Wednesday, December 11, 2013

Shrimad BhAgavata in Kannada -Skandha-02-Ch-02(9)

ಸ್ಥಿರಂ ಸುಖಂ ಚಾಸನಮಾಸ್ಥಿತೋ ಯತಿರ್ಯದಾ ಜಿಹಾಸುರಿಮಮಂಗ ಲೋಕಮ್ ।
ಕಾಲೇ ಚ ದೇಶೇ ಚ ಮನೋ ನ ಸಜ್ಜೇತ್ ಪ್ರಾಣಾನ್ ನಿಯಚ್ಛೇನ್ಮನಸಾ ಜಿತಾಸುಃ ॥೧೬॥

ಮನಶ್ಚ ಬುದ್ಧ್ಯಾSಮಲಯಾ ನಿಯಮ್ಯ ಕ್ಷೇತ್ರಜ್ಞ ಏತಾಂ ನಿನಯೇತ್ ತಮಾತ್ಮನಿ ।
ಆತ್ಮಾನಮಾತ್ಮನ್ಯವರುಧ್ಯ ಧೀರೋ ಲಬ್ಧೋಪಶಾಂತಿರ್ವಿರಮೇತ ಕೃತ್ಯಾತ್ ॥೧೭॥

“ಬುದ್ಧಿಪೂರ್ವಕವಾಗಿ ದೇಹತ್ಯಾಗ ಮಾಡುವವರು ಭಧ್ರವಾದ ಆಸನದಲ್ಲಿ ಚಲನೆ ಇಲ್ಲದೆ ನಿಶ್ಚಲವಾಗಿ ಕುಳಿತುಕೊಂಡು ದೇಶ-ಕಾಲದ ಬಗ್ಗೆ ಯೋಚನೆ ಮಾಡದೇ  ಧ್ಯಾನಕ್ಕೆ ತೊಡಗಬೇಕು” ಎಂದಿದ್ದಾರೆ ಶುಕಾಚಾರ್ಯರು. ಇದು ಬಹಳ ಮುಖ್ಯವಾದ ವಿಚಾರ. ನಮ್ಮಲ್ಲಿ ಕೆಲವರಿಗೆ ಒಂದು ತಪ್ಪು ಕಲ್ಪನೆ ಇದೆ. ಅದೇನೆಂದರೆ ಉತ್ತರಾಯಣದಲ್ಲಿ ಅದರಲ್ಲೂ ಹಗಲಲಿ ಸತ್ತರೆ ಮಾತ್ರ ಮೋಕ್ಷ ಎಂದು. ಇದು ಭೀಷ್ಮಾಚಾರ್ಯರ ಕಥೆಯನ್ನು ಕೇಳಿ ಬಂದಿರುವ ತಪ್ಪು ತಿಳುವಳಿಕೆ. ಉತ್ತರಾಯಣದಲ್ಲಿ ಸತ್ತವರೆಲ್ಲಾ ಮೋಕ್ಷಕ್ಕೆ ಹೋಗುವುದಿಲ್ಲ. ಮೋಕ್ಷ ಯೋಗ್ಯರು ಯಾವಾಗ ಸತ್ತರೂ ಮೋಕ್ಷವನ್ನು ಸೇರುತ್ತಾರೆ.  ಶಾಸ್ತ್ರದಲ್ಲಿ ಬರುವ ಉತ್ತರಾಯಣ, ಶುಕ್ಲಪಕ್ಷ,  ಇತ್ಯಾದಿ ಉಲ್ಲೇಖಗಳು ನಾವು ಹೋಗಿ ಸೇರುವ ದೇವತೆಗಳ ಉಲ್ಲೇಖವಾಗಿದೆ. ಇನ್ನು ಪುರಾಣದಲ್ಲಿ ಪ್ರಯಾಗ-ತ್ರಿವೇಣಿ ಸಂಗಮದಲ್ಲಿ ಸತ್ತರೆ ಮೋಕ್ಷ ಎನ್ನುವ ಮಾತಿದೆ. ಇದು ಆ ಕ್ಷೇತ್ರ ಎಷ್ಟು ಪವಿತ್ರ ಎನ್ನುವುದನ್ನು ಸೂಚಿಸುತ್ತದೆ. ಅಲ್ಲಿ ಸ್ನಾನ ಮಾಡುವುದರಿಂದ ಕ್ರಮೇಣ ಮನಃಶುದ್ಧಿಯಾಗಿ, ಜ್ಞಾನವೃದ್ಧಿಯಾಗಿ ಮೋಕ್ಷಕ್ಕೆ ಹೋಗಬಹುದೇ ಹೊರತು, ಗಂಗೆಗೆ ಹಾರಿದರೆ ಮೋಕ್ಷ ಸಿಗುವುದಿಲ್ಲ.  ಹೀಗಾಗಿ ಇಲ್ಲಿ ಮುಖ್ಯವಾಗಿ ಶುಕಾಚಾರ್ಯರು “ಪ್ರಾಣೋತ್ಕ್ರಮಣ ಕಾಲದಲ್ಲಿ, ದೇಹತ್ಯಾಗ ಮಾಡುವಾಗ  ದೇಶ-ಕಾಲದ ಬಗ್ಗೆ ಯೋಚಿಸಲೇ ಬೇಡ” ಎಂದಿದ್ದಾರೆ. ‘ತದೇವ ಲಗ್ನಂ, ಸುದಿನಂ ತದೇವ’ ಯಾವ ದೇಶದಲ್ಲಿ, ಯಾವ ಕಾಲದಲ್ಲಿ ಭಗವಂತನ ಸ್ಮರಣೆ ಬಂತೋ ಅದೇ ಪುಣ್ಯಕಾಲ, ಅದೇ ಪುಣ್ಯದೇಶ. ಭಗವಂತನ ಸ್ಮರಣೆ ಇಲ್ಲದೆ ಯಾವ-ದೇಶ ಕಾಲದಲ್ಲಿ ಸತ್ತರೂ ಉಪಯೋಗವಿಲ್ಲ. ಹೀಗಾಗಿ ನಮ್ಮ ಚಿಂತನೆ ಕೇವಲ ಭಗವಂತನ ಕುರಿತಾಗಿರಲಿ, ದೇಶ-ಕಾಲದಲ್ಲಿ ಬೇಡ.

ಮೊತ್ತಮೊದಲು ಪ್ರಾಣಾಯಾಮದಿಂದ ಉಸಿರನ್ನು ಗೆದ್ದು, ಪ್ರಾಣದೇವರಲ್ಲಿ ಮನಸ್ಸನ್ನು ನಿಲ್ಲಿಸಿ, ಪ್ರಾಣಾಂತರ್ಗತ ಭಗವಂತನನ್ನು ಧ್ಯಾನ ಮಾಡಬೇಕು. ಪ್ರಾಣದೇವರ ಅನುಗ್ರಹದಿಂದ ಇಂದ್ರಿಯಾಭಿಮಾನಿ ದೇವತೆಗಳನ್ನು ಮನೋಭಿಮಾನಿ ದೇವತೆಗಳ ಅಧೀನವಾಗಿ(ಲಯ ಚಿಂತನೆ) ಧ್ಯಾನ ಮಾಡಬೇಕು. [ಇಂದ್ರಿಯಾಭಿಮಾನಿ ದೇವತೆಗಳು ಯಾರು ಎನ್ನುವ ವಿವರಣೆ ಮುಂದೆ ಭಾಗವತದಲ್ಲೇ ಬರುತ್ತದೆ. ಹದಿನೆಂಟನೇ ಕಕ್ಷ್ಯೆದಿಂದ ಎಂಟನೇ ಕಕ್ಷ್ಯೆಯ ಇಂದ್ರನ  ತನಕ  ಎಲ್ಲಾ ದೇವತೆಗಳು ನಮ್ಮ ಇಂದ್ರಿಯಾಭಿಮಾನಿಗಳು. ಲಯ ಚಿಂತನೆಯ ಕುರಿತು ಈಗಾಗಲೇ ಒಂದನೇ ಸ್ಕಂಧದಲ್ಲಿ ವಿವರಿಸಲಾಗಿದೆ ೧-೧೫-೧೦]. ಇಂದ್ರಿಯಾಭಿಮಾನಿ ದೇವತೆಗಳು  ಮನೋಮಯಕೋಶದ ದೇವತೆಗಳಾದ ಗರುಡ-ಶೇಷ-ರುದ್ರರ ಅಧೀನವಾಗಿ ಪ್ರಾಣಮಯಕೋಶವನ್ನು ನಿಯಂತ್ರಿಸುತ್ತಾರೆ ಎಂದು ಚಿಂತನೆ ಮಾಡಬೇಕು. ನಂತರ ಮನೋಮಯಕೋಶದ ದೇವತೆಗಳನ್ನು ಬುದ್ಧಿಯ ಅಭಿಮಾನಿನಿಯರಾದ ಸರಸ್ವತಿ-ಭಾರತಿಯರ ಅಧೀನವಾಗಿ ಮತ್ತು ಬುದ್ಧಿಯ ಅಭಿಮಾನಿಯರು  ವಿಜ್ಞಾನ ಮತ್ತು ಆನಂದಮಯಕೋಶದ ಅಭಿಮಾನಿಯರಾದ ಬ್ರಹ್ಮ-ವಾಯುವಿನ ಅಧೀನ ಎಂದು ತಾರತಮ್ಯ(portfolio) ಚಿಂತನೆ ಮಾಡಬೇಕು. ಕೊನೆಯಲ್ಲಿ ಎಲ್ಲಾ ದೇವತೆಗಳು ಜೀವಸ್ವರೂಪದಲ್ಲಿರುವ ಕ್ಷೇತ್ರಜ್ಞನಾದ ಭಗವಂತನ ಅಧೀನ ಎಂದು ಚಿಂತನೆ ಮಾಡಬೇಕು. ಜೀವಸ್ವರೂಪದಲ್ಲಿ ಅಣೋರಣೀಯನಾಗಿರುವ  ಕ್ಷೇತ್ರಜ್ಞನಾದ ಭಗವಂತ ಪಿಂಡಾಂಡದಲ್ಲಿರುವ ಭಗವಂತನ ಸ್ವರೂಪ. ಪಿಂಡಾಂಡದಲ್ಲಿರುವ ಭಗವಂತ ಬ್ರಹ್ಮಾಂಡದಲ್ಲಿರುವ ಭಗವಂತನ ಸ್ವರೂಪ. ಬ್ರಹ್ಮಾಂಡದಲ್ಲಿರುವ ಭಗವಂತ ಸರ್ವಗತನಾದ ಭಗವಂತನ ಸ್ವರೂಪ ಎಂದು ಐಕ್ಯಚಿಂತನೆ ಮಾಡಬೇಕು. ಈ ರೀತಿ ಚಿಂತನೆ ಮಾಡುತ್ತಾ ಜೀವ ದೇಹದಿಂದ ಮೇಲಕ್ಕೆ ಹೋಗಬೇಕು.

Saturday, December 7, 2013

Shrimad BhAgavata in Kannada -Skandha-02-Ch-02(8)

ಯಾವನ್ನ ಜಾಯೇತ ಪರಾವರೇSಸ್ಮಿನ್ವಿಶ್ವೇಶ್ವರೇ ದ್ರಷ್ಟರಿ ಭಕ್ತಿಯೋಗಃ ।
ತಾವತ್ಸ್ಥವೀಯಃ ಪುರುಷಸ್ಯ ರೂಪಂ ಕ್ರಿಯಾವಸಾನೇ ಪ್ರಯತಃ ಸ್ಮರೇತ ॥೧೫॥

ಭಗವಂತನನ್ನು ಧ್ಯಾನ ಮಾಡಬೇಕಾದರೆ ಕೇವಲ ಪಾಂಡಿತ್ಯ ಸಾಲದು. ಧ್ಯಾನಕ್ಕೆ ಬಹಳ ಮುಖ್ಯವಾದುದು ಜ್ಞಾನದ ಜೊತೆಗೆ ಶರಣಾಗತಿ(Submission). ಭಕ್ತಿ ಇಲ್ಲದ ಪಾಂಡಿತ್ಯದಿಂದ ಧ್ಯಾನ ಅಸಾಧ್ಯ. ಎಲ್ಲವನ್ನೂ ಕಾಣಬಲ್ಲ ಭಗವಂತ ನಮ್ಮೊಳಗಿನ ಅಹಂಕಾರವನ್ನೂ ಕಾಣಬಲ್ಲ. ಹಾಗಾಗಿ ಎಲ್ಲಿಯ ತನಕ ನಾವು ಅಹಂಕಾರದಿಂದ ಈಚೆ ಬರುವುದಿಲ್ಲವೋ, ಅಲ್ಲಿಯ ತನಕ ಭಗವಂತನ ದರ್ಶನ ಸಾಧ್ಯವಿಲ್ಲ. ವೇದದಲ್ಲಿ ಹೇಳುವಂತೆ:  “ತಮೇವಂ ವಿದ್ವಾನ್ ಅಮೃತ ಇಹಭವತಿ”. ಅಂದರೆ- ಭಗವಂತನಲ್ಲಿ ಭಕ್ತಿ ಮಾಡಬೇಕಾದರೆ ಜ್ಞಾನ  ಬೇಕು, ಆತ ಜ್ಞಾನಿಗಳಿಗೆ ಮಾತ್ರ ಕಾಣಿಸಿಕೊಳ್ಳುತ್ತಾನೆ. ಇದೇ ಮಾತನ್ನು ಶ್ರೀಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ: ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ತಥಾ ॥ಭಗವದ್ಗೀತಾ-೪-೩೭॥ ಅಂದರೆ: ಅರಿವಿನ ಬೆಂಕಿ ಎಲ್ಲಾ ಕರ್ಮಗಳನ್ನೂ ಸುಟ್ಟುಬಿಡುತ್ತದೆ. ಆದರೆ “ಭಕ್ತ್ಯಾ ತು ಅನನ್ಯಯಾ ಶಕ್ಯಃ” ॥ಭಗವದ್ಗೀತಾ-೧೧-೫೪॥ ಅಂದರೆ: ಭಕ್ತಿಗೆ ಪೂರಕವಾದ ಜ್ಞಾನ ಮಾತ್ರ ಭಗವಂತನ ಅರಿವಿಗೆ ಕಾರಣವಾಗುತ್ತದೆ.
ಮೇಲಿನ ಶ್ಲೋಕದಲ್ಲಿ ಶುಕಾಚಾರ್ಯರು “ಪರಾವರನಾದ ಭಗವಂತನಲ್ಲಿ ಭಕ್ತಿ ಬರಲಿಲ್ಲ ಎಂದರೆ ನಮ್ಮ ಜ್ಞಾನದಲ್ಲಿ ದೋಷವಿದೆ ಎಂದು ತಿಳಿಯಬೇಕು” ಎಂದಿದ್ದಾರೆ. ಇಲ್ಲಿ ‘ಪರಾವರ’ ಎಂದರೆ ಎಲ್ಲಾ ತತ್ತ್ವಗಳಿಗೂ ಹಿರಿಯ ತತ್ತ್ವ ಎಂದರ್ಥ. ನಾವು ಜಗತ್ತಿನ ಯಾವುದೋ ಮೂಲೆಯಲ್ಲಿರುವ ಒಂದು  ಅಣುಕಣ.  ಈ ಜಗತ್ತಿನಲ್ಲಿ ನಮಗಿಂತ ದೊಡ್ಡ ತತ್ತ್ವಗಳು ಬಹಳಷ್ಟಿವೆ. ಆದರೆ ಭಗವಂತನ ಮುಂದೆ ಇತರ ಎಲ್ಲಾ ತತ್ತ್ವಗಳೂ ಸಣ್ಣವು. ಹಾಗಾಗಿ ಅಂತಹ  ಭಗವಂತನ ಮೇಲೆ ನಮಗೆ ಭಕ್ತಿ ಬರಲಿಲ್ಲ ಎಂದರೆ ನಮಗೆ ಸರಿಯಾಗಿ ಭಗವಂತನ ಅರಿವೇ ಬರಲಿಲ್ಲ ಎಂದರ್ಥ.
ಭಗವಂತ ಇಡೀ ವಿಶ್ವಕ್ಕೆ ಸ್ವಾಮಿ. ಅಷ್ಟೇ ಅಲ್ಲ, ಪ್ರತಿಯೊಂದು ಜೀವರೊಳಗೆ ಅಂತರ್ಯಾಮಿಯಾಗಿ  ಇರತಕ್ಕವನು ಆತ. ಇಂತಹ  ಬ್ರಹ್ಮ-ವಾಯುವಿಗೂ ನಿಯಾಮಕನಾಗಿರುವ ಭಗವಂತನಲ್ಲಿ ಪೂರ್ಣಪ್ರಮಾಣದಲ್ಲಿ ಭಕ್ತಿ ಬರಲಿಲ್ಲ ಎಂದರೆ ಕಣ್ಮುಚ್ಚಿ ಆತನನ್ನು ಧ್ಯಾನದಲ್ಲಿ ಕಾಣಲು ಸಾಧ್ಯವಿಲ್ಲ.
ಮಾನಸ ಪೂಜೆ ಸಾಧ್ಯವಾಗುವ ತನಕ  ಬಾಹ್ಯಕ್ರಿಯೆಗಳಿಂದ ಭಗವಂತನನ್ನು ಅರ್ಚಿಸಬೇಕು. ಹೀಗೆ ಮಾಡುತ್ತಾ ಮುಂದುವರಿದಾಗ ಅದು ಮನಸ್ಸಿನ ಮೇಲೆ ಪ್ರಭಾವಬೀರುತ್ತದೆ. ಇದರಿಂದ ಅಹಂಕಾರ ಕಡಿಮೆಯಾಗಿ  ಧ್ಯಾನದ ಮಾರ್ಗ ಸುಗಮವಾಗುತ್ತದೆ. ಬಾಹ್ಯ ಪೂಜೆಯನ್ನು ನಿರಂತರ ಮಾಡಿ “ನನ್ನ ಅಂತರಂಗದಲ್ಲಿ ಕಾಣಿಸಿಕೋ” ಎಂದು ಭಗವಂತನಲ್ಲಿ ಪ್ರಾರ್ಥಿಸಬೇಕು. ಪ್ರತಿಯೊಂದು ಆಚರಣೆಯ ಕೊನೆಯಲ್ಲಿ ಎಲ್ಲವುದರಲ್ಲೂ ಭಗವಂತನಿದ್ದಾನೆ ಎನ್ನುವುದನ್ನು ನೆನಪಿಸಿಕೊಳ್ಳಬೇಕು. ನಾನು ಪೂಜಿಸುತ್ತಿರುವುದು ಕೇವಲ ಪ್ರತಿಮೆಯನ್ನಲ್ಲ, ಬದಲಿಗೆ ಆ ಪ್ರತಿಮೆಯ ಅಂತರ್ಯಾಮಿಯಾಗಿರುವ ಭಗವಂತನನ್ನು ಎನ್ನುವ ಅನುಸಂಧಾನ ನಮ್ಮ ಕ್ರಿಯೆಯಲ್ಲಿರಬೇಕು. ನಾವು ಮಾಡುವ ಪೂಜೆಯ ಪ್ರತಿಯೊಂದು ಹಂತದಲ್ಲಿ ಭಗವಂತನನ್ನು ಅನುಸಂಧಾನ ಮಾಡುವುದು ಕಷ್ಟವಾದಾಗ, ಪೂಜೆಯ ಕೊನೆಗೆ “ಇದು ಎಲ್ಲವುದರ ಒಳಗೂ-ಹೊರಗೂ ತುಂಬಿರುವ ಆತನಿಗೆ ಅರ್ಪಿತವಾಗಿ ಆತ ಪ್ರಸನ್ನನಾಗಲಿ” ಎಂದು ಭಗವಂತನಿಗೆ ಅರ್ಪಿಸಬೇಕು. [ಇದಕ್ಕಾಗಿಯೇ ಪ್ರತಿಯೊಂದು ಪೂಜೆಯ ಕೊನೆಗೆ ಕೃಷ್ಣಾರ್ಪಣಮಸ್ತು ಹೇಳಲಾಗುತ್ತದೆ].

Wednesday, December 4, 2013

Shrimad BhAgavata in Kannada -Skandha-02-Ch-02(7)

ಅದೀನಲೀಲಾಹಸಿತೇಕ್ಷಣೋಲ್ಲಸದ್ ಭ್ರೂ ಭಂಗಸಂಸೂಚಿತಭೂರ್ಯನುಗ್ರಹಮ್ ।
ಈಕ್ಷೇತ ಚಿಂತಾಮಯಮೇನಮೀಶ್ವರಂ ಯಾವನ್ಮನೋ ಧಾರಣಯಾSವತಿಷ್ಠತೇ ॥೧೩॥
  
ಈ ಶ್ಲೋಕದಲ್ಲಿ ಶುಕಾಚಾರ್ಯರು ಹಿಂದೆ ವಿವರಿಸಿದ ಧ್ಯಾನ ಪ್ರಕ್ರಿಯೆಯನ್ನು  ಮತ್ತೆ ಇನ್ನೊಂದು ರೀತಿಯಲ್ಲಿ ವಿವರಿಸುತ್ತಾ ಹೇಳುತ್ತಾರೆ: “ಭಗವಂತನ ಮುಖದಲ್ಲಿ ಉತ್ಕೃಷ್ಟವಾದ ಮಂದಹಾಸವನ್ನು ಧ್ಯಾನಮಾಡು” ಎಂದು.  ಮುಖಕ್ಕೆ ಕಳೆಯೇ ಮಂದಹಾಸ. ಇಂತಹ ಮಂದಹಾಸದಲ್ಲಿ ಅತ್ಯಂತ ಶ್ರೇಷ್ಠ ಮಂದಹಾಸ ಆ ಭಗವಂತನ ಮಂದಹಾಸ. “ಅಂತಹ ಮಂದಹಾಸಬೀರುವ ಭಗವಂತನನ್ನು ಧ್ಯಾನದಲ್ಲಿ ಕಾಣು” ಎಂದಿದ್ದಾರೆ ಶುಕಾಚಾರ್ಯರು. “ಭಗವಂತ ಮುಗುಳ್ನಗುತ್ತಿದ್ದಾನೆ, ಆತ ತನ್ನ ಕರುಣಾಪೂರ್ಣ ಅರಳುಗಣ್ಣಿನಿಂದ ನನ್ನನ್ನು  ನೋಡುತ್ತಿದ್ದಾನೆ, ಆತನ ಅನುಗ್ರಹದ ವೃಷ್ಟಿ ನನ್ನ  ಮೇಲಾಗುತ್ತಿದೆ” ಎಂದು ಅಂತರಂಗದಲ್ಲಿ ಭಗವಂತನನ್ನು ಧ್ಯಾನ ಮಾಡಬೇಕು.

ಇಲ್ಲಿ ಭಗವಂತನನ್ನು ‘ಚಿಂತಾಮಯ’ ಎಂದು ಸಂಬೋಧಿಸಿದ್ದಾರೆ. ಇದು ಇಂದು ಲೋಕದಲ್ಲಿ ಬಳಕೆಯಲ್ಲಿಲ್ಲದ ಪದ. ಶಾಸ್ತ್ರೀಯವಾಗಿ ಚಿಂತಾಮಯ ಎಂದರೆ ಬೇಡಿದ್ದನ್ನು ಕೊಡುವ ಕರುಣಾಳು ಎಂದರ್ಥ. “ನಾನಿರುವಾಗ ನಿನಗೇಕೆ ಚಿಂತೆ” ಎಂದು ಮಂದಹಾಸ ಬೀರುತ್ತಾ, ಅರಳುಗಣ್ಣಿನಿಂದ ಭಗವಂತ ನನ್ನನ್ನು ನೋಡುತ್ತಿದ್ದಾನೆ ಎಂದು ಆ ಕರುಣಾಮೂರ್ತಿ ಭಗವಂತನನ್ನು ಧ್ಯಾನದಲ್ಲಿ ಕಾಣಬೇಕು. “ಈ ರೀತಿ ಆನಂದದ ಅಭಿವ್ಯಕ್ತಿ ಮಾಡುವಂತಹ ಅರಳುಗಣ್ಣು, ಆ ಮಂದಹಾಸ ಎಷ್ಟು ಹೊತ್ತು ಕಾಣುತ್ತದೋ ಅಷ್ಟುಹೊತ್ತು ನೋಡಿ ಆನಂದಪಡು” ಎಂದಿದ್ದಾರೆ ಶುಕಾಚಾರ್ಯರು. ಧ್ಯಾನದಲ್ಲಿ ನಿರಂತರ ಪ್ರಯತ್ನ ಮಾಡಿದರೆ ಈ ರೀತಿಯ ಅಪೂರ್ವ ಅನುಭವವನ್ನು ಪಡೆಯುವುದು ಸಾಧ್ಯ. 
ಒಮ್ಮೆ ಧ್ಯಾನದಲ್ಲಿ ಭಗವಂತನ ಸುಂದರಮೂರ್ತಿಯನ್ನು ಕಂಡರೆ ಆನಂತರ ಜಗತ್ತಿನಲ್ಲಿ ಯಾವುದೂ ಅದಕ್ಕಿಂತ ಸುಂದರ ಅನಿಸುವುದೇ ಇಲ್ಲ. ಇದರಿಂದ ಪ್ರಾಪಂಚಿಕ ಸೆಳೆತ ಕಡಿಮೆಯಾಗುತ್ತದೆ. ಕಣ್ಮುಚ್ಚಿ ಕುಳಿತ ತಕ್ಷಣ ಭಗವಂತನ ರೂಪ ಕಾಣುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಕಾಣಿಸಿದರೂ ಅದು ಸಮಗ್ರವಾಗಿ ಇಡೀ ದಿನ ಕಾಣಲು ಸಾಧ್ಯವಿಲ್ಲ. ಆತ್ಮಸ್ವರೂಪದಿಂದ ಭಗವಂತನನ್ನು ಕಾಣುವಾಗಲೂ ಸಹ, ಎಲ್ಲೋ ಒಮ್ಮೆ ಮಿಂಚಿನಂತೆ ಕಾಣಿಸಿ ಕಣ್ಮರೆಯಾಗುತ್ತಾನೆ ಆ ಭಗವಂತ. ಆದರೆ ಒಮ್ಮೆ ಕಂಡ ನೆನಪು ಇಡೀ ಜನ್ಮಕ್ಕೆ ಸಾಕಾಗುತ್ತದೆ.
  

Sunday, December 1, 2013

Shrimad BhAgavata in Kannada -Skandha-02-Ch-02(6)

ಸ ಸರ್ವವಿದ್ ಹೃದ್ಯನುಭೂಶ್ಚ ಸರ್ವ ಆತ್ಮಾ ಯಥಾ ಸುಪ್ತಜನೇಕ್ಷಿತೈಕಃ ।
ತಂ ಸತ್ಯ ಮಾನಂದನಿಧಿಂ ಭಜೇತ  ಸರ್ವಾತ್ಮನಾSತೋSನ್ಯತ ಆತ್ಮಘಾತಃ  ॥೦೭॥

ಈ ಶ್ಲೋಕದಲ್ಲಿ ಶುಕಾಚಾರ್ಯರು  ಭಗವಂತನ ಚಿತ್ರಣ ಕೊಡುತ್ತಾ ಆತನನ್ನು ‘ಸರ್ವವಿತ್’ ಎಂದು ಕರೆದಿದ್ದಾರೆ. ಮೇಲ್ನೋಟಕ್ಕೆ ಸರ್ವವಿತ್ ಎಂದರೆ ಎಲ್ಲವನ್ನೂ ಬಲ್ಲವ(ಸರ್ವಜ್ಞ) ಎಂದರ್ಥ. ಆದರೆ ಉಪನಿಷತ್ತಿನಲ್ಲಿ ಹೇಳುವಂತೆ: ಯಃ ಸರ್ವಜ್ಞಃ ಸರ್ವವಿದ್ಯಸ್ಯ ಜ್ಞಾನಮಯಂ ತಪಃ । ಮುಂಡಕ ೧.೧.೯ । ಇಲ್ಲಿ ಭಗವಂತನನ್ನು ಸರ್ವಜ್ಞ ಮತ್ತು ಸರ್ವವಿತ್ ಎಂದು ಬೇರೆ ಬೇರೆಯಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಸರ್ವವಿತ್ ಎಂದರೆ ಕೇವಲ ಸರ್ವಜ್ಞ ಅಲ್ಲ. ಸರ್ವಂ ವಿದಂತಿ-ಸರ್ವವಿತ್. ಏನನ್ನು ಪಡೆಯಬೇಕೋ ಅದೆಲ್ಲವನ್ನೂ ಪಡೆದವನು(ಆಪ್ತಕಾಮ) ಮತ್ತು ಎಲ್ಲವನ್ನೂ ಬಲ್ಲ ಭಗವಂತ ಸರ್ವವಿತ್.  ಇಂತಹ ಭಗವಂತ ಎಲ್ಲಿದ್ದಾನೆ ಎಂದರೆ ಶುಕಾಚಾರ್ಯರು ಹೇಳುತ್ತಾರೆ: “ಆತ ನಿಮ್ಮ ಹೃದಯ ಕಮಲದಲ್ಲೇ ಇದ್ದಾನೆ” ಎಂದು. ಈ ಕುರಿತ ಸುಂದರ ವಿವರಣೆ ಮುಂದೆ ಭಾಗವತದಲ್ಲೇ ಬರುತ್ತದೆ.  ತಸ್ಯಾವಿಜ್ಞಾತನಾಮಾSSಸೀತ್  ಸಖಾSವಿಜ್ಞಾತಚೇಷ್ಟಿತಃ ।ಭಾಗವತ-೪-೨೫-೧೦ ।  ಈ ದೇಹದೊಳಗೆ ಒಬ್ಬ ಜೀವನಿದ್ದಾನೆ ಮತ್ತು ಸದಾ ಅವನೊಂದಿಗಿರುವ ಒಬ್ಬ ಗೆಳೆಯನಿದ್ದಾನೆ. ಆದರೆ ಆ ಗೆಳೆಯನ ಹೆಸರೇನು, ಆತ ಏನನ್ನು ಮಾಡುತ್ತಿದ್ದಾನೆ ಎನ್ನುವುದು ಜೀವನಿಗೆ ತಿಳಿದಿಲ್ಲ! ಇದನ್ನೇ ಉಪನಿಷತ್ತಿನಲ್ಲಿ “ದ್ವಾ ಸುಪರ್ಣಾ ಸಯುಜಾ ಸಖಾಯಾ । ಮುಂಡಕ ೩-೧-೧ ।  ಎಂದಿದ್ದಾರೆ. ಹೃದಿ ಹ್ಯೇಷ ಆತ್ಮಾ । ಷಟ್ ಪ್ರಶ್ನ ೩.೫ । ನಮ್ಮ  ಜೀವ ಇರುವುದೂ ಹೃದಯದಲ್ಲಿ, ಭಗವಂತ ಇರುವುದೂ ಹೃದಯದಲ್ಲಿ. ನಮ್ಮ ಆತ್ಮದ ಅತ್ಯಂತ ಆತ್ಮೀಯ ಗೆಳೆಯನಾಗಿ ಪಕ್ಕದಲ್ಲೇ ಭಗವಂತನಿದ್ದಾನೆ.  ಆದರೆ ನಮಗೆ ಆತನ ಪರಿಚಯವೇ ಇಲ್ಲ. ಹಾಗಾಗಿ ನಮ್ಮ ಪಾಲಿಗೆ ಆತ ಇದ್ದೂ ಇಲ್ಲವಾಗಿದ್ದಾನೆ.  ಇದಕ್ಕಾಗಿ ಇಲ್ಲಿ ಶುಕಾಚಾರ್ಯರು “ಭಗವಂತ ನಿಮ್ಮ ಹೃದಯ ಕಮಲದಲ್ಲೇ ಇದ್ದಾನೆ, ಅವನನ್ನು ಇನ್ನೆಲ್ಲೋ ಹುಡುಕಬೇಡಿ”ಎಂದಿದ್ದಾರೆ.
ಈ ಶ್ಲೋಕದಲ್ಲಿ ಶುಕಾಚಾರ್ಯರು ಭಗವಂತನನ್ನು ‘ಅನುಭೂಃ’ ಎಂದಿದ್ದಾರೆ. ಅನುಭೂಃ ಎಂದರೆ ತನ್ನ ಇಚ್ಛೆಗನುಗುಣವಾಗಿ  ತಾನಿರುವವ. ಇಚ್ಛಾಮಾತ್ರದಿಂದದಲೇ ಸೃಷ್ಟಿ-ಸ್ಥಿತಿ-ಸಂಹಾರ ಮಾಡಬಲ್ಲ ಭಗವಂತ ತಾನು ಬಯಸಿದ ಅನಂತ ರೂಪ ತೊಡಬಲ್ಲ. ಇಂತಹ ಭಗವಂತನನ್ನು ಶುಕಾಚಾರಾಯರು ‘ಸರ್ವಃ’ ಎಂದು ಸಂಬೋಧಿಸಿದ್ದಾರೆ. ಸರ್ವಃ ಪದದ ವಿವರಣೆ ಗೀತೆಯಲ್ಲಿ ಬರುತ್ತದೆ. ಅಲ್ಲಿ ಅರ್ಜುನ  ಸರ್ವಂ ಸಮಾಪ್ನೋಷಿ ತತೋSಸಿ ಸರ್ವಃ  ಎಂದಿದ್ದಾನೆ. [ಭಗವದ್ಗೀತಾ-೧೧-೪೦]. ಎಲ್ಲಾ ಕಡೆ ವ್ಯಾಪಿಸಿರುವ, ಎಲ್ಲಾ ಗುಣಗಳಿಂದ ಪೂರ್ಣನಾದ, ಸರ್ವಕರ್ತ, ಸರ್ವಗತ, ಸರ್ವಸಮರ್ಥ ಭಗವಂತ ಸರ್ವಃ.  ಇಂತಹ ಭಗವಂತ ನಮ್ಮೆಲ್ಲರ ಹೃದಯದಲ್ಲಿ ಹೇಗಿದ್ದಾನೆ ಎನ್ನುವುದನ್ನು ವಿವರಿಸುತ್ತಾ ಶುಕಾಚಾರ್ಯರು ಇಲ್ಲಿ ಬಹಳ ಸುಂದರವಾದ ಮಾತೊಂದನ್ನು ಹೇಳುತ್ತಾರೆ. ಹೇಗೆ ಎಲ್ಲರೂ ಮಲಗಿರುವ ಮನೆಯೊಂದನ್ನು ಒಬ್ಬ ಕಾವಲುಗಾರ ಸದಾ ಎಚ್ಚರವಾಗಿದ್ದು ಕಾಯುತ್ತಿರುತ್ತಾನೋ ಹಾಗೇ, ನಿದ್ರೆಯಲ್ಲಿರುವ ಅನಂತ ಜೀವರಾಶಿಯನ್ನು ಪ್ರಾಣದೇವರ ಅಂತರ್ಯಾಮಿಯಾಗಿ ನಿಂತು ಭಗವಂತ ಕಾಪಾಡುತ್ತಿದ್ದಾನೆ. ನಾವು ನಿದ್ರಿಸಿದಾಗ ನಮ್ಮೆಲ್ಲಾ ಇಂದ್ರಿಯಾಭಿಮಾನಿ ದೇವತೆಗಳು ನಿದ್ರಿಸಬಹುದು. ಆದರೆ ಸದಾ ಎಚ್ಚರವಾಗಿದ್ದು ನಾವು ಉಸಿರಾಡುವಂತೆ ಮಾಡುವವ ‘ಪ್ರಾಣ’. ಇಂತಹ ಪ್ರಾಣದೇವರ ಅಂತರ್ಯಾಮಿಯಾಗಿರುವ ಭಗವಂತ ಎಲ್ಲಾ ಸತ್ಯಗಳಿಗೂ ಮಿಗಿಲಾದ ನಿರ್ದುಷ್ಟವಾದ ಸತ್ಯ.  “ಯಾವ ದೋಷದ ಸ್ಪರ್ಶವೂ ಇಲ್ಲದ, ಎಲ್ಲಾ ಸದ್ಗುಣಗಳಿಂದ ಭರಿತವಾದ, ಸದಾ ಸಜ್ಜನರನ್ನು ರಕ್ಷಿಸುವ ಭಗವಂತನೆಂಬ ಆನಂದದ ಕಡಲಿನತ್ತ ಹೋಗು” ಎಂದಿದ್ದಾರೆ ಶುಕಾಚಾರ್ಯರು.

“ಎಲ್ಲಾ ಬಗೆಯಿಂದಲೂ ತ್ರಿಕರ್ಣಗಳಿಂದ(ಮನಸ್ಸು-ಮಾತು-ಕೃತಿಗಳಿಂದ), ಎಲ್ಲಾ ಅವಸ್ಥೆಗಳಲ್ಲಿ(ಎಚ್ಚರ-ಕನಸು-ನಿದ್ರೆ) ಭಗವಂತನೆಂಬ ಸತ್ಯದ ಬೆನ್ನುಹತ್ತು. ಇಲ್ಲದಿದ್ದರೆ ಆತ್ಮನಾಶವನ್ನು ಹೊಂದುತ್ತೀಯ” ಎಂದು ಎಚ್ಚರಿಸಿದ್ದಾರೆ ಶುಕಾಚಾರ್ಯರು.  ಇಲ್ಲಿ ಹೇಳಲಾದ ‘ಆತ್ಮಘಾತ’ ಎನ್ನುವ ಪದಕ್ಕೆ ನಾಲ್ಕು ಅರ್ಥಗಳಿವೆ. ಈ ಹಿಂದೆ ಹೇಳಿದಂತೆ ಆತ್ಮ ಎನ್ನುವ ಪದಕ್ಕೆ ದೇಹ, ಮನಸ್ಸು, ಜೀವ ಮತ್ತು ಪರಮಾತ್ಮ ಎನ್ನುವ ನಾಲ್ಕು ಅರ್ಥಗಳಿವೆ. ಮನುಷ್ಯ ಜನ್ಮ ಬಂದಾಗಲೂ ಭಗವಂತನ ಸ್ಮರಣೆ ಮಾಡದೇ ಹೋದರೆ ಆ ದೇಹ ವ್ಯರ್ಥವಾಗುತ್ತದೆ. ಇದು ದೇಹನಾಶ. ಭಗವಂತ ಕರುಣಿಸಿರುವ ಚಿಂತನಾಶೀಲ ಮನಸ್ಸಿನಲ್ಲಿ ಭಗವಂತನ ಸ್ಮರಣೆ ಮಾಡದೇ ಹೋದರೆ ಅದರಿಂದ ಮನಸ್ಸಿನ ಮತ್ತು ಬುದ್ಧಿಯನಾಶವಾಗಿ ಆತ್ಮ ಉದ್ದಾರದ ಮಾರ್ಗದಲ್ಲಿ ಸಾಗದೇ ಅಧಃಪಾತವನ್ನು ಹೊಂದುತ್ತದೆ. [ಬುದ್ಧಿನಾಶಾದ್ ವಿನಶ್ಯತಿ ॥ಭಗವದ್ಗೀತಾ-೨-೬೩॥]. ಇದರಿಂದಾಗಿ ನಾವು ಭಗವಂತನನ್ನು ನಿರಾಕರಣೆ ಮಾಡಿಕೊಂಡು ಬದುಕುತ್ತೇವೆ ಮತ್ತು ಅದರಿಂದಾಗಿ ನಮ್ಮ ಪಾಲಿಗೆ ಭಗವಂತ ಇಲ್ಲವಾಗುತ್ತಾನೆ. 

Shrimad BhAgavata in Kannada -Skandha-02-Ch-02(5)

ಏವಂ ಸ್ವಚಿತ್ತೇ ಸ್ವತ ಏವ ಸಿದ್ಧ ಆತ್ಮಾ ಪ್ರಿಯೋSರ್ಥೋ ಭಗವಾನನಂತಃ ।
ತಂ ನಿರ್ವೃತೋ ನಿಯತಾರ್ಥೋ ಭಜೇತ ಸಂಸಾರಹೇತೂಪರಮಶ್ಚ ಯತ್ರ ॥೦೬॥

ಈ ಹಿಂದೆ ಹೇಳಿದಂತೆ ಇಂದು ನಾವು ಮನೆ-ಸಂಸಾರ ಎಲ್ಲವನ್ನೂ ಸಂಪೂರ್ಣ ತ್ಯಜಿಸಿ ಕಾಡಿಗೆ ಹೋಗಿ ಬದುಕಲು ಸಾಧ್ಯವಿಲ್ಲ. ಆದರೆ ನಾವು ಎಲ್ಲವುದರ ಜೊತೆಗೆ ಇದ್ದೂ ಅದನ್ನು ಅಂಟಿಸಿಕೊಳ್ಳದೇ ಬದುಕುವುದನ್ನು ಕಲಿಯಬೇಕು. ಶ್ರೀಕೃಷ್ಣ ಗೀತೆಯಲ್ಲಿ ಹೇಳಿದಂತೆ: “ಪದ್ಮಪತ್ರಮಿವಾಂಭಸಾ”- ತಾವರೆ ಎಲೆ ನೀರಿನಲ್ಲಿರುವಂತೆ- ಜೊತೆಗಿದ್ದರೂ ಅಂಟಿಸಿಕೊಳ್ಳದೇ ಇರುವುದನ್ನು (Detached attachment) ನಾವು ಅಭ್ಯಾಸ ಮಾಡಿಕೊಳ್ಳಬೇಕು. ಇದೇ ನಿಜವಾದ ವೈರಾಗ್ಯ. ಈ ರೀತಿ ಮನಸ್ಸಿಗೆ ತರಬೇತಿ ಕೊಟ್ಟಾಗ ಜೀವನದಲ್ಲಿ ಯಶಸ್ವಿಯಾಗಿ ಬದುಕಬಹುದು.  ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಈ ಸ್ಥಿತಿಯಲ್ಲಿ ನಾವು ನಿಂತಾಗ ನಮ್ಮ ಚಿತ್ತದಲ್ಲಿ ಭಗವಂತನ ಇರವಿನ ಅರಿವು ಜಾಗೃತಿಗೊಳ್ಳುತ್ತದೆ” ಎಂದು. ಭಗವಂತ ನಮ್ಮೆಲ್ಲರ ಒಳಗೂ-ಹೊರಗೂ ಇದ್ದಾನೆ ನಿಜ, ಆದರೆ ಆ ಅರಿವು ನಮಗಿಲ್ಲ.  ಕೇವಲ ಇರವು ಮುಖ್ಯವಲ್ಲ, ಇರವಿನ ಅರಿವೂ ಮುಖ್ಯ. ಅರಿವು ಇಲ್ಲದ ಇರವು ನಮ್ಮಪಾಲಿಗೆ ವ್ಯರ್ಥ.
ಇಲ್ಲಿ ಭಗವಂತನನ್ನು ಆತ್ಮಾ ಎಂದು ಸಂಬೋಧಿಸಿದ್ದಾರೆ. ‘ಆತ್ಮಾ’  ಎಂದರೆ ಅಂತರ್ಯಾಮಿ ಹಾಗೂ ಅತ್ಯಂತ ಆತ್ಮೀಯ ಎಂದರ್ಥ. ಭಗವಂತ ನಮ್ಮ ಅತ್ಯಂತ ಆತ್ಮೀಯ ಮತ್ತು ಆತ ಎಲ್ಲಾ ಕಾಲದಲ್ಲೂ ನಮ್ಮನ್ನು ಸ್ವೀಕರಿಸಲು ಸಿದ್ಧನಾಗಿರುತ್ತಾನೆ. ಹೀಗಿರುವಾಗ ನಾವು ಯಾರಲ್ಲೋ ಅಂಗಲಾಚುವುದನ್ನು ಬಿಟ್ಟು ಭಗವಂತನ ಅರಿವನ್ನು ಪಡೆದು, “ನನ್ನನ್ನು ಸ್ವೀಕರಿಸು” ಎಂದು ಅವನಲ್ಲಿ ಬೇಡಿಕೊಳ್ಳಬೇಕು.  ಭಗವಂತ ನಮಗೆ ಅತ್ಯಂತ ಪ್ರಿಯವಾದ ವಸ್ತು. ಆದರೆ ಆತನ ಪರಿಚಯ ನಮಗಿಲ್ಲದ ಕಾರಣ ನಮಗೆ ಯಾವುದು ಪ್ರಿಯ, ಯಾವುದು ಅಪ್ರಿಯ ಎನ್ನುವುದು ತಿಳಿಯದೇ, ಪ್ರಿಯವಾದುದರ ಅನ್ವೇಷಣೆ ಮಾಡುತ್ತಾ, ದಾರಿ ತಪ್ಪಿ ಯಾರದ್ದೋ ಬೆನ್ನು ಹತ್ತುತ್ತೇವೆ. ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಎಲ್ಲವುದಕ್ಕಿಂತ ಪ್ರಿಯವಾದ ವಸ್ತು ಹಾಗೂ ಜೀವನದ ಕೊನೇಯ ಪುರುಷಾರ್ಥ ಆ ಭಗವಂತ” ಎಂದು. ಭಗವಂತನಿಂದಾಗಿ ಈ ಭೂಮಿಯಲ್ಲಿ ಹುಟ್ಟಿದ ನಮಗೆ ಭಗವಂತನನ್ನು ಸೇರುವುದೇ ಪರಮ ಪುರುಷಾರ್ಥ. ಭಗವಂತ ನಿತ್ಯ-ಸತ್ಯ ಮತ್ತು ಶಾಶ್ವತವಾಗಿ ಎಲ್ಲಾ ಕಡೆ ಇರುವ ಅನಂತ ಸತ್ಯ. ಈ ಸತ್ಯದ ಹಿಂದೆ ನಾವು ಹೋಗಬೇಕು ಎನ್ನುವ ಅರಿವು ನಮಗೆ ಸಹಜವಾಗಿ ಧ್ಯಾನದಲ್ಲಿ ಬರುತ್ತದೆ. ಭಗವಂತನನ್ನು ಸೇರುವ ಉದ್ಧೇಶ ನಿಶ್ಚಿತವಾಗಿದ್ದಾಗ ಒಳಗೆ ಆನಂದ ಮತ್ತು ಧೈರ್ಯ ತುಂಬುತ್ತದೆ. ಸಂಸಾರಕ್ಕೆ ಕಾರಣವಾಗಿರುವ ಅಜ್ಞಾನ-ದುಃಖ-ದಾರಿದ್ರ್ಯ ಮುಂತಾದ ಎಲ್ಲಾ ಸಮಸ್ಯೆಗಳಿಗೆ ಕೊನೇ ಉತ್ತರ ಆ ಭಗವಂತ. ಅಂತಹ ಭಗವಂತನಲ್ಲಿ ಮನಸ್ಸನ್ನು ಗಟ್ಟಿಯಾಗಿ ನಿಲ್ಲಿಸಿದಾಗ ಯಾವುದೇ ಉದ್ವೇಗವಿಲ್ಲದೇ ಆನಂದವಾಗಿರಬಹುದು.