Monday, February 4, 2013

Shrimad BhAgavata in Kannada -Skandha-01-Ch-04(03)


ಮಹಾಭಾರತ ರಚನೆ

ವೇದವಿಭಾಗ ಮಾಡಿ ತೃಪ್ತಿಯಾಗದೇ ವ್ಯಾಸರು ಭಾರತ ರಚನೆ ಮಾಡಿದರು ಎಂದಾಗ, ಸಾಮಾನ್ಯವಾಗಿ, “ಮಹಾಭಾರತದಲ್ಲಿ ವೇದದಲ್ಲಿ ಹೇಳದೇ ಇರುವ ವಿಚಾರ ಅಡಗಿದೆಯೋ” ಎನ್ನುವ  ಪ್ರಶ್ನೆ ಬರುತ್ತದೆ. ಈ ಪ್ರಶ್ನೆಗೆ ಉತ್ತರವನ್ನು ವ್ಯಾಸರೇ ನೀಡಿರುವುದನ್ನು ಮುಂದಿನ ಶ್ಲೋಕದಲ್ಲಿ ಕಾಣಬಹುದು.

ಸ್ತ್ರೀ ಶೂದ್ರ ಬ್ರಹ್ಮ(/ದ್ವಿಜ)ಬಂಧೂನಾಂ ತ್ರಯೀ ನ ಶ್ರುತಿಗೋಚರಾ ।
ಕರ್ಮಶ್ರೇಯಸಿ ಮೂಢಾನಾಂ ಶ್ರೇಯ ಏವಂ ಭವೇದಿಹ ।
ಇತಿ ಭಾರತಮಾಖ್ಯಾನಂ ಕೃಪಯಾ ಮುನಿನಾ ಕೃತಮ್ ॥೨೪॥

ಈ ಶ್ಲೋಕವನ್ನು ಆಳವಾಗಿ ವಿಶ್ಲೇಷಿಸದೇ ಇದ್ದರೆ, ಇಲ್ಲಿ ಬರಿಯ ಗೊಂದಲ ಹಾಗೂ ವಿವಾದ  ಹುಟ್ಟುವ ಸಾಧ್ಯತೆ ಇದೆ. ಇಲ್ಲಿ:  “ಸ್ತ್ರೀಯರಿಗೆ, ಶೂದ್ರರಿಗೆ ಮತ್ತು ಬ್ರಹ್ಮಬಂಧುಗಳಿಗೆ ವೇದ ಮುಟ್ಟುವುದಿಲ್ಲ, ಅದಕ್ಕಾಗಿ ಅವರಿಗೆ ಮುಟ್ಟುವಂತೆ ಒಂದು ಅಧ್ಯಾತ್ಮ ಸಾಹಿತ್ಯ ಕೊಡಬೇಕು ಎಂದು ಬಯಸಿ, ವ್ಯಾಸರು ಮಹಾಭಾರತ ರಚನೆ ಮಾಡಿದರು” ಎನ್ನಲಾಗಿದೆ. ಇದನ್ನು ನಾವು ಆಳವಾಗಿ ಚಿಂತನೆ ಮಾಡಿ, ಶ್ಲೋಕದಲ್ಲಿ ಹೇಳಿರುವ ಸತ್ಯ ಸಂದೇಶವನ್ನು ತಿಳಿಯಬೇಕು.
ಅಧ್ಯಾತ್ಮ ಜ್ಞಾನ ಎಲ್ಲರಿಗೂ ಮುಟ್ಟಬೇಕು. ಆದರೆ ಇಲ್ಲಿ ಕೆಲವರಿಗೆ ಅಧಿಕಾರ ಇಲ್ಲಾ ಎಂದು ಏಕೆ ಹೇಳಿದರು ಎನ್ನುವುದನ್ನು ನಾವು ಮೊದಲು ಅರಿಯಬೇಕು. ಯಾವುದೇ ಒಂದು ಅಧ್ಯಯನಕ್ಕೆ ಲಿಂಗ-ಜಾತಿ ಮಾನದಂಡವಲ್ಲ. ಜ್ಞಾನಕ್ಕೆ ಮಾನದಂಡ ಅರ್ಹತೆ. ವಿದ್ಯೆಯನ್ನು ಅರ್ಹತೆ ಇಲ್ಲದವರಿಗೆ ಹೇಳಿದರೆ ಅದು ದುರುಪಯೋಗ ಅಥವಾ ನಿರುಪಯೋಗವಾಗುತ್ತದೆ. ಹೀಗಾಗಿ ಅರ್ಹತೆಯನ್ನು ಪರೀಕ್ಷಿಸದೇ ಯಾವುದೇ ವಿದ್ಯೆಯನ್ನು ಕೊಡುವ ಕ್ರಮವಿಲ್ಲ. ವೇದ ಕೂಡಾ ಅಷ್ಟೇ. ಗ್ರಹಣ ಮಾಡುವ ಸಾಮರ್ಥ್ಯ ಇದ್ದವರಷ್ಟೇ ವೇದದ ಅಧಿಕಾರಿಗಳು.
ಇಲ್ಲಿ “ಸ್ತ್ರೀಯರಿಗೆ ವೇದವನ್ನು ಗ್ರಹಣ ಮಾಡುವ ಸಾಮರ್ಥ್ಯ ಇಲ್ಲವೇ?” ಎನ್ನುವ  ಪ್ರಶ್ನೆ ಎಲ್ಲರಿಗೂ ಬರುತ್ತದೆ. ಇದನ್ನು ಅರ್ಥಮಾಡಿಕೊಳ್ಳಲು ನಾವು ಇತಿಹಾಸವನ್ನು ನೋಡಬೇಕಾಗುತ್ತದೆ. ಹಿಂದೆ ಸ್ತ್ರೀಯರಲ್ಲಿ ಎರಡು ವರ್ಗವಿತ್ತು. ೧. ವೇದಾಧ್ಯಯನಕ್ಕೋಸ್ಕರ ಮದುವೆಯಾಗದೇ ಇರುತ್ತಿದ್ದ ‘ಬ್ರಹ್ಮವಾದಿನಿ’ಯರು ಹಾಗೂ ೨. ಪ್ರಾರ್ಥಮಿಕ ಅಧ್ಯಯನದ ನಂತರ ಮದುವೆಯಾಗುತ್ತಿದ್ದ ‘ಸತ್ಯವಧು’ಗಳು.  ಬ್ರಹ್ಮವಾದಿನಿಯರು ಸಾಮಾಜಿಕವಾಗಿ ಅತಂತ್ರರಾಗಿರುತ್ತಿದ್ದರು. ರಕ್ಷಣೆ ಇಲ್ಲದ ಹೆಣ್ಣನ್ನು ಸಮಾಜ ಕೆಟ್ಟದೃಷ್ಟಿಯಿಂದ ಕಾಣುವ ಅಪಾಯ ಅಲ್ಲಿತ್ತು. ವೇದವ್ಯಾಸರೇ ಭಾರತದಲ್ಲಿ ಹೇಳುವಂತೆ: “ಹೇಗೆ ಮಾರ್ಗದಲ್ಲಿ ಬಿದ್ದಿರುವ ಮಾಂಸದ ತುಂಡನ್ನು ಹದ್ದು-ನಾಯಿಗಳು ನೋಡುತ್ತಾವೋ ಹಾಗೇ,  ರಕ್ಷಣೆ ಇಲ್ಲದ ಹೆಣ್ಣನ್ನು ಸಮಾಜ ಕಾಣುತ್ತದೆ” ಎಂದು. ಇದಕ್ಕಾಗಿ ಸ್ತ್ರೀಯರು ಮದುವೆಯಾಗುವುದೇ ಉತ್ತಮ ಎನ್ನುವ ಸಾಮಾಜಿಕ ಪದ್ಧತಿ ಜಾರಿಗೆ ಬಂತು.
ಇಲ್ಲಿ ನಮಗೆ ಮುಂದೆ ಕಾಡುವ ಪ್ರಶ್ನೆ ಏನೆಂದರೆ: “ಮದುವೆಯಾದ ಹೆಣ್ಣು ಏಕೆ ವೇದಾಧ್ಯಯನ ಮಾಡಬಾರದು” ಎನ್ನುವುದು. ಸೂಕ್ಷ್ಮವಾಗಿ ಈ ವಿಚಾರವನ್ನು ನಾವು ವಿಶ್ಲೇಷಿಸಿದರೆ ನಮಗೆ ತಿಳಿಯುವುದೇನೆಂದರೆ: “ಗರ್ಭಕೋಶ” ಎನ್ನುವ ವಿಶೇಷ ಭಾಗ ಪ್ರಕೃತಿ ಕೇವಲ ಹೆಣ್ಣಿಗೆ ನೀಡಿದೆ. ಆದ್ದರಿಂದ ಸಮಾಜಕ್ಕೆ ಒಂದು ಉತ್ತಮ ಸಂತಾನವನ್ನು ಹೆತ್ತು ಕೊಡುವ ಜವಾಬ್ಧಾರಿ ಹೆಣ್ಣಿನಲ್ಲಿದೆ. ಅತಿಯಾದ ಮಾನಸಿಕ ಒತ್ತಡಕ್ಕೊಳಗಾದ ಹೆಣ್ಣಿನ ಗರ್ಭಕೋಶ ದುರ್ಬಲವಾಗುವ ಅಪಾಯವಿದೆ ಎಂದು ಇಂದಿನ ವೈದ್ಯಶಾಸ್ತ್ರ ಹೇಳುತ್ತದೆ. ವೇದಾಧ್ಯಯನ ಹಾಗೂ ಮಗುವಿನ ಪಾಲನೆ ಹೆಣ್ಣಿಗೆ ಎರಡು ದೋಣಿಯಲ್ಲಿ ಕಾಲಿಟ್ಟ ಪಯಣ. ಇದು ಆಕೆಯಲ್ಲಿ ಜನಿಸುವ ಮಗುವಿನ ಮೇಲೆ ಪ್ರಭಾವಬೀರಬಹುದು. “ಸಮಾಜಕ್ಕೆ ಉತ್ತಮ ಸಂತಾನ ಕೊಡುವುದು ಹೆಣ್ಣಿನ ಕರ್ತವ್ಯ ಹಾಗೂ ಅದು ವೇದಾಧ್ಯಯನ ಮಾಡುವುದಕ್ಕಿಂತ ಹೆಚ್ಚಿನ ಪುಣ್ಯದಕೆಲಸ” ಎಂದು ಶಾಸ್ತಕಾರರು ಹೇಳುತ್ತಾರೆ. ಇದು ಪ್ರಕೃತಿಯ ಕೊಡುಗೆಯನ್ನು ನಾವು ಜೀವನದಲ್ಲಿ ಹೊಂದಾಣಿಕೆ ಮಾಡಿಕೊಂಡು ಬದುಕುವ ವಿಧಾನ. ಇದನ್ನು ಬಿಟ್ಟು ಇಲ್ಲಿ ಭೇದಭಾವ, ಮೇಲು-ಕೀಳು ಯಾವುದೂ ಇಲ್ಲ.
ಹೆಣ್ಣಿಗೆ ವೇದಾಧಿಕಾರ ಇಲ್ಲ ಎಂದಿಲ್ಲ. ಏಕೆಂದರೆ ಅವರು  “ಧರ್ಮೇಚ ಅರ್ಥೇಚ ಕಾಮೇಚ ನಾತಿಚರಾಮಿ” ಎಂದು ಪ್ರತಿಜ್ಞೆ ಮಾಡುವವರು. ಗಂಡ ಮಾಡುವ ಧರ್ಮ ಕಾರ್ಯದಲ್ಲಿ ಸ್ತ್ರೀಗೆ ಸಹಭಾಗವಿದೆ. ಇವೆಲ್ಲವೂ ವೈದಿಕವಾಗಿಯೇ ನಡೆಯುತ್ತದೆ ಮತ್ತು ಅಲ್ಲಿ ಸ್ತ್ರೀ ಕುಳಿತು ಸಂಕಲ್ಪ ಮಾಡುತ್ತಾಳೆ. ಆದರೆ “ವೇದಾಧ್ಯಯನಕ್ಕೆ ಬದುಕನ್ನು ಮೀಸಲಿಟ್ಟು ಸಾಂಸಾರಿಕ ಜೀವನವನ್ನು ನೀರಸ ಮಾಡಿಕೊಳ್ಳಬೇಡಿ” ಎನ್ನುವುದು ಹಿಂದಿನವರ ಕಿವಿಮಾತು. ಕೆಲವು ಅಸಾಧಾರಣ ವ್ಯಕ್ತಿತ್ವವುಳ್ಳ ಸ್ತ್ರೀಯರಿದ್ದಾರೆ. ವೇದ ಮಂತ್ರವನ್ನು ಕಂಡ ಋಷಿಕೆಯರೂ ಇದ್ದಾರೆ. ಆದರೆ ಸ್ತ್ರೀಯರ ಮೇಲೆ ವೇದಾಧ್ಯಯನದ ಒತ್ತಡ/ಹೇರಿಕೆ ನಿಷಿದ್ಧ.
ಭಗವಂತನ ಸೃಷ್ಟಿಕ್ರಿಯೆಯ ಮೂಲಸಾಧನ ಹೆಣ್ಣು. ಆತ ತನ್ನ ಸೃಷ್ಟಿಕ್ರಿಯೆಗೆ ನಮ್ಮನ್ನು ಮಾಧ್ಯಮವಾಗಿ ಬಳಸುತ್ತಾನೆ ಎನ್ನುವುದು ಹೆಣ್ಣಿಗೆ ಹೆಮ್ಮೆಪಡುವ ಸಂಗತಿ. ಅಂತಹ ಶ್ರೇಷ್ಠ ಕಾರ್ಯ ಮಾಡಲು ಇಂತಹ ಕೆಲವು ನಿಯಮಗಳನ್ನು ಶಾಸ್ತ್ರ ಹೇಳುತ್ತದೆ.  ದುರ್ಬಲವಾದ ಮಗುವನ್ನು ಕೊಡುವ ತಾಯಿಯಾಗಬಾರದು ಎನ್ನುವ ಉದ್ದೇಶದಿಂದ, ಸ್ತ್ರೀಯರಿಗೆ ಬಲವಂತದ ಉಚ್ಛಶಿಕ್ಷಣವನ್ನು ಶಾಸ್ತ್ರ ನಿಷೇಧಿಸುತ್ತದೆ. ಎರಡು ದೋಣಿಯಲ್ಲಿ ಕಾಲಿಟ್ಟು ಮಾಡುವ ಪಯಣ ಎಂದೂ ಶ್ರೇಯಸ್ಕರವಲ್ಲ. ಅಲ್ಲಿ ಒಂದೇ ನಮ್ಮ ಸಂತಾನಕ್ಕೆ ಅಥವಾ ನಮಗೇ ಅನ್ಯಾಯವಾಗುವ ಸಾಧ್ಯತೆ ಹೆಚ್ಚು. ಇವು ಜೀವನದ ಅನುಭವದ ಮಾತೇ ಹೊರತು, ಪಕ್ಷಪಾತದ ಹೇಳಿಕೆಗಳಲ್ಲ.
ವೇದಸಂಸ್ಕೃತ ಅತ್ಯಂತ ಭಿನ್ನ. ಸಂಸ್ಕೃತ ಭಾಷೆಯನ್ನು ಚನ್ನಾಗಿ ಬಲ್ಲ ಪಂಡಿತರಿಗೇ ವೇದ ಅರ್ಥವಾಗುವುದಿಲ್ಲ. ವೇದದ ಅಂತರಂಗ, ಅದರಲ್ಲಿರುವ ಅಧ್ಯಾತ್ಮ ರಹಸ್ಯ ಅತ್ಯಂತ ಗುಹ್ಯ. ಹೀಗಾಗಿ ವೇದದ ಮೇಲ್ನೋಟದ ಅರ್ಥ ತಿಳಿಯಲಿಕ್ಕೇ ಒಂದು ಜನ್ಮ ಸಾಲದು. ಆದ್ದರಿಂದ ಇಡೀ ಜೀವನವನ್ನು ವೇದಾಧ್ಯಯನಕ್ಕೆ ಮುಡಿಪಾಗಿಡಲು ಬದ್ಧರಾದವರು ಮಾತ್ರ ವೇದಾಧ್ಯಯನಕ್ಕೆ ಕೈಹಾಕಬೇಕು. ಹಾಗೆ ಅಧ್ಯಯನ ಮಾಡಲು ಬ್ರಾಹ್ಮಣ್ಯದ ಅರ್ಹತೆ ಬಹಳ ಮುಖ್ಯ. ಗೀತೆಯಲ್ಲಿ ಹೇಳುವಂತೆ: ಶಮಃ ದಮಃ ತಪಃ ಶೌಚಂ ಕ್ಷಾಂತಿ ಆರ್ಜವಮ್ ಏವ ಚ । ಜ್ಞಾನಂ ವಿಜ್ಞಾನಮ್ ಆಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್ ॥೧೮-೪೨॥ –– ಭಗವಂತನಲ್ಲಿ ನಿಷ್ಠೆ, ಇಂದ್ರಿಯಗಳಲ್ಲಿ ಹಿಡಿತ, ಉಪವಾಸಾದಿ ನೇಮಗಳು, ನೈರ್ಮಲ್ಯ, ಅಪಕಾರಿಯನ್ನೂ ಮನ್ನಿಸುವ ಸೈರಣೆ, ನೇರ ನಡೆ-ನುಡಿ, ತಿಳಿವು, ಆಳವಾದ ಸಂಶೋಧನಾ ದೃಷ್ಟಿ  ಮತ್ತು ಆಸ್ತಿಕತೆ- ಇವು ಬ್ರಾಹ್ಮಣ ಸ್ವಭಾವದ ಸಹಜ ಕರ್ಮಗಳು. ಈ ಎಲ್ಲಾ ಅರ್ಹತೆಗಳು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಎಲ್ಲರಿಗೂ ಬರಬೇಕೆಂದೇನೂ ಇಲ್ಲ. ಆ ರೀತಿ ಬ್ರಾಹ್ಮಣ್ಯದ ಅರ್ಹತೆ ಇಲ್ಲದ, ಆದರೆ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ‘ಬ್ರಹ್ಮಬಂಧು’ಗಳಿಗಾಗಿ, ಸದಾ ಸೇವಾ ಮಾರ್ಗದಲ್ಲಿ ನಿರತರಾಗಿರುವ ಶೂದ್ರವರ್ಣದವರಿಗಾಗಿ ಮತ್ತು ಸ್ತ್ರೀಯರಿಗಾಗಿ  ವ್ಯಾಸರು  ಮಹಾಭಾರತ ರಚನೆ ಮಾಡಿದರು. ಏನು ಮಾಡಬೇಕು-ಏನು ಮಾಡಬಾರದು ಎಂದು ಅರಿಯದೇ ತೊಳಲಾಡುತ್ತಿರುವ ಜನರಿಗೆ, ಒಂದು ಶ್ರೇಯಸ್ಸಿನ ಮಾರ್ಗ ತೋರಿಸುವುದು ವ್ಯಾಸರ ಭಾರತ ರಚನೆಯ ಮೂಲ ಉದ್ದೇಶವಾಗಿತ್ತು.
ಇಲ್ಲಿ ನಮಗೆ ಸ್ಪಷ್ಟವಾಗಿ ತಿಳಿಯುವುದೇನೆಂದರೆ: ವೇದದಲ್ಲಿ ಹೇಳಿದ ಅಧ್ಯಾತ್ಮ ಸಾರವನ್ನು ಮನುಷ್ಯಮಾತ್ರರಿಗೆ ಮುಟ್ಟಿಸುವ ಉದ್ದೇಶದಿಂದ ವ್ಯಾಸರು ಮಹಾಭಾರತ ರಚನೆ ಮಾಡಿದರು. ಹಾಗಾಗಿ ಬ್ರಹ್ಮಜ್ಞಾನಿಗೆ ವೇದಾರ್ಥ ನಿರ್ಣಯಕ್ಕಾಗಿ ಭಾರತವಾದರೆ, ಉಳಿದವರಿಗೆ ಮಹಾಭಾರತವೇ ವೇದ. ಹೀಗಿರುವಾಗ ಮಹಾಭಾರತದ ಅಂಗವಾದ  ಭಗವದ್ಗೀತೆ ಮತ್ತು ವಿಷ್ಣುಸಹಸ್ರನಾಮವನ್ನು ಸ್ತ್ರೀಯರು ಓದಬಾರದು  ಎಂದು ಹೇಳುವುದು ಅಸಂಗತ. ಭಾರತಕ್ಕೆ ಗಂಡಸು-ಹೆಂಗಸು-ಶೂದ್ರ-ಬ್ರಾಹ್ಮಣ ಎನ್ನುವ ಭೇದವಿಲ್ಲ. ಅದು ಎಲ್ಲಾ ವರ್ಣಾಶ್ರಮದವರಿಗಾಗಿ ಭಗವಂತ ನೀಡಿದ ಪಂಚಮ ವೇದ. 

ಏವಂ ಪ್ರವೃತ್ತಸ್ಯ ಸದಾ ಭೂತಾನಾಂ ಶ್ರೇಯಸಿ ದ್ವಿಜಾಃ ।
ಸರ್ವಾತ್ಮಕೇನಾಪಿ ಯದಾ ನಾತುಷ್ಯದ್ ಹೃದಯಂ ತತಃ ॥೨೫॥

ನಾತಿಪ್ರಸನ್ನ ಹೃದಯಃ ಸರಸ್ವತ್ಯಾಸ್ತಟೇ ಶುಚೌ ।
ವಿತರ್ಕಯನ್ ವಿವಿಕ್ತಸ್ಥ ಇದಂ ಚೋವಾಚ ಧರ್ಮವಿತ್ ॥೨೬॥

ಪ್ರಾಣಿಮಾತ್ರದ ಶ್ರೇಯಸ್ಸಿಗಾಗಿ  ವೇದವಿಭಾಗ, ಹದಿನೇಳು ಪುರಾಣಗಳು ಮತ್ತು ಭಾರತ ರಚಿಸಿದ ವ್ಯಾಸರಿಗೆ ತೃಪ್ತಿಯಾಗಲಿಲ್ಲವಂತೆ. ತಾನು ಸಮಾಜಕ್ಕೆ ಕೊಟ್ಟಿದ್ದು ಸಾಲದು, ಇನ್ನೂ ಏನಾದರೂ ಕೊಡಬೇಕು ಎಂದು ಯೋಚಿಸುತ್ತಿರುವವರಂತೆ, ಧ್ಯಾನ ಮಾಡುತ್ತಾ ಸರಸ್ವತೀ ನದಿ ತೀರದಲ್ಲಿ ಏಕಾಂತದಲ್ಲಿ ಕುಳಿತರಂತೆ ವ್ಯಾಸರು.
ಧೃತವ್ರತೇನ ಹಿ ಮಯಾ ಛಂದಾಂಸಿ ಗುರವೋSಗ್ನಯಃ ।
ಮಾನಿತಾ ನಿರ್ವ್ಯಳೀಕೇನ ಗೃಹೀತಂ ಚಾನುಶಾಸನಮ್ ॥೨೭॥

“ತಾನು ವ್ರತನಿಷ್ಠನಾಗಿ ವೇದಗಳನ್ನೂ, ಗುರುಗಳನ್ನೂ ಹಾಗೂ ಅಗ್ನಿಯನ್ನೂ ಸತ್ಕರಿಸಿದೆ. ಗುರುಗಳ ಆಜ್ಞೆಗನುಗುಣವಾಗಿ ನಡೆದಿದ್ದೇನೆ. ನಾನಿನ್ನೂ ಮಾಡಬೇಕಾದ ಕೆಲಸ ಬಾಕಿ ಇದೆ; ಅದು ಪೂರ್ಣವಾಗಿಲ್ಲ ಎಂದು ನನಗನಿಸುತ್ತಿದೆ”  ಎಂದುಕೊಳ್ಳುತ್ತಾರೆ ವ್ಯಾಸರು. ಭಗವಂತನ ಅವತಾರವಾದ ವ್ಯಾಸರು ಏಕೆ ಹೀಗೆ ಹೇಳುತ್ತಿದ್ದಾರೆ ಎಂದು ನಿಮಗನಿಸಬಹುದು. ಇದಕ್ಕೆ ಕಾರಣ-ಭಗವಂತ ತನ್ನ ಅವತಾರದಲ್ಲಿ ತಾನು ಯಾವ ರೂಪದಲ್ಲಿ ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತಾನೋ, ಆ ರೂಪದ ಧರ್ಮಕ್ಕನುಗುಣವಾಗಿ ನಡೆದುಕೊಳ್ಳುತ್ತಾನೆ. ಆ ಪಾತ್ರಕ್ಕನುಗುಣವಾದ ಕರ್ಮವನ್ನು ಮಾಡಿ ಜನರಿಗೆ ಮಾರ್ಗದರ್ಶನ ಮಾಡುತ್ತಾನೆ. ಶ್ರೀಕೃಷ್ಣ ಪ್ರತಿನಿತ್ಯ ಸಂಧ್ಯಾವಂದನೆ ಮಾಡುತ್ತಿದ್ದುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಇಲ್ಲಿ ವ್ಯಾಸರು ತಾವು ಅತೃಪ್ತರಾದವರಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಭಗವಂತನ ಲೀಲೆ.

ಭಾರತವ್ಯಪದೇಶೇನ ಹ್ಯಾಮ್ನಾಯಾರ್ಥಃ ಪ್ರದರ್ಶಿತಃ ।
ದೃಶ್ಯತೇ ಯತ್ರ ಧರ್ಮೋ ಹಿ ಸ್ತ್ರೀಶೂದ್ರಾದಿಭಿರಪ್ಯುತ ॥೨೮॥

ಭಾರತ ಎನ್ನುವ ಗ್ರಂಥ ರಚನೆಯಿಂದ ಇಡೀ ವೇದ ಸಾರವನ್ನು ಜಗತ್ತಿಗೆ ಕೊಟ್ಟಂತಾಗಿದೆ. ಆದರೂ ಕೂಡಾ ಇನ್ನೂ ಏನನ್ನೋ ಕೊಡಬೇಕು ಅನಿಸುತ್ತಿದೆ ವ್ಯಾಸರಿಗೆ.

ಅಥಾಪಿ ಬತ ಮೇ ದೈಹ್ಯೋ ಹ್ಯಾತ್ಮಾ ಚೈವಾತ್ಮನಾ ವಿಭುಃ ।
ಅಸಂಪನ್ನ ಇವಾಭಾತಿ ಬ್ರಹ್ಮವರ್ಚಸ್ವಿಸತ್ತಮಃ ॥೨೯॥

ಸ್ವಸಾಮರ್ಥ್ಯದಿಂದಲೇ ಎಲ್ಲವನ್ನೂ ತಿಳಿಯಬಲ್ಲ ಶಕ್ತಿಯುಳ್ಳ ವ್ಯಾಸರಿಗೆ ಬ್ರಹ್ಮವರ್ಚಸ್ವಿಗಳಲ್ಲಿ ಉತ್ತಮವಾದ, ಸ್ವತಃ ಪೂರ್ಣವಾದ ದೇಹರೂಪವಾದ ತನ್ನ ಆತ್ಮ ಕೃತಕೃತ್ಯವಾಗಿಲ್ಲದಂತೆ ಕಾಣುತ್ತದೆ!

ಕಿಂ ವಾ ಭಾಗವತಾ ಧರ್ಮಾ ನ ಪ್ರಾಯೇಣ ನಿರೂಪಿತಾಃ ।
ಪ್ರಿಯಾಃ ಪರಮಹಂಸಾನಾಂ ತ ಏವ ಹ್ಯಚ್ಯುತಪ್ರಿಯಾಃ ॥೩೦॥

ಎಲ್ಲವನ್ನೂ ಕೊಟ್ಟ ಮೇಲೆ ಏಕೀ ಕೊರತೆ? ಪ್ರಾಯಃ ಹೀಗಿರಬಹುದು: ಭಗವಂತನ ಮಹಿಮೆಯ ಬಿತ್ತರಕ್ಕೋಸ್ಕರ ಅನೇಕ ಗ್ರಂಥ ರಚನೆ ನನ್ನಿಂದಾಯಿತು. ಆದರೆ ಕೇವಲ ಭಗವಂತನ ಮಹಿಮೆಯನ್ನು ನೇರವಾಗಿ ಎತ್ತಿ ತೋರುವ ಒಂದು ಗ್ರಂಥವನ್ನು ನಾನು ಕೊಟ್ಟಿಲ್ಲ. ಭಗವಂತನ ಮಹಾಮಹಿಮೆಯನ್ನು ಬಿತ್ತರಿಸುವ ಒಂದು ವಿಶಿಷ್ಠ ಗ್ರಂಥವನ್ನು ನಾನು ಜನರಿಗೆ ಕೊಡಬೇಕು. “ಸರ್ವಸ್ವವನ್ನೂ ತ್ಯಾಗಮಾಡಿದ ಪರಮಹಂಸರಿಗೂ ಪ್ರಿಯವಾಗುವ ಒಂದು ಗ್ರಂಥ ರಚನೆ ನನ್ನಿಂದಾಗಿಲ್ಲ” ಎನ್ನುವ ಅತೃಪ್ತಿಯನ್ನು ವ್ಯಾಸರು ವ್ಯಕ್ತಪಡಿಸಿದರು ಎನ್ನುತ್ತಾರೆ ಉಗ್ರಶ್ರವಸ್.

ತಸ್ಯೈವಂ ಖಿಲಮಾತ್ಮಾನಂ ಮನ್ಯಮಾನಸ್ಯ ಖಿದ್ಯತಃ ।
ಕೃಷ್ಣಸ್ಯ ನಾರದೋSಭ್ಯಾಗಾದಾಶ್ರಮಂ ಪ್ರಾಗುದಾಹೃತಮ್ ॥೩೧॥

ತಮಭಿಜ್ಞಾಯ ಸಹಸಾ ಪ್ರತ್ಯುತ್ಥಾಯಾಗತಂ ಮುನಿಮ್ ।
ಪೂಜಯಾಮಾಸ ವಿಧಿವನ್ನಾರದಂ ಸುರಪೂಜಿತಮ್ ॥೩೨॥


ಈ ರೀತಿ ವ್ಯಾಸರು ಅತೃಪ್ತರಾಗಿ ಯೋಚಿಸುತ್ತಾ ಕುಳಿತಿರುವಂತೆ  ತೋರಿಕೊಂಡಾಗ, ಅಲ್ಲಿಗೆ ಬ್ರಹ್ಮಪುತ್ರ ನಾರದರ ಆಗಮನವಾಗುತ್ತದೆ ಮತ್ತು ವ್ಯಾಸರು ನಾರದರನ್ನು ಸತ್ಕರಿಸುತ್ತಾರೆ  ಎನ್ನುವಲ್ಲಿಗೆ ಈ ಅಧ್ಯಾಯ ಕೊನೆಗೊಳ್ಳುತ್ತದೆ.


॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ಚತುರ್ಥೋSಧ್ಯಾಯಃ ॥

ಭಾಗವತ ಮಹಾಪುರಾಣದ ಮೊದಲ ಸ್ಕಂಧದ ನಾಲ್ಕನೇ ಅಧ್ಯಾಯ ಮುಗಿಯಿತು.


********

Sunday, February 3, 2013

Shrimad BhAgavata in Kannada -Skandha-01-Ch-04(02)


ವೇದ ವಿಭಾಗ ಮತ್ತು ಹದಿನೇಳು ಪುರಾಣಗಳ ರಚನೆ

ಸೂತ ಉವಾಚ
ದ್ವಾಪರೇ ಸಮನುಪ್ರಾಪ್ತೇ ತೃತೀಯೇ ಯುಗಪರ್ಯಯೇ ।
ಜಾತಃ ಪರಾಶರಾದ್ ಯೋಗೀ ವಾಸವ್ಯಾಂ ಕಲಯಾ ಹರೇಃ ॥೧೩॥

ಈ ಶ್ಲೋಕವನ್ನು ಮೇಲ್ನೋಟದಲ್ಲಿ ನೋಡಿದರೆ ಗೊಂದಲವಾಗುತ್ತದೆ. ಇಲ್ಲಿ ದ್ವಾಪರ ಪ್ರಾರಂಭವಾದಾಗ ಹಾಗೂ ಯುಗ ಪರ್ಯಾವಸಾನದಲ್ಲಿ  ವ್ಯಾಸರ ಅವತಾರವಾಯಿತು ಎಂದು ಹೇಳಿದಂತೆ ಕಾಣುತ್ತದೆ. ಆದರೆ ಇಲ್ಲಿ ‘ಯುಗಪರ್ಯಯೇ’ ಎಂಬಲ್ಲಿ ಯುಗಶಬ್ದದಲ್ಲಿ ಸುಪಾಂಸುಲುಕ್ ಎಂಬ ವ್ಯಾಕರಣ ನಿಯಮದಂತೆ-ಸಪ್ತಮವಿಭಕ್ತಿ ಲೋಪ. ದ್ವಾಪರೇ ಯುಗೇ ಪರ್ಯಯೇ-ದ್ವಾಪರ ಯುಗದಲ್ಲಿ ತತ್ರಾಪಿ ಅದರ ಪರ್ಯಾವಸಾನ ಭಾಗದಲ್ಲಿ ವ್ಯಾಸಾವತಾರ ತೃತೀಯೇ ಎನ್ನುವುದು ದ್ವಾಪರೇ ಎಂಬುದಕ್ಕೆ ವಿಶೇಷಣ ಎನ್ನಬೇಕು. ಆದ್ದರಿಂದ : “ತೃತೀಯೇ ದ್ವಾಪರೇ ಯುಗೇ ಪರ್ಯಾವಸಾನೇ ಪ್ರಾಪ್ತೇ ಸತಿ । ಅಂದರೆ : ಮೂರನೇದ್ವಾಪರಯುಗದಲ್ಲಿ ಅದರ ಕೊನೆಯ ಭಾಗ ಬಂದಾಗ, ವೇದವ್ಯಾಸರ ಜನನವಾಯಿತು ಎನ್ನುವುದು ಇಲ್ಲಿರುವ ಒಳಾರ್ಥ.
ವೇದವ್ಯಾಸರು ಭೂಮಿಯಲ್ಲಿ ವಾಸವಿಯ ಮಗನಾಗಿ ಪರಾಶರ ಮುನಿಯಿಂದ ಜನಿಸಿದರು. ಅವರ ಜನನವಾದಾಗ ದ್ವಾಪರದ ಕೊನೆಯ ೭೨೦ ವರ್ಷ ಬಾಕಿ ಇತ್ತು. ವೇದವ್ಯಾಸರ ತಾಯಿ ವಾಸವಿ-ವಸುಪುತ್ರಿ. ಉಪಾರಿಚರ ಎನ್ನುವ ವಸುವಿನ ರೇತಸ್ಸನ್ನು ಮೀನು ನುಂಗಿ, ಆ ಮೀನಿನ ಗರ್ಭದಲ್ಲಿ ಬೆಸ್ತನೊಬ್ಬನಿಗೆ ಆಕೆ ಮಗಳಾಗಿ ಸಿಕ್ಕಿ, ಸತ್ಯವತಿ ಎನ್ನುವ ಹೆಸರು ಪಡೆದ ವಾಸವಿ, ದೋಣಿ ದಾಟಿಸುವ ಅಂಬಿಗನ ಕೆಲಸ ಮಾಡುತ್ತಿದ್ದಳು. ಈ ಕಾಯಕ ಮಾಡುತ್ತಿದ್ದಾಗ ಒಮ್ಮೆ ಪರಾಶರ ಮುನಿಯ ಸಂದರ್ಶನ ಆಕೆಗಾಗುತ್ತದೆ. “ಭಗವಂತ ನಿನ್ನಲ್ಲಿ ಅವತರಿಸಲು ಇಚ್ಛೆಪಡುತ್ತಿದ್ದಾನೆ” ಎಂದು ಪರಾಶರರು ಆಕೆಗೆ ಹೇಳುತ್ತಾರೆ. ಅದರಿಂದಾಗಿ ಆಕೆ ಮದುವೆಗೆ ಮೊದಲು, ಪರಾಶರರಿಂದ, ವೇದವ್ಯಾಸ ಎನ್ನುವ ಪುತ್ರನನ್ನು ಪಡೆಯುತ್ತಾಳೆ. ಹೀಗೆ ಭಗವಂತನ ಅವತಾರಕ್ಕೆ ಕಾರಣಳಾದ ಮಹಾಮಹಿಳೆ ಸತ್ಯವತಿ.
ಸತ್ಯವತಿಯನ್ನು ಮುಂದೆ ಶಂತನು ಚಕ್ರವರ್ತಿ ಇಷ್ಟಪಟ್ಟು ಮದುವೆಯಾಗುತ್ತಾನೆ. ಇವರ ದಾಂಪತ್ಯದಲ್ಲಿ ಚಿತ್ರಾಂಗದ ಮತ್ತು ವಿಚಿತ್ರವೀರ್ಯರ ಜನನವಾಗುತ್ತದೆ. ಆದರೆ ಅವರಿಬ್ಬರೂ ಅಕಾಲದಲ್ಲಿ ಮರಣಹೊಂದಿದಾಗ, ಸತ್ಯವತಿಯ ಮಗನಾದ ವ್ಯಾಸರಿಂದಲೇ ಪಾಂಡು-ದೃತರಾಷ್ಟ್ರ ಸಂತತಿ ಬೆಳೆಯುತ್ತದೆ.  
ಹಿಂದೆ ಹೇಳಿದಂತೆ: ‘ವಾಸವಿ’ ವಸುವಿನ ಮಗಳಾಗಿದ್ದುದರಿಂದ-ಆಕೆ ದೇವಗಣ ಪ್ರವಿಷ್ಠಳು. ಅವಳನ್ನು ಭಗವಂತ ತನ್ನ ಅವತಾರಕ್ಕೆ ಮಾಧ್ಯಮವಾಗಿ ಬಳಸಿದ. ನಂತರ ವಂಶವಿಲ್ಲದೇ ನಿಂತು ಹೋಗಿದ್ದ ಕುರುವಂಶಕ್ಕೆ ಸಂತತಿಯ ಚಾಲನೆ ಕೊಟ್ಟು, ಅದರಿಂದ ಕೌರವ-ಪಾಂಡವ ಸಂತತಿಗೆ ಆಕೆ ಕಾರಣಳಾದಳು. ಹೀಗೆ ಯುಗಾಂತದಲ್ಲಿ ನಡೆದ ಘೋರ ಯುದ್ಧಕ್ಕೆ ಕಾರಣರಾದ ಸಂತತಿಯ ಮೂಲ ಸತ್ಯವತಿ. ಅಷ್ಟೇ ಅಲ್ಲ, ಪಾಂಡವರಂತಹ ಮಹಾ ಪುರುಷರು ಹಾಗೂ ಅವರ ಸಂತತಿ ಈ ದೇಶವನ್ನು ಸುಮಾರು ಎರಡು ಸಾವಿರ ವರ್ಷಗಳ ಕಾಲ ಆಳಲು ಕಾರಣಳಾಗಿ,  ಆ ಸಂತತಿಯನ್ನು ಬೆಳೆಸಿದ ಮೂಲವ್ಯಕ್ತಿ ‘ವಾಸವಿ’. ಇಂತಹ ಮಹಾ ಮಹಿಳೆಯಲ್ಲಿ ಭಗವಂತ ವ್ಯಾಸರೂಪದಲ್ಲಿ ಅವತರಿಸಿದ. ವೇದವ್ಯಾಸರು ವೇದಗಳನ್ನು ನಾಲ್ಕು ವಿಭಾಗವಾಗಿ ವಿಂಗಡಿಸಿದರು ಮತ್ತು ಹದಿನೇಳು ಪುರಾಣಗಳನ್ನು ರಚಿಸಿದರು.

ತತ್ರರ್ಗ್ವೇದಧರಃ ಪೈಲಃ ಸಾಮಗೋ ಜೈಮಿನಿಃ ಕವಿಃ ।
ವೈಶಂಪಾಯನ ಏವೈಕೋ ನಿಷ್ಣಾತೋ ಯಜುಷಾಂ ತತಃ ॥೨೦॥

ಅಥರ್ವಾಂಗಿರಸಾಮಾಸೀತ್ ಸುಮಂತುರ್ದಾರುಣೋ ಮುನಿಃ ।
ಇತಿಹಾಸಪುರಾಣಾನಾಂ ಪಿತಾ ಮೇ ರೋಮಹರ್ಷಣಃ ॥೨೧॥

ಋಗ್ವೇದವನ್ನು ಪೈಲಃ ಎನ್ನುವ ಮುನಿಗೆ, ಸಾಮವೇದವನ್ನು ಜೈಮಿನಿಗೆ ಹಾಗೂ ಯಜುರ್ವೇದವನ್ನು ವೈಶಂಪಾಯನನಿಗೆ ಉಪದೇಶಿಸಿದ ವ್ಯಾಸರು, ಅಥರ್ವವೇದವನ್ನು ವರುಣಪುತ್ರನಾದ ಸುಮಂತು ಎನ್ನುವ ಮುನಿಗೆ ಉಪದೇಶಿಸಿದರು. ಹದಿನೇಳು ಪುರಾಣಗಳು ಉಗ್ರಶ್ರವಸ್ಸಿನ ತಂದೆ ರೋಮಹರ್ಷಣರಿಗೆ ವ್ಯಾಸರಿಂದ ಉಪದೇಶಿಸಲ್ಪಟ್ಟಿತು.
ಇಲ್ಲಿ ಹೇಳಲಾದ ಋಷಿಗಳ ಹೆಸರು ಮೇಲ್ನೋಟಕ್ಕೆ ನಮಗೆ ವಿಚಿತ್ರವಾಗಿ ಕಾಣುತ್ತದೆ. ಆದರೆ ಈ ಹೆಸರಿನ ಹಿಂದಿನ ಅರ್ಥವನ್ನು ನೋಡಿದಾಗ, ಆ ಹೆಸರಿನ ಮಹತ್ವ ತಿಳಿಯುತ್ತದೆ. ಇಲ್ಲಿ ಪೈಲಃ ಎಂದರೆ ‘ಪೀಲ’ ನ ಮಗ. ಪೀಲ ಎಂದರೆ ಜ್ಞಾನಿ ಎಂದರ್ಥ. ಅದೇ ರೀತಿ ಜೈಮಿನಿ ಎಂದರೆ ಜಿಮಿನನ ಮಗ. ಜಿಮಿನಃ ಎಂದರೆ ಜ್ಞಾನದ ಸಾಧನೆಗಾಗಿ ತನ್ನ ಬದುಕನ್ನು ಅರ್ಪಿಸಿಕೊಂಡವ ಎಂದರ್ಥ. ವೈಶಂಪಾಯನ-ವಿಶಂಪನನ ಮಗ. ವಿಶಿಷ್ಟವಾದ ಭಗವದನುಭೂತಿಯಿಂದ ಭಗವದನುಭವದ ಆನಂದವನ್ನು ಕಂಡವರು ವಿಶಂಪನರು.  ಸುಮಂತು ಎಂದರೆ ಆನಂದಮಯನಾದ ಭಗವಂತನನ್ನು ಮನನ ಮಾಡುವವರು ಎಂದರ್ಥ.
ಪೈಲ ಹಾಗೂ ಆತನ ಶಿಷ್ಯವೃಂದದಿಂದ ಋಗ್ವೇದ ೨೪ ಶಾಖೆಗಳಾಗಿ ಬೆಳೆಯಿತು. ವೈಶಂಪಾಯನನ ಶಿಷ್ಯರಿಂದ ಯಜುರ್ವೇದ ೧೦೧ ಶಾಖೆಗಳಾದರೆ, ಜೈಮಿನಿ ಶಿಷ್ಯರಿಂದ ಸಾಮವೇದ ಸಾವಿರ ಶಾಖೆಗಳಾಗಿ ಬೆಳೆಯಿತು. ಅಥರ್ವವೇದ ಸುಮಂತುವಿನ ಶಿಷ್ಯರಿಂದ ೧೨ ಶಾಖೆಯನ್ನು ಕಂಡಿತು. ಹೀಗೆ ಶಾಖೋಪಶಾಖೆಗಳಾಗಿ ವೇದಗಳು, ಆರಣ್ಯಕಗಳು, ಬ್ರಾಹ್ಮಣ-ಉಪನಿಷತ್ತುಗಳು ಹುಟ್ಟಿದವು. ವೇದಗಳ ಅರ್ಥನಿರ್ಣಯಕ್ಕೋಸ್ಕರ ಹದಿನೇಳು ಪುರಾಣ ರಚನೆಯಾಯಿತು. ಈ ಎಲ್ಲಾ ರಚನೆಯ ನಂತರವೂ ಕೂಡಾ ವ್ಯಾಸರಿಗೆ ತೃಪ್ತಿಯಾಗಲಿಲ್ಲ. ಅದಕ್ಕಾಗಿ ಅವರು ಮಹಾಭಾರತವನ್ನು ರಚನೆ ಮಾಡಿದರು.

Shrimad BhAgavata in Kannada -Skandha-01-Ch-04(01)

ಚತುರ್ಥೋSಧ್ಯಾಯಃ


ವ್ಯಾಸಾವತಾರ ಮತ್ತು ಭಾಗವತ ರಚನೆಯ ಹಿನ್ನೆಲೆ

ಉಗ್ರಶ್ರವಸ್ಸರ ವಿವರಣೆ ಕೇಳಿದ ಶೌನಕಾದಿಗಳು ಕೇಳುತ್ತಾರೆ: “ವೇದವ್ಯಾಸರು ಎಂದು, ಏತಕ್ಕಾಗಿ ಭಾಗವತವನ್ನು ರಚಿಸಿದರು? ಇತರ ಎಲ್ಲಾ ಪುರಾಣಗಳನ್ನು ರೋಮಹರ್ಷಣರಿಗೆ ಹೇಳಿದ ವೇದವ್ಯಾಸರು, ವಿಶೇಷವಾಗಿ ಭಾಗವತವನ್ನು, ಎಲ್ಲವನ್ನೂ ತೊರೆದ ವಿರಕ್ತ ಶುಕಾಚಾರ್ಯರಿಗೇಕೆ ಹೇಳಿದರು?” ಎಂದು.

ತಸ್ಯ ಪುತ್ರೋ ಮಹಾಯೋಗೀ ಸಮದೃಙ್ ನಿರ್ವಿಕಲ್ಪಕಃ ।
ಏಕಾಂತಗತಿರುನ್ನಿದ್ರೋ ಗೂಢೋ ಮೂಢ ಇವೇಯತೇ ॥೪॥

ಶುಕಾಚಾರ್ಯರು ಎಲ್ಲವನ್ನೂ ತೊರೆದು ಭಗವಂತನಲ್ಲೇ ಮನಸ್ಸು ನೆಟ್ಟವರು. ಪ್ರಪಂಚದಲ್ಲಿ ಅವರಿಗೆ ‘ನನ್ನದು-ನಿನ್ನದು’ ಎನ್ನುವ ಭೇದವಿರಲಿಲ್ಲ. ಎಲ್ಲವೂ ಭಗವಂತನದು ಎಂದು ನಿರ್ವಿಕಲ್ಪವಾಗಿ, ಎಲ್ಲಾ ಕಡೆಯೂ ಭಗವಂತನನ್ನು ಕಂಡು, ಎಲ್ಲವನ್ನೂ ಸಮನಾಗಿ ಕಾಣುತ್ತಾ ಬದುಕುತ್ತಿದ್ದವರು. ಸುಖ-ದುಃಖವನ್ನು ಮೀರಿನಿಂತ ಅವರು ಯಾವುದೇ ಪ್ರಾಪಂಚಿಕ ಆಕರ್ಷಣೆಗೆ ಒಳಗಾಗುತ್ತಿರಲಿಲ್ಲ. ಮಹಾಜ್ಞಾನಿಯಾದ ಶುಕಾಚಾರ್ಯರು ಎಂದೂ ತನ್ನೊಳಗಿನ ಆತ್ಮಶಕ್ತಿಯನ್ನು ತೋರಗೊಟ್ಟವರಲ್ಲ. ಮೇಲ್ನೋಟಕ್ಕೆ ನೋಡಿದರೆ ಅವರು ಒಬ್ಬ ಮೂಢನಂತೆ ಕಾಣಿಸಿಕೊಳ್ಳುತ್ತಿದ್ದರು. ಇಂತಹ ‘ನಿದ್ದೆಯನ್ನು ಗೆದ್ದ ನಿರ್ವಿಕಲ್ಪ ಯೋಗಿ’ ಶುಕಾಚಾರ್ಯರಿಗೆ ಹೇಗೆ ವ್ಯಾಸರು ಭಾಗವತ ಉಪದೇಶ ಮಾಡಿದರು ಎನ್ನುವುದು   ಶೌನಕರ ಪ್ರಶ್ನೆ.
ಇಲ್ಲಿ  ‘ಉನ್ನಿದ್ರ ಮಹಾಯೋಗಿ’ ಎಂದು ಶುಕಾಚಾರ್ಯರನ್ನು ಸಂಬೋಧಿಸಲಾಗಿದೆ. ಇದರ ಅರ್ಥ: ರಾತ್ರಿ ಮಲಗದವ ಎಂದರ್ಥವಲ್ಲ. ಈ ಸಂಬೋಧನೆಯ ಅರ್ಥವನ್ನು ಆಚಾರ್ಯರು ಪ್ರಮಾಣಶ್ಲೋಕದೊಂದಿಗೆ ಈ ರೀತಿ ವಿವರಿಸಿದ್ದಾರೆ:

ಸಾಮ್ಯಮೀಶ್ವರ ರೂಪೇಷು ಸರ್ವತ್ರ ತದಧೀನತಾಂ ।
ಪಶ್ಯತಿ ಜ್ಞಾನಸಂಪತ್ಯಾ ವಿನಿದ್ರೋ ಯಃ ಸ ಯೋಗವಿತ್ ॥ ಇತಿ ಬ್ರಾಹ್ಮೇ ॥

ಯಾರು ಅಜ್ಞಾನದ ನಿದ್ರೆಯನ್ನು ಗೆದ್ದು ಎಚ್ಚರವಾಗಿದ್ದಾನೋ ಅವನು ಉನ್ನಿದ್ರ. ಭಗವಂತನ ರೂಪಗಳಲ್ಲಿ ತಾರತಮ್ಯ ಕಾಣದೆ, ಭಗವಂತನ ಎಲ್ಲಾ ರೂಪಗಳಲ್ಲಿ ಪೂರ್ಣತೆಯನ್ನು ಕಂಡು, ಪ್ರಪಂಚದಲ್ಲಿರುವ ಒಂದೊಂದು ವಸ್ತುವೂ ಭಗವಂತನ ಅಧೀನವಾಗಿ, ಭಗವಂತನ ನಿಯಂತ್ರಣದಲ್ಲಿದೆ ಎಂದು ಯಾರು ಸಾಕ್ಷಾತ್ಕರಿಸಿಕೊಂಡಿದ್ದಾರೆ, ಅವರು ನಿದ್ರೆ ಗೆದ್ದ ಯೋಗಿಗಳು.
ಇಂತಹ ಶುಕಾಚಾರ್ಯರು  ಏಕೆ ಭಾಗವತ ಕೇಳಿದರು? ಏಕೆ ಅವರು ಅದನ್ನು ಪರೀಕ್ಷಿತರಾಜನಿಗೆ ಹೇಳಿದರು? ಭಗವಂತನ ಅನುಗ್ರಹದಿಂದ ಬದುಕುಳಿದ ಮಹಾತ್ಮನಾದ ಪರೀಕ್ಷಿತ ರಾಜನಿಗೆ  ಭಾಗವತ ಕೇಳುವ ಪ್ರಸಂಗ ಹೇಗೆ ಬಂತು? ಇವೆಲ್ಲವನ್ನೂ ವಿವರವಾಗಿ ಹೇಳಬೇಕು ಎಂದು ಶೌನಕರು ಪ್ರಾರ್ಥಿಸುವುದರೊಂದಿಗೆ, ಈ ಅಧ್ಯಾಯ ಪ್ರಾರಂಭವಾಗುತ್ತದೆ. ಇಲ್ಲಿ ಸೂತರು ವೇದವ್ಯಾಸರು ಭೂಮಿಯಲ್ಲಿ ಅವತರಿಸಿದ ಹಿನ್ನೆಲೆಯ ವಿವರಣೆಯೊಂದಿಗೆ ತಮ್ಮ ಮಾತನ್ನು ಮುಂದುವರಿಸುತ್ತಾರೆ. 

Saturday, February 2, 2013

Shrimad BhAgavata in Kannada -Skandha-01-Ch-03(08)


ಯತ್ರೇಮೇ ಸದಸದ್ರೂಪೇ ಪ್ರತಿಷಿದ್ಧೇ ಸ್ವಸಂವಿದಾ      ।
ಅವಿದ್ಯಯಾSSತ್ಮನಿ ಕೃತೇ ಇತಿ ತದ್  ಬ್ರಹ್ಮದರ್ಶನಮ್          ॥೩೩॥

ಭಗವಂತನ ರೂಪ ಕಣ್ಣಿಗೆ ಕಾಣುವ ಮಣ್ಣು-ನೀರು-ಬೆಂಕಿಯಿಂದಾಗಲೀ, ಕಣ್ಣಿಗೆ ಕಾಣದ ಗಾಳಿ-ಆಕಾಶದಿಂದಾಗಲೀ ಆಗಿಲ್ಲ. ಜ್ಞಾನಸ್ವರೂಪನಾದ ಆತನಲ್ಲಿ ಈ ಪಾಂಚಭೌತಿಕತ್ವ ಇಲ್ಲ. ರಾಮ-ಕೃಷ್ಣಾದಿ ಅವತಾರ ರೂಪದಲ್ಲಿ ಭಗವಂತ ಪಾಂಚಭೌತಿಕ ಶರೀರ ತೊಟ್ಟು ಬಂದಿದ್ದ ಎನ್ನುವುದು ಕೇವಲ ಅಜ್ಞಾನಿಗಳ ಅರಿವು. “ಭಗವಂತ ಸತ್-ಅಸತ್ ರೂಪಗಳಿಂದ ಅತೀತನಾದ ಅಪ್ರಾಕೃತ ಜ್ಞಾನಸ್ವರೂಪ” ಎನ್ನುವ ಅರಿವೇ  ಭಗವಂತನ ಬಗೆಗಿನ ನಿಜವಾದ ಅರಿವು.    

ಯದ್ಯೇಷೋಪರತಾ ದೇವೀ ಮಾಯಾ ವೈಶಾರದೀ ಮತಿಃ        ।
ಸಂಪನ್ನ ಏವೇತಿ ವಿದುರ್ಮಹಿಮ್ನಿ ಸ್ವೇ ಮಹೀಯತೇ                 ॥೩೪॥

ಭಗವಂತನನ್ನು ಪಡೆಯಬೇಕಾದರೆ ಮೊದಲು ನಾವು ನಮ್ಮ ಅಜ್ಞಾನದ ಪೊರೆ ಕಳಚಿ ಭಗವಂತನನ್ನು ಅರಿಯಬೇಕು. ಭಗವಂತನ ಅರಿವಿನಿಂದಾಗಿ ಬರುವ ಜ್ಞಾನ ಮತ್ತು ಭಕ್ತಿಯಿಂದ ಭಗವಂತನಿಗೆ ನಮ್ಮ ಮೇಲೆ ಅನುಗ್ರಹ ಮೂಡಬೇಕು. ಭಕ್ತಿ-ಜ್ಞಾನ ಪಕ್ವಗೊಂಡ ನಮ್ಮನ್ನು ಬಿಡುಗಡೆಗೊಳಿಸಬೇಕು ಎನ್ನುವ ಇಚ್ಛೆ ಭಗವಂತನಲ್ಲಿ ಮೂಡಿದಾಗ, ಜೀವ ಭಗವಂತನಲ್ಲಿ ಸಂಪನ್ನನಾಗುತ್ತಾನೆ. ಭಗವಂತನನ್ನು ಪಡೆದ ಜೀವ ತನ್ನ ಸ್ವ-ಸಾಮರ್ಥ್ಯದಲ್ಲಿ, ತನ್ನ ಜ್ಞಾನಾನಂದ-ಸ್ವರೂಪದಲ್ಲೇ ಬೆಳಗುತ್ತಾ ಇರಬಲ್ಲ.  

ಏವಂ ಚ ಜನ್ಮಾನಿ ಕರ್ಮಾಣಿ ಹ್ಯಕರ್ತುರಜನಸ್ಯ ಚ      ।
ವರ್ಣಯಂತಿ ಸ್ಮ ಕವಯೋ ವೇದಗುಹ್ಯಾನಿ ಹೃತ್ಪತೇಃ              ॥೩೫॥

ಭಗವಂತನ ಅವತಾರದ ಕುರಿತಾದ ಶೌನಕಾದಿಗಳ ಪ್ರಶ್ನೆಗೆ ಸಂಕ್ಷಿಪ್ತ ಉತ್ತರ ಕೊಟ್ಟ ಸೂತರು, ಇಲ್ಲಿ  ಉಪಸಂಹಾರ ರೂಪವಾಗಿ ಹೇಳುತ್ತಾರೆ: “ಇದು ಭಗವಂತನ ಅವತಾರಗಳು ಮತ್ತು ಆ ಅವತಾರಗಳಲ್ಲಿ ಅವನು ಮಾಡಿದ ಲೀಲೆಗಳು. ಇವು ಹುಟ್ಟದವನ ಜನ್ಮಗಳು ಹಾಗೂ ಮಾಡದವನ ಕರ್ಮಗಳು. ಇದು ಜ್ಞಾನಿಗಳು ಹೇಳುವ ವೇದ ರಹಸ್ಯ” ಎಂದು.
ವೇದದಲ್ಲಿ ಹೇಳುವಂತೆ: “ಅಜಾಯಮಾನೋ ಬಹುಧಾ ವಿಜಾಯತೇ”. ಅಂದರೆ ಎಂದೂ ಹುಟ್ಟದವನು ಎಂದೆಂದೂ ಹುಟ್ಟುತ್ತಿರುತ್ತಾನೆ ಎಂದರ್ಥ. ನಮ್ಮ ಹುಟ್ಟು ಒಂದು ಬದ್ಧತೆ. ಆದರೆ ಭಗವಂತನ ಹುಟ್ಟು ಬದ್ಧತೆಯಲ್ಲ. ಮಾಡಿದ ಪ್ರಾರಾಬ್ಧಕರ್ಮಕ್ಕಾಗಿ ನಾವು ಹುಟ್ಟಿದರೆ, ಭಗವಂತ ಕೇವಲ ನಮಗಾಗಿ ನಮ್ಮ ಹೃತ್ಕಮಲದಲ್ಲಿ ನೆಲೆಸಿ ನಮ್ಮೊಂದಿಗೆ ಹುಟ್ಟುತ್ತಾನೆ. ಇಂತಹ ಭಗವಂತನಿಗೆ ಪ್ರಯತ್ನ-ಪ್ರಾಯಾಸವಿಲ್ಲ. ಸುಖ-ದುಃಖದ ಲೇಪವಿಲ್ಲ. ಹಾಗಾಗಿ ಇಲ್ಲಿ “ಹುಟ್ಟದವನ ಜನ್ಮಗಳು-ಮಾಡದವನ ಕರ್ಮಗಳು” ಎಂದು ವಿಶೇಷವಾಗಿ ಉಲ್ಲೇಖಿಸಲಾಗಿದೆ. ಇದು ವೇದ ಗುಹ್ಯ.

ಧರ್ಮಕ್ಕೆ ಯಾವುದು ನೆಲೆ?

ಈ ಹಿಂದೆ ಹೇಳಿದಂತೆ ಶೌನಕಾಕಾದಿಗಳು “ಕೃಷ್ಣ ಭೂಮಿಯಲ್ಲಿ ಅವತಾರ ಸಮಾಪ್ತಿ ಮಾಡಿದ ಮೇಲೆ, ಧರ್ಮಕ್ಕೆ ನೆಲೆ ಯಾವುದು?” ಎನ್ನುವ ಪ್ರಶ್ನೆ ಹಾಕಿದ್ದರು. ಈ ಪ್ರಶ್ನೆಗೆ ಉಗ್ರಶ್ರವಸ್   ಇಲ್ಲಿ ಉತ್ತರ ನೀಡಿದ್ದಾರೆ.

ಇದಂ ಭಾಗವತಂ ನಾಮ ಪುರಾಣಂ ಬ್ರಹ್ಮಸಮ್ಮಿತಮ್ ।
ಉತ್ತಮಶ್ಲೋಕಚರಿತಂ ಚಕಾರ ಭಗವಾನೃಷಿಃ             ॥೪೦॥

ಭಗವಂತನ ಜನ್ಮ-ಕರ್ಮಗಳನ್ನು, ವೇದದ ಮರ್ಮವನ್ನು ಜನಾಂಗಕ್ಕೆ ತಿಳಿಸುವುದಕ್ಕೋಸ್ಕರ ವ್ಯಾಸರು ಭಾಗವತ ರಚನೆ ಮಾಡಿದರು. ಭಾಗವತ ವೇದಕ್ಕೆ ಸಮಾನವಾದುದು. ಅದಕ್ಕಾಗಿ ಇದನ್ನು ಪಂಚಮವೇದ ಎಂದೂ ಕರೆಯುತ್ತಾರೆ. ಭಾಗವತ- ಎಲ್ಲರಿಂದಲೂ ಸ್ತುತ್ಯನಾದ, ಎಲ್ಲಾ  ಶಬ್ದಗಳಿಂದ ವರ್ಣನೀಯನಾದ ‘ಉತ್ತಮಶ್ಲೋಕ’ ಭಗವಂತನ ಚರಿತೆ. ಸ್ವತಃ ಭಗವಂತನೇ ವ್ಯಾಸ ಋಷಿಯಾಗಿ ಬಂದು ಈ ಗ್ರಂಥವನ್ನು ರಚಿಸಿದ.

ಕೃಷ್ಣೇ ಸ್ವಧಾಮೋಪಗತೇ ಧರ್ಮಜ್ಞಾನಾದಿಭಿಃ ಸಹ      ।
ಕಲೌ ನಷ್ಟದೃಶಾಂ ಪುಂಸಾಂ ಪುರಾಣಾರ್ಕೋSಮುನೋದಿತಃ   ॥೪೫॥

ವ್ಯಾಸಾವತಾರ ಮತ್ತು ಕೃಷ್ಣಾವತಾರದ ನಡುವಿನ ಅಂತರ ಸುಮಾರು ೬೫೦ ವರ್ಷಗಳು. ಕೃಷ್ಣಾವತಾರಕ್ಕೆ ಮೊದಲು ಧರ್ಮದ ಹೊರೆಯನ್ನು ಭಗವಂತ ವ್ಯಾಸ ರೂಪದಲ್ಲಿ ಹೊತ್ತಿದ್ದ. ನಂತರ ಕೃಷ್ಣಾವತಾರವಾದಾಗ ಆ ಹೊರೆಯನ್ನು ಕೃಷ್ಣ ರೂಪದಲ್ಲಿ ಭಗವಂತ ಧರಿಸಿದ. ಕೃಷ್ಣ ಲೋಕದಲ್ಲಿ ತನ್ನ ಜ್ಞಾನದ ಹಿರಿಮೆ, ಆನಂದದ ವೈಭವ ಎಲ್ಲವನ್ನೂ ಸಂಕ್ಷೇಪಗೊಳಿಸಿ ಹೊರಟುಹೋದಾಗ, ಲೋಕದ ಜನರಿಗೆ ಕಣ್ಣು ಕಟ್ಟಿದಂತಾಯಿತು. ಇಂತಹ ಸಮಯದಲ್ಲಿ ಮರಳಿ ಭಗವಂತ ವ್ಯಾಸ ರೂಪದಲ್ಲಿ ‘ಭಾಗವತ’ ಎನ್ನುವ ಸೂರ್ಯನ ಮೂಲಕ ತನ್ನ ಬೆಳಕನ್ನು ಹಾಯಿಸಿ, ಜನರ ಕಣ್ಣು ತೆರೆಸಿದ.
ವ್ಯಾಸರು ಇಂತಹ ಅಪೂರ್ವ ಗ್ರಂಥವನ್ನು ತನ್ನ ಮಗನಾದ ಶುಕಾಚಾರ್ಯರಿಗೆ ಉಪದೇಶ ಮಾಡಿದರು. ಅಂತಹ ಭಾಗವತವನ್ನು ಶುಕಾಚಾರ್ಯರು ಪರೀಕ್ಷಿತ ರಾಜನಿಗೆ ಉಪದೇಶ ಮಾಡಿದರು. “ಆ ಉಪದೇಶವನ್ನು  ನಾನು ಪರೀಕ್ಷಿತ ರಾಜನೊಂದಿಗೆ ಕುಳಿತು ಕೇಳಿ ತಿಳಿದು, ಇಂದು ನಿಮಗೆ ಹೇಳುತ್ತಿದ್ದೇನೆ” ಎಂದು ಶೌನಕಾದಿಗಳಿಗೆ ಸೂತರು ಭಾಗವತದ ಹಿನ್ನೆಲೆಯನ್ನು ವಿವರಿಸಿದರು ಎನ್ನುವಲ್ಲಿಗೆ-ಈ ಅಧ್ಯಾಯ ಕೊನೆಗೊಳ್ಳುತ್ತದೆ.

॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ತೃತೀಯೋSಧ್ಯಾಯಃ॥

ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಮೂರನೇ ಅಧ್ಯಾಯ ಮುಗಿಯಿತು.


*********

Shrimad BhAgavata in Kannada -Skandha-01-Ch-03(07)


ಜನ್ಮ ಗುಹ್ಯಂ ಭಗವತೋ ಯ ಏವಂ ಪ್ರಯತೋ ನರಃ ।
ಸಾಯಂ ಪ್ರಾತರ್ಗೃಣನ್ ಭಕ್ತ್ಯಾ ದುಃಖಗ್ರಾಮಾದ್ ವಿಮುಚ್ಯತೇ ॥೨೯॥

ಏತದ್ರೂಪಂ ಭಗವತೋ ಹ್ಯರೂಪಸ್ಯ ಚಿದಾತ್ಮನಃ       ।
ಮಾಯಾಗುಣೈರ್ವಿರಚಿತಂ ಮಹದಾದಿಭಿರಾತ್ಮನಿ                    ॥೩೦॥

ಭಗವಂತನ ಅವತಾರಗಳೆಂದರೆ ಅದು ಅವನ ಚಿನ್ಮಯವಾದ ಅಪ್ರಾಕೃತ ರೂಪ. ಇದನ್ನು ಎಲ್ಲರೂ ಕಾಣಲು ಸಾಧ್ಯವಿಲ್ಲ. ಭಗವಂತನ ಅವತಾರ ರೂಪವನ್ನು ಜನರು ಕಂಡರೂ, ಅದನ್ನು ‘ಭಗವಂತ’ ಎಂದಾಗಲೀ, ‘ಜ್ಞಾನಾನಂದಮಯ’ ಎಂದಾಗಲೀ ಕಾಣಲಿಲ್ಲ. ಉದಾಹರಣೆಗೆ: ಕೃಷ್ಣನನ್ನು ಅಥವಾ ರಾಮನನ್ನು ಆ ಕಾಲದ ಜನರು ನಮ್ಮಂತೆ ಪಾಂಚಭೌತಿಕ ಶರೀರವುಳ್ಳ ಒಬ್ಬ ಸಾಮಾನ್ಯ ಮನುಷ್ಯ ಎಂದೇ ತಿಳಿದಿದ್ದರು. ಜ್ಞಾನಿಗಳನ್ನು ಹೊರತುಪಡಿಸಿ, ಇತರರಿಗೆ ಅದು ಜ್ಞಾನಾನಂದಮಯವಾದ, ಅಪ್ರಾಕೃತವಾದ ಭಗವಂತ ಎಂದು ಅನ್ನಿಸಿರಲಿಲ್ಲ. ಹಾಗಾಗಿ ಎಲ್ಲರಿಗೂ ಭಗವಂತನ ದರ್ಶನ ಭಾಗ್ಯ ದೊರೆಯಲಿಲ್ಲ.
ಭಗವಂತ ತನ್ನ  ಅವತಾರ ಕಾಲದಲ್ಲೂ ಕೂಡಾ, ಅಭೌತಿಕ ಅಪ್ರಾಕೃತ ಜ್ಞಾನಾನಂದಮಯ ಶರೀರಿಯಾಗಿರುತ್ತಾನೆ. ಆದರೆ ಆ ಅರಿವು ನಮಗಿಲ್ಲದಿದ್ದಾಗ, ಭಗವಂತನ ದರ್ಶನ ನಮಗಾಗುವುದಿಲ್ಲ. ಇಂದು ನಮಗೆ ಭಗವಂತನ ಅವತಾರ ರೂಪ ನೋಡಲು ಲಭ್ಯವಿಲ್ಲದಿದ್ದರೂ ಕೂಡಾ, ಆತನನ್ನು ನಾವು ಕಾಣಬಹುದು. ನಮಗೆ ತಿಳಿದಂತೆ ಭಗವಂತನಿಗೆ  ಮೂರು ರೂಪಗಳು: ೧. ಆವೇಶರೂಪ ೨. ಅವತಾರರೂಪ ೩. ಪ್ರತೀಕರೂಪ.  ಎಲ್ಲರೂ ಭಗವಂತನನ್ನು ಪ್ರತೀಕರೂಪದಲ್ಲಿ ಆವಾಹನೆ ಮಾಡಿ ಧ್ಯಾನದಲ್ಲಿ ಕಾಣಬಹುದು. 
ಈ ವಿಶ್ವಕ್ಕೊಂದು ರೂಪಕೊಟ್ಟು, ತತ್ತದ್ ರೂಪನಾಗಿ, ವಿಶ್ವದಲ್ಲಿ ಭಗವಂತ ತುಂಬಿದ್ದಾನೆ. ಹಾಗಾಗಿ ಪ್ರತಿಯೊಂದು ವಸ್ತುವೂ ಆತನ ಪ್ರತಿಮೆ. ರೂಪವಿಲ್ಲದ ಭಗವಂತನ ರೂಪವಿದು. ಸತ್ತ್ವ, ರಜಸ್ಸು ಮತ್ತು ತಮೋಗುಣಗಳಿದಾದ ಈ ಪ್ರಪಂಚ, ಮಹತಾದಿ ತತ್ತ್ವಗಳಿಂದ ತುಂಬಿದೆ. ಕಾಣುವ ಈ ಪ್ರಪಂಚದಲ್ಲಿ, ಕಾಣುವ ವಸ್ತುವಿನೊಳಗೆ, ಕಾಣದ ಭಗವಂತನನ್ನು ಧ್ಯಾನದಲ್ಲಿ ಕಾಣಬೇಕು. ಇದನ್ನೇ ನಮಗೆ ಪ್ರಹ್ಲಾದ ಹೇಳಿರುವುದು. ಆತ ಕಂಬದಲ್ಲೂ ಭಗವಂತನನ್ನು ಕಂಡಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಕಂಬವೂ ಒಂದು ಕಲ್ಲು, ದೇವರ ಪ್ರತಿಮೆಯೂ ಒಂದು ಕಲ್ಲು. ಆದರೆ ಕಲ್ಲಿನೊಳಗೂ ಭಗವಂತನಿದ್ದಾನೆ ಎಂದು ತಿಳಿದಾಗ, ಕಲ್ಲು ಪ್ರತಿಮೆಯಾಗುತ್ತದೆ. ಇಲ್ಲದಿದ್ದರೆ ಪ್ರತಿಮೆಯೂ ಕಲ್ಲೇ!   ಹೀಗೆ ನಾವು ಜಡದಲ್ಲಿ ಪ್ರತೀಕರೂಪನಾದ ಭಗವಂತನನ್ನು ಕಾಣುವ ಪ್ರಯತ್ನ ಮಾಡಬೇಕು.

ಯಥಾ ನಭಸಿ ಮೇಘೌಘೋ ರೇಣುರ್ವಾ ಪಾರ್ಥಿವೋSನಿಲೇ     ।
ಏವಂ ದ್ರಷ್ಟರಿ ದೃಶ್ಯತ್ವಮಾರೋಪಿತಮಬುದ್ಧಿಭಿಃ                      ॥೩೧॥

ವಿಶ್ವದಲ್ಲಿ ಭಗವಂತ ತುಂಬಿದ್ದಾನೆ, ಪ್ರತಿಮೆಯಲ್ಲಿ ಭಗವಂತನನ್ನು ಕಾಣಬೇಕು, ಇತ್ಯಾದಿ ವಿಚಾರವನ್ನು ಕೆಲವು  ತಿಳಿಗೇಡಿಗಳು ತಪ್ಪಾಗಿ ತಿಳಿದು, ಪ್ರತಿಮಾಪೂಜೆ ಬಗ್ಗೆ ಆರೋಪ ಮಾಡುತ್ತಾರೆ. ಆದರೆ ಇವರಿಗೆ “ಪ್ರತಿಮೆಯಲ್ಲಿ ದೇವರ ಪೂಜೆ ಹೊರತು, ಪ್ರತಿಮೆಯೇ ದೇವರೆಂದು ಪೂಜೆ ಅಲ್ಲ” ಎನ್ನುವ ಸತ್ಯ ತಿಳಿದಿಲ್ಲ. ಭಾರತದಲ್ಲಿ ಶಾಸ್ತ್ರ ತಿಳಿದವರು ಯಾರೂ ಪ್ರತಿಮೆಯನ್ನು ದೇವರು ಎಂದು ಪೂಜಿಸುವುದಿಲ್ಲ, ಬದಲಿಗೆ ಪ್ರತಿಮೆಯಲ್ಲಿ ದೇವರನ್ನು ಆವಾಹನೆ ಮಾಡಿ ಪೂಜಿಸುತ್ತಾರೆ. ಈ ವಿಚಾರವನ್ನು ಸ್ವಯಂ ವೇದವ್ಯಾಸರು ಬ್ರಹ್ಮಸೂತ್ರದಲ್ಲೇ ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲಿ ಹೇಳುತ್ತಾರೆ: “ನ ಪ್ರತೀಕೇ ನಹಿಸಃ” ಎಂದು. ಅಂದರೆ “ಪ್ರತಿಮೆಯನ್ನು ದೇವರೆಂದು ಕಾಣಬೇಡ, ಪ್ರತಿಮೆ ದೇವರಲ್ಲ, ಪ್ರತಿಮೆಯಲ್ಲಿ ದೇವರನ್ನು ಕಾಣು” ಎಂದರ್ಥ. ಗಾಳಿಯಲ್ಲಿ ಧೂಳು ತುಂಬಿದೆ ಹೊರತು, ಗಾಳಿಯೇ ದೂಳಲ್ಲ. ಮೋಡದಿಂದ ಆಕಾಶ ಕಪ್ಪಾಗಿ ಕಾಣುತ್ತದೆ ಹೊರತು, ಆಕಾಶವೇ ಕಪ್ಪಲ್ಲ. ಹಾಗೇ ಪ್ರತಿಮೆಯಲ್ಲಿ ಭಗವಂತ ಹೊರತು, ಪ್ರತಿಮೆಯೇ ಭಗವಂತನಲ್ಲ.
ಭಗವಂತ ಎಂದರೆ ಜ್ಞಾನಾನಂದಮಯನಾದ ಪರಿಪೂರ್ಣ ವಸ್ತು. ಆತನಿಗೆ ಅಧಿಷ್ಠಾನ-ಗುಣತ್ರಯಗಳಿಂದ ಆಶ್ರಯವಾದ, ಪಂಚಭೂತಗಳಿಂದಾದ, ಸ್ವತಃ ಚಲನೆ, ಬುದ್ಧಿಶಕ್ತಿ ಇಲ್ಲದ ಜಡ ಪ್ರಪಂಚ. ಈ ಭಗವಂತ ಮತ್ತು ಜಡ ಪ್ರಪಂಚದ ನಡುವೆ ‘ಜೀವ’ ಎಂದರೆ ಯಾರು? ‘ಜೀವ’ ಭಗವಂತನ ಒಂದು ತುಣುಕೇ ಅಥವಾ ಪಂಚಭೂತಗಳಿಂದ ಚೈತನ್ಯ ಸೃಷ್ಟಿಯಾಯಿತೇ? ಈ ಎಲ್ಲಾ ಪ್ರಶ್ನೆಗಳಿಗೆ ಸೂತರು ಮುಂದಿನ ಶ್ಲೋಕದಲ್ಲಿ ಉತ್ತರ ನೀಡಿದ್ದಾರೆ.

ಅತಃ ಪರಂ ಯದವ್ಯಕ್ತಮವ್ಯೂಢಗುಣಬೃಂಹಿತಮ್       ।
ಅದೃಷ್ಟಾಶ್ರುತವಸ್ತುತ್ವಾತ್ ಸ ಜೀವೋ ಯಃ ಪುನರ್ಭವಃ           ॥೩೨॥

‘ಜೀವ’ ಜಡಕ್ಕಿಂತಲೂ ಭಿನ್ನ ಹಾಗೂ ಪರಮಾತ್ಮನಿಗಿಂತಲೂ ಭಿನ್ನ. ಜೀವ ಜಡದೊಳಗೇ ಇದ್ದರೂ ಕೂಡಾ, ಅದನ್ನು ಕಾಣಲು ಸಾಧ್ಯವಿಲ್ಲ. ಶಾಸ್ತ್ರದಲ್ಲಿ ಹೇಳುವಂತೆ: ಜೀವದ ಆಕಾರ ಸುಮಾರಾಗಿ ಒಂದು ಕುದುರೆಯ ಬಾಲದ ತುದಿಭಾಗದ ಹತ್ತುಸಾವಿರದ ಒಂದನೇ ಭಾಗದಷ್ಟಿರುತ್ತದೆ. ಹಾಗಾಗಿ ಜೀವ ಎನ್ನುವುದು ಕಣ್ಣಿಗೆ ಕಾಣದ ಆದರೆ ಅನುಭವಿಸಬಹುದಾದ ತತ್ತ್ವ.
ಇಲ್ಲಿ ‘ಜೀವ’ನಿಗೆ ಸಂಬಂಧಿಸಿದ ಒಂದು ಅಪೂರ್ವವಾದ ವಿಚಾರವನ್ನು ಸೂತರು ಹೇಳಿರುವುದನ್ನು ಕಾಣುತ್ತೇವೆ. ಅವರು ಹೇಳುತ್ತಾರೆ: “ಜೀವ ನಿತ್ಯವಾದ ಸ್ವಭಾವದಿಂದ ತುಂಬಿದೆ” ಎಂದು. ಪ್ರತಿಯೊಂದು ‘ಜೀವ’ ಕ್ಕೆ ಅದರದ್ದೇ ಆದ ಒಂದು ವಿಶೇಷ ಸ್ವಭಾವವಿದೆ. ಇದೇ ಆ ‘ಜೀವ’ದ ವ್ಯಕ್ತಿತ್ವ[ individuality]. ತನ್ನ ಸ್ವರೂಪ ವ್ಯಕ್ತಿತ್ತ್ವವನ್ನು ಬೆಳೆಸಿಕೊಳ್ಳುವುದೇ ‘ಜೀವ’ನ ಸಾಧನೆ. ಆ ವ್ಯಕ್ತಿತ್ವದ ಪೂರ್ಣತೆ ಸಾಧಿಸುವುದೇ ‘ಜೀವ’ದ ಸಿದ್ಧಿ.  “ನಾನು-ನಾನಾಗಿ, ನನ್ನ ಪೂರ್ಣ ವ್ಯಕ್ತಿತ್ತ್ವದ ವಿಕಸನವನ್ನು ಪಡೆಯುವುದು ನನ್ನ ಮೋಕ್ಷ. ನೀವು ನಿಮ್ಮ ವ್ಯಕ್ತಿತ್ತ್ವದ ಪೂರ್ಣತೆಯನ್ನು ಪಡೆಯುವುದು ನಿಮ್ಮ ಮೋಕ್ಷ. ಹೀಗೆ ‘ಜೀವ’ನಲ್ಲಿ ಎಂದೂ ನಾಶವಾಗದ ಸ್ವಭಾವ ನಿತ್ಯವಾಗಿರುತ್ತದೆ. ಎಲ್ಲ ಜೀವರೊಳಗೂ ನೆಲಸಿ, ಎಲ್ಲಕ್ಕೂ ಒಂದು ರೂಪ ಕೊಟ್ಟ ವಿಶ್ವರೂಪನಾದ ಭಗವಂತನನ್ನು ತಿಳಿಯುವ ತನಕ-‘ಜೀವ’ ಸಂಸಾರದ ಹುಟ್ಟು-ಸಾವಿನ ಚಕ್ರದಲ್ಲಿ ಸುತ್ತುತ್ತಿರುತ್ತಾನೆ.