಗಾಗಿ ಬೇಟೆ. ಸಾಮಾನ್ಯವಾಗಿ ಕ್ಷತ್ರಿಯರು ಮೋಜಿಗಾಗಿ ಬೇಟೆಯಾಡುತ್ತಿರಲಿಲ್ಲ. ಬದಲಿಗೆ ಕಾಡು ಪ್ರಾಣಿಗಳಿಂದ ಜನರನ್ನು ರಕ್ಷಿಸುವುದಕ್ಕೋಸ್ಕರ ಬೇಟೆಯಾಡುತ್ತಿದ್ದರು]. ಹೀಗೆ ಬೇಟೆಗೆ ಹೋಗಿದ್ದ ಪರೀಕ್ಷಿತನಿಗೆ ತುಂಬಾ ಹಸಿವು ಮತ್ತು ಬಾಯಾರಿಕೆಯಾಗುತ್ತದೆ.

ಜಲಾಶಯಮಚಕ್ಷಾಣಃ ಪ್ರವಿವೇಶ ಸ ಆಶ್ರಮಮ್
ದದೃಶೇ ಮುನಿಮಾಸೀನಂ ಶಾಂತಂ ಮೀಲಿತಲೋಚನಮ್ ೨೫

ಹಸಿವು ಬಾಯಾರಿಕೆಯಿಂದ ತತ್ತರಿಸಿದ ರಾಜನಿಗೆ ಎಲ್ಲಿಯೂ ಜಲಾಶಯ ಕಾಣ ಸಿಗುವುದಿಲ್ಲ. ಹಾಗಾಗಿ ಆತ ನೀರನ್ನು ಅರಸುತ್ತಾ ಸಾಗುತ್ತಿರುತ್ತಾನೆ. ಹೀಗೆ ಸಾಗುತ್ತಿರುವಾಗ ಆತನಿಗೊಂದು ಋಷಿ ಆಶ್ರಮ ಕಾಣಸಿಗುತ್ತದೆ. ತಕ್ಷಣ ರಾಜ ಆ ಆಶ್ರಮದ ಬಳಿಗೆ ಬರುತ್ತಾನೆ. ಅಲ್ಲಿ ಆತನಿಗೆ ಯಾರೂ ಕಾಣಿಸುವುದಿಲ್ಲ. ಆದರೆ ಒಬ್ಬ ಋಷಿ ಮಾತ್ರ ಆಶ್ರಮದಿಂದ ಹೊರಗೆ ಧ್ಯಾನದಲ್ಲಿ ಆತ್ಮಾನಂದವನ್ನು ಪಡೆಯುತ್ತಿರುವುದು ಕಾಣಿಸುತ್ತದೆ.

ಪ್ರತಿರುದ್ಧೇಂದ್ರಿಯಪ್ರಾಣಮನೋಬುದ್ಧಿಮುಪಾರತಮ್
ಸ್ಥಾನತ್ರಯಾತ್ ಪರಂ ಪ್ರಾಪ್ತಂ ಬ್ರಹ್ಮಭೂತಮವಿಕ್ರಿಯಮ್ ೨೬

ಧ್ಯಾನ ಮಗ್ನನಾಗಿರುವ ಶಮೀಕ ಮುನಿಯ ಧ್ಯಾನ  ಸ್ಥಿತಿ ಹೇಗಿತ್ತು ಎನ್ನುವುದನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ. ಮನಸ್ಸು-ಬುದ್ಧಿ-ಇಂದ್ರಿಯಗಳನ್ನು ಸ್ಥಗನಗೊಳಿಸಿ, ತಮ್ಮ ಆತ್ಮಸ್ವರೂಪದಿಂದ ಜ್ಞಾನಾನಂದಮಯನಾದ ಭಗವಂತನನ್ನು ಅವರು ಅನುಭವಿಸುತ್ತಿದ್ದರು. ಅವರಿಗೆ ಬಾಹ್ಯ ಪ್ರಪಂಚದ ಯಾವ ಎಚ್ಚರವೂ ಇರಲಿಲ್ಲ. ಇದು ಎಚ್ಚರ-ಕನಸು-ನಿದ್ದೆಯಿಂದ ಆಚೆಗಿನ ಸ್ವರೂಪಭೂತ ಸ್ಥಿತಿ. ಇದನ್ನು ಉನ್ಮನೀಭಾವ ಎನ್ನುತ್ತಾರೆ. ಇದು ಸ್ವರೂಪಭೂತ ಆತ್ಮದಿಂದ ಸ್ವರೂಪಭೂತನಾದ ಭಗವಂತನ ವಾಸುದೇವ ರೂಪವನ್ನು ಕಾಣುವ ಅಪೂರ್ವ ಸಮಾಧಿ-ಸ್ಥಿತಿ.
ಶಮೀಕ ಅನಾಯಾಸವಾಗಿ, ನಿರ್ವೀಕಾರ-ನಿಶ್ಚಲನಾಗಿ ಭಗವಂತನಲ್ಲಿ ನೆಲೆ ನಿಂತಿರುವುದು, ಹಸಿವು-ಬಾಯಾರಿಕೆಯಿಂದ ತತ್ತರಿಸಿದ ಪರೀಕ್ಷಿತನಿಗೆ ತಿಳಿಯದಾಗುತ್ತದೆ. ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎನ್ನುವಂತೆ- ಆತನಿಗೆ “ಈ ಮುನಿ ಮನೆಗೆ ಬಂದ ಅತಿಥಿಯನ್ನು ಸತ್ಕರಿಸದೇ ಧ್ಯಾನದ ನಾಟಕವಾಡುತ್ತಾ ಕುಳಿತಿದ್ದಾನೆ” ಎನ್ನುವ ತಪ್ಪು ಕಲ್ಪನೆ ಬರುತ್ತದೆ.

ಸ ತಸ್ಯ ಬ್ರಹ್ಮಋಷೇರಂಸೇ ಗತಾಸುಮುರಗಂ ರುಷಾ
ವಿನಿರ್ಗಚ್ಛನ್ ಧನುಷ್ಕೋಟ್ಯಾ ನಿಧಾಯ ಪುರಮಾಗತಃ ೩೦

ಎಲ್ಲವೂ ವಿಧಿಯ ವ್ಯವಸ್ಥೆ ಎನ್ನುವಂತೆ- ತಪ್ಪು ತಿಳುವಳಿಕೆಯಿಂದ ಕೋಪಗೊಂಡ ಪರೀಕ್ಷಿತನಿಗೆ ಅಲ್ಲೇ ಸಮೀಪದಲ್ಲಿ ಒಂದು ಸತ್ತ ಹಾವು ಕಾಣಿಸುತ್ತದೆ. ಸಿಟ್ಟಿನಲ್ಲಿ ವಿವೇಕ ಕಳೆದುಕೊಂಡ ಆತ  “ಧ್ಯಾನದ ನಾಟಕವಾಡುತ್ತಿರುವ ಈ ಋಷಿಗೆ ತಕ್ಕ ಪಾಠ ಕಲಿಸಬೇಕು” ಎಂದುಕೊಂಡು, ಆ ಸತ್ತ ಹಾವನ್ನು ಎತ್ತಿ ಋಷಿಯ ಕೊರಳಿಗೆ ಹಾಕಿ ಊರಿಗೆ ಹಿಂದಿರುಗುತ್ತಾನೆ.

Friday, August 16, 2013

Shrimad BhAgavata in Kannada -Skandha-01-Ch-18(2)

ಋಷಯ ಊಚುಃ--
ತುಲಯಾಮ ಲವೇನಾಪಿ ನ ಸ್ವರ್ಗಂ ನಾಪುನರ್ಭವಮ್
ಭಗವತ್ಸಂಗಿಸಂಗಸ್ಯ ಮರ್ತ್ಯಾನಾಂ ಕಿಮುತಾಶಿಷಃ ೧೩

ಸೂತರು ಕಥೆಯನ್ನು ಕೊನೆಗೊಳಿಸಿದಾಗ ಶೌನಕಾದಿಗಳು ಹೇಳುತ್ತಾರೆ: “ನೀವು ಚುಟುಕಾಗಿ ಈ ಪುಣ್ಯ ಕಥೆಯನ್ನು ಹೇಳಿ ನಮ್ಮ ಕುತೂಹಲ ಕೆರಳಿಸಿದಿರಿ. ಸಾಕು ಅನಿಸುವಂತೆ ಹೇಳದೇ, ಇನ್ನೂ ಬೇಕು ಎನಿಸುವಂತೆ ಹೇಳಿದಿರಿ. ಭಗವದ್ಭಕ್ತರ ಒಡನಾಟ ಸ್ವರ್ಗ ಸುಖಕ್ಕಿಂತ ಮೇಲು. ಅಷ್ಟೇ ಅಲ್ಲ, ಮೋಕ್ಷ ತಡವಾದರೂ ತೊಂದರೆ ಇಲ್ಲ, ಭಗವದ್ಭಕ್ತರ ಒಡನಾಟದಲ್ಲೇ ಸ್ವಲ್ಪ ಕಾಲ ಇರಬೇಕು ಎನ್ನುವ ಸಂಕಲ್ಪ ನಮ್ಮದು. ಸ್ವರ್ಗ-ಮೊಕ್ಷಗಳೇ ಜ್ಞಾನಿಗಳ ಒಡನಾಟಕ್ಕೆ ಸಾಟಿಯಲ್ಲದಿರುವಾಗ ಇನ್ನು ಐಹಿಕ ಕ್ಷುದ್ರ ಕಾಮನೆಗಳು ಯಾವ ಲೆಕ್ಕ?”  ಎಂದು.  
ಮೇಲ್ನೋಟಕ್ಕೆ ಈ ಶ್ಲೋಕ ಜ್ಞಾನದ ಮಹತ್ವ ಮತ್ತು  ಜ್ಞಾನಿಗಳ ಒಡನಾಟವನ್ನು  ಪ್ರಶಂಸೆ ಮಾಡುವ ಆಲಂಕಾರಿಕ ಶ್ಲೋಕ ಎನಿಸುತ್ತದೆ. ಏಕೆಂದರೆ ಎಲ್ಲಾ ಜ್ಞಾನಗಳಿರುವುದೂ ಮೋಕ್ಷ ಸಾಧನೆಗಾಗಿ. ಹೀಗಿರುವಾಗ ಜ್ಞಾನದ ಮುಂದೆ ಮೋಕ್ಷವೇ ಬೇಡ ಎಂದರೆ ಏನರ್ಥ?   ಆದರೆ ಇದು ಕೇವಲ ಆಲಂಕಾರಿಕ ಮಾತಲ್ಲ. ಏಕೆಂದರೆ ಇದು ಶಾಸ್ತ್ರ, ಕಾವ್ಯವಲ್ಲ. ಶಾಸ್ತ್ರದಲ್ಲಿ ಅಲಂಕಾರಕ್ಕೋಸ್ಕರ ಏನನ್ನೂ ಹೇಳುವುದಿಲ್ಲ. ಅಲ್ಲಿ ಪ್ರತಿಯೊಂದು ಮಾತಿನ ಹಿಂದೆ ಒಂದು ಪ್ರಮೇಯವಿರುತ್ತದೆ. ಇದನ್ನು ತಾತ್ಪರ್ಯ ನಿರ್ಣಯದಲ್ಲಿ ವಿವರಿಸುತ್ತಾ ಆಚಾರ್ಯ ಮಧ್ವರು ಹೇಳುತ್ತಾರೆ:

ಸಮ್ಯಕ್ ಸ್ವರೂಪಸ್ಯಾವ್ಯಕ್ತಿರಭಾವೋ ಜನನಸ್ಯ ಚ
ಅಲ್ಪಯತ್ನಾತ್ ತತೋ ವೃದ್ಧಿ ಹೇತೋ ಸತ್ಸಂಗತಿರ್ವರಾ ಇತಿ ವಾಯುಪ್ರೋಕ್ತೇ

ಮೊಕ್ಷಕ್ಕಿಂತ ಸಜ್ಜನರ ಒಡನಾಟ ಕೆಲವು ದೃಷ್ಟಿಯಿಂದ ಶ್ರೇಷ್ಠ ಎನ್ನುವುದು ಯಥಾರ್ಥ ಸಂಗತಿ. ಏಕೆಂದರೆ ಜ್ಞಾನಿಗಳ ಸಹವಾಸದಿಂದ  ಇನ್ನಷ್ಟು ಹೆಚ್ಚು ಜ್ಞಾನವನ್ನು ಗಳಿಸಿ, ಇನ್ನಷ್ಟು ಹೆಚ್ಚು ಪುಣ್ಯವನ್ನು ಗಳಿಸಿ,  ಆಮೇಲೆ ಮೋಕ್ಷಕ್ಕೆ ಹೋದರೆ ಆನಂದವೃದ್ಧಿ. ಅವಸರದಲ್ಲಿ ಹೋದರೆ ಆ ಹೆಚ್ಚಿನ ಆನಂದವನ್ನು ನಾವು ಕಳೆದುಕೊಳ್ಳಬೇಕಾಗಬಹುದು.  ನಮ್ಮ ಸ್ವರೂಪದಲ್ಲಿ ಎಷ್ಟು ಆನಂದ ತುಂಬಿಕೊಂಡಿದೆಯೋ, ಅದರ ಪೂರ್ಣ ಅಭಿವ್ಯಕ್ತಿ ಆಗಬೇಕಿದ್ದರೆ,  ಜ್ಞಾನಿಗಳಿಂದ ಪೂರ್ತಿ ಜ್ಞಾನವನ್ನು ಪಡೆಯಬೇಕು. ಈ ರೀತಿ ಹೆಚ್ಚಿನ ಜ್ಞಾನವನ್ನು ಪಡೆಯದೆಯೂ ಕೂಡಾ, ಹುಟ್ಟು-ಸಾವಿಲ್ಲದ ಮೋಕ್ಷ ಪಡೆಯಬಹುದು. ಆದರೆ ಮೋಕ್ಷದಲ್ಲಿ ಆನಂದದ ಪರಿಮಾಣವನ್ನು ಹೆಚ್ಚಿಸಿಕೊಳ್ಳಬೇಕಾದರೆ, ಜ್ಞಾನಿಗಳ ಒಡನಾಟದಿಂದ  ನಮ್ಮ ಜ್ಞಾನದ ಪರಿಮಾಣವನ್ನು ಹೆಚ್ಚಿಸಿಕೊಳ್ಳಬೇಕು. ಹೀಗೆ ‘ಜ್ಞಾನವೃದ್ಧಿಯಿಂದ ಮೋಕ್ಷದಲ್ಲಿ ಆನಂದವೃದ್ಧಿ ಇರುವುದರಿಂದ, ಮೊಕ್ಷಕ್ಕಿಂತ ಹೆಚ್ಚಾಗಿ ಜ್ಞಾನಿಗಳ ಒಡನಾಟ ಬೇಕು’ ಎನ್ನುವುದು ಮೇಲಿನ ಶ್ಲೋಕದ ತಾತ್ಪರ್ಯ. ಇದನ್ನು ಹೂವಿನ ದೃಷ್ಟಾಂತದೊಂದಿಗೆ ಹೇಳಬೇಕೆಂದರೆ: ಹೂ ಅರೆ  ಮೊಗ್ಗಿನಂತೆ ಅರಳುವ ಸ್ಥಿತಿ ಮತ್ತು ಪೂರ್ಣ ಅರಳುವ ಸ್ಥಿತಿ. ಅರೆ ಮೊಗ್ಗಿನ ಸ್ಥಿತಿ ಕೂಡಾ ವಿಕಸನ ಹೌದು. ಆದರೆ ಹೂ ಪೂರ್ಣವಾಗಿ ಅರಳಬೇಕು. ಹೀಗೆ ನಾವು  ಜ್ಞಾನಿಗಳ ಒಡನಾಟದಿಂದ ಜ್ಞಾನ ಸಾಧನೆಯ ಪೂರ್ಣತೆಯನ್ನು ಪಡೆಯಬೇಕು. ಅದು ಎಲ್ಲವುದಕ್ಕಿಂತ ಶ್ರೇಷ್ಠ.  ಜ್ಞಾನ ಎಲ್ಲಕ್ಕಿಂತ ಮಿಗಿಲು. ಅದಕ್ಕಿಂತ ಮಿಗಿಲಾದ ಸಂಪತ್ತು ಜೀವನದಲ್ಲಿಲ್ಲ. ಭಗವಂತನನ್ನು ಬಲ್ಲವರರಿಂದ ನಾವು ಕೇಳಿ ತಿಳಿಯಬೇಕು. ಹಾಗಾಗಿ “ಚುಟುಕಾಗಿ ಹೇಳದೇ ವಿಸ್ತಾರವಾಗಿ ಹೇಳಿ” ಎಂದು ಶೌನಕಾದಿಗಳು ಸೂತರನ್ನು ಪ್ರಾರ್ಥಿಸಿಕೊಳ್ಳುತ್ತಾರೆ.  

ತನ್ನಃ ಪರಂ ಪುಣ್ಯಮಸಂವೃತಾರ್ಥಮಾಖ್ಯಾನಮತ್ಯದ್ಭುತಯೋಗನಿಷ್ಠಮ್
ಆಖ್ಯಾಹ್ಯನಂತಾಚರಿತೋಪಪನ್ನಂ ಪಾರೀಕ್ಷಿತಂ ಭಾಗವತಾಭಿರಾಮಮ್ ೧೭

ಭಗವಂತನ ಭಕ್ತರ ಕಥೆಯನ್ನು ಕೇಳುವುದು ಎಂದರೆ ಭಗವಂತನ ಮಹಿಮೆಯನ್ನು ಕೇಳಿದಂತೆ. ಏಕೆಂದರೆ ಭಗವಂತನ ಭಕ್ತರ ಕಥೆಯ ಹಿಂದಿರುವುದು ಅನಂತನಾದ ಭಗವಂತನೇ. ಭಗವಂತನ ಭಕ್ತರ ಮಹಿಮೆ ಎಂದರೆ ಅದು ಅವರಿಗೆ ಭಗವಂತನ ಅನುಗ್ರಹದಿಂದಲೇ  ಬಂದಿರುವುದು. “ಹೀಗಾಗಿ ನಮಗೆ ಪರೀಕ್ಷಿತನ ಕಥೆ ಎಂದರೆ ಅದು ಭಗವಂತನ ಕಥೆಯೇ ಆಗಿದೆ” ಎನ್ನುತ್ತಾರೆ ಶೌನಕಾದಿಗಳು.
ಭಾಗವತರಿಗೆ(ಭಗವದ್ಭಕ್ತರಿಗೆ) ಮಹಾ ಸಂತೋಷದ ವಿಷಯ ಎಂದರೆ- ಭಗವಂತನ ಭಕ್ತಿಯಿಂದ ಎತ್ತರಕ್ಕೇರಿದ ಜ್ಞಾನಿಗಳ ಕಥೆ ಕೇಳುವುದು. “ ಈ ನೆಲೆಯಿಂದ ನಮಗೆ ಪರೀಕ್ಷಿತ ರಾಜ ಕೊನೆಯ ಕಾಲದಲ್ಲಿ ಎಲ್ಲ ಸಂಗವನ್ನು ತೊರೆದು, ದೇಹತ್ಯಾಗ ಮಾಡಿದ ಘಟನೆಯನ್ನು ವಿವರವಾಗಿ ಹೇಳಿ” ಎಂದು ಉಗ್ರಶ್ರವಸ್ಸರನ್ನು ಶೌನಕಾದಿಗಳು ಪ್ರಾರ್ಥಿಸಿಕೊಳ್ಳುತ್ತಾರೆ.

ಸೂತ ಉವಾಚ--
ಅಹೋ ವಯಂ ಜನ್ಮಭೃತೋ ಮಹಾತ್ಮನ್ ವೃದ್ಧಾನುವೃತ್ತ್ಯಾSಪಿ ವಿಲೋಮಜಾತಾಃ
ದೌಷ್ಕುಲ್ಯಮಾಧಿಂ ವಿಧುನೋತಿ ಶೀಘ್ರಂ ಮಹತ್ತಮಾನಾಮಭಿಧಾನಯೋಗಃ ೧೮

ಶೌನಕಾದಿಗಳ ಮಾತನ್ನು ಕೇಳಿ ಸೂತರು ಹೇಳುತ್ತಾರೆ: “ನಿಜ, ತುಂಬಾ ಎತ್ತರಕ್ಕೇರಿದವರ ಬದುಕಿನ ಬಿತ್ತರವನ್ನು ಕೇಳುವುದರಿಂದ ನಮ್ಮಲ್ಲಿರುವ ಮನೋರೋಗ ಪರಿಹಾರವಾಗುತ್ತದೆ” ಎಂದು. ನಮಗೆ ತಿಳಿದಂತೆ ಎಲ್ಲಾ ಸಮಸ್ಯೆಗೂ ಮೂಲ ಕಾರಣ ಮನೋರೋಗ. ಹಾಗಾಗಿ ಎಲ್ಲಾ ಸಮಸ್ಯೆಗಳಿಗೂ ಏಕಮಾತ್ರ ಔಷಧ ಎಂದರೆ ಬದುಕಿನಲ್ಲಿ ಎತ್ತರಕ್ಕೇರಿದವರ ಜೀವನ ಕಥನವನ್ನು ಕೇಳಿ ಕಲಿಯುವುದು. ಅದರಿಂದ ನಮ್ಮ ಬದುಕು ಸುಭದ್ರವಾಗುತ್ತದೆ.  ಅದರಲ್ಲೂ ಮುಖ್ಯವಾಗಿ ಹೀನ ಕುಲದಲ್ಲಿ ಹುಟ್ಟಿದವರು ಈ ಕಥೆಯನ್ನು ಮೊದಲು ಕೇಳಬೇಕು. ಏಕೆಂದರೆ ಹೀನ ಕುಲ ಎಂದರೆ ಭಗವಂತನ ಅರಿವು ಇಲ್ಲದಿರುವುದು. ಆ ಅರಿವು ಬಂದಾಗ ಅವರು ಎತ್ತರಕ್ಕೇರುತ್ತಾರೆ.

ಕುತಃ ಪುನರ್ಗೃಣತೋ ನಾಮ ತಸ್ಯ ಮಹತ್ತಮೈಕಾಂತಪರಾಯಣಸ್ಯ
ಯೋSನಂತಶಕ್ತಿರ್ಭಗವಾನನಂತೋ ಮಹದ್ಗುಣತ್ವಾದ್ ಯಮನಂತಮಾಹುಃ ೧೯

ಭಗವಂತನನ್ನು ಅರಿತವರ ಬಗೆಗೆ ಕೇಳಿದಾಗಲೇ ನಾವು ಮಾನಸಿಕ ರೋಗದಿಂದ ಸ್ವಸ್ತರಾಗುತ್ತೇವೆ. ಹೀಗಿರುವಾಗ ಭಗವಂತನ ನಾಮಸ್ಮರಣೆಯನ್ನು ಭಕ್ತಿಯಿಂದ ಮಾಡಿದರೆ ಯಾವ ಮನೋರೋಗ ಬರಲು ಸಾಧ್ಯ? ಮಹಾತ್ಮರಿಗೂ ಏಕಮಾತ್ರ ಆಶ್ರಯನಾದ ಭಗವಂತನನ್ನು ನೆನೆಯುವವರಿಗೆ ಯಾವ ಚಿಂತೆ ಇರಲು ಸಾಧ್ಯ? ಭಗವಂತ ದೇಶ-ಕಾಲಗಳಿಂದ ಅನಂತ; ಆತ ಅನಂತ ಗುಣಪೂರ್ಣ. ಇಂತಹ ಅನಂತಶಕ್ತಿಯನ್ನು ಚಿಂತಿಸಿದವರಿಗೆ ಬದುಕಿನಲ್ಲಿ ಯಾವ ಭಯ ಕಾಡುವುದು ಸಾಧ್ಯ?  “ಹಾಗಾಗಿ ಭಗವಂತನ ಮಹಿಮೆಯನ್ನೊಳಗೊಂಡ ಪರೀಕ್ಷಿತ ರಾಜನ ಮಹಿಮೆಯನ್ನು ನಾನು ನಿಮಗೆ ಹೇಳುತ್ತೇನೆ”. ಎನ್ನುತ್ತಾರೆ ಸೂತರು.

ಯತ್ರಾನುರಕ್ತಾಃ ಸಹಸೈವ ಧೀರಾ ವ್ಯಪೋಹ್ಯ ದೇಹಾದಿಷು ಸಂಗಮೂಢಂ
ವ್ರಜಂತಿ ತತ್ಪಾರಮಹಂಸ್ಯಸತ್ಯಂ ಯಸ್ಮಿನ್ನಹಿಂಸೋಪರಮಶ್ಚ ಧರ್ಮಃ ೨೨

ನಮಗೆ ಭಗವಂತನ ಪರಿಚಯ ಇಲ್ಲದಿರುವುದರಿಂದ ನಮ್ಮ ಮನಸ್ಸು ಆತನೆಡೆಗೆ ವಾಲುವುದಿಲ್ಲ. ಆದರೆ ಒಮ್ಮೆ ಅನುರಕ್ತಿ ಬಂದು ರುಚಿ ಗೊತ್ತಾದರೆ, ಆಗ ಇತರ ಲೌಕಿಕ ವಿಚಾರಗಳು ಭಗವಂತನ ಮುಂದೆ ನಶ್ವರ ಎನ್ನುವುದು ತಿಳಿಯುತ್ತದೆ. ಸಾಮಾನ್ಯವಾಗಿ ನಮ್ಮ ಮನಸ್ಸು ನಮ್ಮ ದೇಹದ ಮೂಲಕ ನಾವು ಪಡೆಯುವ ಸುಖ-ಭೋಗವೇ ಸರ್ವಸ್ವ ಎಂದು ತಿಳಿದು ಅದರಲ್ಲೇ ಗಟ್ಟಿಯಾಗಿ ಕುಳಿತುಬಿಟ್ಟಿರುತ್ತದೆ. ‘ಧೀರ’ನಾದವನು ಆ ಸ್ಥಿತಿಯಿಂದ ಈಚೆ ಬಂದು ಭಗವಂತನನ್ನು ಅರಿಯುತ್ತಾನೆ.
ಈ ಶ್ಲೋಕದಲ್ಲಿ ಬಳಸಿರುವ  ‘ಧೀರ’ ಎನ್ನುವ ಪದಕ್ಕೆ ಎರಡು ಅರ್ಥಗಳಿವೆ. ಜ್ಞಾನದಲ್ಲಿ ರತಿ ಉಳ್ಳವನು, ‘ತಿಳಿದುಕೊಳ್ಳಬೇಕು’ ಎನ್ನುವ ಛಲ ಉಳ್ಳವನು ಧೀರ. ಈ ರೀತಿ ಛಲದಿಂದ ಆಸಕ್ತಿ ಬೆಳೆಸಿಕೊಂಡ ತಕ್ಷಣ ಎಲ್ಲವೂ ತಿಳಿಯುವುದಿಲ್ಲ. ಅಲ್ಲಿ ಅನೇಕ ಸಮಸ್ಯೆಗಳು ಬರುತ್ತವೆ. ಪ್ರತಿರೋಧ ಬರಬಹುದು. ಜನ ಪರಿಹಾಸ್ಯ ಮಾಡಬಹುದು. ಆಗ ದುರ್ಬಲನಾಗದೆ ಮುನ್ನೆಡೆಯುವ ಧೈರ್ಯ ಉಳ್ಳವನು ಧೀರ.
ಇಲ್ಲಿ ಭಗವಂತನನ್ನು “ಪಾರಮಹಂಸ್ಯಸತ್ಯಂ” ಎನ್ನುವ ವಿಶೇಷಣ ಬಳಸಿ ಸಂಬೋಧಿಸಿದ್ದಾರೆ. ಪರಮಹಂಸರು ಎಂದರೆ ಸಂಸಾರದಲ್ಲಿ ಸರ್ವಸ್ವವನ್ನೂ ತ್ಯಾಗ ಮಾಡಿದವರು. ಭಗವಂತ ಇಂತಹ ‘ಪರಮಹಂಸರಿಗೆ ಸುಲಭವಾಗಿ ಗೋಚರನಾಗುತ್ತಾನೆ. ನಮ್ಮಲ್ಲಿ ಕೂಡಾ ಆ ಪರಮಹಂಸರ ಕಿಂಚಿತ್ ನಡೆ ಇರಬೇಕು. ಆಗ ಆ ಸದ್ಗುಣಪೂರ್ಣ(ಸತ್ಯಃ) ಭಗವಂತನ ಅನುಗ್ರಹವಾಗುತ್ತದೆ. ನಾವು ತಪ್ಪಿನ ಕಡೆ ನಮ್ಮ ಮನಸ್ಸು ಹರಿಯದಂತೆ ತಡೆದು, ಅದನ್ನು ಭಗವಂತನೆಡೆಗೆ ಹರಿಸಬೇಕು.
ಪರಮಹಂಸರು ಅಂದರೆ ಎಂತವರು ಎನ್ನುವುದನ್ನು ವಿವರಿಸುತ್ತಾ ಸೂತರು ಹೇಳುತ್ತಾರೆ: “ಯಸ್ಮಿನ್ನಹಿಂಸೋಪರಮಶ್ಚ ಧರ್ಮಃ” ಎಂದು. ಪರಮಹಂಸರಲ್ಲಿ ಮುಖ್ಯವಾಗಿ ಎರಡು ವಿಶೇಷ ಗುಣಗಳಿರುತ್ತವೆ. ಅವುಗಳೆಂದರೆ ಅಹಿಂಸೆ ಮತ್ತು ಉಪರಮ.

ಯಮನಿಯಮಗಳಲ್ಲಿ ಮೊದಲನೆಯದು ‘ಅಹಿಂಸೆ’. ಅಹಿಂಸೆ ಎನ್ನುವುದು ಭಗವಂತನನ್ನು ಆರಾಧಿಸುವ ಅಷ್ಟಪುಷ್ಪಗಳಲ್ಲಿ ಮೊದಲನೆಯದು. [ಅಷ್ಠ ಪುಷ್ಪಗಳು: ಅಹಿಂಸಾ, ದಮ, ದಯಾ, ಕ್ಷಮಾ, ಶಾಂತಿ, ತಪ, ಧ್ಯಾನ ಮತ್ತು ಸತ್ಯ]  ಇದಕ್ಕಾಗಿ ಸನ್ಯಾಸಿಗಳು “ಸಮಸ್ತ ಪ್ರಾಣಿಗಳಿಗೂ ನಾನು ಅಭಯದಾನ ಮಾಡಿದ್ದೇನೆ, ನಾನು ಯಾರಿಗೂ ಹಿಂಸೆ ಮಾಡುವುದಿಲ್ಲ” ಎಂದು ಪ್ರತಿಜ್ಞೆ ಮಾಡುತ್ತಾರೆ. ಇದು ಅವರ ಜೀವನದ ಪ್ರತಿಜ್ಞೆ. ನಾವೂ ಕೂಡಾ ನಮ್ಮ ಜೀವನದಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಹಿಂಸಾ ವ್ರತವನ್ನು ಪಾಲಿಸಬೇಕು. ಅಹಿಂಸೆಯ ಮಹತ್ವವನ್ನು ಪುರಾಣದಲ್ಲಿ ವರ್ಣಿಸುತ್ತಾ ಹೇಳುತ್ತಾರೆ: “ಹೇಗೆ ಆನೆಯ ಹೆಜ್ಜೆಯೊಳಗೆ ಎಲ್ಲಾ ಪ್ರಾಣಿಗಳ ಹೆಜ್ಜೆ ಅಂತರ್ಭೂತವಾಗುತ್ತದೋ ಹಾಗೆ, ಅಹಿಂಸೆಯ ಒಳಗೆ ಎಲ್ಲಾ ಧರ್ಮಗಳೂ ಅಂತರ್ಭೂತವಾಗುತ್ತವೆ” ಎಂದು.  ಹಾಗಾಗಿ ಅಹಿಂಸೆಯ ಧೀಕ್ಷೆ ಎಂದರೆ ಅದು ಎಲ್ಲಾ ಧರ್ಮಗಳ ಧೀಕ್ಷೆ. ಎರಡನೇ ಗುಣ- ‘ಉಪರಮ’. ಉಪರಮ ಅಂದರೆ ಉತ್ಕೃಷ್ಟನಾದ ಭಗವಂತನಲ್ಲೇ ಆನಂದವನ್ನು ಅನುಭವಿಸುವುದು. ನಿರಂತರ ಭಗವಂತನ ಚಿಂತನೆಯಲ್ಲಿ ಆಸಕ್ತಿ  ಬೆಳೆಸಿಕೊಳ್ಳುವುದು. ಹೀಗೆ ಅಹಿಂಸೆ ಮತ್ತು ಉಪರಮ ಎನ್ನುವ ಎರಡು ಮುಖ್ಯಗುಣಗಳು ಪರಮಹಂಸರಲ್ಲಿರುವುದರಿಂದ  ಭಗವಂತ ಅವರಿಗೆ ಬಹಳ ಬೇಗ ಒಲಿಯುತ್ತಾನೆ.