Saturday, December 15, 2012

Shrimad BhAgavata in Kannada -Skandha-01 CH-01 (2)

“ಅನ್ವಯಾತ್” ಎನ್ನುವಲ್ಲಿ ‘ಎಲ್ಲಾ ಶಬ್ದಗಳನ್ನು ಭಗವಂತನಲ್ಲಿ ಸಮನ್ವಯ ಮಾಡಿದಾಗ ಇಡಿಯ ವೇದ ಒಂದೇ ಅರ್ಥವನ್ನು ಹೇಳುತ್ತದೆ’ ಎನ್ನುವ ವಿಷಯವನ್ನು ನೋಡಿದೆವು. ಇದು ವೇದಾಧ್ಯಯನದಲ್ಲಿ ಗಮನವಿಟ್ಟು ಪಾಲಿಸಬೇಕಾದ ಅತಿ ಮುಖ್ಯ ಅಂಶ. ಎಲ್ಲಾ ಶಬ್ದಗಳನ್ನೂ ಒಂದು ಪರತತ್ತ್ವದಲ್ಲಿ ಸಮನ್ವಯ ಮಾಡಿ ಅರ್ಥಮಾಡತಕ್ಕಂತಹ ಪರಂಪರೆ  ಬಹಳ ಹಿಂದೆ ಪ್ರಚಲಿತದಲ್ಲಿದ್ದು, ಇಂದು ಈ ಪರಂಪರೆ ಮರೆತು ಹೋಗುತ್ತಿದೆ. ಯಾವ ಶಬ್ದವೂ ಕೇವಲ ಲೋಕ ರೂಢಿಯ ಅರ್ಥವನ್ನು ಹೇಳುವುದಿಲ್ಲ, ಅದಕ್ಕಿಂತ ಅತೀತವಾದ ಅದರ ನಿರ್ವಚನ ಅರ್ಥವೊಂದಿದೆ ಎಂದು ತಿಳಿದು, ಆ ನಿರ್ವಚನದಿಂದ ಆ ಶಬ್ದಕ್ಕೆ ಹೊಸ ಆಯಾಮ ಏನು ಬರುತ್ತದೆ ಎಂದು ಬಿಡಿಸಿ ನೋಡುವುದು ‘ಸಮನ್ವಯ ಮಾಡಿ ಅರ್ಥ ತಿಳಿದುಕೊಳ್ಳುವ’ ಪದ್ಧತಿಯ ಮೂಲಭೂತ ನಿಯಮ. ನಿರ್ವಚನ ಏನೇ ಇರಲಿ, ಅದನ್ನು ವಿಶ್ಲೇಷಿಸದೇ, ಲೋಕ ರೂಢಿಯ ಅರ್ಥವನ್ನು ಒಪ್ಪಿಕೊಳ್ಳುವುದು ಲೋಕದ ಕ್ರಮವಾದರೆ, ನಿರ್ವಚನದಿಂದ ಏನು ಅರ್ಥ ವಿಶೇಷಗಳು ಹೊರಡುತ್ತವೆ ಎಂದು ತಿಳಿದು, ಅದರ ಅನುಸಂಧಾನ ಮಾಡುವುದು ವೇದದ ಕ್ರಮ.  ಶಬ್ದವನ್ನು ಸಮಷ್ಟಿಯಾಗಿ ನೋಡುವುದು ಲೋಕದ ಕ್ರಮವಾದರೆ, ಶಬ್ದವನ್ನು ಒಡೆದು ನೋಡುವುದು ವೇದದ ಕ್ರಮ. ಶಬ್ದ ಅನ್ನುವುದು ಚಿಪ್ಪಿನಂತೆ. ಅದರ ನಿರ್ವಚನ ಮುತ್ತಿನಂತೆ. ಚಿಪ್ಪನ್ನು ಬಳಸುವುದು ಲೋಕದ ಕ್ರಮವಾದರೆ, ಆ ಚಿಪ್ಪನ್ನು ಒಡೆದು ಅದರೊಳಗಿನ ಬಗೆಬಗೆಯ ಅಮೂಲ್ಯ ಮುತ್ತು ರತ್ನಗಳನ್ನು ಹೆಕ್ಕಿ ತೆಗೆಯುವುದು ವೇದದ ಕ್ರಮ.
ವೇದಾಧ್ಯಯನ ಮಾಡುವಾಗ ಪ್ರತಿಯೊಂದು ಶಬ್ದವನ್ನು ಯೋಗ ಬಲದಿಂದ ಒಡೆದು, ಅದರಲ್ಲಿ ಏನು ಅರ್ಥ ವಿಶೇಷ ಹೊರಡುತ್ತದೆ ಅನ್ನುವುದನ್ನು ನೋಡಬೇಕು. ಪ್ರತಿಯೊಂದು ಶಬ್ದವನ್ನೂ ಭಗವಂತನಲ್ಲಿ ಅನ್ವಯ ಮಾಡಿ, ವೇದಾರ್ಥ ಚಿಂತನೆ ಮಾಡಬೇಕು. ಉದಾಹರಣೆಗೆ ಋಗ್ವೇದದ ಮೊದಲ ಸೂಕ್ತ. " ಅಗ್ನಿಮೀ”ಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ”. ಇಲ್ಲಿ ಅಗ್ನಿಸೂಕ್ತವಿದೆ. ಅದು ಭಗವಂತನಲ್ಲಿ ಅನ್ವಯವಾಗಿ ಭಗವಂತನ ಸ್ತುತಿಯಾಗಬೇಕು.  ಇದು ‘ಸಮನ್ವಯ’ ಪದ್ಧತಿ.  ಬೆಂಕಿಗೆ ದಾಹಕ ಮತ್ತು ಪಾಚಕ ಶಕ್ತಿ ಕೊಡುವ ದೇವತೆ ಅಗ್ನಿ. ಈ ಅಗ್ನಿದೇವತೆಯ ಒಳಗಿದ್ದು ಅವನಿಗೆ ಶಕ್ತಿ ಕೊಡುವವನು ಮುಖ್ಯಪ್ರಾಣ. ಈ ಮುಖ್ಯಪ್ರಾಣನಿಗೂ ಪ್ರಾಣನಾಗಿ ಶಕ್ತಿಪಾತ ಮಾಡುವವನು ಭಗವಂತ.  ಆದ್ದರಿಂದ ಇಲ್ಲಿ ನಿಜವಾದ ಅಗ್ನಿ ಭಗವಂತ. ಇನ್ನು  ‘ಅಗ್ನಿ’ ಪದವನ್ನು ಒಡೆದು ನೋಡಿದರೆ:  ಅಗ+ನಿ=ಅಗ್ನಿ. ಚಲನೆ ಇಲ್ಲದ ವಸ್ತುವಿಗೆ(ಅಗ) ಚಲನೆ ಕೊಡುವವನು(ನಿ)-ಅಗ್ನಿ. ಭಗವಂತ ಇಡೀ ವಿಶ್ವಕ್ಕೆ ಚಲನೆ ಕೊಡುವವನು. ಆದ್ದರಿಂದ ಆತ ಅಗ್ನಿ. ಹೀಗೆ ವೇದದಲ್ಲಿನ ಶಬ್ದಗಳನ್ನು ಒಡೆದಾಗ, ಆ ಶಬ್ದದೊಳಗೆ ಸರ್ವಾಂತರ್ಯಾಮಿ ಭಗವಂತ ಹುದುಗಿರುವುದು ಕಾಣಸಿಗುತ್ತದೆ. ಈ ಅನುಸಂಧಾನವಿಲ್ಲದೆ ವೇದಾರ್ಥಚಿಂತನೆ ಮಾಡಿದರೆ ಎಲ್ಲವೂ ಗೊಂದಲಮಯವಾಗಿ ಕಾಣುವ ಅಪಾಯವಿದೆ.
ಆಯಾ ಪ್ರಾರ್ಥನೆಗನುಗುಣವಾಗಿ ಭಗವಂತನನ್ನು ಆಯಾ ವಿಶೇಷ ನಾಮದಿಂದ ಸ್ತುತಿಸುತ್ತಾರೆ. ಚಲನೆ ಇಲ್ಲದ ಪ್ರಪಂಚಕ್ಕೆ ಚಾಲಕ ಶಕ್ತಿ ಭಗವಂತ ಎನ್ನುವ ಅನುಸಂಧಾನದಿಂದ ಭಗವಂತನನ್ನು ‘ಅಗ್ನಿ’ ಎಂದು ಸಂಬೋಧಿಸುತ್ತಾರೆ. “ನೀನಿಲ್ಲದೆ ಈ ಪ್ರಪಂಚ ನಡೆಯುವುದಿಲ್ಲ, ಈ ಪ್ರಪಂಚಕ್ಕೆ ಸ್ವತಃ ಚಲನೆ ಇಲ್ಲಾ. ಅದು ಏನು ಮಾಡಬೇಕೋ ಅದನ್ನು ಸ್ವಯಂ ಮಾಡಲಾರದು. ಇಂತಹ ವಿಶ್ವಕ್ಕೆ ಹಾಗೂ ಆ ವಿಶ್ವದಲ್ಲಿ ಒಬ್ಬನಾದ ನನಗೆ ಚಾಲನಾಶಕ್ತಿ ಕೊಟ್ಟು ನಡೆಸು” ಎನ್ನುವ ಪ್ರಾರ್ಥನೆ ಭಗವಂತನ ‘ಅಗ್ನಿ’ ನಾಮದ ಹಿಂದಿನ ಅನುಸಂಧಾನ.  ಇದೇ ರೀತಿ ಮಿತ್ರ.  ಒಂದು ವಸ್ತುವಿನ ಅರಿವನ್ನು ಕೊಡುವವನು; ಮುಂದೆ ಏನಾಗುತ್ತದೆ ಎನ್ನುವುದನ್ನು ಪೂರ್ಣವಾಗಿ ತಿಳಿದು, ಖಚಿತವಾಗಿ ರಕ್ಷಿಸುವ ನಿಜವಾದ ‘ಮಿತ್ರ’ ಆ ಭಗವಂತ. ಹೀಗೆ ಇಂದ್ರ, ರುದ್ರ, ವಾಯು, ಇತ್ಯಾದಿ ನಾಮಗಳಿಗೆ ಅದರದ್ದೇ ಆದ ವಿಶೇಷ ಅನುಸಂಧಾನವಿದೆ.

Shrimad BhAgavata in Kannada -Skandha-01 CH-01 (1)


॥ಶ್ರೀಮದ್ ಭಾಗವತ ಪುರಾಣಮ್॥

ಪ್ರಥಮ ಸ್ಕಂಧಃ

ಪ್ರಥಮೋSಧ್ಯಾಯಃ

॥ಓಂ ನಮೋ ಭಗವತೇ ವಾಸುದೇವಾಯ ಓಂ॥
॥ಹರಿಃ ಓಂ ॥

ಶ್ರೀಮದ್ಭಾಗವತ ಮಹಾಪುರಾಣದ ಮಂಗಲಪದ್ಯ

ಜನ್ಮಾದ್ಯಸ್ಯ ಯತೋSನ್ವಯಾದಿತರತಶ್ಚಾರ್ಥೇಷ್ವಭಿಜ್ಞಃ ಸ್ವರಾಟ್
ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯಂತಿ ಯಂ ಸೂರಯಃ ।
ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ
ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ                             ॥೧॥

ಭಾಗವತದ ಮೊದಲ ಮಂಗಲಾಚರಣೆಯ ಈ ಪದ್ಯ ಬಹಳ ವಿಶಿಷ್ಠವಾದ ಪದ್ಯ. ಇದು ಸಮಗ್ರ ವೇದಾಂತದ ತಿರುಳನ್ನು ನಮ್ಮ ಮುಂದಿಡುತ್ತದೆ! ಇಲ್ಲಿ ಒಟ್ಟು ನಾಲ್ಕು ಪಾದಗಳಿವೆ. ಪ್ರತಿಯೊಂದು ಪಾದದಲ್ಲೂ ಹತ್ತೊಂಬತ್ತು ಅಕ್ಷರಗಳಿವೆ. ಹಾಗಾಗಿ ಈ ಪದ್ಯದಲ್ಲಿ ಒಟ್ಟು ಎಪ್ಪತ್ತಾರು ಅಕ್ಷರಗಳಿವೆ. ಈ ಎಪ್ಪತ್ತಾರು ಅಕ್ಷರಗಳು ಭಗವಂತನ ಎಪ್ಪತ್ತಾರು ರೂಪಗಳನ್ನು ಹೇಳುತ್ತವೆ. ಭಗವಂತನ ಎಪ್ಪತ್ತಾರು ರೂಪಗಳು ಎಂದರೆ ಅದು ಸಮಗ್ರ ವಿಶ್ವದ ಅಖಂಡ ಚಿತ್ರಣ. ವಿಶ್ವವೆಂದರೆ ಅದು ನಾಮಾತ್ಮಕ ಮತ್ತು ರೂಪಾತ್ಮಕ ಪ್ರಪಂಚ. ರೂಪಾತ್ಮಕ ಪ್ರಪಂಚದಲ್ಲಿ ಒಟ್ಟು ಇಪ್ಪತ್ತೈದು ತತ್ತ್ವಗಳಿವೆ. ಅವುಗಳೆಂದರೆ: ಪುರುಷ, ಪ್ರಕೃತಿ, ಮಹತ್ತತ್ವ, ಅಹಂಕಾರತತ್ವ, ಮನಸ್ತತ್ವ, ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಐದು ತನ್ಮಾತ್ರೆಗಳು ಮತ್ತು ಪಂಚಭೂತಗಳು.  ಈ ಇಪ್ಪತ್ತೈದು ತತ್ತ್ವಗಳಲ್ಲಿ ಭಗವಂತನ ಇಪ್ಪತ್ತೈದು ರೂಪಗಳಿವೆ. ಇನ್ನು ನಾಮಾತ್ಮಕ ಪ್ರಪಂಚ ಎಂದರೆ ಅದು ಅಕ್ಷರ ಪ್ರಪಂಚ. ಅ-ದಿಂದ ಕ್ಷ-ತನಕ ಇರುವುದು ಒಟ್ಟಿಗೆ ಐವತ್ತೊಂದು ಅಕ್ಷರಗಳು. ಎಲ್ಲಾ ನಾಮಗಳು, ಎಲ್ಲಾ ಶಬ್ದಗಳೂ ಈ ಐವತ್ತೊಂದು ಅಕ್ಷರದಲ್ಲಿವೆ. ಐವತ್ತೊಂದು ಅಕ್ಷರಗಳಿಂದ(ಮಾತೃಕೆಗಳಿಂದ) ವಾಚ್ಯನಾದ ಭಗವಂತನ ರೂಪಗಳೂ ಐವತ್ತೊಂದು, ಅವುಗಳೆಂದರೆ:
೧. ಅಜ, ೨. ಆನಂದ, ೩. ಇಂದ್ರ,  ೪. ಈಶ, ೫. ಉಗ್ರ, ೬. ಊರ್ಜ, ೭. ಋತಂಭರ, ೮. ೠಘ, ೯. ಲ್ ಶ, ೧೦. ಲ್ೕಜಿ, ೧೧. ಏಕಾತ್ಮ , ೧೨. ಐರ, ೧೩. ಓಜೋಭೃತ್, ೧೪. ಔರಸ, ೧೫. ಅಂತ, ೧೬. ಅರ್ಧಗರ್ಭ, ೧೭. ಕಪಿಲ, ೧೮. ಖಪತಿ, ೧೯. ಗರುಡಾಸನ, ೨೦. ಘರ್ಮ, ೨೧. ಙಸಾರ ೨೨. ಚಾರ್ವಾಂಗ, ೨೩. ಛಂದೋಗಮ್ಯ, ೨೪. ಜನಾರ್ದನ, ೨೫. ಝೂಟಿತಾರಿ, ೨೬. ಞಮ, ೨೭.ಟಂಕಿ, ೨೮.ಠಕಲ, ೨೯. ಡರಕ, ೩೦.ಢರಿ, ೩೧. ಣಾತ್ಮ, ೩೨. ತಾರ, ೩೩. ಥಭ, ೩೪. ದಂಡಿ, ೩೫. ಧನ್ವಿ, ೩೬. ನಮ್ಯ, ೩೭. ಪರ, ೩೮. ಫಲಿ, ೩೯. ಬಲಿ, ೪೦. ಭಗ, ೪೧. ಮನು, ೪೨. ಯಜ್ಞ, ೪೩. ರಾಮ, ೪೪. ಲಕ್ಷ್ಮೀಪತಿ, ೪೫. ವರ, ೪೬. ಶಾಂತಸಂವಿತ್, ೪೭. ಷಡ್ಗುಣ, ೪೮. ಸಾರಾತ್ಮ, ೪೯. ಹಂಸ, ೫೦. ಳಾಳುಕ, ೫೧. ನೃಸಿಂಹ[ನೃಹರ್ಯಕ್ಷ].
ನಾಮಾತ್ಮಕ ಮತ್ತು ರೂಪಾತ್ಮಕ ಪ್ರಪಂಚದಲ್ಲಿರುವ ಎಪ್ಪತ್ತಾರು ರೂಪಗಳನ್ನು ನೆನೆಯುತ್ತಾ, ಭಾಗವತದ ಈ ಮೊದಲ ಶ್ಲೋಕ ಒಂದು ವಿಶಿಷ್ಠವಾದ ಎಚ್ಚರವನ್ನು ನಮ್ಮ ಮುಂದಿಡುತ್ತದೆ ಮತ್ತು ಅದು ಅನೇಕ ಆಯಾಮಗಳಲ್ಲಿ ತೆರೆದುಕೊಳ್ಳುತ್ತದೆ. ಭಗವಂತನ ಬಗ್ಗೆ ಹೇಗೆ ತಿಳಿದುಕೊಳ್ಳಬೇಕು? ಭಗವಂತ ಇದ್ದಾನೆ ಎಂದು ನಮಗೆ ಭರವಸೆ ಬರುವುದು ಹೇಗೆ? ಭಗವಂತನ ಬಗೆಗೆ ಖಚಿತವಾದ ಮನವರಿಕೆ(Conviction)ಬರಬೇಕು ಅಂದರೆ ಏನು ಮಾಡಬೇಕು? ಇದು ನಮ್ಮೆಲ್ಲರಲ್ಲಿರುವ ಸರ್ವೇಸಾಮಾನ್ಯ ಪ್ರಶ್ನೆ. ಅದಕ್ಕಾಗಿ ಇಲ್ಲಿ ಹೇಳುತ್ತಾರೆ: “ಜನ್ಮಾದ್ಯಸ್ಯ ಯತಃ” ಎಂದು. ಬ್ರಹ್ಮಸೂತ್ರದಲ್ಲಿ ಹೇಳುವಂತೆ: “ಅಥಾತೋ ಬ್ರಹ್ಮ ಜಿಜ್ಞಾಸಾ” [ಬ್ರಹ್ಮ ಸೂತ್ರ ೧.೧.]. ನಾವು ಮೊದಲು ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ: ಈ ಪ್ರಪಂಚದಲ್ಲಿ ಯಾವುದೇ ಕಾರ್ಯ ನೆಡೆಯಬೇಕಾದರೂ  ಅದರ ಹಿಂದೆ ಒಂದು ಕಾರಣವಿರುತ್ತದೆ ಎನ್ನುವುದು. ಅಕಾರಣವಾಗಿ ಪ್ರಪಂಚದಲ್ಲಿ ಯಾವ ಕಾರ್ಯವೂ ನಡೆಯುವುದಿಲ್ಲ. ಹಾಗಾಗಿ ಒಂದು ವಸ್ತು ನಿರ್ಮಾಣವಾಗಲು ಕಾರಣ ಇರಲೇಬೇಕು. ಕಾರಣದಲ್ಲಿ ಮುಖ್ಯವಾಗಿ ಎರಡು ವಿಧ. ಒಂದು ನಿಮಿತ್ತ ಕಾರಣ ಹಾಗೂ ಇನ್ನೊಂದು ಉಪಾದಾನ ಕಾರಣ. ಉದಾಹರಣೆಗೆ: ಮಣ್ಣಿನಿಂದ ಮಾಡಿಕೆಯಾಯಿತು ಎಂದರೆ ಅಲ್ಲಿ ಜಡವಾದ ಮಣ್ಣು ಉಪಾದಾನ ಕಾರಣ ಮತ್ತು ಬುದ್ಧಿಪೂರ್ವಕವಾಗಿ ಮಡಿಕೆ ಮಾಡುವ ಚೇತನ ನಿಮಿತ್ತಕಾರಣ. ಇಲ್ಲಿ ಬಳಕೆಯಾದ ‘ಇತರತಃ’ ಎನ್ನುವ ಪದ “ಯಾವುದೇ ಒಂದು ಕಾರ್ಯವಾಗಬೇಕಾದರೆ, ಯಾವುದೇ ಒಂದು ವಸ್ತು ನಿರ್ಮಾಣವಾಗಬೇಕಾದರೆ, ಅದರ ಹಿಂದೆ ಒಂದು ಚೇತನ ಶಕ್ತಿ ಇರಲೇಬೇಕು” ಎನ್ನುವುದನ್ನು ಪ್ರತಿಪಾದಿಸುತ್ತದೆ. ಈ ವಿಶ್ವ ಸೃಷ್ಟಿಯ ಹಿಂದಿರುವ ಚೇತನ ಆ ಭಗವಂತ. ಆತ ನಮ್ಮ ಅರಿವಿಗೆ ಮೀರಿ ನಿಂತವ. ಚೇತನಾಚೇತನ ಪ್ರಪಂಚ ಸೃಷ್ಟಿಗೆ ಕಾರಣ ಆ ಜಗಜ್ಜನ್ಮಾದಿಕರ್ತ ಭಗವಂತ.

ಭಗವಂತನ ಅರಿವು ಬರಬೇಕಾದರೆ ಮೊದಲು ನಾವು ವೇದಗಳಿಗೆ ಶರಣಾಗಬೇಕು. ‘ವೇದ’ ಮೂಲಭೂತವಾಗಿ  ಶಬ್ದಗಳ ಮೂಲಕ ನಮಗೆ ಭಗವಂತನ ಅರಿವು ಬರುವಂತೆ ಮಾಡುವ ಗ್ರಂಥ. ಋಗ್ವೇದದಲ್ಲಿ ಹೇಳುವಂತೆ: 
ನ ತಂ ವಿದಾಥ ಯ ಇಮಾ ಜಜಾನಾನ್ಯದ್ಯುಷ್ಮಾಕಮಂತರಂ ಬಭೂವ |
ನೀಹಾರೇಣ ಪ್ರಾವೃತಾ ಜಲ್ಪ್ಯಾ ಚಾಸುತೃಪ ಉಕ್ಥಶಾಸಶ್ಚರಂತಿ ॥೧೦.೦೮೨.೦೭॥
ಇಲ್ಲಿ ಹೇಳುತ್ತಾರೆ: ನಾವು ಭಗವಂತನ ಬಗ್ಗೆ ತಿಳಿದಿಲ್ಲ. ಏಕೆಂದರೆ ಅದು “ಬೇರೆ ಸಂಗತಿ” ಎಂದು. ಭಗವಂತ  ನಾವು ಕಲ್ಪಿಸಬಹುದಾದ, ಯೋಚಿಸಬಹುದಾದ, ಅರ್ಥಮಾಡಿಕೊಳ್ಳಬಹುದಾದ, ಎಲ್ಲಾ ಸಂಗತಿಗಳಿಗಿಂತ ಭಿನ್ನ. ಆದರೆ ಇಂತಹ ಭಗವಂತ ನಮ್ಮೊಳಗೇ ಇದ್ದಾನೆ, ನಮ್ಮ ಬಿಂಬರೂಪನಾಗಿ ನಮ್ಮ ಹೃದಯಕಮಲದಲ್ಲಿ ಆನಂದಮಯನಾಗಿ ಆತ ರಮಿಸುತ್ತಿದ್ದಾನೆ. ಹಾಗಾಗಿ ಭಗವಂತನನ್ನು ನಾವು ಎಲ್ಲೆಲ್ಲೂ ಹುಡುಕುವುದು ಬೇಡ. ಆತನನ್ನು ನಮ್ಮ ಹೃದಯದಲ್ಲಿ ನೋಡಲು ನಾವು ಪ್ರಯತ್ನಿಸೇಕು. ಮಂಜು ಕವಿದ ನಮ್ಮ ಕಣ್ಣಿಗೆ ಆತ ಕಾಣಲಾರ. ಭಗವಂತನನ್ನು ತಿಳಿಯಬೇಕಾದರೆ ನಾವು ವೇದಾಂತಸಾಹಿತ್ಯವನ್ನು, ವೇದವನ್ನು ತಿಳಿಯಬೇಕಾಗುತ್ತದೆ. ಅದು ಅರ್ಥವಾಗದಿದ್ದಾಗ  ವೇದಕ್ಕೆ ಸಂಬಂಧಿಸಿದ ಇತಿಹಾಸ-ಪುರಾಣಗಳನ್ನು ಒಂದಕ್ಕೊಂದು ಅನ್ವಯ ಮಾಡಿ ಅದರಲ್ಲಿ ಭಗವಂತನನ್ನು ಕಾಣಬೇಕು.
ವೇದವನ್ನು ಓದುವಾಗ ಒಂದೊಂದು ಕಡೆ ಒಂದೊಂದು ರೀತಿ ವಿವರಣೆ ಕಂಡು ಬರುತ್ತದೆ. ಉದಾಹರಣೆಗೆ ಅಗ್ನಿಸೂಕ್ತ ಓದಿದಾಗ ಅಗ್ನಿಯೇ ದೇವರು ಎನಿಸುತ್ತದೆ; ವಾಯು ಸೂಕ್ತ ಓದಿದಾಗ ವಾಯುವೇ ದೇವರು ಎನಿಸುತ್ತದೆ. ಇನ್ನೊಂದು ಕಡೆ ಜಗತ್ತಿನಲ್ಲಿ ರುದ್ರನೇ ಶ್ರೇಷ್ಠ ಎನ್ನುವ ವಿವರಣೆ ವೇದದಲ್ಲಿ ಕಾಣಿಸುತ್ತದೆ. ಈ ರೀತಿ ವೇದದಲ್ಲಿನ ವಿವರಣೆಗಳಿಂದ ಗೊಂದಲವಾದಾಗ, ಅಲ್ಲಿ ಬರುವ ಒಂದೊಂದು ನಾಮವನ್ನೂ ಭಗವಂತನಲ್ಲಿ ಸಮನ್ವಯ ಮಾಡಬೇಕು. ಒಂದೊಂದು ನಾಮವನ್ನು ಭಗವಂತನಲ್ಲಿ ಸಮನ್ವಯ ಮಾಡಿ ನೋಡಿದಾಗ ಎಲ್ಲಾ ನಾಮಗಳು ಒಬ್ಬನೇ ಒಬ್ಬ ಭಗವಂತನನ್ನು ಹೇಳುತ್ತದೆ ಎನ್ನುವುದು ತಿಳಿಯುತ್ತದೆ. ವಾಯು, ರುದ್ರ, ಅಗ್ನಿ, ಇಂದ್ರ, ಇತ್ಯಾದಿ ಯಾವುದೇ  ನಾಮದಿಂದ ಕರೆದರೂ ಒಬ್ಬನೇ ಒಬ್ಬ ಭಗವಂತನನ್ನು ಕರೆಯುವುದೇ ಹೊರತು, ಅನಂತ ದೇವರನ್ನು ವೇದ ಹೇಳುವುದಿಲ್ಲ. ಶ್ವೇತಾಶ್ವತರ ಉಪನಿಷತ್ತಿನಲ್ಲಿ ಹೇಳುವಂತೆ:
 ಏಕೋ ದೇವಃ ಸರ್ವಭೂತೇಷು ಗೂಢಃ ಸರ್ವವ್ಯಾಪೀ ಸರ್ವಭೂತಾಂತರಾತ್ಮಾ
ಸರ್ವಾಧ್ಯಕ್ಷಃ ಸರ್ವಭೂತಾಧಿವಾಸಃ ಸಾಕ್ಷೀ ಚೇತಾ ಕೇವಲೋ ನಿರ್ಗುಣಶ್ಚ ॥೬-೧೧॥
ಹೀಗೆ ಸರ್ವಗತನಾದ ಒಬ್ಬ ಭಗವಂತನನ್ನು ಸಮನ್ವಯದಿಂದ ತಿಳಿಯಲು ಬರುತ್ತದೆ. ವೇದದ ಹಿನ್ನೆಲೆಯಲ್ಲಿ ಸಮಸ್ತ ವೇದ-ಪುರಾಣಗಳನ್ನು ಸಮನ್ವಯ ಮಾಡಿ, ಶ್ರುತಿ, ಉಪಸಂಹಾರಗಳಿಂದ, ಯಾವುದು ನಿಜವಾದ ಅರ್ಥ ಎಂದು ತೀರ್ಮಾನ ಮಾಡುವುದೇ ಸಮನ್ವಯ. ತರ್ಕಬದ್ಧವಾಗಿ ಸಮಸ್ತ ವೇದವೂ ಒಬ್ಬನೇ ಒಬ್ಬ ಭಗವಂತನನ್ನು ಹೇಳುತ್ತದೆ ಎಂದು ನಮಗೆ ತಿಳಿದಾಗ, ಎಲ್ಲಾ ತರ್ಕಗಳೂ ಭಗವಂತನನ್ನು ಉಪಪಾದಿಸುವ(To Prove) ತರ್ಕಗಳಾಗುತ್ತವೆ. ಆಗ ಭಗವಂತನಿಲ್ಲ ಎನ್ನುವ ಯಾವ ಯುಕ್ತಿಯೂ ನಮಗೆ ಕಾಣಸಿಗುವುದಿಲ್ಲ. ಕಠೋಪನಿಷತ್ತಿನಲ್ಲಿ ಯಮ ಹೇಳುವಂತೆ:
ಸರ್ವೇ ವೇದಾ ಯತ್ಪದಮಾಮನಂತಿ  ತಪಾಂಸಿ ಸರ್ವಾಣಿ ಚ ಯದ್ವದಂತಿ ।  ೧-೧೫ ।
ಎಲ್ಲಾ ಯುಕ್ತಿಗಳೂ ಭಗವಂತನ ಅಸ್ತಿತ್ವವನ್ನೇ ಸಾರುತ್ತವೆ ಹೊರತು ನಿರಾಕರಣೆ ಮಾಡುವುದಿಲ್ಲ. ಆದರೆ ಒಂದು  ತಮಾಷೆಯ ವಿಷಯವೆಂದರೆ: ಭಗವಂತನ ಅರಿವು ಬರುವ ತನಕ ನಮಗೆ ಯಾವುದೇ ಯುಕ್ತಿಯಿಂದ ಭಗವಂತನನ್ನು ಉಪಪಾದಿಸಲು ಬರುವುದಿಲ್ಲ; ಅರಿವು ಬಂದ ಮೇಲೆ ಭಗವಂತನನ್ನು ಹೇಳದ ಯುಕ್ತಿ ಕಾಣಸಿಗುವುದಿಲ್ಲ! ಸಮನ್ವಯದಿಂದ ಭಗವಂತನ ಅರಿವು ಬಂದ ಮೇಲೆ ಯಾವುದೇ ತರ್ಕ ಮಾಡಿದರೂ ಅದು ಭಗವಂತನ ಪರವಾಗಿಯೇ ಇರುತ್ತದೆ. ಇಡಿಯ ಜಗತ್ತಿಗೆ ಕಾರಣವಾಗಿರುವ ತತ್ತ್ವವನ್ನು, ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವರ ಮಾತುಗಳಿಂದ ಸಮನ್ವಯಮಾಡಿ, ನಮಗೆ ತಿಳಿದ ತರ್ಕಗಳ ಮೂಲಕ ತಿಳಿದು, ಉಪಾಸನೆ ಮಾಡಿ, ಪ್ರತ್ಯಕ್ಷವಾಗಿ ಅರಿಯಬೇಕು.    

Thursday, December 13, 2012

Shrimad BhAgavata in Kannada -ಪ್ರಸ್ತಾವನೆ-3

ಭಾಗವತವನ್ನು “ವೇದಾರ್ಥಪರಿಬೃಂಹಿತಃ”  ಎಂದಿದ್ದಾರೆ. ಇದು ಅರ್ಥವಾಗಬೇಕಾದರೆ ನಾವು ಭಾಗವತ ಶ್ಲೋಕಗಳನ್ನು ಗಮನಿಸಬೇಕು. ಅಲ್ಲಿ ವ್ಯಾಸರು ಪ್ರತಿಯೊಂದು ಪದ್ಯದಲ್ಲೂ ವೇದಾರ್ಥವನ್ನು ತುಂಬಿ, ಹೇಗೆ ವೇದದ ಚಿಂತನೆಗೆ ನಮ್ಮನ್ನು ಅಣಿಗೊಳಿಸುತ್ತಾರೆ ಎನ್ನುವುದು ತಿಳಿಯುತ್ತದೆ. ಇದಕ್ಕೆ ಒಂದು ಪ್ರಸಿದ್ಧ ದೃಷ್ಟಾಂತ ಈ ಕೆಳಗಿನ  ವೇದ ಮಂತ್ರ:
“ನಮೋ ಮಹಭ್ಯೋ ನಮೋ ಅರ್ಭಕೇಭ್ಯೋ ನಮೋ ಯುವಭ್ಯೋ ನಮಃ  ಆಶಿನೇಭ್ಯಃ”
ಇಲ್ಲಿ ‘ಆಶಿನೇಭ್ಯಃ’ ಎಂದರೆ ಏನು ಎನ್ನುವುದು ವೇದಾಧ್ಯಯನ ಮಾಡುವಾಗ ನಮಗೆ ಸ್ಪಷ್ಟವಾಗುವುದಿಲ್ಲ. ಆದ್ದರಿಂದ ಇದನ್ನು ಸ್ಪಷ್ಟಪಡಿಸುವುದಕ್ಕೋಸ್ಕರ ವೇದವ್ಯಾಸರು ಭಾಗವತದಲ್ಲಿ ಹೀಗೆ ಹೇಳಿದ್ದಾರೆ:
ನಮೋ ಮಹದ್ಭ್ಯೋಽಸ್ತು ನಮಃ ಶಿಶುಭ್ಯೋ ನಮೋ ಯುವಭ್ಯೋ ನಮಃ ಆವಟುಭ್ಯಃ [೧೫-೧೩-೨೩].
ಇಲ್ಲಿ ಎಲ್ಲಾ ಪದಗಳನ್ನು ವೇದಮಂತ್ರದಿಂದ ಆಯ್ಕೆ ಮಾಡಿದ ವೇದವ್ಯಾಸರು,  ‘ಆಶಿನೇಭ್ಯಃ’ ಎನ್ನುವಲ್ಲಿ “ವಟುಭ್ಯಃ” ಎನ್ನುವ ಪದ ಬಳಸಿ ಆಶಿನೇಭ್ಯಃ ಎನ್ನುವ ಪದದ ಅರ್ಥ ವಿವರಣೆ ನೀಡಿದರು. ಹೀಗೆ ವೇದದಲ್ಲಿ ಅಸ್ಪಷ್ಟವಾಗಿರುವ ಅನೇಕ ವಿಚಾರಗಳನ್ನು ಭಾಗವತ ಬಿಡಿಸಿ ಹೇಳುತ್ತದೆ. ಈ ರೀತಿಯ ವಿವರಣೆ ಬೇರೆ ಪುರಾಣಗಳಿಗಿಂತ ಹೆಚ್ಚಾಗಿ ಭಾಗವತದಲ್ಲಿ ಬಳಕೆಯಾಗಿದೆ. ಹೀಗಾಗಿ ವೇದದ ಅರ್ಥ ನಮಗಾಗಬೇಕಾದರೆ ನಾವು ಭಾಗವತವನ್ನು ಓದಬೇಕು. ವ್ಯಾಸರೇ ಹೇಳುವಂತೆ:
ಪುರಾಣಾನಾಂ ಸಾರರೂಪಃ ಸಾಕ್ಷಾದ್ ಭಗವತೋದಿತಃ |
ದ್ವಾದಶಸ್ಕಂದ ಸಂಯುಕ್ತಃ ಶತವಿಚ್ಛೇದ ಸಂಯುತಃ |
ಗ್ರಂಥೋSಷ್ಟಾದಶ ಸಾಹಸ್ರಃ ಶ್ರೀಮದ್ಭಾಗವತಾಭಿಧಃ |

ಹದಿನೆಂಟು ಪುರಾಣಗಳಲ್ಲಿ ಭಾಗವತ ಸಾರಭೂತವಾದ ಪುರಾಣ ಎಂದು ತೀರ್ಮಾನ ಮಾಡಿ ವ್ಯಾಸರು ಈ ಗ್ರಂಥವನ್ನು ರಚನೆ ಮಾಡಿದರು. ಇದು ಭಗವಂತನ ಕುರಿತಾದ ಗ್ರಂಥ ಮತ್ತು ಭಗವಂತನೇ ರಚಿಸಿದ ಗ್ರಂಥ. ಇದರಲ್ಲಿ ಹನ್ನೆರಡು ಸ್ಕಂದಗಳಿವೆ ಮತ್ತು ೧೮,೦೦೦ ಶ್ಲೋಕಗಳಿವೆ. ಇಲ್ಲಿ ಹೇಳುವಂತೆ ಭಾಗವತದಲ್ಲಿ ನೂರು ಪರಿಚ್ಛೇದಗಳಿವೆ. ಆ ನೂರು ಪರಿಚ್ಛೇದ ಯಾವುದು ಎನ್ನುವುದು ನಮಗೆ ಅಸ್ಪಷ್ಟವಾದರೂ ಕೂಡಾ, “ಶತವಿಚ್ಛೇದ” ಎಂದರೆ  ನೂರಾರು ಅಧ್ಯಾಯಗಳು ಎಂದು ನಾವು ತಿಳಿಯಬಹುದು.
ಪ್ರೀತಿಯ ಅಧ್ಯಾತ್ಮ ಬಂಧುಗಳೇ, ಭಗವಂತ ನಮಗೆ ದಯಪಾಲಿಸಿರುವ ಈ ಅಪೂರ್ವ ಗ್ರಂಥವನ್ನು ಓದುವ ಹಾಗೂ ಓದಿ ತಿಳಿದು ಧನ್ಯರಾಗುವ ಅಪೂರ್ವ ಅವಕಾಶವನ್ನು ಇಂದು ಆ ಭಗವಂತ ನಮಗೆ ಕರುಣಿಸಿದ್ದಾನೆ. ಇಂತಹ ಅದ್ಭುತ ಜ್ಞಾನಶಕ್ತಿಯನ್ನು ಅರಿಯುವ ಸಾಮರ್ಥ್ಯ ನಮಗಿದೆಯೋ ಇಲ್ಲವೋ ನಮಗೇ ತಿಳಿಯದು. ಆದರೆ ನಮಗೆ ಒಂದು ವಿಚಾರ ಮಾತ್ರ ಸ್ಪಷ್ಟವಾಗಿ ತಿಳಿದಿದೆ. ಅದೇನೆಂದರೆ: ಭಗವಂತ ಭಕ್ತ ಪರಾಧೀನ. ಆತ ತನ್ನ ಭಕ್ತ ಕೇಳಿದ್ದನ್ನು ಇಲ್ಲಾ ಎನ್ನಲಾರ. ಹಾಗಾಗಿ ಆ ಭಗವಂತನಲ್ಲಿ “ಈ ಅತ್ಯದ್ಭುತವಾದ ಜ್ಞಾನವನ್ನು ಅರಿಯುವ ಶಕ್ತಿ ಕೊಡು” ಎಂದು ಬೇಡಿ, ಭಾಗವತವನ್ನು ಪ್ರವೇಶಿಸೋಣ.  
*******

Wednesday, December 12, 2012

Shrimad BhAgavata in Kannada -ಪ್ರಸ್ತಾವನೆ-2


ಭಾಗವತ ತಾತ್ಪರ್ಯ ನಿರ್ಣಯದಲ್ಲಿ ಆಚಾರ್ಯರು ಹೇಳುವಂತೆ: “ಬ್ರಹ್ಮಸೂತ್ರ ಮಹಾಭಾರತ ಗಾಯತ್ತ್ರೀ ವೇದಸಂಬಂಧಶ್ಚಾಯಂ ಗ್ರಂಥಃ”. ಭಾಗವತ ಬ್ರಹ್ಮಸೂತ್ರದ ವಿವರಣೆ; ಮಹಾಭಾರತದ ವಿವರಣೆ ; ಅದು ಗಾಯತ್ತ್ರಿಯ ವಿವರಣೆ. ಬ್ರಹ್ಮಸೂತ್ರಕ್ಕೆ ವೇದವ್ಯಾಸರೇ ಬರೆದಿರುವ ಭಾಷ್ಯ ಭಾಗವತ ಎನ್ನಲಾಗುತ್ತದೆ. ವೇದವ್ಯಾಸರು ಭಾಗವತದ ಕುರಿತು ಹೇಳುತ್ತಾ ಹೀಗೆ ಹೇಳಿದ್ದಾರೆ: “ಅರ್ಥೋSಯಂ ಬ್ರಹ್ಮಸೂತ್ರಾಣಾಂ ಭಾರತಾರ್ಥ ವಿನಿರ್ಣಯಃ | ಗಾಯತ್ತ್ರೀಭಾಷ್ಯರೂಪೋSಸೌ ವೇದಾರ್ಥಪರಿಬೃಂಹಿತಃ”. ಬ್ರಹ್ಮಸೂತ್ರದ ಅರ್ಥ ವಿವರಣೆ ಭಾಗವತ; ಮಹಾಭಾರತದಲ್ಲಿ ಯಾವ ವಿಷಯ ಸಂಧಿಗ್ಧವಾಗಿದೆಯೋ ಅದನ್ನು ನಿರ್ಣಯ ಮಾಡತಕ್ಕಂತಹ ಪುರಾಣ ಭಾಗವತ; ಗಾಯತ್ತ್ರಿ ಭಾಷ್ಯ ಭಾಗವತ; ವೇದಾರ್ಥ ವಿವರಣೆ ಭಾಗವತ. ವೈದಿಕ ಸಾಹಿತ್ಯದಲ್ಲಿ ಗಾಯತ್ತ್ರಿಗೂ ಸಮಸ್ತ ವೇದಗಳಿಗೂ ಸಂಬಂಧವಿರುವಂತೆ, ಸಮಸ್ತ ವೈದಿಕ ವಾಙ್ಮಯಕ್ಕೆ  ಒಂದಕ್ಕೊಂದು ಪೂರಕವಾಗಿರುವ ಗ್ರಂಥ ಭಾಗವತ.
ಭಾಗವತ ಬ್ರಹ್ಮಸೂತ್ರದ ವಿವರಣೆ ಹೇಗೆ ಎನ್ನುವುದನ್ನು ಇಲ್ಲಿ ಸ್ಥೂಲವಾಗಿ ನೋಡೋಣ. ಬ್ರಹ್ಮಸೂತ್ರಕ್ಕೂ ಭಾಗವತಕ್ಕೂ ಇರುವ ಸಂಬಂಧವನ್ನು ಭಾಗವತದ ಮೊದಲ ಶ್ಲೋಕವೇ ಸೂಚಿಸುತ್ತದೆ. ಬ್ರಹ್ಮಸೂತ್ರದ ಎರಡನೇ ಸೂತ್ರವೇ ಭಾಗವತದ  ಆರಂಭ. [ಓಂ ಜನ್ಮಾದ್ಯಸ್ಯ ಯತಃ ಓಂàಬ್ರಹ್ಮಸೂತ್ರ ೨ನೇ ಸೂತ್ರ] ಹಾಗೇ ಶ್ಲೋಕದ ಮುಂದುವರಿಕೆ ಕೂಡಾ ಸಮನ್ವಯಾತ್ ಎನ್ನುವ ಸೂತ್ರದಿಂದಲೇ ಬಂದಿದೆ. [ಓಂ ತತ್ತು ಸಮನ್ವಯಾತ್  ಓಂàಬ್ರಹ್ಮಸೂತ್ರ ೪ನೇ ಸೂತ್ರ]. ಹೀಗೆ ಭಾಗವತದ ಮಂಗಲ ಪದ್ಯದಲ್ಲೇ ವೇದವ್ಯಾಸರು ಬ್ರಹ್ಮಸೂತ್ರ ಮತ್ತು ಭಾಗವತದ ಸಂಬಂಧದ ಸೂಚನೆ ಕೊಟ್ಟಿದ್ದಾರೆ. ಭಗವಂತ ಈ ಜಗತ್ತಿನ ಸರ್ವಕಾರಣ ಎನ್ನುವುದು ವೇದಾಂತಸೂತ್ರದ ಒಟ್ಟು ಸಾರ. ಸರ್ವಕಾರಣತ್ವವನ್ನು ಭಗವಂತನಲ್ಲಿ ಸಮಕ್ಷಿಸುವುದು ಮತ್ತು ಸರ್ವಗುಣಪೂರ್ಣತ್ವವನ್ನು ಸರ್ವಶಬ್ದಗಳಿಂದ ಸಮನ್ವಯ ಮಾಡುವುದು ಭಾಗವತದ ಒಟ್ಟು ಪ್ರಮೇಯ. ಒಟ್ಟಿನಲ್ಲಿ ಹೇಳಬೇಕೆಂದರೆ: ಬ್ರಹ್ಮಸೂತ್ರದಲ್ಲಿ ಹೇಳಿರುವ ಸರ್ವಗುಣಪೂರ್ಣತ್ವವನ್ನು, ಸರ್ವಶಬ್ದವಾಚ್ಯತ್ವವನ್ನು ಭಗವಂತನ ಅನೇಕ ಅವತಾರಗಳ ಮೂಲಕ ಬಿತ್ತರಿಸುವ ಗ್ರಂಥವಾದ ಭಾಗವತ ಬ್ರಹ್ಮಸೂತ್ರದ ಅರ್ಥರೂಪದಲ್ಲಿದೆ.
ಮೇಲೆ ಹೇಳಿದಂತೆ ಭಾಗವತ “ಭಾರತಾರ್ಥ ವಿನಿರ್ಣಯಃ”. ಇದು ಹೇಗೆಂದರೆ: ಮಹಾಭಾರತದಲ್ಲಿ ಅಸ್ಪಷ್ಟವಾಗಿ ಹೇಳಿದ ಮಾತುಗಳನ್ನು ಭಾಗವತದಲ್ಲಿ ಸ್ಪಷ್ಟವಾಗಿ ವಿವರಿಸಿರುವುದನ್ನು ಕಾಣುತ್ತೇವೆ. ಒಂದು ರೀತಿಯಲ್ಲಿ ಭಾಗವತ ಮತ್ತು ಮಹಾಭಾರತ ಪೂರ್ವಾರ್ದ-ಉತ್ತರಾರ್ದವಿದ್ದಂತೆ. ಉದಾಹರಣೆಗೆ ಭಾಗವತ ಕೃಷ್ಣನ ಬಾಲಲೀಲೆಗಳನ್ನು ಹೇಳಿದರೆ, ಮಹಾಭಾರತ ಪ್ರೌಡ ಕೃಷ್ಣನ ಕಥೆಯನ್ನು ವಿವರಿಸುತ್ತದೆ. ಇನ್ನೊಂದು ಮುಖದಲ್ಲಿ ನೋಡಿದರೆ ಮಹಾಭಾರತ ಪೂರ್ವಾರ್ದ ಹಾಗೂ ಭಾಗವತ ಉತ್ತರಾರ್ದ. ಏಕೆಂದರೆ ಭಾಗವತ ಪ್ರಾರಂಭವಾಗುವುದು ಮಹಾಭಾರತ ಮುಗಿದ ಮೇಲೆ. ಪಾಂಡವರ ನಂತರ ಅಭಿಮನ್ಯುವಿನ ಮಗ ಪರೀಕ್ಷಿತ ರಾಜ ಪಟ್ಟಕ್ಕೆ ಬಂದಾಗ ಭಾಗವತ ಪ್ರಾರಂಭವಾಗುತ್ತದೆ.
ಭಾಗವತದಲ್ಲಿ ಸಂಕ್ಷಿಪ್ತವಾಗಿ ಹೇಳಿರುವುದನ್ನು ಮಹಾಭಾರತ ವಿಸ್ತಾರವಾಗಿ ಹೇಳುವುದನ್ನು ನಾವು ಕಾಣಬಹುದು. ಉದಾಹರಣೆಗೆ: ಭೀಷ್ಮಾಚಾರ್ಯರು ಶರಶಯ್ಯೆಯಲ್ಲಿದ್ದಾಗ ಪಾಂಡವರಿಗೆ, ವಿಶೇಷವಾಗಿ ಧರ್ಮರಾಯನಿಗೆ ಮಾಡಿದ ಉಪದೇಶ ಭಾರತದಲ್ಲಿ ವಿಸ್ತಾರವಾಗಿ ವಿವರಿಸಿದ್ದಾರೆ.[ಶಾಂತಿಪರ್ವ ಮತ್ತು ಅನುಶಾಸನ ಪರ್ವ] ಆದರೆ ಈ ವಿವರಣೆಯನ್ನು ಭಾಗವತದಲ್ಲಿ ಕೇವಲ ಮೂರು ಶ್ಲೋಕಗಳಲ್ಲಿ ಚುಟುಕಾಗಿ ವಿವರಿಸಲಾಗಿದೆ.  ಆದರೆ ಭೀಷ್ಮಾಚಾರ್ಯರು ಶರಶಯ್ಯೆಯಲ್ಲಿ ಎರಡು ಬಾರಿ ಕೃಷ್ಣನನ್ನು ನೆನೆದು ಧ್ಯಾನ ಮಾಡುವ ಎರಡು ಭೀಷ್ಮಸ್ತವಗಳಿವೆ. ಇದರ ವಿವರಣೆ ಭಾರತದಲ್ಲಿ ವಿವರವಾಗಿ ಕೊಟ್ಟಿಲ್ಲ. ಆದರೆ ಇದನ್ನು ವಿಸ್ತಾರವಾಗಿ ಭಾಗವತದಲ್ಲಿ ವಿವರಿಸಿದ್ದಾರೆ. ಹೀಗೆ ಭಾಗವತ ಭಾರತದ ಅರ್ಥ ನಿರ್ಣಯಾತ್ಮಕ ಗ್ರಂಥ.
ಇನ್ನು ವೈದಿಕ ವಾಙ್ಮಯದಲ್ಲಿ ನೋಡಿದರೆ ಇಡೀ ವೇದಕ್ಕೆ ಮೂಲಭೂತವಾಗಿರುವ ಮಂತ್ರ ಗಾಯತ್ತ್ರಿ. ಓಂಕಾರದ ಮೂರು ಅಕ್ಷರಗಳು ಒಡೆದು ಮೂರು ವ್ಯಾಹೃತಿಗಳಾದವು, ಮೂರು ವ್ಯಾಹೃತಿಗಳು  ಚಿಗುರಿ ಮೂರು ಪಾದದ ಗಾಯತ್ತ್ರಿಯಾಯಿತು, ಮೂರು ಪಾದದ ಗಾಯತ್ತ್ರಿ ಬೆಳೆದು ಮೂರು ವರ್ಗದ ಪುರುಷಸೂಕ್ತವಾಯಿತು, ಈ ಪುರುಷ ಸೂಕ್ತ ಬೆಳೆದು ಮೂರು ವೇದಗಳಾಯಿತು. ಹಾಗಾಗಿ ಗಾಯತ್ತ್ರಿಯಿಂದ ವೇದದ ತನಕ ಒಂದು ಸಂಬಂಧವಿದೆ. ಯಾವುದು ಗಾಯತ್ತ್ರಿ ಪ್ರತಿಪಾದ್ಯವೋ ಅದೇ ವೇದ ಪ್ರತಿಪಾದ್ಯ. ಆದ್ದರಿಂದ ಗಾಯತ್ತ್ರಿ ಪ್ರತಿಪಾದ್ಯನಾದ ಭಗವಂತನನ್ನೇ ಭಾಗವತ ಪ್ರತಿಪಾದಿಸುತ್ತದೆ. ಭಾಗವತದ ಮೊದಲ ಪದ್ಯದ ಉಪಸಂಹಾರ ಮಾಡುವಾಗ ಸತ್ಯಮ್ ಪರಮ್ ಧೀಮಹಿ ಎಂದು ಗಾಯತ್ತ್ರಿಯ ಪದದೊಂದಿಗೆ(ಧೀಮಹಿ) ಉಪಸಂಹಾರ ಮಾಡಿರುವುದನ್ನು ಕಾಣುತ್ತೇವೆ. ಇದು ಭಾಗವತ ಗಾಯತ್ತ್ರಿಯ ಭಾಷ್ಯರೂಪ ಎನ್ನುವುದನ್ನು ಸೂಚಿಸುತ್ತದೆ.
ಯಾವ ರೀತಿ ಭಾಗವತ ಗಾಯತ್ತ್ರಿಗೆ ಭಾಷ್ಯರೂಪದಲ್ಲಿದೆ ಎನ್ನುವುದನ್ನು ಇಲ್ಲಿ ಸಂಕ್ಷಿಪ್ತವಾಗಿ ನೋಡೋಣ. “ತತ್ಸವಿತುರ್ವರೇಣ್ಯಂ | ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್” ಇಲ್ಲಿ ಹತ್ತು ಶಬ್ದಗಳಿವೆ. ಈ ಹತ್ತು ಶಬ್ದಗಳು ಭಗವಂತನ ಹತ್ತು ಅವತಾರವನ್ನು ಹೇಳುವ ಪದಗಳು. ಭಾಗವತ ಭಗವಂತನ ಈ ಹತ್ತು ಅವತಾರವನ್ನು ವಿಸ್ತಾರವಾಗಿ ವಿವರಿಸುತ್ತದೆ.
  1. ತತ್: ತತ ಅಂದರೆ ವಿಸ್ತಾರ.  ಸಣ್ಣದಾಗಿದ್ದದ್ದು ದೊಡ್ಡದಾಗಿ ಬೆಳೆದದ್ದು-ಮತ್ಸ್ಯಾವತಾರ. ಇದು ಪ್ರಳಯ ಕಾಲದಲ್ಲಿ ಋಷಿಗಳನ್ನು ದಡ ಹಾಯಿಸಿದ ರೂಪ.
  2. ಸವಿತ: ಅಂದರೆ ಸವನ ಅಥವಾ ಮಥನ. ಮಥನದಿಂದ ಅಮೃತ ತೆಗೆದ ಅವತಾರ-ಕೂರ್ಮಾವತಾರ
  3. ವರೇಣ್ಯಂ: ಇದು ವರಾಹ ಪದದ ಪರ್ಯಾಯ ಶಬ್ದ-ಎತ್ತರದಲ್ಲಿರುವವ-ಭೂಮಿಯನ್ನು ಎತ್ತರದಲ್ಲಿ ನಿಲ್ಲಿಸಿದ-ವರಾಹ ಅವತಾರ.
  4. ಭರ್ಗಃ:  ಶತ್ರುಗಳನ್ನು ಭರ್ಜನೆ ಮಾಡಿದ ಉಗ್ರ ರೂಪ-ನರಸಿಂಹಾವತಾರ
  5. ದೇವ: ದಿವು(ಧಾತು)- ಅಂದರೆ ವ್ಯವಹಾರ -ಮೂರು ಹೆಜ್ಜೆ ವ್ಯವಹಾರ ಮಾಡಿದವ –ವಾಮನರೂಪ
  6. ಧೀಮಹಿ: ಭೂಮಿಗೆ ಖುಷಿ ಕೊಟ್ಟವ-೨೧ಬಾರಿ ಅಸುರರ ಸಂಹಾರ ಮಾಡಿ ಭೂಮಿಗೆ ಖುಷಿ ಕೊಟ್ಟ-ಪರಶುರಾಮ
  7. ಧಿಯಃ: ಯಂ ಅಂದರೆ ವಾಯು ಬೀಜ. ಹನುಮಂತ ದೇವರಿಗೆ ಸಂತೋಷ ಕೊಟ್ಟ-ರಾಮಾವತಾರ.
  8. ಯಃ : ಅಂದರೆ ಜ್ಞಾನ. ಜ್ಞಾನರೂಪದಲ್ಲಿ ಭಗವದ್ಗೀತೆಯನ್ನು ಉಪದೇಶ ಮಾಡಿದ-ಕೃಷ್ಣಾವತಾರ
  9. ನಃ : ಎಲ್ಲವನ್ನೂ ನಯತಿ-ನಿಷೇಧ ಮಾಡಿದವ-ಶೂನ್ಯವಾದಿ -ಬುದ್ಧ
  10. ಪ್ರಚೋದಯಾತ್-ಧರ್ಮವನ್ನು ಪ್ರಚೋದನೆ ಮಾಡಿ ಕುದುರೆ ಮೇಲೆ ಬರುವವ-ಕಲ್ಕಿ    
ಹೀಗೆ ಭಗವಂತನ ಹತ್ತು ಅವತಾರಗಳ ಬಿತ್ತರವಾದ ಭಾಗವತ ಗಾಯತ್ತ್ರೀ ಭಾಷ್ಯ ಕೂಡಾ ಹೌದು.  

Tuesday, December 11, 2012

Shrimad BhAgavata in Kannada -ಪ್ರಸ್ತಾವನೆ-1


ಪ್ರಸ್ತಾವನೆ



ಭಗವಾನ್ ವೇದವ್ಯಾಸರು  ವೇದವನ್ನು ನಾಲ್ಕು ವಿಭಾಗ ಮಾಡಿ ನಮಗೆ ಕೊಡುಗೆಯಾಗಿ ಕೊಟ್ಟಿದ್ದಾರೆ. ವೇದಗಳು ಭಾರತೀಯ ತತ್ತ್ವಶಾಸ್ತ್ರದ ಅಡಿಗಲ್ಲು. ವೇದದ ಭಾಷೆ ತುಂಬಾ ಕ್ಲಿಷ್ಟ. ಅದನ್ನು ಜನಸಾಮಾನ್ಯರು ನೇರವಾಗಿ ಅರ್ಥಮಾಡಿಕೂಳುವುದು ಕಷ್ಟ. ಹಾಗಾಗಿ ವೇದಗಳಿಗೆ ಪೂರಕವಾಗಿ ವೇದಾರ್ಥ ಚಿಂತನೆ ನಡೆಯಬೇಕು ಎನ್ನುವ ಉದ್ದೇಶದಿಂದ ವೇದವ್ಯಾಸರು ವೇದಗಳಿಗೆ ಅನ್ವಯವಾಗಿ ಇತಿಹಾಸ ಪುರಾಣಗಳನ್ನು ರಚಿಸಿದರು. ರಾಮಾಯಣ ಮತ್ತು ಮಹಾಭಾರತ ವ್ಯಾಸರು ನಿರ್ಮಿಸಿದ ಇತಿಹಾಸಗಳಾದರೆ, ಪಂಚರಾತ್ರ ಭಗವಂತನ ನಾರಾಯಣ ರೂಪದಿಂದ ಆವಿರ್ಭಾವವಾಗಿರುವ ಇತಿಹಾಸ ಗ್ರಂಥ. ವೇದವ್ಯಾಸರು ರಚಿಸಿದ ಮಹಾಪುರಾಣಗಳು ಹದಿನೆಂಟು. ಅವುಗಳೆಂದರೆ:

  1. ಬ್ರಾಹ್ಮ ಅಥವಾ ಬ್ರಹ್ಮಪುರಾಣ [೧೦,೦೦೦ ಶ್ಲೋಕಗಳು]
  2. ಪಾದ್ಮ ಅಥವಾ ಪದ್ಮಪುರಾಣ [೫೫,೦೦೦ ಶ್ಲೋಕಗಳು]
  3. ವೈಷ್ಣವ ಅಥವಾ ವಿಷ್ಣು ಪುರಾಣ [೨೩,೦೦೦ ಶ್ಲೋಕಗಳು]
  4. ಶೈವ ಅಥವಾ ಶಿವ ಪುರಾಣ ಅಥವಾ ವಾಯು ಪುರಾಣ[೨೪,೦೦೦ ಶ್ಲೋಕಗಳು]
  5. ಭಾಗವತ ಪುರಾಣ [೧೮,೦೦೦ ಶ್ಲೋಕಗಳು]
  6. ನಾರದೀಯ ಅಥವಾ ನಾರದ ಪುರಾಣ [೨೫,೦೦೦ ಶ್ಲೋಕಗಳು]
  7. ಮಾರ್ಕಂಡೇಯ ಪುರಾಣ [೯,೦೦೦ ಶ್ಲೋಕಗಳು]
  8. ಆಗ್ನೇಯ ಅಥವಾ ಅಗ್ನಿ ಪುರಾಣ [೧೫,೪೦೦ ಶ್ಲೋಕಗಳು]
  9. ಭವಿಷ್ಯತ್ ಪುರಾಣ [೧೪,೫೦೦ ಶ್ಲೋಕಗಳು]
  10. ಬ್ರಹ್ಮವೈವರ್ತ ಪುರಾಣ [೧೮,೦೦೦ ಶ್ಲೋಕಗಳು]
  11. ಲೈಂಗ ಅಥವಾ ಲಿಂಗ ಪುರಾಣ [೧೧,೦೦೦ ಶ್ಲೋಕಗಳು]
  12. ವಾರಾಹ ಅಥವಾ ವರಾಹ ಪುರಾಣ [೨೪,೦೦೦ ಶ್ಲೋಕಗಳು]
  13. ಸ್ಕಾಂದ ಅಥವಾ ಸ್ಕಂದ ಪುರಾಣ [೮೧,೧೦೦ ಶ್ಲೋಕಗಳು]
  14. ವಾಮನ ಪುರಾಣ [೧೦,೦೦೦ ಶ್ಲೋಕಗಳು]
  15. ಕೌರ್ಮ ಅಥವಾ ಕೂರ್ಮ ಪುರಾಣ [೧೭,೦೦೦ ಶ್ಲೋಕಗಳು]
  16. ಮಾತ್ಸ್ಯ ಅಥವಾ ಮತ್ಸ್ಯ ಪುರಾಣ [೧೪,೦೦೦ ಶ್ಲೋಕಗಳು]
  17. ಗಾರುಡ ಅಥವಾ ಗರುಡ ಪುರಾಣ[೧೯,೦೦೦ ಶ್ಲೋಕಗಳು]
  18. ಬ್ರಹ್ಮಾಂಡ ಪುರಾಣ [೧೨,೦೦೦ ಶ್ಲೋಕಗಳು]
 ಈ ಹದಿನೆಂಟು ಪುರಾಣಗಳಲ್ಲಿ ಒಟ್ಟು ನಾಲ್ಕು ಲಕ್ಷ ಶ್ಲೋಕಗಳಿವೆ. ಇದಕ್ಕೆ ಮಹಾಭಾರತದ ಒಂದು ಲಕ್ಷ ಶ್ಲೋಕ ಸೇರಿದರೆ ಈ ವಾಙ್ಮಯದ ವ್ಯಾಪ್ತಿ ಐದು ಲಕ್ಷ ಶ್ಲೋಕಗಳು!
ಮುಖ್ಯವಾಗಿ ಇಂದು ಲಭ್ಯವಿರುವ ಇತಿಹಾಸಗಳು ಮೂರು. ಅವುಗಳೆಂದರೆ: ರಾಮಾಯಣ, ಭಾರತ ಮತ್ತು ಪಂಚರಾತ್ರ. ಇಂದು ನಮಗೆ ವ್ಯಾಸರು ರಚಿಸಿರುವ ಮೂಲರಾಮಾಯಣ ಲಭ್ಯವಿಲ್ಲ. ಈಗ ಲಭ್ಯವಿರುವ ರಾಮಾಯಣ ವಾಲ್ಮೀಕಿ ರಚಿತ. ಪಂಚರಾತ್ರ ವ್ಯಾಸರೂಪದಿಂದ ರಚಿತವಾದುದಲ್ಲ. ‘ಪಂಚರಾತ್ರಸ್ಯ ಕೃತ್ಸ್ನಸ್ಯ ವಕ್ತಾ ನಾರಾಯಣಃ ಸ್ವಯಂ’- ಅದು ಸ್ವಯಂ ನಾರಾಯಣ ರೂಪದಿಂದ ರಚಿತವಾದುದು. ಸೃಷ್ಟಿಯ ಆದಿಯಲ್ಲಿ ಬ್ರಹ್ಮ-ನಾರಾಯಣ ಸಂವಾದ ರೂಪದಲ್ಲಿ ಪಂಚರಾತ್ರ ಸೃಷ್ಟಿಯಾಯಿತು ಎನ್ನುತ್ತಾರೆ. ವ್ಯಾಸರೂಪದಲ್ಲಿ ರಚಿತವಾಗಿರುವ ಇತಿಹಾಸವೆಂದರೆ ಮಹಾಭಾರತ.
ವೇದವ್ಯಾಸರಿಂದ ರಚಿತವಾದ ಪುರಾಣಗಳು ಹದಿನೆಂಟು  ಮತ್ತು ಉಪಪುರಾಣಗಳು ಹದಿನೆಂಟು ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಇಂದು ಹದಿನೆಂಟು ಮಹಾಪುರಾಣಗಳು ಖಚಿತವಾಗಿ ಇವೆ ಎನ್ನುವುದು ತಿಳಿಯುತ್ತದೆ. ಆದರೆ ಉಪಪುರಾಣಗಳು ಹದಿನೆಂಟಕ್ಕಿಂತ ಹೆಚ್ಚು ಸಿಗುತ್ತಿದ್ದು, ಅದೆಲ್ಲವನ್ನೂ ವೇದವ್ಯಾಸರೇ ರಚಿಸಿದ್ದಾರೆ ಎಂದು ಹೇಳಲು ಖಚಿತವಾದ ಆಧಾರ ದೊರೆಯುತ್ತಿಲ್ಲ.
ಹದಿನೆಂಟು ಮಹಾಪುರಾಣಗಳಲ್ಲಿ ಬಹಳ ಪ್ರಸಿದ್ಧವಾದ, ಹೆಚ್ಚು ಮಹತ್ವವಾದ, ಪುರಾಣಗಳಲ್ಲೇ ಸಾರಭೂತವಾದ ಪುರಾಣ-ಭಾಗವತ. ಭಾಗವತಕ್ಕೆ  ಸಾವಿರಾರು ವರ್ಷಗಳ ವ್ಯಾಖ್ಯಾನ ಪರಂಪರೆ ಇರುವುದರಿಂದ, ಬೇರೆ ಪುರಾಣಗಳಂತೆ ಭಾಗವತ ಹೆಚ್ಚು ಪಾಠಾಂತರಗೊಂಡಿಲ್ಲ. ಭಾಗವತದ ವ್ಯಾಖ್ಯಾನಗಳಲ್ಲಿ ಬಹಳ ಪ್ರಾಚೀನ ವ್ಯಾಖ್ಯಾನ ಚಿತ್ಸುಖಿ ವ್ಯಾಖ್ಯಾನ. ಇದು ಶಂಕರಾಚಾರ್ಯರ ಶಿಷ್ಯಕೋಟಿಯಲ್ಲಿ ಒಬ್ಬರಾದ ಚಿತ್ಸುಖಾಚಾರ್ಯರು ಬರೆದ ವ್ಯಾಖಾನ. [ಇದರಿಂದ ನಮಗೆ ತಿಳಿಯುವುದೇನೆಂದರೆ: ಭಾಗವತ ಶಂಕರಾಚಾರ್ಯರ ಕಾಲದಲ್ಲೂ ಇದ್ದುದರಿಂದ, ಇದು ಹನ್ನೆರಡನೇ ಶತಮಾನದಲ್ಲಿ ನಿರ್ಮಾಣವಾದ ಅರ್ವಾಚೀನ ಗ್ರಂಥ ಅಲ್ಲ ಎನ್ನುವುದು]. ಪ್ರಾಚೀನ ವ್ಯಾಖ್ಯಾನಗಳಲ್ಲಿ ಶ್ರೀಧರಸ್ವಾಮಿ ಬರೆದ ಟೀಕೆ ಅತ್ಯಂತ ಜನಪ್ರಿಯವಾಗಿದೆ. ಏಳು ಶತಮಾನಗಳ ಹಿಂದೆ ‘ಯಾವ ಹೆಸರಿನಿಂದ ಕರೆದರೂ ಓಗೊಡುವ ದೇವರು ಒಬ್ಬನೇ’ ಎಂದು ಸಾರಿದ  ಶ್ರೀಮಧ್ವಾಚಾರ್ಯರು ಭಾಗವತದ ಅರ್ಥ ನಿರ್ಣಯಕ್ಕಾಗಿಯೇ  “ಭಾಗವತ ತಾತ್ಪರ್ಯ ನಿರ್ಣಯ” ಎನ್ನುವ ಗ್ರಂಥ ರಚನೆ ಮಾಡಿದರು. ಐದು ವರ್ಷ ಬಾಲಕನಿದ್ದಾಗಲೇ ಪುರಾಣಶ್ಲೋಕಗಳನ್ನು ಮತ್ತು ಅದರ ನಿಜ ಅರ್ಥವನ್ನು ನಿರರ್ಗಳವಾಗಿ ಹೇಳಿ ಅಚ್ಚರಿ ಮೂಡಿಸಿದ ಮಧ್ವಾಚಾರ್ಯರು ರಚಿಸಿದ ‘ಭಾಗವತ ತಾತ್ಪರ್ಯ ನಿರ್ಣಯ’ ಮೂಲಪ್ರತಿ ಸರ್ವಮೂಲ ಗ್ರಂಥ ಇಂದಿಗೂ ಲಭ್ಯವಿದೆ. ಹೀಗೆ ಭಾಗವತಕ್ಕೆ ಪುರಾತನವಾದ ಪಾಠ-ಪ್ರವಚನದ ವ್ಯಾಖ್ಯಾನ ಪರಂಪರೆ ಇರುವುದರಿಂದ  ಇಲ್ಲಿ ಸುಮಾರಾಗಿ ಶುದ್ಧಪಾಠವನ್ನು ಕಾಣಬಹುದು. ಇದೇ ಕಾರಣದಿಂದ ಪೌರಾಣಿಕವಾದ ಪ್ರಮೇಯಗಳಿಗೆ ಸಮರ್ಥನೆ ಮಾಡಬಹುದಾದ ಪುರಾಣವಾಗಿ ಭಾಗವತ ಉಳಿದಿದೆ.
ವೇದವ್ಯಾಸರು ವೇದದ ಅರ್ಥನಿರ್ಣಯಕ್ಕೋಸ್ಕರ ಹದಿನೆಂಟು ಪುರಾಣಗಳು ಮತ್ತು ಭಾರತವನ್ನು ನಮಗೆ ನೀಡಿದ್ದಾರೆ. ಈ ಹದಿನೆಂಟು ಪುರಾಣಗಳಲ್ಲಿ ಒಂದೊಂದು ಕಡೆ ವೇದದ ಒಂದೊಂದು ಭಾಗಕ್ಕೆ ಒತ್ತುಕೊಟ್ಟಿರುವುದನ್ನು ನಾವು ಕಾಣಬಹುದು. ಇತಿಹಾಸ ಪುರಾಣಗಳಿಂದಲೇ ವೇದ ಮಂತ್ರಗಳಿಗೆ ಅರ್ಥ ಹಚ್ಚಬೇಕು ಇಲ್ಲವಾದರೆ ಅಪಾರ್ಥವೋ ಅನರ್ಥವೋ ಆಗುವ ಅಪಾಯವುಂಟು ಎಂದು ಮಹಾಬಾರತ ನಮ್ಮನ್ನು ಎಚ್ಚರಿಸುತ್ತದೆ. [“ಇತಿಹಾಸಪುರಾನಭ್ಯಾ ವೇದಂ ಸಮುಪಬೃಂಹಯೇತ್”]
ಭಾಗವತ ಎನ್ನುವ ಹೆಸರಲ್ಲೇ ಎರಡು ಪುರಾಣಗಳಿವೆ. ಶ್ರೀಮದ್ ಭಾಗವತ ಮತ್ತು ದೇವಿ ಭಾಗವತ. ಉತ್ತರ ಭಾರತದಲ್ಲಿನ ಶಕ್ತಿ ಆರಾಧಕರು ದೇವಿ ಭಾಗವತವನ್ನು ಮಹಾಪುರಾಣ ಮತ್ತು ಶ್ರೀಮದ್ ಭಾಗವತವನ್ನು ಉಪಪುರಾಣ ಎನ್ನುತ್ತಾರೆ. ಆದರೆ ದಕ್ಷಿಣಭಾರತದವರು ಮತಭೇದವಿಲ್ಲದೆ, ಶ್ರೀಮದ್ ಭಾಗವತವೇ ಹದಿನೆಂಟು ಪುರಾಣಗಳಲ್ಲಿ ಸೇರಿದ ಮಹಾಪುರಾಣ, ದೇವಿ ಭಾಗವತ ಅಲ್ಲಾ ಎನ್ನುತ್ತಾರೆ.
ಭಾಗವತದ ವೈಶಿಷ್ಟ್ಯವೇನು? ಎಲ್ಲಾ ಪುರಾಣಗಳನ್ನು ವ್ಯಾಸರೇ ಸ್ವಯಂ ನಿರ್ಮಿಸಿರುವಾಗ, ಭಾಗವತಕ್ಕೆ ಶ್ರೇಷ್ಠತೆ ಹೇಗೆ ಬಂತು ಎನ್ನುವ ಪ್ರಶ್ನೆ ಕೆಲವರಲ್ಲಿದೆ. ಇದಕ್ಕೆ ಉತ್ತರ ಸುಲಭ. ಪುರಾಣಗಳೆಲ್ಲವೂ ಶ್ರೇಷ್ಠ. ಅದರಲ್ಲಿ ಮೇಲು-ಕೀಳು ಇಲ್ಲಾ. ಆದರೆ ಅದನ್ನು ಸ್ವೀಕರಿಸುವ ನಮ್ಮ ಗ್ರಹಣ ಪಾತ್ರೆಯಲ್ಲಿ ವ್ಯತ್ಯಾಸವಿದೆ! ಅನೇಕ ಪುರಾಣಗಳು ನಾವು ಸಾತ್ವಿಕರಲ್ಲದಿದ್ದರೆ ನಮ್ಮನ್ನು ರಾಜಸದತ್ತ ಅಥವಾ ತಾಮಸದತ್ತ  ವಯ್ಯಬಲ್ಲವು! ಅಲ್ಲಿ ಪುರಾಣ ರಾಜಸ ಅಥವಾ ತಾಮಸ ಅಲ್ಲಾ, ನಾವು ತಾಮಸರಾಗಿ ಅಥವಾ ರಾಜಸರಾಗಿ ಆ ಪುರಾಣ ಓದಿದರೆ, ಅಲ್ಲಿ ನಮಗೆ ತಾಮಸ ಅಥವಾ ರಾಜಸದ ಒತ್ತು ಕಾಣುತ್ತದೆ ಅಷ್ಟೇ.
ಏಕೆ ಸ್ವಯಂ ಭಗವಂತನ ಅವತಾರಿಯಾದ ವೇದವ್ಯಾಸರು ಇಂತಹ ಗ್ರಂಥ ರಚನೆ ಮಾಡಿದರು ಎನ್ನುವುದು ನಿಮ್ಮ ಮುಂದಿನ ಪ್ರಶ್ನೆಯಾಗಿದ್ದರೆ, ಅದಕ್ಕೆ ಉತ್ತರ ಅಷ್ಟಮೂರ್ತಿಯಾದ ಭಗವಂತ! ನಮಗೆ ತಿಳಿದಂತೆ ಭಗವಂತನ ವ್ಯಾಪಾರ ಅಷ್ಟ ವಿಧ. ಅವುಗಳೆಂದರೆ: ಸೃಷ್ಟಿ, ಸ್ಥಿತಿ, ಸಂಹಾರ, ನಿಯಮನ, ಜ್ಞಾನ, ಅಜ್ಞಾನ, ಬಂಧ, ಮೋಕ್ಷ.  ಇಲ್ಲಿ ಜ್ಞಾನ ಮತ್ತು ಅಜ್ಞಾನ ಎರಡನ್ನೂ ಕೊಡುವವನು ಭಗವಂತ! ಆದ್ದರಿಂದ ಎಲ್ಲವನ್ನೂ ನಿಚ್ಛಳವಾಗಿ ಪುರಾಣಗಳಲ್ಲಿ ಹೇಳಿಲ್ಲ. ಅಲ್ಲಿ ಯಾರಿಗೆ ಜ್ಞಾನ ಬರಬೇಕೋ ಅವರಿಗೆ ಜ್ಞಾನ, ಹಾಗೂ ಯಾರಿಗೆ ಅಜ್ಞಾನ ಬರಬೇಕೋ ಅವರಿಗೆ ಅಜ್ಞಾನ ಬರುವಂತೆ ಪುರಾಣಗಳಿವೆ. ಅಲ್ಲಿ ಮೇಲ್ನೋಟದ ಅರ್ಥ ಒಂದಾದರೆ, ಅದನ್ನು ಬಗೆದು ಒಳನೋಟದಲ್ಲಿ ನೋಡಿದರೆ ಇರುವ ಅರ್ಥವೇ ಇನ್ನೊಂದು! ಹಾಗಾಗಿ ಗೊಂದಲ ಮಾಡಿಕೊಂಡವರಿಗೆ  ವಿಪರೀತ ಅರ್ಥವಾಗುವ ಸಾಧ್ಯತೆ ಹೆಚ್ಚು. ಈ ಕಾರಣದಿಂದ ನಾವು ವೇದವ್ಯಾಸರು ತಾಮಸ ಪುರಾಣ ಬರೆದರು ಎಂದು ಹೇಳುವುದು ತಪ್ಪು. ಪುರಾಣಗಳು ತಾಮಸ ಅಥವಾ ರಾಜಸ ಅರ್ಥ ಕೊಡುವುದು ಅದನ್ನು ಓದುವವರ ಯೋಗ್ಯತೆಗೆ ಸಂಬಂಧಿಸಿದ ವಿಚಾರ ಅಷ್ಟೇ.
ಎಲ್ಲಾ ಪುರಾಣಗಳಿಗೆ ಸಾರಭೂತವಾಗಿ ವೇದವ್ಯಾಸರು ಭಾಗವತ ಪುರಾಣ ರಚನೆ ಮಾಡಿದರು. ಈ ಪುರಾಣದಲ್ಲಿ ೧೮,೦೦೦ ಶ್ಲೋಕಗಳಿವೆ. ಇದು ೧೮,೦೦೦ ಗ್ರಂಥ.  ಸಂಸ್ಕೃತದಲ್ಲಿ ಒಂದು ಗ್ರಂಥ ಎಂದರೆ ೩೨ ಅಕ್ಷರ. ಆದ್ದರಿಂದ ಹದಿನೆಂಟು ಸಾವಿರ ಗ್ರಂಥ ಎಂದರೆ ೫,೭೬,೦೦೦ ಅಕ್ಷರಗಳು. "ಯಾವಂತಿ ಪಟಿಥಾನಿ ತಾವಂತಿ ಹರಿನಾಮಂತಿ ಪಟಿಥಾನಿ ನಾಸಂಶಯಃ" ಒಮ್ಮೆ ವೇದವನ್ನು ಓದಿದರೆ ಅದರಲ್ಲಿ ಎಷ್ಟು ಅಕ್ಷರಗಳಿವೆಯೋ ಅಷ್ಟು ಹರಿನಾಮವನ್ನು ನಾವು ಪಠಿಸಿದಂತಾಗುತ್ತದೆ.  ಅದೇ ರೀತಿ ಭಾಗವತ ಕೂಡಾ. ಆದ್ದರಿಂದ ಭಾಗವತವನ್ನು ಒಮ್ಮೆ ಪಠಿಸಿದರೆ ಋಗ್ವೇದ ಓದಿದ್ದಕ್ಕಿಂತ ಹೆಚ್ಚು ಭಗವನ್ನಾಮ ಸ್ಮರಣೆ ಮಾಡಿದಂತಾಗುತ್ತದೆ. [ಋಗ್ವೇದದಲ್ಲಿ ೪,೩೨,೦೦೦ ಸಾವಿರ ಅಕ್ಷರಗಳಿವೆ].