Sunday, August 25, 2013

Shrimad BhAgavata in Kannada -Skandha-01-Ch-18(4)

ಇಲ್ಲಿ ಸರ್ವೇಸಾಮಾನ್ಯವಾಗಿ ನಮಗೊಂದು ಪ್ರಶ್ನೆ ಬರುತ್ತದೆ. ಅದೇನೆಂದರೆ: ಕಲಿಯನ್ನು ನಿಗ್ರಹ ಮಾಡಿದ್ದ ಪರೀಕ್ಷಿತನೊಳಗೆ ಕಲಿ ಹೇಗೆ ಪ್ರವೇಶಿಸಿದ ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರಿಸಬೇಕಾದರೆ ನಾವು ಭಾಗವತವನ್ನು ಸ್ವಲ್ಪ ವಿಶ್ಲೇಷಣೆ ಮಾಡಿ ನೋಡಬೇಕು. ಈ ಹಿಂದೆ ಹೇಳಿದಂತೆ ಪರೀಕ್ಷಿತ ಕಲಿ ಮತ್ತು ಆತನ ಪರಿವಾರದ ವಾಸಕ್ಕೆ ಐದು ಸ್ಥಾನಗಳನ್ನು ಕೊಟ್ಟಿದ್ದ. ಅವುಗಳೆಂದರೆ ದ್ಯೂತ, ಮದ್ಯ, ಸ್ತ್ರೀ, ಮಾಂಸ ಮತ್ತು ಚಿನ್ನ. ಶಾಸ್ತ್ರದಲ್ಲಿ ಹೇಳುವಂತೆ ಈ ಐದು ಸ್ಥಾನಗಳು ಕಲಿಯ ಆಕ್ರಮಣ ಸ್ಥಾನವಾಗಿರುವುದರಿಂದ, ಜೀವನದಲ್ಲಿ ಎತ್ತರಕ್ಕೇರ ಬಯಸುವವರು ಇವುಗಳ ಬೆನ್ನು ಹತ್ತಬಾರದು. ವಿಶೇಷವಾಗಿ ರಾಜರುಗಳಿಗೆ ಈ ಸ್ಥಾನಗಳ ಸೆಳೆತ ಹೆಚ್ಚು. ಅವರು ಅನೇಕ ಮಂದಿ ಸ್ತ್ರೀಯರ ನಡುವೆ ಮಾಂಸ-ಮದ್ಯ ಸೇವನೆ ಮಾಡಿಕೊಂಡು ಇರುವವರು. ಅವರಿಗೆ ಅದು ನಿಷಿದ್ಧವೂ ಅಲ್ಲ. ಆದ್ದರಿಂದ ಧರ್ಮಶೀಲ ರಾಜನಾದವನಿಗೆ  ಇವುಗಳ ಅಪಾಯ ಹೆಚ್ಚು ಮತ್ತು ಆತ ಆ ಕುರಿತು ಅತಿ ಹೆಚ್ಚು ಎಚ್ಚರ ವಹಿಸಬೇಕು. ಇಷ್ಟೇ ಅಲ್ಲದೆ, ಗೀತೆಯಲ್ಲಿ ಕೃಷ್ಣ ಹೇಳುವಂತೆ: ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ । ಸ ಯತ್ ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ   ॥೩-೨೧॥ ಲೋಕಪಾಲಕ ರಾಜ ಏನನ್ನು ಪಾಲನೆ ಮಾಡುತ್ತಾನೋ ಅದನ್ನೇ ಆತನ ಪ್ರಜೆಗಳು ಪಾಲಿಸುತ್ತಾರೆ. ಅವನು ಯಾವುದನ್ನು ಆಧಾರವಾಗಿ ಬಳಸುತ್ತಾನೋ ಜನತೆ ಅದನ್ನೇ ಬೆನ್ನು ಹತ್ತುತ್ತದೆ. ಅಥೈತಾನಿ ನ ಸೇವೇತ ಬುಭೂಷುಃ ಪುರುಷಃ ಕ್ವಚಿತ್ । ವಿಶೇಷತೋ ಧರ್ಮಶೀಲೋ ರಾಜಾ ಲೋಕಪತಿರ್ಗುರುಃ ॥ಭಾಗವತ-೦೧-೧೭-೪೦॥ ರಾಜನಾದವನು ಪ್ರಜಾಪಾಲಕ. ಆತ ಪ್ರಜೆಗಳ ಮಾರ್ಗದರ್ಶಕ ಮತ್ತು ಗುರು. ಹಾಗಾಗಿ ಸಾಮಾನ್ಯರಿಗಿಂತ ಮುಂದಾಳುವಾದವನ ಹೊಣೆಗಾರಿಕೆ ದೊಡ್ಡದು.
ಈ ಹಿಂದೆ ವಿಶ್ಲೇಶಿಸಿದಂತೆ: ಇಲ್ಲಿ ಕಲಿಸ್ಥಾನಗಳನ್ನು ಬಳಸಬಾರದು ಎಂದರೆ ಅವಿಹಿತವಾದುದನ್ನು ಬಳಸಬಾರದು ಎಂದರ್ಥ. (“ವಿಹಿತಾತಿರೇಕೇಣ ನ ಸೇವೇತೇತಿ”). ಆದ್ದರಿಂದ ಯಾವುದು ಯಾರಿಗೆ ವಿಹಿತ ಎನ್ನುವುದನ್ನು ತಿಳಿಯುವುದು ಬಹಳ ಮುಖ್ಯ. ಉದಾಹರಣೆಗೆ ಮದ್ಯಪಾನ, ಮಾಂಸಭಕ್ಷಣೆ ಮತ್ತು ಸ್ತ್ರೀಸಂಗ. ಇದು ಯಾರಿಗೆ ವಿಹಿತ ಮತ್ತು ಎಷ್ಟು ವಿಹಿತ? ಇವೆಲ್ಲವನ್ನೂ ಪೂರ್ಣವಾಗಿ ಬಿಡಬೇಕು ಎಂದು ಶಾಸ್ತ್ರ ಹೇಳುವುದಿಲ್ಲ. ಎಲ್ಲವದಕ್ಕೂ ಒಂದು ವ್ಯವಸ್ಥೆಯನ್ನು ಶಾಸ್ತ್ರ ಹೇಳುತ್ತದೆ. ಈ ಎಲ್ಲಾ ಸ್ಥಾನಗಳು ಭಗವಂತನ ಪೂಜಾರೂಪವಾದಾಗ ವಿಹಿತವಾಗುತ್ತದೆ ಮತ್ತು ಚಟವಾದಾಗ ದೋಷವಾಗುತ್ತದೆ. ಈ ಕುರಿತು ಆಚಾರ್ಯ ಮಧ್ವರು ಭಾಗವತ ತಾತ್ಪರ್ಯ ನಿರ್ಣಯದಲ್ಲಿ(ಹನ್ನೊಂದನೇ ಸ್ಕಂಧ- ಅಧ್ಯಾಯ ಐದು, ಶ್ಲೋಕ-ಹನ್ನೊಂದು)  ಪ್ರಮಾಣಶ್ಲೋಕದೊಂದಿಗೆ ಸುಂದರ ವಿವರಣೆಯೊಂದನ್ನು ನೀಡಿದ್ದಾರೆ:  
ವ್ಯವಾಯಾಮಿಷಮದ್ಯಾನಿ ಹರೇಃ ಪೂಜಾರ್ಥಮೇವ ತು ।  ಸ್ತ್ರೀ-ಪುರುಷ ಸಮಾಗಮ, ಮದ್ಯಪಾನ ಮತ್ತು ಮಾಂಸಭಕ್ಷಣೆಯನ್ನು ಭಗವಂತನ ಪೂಜಾರೂಪವಾಗಿ ಬಳಸುವಂತಹ ಒಂದು ವಿಧಿ ಇದೆ. ಅಂತಹ ಸಂದರ್ಭದಲ್ಲಿ ಇವು ದೋಷವಾಗುವುದಿಲ್ಲ. ವಾಮದೇವ್ಯೋ ನಾಮ ಯಜ್ಞೋ ವ್ಯವಾಯೋ ಹರಿಪೂಜನಮ್ । ಉಪನಿಷತ್ತಿನಲ್ಲಿ ವಾಮದೇವ ಎನ್ನುವ ಯಜ್ಞದ ಕುರಿತು ಹೇಳುತ್ತಾರೆ. ಇದು ಸ್ತ್ರೀ-ಪುರುಷ ಸಮಾಗಮವನ್ನು ಭಗವಂತನ ಯಜ್ಞರೂಪದಲ್ಲಿ ಅನುಸಂಧಾನ ಮಾಡುವ ವಿಧಾನ. ದಂಪತಿಗಳು “ಲಕ್ಷ್ಮೀನಾರಾಯಣರು ನಮ್ಮೊಳಗಿದ್ದು, ನಮ್ಮನ್ನು ಪ್ರತೀಕವಾಗಿ ಬಳಸಿ, ಪ್ರಜಾವೃದ್ಧಿಗಾಗಿ ನಮ್ಮಿಂದ ಈ ಪವಿತ್ರ ಕಾರ್ಯ ಮಾಡಿಸುತ್ತಿದ್ದಾರೆ” ಎನ್ನುವ ಅನುಸಂಧಾನದಿಂದ  ಒಂದಾದಾಗ ಅದು ಭಗವಂತನ ಪೂಜೆಯಾಗುತ್ತದೆ. ಈ ರೀತಿ ಭೋಗದ ಹಿಂದೆ ಭವ್ಯವಾದ ಅನುಸಂಧಾನವಿದ್ದಾಗ ಅದು ಹರಿಪೂಜೆಯಾಗುತ್ತದೆ.  ಪಿತೃ ಯಜ್ಞೋ ದೇವ ಯಜ್ಞೋ ಮಾಂಸೇನ ಪರಿಪೂಜನಮ್ । ಪಿತೃಯಜ್ಞ ಮತ್ತು ದೇವಯಜ್ಞದಲ್ಲಿ ಪ್ರಾಣಿಗಳನ್ನು ಬಲಿ ಕೊಡುವ ವಿಧಾನವಿದೆ. ಈ ರೀತಿಯ ಯಜ್ಞವನ್ನು ಕ್ಷತ್ರಿಯರು ಮಾಡುತ್ತಿದ್ದರು. ಇಲ್ಲಿ ಅವರು ತಾವು ತಿನ್ನುವ ಆಹಾರವನ್ನು ಭಗವಂತನಿಗೆ ಅರ್ಪಿಸಿ, ಅದನ್ನು ಭಗವಂತನ ಪ್ರಸಾದ ರೂಪವಾಗಿ ಸೇವಿಸುತ್ತಾರೆ. ಈ ರೀತಿಯ ಪ್ರಾಣಿಹಿಂಸೆ ಅಥವಾ  ಮಾಂಸಾಹಾರ ಅವಿಹಿತವಲ್ಲ. ಆದರೆ ಇಲ್ಲಿ ಒಂದು ಎಚ್ಚರ ಅಗತ್ಯ. ಯಾರಿಗೆ ಮಾಂಸ ಭಕ್ಷಣೆ ಅವಿಹಿತವೋ(ಉದಾಹರಣೆಗೆ ವಿಪ್ರರು) ಅವರು ಈ ರೀತಿ ದೇವರಿಗೆ ಅರ್ಪಿಸಿ ಸೇವಿಸುವಂತಿಲ್ಲ. ಕೇವಲ ಮಾಂಸಭಕ್ಷಣೆ ಮಾಡುವವರು ಮಾತ್ರ ಅದನ್ನು ದೇವರಿಗೆ ಅರ್ಪಿಸಿ ಸೇವಿಸಬಹುದು ಅಷ್ಟೇ.  ವ್ಯವಾಯಯಜ್ಞೇ ಮದ್ಯಂ ತು ಸೋಮಾತ್ಮಕತಯೇಷ್ಯತೇ ।  ಕ್ಷತ್ರಿಯರಿಗೆ ಮದ್ಯಪಾನ ನಿಷಿದ್ಧವಲ್ಲ. ಅವರು ಸ್ತ್ರೀ-ಪುರುಷ ಸಮಾಗಮದ ಪೂರ್ವಭಾವಿಯಾಗಿ ಮದ್ಯಪಾನ ಮಾಡಬಹುದು. ಅವರಿಗೆ ಸೃಷ್ಟಿಯಜ್ಞವಾದ ಸ್ತ್ರೀ-ಪುರುಷ ಸಮಾಗಮದಲ್ಲಿ  ಮದ್ಯ ಹವಿಸ್ಸಿನಂತೆ. ಆದರೆ ಇಂತಹ ಸೇವನೆ ಅಧ್ಯಯನ, ಅಧ್ಯಾಪನ ಮುಂತಾದ ಭೌದ್ಧಿಕ ಕಾರ್ಯ ಮಾಡುವವರಿಗೆ ನಿಷಿದ್ಧ. ಕ್ಷತ್ರಿಯಾದೇರ್ನ ವಿಪ್ರಾಣಾಂ ವಿಪ್ರೋ ದೋಷೇಣ ಲಿಪ್ಯತೇ । ಒಂದು ವೇಳೆ ಕ್ಷತ್ರಿಯರು ಪ್ರಾಣಿಯನ್ನು ಯಜ್ಞದಲ್ಲಿ ಬಳಸಿದರೆ, ಅವರು ಅದನ್ನು ಸೇವಿಸಬಹುದು. ಆದರೆ ಅಲ್ಲಿ ಪೌರೋಹಿತ್ಯ ಮಾಡಿದ ಋತ್ವಿಜರು ಅದನ್ನು ಸೇವಿಸುವಂತಿಲ್ಲ. ಆರಾಗತಃ ಪ್ರವೃತ್ತಿಃ ಸ್ಯಾದ್ರಾಗೋ ದೋಷಸ್ಯ ಕಾರಣಮ್ । ಪ್ರಾಣಭಕ್ಷೋSಥವಾ ಯಜ್ಞೇ ದೈವೇ ಸರ್ವಸ್ಯ ಚೇಷ್ಯತಿ ।  ಪೈಷ್ಟಮದ್ಯಸ್ಯ ಮಾಧ್ವ್ಯದಿ ಕ್ಷತ್ರಿಯಸ್ಯ  ನ ದುಷ್ಯತಿ । ವೇದದಲ್ಲಿ ಸೌತ್ರಾಮಣಿ ಯಜ್ಞದ ಪ್ರಸ್ತಾಪವಿದೆ. ಅದು ಮದ್ಯವನ್ನು ಬಳಸಿ ಮಾಡುವ ಯಜ್ಞ. ಆ ರೀತಿ ಯಜ್ಞ ಮಾಡಿದಾಗ ಅದನ್ನು ಮಾಡುವ ಋತ್ವಿಜರು ಯಜ್ಞ ಶೇಷವಾಗಿ ಮದ್ಯ ಸೇವನೆ ಮಾಡುವಂತಿಲ್ಲ. ಒಂದು ವೇಳೆ ಅಲ್ಲಿ ಬಳಸಿದ ಮದ್ಯ ಕಡಿಮೆ ಮದ್ಯಸಾರದಿಂದ(alcohol) ಕೂಡಿದ್ದರೆ, ಅದನ್ನು ಪುರೋಹಿತರು ಕೇವಲ ಆಘಾಣಿಸಬಹುದು ಅಷ್ಟೇ. ಇಲ್ಲದಿದ್ದರೆ  ಅದನ್ನು ಮೂಸುವುದೂ ನಿಷಿದ್ಧ.
ಇಲ್ಲಿ ನಾವು ತಿಳಿಯಬೇಕಾಗಿರುವುದು ಪರೀಕ್ಷಿತ ರಾಜ ಮಾಡಿರುವ ಅವಿಹಿತ ಕಾರ್ಯ. ಆತ ಬೇಟೆಯ ಪೂರ್ವದಲ್ಲಿ ಮದ್ಯವನ್ನು ಭಗವಂತನ ಪ್ರಸಾದ ರೂಪದಲ್ಲಿ ಸೇವಿಸುವ ಬದಲು, ಅತಿಸೇವನೆ ಮಾಡಿರಬೇಕು. ಹಾಗಾಗಿ ಅಲ್ಲಿ ಕಲಿಗೆ ಅವಕಾಶ ಸಿಕ್ಕಿರುವುದು.

ಅಭೂತಪೂರ್ವಃ ಸಹಸಾ ಕ್ಷುತ್ತೃಡ್ಭ್ಯಾಮರ್ದಿತಾತ್ಮನಃ ।
ಬ್ರಾಹ್ಮಣಂ ಪ್ರತ್ಯಭೂದ್ ಬ್ರಹ್ಮನ್ ಮತ್ಸರೋ ಮನ್ಯುರೇವ ಚ ॥೧೮-೨೯॥

ಈತನಕ ಪರೀಕ್ಷಿತ ಎಂದೂ ಇಂತಹ ಪ್ರಮಾದ ಮಾಡಿರಲಿಲ್ಲ. ಆದರೆ ಅತಿಯಾದ ಹಸಿವು-ಬಾಯಾರಿಕೆ ನಡುವೆ ಅವನಿಂದ ಇಂತಹ ಒಂದು ಪ್ರಮಾದ ನಡೆಯುವಂತೆ ಕಲಿ ಪ್ರೇರೇಪಿಸುತ್ತಾನೆ. ಕಲಿಯ ಪ್ರಭಾವದಿಂದಾಗಿ ಆತನಿಗೆ ಶಮೀಕ ಮುನಿಯ ಮೇಲೆ ಮತ್ಸರ ಮತ್ತು ಕೋಪ ಬರುತ್ತದೆ. ಇಲ್ಲಿ ಮತ್ಸರ ಎಂದರೆ  ಹೊಟ್ಟೆಕಿಚ್ಚು ಎಂದರ್ಥವಲ್ಲ. [ಅಸೂಯೆ ಎಂದರೆ ಹೊಟ್ಟೆಕಿಚ್ಚು]. ಇಲ್ಲಿ ಮತ್ಸರ ಎಂದರೆ ನಮ್ಮ ಅಧೀನವಿರುವ ಒಬ್ಬ ವ್ಯಕ್ತಿ ನಮ್ಮ ಅಪೇಕ್ಷೆಯಂತೆ ನಡೆದುಕೊಳ್ಳದೇ ಇದ್ದಾಗ ನಮಗಾಗುವ ಅಸಮಾಧಾನ. ತನ್ನ ರಾಜ್ಯದ ಒಬ್ಬ ಪ್ರಜೆ ನನಗೆ ಸತ್ಕಾರ ಮಾಡಲಿಲ್ಲ ಎನ್ನುವ ಅಸಮಾಧಾನ ಪರೀಕ್ಷಿತನನ್ನು ಕಾಡುತ್ತದೆ ಮತ್ತು ಕಲಿಯ ಪ್ರಭಾವದಿಂದ ಆತನಿಗೆ ಕೊಪ ಬಂದು ಪ್ರಮಾದವೆಸಗುತ್ತಾನೆ.  

Tuesday, August 20, 2013

Shrimad BhAgavata in Kannada -Skandha-01-Ch-18(3)

ಅಹಂ ಹಿ ಪೃಷ್ಟೋSಸ್ಯ ಗುಣಾನ್ ಭವದ್ಭಿರಾಚಕ್ಷ ಆತ್ಮಾವಗಮೋSತ್ರ ಯಾವಾನ್ ।
ನಭಃ ಪತಂತ್ಯಾತ್ಮಸಮಂ ಪತತ್ತ್ರಿಣಸ್ತಥಾ ಸಮಂ ವಿಷ್ಣುಗತಿಂ ವಿಪಶ್ಚಿತಃ ॥೨೩॥

“ಭಗವಂತನ ಕಥೆಯನ್ನು ಕೇಳುವುದು ಎಷ್ಟು ಆನಂದವೋ, ಹೇಳುವುದೂ ಅಷ್ಟೇ ಆನಂದ. ನೀವು ಪರೀಕ್ಷಿತ ರಾಜನ ಕಥೆಯನ್ನು ಕೇಳಬೇಕು ಎನ್ನುವ ಅಭಿಲಾಷೆಯನ್ನು ಮುಂದಿಟ್ಟಿದ್ದೀರಿ. ನಾನು ನನಗೆ ತಿಳಿದಷ್ಟನ್ನು ನಿಮಗೆ ಹೇಳುತ್ತೇನೆ” ಎನ್ನುತ್ತಾರೆ ಉಗ್ರಶ್ರವಸ್ಸು. ಈ ಮಾತಿನಲ್ಲಿ ಉಗ್ರಶ್ರವಸ್ಸಿನ ಸೌಜನ್ಯವನ್ನು ನಾವು ಗಮನಿಸಬೇಕು. ವೇದವ್ಯಾಸರ ಮತ್ತು ರೋಮಹರ್ಷಣರ ಒಡನಾಟದಲ್ಲಿದ್ದು, ಅನೇಕ ಪುರಾಣ ಪ್ರವಚನ ಮಾಡಿದ್ದ ಮಹಾಜ್ಞಾನಿ ಉಗ್ರಶ್ರವಸ್ಸು ಇಲ್ಲಿ ಹೇಳುತ್ತಾರೆ: “ಅನಂತ ಆಕಾಶದಲ್ಲಿ ಹೇಗೆ ಪ್ರತಿಯೊಂದು ಪಕ್ಷಿಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹಾರುತ್ತವೋ- ಹಾಗೆ, ಭಗವಂತನ ಮತ್ತು ಭಗವದ್ ಭಕ್ತರ ಅನಂತ ಮಹಿಮೆಯನ್ನು ಯಥಾಶಕ್ತಿ ನಿಮಗೆ ಹೇಳುತ್ತೇನೆ” ಎಂದು.  ಈ ಮಾತು ಪರೀಕ್ಷಿತ ರಾಜನ ಎತ್ತರವನ್ನೂ ಸೂಚಿಸುತ್ತದೆ. 
ಈ ಹಿಂದೆ ಹೇಳಿದಂತೆ ಪರೀಕ್ಷಿತ ರಾಜ ತನ್ನ ಅರವತ್ತೈದನೆ ವಯಸ್ಸಿನ ತನಕ ಧರ್ಮದಿಂದ ರಾಜ್ಯಭಾರ ಮಾಡುತ್ತಾನೆ. ಹೀಗೆ ರಾಜ್ಯಭಾರ ನಡೆಸುತ್ತಿರುವಾಗ ಒಂದು ವಿಚಿತ್ರ ಘಟನೆ ನಡೆಯುತ್ತದೆ. ಯಾರು ಕಲಿಯನ್ನು ನಿಗ್ರಹ ಮಾಡಿದನೋ, ಅಂತಹ ಪರೀಕ್ಷಿತ ರಾಜನೊಳಗೆ ಕಲಿಪ್ರವೇಶವಾಗಿ, ಅವನ ಸಾವಿಗೆ ಕಾರಣವಾಗುವ ಘಟನೆ ನಡೆಯುತ್ತದೆ!

ಏಕದಾ ಧನುರುದ್ಯಮ್ಯ ವಿಚರನ್ ಮೃಗಯಾಂ ವನೇ ।
ಮೃಗಾನನುಗತಃ ಶ್ರಾಂತಃ ಕ್ಷುಧಿತಸ್ತೃಷಿತೋ ಭೃಶಮ್ ॥೨೪॥

ಒಮ್ಮೆ ಮೃಗ ಬೇಟೆಗಾಗಿ ಪರೀಕ್ಷಿತ ಕಾಡಿಗೆ ಹೋಗುತ್ತಾನೆ. [ಬೇಟೆಯಲ್ಲಿ ಎರಡು ವಿಧ. ಒಂದು ಮೋಜಿಗಾಗಿ ಬೇಟೆ, ಇನ್ನೊಂದು ಪ್ರಜಾರಕ್ಷಣೆಗಾಗಿ ಬೇಟೆ. ಸಾಮಾನ್ಯವಾಗಿ ಕ್ಷತ್ರಿಯರು ಮೋಜಿಗಾಗಿ ಬೇಟೆಯಾಡುತ್ತಿರಲಿಲ್ಲ. ಬದಲಿಗೆ ಕಾಡು ಪ್ರಾಣಿಗಳಿಂದ ಜನರನ್ನು ರಕ್ಷಿಸುವುದಕ್ಕೋಸ್ಕರ ಬೇಟೆಯಾಡುತ್ತಿದ್ದರು]. ಹೀಗೆ ಬೇಟೆಗೆ ಹೋಗಿದ್ದ ಪರೀಕ್ಷಿತನಿಗೆ ತುಂಬಾ ಹಸಿವು ಮತ್ತು ಬಾಯಾರಿಕೆಯಾಗುತ್ತದೆ.

ಜಲಾಶಯಮಚಕ್ಷಾಣಃ ಪ್ರವಿವೇಶ ಸ ಆಶ್ರಮಮ್ ।
ದದೃಶೇ ಮುನಿಮಾಸೀನಂ ಶಾಂತಂ ಮೀಲಿತಲೋಚನಮ್ ॥೨೫॥

ಹಸಿವು ಬಾಯಾರಿಕೆಯಿಂದ ತತ್ತರಿಸಿದ ರಾಜನಿಗೆ ಎಲ್ಲಿಯೂ ಜಲಾಶಯ ಕಾಣ ಸಿಗುವುದಿಲ್ಲ. ಹಾಗಾಗಿ ಆತ ನೀರನ್ನು ಅರಸುತ್ತಾ ಸಾಗುತ್ತಿರುತ್ತಾನೆ. ಹೀಗೆ ಸಾಗುತ್ತಿರುವಾಗ ಆತನಿಗೊಂದು ಋಷಿ ಆಶ್ರಮ ಕಾಣಸಿಗುತ್ತದೆ. ತಕ್ಷಣ ರಾಜ ಆ ಆಶ್ರಮದ ಬಳಿಗೆ ಬರುತ್ತಾನೆ. ಅಲ್ಲಿ ಆತನಿಗೆ ಯಾರೂ ಕಾಣಿಸುವುದಿಲ್ಲ. ಆದರೆ ಒಬ್ಬ ಋಷಿ ಮಾತ್ರ ಆಶ್ರಮದಿಂದ ಹೊರಗೆ ಧ್ಯಾನದಲ್ಲಿ ಆತ್ಮಾನಂದವನ್ನು ಪಡೆಯುತ್ತಿರುವುದು ಕಾಣಿಸುತ್ತದೆ.

ಪ್ರತಿರುದ್ಧೇಂದ್ರಿಯಪ್ರಾಣಮನೋಬುದ್ಧಿಮುಪಾರತಮ್ ।
ಸ್ಥಾನತ್ರಯಾತ್ ಪರಂ ಪ್ರಾಪ್ತಂ ಬ್ರಹ್ಮಭೂತಮವಿಕ್ರಿಯಮ್ ॥೨೬॥

ಧ್ಯಾನ ಮಗ್ನನಾಗಿರುವ ಶಮೀಕ ಮುನಿಯ ಧ್ಯಾನ  ಸ್ಥಿತಿ ಹೇಗಿತ್ತು ಎನ್ನುವುದನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ. ಮನಸ್ಸು-ಬುದ್ಧಿ-ಇಂದ್ರಿಯಗಳನ್ನು ಸ್ಥಗನಗೊಳಿಸಿ, ತಮ್ಮ ಆತ್ಮಸ್ವರೂಪದಿಂದ ಜ್ಞಾನಾನಂದಮಯನಾದ ಭಗವಂತನನ್ನು ಅವರು ಅನುಭವಿಸುತ್ತಿದ್ದರು. ಅವರಿಗೆ ಬಾಹ್ಯ ಪ್ರಪಂಚದ ಯಾವ ಎಚ್ಚರವೂ ಇರಲಿಲ್ಲ. ಇದು ಎಚ್ಚರ-ಕನಸು-ನಿದ್ದೆಯಿಂದ ಆಚೆಗಿನ ಸ್ವರೂಪಭೂತ ಸ್ಥಿತಿ. ಇದನ್ನು ಉನ್ಮನೀಭಾವ ಎನ್ನುತ್ತಾರೆ. ಇದು ಸ್ವರೂಪಭೂತ ಆತ್ಮದಿಂದ ಸ್ವರೂಪಭೂತನಾದ ಭಗವಂತನ ವಾಸುದೇವ ರೂಪವನ್ನು ಕಾಣುವ ಅಪೂರ್ವ ಸಮಾಧಿ-ಸ್ಥಿತಿ.
ಶಮೀಕ ಅನಾಯಾಸವಾಗಿ, ನಿರ್ವೀಕಾರ-ನಿಶ್ಚಲನಾಗಿ ಭಗವಂತನಲ್ಲಿ ನೆಲೆ ನಿಂತಿರುವುದು, ಹಸಿವು-ಬಾಯಾರಿಕೆಯಿಂದ ತತ್ತರಿಸಿದ ಪರೀಕ್ಷಿತನಿಗೆ ತಿಳಿಯದಾಗುತ್ತದೆ. ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎನ್ನುವಂತೆ- ಆತನಿಗೆ “ಈ ಮುನಿ ಮನೆಗೆ ಬಂದ ಅತಿಥಿಯನ್ನು ಸತ್ಕರಿಸದೇ ಧ್ಯಾನದ ನಾಟಕವಾಡುತ್ತಾ ಕುಳಿತಿದ್ದಾನೆ” ಎನ್ನುವ ತಪ್ಪು ಕಲ್ಪನೆ ಬರುತ್ತದೆ.

ಸ ತಸ್ಯ ಬ್ರಹ್ಮಋಷೇರಂಸೇ ಗತಾಸುಮುರಗಂ ರುಷಾ ।
ವಿನಿರ್ಗಚ್ಛನ್ ಧನುಷ್ಕೋಟ್ಯಾ ನಿಧಾಯ ಪುರಮಾಗತಃ ॥೩೦॥

ಎಲ್ಲವೂ ವಿಧಿಯ ವ್ಯವಸ್ಥೆ ಎನ್ನುವಂತೆ- ತಪ್ಪು ತಿಳುವಳಿಕೆಯಿಂದ ಕೋಪಗೊಂಡ ಪರೀಕ್ಷಿತನಿಗೆ ಅಲ್ಲೇ ಸಮೀಪದಲ್ಲಿ ಒಂದು ಸತ್ತ ಹಾವು ಕಾಣಿಸುತ್ತದೆ. ಸಿಟ್ಟಿನಲ್ಲಿ ವಿವೇಕ ಕಳೆದುಕೊಂಡ ಆತ  “ಧ್ಯಾನದ ನಾಟಕವಾಡುತ್ತಿರುವ ಈ ಋಷಿಗೆ ತಕ್ಕ ಪಾಠ ಕಲಿಸಬೇಕು” ಎಂದುಕೊಂಡು, ಆ ಸತ್ತ ಹಾವನ್ನು ಎತ್ತಿ ಋಷಿಯ ಕೊರಳಿಗೆ ಹಾಕಿ ಊರಿಗೆ ಹಿಂದಿರುಗುತ್ತಾನೆ.

Friday, August 16, 2013

Shrimad BhAgavata in Kannada -Skandha-01-Ch-18(2)

ಋಷಯ ಊಚುಃ--
ತುಲಯಾಮ ಲವೇನಾಪಿ ನ ಸ್ವರ್ಗಂ ನಾಪುನರ್ಭವಮ್ ।
ಭಗವತ್ಸಂಗಿಸಂಗಸ್ಯ ಮರ್ತ್ಯಾನಾಂ ಕಿಮುತಾಶಿಷಃ ॥೧೩॥

ಸೂತರು ಕಥೆಯನ್ನು ಕೊನೆಗೊಳಿಸಿದಾಗ ಶೌನಕಾದಿಗಳು ಹೇಳುತ್ತಾರೆ: “ನೀವು ಚುಟುಕಾಗಿ ಈ ಪುಣ್ಯ ಕಥೆಯನ್ನು ಹೇಳಿ ನಮ್ಮ ಕುತೂಹಲ ಕೆರಳಿಸಿದಿರಿ. ಸಾಕು ಅನಿಸುವಂತೆ ಹೇಳದೇ, ಇನ್ನೂ ಬೇಕು ಎನಿಸುವಂತೆ ಹೇಳಿದಿರಿ. ಭಗವದ್ಭಕ್ತರ ಒಡನಾಟ ಸ್ವರ್ಗ ಸುಖಕ್ಕಿಂತ ಮೇಲು. ಅಷ್ಟೇ ಅಲ್ಲ, ಮೋಕ್ಷ ತಡವಾದರೂ ತೊಂದರೆ ಇಲ್ಲ, ಭಗವದ್ಭಕ್ತರ ಒಡನಾಟದಲ್ಲೇ ಸ್ವಲ್ಪ ಕಾಲ ಇರಬೇಕು ಎನ್ನುವ ಸಂಕಲ್ಪ ನಮ್ಮದು. ಸ್ವರ್ಗ-ಮೊಕ್ಷಗಳೇ ಜ್ಞಾನಿಗಳ ಒಡನಾಟಕ್ಕೆ ಸಾಟಿಯಲ್ಲದಿರುವಾಗ ಇನ್ನು ಐಹಿಕ ಕ್ಷುದ್ರ ಕಾಮನೆಗಳು ಯಾವ ಲೆಕ್ಕ?”  ಎಂದು.  
ಮೇಲ್ನೋಟಕ್ಕೆ ಈ ಶ್ಲೋಕ ಜ್ಞಾನದ ಮಹತ್ವ ಮತ್ತು  ಜ್ಞಾನಿಗಳ ಒಡನಾಟವನ್ನು  ಪ್ರಶಂಸೆ ಮಾಡುವ ಆಲಂಕಾರಿಕ ಶ್ಲೋಕ ಎನಿಸುತ್ತದೆ. ಏಕೆಂದರೆ ಎಲ್ಲಾ ಜ್ಞಾನಗಳಿರುವುದೂ ಮೋಕ್ಷ ಸಾಧನೆಗಾಗಿ. ಹೀಗಿರುವಾಗ ಜ್ಞಾನದ ಮುಂದೆ ಮೋಕ್ಷವೇ ಬೇಡ ಎಂದರೆ ಏನರ್ಥ?   ಆದರೆ ಇದು ಕೇವಲ ಆಲಂಕಾರಿಕ ಮಾತಲ್ಲ. ಏಕೆಂದರೆ ಇದು ಶಾಸ್ತ್ರ, ಕಾವ್ಯವಲ್ಲ. ಶಾಸ್ತ್ರದಲ್ಲಿ ಅಲಂಕಾರಕ್ಕೋಸ್ಕರ ಏನನ್ನೂ ಹೇಳುವುದಿಲ್ಲ. ಅಲ್ಲಿ ಪ್ರತಿಯೊಂದು ಮಾತಿನ ಹಿಂದೆ ಒಂದು ಪ್ರಮೇಯವಿರುತ್ತದೆ. ಇದನ್ನು ತಾತ್ಪರ್ಯ ನಿರ್ಣಯದಲ್ಲಿ ವಿವರಿಸುತ್ತಾ ಆಚಾರ್ಯ ಮಧ್ವರು ಹೇಳುತ್ತಾರೆ:

ಸಮ್ಯಕ್ ಸ್ವರೂಪಸ್ಯಾವ್ಯಕ್ತಿರಭಾವೋ ಜನನಸ್ಯ ಚ ।
ಅಲ್ಪಯತ್ನಾತ್ ತತೋ ವೃದ್ಧಿ ಹೇತೋ ಸತ್ಸಂಗತಿರ್ವರಾ ॥ ಇತಿ ವಾಯುಪ್ರೋಕ್ತೇ ।

ಮೊಕ್ಷಕ್ಕಿಂತ ಸಜ್ಜನರ ಒಡನಾಟ ಕೆಲವು ದೃಷ್ಟಿಯಿಂದ ಶ್ರೇಷ್ಠ ಎನ್ನುವುದು ಯಥಾರ್ಥ ಸಂಗತಿ. ಏಕೆಂದರೆ ಜ್ಞಾನಿಗಳ ಸಹವಾಸದಿಂದ  ಇನ್ನಷ್ಟು ಹೆಚ್ಚು ಜ್ಞಾನವನ್ನು ಗಳಿಸಿ, ಇನ್ನಷ್ಟು ಹೆಚ್ಚು ಪುಣ್ಯವನ್ನು ಗಳಿಸಿ,  ಆಮೇಲೆ ಮೋಕ್ಷಕ್ಕೆ ಹೋದರೆ ಆನಂದವೃದ್ಧಿ. ಅವಸರದಲ್ಲಿ ಹೋದರೆ ಆ ಹೆಚ್ಚಿನ ಆನಂದವನ್ನು ನಾವು ಕಳೆದುಕೊಳ್ಳಬೇಕಾಗಬಹುದು.  ನಮ್ಮ ಸ್ವರೂಪದಲ್ಲಿ ಎಷ್ಟು ಆನಂದ ತುಂಬಿಕೊಂಡಿದೆಯೋ, ಅದರ ಪೂರ್ಣ ಅಭಿವ್ಯಕ್ತಿ ಆಗಬೇಕಿದ್ದರೆ,  ಜ್ಞಾನಿಗಳಿಂದ ಪೂರ್ತಿ ಜ್ಞಾನವನ್ನು ಪಡೆಯಬೇಕು. ಈ ರೀತಿ ಹೆಚ್ಚಿನ ಜ್ಞಾನವನ್ನು ಪಡೆಯದೆಯೂ ಕೂಡಾ, ಹುಟ್ಟು-ಸಾವಿಲ್ಲದ ಮೋಕ್ಷ ಪಡೆಯಬಹುದು. ಆದರೆ ಮೋಕ್ಷದಲ್ಲಿ ಆನಂದದ ಪರಿಮಾಣವನ್ನು ಹೆಚ್ಚಿಸಿಕೊಳ್ಳಬೇಕಾದರೆ, ಜ್ಞಾನಿಗಳ ಒಡನಾಟದಿಂದ  ನಮ್ಮ ಜ್ಞಾನದ ಪರಿಮಾಣವನ್ನು ಹೆಚ್ಚಿಸಿಕೊಳ್ಳಬೇಕು. ಹೀಗೆ ‘ಜ್ಞಾನವೃದ್ಧಿಯಿಂದ ಮೋಕ್ಷದಲ್ಲಿ ಆನಂದವೃದ್ಧಿ ಇರುವುದರಿಂದ, ಮೊಕ್ಷಕ್ಕಿಂತ ಹೆಚ್ಚಾಗಿ ಜ್ಞಾನಿಗಳ ಒಡನಾಟ ಬೇಕು’ ಎನ್ನುವುದು ಮೇಲಿನ ಶ್ಲೋಕದ ತಾತ್ಪರ್ಯ. ಇದನ್ನು ಹೂವಿನ ದೃಷ್ಟಾಂತದೊಂದಿಗೆ ಹೇಳಬೇಕೆಂದರೆ: ಹೂ ಅರೆ  ಮೊಗ್ಗಿನಂತೆ ಅರಳುವ ಸ್ಥಿತಿ ಮತ್ತು ಪೂರ್ಣ ಅರಳುವ ಸ್ಥಿತಿ. ಅರೆ ಮೊಗ್ಗಿನ ಸ್ಥಿತಿ ಕೂಡಾ ವಿಕಸನ ಹೌದು. ಆದರೆ ಹೂ ಪೂರ್ಣವಾಗಿ ಅರಳಬೇಕು. ಹೀಗೆ ನಾವು  ಜ್ಞಾನಿಗಳ ಒಡನಾಟದಿಂದ ಜ್ಞಾನ ಸಾಧನೆಯ ಪೂರ್ಣತೆಯನ್ನು ಪಡೆಯಬೇಕು. ಅದು ಎಲ್ಲವುದಕ್ಕಿಂತ ಶ್ರೇಷ್ಠ.  ಜ್ಞಾನ ಎಲ್ಲಕ್ಕಿಂತ ಮಿಗಿಲು. ಅದಕ್ಕಿಂತ ಮಿಗಿಲಾದ ಸಂಪತ್ತು ಜೀವನದಲ್ಲಿಲ್ಲ. ಭಗವಂತನನ್ನು ಬಲ್ಲವರರಿಂದ ನಾವು ಕೇಳಿ ತಿಳಿಯಬೇಕು. ಹಾಗಾಗಿ “ಚುಟುಕಾಗಿ ಹೇಳದೇ ವಿಸ್ತಾರವಾಗಿ ಹೇಳಿ” ಎಂದು ಶೌನಕಾದಿಗಳು ಸೂತರನ್ನು ಪ್ರಾರ್ಥಿಸಿಕೊಳ್ಳುತ್ತಾರೆ.  

ತನ್ನಃ ಪರಂ ಪುಣ್ಯಮಸಂವೃತಾರ್ಥಮಾಖ್ಯಾನಮತ್ಯದ್ಭುತಯೋಗನಿಷ್ಠಮ್ ।
ಆಖ್ಯಾಹ್ಯನಂತಾಚರಿತೋಪಪನ್ನಂ ಪಾರೀಕ್ಷಿತಂ ಭಾಗವತಾಭಿರಾಮಮ್ ॥೧೭॥

ಭಗವಂತನ ಭಕ್ತರ ಕಥೆಯನ್ನು ಕೇಳುವುದು ಎಂದರೆ ಭಗವಂತನ ಮಹಿಮೆಯನ್ನು ಕೇಳಿದಂತೆ. ಏಕೆಂದರೆ ಭಗವಂತನ ಭಕ್ತರ ಕಥೆಯ ಹಿಂದಿರುವುದು ಅನಂತನಾದ ಭಗವಂತನೇ. ಭಗವಂತನ ಭಕ್ತರ ಮಹಿಮೆ ಎಂದರೆ ಅದು ಅವರಿಗೆ ಭಗವಂತನ ಅನುಗ್ರಹದಿಂದಲೇ  ಬಂದಿರುವುದು. “ಹೀಗಾಗಿ ನಮಗೆ ಪರೀಕ್ಷಿತನ ಕಥೆ ಎಂದರೆ ಅದು ಭಗವಂತನ ಕಥೆಯೇ ಆಗಿದೆ” ಎನ್ನುತ್ತಾರೆ ಶೌನಕಾದಿಗಳು.
ಭಾಗವತರಿಗೆ(ಭಗವದ್ಭಕ್ತರಿಗೆ) ಮಹಾ ಸಂತೋಷದ ವಿಷಯ ಎಂದರೆ- ಭಗವಂತನ ಭಕ್ತಿಯಿಂದ ಎತ್ತರಕ್ಕೇರಿದ ಜ್ಞಾನಿಗಳ ಕಥೆ ಕೇಳುವುದು. “ ಈ ನೆಲೆಯಿಂದ ನಮಗೆ ಪರೀಕ್ಷಿತ ರಾಜ ಕೊನೆಯ ಕಾಲದಲ್ಲಿ ಎಲ್ಲ ಸಂಗವನ್ನು ತೊರೆದು, ದೇಹತ್ಯಾಗ ಮಾಡಿದ ಘಟನೆಯನ್ನು ವಿವರವಾಗಿ ಹೇಳಿ” ಎಂದು ಉಗ್ರಶ್ರವಸ್ಸರನ್ನು ಶೌನಕಾದಿಗಳು ಪ್ರಾರ್ಥಿಸಿಕೊಳ್ಳುತ್ತಾರೆ.

ಸೂತ ಉವಾಚ--
ಅಹೋ ವಯಂ ಜನ್ಮಭೃತೋ ಮಹಾತ್ಮನ್ ವೃದ್ಧಾನುವೃತ್ತ್ಯಾSಪಿ ವಿಲೋಮಜಾತಾಃ ।
ದೌಷ್ಕುಲ್ಯಮಾಧಿಂ ವಿಧುನೋತಿ ಶೀಘ್ರಂ ಮಹತ್ತಮಾನಾಮಭಿಧಾನಯೋಗಃ ॥೧೮॥

ಶೌನಕಾದಿಗಳ ಮಾತನ್ನು ಕೇಳಿ ಸೂತರು ಹೇಳುತ್ತಾರೆ: “ನಿಜ, ತುಂಬಾ ಎತ್ತರಕ್ಕೇರಿದವರ ಬದುಕಿನ ಬಿತ್ತರವನ್ನು ಕೇಳುವುದರಿಂದ ನಮ್ಮಲ್ಲಿರುವ ಮನೋರೋಗ ಪರಿಹಾರವಾಗುತ್ತದೆ” ಎಂದು. ನಮಗೆ ತಿಳಿದಂತೆ ಎಲ್ಲಾ ಸಮಸ್ಯೆಗೂ ಮೂಲ ಕಾರಣ ಮನೋರೋಗ. ಹಾಗಾಗಿ ಎಲ್ಲಾ ಸಮಸ್ಯೆಗಳಿಗೂ ಏಕಮಾತ್ರ ಔಷಧ ಎಂದರೆ ಬದುಕಿನಲ್ಲಿ ಎತ್ತರಕ್ಕೇರಿದವರ ಜೀವನ ಕಥನವನ್ನು ಕೇಳಿ ಕಲಿಯುವುದು. ಅದರಿಂದ ನಮ್ಮ ಬದುಕು ಸುಭದ್ರವಾಗುತ್ತದೆ.  ಅದರಲ್ಲೂ ಮುಖ್ಯವಾಗಿ ಹೀನ ಕುಲದಲ್ಲಿ ಹುಟ್ಟಿದವರು ಈ ಕಥೆಯನ್ನು ಮೊದಲು ಕೇಳಬೇಕು. ಏಕೆಂದರೆ ಹೀನ ಕುಲ ಎಂದರೆ ಭಗವಂತನ ಅರಿವು ಇಲ್ಲದಿರುವುದು. ಆ ಅರಿವು ಬಂದಾಗ ಅವರು ಎತ್ತರಕ್ಕೇರುತ್ತಾರೆ.

ಕುತಃ ಪುನರ್ಗೃಣತೋ ನಾಮ ತಸ್ಯ ಮಹತ್ತಮೈಕಾಂತಪರಾಯಣಸ್ಯ ।
ಯೋSನಂತಶಕ್ತಿರ್ಭಗವಾನನಂತೋ ಮಹದ್ಗುಣತ್ವಾದ್ ಯಮನಂತಮಾಹುಃ ॥೧೯॥

ಭಗವಂತನನ್ನು ಅರಿತವರ ಬಗೆಗೆ ಕೇಳಿದಾಗಲೇ ನಾವು ಮಾನಸಿಕ ರೋಗದಿಂದ ಸ್ವಸ್ತರಾಗುತ್ತೇವೆ. ಹೀಗಿರುವಾಗ ಭಗವಂತನ ನಾಮಸ್ಮರಣೆಯನ್ನು ಭಕ್ತಿಯಿಂದ ಮಾಡಿದರೆ ಯಾವ ಮನೋರೋಗ ಬರಲು ಸಾಧ್ಯ? ಮಹಾತ್ಮರಿಗೂ ಏಕಮಾತ್ರ ಆಶ್ರಯನಾದ ಭಗವಂತನನ್ನು ನೆನೆಯುವವರಿಗೆ ಯಾವ ಚಿಂತೆ ಇರಲು ಸಾಧ್ಯ? ಭಗವಂತ ದೇಶ-ಕಾಲಗಳಿಂದ ಅನಂತ; ಆತ ಅನಂತ ಗುಣಪೂರ್ಣ. ಇಂತಹ ಅನಂತಶಕ್ತಿಯನ್ನು ಚಿಂತಿಸಿದವರಿಗೆ ಬದುಕಿನಲ್ಲಿ ಯಾವ ಭಯ ಕಾಡುವುದು ಸಾಧ್ಯ?  “ಹಾಗಾಗಿ ಭಗವಂತನ ಮಹಿಮೆಯನ್ನೊಳಗೊಂಡ ಪರೀಕ್ಷಿತ ರಾಜನ ಮಹಿಮೆಯನ್ನು ನಾನು ನಿಮಗೆ ಹೇಳುತ್ತೇನೆ”. ಎನ್ನುತ್ತಾರೆ ಸೂತರು.

ಯತ್ರಾನುರಕ್ತಾಃ ಸಹಸೈವ ಧೀರಾ ವ್ಯಪೋಹ್ಯ ದೇಹಾದಿಷು ಸಂಗಮೂಢಂ ।
ವ್ರಜಂತಿ ತತ್ಪಾರಮಹಂಸ್ಯಸತ್ಯಂ ಯಸ್ಮಿನ್ನಹಿಂಸೋಪರಮಶ್ಚ ಧರ್ಮಃ ॥೨೨॥

ನಮಗೆ ಭಗವಂತನ ಪರಿಚಯ ಇಲ್ಲದಿರುವುದರಿಂದ ನಮ್ಮ ಮನಸ್ಸು ಆತನೆಡೆಗೆ ವಾಲುವುದಿಲ್ಲ. ಆದರೆ ಒಮ್ಮೆ ಅನುರಕ್ತಿ ಬಂದು ರುಚಿ ಗೊತ್ತಾದರೆ, ಆಗ ಇತರ ಲೌಕಿಕ ವಿಚಾರಗಳು ಭಗವಂತನ ಮುಂದೆ ನಶ್ವರ ಎನ್ನುವುದು ತಿಳಿಯುತ್ತದೆ. ಸಾಮಾನ್ಯವಾಗಿ ನಮ್ಮ ಮನಸ್ಸು ನಮ್ಮ ದೇಹದ ಮೂಲಕ ನಾವು ಪಡೆಯುವ ಸುಖ-ಭೋಗವೇ ಸರ್ವಸ್ವ ಎಂದು ತಿಳಿದು ಅದರಲ್ಲೇ ಗಟ್ಟಿಯಾಗಿ ಕುಳಿತುಬಿಟ್ಟಿರುತ್ತದೆ. ‘ಧೀರ’ನಾದವನು ಆ ಸ್ಥಿತಿಯಿಂದ ಈಚೆ ಬಂದು ಭಗವಂತನನ್ನು ಅರಿಯುತ್ತಾನೆ.
ಈ ಶ್ಲೋಕದಲ್ಲಿ ಬಳಸಿರುವ  ‘ಧೀರ’ ಎನ್ನುವ ಪದಕ್ಕೆ ಎರಡು ಅರ್ಥಗಳಿವೆ. ಜ್ಞಾನದಲ್ಲಿ ರತಿ ಉಳ್ಳವನು, ‘ತಿಳಿದುಕೊಳ್ಳಬೇಕು’ ಎನ್ನುವ ಛಲ ಉಳ್ಳವನು ಧೀರ. ಈ ರೀತಿ ಛಲದಿಂದ ಆಸಕ್ತಿ ಬೆಳೆಸಿಕೊಂಡ ತಕ್ಷಣ ಎಲ್ಲವೂ ತಿಳಿಯುವುದಿಲ್ಲ. ಅಲ್ಲಿ ಅನೇಕ ಸಮಸ್ಯೆಗಳು ಬರುತ್ತವೆ. ಪ್ರತಿರೋಧ ಬರಬಹುದು. ಜನ ಪರಿಹಾಸ್ಯ ಮಾಡಬಹುದು. ಆಗ ದುರ್ಬಲನಾಗದೆ ಮುನ್ನೆಡೆಯುವ ಧೈರ್ಯ ಉಳ್ಳವನು ಧೀರ.
ಇಲ್ಲಿ ಭಗವಂತನನ್ನು “ಪಾರಮಹಂಸ್ಯಸತ್ಯಂ” ಎನ್ನುವ ವಿಶೇಷಣ ಬಳಸಿ ಸಂಬೋಧಿಸಿದ್ದಾರೆ. ಪರಮಹಂಸರು ಎಂದರೆ ಸಂಸಾರದಲ್ಲಿ ಸರ್ವಸ್ವವನ್ನೂ ತ್ಯಾಗ ಮಾಡಿದವರು. ಭಗವಂತ ಇಂತಹ ‘ಪರಮಹಂಸರಿಗೆ ಸುಲಭವಾಗಿ ಗೋಚರನಾಗುತ್ತಾನೆ. ನಮ್ಮಲ್ಲಿ ಕೂಡಾ ಆ ಪರಮಹಂಸರ ಕಿಂಚಿತ್ ನಡೆ ಇರಬೇಕು. ಆಗ ಆ ಸದ್ಗುಣಪೂರ್ಣ(ಸತ್ಯಃ) ಭಗವಂತನ ಅನುಗ್ರಹವಾಗುತ್ತದೆ. ನಾವು ತಪ್ಪಿನ ಕಡೆ ನಮ್ಮ ಮನಸ್ಸು ಹರಿಯದಂತೆ ತಡೆದು, ಅದನ್ನು ಭಗವಂತನೆಡೆಗೆ ಹರಿಸಬೇಕು.
ಪರಮಹಂಸರು ಅಂದರೆ ಎಂತವರು ಎನ್ನುವುದನ್ನು ವಿವರಿಸುತ್ತಾ ಸೂತರು ಹೇಳುತ್ತಾರೆ: “ಯಸ್ಮಿನ್ನಹಿಂಸೋಪರಮಶ್ಚ ಧರ್ಮಃ” ಎಂದು. ಪರಮಹಂಸರಲ್ಲಿ ಮುಖ್ಯವಾಗಿ ಎರಡು ವಿಶೇಷ ಗುಣಗಳಿರುತ್ತವೆ. ಅವುಗಳೆಂದರೆ ಅಹಿಂಸೆ ಮತ್ತು ಉಪರಮ.

ಯಮನಿಯಮಗಳಲ್ಲಿ ಮೊದಲನೆಯದು ‘ಅಹಿಂಸೆ’. ಅಹಿಂಸೆ ಎನ್ನುವುದು ಭಗವಂತನನ್ನು ಆರಾಧಿಸುವ ಅಷ್ಟಪುಷ್ಪಗಳಲ್ಲಿ ಮೊದಲನೆಯದು. [ಅಷ್ಠ ಪುಷ್ಪಗಳು: ಅಹಿಂಸಾ, ದಮ, ದಯಾ, ಕ್ಷಮಾ, ಶಾಂತಿ, ತಪ, ಧ್ಯಾನ ಮತ್ತು ಸತ್ಯ]  ಇದಕ್ಕಾಗಿ ಸನ್ಯಾಸಿಗಳು “ಸಮಸ್ತ ಪ್ರಾಣಿಗಳಿಗೂ ನಾನು ಅಭಯದಾನ ಮಾಡಿದ್ದೇನೆ, ನಾನು ಯಾರಿಗೂ ಹಿಂಸೆ ಮಾಡುವುದಿಲ್ಲ” ಎಂದು ಪ್ರತಿಜ್ಞೆ ಮಾಡುತ್ತಾರೆ. ಇದು ಅವರ ಜೀವನದ ಪ್ರತಿಜ್ಞೆ. ನಾವೂ ಕೂಡಾ ನಮ್ಮ ಜೀವನದಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಹಿಂಸಾ ವ್ರತವನ್ನು ಪಾಲಿಸಬೇಕು. ಅಹಿಂಸೆಯ ಮಹತ್ವವನ್ನು ಪುರಾಣದಲ್ಲಿ ವರ್ಣಿಸುತ್ತಾ ಹೇಳುತ್ತಾರೆ: “ಹೇಗೆ ಆನೆಯ ಹೆಜ್ಜೆಯೊಳಗೆ ಎಲ್ಲಾ ಪ್ರಾಣಿಗಳ ಹೆಜ್ಜೆ ಅಂತರ್ಭೂತವಾಗುತ್ತದೋ ಹಾಗೆ, ಅಹಿಂಸೆಯ ಒಳಗೆ ಎಲ್ಲಾ ಧರ್ಮಗಳೂ ಅಂತರ್ಭೂತವಾಗುತ್ತವೆ” ಎಂದು.  ಹಾಗಾಗಿ ಅಹಿಂಸೆಯ ಧೀಕ್ಷೆ ಎಂದರೆ ಅದು ಎಲ್ಲಾ ಧರ್ಮಗಳ ಧೀಕ್ಷೆ. ಎರಡನೇ ಗುಣ- ‘ಉಪರಮ’. ಉಪರಮ ಅಂದರೆ ಉತ್ಕೃಷ್ಟನಾದ ಭಗವಂತನಲ್ಲೇ ಆನಂದವನ್ನು ಅನುಭವಿಸುವುದು. ನಿರಂತರ ಭಗವಂತನ ಚಿಂತನೆಯಲ್ಲಿ ಆಸಕ್ತಿ  ಬೆಳೆಸಿಕೊಳ್ಳುವುದು. ಹೀಗೆ ಅಹಿಂಸೆ ಮತ್ತು ಉಪರಮ ಎನ್ನುವ ಎರಡು ಮುಖ್ಯಗುಣಗಳು ಪರಮಹಂಸರಲ್ಲಿರುವುದರಿಂದ  ಭಗವಂತ ಅವರಿಗೆ ಬಹಳ ಬೇಗ ಒಲಿಯುತ್ತಾನೆ.

Sunday, August 4, 2013

Shrimad BhAgavata in Kannada -Skandha-01-Ch-18(1)

ಅಷ್ಟಾದಶೋSಧ್ಯಾಯಃ

ಶೌನಕಾದಿಗಳಿಗೆ ಕಥೆಯನ್ನು ಹೇಳುತ್ತಿರುವ ಸೂತರು ಮುಂದೆ ಕಥೆಯನ್ನು ತುಂಬಾ ಚುಟುಕು ಮಾಡುತ್ತಾರೆ.  ಚುಟುಕು ಮಾಡಿ, ಕುತೂಹಲ ಕೆರಳಿಸಿ ಮತ್ತೆ ಆ ಕಥೆಯನ್ನು ವಿಸ್ತಾರ ಮಾಡುತ್ತಾರೆ. ಇದೊಂದು ಪ್ರಾಚೀನ ಗ್ರಂಥಗಳಲ್ಲಿನ  ತಂತ್ರ. ಚುಟುಕು ಮಾಡಿ ಹೇಳಿದಾಗ ಶಿಷ್ಯರು “ವಿವರವಾಗಿ ಹೇಳಿ” ಎಂದು ಕೇಳಿದರೆ ಮಾತ್ರ ವಿಸ್ತಾರವಾದ ವಿವರಣೆ, ಇಲ್ಲದಿದ್ದರೆ ಇಲ್ಲ.
ಪರೀಕ್ಷಿತನಿಗೆ ಮೂವತ್ತಾರನೇ ವಯಸ್ಸಿನಲ್ಲಿ ಪಟ್ಟಾಭಿಷೇಕವಾಗಿತ್ತು. ಅಲ್ಲಿಂದ ಮುಂದೆ ಸುಮಾರು ಮೂವತ್ತು ವರ್ಷಗಳ ಕಾಲ ಧರ್ಮಮಯವಾದ ಆಡಳಿತ ನಡೆಸಿದ ಪರೀಕ್ಷಿತ. ನಂತರ ಸುಮಾರು ಅರವತ್ತೈದನೇ ವಯಸ್ಸಿನಲ್ಲಿ ಏನು ನಡೆಯಿತು ಎನ್ನುವುದನ್ನು ಬಹಳ ಚುಟುಕಾಗಿ ಇಲ್ಲಿ ವಿವರಿಸಲಾಗಿದೆ. ಭಗವಂತನ ಅನುಗ್ರಹದಿಂದಾಗಿ ಅಶ್ವತ್ಥಾಮನ ಬ್ರಹ್ಮಾಸ್ತ್ರದಿಂದಲೂ ಪೀಡಿತನಾಗದೆ, ಭಗವಂತನ ರಕ್ಷೆಯಿಂದ ಹುಟ್ಟಿ ಬಂದವ ಆತ. ಇಂತಹ ಪರೀಕ್ಷಿತ- ಋಷಿ ಶಾಪದಿಂದ ಸಾಯಬೇಕಾದ ಪ್ರಸಂಗ ಬರುತ್ತದೆ. ಆದರೆ ಆತ ಈ ಸಂದರ್ಭದಲ್ಲೂ ಕೂಡಾ  ಯಾವುದಕ್ಕೂ ಹೆದರದೇ, ಭಗವನ್ಮಯನಾಗಿ ತನ್ನ ಕೊನೆಯ ಕ್ಷಣವನ್ನು ಕಳೆದ ಎನ್ನುತ್ತಾರೆ ಸೂತರು.  ಆ ಕೊನೆಯ ಕ್ಷಣದಲ್ಲಿ ಆತನ ಮನಃಸ್ಥಿತಿ ಹೇಗಿತ್ತು ಎನ್ನುವುದನ್ನು ಸೂತರು ಇಲ್ಲಿ ಒಂದೇ ಶ್ಲೋಕದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.

ಸೂತ ಉವಾಚ--
ಉತ್ಸೃಜ್ಯ ಸರ್ವತಃ ಸಂಗಂ ವಿಜ್ಞಾನಾರ್ಜಿತಸಂಸ್ಥಿತಿಃ ।
ವೈಯಾಸಕೇರ್ಜಹೌ ಶಿಷ್ಯೋ ಗಂಗಾಯಾಂ ಸ್ವಕಲೇವರಮ್ ॥೩॥

ಪರೀಕ್ಷಿತನಲ್ಲಿ ಇಡೀ ದೇಶದ ಆಡಳಿತವಿತ್ತು, ದೊಡ್ಡ ಪರಿವಾರವಿತ್ತು, ದಾಸ ದಾಸಿಯರಿಂದ ಕೂಡಿದ ವಿಲಾಸಿ ಜೀವನ ಅವನದಾಗಿತ್ತು. ಇಷ್ಟೆಲ್ಲಾ  ಇದ್ದರೂ ಕೂಡಾ, ಆತ ಯಾವ ಆವೇಶಕ್ಕೂ ಒಳಗಾಗದೇ ನಿರ್ಲಿಪ್ತನಾಗಿ ನಿಂತುಬಿಟ್ಟನಂತೆ. ಅರಮನೆಯ ಸುಖ-ಭೋಗ ಇದ್ದೂ ಕೂಡಾ, ಅವನಿಗೆ ಯಾವುದರ ಸಂಗವೂ ಇಲ್ಲದೇ ನಿರ್ಲಿಪ್ತನಾಗಲು ಸಾಧ್ಯವಾಯಿತು. ಏಕೆಂದರೆ- “ಅವನ ವ್ಯಕ್ತಿತ್ವ ಅಂತಹದ್ದು-ಆತ ವಿಜ್ಞಾನಿಯಾದ” ಎನ್ನುತ್ತಾರೆ ಸೂತರು. ‘ವಿಜ್ಞಾನ’ ಎನ್ನುವ ಪದಕ್ಕೆ ಸಂಸ್ಕೃತದಲ್ಲಿ ಅನೇಕ ಅರ್ಥಗಳಿವೆ. ಈ ಸಂದರ್ಭದಲ್ಲಿ ಒಂದು ವಿಶಿಷ್ಠ ಅರ್ಥವನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ವಿವರಿಸುತ್ತಾ ಹೇಳುತ್ತಾರೆ: “ವಿಜ್ಞಾನಮಾತ್ಮಯೋಗ್ಯಂ ಸ್ಯಾದ್ ಜ್ಞಾನಂ ಸಾಧಾರಣಂ ಸ್ಮೃತಂ”   ಎಂದು. ಅಂದರೆ ಪ್ರತಿಯೊಬ್ಬ ವ್ಯಕ್ತಿ ತನ್ನ ಸಾಧನೆಯಿಂದ ಪಡೆಯುವ ಭಗವಂತನ ಬಗೆಗಿನ ಅಸಾಧಾರಣ ಸಿದ್ಧಿ(Individual wisdom) ವಿಜ್ಞಾನ. ಪರೀಕ್ಷಿತ  ಭಗವಂತನ ವಿಷಯಿಕವಾದ ಅಸಾಧಾರಣ ಸಾಧನೆಯಿಂದ ಸಂಸ್ಥಿತಿಯನ್ನು ಗಳಿಸಿದ. ಭಗವಂತನ ಬಗೆಗಿನ ಅಸಾಧಾರಣ ಅರಿವಿನಿಂದಾಗಿ ಆತನಿಗೆ ತನ್ನ ಮನಸ್ಸನ್ನು ಭಗವಂತನಲ್ಲೇ ನೆಲೆಸುವಂತೆ ಮಾಡಲು(ಸಂಸ್ಥಿತಿ) ಸಾಧ್ಯವಾಯಿತು. ಈ ಸಂದರ್ಭದಲ್ಲಿ ಪ್ರಾಪಂಚಿಕ ವಿಷಯ ಅವನನ್ನು ಕಾಡಲಿಲ್ಲ. ಎಲ್ಲಾ ಲೇಪಗಳನ್ನು ಕಳಚಿಕೊಂಡು ಭಗವಂತನಲ್ಲೇ ಮನಸ್ಸನ್ನು ನೆಟ್ಟು ದೇಹತ್ಯಾಗ ಮಾಡಿದ ಪರೀಕ್ಷಿತ.
ಮನೋಭಿಮಾನಿ ದೇವತೆಯಾದ ರುದ್ರ ದೇವರ ಅವತಾರವಾದ ಶುಕಾಚಾರ್ಯರ ಶಿಷ್ಯನಾದ ಪರೀಕ್ಷಿತ ಆ ಎತ್ತರಕ್ಕೇರಿರುವುದು ಆಶ್ಚರ್ಯವಲ್ಲ. ಏಕೆಂದರೆ ಗುರುವಿನ ಅನುಗ್ರಹ, ಜೀವಯೋಗ್ಯತೆ, ಎರಡೂ ಆತನನ್ನು ಆ ಎತ್ತರಕ್ಕೇರಿಸಿತು. ಈ ಸ್ಥಿತಿಯಲ್ಲಿ  ಗಂಗಾ ನದಿಯ ಪ್ರಾಕಾರದಲ್ಲೇ ತನ್ನ ದೇಹತ್ಯಾಗ ಮಾಡಿದ ಪರೀಕ್ಷಿತ.

ಉಪವರ್ಣಿತಮೇತದ್ ವಃ  ಪುಣ್ಯಂ ಪಾರೀಕ್ಷಿತಂ ಮಯಾ ।
ವಾಸುದೇವಕಥೋಪೇತಮಾಖ್ಯಾನಂ ಯದಪೃಚ್ಛಥ ॥೯॥


 “ಪುಣ್ಯಕರವಾದ ಪರೀಕ್ಷಿತ ರಾಜನ ಬದುಕಿನ ಬಿತ್ತರವನ್ನು ನಿಮಗೆ ವಿವರಿಸಿದೆ” ಎಂದು ಹೇಳಿದ ಸೂತರು, ಪರೀಕ್ಷಿತ ರಾಜನ ಪುಣ್ಯ ಕಥನವನ್ನು ಚುಟುಕಾಗಿ ಹೇಳಿ ಮುಗಿಸುತ್ತಾರೆ. ಹೀಗೆ ಸಂಕ್ಷಿಪ್ತವಾಗಿ ಕಥೆಯನ್ನು ಕೊನೆಗೊಳಿಸಿ ಶೌನಕಾದಿಗಳಲ್ಲಿ ಕುತೂಹಲ ಕೆರಳಿಸುತ್ತಾರೆ. 

Saturday, August 3, 2013

Shrimad BhAgavata in Kannada -Skandha-01-Ch-17(2)

ರಾಜೋವಾಚ--
ಧರ್ಮಂ ಬ್ರವೀಷಿ ಧರ್ಮಜ್ಞ ಧರ್ಮೋSಸಿ ವೃಷರೂಪಧೃಕ್ ।
ಯದಧರ್ಮಕೃತಃ ಸ್ಥಾನಂ ಸೂಚಕಸ್ಯಾಪಿ ತದ್ ಭವೇತ್ ॥೨೧॥

ಅಥವಾ ದೇವಮಾಯಾಯಾ ನೂನಂ ಗತಿರಗೋಚರಾ ।
ಚೇತಸೋ ವಚಸಶ್ಚಾಪಿ ಭೂತಾನಾಮಿತಿ ನಿಶ್ಚಯಃ ॥೨೨॥

ಧ್ಯಾನದ ಮೂಲಕ ವಿಷಯ ಗ್ರಹಣ ಮಾಡಿದ ಪರೀಕ್ಷಿತ ಹೇಳುತ್ತಾನೆ: “ತಿಳಿಯಿತು! ನೀನು ಗೂಳಿಯ ರೂಪದಲ್ಲಿರುವ ಧರ್ಮದೇವತೆ. ನೀನು ಧರ್ಮವನ್ನೇ ಮಾತನಾಡಿದೆ. ನಿನ್ನ ಬಾಯಿಂದ ಅಧರ್ಮದ ಮಾತು ಬರಲಾರದು” ಎಂದು. ಏಕೆ ಧರ್ಮ ದೇವತೆ ಈ ರೀತಿ ಒಗಟಿನಂತೆ ಮಾತನಾಡಿದ ಎನ್ನುವುದನ್ನು ಇಲ್ಲಿ ಪರೀಕ್ಷಿತ ವಿಶ್ಲೇಷಿಸಿದ್ದಾನೆ.  “ಯದಧರ್ಮಕೃತಃ ಸ್ಥಾನಂ ಸೂಚಕಸ್ಯಾಪಿ ತದ್ ಭವೇತ್” ಅಂದರೆ “ಮಾಡಿದವರ ಪಾಪ ಆಡಿದವರ  ಬಾಯಲ್ಲಿ” ಎಂದಂತೆ. “ಅನ್ಯರು ಮಾಡಿದ ಪಾಪಕಾರ್ಯವನ್ನು ಎತ್ತಿ ಹೇಳಬಾರದು ಎನ್ನುವ ಉದ್ದೇಶದಿಂದ ನೀನು ಈ ರೀತಿ ಮಾತನಾಡಿದೆ. ಅಥವಾ: ದೇವರ ಲೀಲೆ ಅಪಾರ, ಯಾರಿಗೆ ಯಾವ ಸಮಯದಲ್ಲಿ ಏನಾಗುತ್ತದೆ, ದೇವರ ಚಿತ್ತ ಏನು ಎನ್ನುವುದು ಅಗೋಚರ. ಅದಕ್ಕಾಗಿ ನೀನು ಹೀಗೆ ಈ ರೀತಿ ಮಾತನಾಡಿದೆ. ನನಗೀಗ ಸತ್ಯ ತಿಳಿಯಿತು” ಎನ್ನುತ್ತಾನೆ ಪರೀಕ್ಷಿತ.

ತಪಃ ಶೌಚಂ ದಯಾ ಸತ್ಯಮಿತಿ ಪಾದಾಃ ಕೃತೇ ಕೃತಾಃ ।
ಅಧರ್ಮಾಂಗೈಸ್ತ್ರಯೋ ಭಗ್ನಾಃ ಸ್ಮಯಸಂಗಮದೈಸ್ತವ ॥೨೩॥

ಇದಾನೀಂ ಧರ್ಮ ಪಾದಸ್ತೇ ಸತ್ಯಂ ನಿರ್ವರ್ತತೇ ಯತಃ ।
ತಂ ಜಿಘೃಕ್ಷತ್ಯಧರ್ಮೋSಯಮನೃತೇನೈಧಿತಃ ಕಲಿಃ ॥೨೪॥

“ನೀನು ಧರ್ಮಪುರುಷ; ನಿನಗೆ ತಪಸ್ಸು-ಶೌಚ-ದಯಾ-ಸತ್ಯ ಎನ್ನುವ ನಾಲ್ಕು ಪಾದಗಳು. ಕೃತಯುಗದಲ್ಲಿ ನಿನಗೆ ಈ ನಾಲ್ಕೂ ಪಾದಗಳಿದ್ದವು. ಕೃತಯುಗದ ಕೊನೆಯಲ್ಲಿ ತಪಸ್ಸು ಹೋಗಿ, ಕೇವಲ ಮೂರು ಪಾದಗಳು ಉಳಿದವು. ದ್ವಾಪರದ ಕೊನೆಯಲ್ಲಿ ತಪಸ್ಸು-ಶೌಚ-ದಯೆ ಈ ಮೂರೂ ಪಾದಗಳು ಹೊರಟು ಹೋದವು. ತಪಸ್ಸಿನ ಜಾಗದಲ್ಲಿ ಅಹಂಕಾರ ಬೆಳೆಯಿತು, ಶೌಚ ಹೊರಟುಹೋಗಿ ಸಂಗ ಬೆಳೆಯಿತು, ದಯೆ ಹೋಗಿ ಮದ ಬಂತು. ಹೀಗೆ ಧರ್ಮದ ಮೂರು ಕಾಲುಗಳು ಹೊರಟುಹೋಗಿ, ಅಧರ್ಮದ ಮೂರು ಪಾದಗಳು(ಅಹಂಕಾರ-ಸಂಗ-ಮದ) ಬೆಳೆದವು. ಇಂದು ನೀನು ಕೇವಲ ಒಂದು ಪಾದದಲ್ಲಿ ನಿಂತಿದ್ದೀಯ. ಅದೇ ಪ್ರಾಮಾಣಿಕತೆ(ಸತ್ಯ). ತಪಸ್ಸಿಲ್ಲ, ಶೌಚವಿಲ್ಲ, ದಯೆಯಿಲ್ಲ. ಆದರೂ ಎಲ್ಲೋ ಒಂದು ಮೂಲೆಯಲ್ಲಿ ನಾವು ಪ್ರಾಮಾಣಿಕರಾಗಿರಬೇಕು ಎನ್ನುವ ಆಸೆ ಇಂದೂ ಮನುಷ್ಯನಲ್ಲಿದೆ. ಇಲ್ಲಿ ನಿಂತಿರುವವನು ಕಲಿಪುರುಷ. ಅವನು ನಿನ್ನ ನಾಲ್ಕನೇ ಪಾದವನ್ನೂ ಮುರಿಯುವುದಕ್ಕಾಗಿ ನಿಂತಿದ್ದಾನೆ. ಸತ್ಯದ ಕಾಲನ್ನು ಮುರಿದು, ಸುಳ್ಳಿನ ಕಾಲನ್ನು ಜೋಡಿಸುವ ಸಂಕಲ್ಪ ಆತನದು. ಆದರೆ ನಾನು ಹಾಗಾಗಲು ಬಿಡುವುದಿಲ್ಲ. ಪರೀಕ್ಷಿತನ ಆಡಳಿತದಲ್ಲಿ ಇಲ್ಲಿ ಮತ್ತೆ ಕೃತಯುಗ ಮರಳಬೇಕು” ಎಂದು ಹೇಳಿದ ಪರೀಕ್ಷಿತ, “ನಿನ್ನ ತಲೆಯನ್ನು ಕತ್ತರಿಸುತ್ತೇನೆ” ಎಂದು ಖಡ್ಗ ಹಿಡಿದು ಕಲಿಯತ್ತ ಮುನ್ನುಗ್ಗುತ್ತಾನೆ.
ಪರೀಕ್ಷಿತ ಖಡ್ಗ ಹಿಡಿದು ಮುನ್ನುಗ್ಗುತ್ತಿರುವುದನ್ನು ಕಂಡ ಕಲಿ ಆತನಿಗೆ ಶರಣಾಗುತ್ತಾನೆ. “ ಕ್ಷಮಿಸು ರಾಜ, ಇದು ನನ್ನ ಯುಗ, ಅದಕ್ಕಾಗಿ ನಾನು ಬಂದೆ. ಇಲ್ಲಿ ನನ್ನದೇನೂ ತಪ್ಪಿಲ್ಲ. ನನ್ನ ಯುಗದಲ್ಲಿ ನಾನೇನೂ ಮಾಡಬಾರದು ಎಂದರೆ ನನಗೆ ಅಸ್ತಿತ್ವವೆಲ್ಲಿ?  ದೀನವತ್ಸಲನಾದ ನೀನು ನನ್ನನ್ನು ಕ್ಷಮಿಸಿ ನನಗೊಂದು ನೆಲೆ ಕೊಡು” ಎಂದು ಕೇಳುತ್ತಾನೆ ಕಲಿ.

ರಾಜೋವಾಚ--
ನ ವರ್ತಿತವ್ಯಂ ತದಧರ್ಮಬಂಧೋ ಧರ್ಮೇಣ ಸತ್ಯೇನ ಚ ವರ್ತಿತವ್ಯೇ ।
ಬ್ರಹ್ಮಾವರ್ತೇ ಯತ್ರ ಯಜಂತಿ ಯಜ್ಞೈಃ ಯಜ್ಞೇಶ್ವರಂ ಬ್ರಹ್ಮವಿತಾನಯಜ್ಞಾಃ ॥೩೨॥

ಕಲಿಯ ಮಾತನ್ನು ಆಲಿಸಿದ ಪರೀಕ್ಷಿತ ಹೇಳುತ್ತಾನೆ: “ಅಧರ್ಮದ ಸ್ನೇಹಿತ ನೀನು; ಹಾಗಾಗಿ ನನ್ನ ದೇಶದಲ್ಲಿ ನಿನಗೆ ಆಶ್ರಯವಿಲ್ಲ. ಈ ದೇಶದ ಹೆಸರೇ ಬ್ರಹ್ಮಾವರ್ತ. ಇದು ಬ್ರಹ್ಮರ್ಷಿಗಳು ಅವತರಿಸಿದ ನೆಲ. ಇಲ್ಲಿ ಧರ್ಮ ಮತ್ತು ಸತ್ಯದ ನಿರಂತರ ಪ್ರವೃತ್ತಿ ಆಗಬೇಕು ಎನ್ನುವುದು ಭಗವಂತನ ಸಂಕಲ್ಪ. ಯಜ್ಞೇಶ್ವರನಾದ ಭಗವಂತನನ್ನು ಯಜ್ಞದಿಂದ ಆರಾಧಿಸುವ ಪದ್ಧತಿ ಬ್ರಹ್ಮಾವರ್ತ ಭಾರತದಲ್ಲಲ್ಲದೇ ಇನ್ಯಾವ ರಾಷ್ಟ್ರದಲ್ಲೂ ಇಲ್ಲ” ಎಂದು.

ಇಲ್ಲಿ ಯಜ್ಞದ ಕುರಿತು ಹೇಳುವಾಗ ‘ಬ್ರಹ್ಮಯಜ್ಞ ಮತ್ತು ವಿತಾನಯಜ್ಞ’ ಎನ್ನುವ ಪದಗಳನ್ನು ಪ್ರಯೋಗಿಸಿದ್ದಾರೆ. ಇದು ಎರಡು ವಿಧದ ಯಜ್ಞವನ್ನು ಸೂಚಿಸುತ್ತದೆ. ಬ್ರಹ್ಮಯಜ್ಞ ಎಂದರೆ ಧ್ಯಾನದ ಮುಖೇನ ಭಗವಂತನನ್ನು ಆರಾಧಿಸುವ ಮಾನಸಯಜ್ಞ;  ವಿತಾನಯಜ್ಞ ಎಂದರೆ ನಾನಾ ವಿಧದ ಕರ್ಮಾನುಷ್ಠಾನದ ಮುಖೇನ, ಅಗ್ನಿಮುಖದಲ್ಲಿ ಆಹುತಿ ಕೊಟ್ಟು ಭಗವಂತನನ್ನು ಆರಾಧಿಸುವ ಕರ್ಮಯಜ್ಞ. “ನಾನಾ ಬಗೆಯ ಯಜ್ಞಗಳಿಂದ ಆರಾಧನೆ ನಡೆಯುವ ಬ್ರಹ್ಮಾವರ್ತವಿದು. ಅದನ್ನು ನಾನು ನಿಲ್ಲಗೊಡುವುದಿಲ್ಲ. ನೀನು ಅದಕ್ಕೆ ಅಡ್ಡಿ ಮಾಡಕೂಡದು” ಎನ್ನುತ್ತಾನೆ ಪರೀಕ್ಷಿತ.   

ಯಸ್ಮಿನ್ ಹರಿರ್ಭಗವಾನಿಜ್ಯಮಾನ ಇಷ್ಟಾತ್ಮಮೂರ್ತಿರ್ಯಜತಾಂ ಶಂ ತನೋತಿ ।
ಕಾಮಾನಮೋಘಾನ್ ಸ್ಥಿರಜಂಗಮಾನಾಮಂತರ್ಬಹಿರ್ವಾಯುರಿವೇಶ ಆತ್ಮಾ ॥೩೩॥

ನಾವು ಭಗವಂತನನ್ನು ಏಕೆ ಯಜ್ಞಗಳಿಂದ ಆರಾಧಿಸಬೇಕು? ನಾವು ಕೊಡುವ ಆಹುತಿಯಿಂದ ಅವನ ಹೊಟ್ಟೆ ತುಂಬಬೇಕೇನು?  ಇತ್ಯಾದಿಯಾಗಿ ಪ್ರಶ್ನೆ ಹಾಕುವವರಿದ್ದಾರೆ. ಈ ಪ್ರಶ್ನೆಗಳಿಗೆ ವ್ಯಾಸರು ಇಲ್ಲಿ ಉತ್ತರಿಸಿದ್ದಾರೆ.
ಯಜ್ಞಗಳಿಂದ ಆರಾಧಿಸಲ್ಪಡುವ ಭಗವಂತನಿಗೆ ‘ಹರಿ’ ಎಂದು ಹೆಸರು. ಭಕ್ತರು ಕೊಡುವ ಆಹುತಿಯನ್ನು ಸ್ವೀಕರಿಸಿ, ಅದರ ಮುಖೇನ ಭಕ್ತರ ಸಂಕಷ್ಟವನ್ನು ಪರಿಹರಿಸಿ, ಅವರ  ಅಭೀಷ್ಟವನ್ನು ಪೂರೈಸುತ್ತಾನೆ ಆ ಭಗವಂತ. ಆತನದು ಸ್ವರೂಪಭೂತ ರೂಪ. ಆತ ತನ್ನ ಇಚ್ಛೆಗೆ ತಕ್ಕಂತೆ, ಭಕ್ತ ಜನರ ಅಭಿಲಾಷೆಯಂತೆ, ನಾನಾ ರೂಪಗಳನ್ನು ತೊಟ್ಟು ಅವತರಿಸಿ ಬರುತ್ತಾನೆ. ತನ್ನನ್ನು ಆರಾಧಿಸುವ ಭಕ್ತರನ್ನು ಸಲಹುವುದಷ್ಟೇ ಅಲ್ಲ, ಚಲಿಸುವ, ಚಲಿಸದ ತೃಣಾಂತ ಜೀವರನ್ನೂ ಆತ ಪೋಷಿಸುತ್ತಾನೆ. “ಹೀಗೆ ವಾಯುವಿನಂತೆ ಹೊರಗೂ-ಒಳಗೂ (ಅಂತರ್ಯಾಮಿ) ತುಂಬಿ, ಎಲ್ಲರನ್ನೂ ರಕ್ಷಿಸುವ ಸರ್ವಸಮರ್ಥ ಭಗವಂತ  ಅವತರಿಸಿ ಬಂದ ಈ ನಾಡಲ್ಲಿ ನಿನ್ನ ಆಟ ನಡೆಯದು” ಎಂದು ಗರ್ಜಿಸುತ್ತಾನೆ ಪರೀಕ್ಷಿತ.     

ತನ್ಮೇ ಧರ್ಮಭೃತಾಂ ಶ್ರೇಷ್ಠ ಸ್ಥಾನಂ ನಿರ್ದೇಷ್ಟುಮರ್ಹಸಿ ।
ಯತ್ರೈವ ನಿಯತೋ ವತ್ಸ್ಯ ಆತಿಷ್ಠಂಸ್ತೇSನುಶಾಸನಮ್ ॥೩೬॥

ಪರೀಕ್ಷಿತನಿಗೆ ಶರಣಾದ ಕಲಿ ಹೇಳುತ್ತಾನೆ: “ ಮಹಾರಾಜಾ, ನಿನ್ನ ಮಾತನ್ನು ಒಪ್ಪಿದೆ. ಆದರೆ ನಾನು ಎಲ್ಲಿಗೆ ಹೋಗಲಿ? ನನಗೆ ನಿಲ್ಲಲು ಒಂದು ಜಾಗ ಕೊಡು” ಎಂದು.

ಸೂತ ಉವಾಚ--
ಅಭ್ಯರ್ಥಿತಸ್ತದಾ ತಸ್ಮೈ ಸ್ಥಾನಾನಿ ಕಲಯೇSಕರೋತ್ ।
ದ್ಯೂತಂ ಪಾನಂ ಸ್ತ್ರಿಯಃ ಸೂನಾ ಯತ್ರಾಧರ್ಮಶ್ಚತುರ್ವಿಧಃ ॥೩೭॥

ತನಗೆ ಶರಣಾದ ಕಲಿಗೆ ರಾಜ ಪರೀಕ್ಷಿತ ನಾಲ್ಕು ಸ್ಥಾನಗಳನ್ನು ಕೊಟ್ಟು ಅಲ್ಲಿ ವಾಸ ಮಾಡುವಂತೆ ಅಪ್ಪಣೆ ನೀಡುತ್ತಾನೆ. ಅವುಗಳೆಂದರೆ: ದ್ಯೂತ, ಪಾನ, ಸ್ತ್ರೀ ಮತ್ತು ಸೂನಾ(ಹಿಂಸೆ). ಮೇಲ್ನೋಟಕ್ಕೆ ಈ ನಾಲ್ಕು ಸ್ಥಾನಗಳನ್ನು ನೋಡಿದರೆ ನಮಗೆ ಗೊಂದಲವಾಗುತ್ತದೆ. ದ್ಯೂತವನ್ನು  ಕ್ಷತ್ರಿಯರು ಆಗಾಗ ಆಡುತ್ತಿದ್ದರು, ಮದ್ಯಪಾನ ಕ್ಷತ್ರಿಯರಿಗೆ ನಿಷಿದ್ಧವಲ್ಲ, ಎಲ್ಲಾ ಸ್ತ್ರೀಯರಲ್ಲಿ ಕಲಿ ವಾಸವಾಗಿರಲು ಸಾಧ್ಯವಿಲ್ಲ, ಪ್ರಾಣಿ ಬಲಿಯನ್ನು ಕ್ಷತ್ರಿಯರು ಯಜ್ಞದಲ್ಲೂ ನೀಡುತ್ತಿದ್ದರು. ಹೀಗಾಗಿ ಇಲ್ಲಿ ಹೇಳಿದ ಈ ನಾಲ್ಕು ಕಲಿ ಸ್ಥಾನವನ್ನು ಎಚ್ಚರಿಕೆಯಿಂದ ಅರ್ಥ ಮಾಡಿಕೊಳ್ಳಬೇಕು. ಇದನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ವರ್ಣಿಸುತ್ತಾ ಹೇಳುತ್ತಾರೆ: “ವಿಹಿತಾತಿರೇಕೇಣ ನ ಸೇವೇತೇತಿ” ಎಂದು. ಅಂದರೆ ಶಾಸ್ತ್ರ ವಿಹಿತವಾದುದನ್ನು ಹೊರತುಪಡಿಸಿ, ಈ ಮೇಲಿನ ನಾಲ್ಕು ಸ್ಥಾನಗಳಲ್ಲಿ ಕಲಿ ವಾಸಿಸುತ್ತಾನೆ ಎಂದರ್ಥ. ದ್ಯೂತದ ಚಟ, ಕುಡಿತದ ಚಟ, ಅತಿಕಾಮ/ಪರಸ್ತ್ರೀ ಸಂಗ, ಅತಿಮಾಂಸ ತಿನ್ನುವ ಚಟ ಇವು ಕಲಿಯ ವಾಸಸ್ಥಾನ. ಯಾವುದು ನಮಗೆ ವ್ಯಸನ(Addiction)ವಾಗಿ ಕಾಡುತ್ತದೋ ಅದು ಕಲಿಯ ತಾಣವಾಗಿರುತ್ತದೆ. ಅದರ ಹಿಂದೆ  ಸುಳ್ಳು, ಅಹಂಕಾರ, ಅತಿಕಾಮುಕತೆ, ರಾಗ-ದ್ವೇಷಗಳು ಮನೆ ಮಾಡಿರುತ್ತವೆ.

ನಾಲ್ಕು ಸ್ಥಾನಗಳನ್ನು ಪಡೆದ ಕಲಿ ಹೇಳುತ್ತಾನೆ:  “ತತೋSನೃತಂ ಮದಃ  ಕಾಮೋ ರಜೋ ವೈರಂ ಚ ಪಂಚಮಮ್”ಎಂದು.   “ಸುಳ್ಳು, ಅಹಂಕಾರ, ಅತಿಕಾಮುಕತೆ, ರಾಗ-ದ್ವೇಷ ಎನ್ನುವ ಐದು ಪರಿವಾರ ನನ್ನದು. ಈ ಐದು ಪರಿವಾರದೊಂದಿಗೆ ವಾಸ ಮಾಡಲು ನನಗೆ ಕನಿಷ್ಠ ಐದು ಸ್ಥಾನಗಳನ್ನು ಕರುಣಿಸು” ಎಂದು ಕೇಳುತ್ತಾನೆ ಕಲಿ. ಕಲಿಯ ಪ್ರಾರ್ಥನೆಯನ್ನು ಮನ್ನಿಸಿದ ಪರೀಕ್ಷಿತ ಆತನಿಗೆ ಐದನೇ ಸ್ಥಾನವಾಗಿ “ಚಿನ್ನ”ದಲ್ಲಿರಲು ಸೂಚಿಸುತ್ತಾನೆ. ಹೀಗಾಗಿ ಚಿನ್ನದ ಅಥವಾ ಸಂಪತ್ತಿನ ಅತಿಮೋಹ ಕಲಿಯ ವಾಸಸ್ಥಾನವಾಗುತ್ತದೆ.

ಇತ್ಥಂಭೂತಾನುಭಾವೋSಯಮಭಿಮನ್ಯುಸುತೋ ನೃಪಃ ।
ಯಸ್ಯ ಪಾಲಯತಃ ಕ್ಷೋಣೀಂ ಯೂಯಂ ಸತ್ರಾಯ ದೀಕ್ಷಿತಾಃ ॥೪೪॥

“ಯಾವ ಪರೀಕ್ಷಿತರಾಜ ಕಲಿಯನ್ನು ನಿಗ್ರಹಿಸಿ ಕೃತಯುಗ ಧರ್ಮವನ್ನು ಸ್ಥಾಪನೆ ಮಾಡಿದನೋ, ಅಂತಹ ಮಹಾಮಹಿಮ ಇತ್ತೀಚಿನ ತನಕ ನಮ್ಮನ್ನು ಆಳುತ್ತಿದ್ದ” ಎಂದು ಪರೀಕ್ಷಿತನನ್ನು ನೆನಪಿಸಿಕೊಳ್ಳುತ್ತಾರೆ  ಸೂತರು. ಸೂತರು ಶೌನಕಾದಿಗಳನ್ನು ಉದ್ದೇಶಿಸಿ ಹೇಳುತ್ತಾರೆ: ಕಲಿಯನ್ನು ನಿಗ್ರಹಮಾಡಿ, ಕಲಿಯುಗದಲ್ಲಿ ಕೃತಯುಗದ ಧರ್ಮವನ್ನು ಸ್ಥಾಪನೆ ಮಾಡಿದ ಮಹಾಮಹಿಮ; ಹಿರಿಯರ ಹೆಸರನ್ನು ಉಳಿಸಿದ ಪುಣ್ಯಾತ್ಮ; ಅಭಿಮನ್ಯ ಪುತ್ರ ಪರೀಕ್ಷಿತ. ಅವನ  ರಾಜ್ಯಭಾರ ಕಾಲದಲ್ಲೇ ಇಲ್ಲಿ ಸತ್ರಯಾಗ ಪ್ರಾರಂಭವಾಗಿತ್ತು” ಎಂದು.

॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ಸಪ್ತದಶೋSಧ್ಯಾಯಃ ॥
ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಹದಿನೇಳನೇ ಅಧ್ಯಾಯ ಮುಗಿಯಿತು.
          *********