Monday, December 24, 2012

Shrimad BhAgavata in Kannada -Skandha-01 CH-01 (7)


ಶ್ರೀಮದ್ಭಾಗವತ ಮಹಾಪುರಾಣದ ಕರ್ತೃ, ಅಧಿಕಾರಿ, ವಿಷಯ ಮತ್ತು ಫಲ

ಮಂಗಲಾಚರಣೆ ಮುಗಿದಮೇಲೆ ಗ್ರಂಥ ಮಾಹಿತಿ ಕೊಡುವ ಶ್ಲೋಕ ಎರಡನೇ ಶ್ಲೋಕ. ಇಲ್ಲಿ ಇಪ್ಪತ್ನಾಲ್ಕು ಪದಗಳಿದ್ದು ಒಟ್ಟು ಎಪ್ಪತ್ತಾರು ಅಕ್ಷರಗಳಿವೆ. ಇದು ಗಾಯತ್ತ್ರಿ ಸಮಾನವಾಗಿರುವ ಪದ್ಯ. ಇಲ್ಲಿರುವ ಇಪ್ಪತ್ನಾಲ್ಕು ಪದಗಳು ಗಾಯತ್ತ್ರಿ ಪ್ರತಿಪಾಧ್ಯನಾದ ಭಗವಂತನ ಚತುರ್ವಿಂಶತಿ [ಇಪ್ಪತ್ನಾಲ್ಕು] ರೂಪಗಳನ್ನು ಹೇಳತಕ್ಕಂತಹ ಶಬ್ದಗಳು. [ಭಗವಂತನ ಚತುರ್ವಿಂಶತಿ ಮೂರ್ತಿಗಳು: ಕೇಶವ, ನಾರಾಯಣ, ಮಾಧವ, ಗೋವಿಂದ, ವಿಷ್ಣು, ಮಧುಸೂಧನ, ತ್ರಿವಿಕ್ರಮ, ವಾಮನ, ಶ್ರೀಧರ, ಹೃಷಿಕೇಶ, ಪದ್ಮನಾಭ, ದಾಮೋದರ, ಸಂಕರ್ಷಣ, ವಾಸುದೇವ, ಪ್ರದ್ಯುಮ್ನ, ಅನಿರುದ್ಧ, ಪುರುಷೋತ್ತಮ, ಅಧೋಕ್ಷಜ, ನರಸಿಂಹ, ಅಚ್ಯುತ, ಜನಾರ್ದನ, ಉಪೇಂದ್ರ, ಹರಿ ಮತ್ತು ಕೃಷ್ಣ]. ಯಾವುದೇ ಒಂದು ಗ್ರಂಥವನ್ನು ಓದುವ ಮೊದಲು ನಮಗೆ ನಾಲ್ಕು ವಿಷಯಗಳು ತಿಳಿದಿರಬೇಕು. ೧. ಗ್ರಂಥದ ವಿಷಯ. ೨. ಗ್ರಂಥ ಓದುವುದರ ಪ್ರಯೋಜನ/ಫಲ. ೩. ಯಾರು ಓದಲು ಅರ್ಹರು(ಅಧಿಕಾರಿ) ೪. ಬರೆದ ವ್ಯಕ್ತಿ. 
ಶಾಸ್ತ್ರಕಾರರು ಹೇಳುವಂತೆ:

ಅಧಿಕಾರಂ ಫಲಂ ಚೈವ ಪ್ರತಿಪಾದ್ಯಂ ಚ ವಸ್ತು ಯತ್  ।
ಸ್ಮೃತ್ವಾ ಪ್ರಾರಭತೋ ಗ್ರಂಥಂ ಕರೋತೀಶೋ ಮಹತ್ಫಲಮ್  ॥

ಅಂದರೆ: ಅಧಿಕಾರಿ, ವಿಷಯ ಮತ್ತು ಪ್ರಯೋಜನ ತಿಳಿದು ಒಂದು ಗ್ರಂಥ ಅಧ್ಯಯನ ಮಾಡಿದರೆ, ಅದರಿಂದ ವಿಶೇಷ ಫಲ ಪ್ರಾಪ್ತಿಯಾಗುತ್ತದೆ. ಹಿನ್ನೆಲೆ ತಿಳಿದುಕೊಂಡು ಅಧ್ಯಯನ ಮಾಡುವುದರಿಂದ  ಭಗವಂತನ ವಿಶೇಷ ಅನುಗ್ರಹವಾಗುತ್ತದೆ. 

ಈ ಶ್ಲೋಕದಲ್ಲಿ ವೇದವ್ಯಾಸರು ಗ್ರಂಥದ ಅಧಿಕಾರಿ, ಗ್ರಂಥದಲ್ಲಿ ಬರುವ ವಿಷಯ ಮತ್ತು ಶ್ರೀಮದ್ ಭಾಗವತ ಓದುವುದರ ಮಹತ್ವವೇನು ಎನ್ನುವುದನ್ನು ವಿವರಿಸಿದ್ದಾರೆ.

ಧರ್ಮಃ ಪ್ರೋಜ್ಝಿತಕೈತವೋSತ್ರ ಪರಮೋ ನಿರ್ಮತ್ಸರಾಣಾಂ ಸತಾಮ್
ವೇದ್ಯಂ ವಾಸ್ತವಮತ್ರ ವಸ್ತು ಶಿವದಂ ತಾಪತ್ರಯೋನ್ಮೂಲನಮ್            ।
ಶ್ರೀಮದ್ಭಾಗವತೇ ಮಹಾಮುನಿಕೃತೇ ಕಿಂ ವಾSಪರೈರೀಶ್ವರಃ
ಸದ್ಯೋ ಹೃದ್ಯವರುಧ್ಯತೇSತ್ರ ಕೃತಿಭಿಃ ಶುಶ್ರೂಷುಭಿಸ್ತತ್ ಕ್ಷಣಾತ್           ॥೨॥

ಗ್ರಂಥದಲ್ಲಿನ ವಿಷಯದ ಕುರಿತು ವಿವರಿಸುತ್ತಾ ವ್ಯಾಸರು ಹೇಳುತ್ತಾರೆ: “ಅತ್ರ ಧರ್ಮಃ ಪ್ರೋಜ್ಝಿತಕೈತವಃ ಪರಮಃ” ಎಂದು. ಇಲ್ಲಿ  ‘ನಿಜವಾದ ಧರ್ಮ ಯಾವುದು  ಎನ್ನುವ ತಿಳುವಳಿಕೆ ಕೊಡುವ ಗ್ರಂಥ ಭಾಗವತ’ ಎಂದಿದ್ದಾರೆ ವ್ಯಾಸರು. ಇಲ್ಲಿ ಧರ್ಮದ ಕುರಿತು ಹೇಳುವಾಗ ‘ಪ್ರೋಜ್ಝಿತಕೈತವಃ  ಮತ್ತು ಪರಮಃ’ ಎನ್ನುವ ಎರಡು ವಿಶೇಷಣಗಳನ್ನು ಬಳಸಿ ಹೇಳಿರುವುದನ್ನು ನಾವು ಗಮನಿಸಬೇಕು. ಇದು ಧರ್ಮದ ಎರಡು ಆಯಾಮವನ್ನು ಹೇಳುತ್ತದೆ. ಕಪಟವೇ ಇಲ್ಲದ ಪರಿಶುದ್ಧತತ್ತ್ವ ಭಗವಂತನೇ ಧರ್ಮ  ಮತ್ತು  ಆತನೆಡೆಗೆ ಹೋಗಲು ನಾವು ಪಾಲಿಸಬೇಕಾದ ನಡೆಯೂ ಧರ್ಮ.  ಸಾಮಾನ್ಯವಾಗಿ ಪ್ರಪಂಚದಲ್ಲಿ ಜನರು ಎರಡು ಕಾರಣಗಳಿಗಾಗಿ  ಧರ್ಮ ಪಾಲಿಸುತ್ತಾರೆ. ಒಂದು ಭಯ ಹಾಗೂ ಇನ್ನೊಂದು ಫಲಾಪೇಕ್ಷೆ. ಆದರೆ ಈ ಎರಡು ಕಾರಣಕ್ಕಾಗಿ ಪಾಲಿಸುವ ಧರ್ಮ ಎಂದೂ ಸ್ವಚ್ಛವಾದ ಧರ್ಮವಾಗುವುದಿಲ್ಲ. ಆದ್ದರಿಂದ ಭಾಗವತ ಹೇಳುವುದು ಯಾವುದೇ ಫಲಾಪೇಕ್ಷೆ-ಭಯ ಇಲ್ಲದ ಧರ್ಮದ ನಡೆಯನ್ನು(ಪ್ರೋಜ್ಝಿತಕೈತವಃ). ಇನ್ನು  ಏಕೆ ಇಂತಹ ಧರ್ಮಾಚರಣೆ ಮಾಡಬೇಕು ಎನ್ನುವ ಪ್ರಶ್ನೆ. ಏಕೆಂದರೆ: ಈಶ್ವರಾರ್ಪಣೇನ ಪರಮಃ – ಫಲಾಪೇಕ್ಷೆ ಇಲ್ಲದೇ ಮಾಡುವ ಧರ್ಮ ಪರಮಮಾಂಗಲಿಕ. ಅದು ಭಗವಂತ ಪ್ರೀತನಾಗಲಿ ಎಂದು ಅರ್ಪಣಾಭಾವದಿಂದ ಮಾಡುವ ಕರ್ಮ. ಅಂತಹ ಶ್ರೇಷ್ಠವಾದ ನಿಷ್ಕಪಟ ಧರ್ಮವನ್ನೇ ಭಾಗವತ ಹೇಳುತ್ತದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಭಾಗವತ ಕಪಟವಿಲ್ಲದ, ಫಲದ ಆಸೆ ಇಲ್ಲದ, ಕೇವಲ ಭಗವಂತನ ಪ್ರೀತಿಗಾಗಿ ಬದುಕನ್ನು ಮೀಸಲಿಡಲು ಮಾಡಬೇಕಾದ ಧರ್ಮವನ್ನು ಹೇಳುವ ಗ್ರಂಥ. ಇದು ಧರ್ಮದಿಂದ ವೇದ್ಯನಾದ, ಧರ್ಮದ ಮೂಲಕ ಪಡೆಯಬೇಕಾದ ಭಗವಂತನನ್ನು ಹೇಳುವ ಗ್ರಂಥ. ಈ ಗ್ರಂಥದಲ್ಲಿ ಮನಸ್ಸನ್ನಿಟ್ಟರೆ ಪಡೆಯಲಾಗದ್ದು ಯಾವುದೂ ಇಲ್ಲಾ.

Shrimad BhAgavata in Kannada -Skandha-01 CH-01 (6)


“ಜನ್ಮ ಆದ್ಯಸ್ಯ ಯತಃ”-ಜಗತ್ತಿನ ಆದಿಪುರುಷನ ಜನ್ಮ ಎಲ್ಲಿ ಆಯಿತೋ ಅಲ್ಲಿಂದ-“ಇತರತ್ರ ಅನ್ವಯಾತ್” - ಬೇರೆ ಕಡೆಗ ಹೋದವ. ಅಂದರೆ ಕೃಷ್ಣನ ಜನ್ಮ ಸೆರೆಮನೆಯಲ್ಲಿ ಆಯಿತು. ಆತ ಅಲ್ಲಿಂದ ನಂದಗೋಪ-ಯಶೋದೆಯನ್ನು ಸೇರಿದ. ಅಷ್ಟೇ ಅಲ್ಲ “ಪುನಶ್ಚ ಇತರತಃ”- ಅಂದರೆ ಮರಳಿ ಎಲ್ಲಿ ಹುಟ್ಟಿದನೋ ಅಲ್ಲಿಗೆ ಕಂಸನನ್ನು ಕೊಲ್ಲಲು ಬಂದವ. ಹೀಗೆ “ಜನ್ಮಾದ್ಯಸ್ಯ ಯತೋSನ್ವಯಾದಿತರತಶ್ಚ” ಎನ್ನುವ ಈ ಶ್ಲೋಕದ  ಸಾಲು ಕೃಷ್ಣಾವತಾರದಲ್ಲಿನ ಕೃಷ್ಣನ ಸಮಸ್ತ ಓಡಾಟವನ್ನು ಹೇಳುತ್ತದೆ.
“ಅರ್ಥೇಷ್ವಭಿಜ್ಞಃ ಸ್ವರಾಟ್”- ಪೂತನಿ, ಕಂಸ, ಶಕಟಾಸುರ, ಗೋಪಿಕಾ ಸ್ತ್ರೀಯರು, ಯಶೋಧೆ-ನಂದಗೋಪ, ವಸುದೇವ-ದೇವಕಿ, ಇಂದ್ರ, ಹೀಗೆ ಯಾರೇ ಇರಲಿ, ಅವರ ಬಳಿ ಯಾವ ರೀತಿ ನೆಡೆದುಕೊಳ್ಳಬೇಕೋ ಹಾಗೆ ನಡೆದುಕೊಂಡು[ಅರ್ಥೇಷು] ತನ್ನ ಸಾರ್ವಜ್ಞವನ್ನು ಕೃಷ್ಣ ಪ್ರಕಟಪಡಿಸಿದ. ಎಲ್ಲಾ ಕಡೆಯಿಂದಲೂ ಎಲ್ಲರಿಗಿಂತ ಹೆಚ್ಚು ಪ್ರಕಾಶಮಾನನಾಗಿ ತನ್ನ ಪೂರ್ಣ ಅವತಾರದ ಮಹಿಮೆಯನ್ನು ತೋರಿದ ಕೃಷ್ಣ ‘ಸ್ವರಾಟ್’ ಎನಿಸಿದ.
“ತೇನೇ ಬ್ರಹ್ಮ ಹೃದಾ ಯ ಆದಿ ಕವಯೇ”- ಯುದ್ಧ ಪ್ರಾರಂಭವಾದ ಆದಿಯಿಂದ, ಯುದ್ಧದ ನಂತರವೂ ಕೂಡಾ ಕೃಷ್ಣ  ಆ ಕಾಲದ ಅಪರೋಕ್ಷಜ್ಞಾನಿ(ಕವಿ) ಇಂದ್ರ ಅವತಾರವಾದ ಅರ್ಜುನನ ಮೂಲಕ, ನಮಗೆ ಉಪನಿಷತ್ತಿನ ಸಾರಭೂತವಾದ ಬ್ರಹ್ಮವಿದ್ಯೆ, ಅಧ್ಯಾತ್ಮ ವಿದೆಯನ್ನು ಬಿತ್ತರಿಸಿದ. ತನ್ನ ವಿಶ್ವರೂಪವನ್ನು ಬಿತ್ತರಿಸಿ ತೋರಿದ. ಆದರೂ ಕೂಡಾ-“ಮುಹ್ಯಂತಿ ಯಂ ಸೂರಯಃ”. ಆ ಕಾಲದ ಮಹಾನ್ ಜ್ಞಾನಿಗಳೇ ಕೃಷ್ಣನನ್ನು ಅರಿಯದೆ ಮೋಹಕ್ಕೊಳಗಾದರು! ಪಾಂಡವರು ಕೃಷ್ಣನನ್ನು ತಮ್ಮ ಸಂಬಂಧಿ ಎಂದು ಮೋಹಪಟ್ಟರು. ಗರ್ಗಾಚಾರ್ಯರು, ಅಶ್ವತ್ಥಾಮ(ರುದ್ರಾವತಾರ), ಬಲರಾಮ(ಶೇಷಾವತಾರ) ಕೂಡಾ ಭಗವಂತನ ಲೀಲೆಯನ್ನು ಕಂಡು ಮೋಹಕ್ಕೊಳಪಟ್ಟರು ಅಥವಾ ಭಗವಂತನನ್ನೇ ಮರೆತರು!
“ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸಗಃ”. ಅಂದಿನ ಕಾಲದ ಎಲ್ಲಾ ಜ್ಞಾನಿಗಳೂ ಕೂಡಾ ಕೃಷ್ಣನನ್ನು ಪಾಂಚಭೌತಿಕ ಶರೀರೀ ಎಂದೇ ತಿಳಿದರು. ಆದರೆ ಅವರ ತಿಳುವಳಿಕೆ ನಿಜವಲ್ಲ[ಮೃಷಾ]. ಭಗವಂತ ತ್ರಿಗುಣಾತೀತ. ಆತನ ದೇಹ ಜ್ಞಾನಾನಂದ ಸ್ವರೂಪವಾದುದು. ಆದರೆ ಇದು ಜನರಿಗೆ ತಿಳಿಯಲಿಲ್ಲ ಅಷ್ಟೇ. “ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ”: ಇನ್ನೊಂದು ತಪ್ಪು ತಿಳುವಳಿಕೆ ಎಂದರೆ ಕೃಷ್ಣ ಒಬ್ಬ ಸುಳ್ಳುಗಾರ, ಆತ ಕಪಟ ನಾಟಕ ಸೂತ್ರಧಾರಿ ಎಂಬಿತ್ಯಾದಿ ತಪ್ಪು ತಿಳುವಳಿಕೆ. ಆದರೆ ನಿರಸ್ತಕುಹಕನಾಗಿ ಸಾತ್ವಿಕರಿಗೆ, ಸಜ್ಜನರಿಗೆ  ಯಾವುದು ಹಿತವೋ ಅದು ‘ಸತ್ಯ’ ಎಂದು ತೋರಿಸಿಕೊಟ್ಟವ ಶ್ರೀಕೃಷ್ಣ. ಇಂತಹ ಸತ್ಯಃ ನಾಮಕ ಭಗವಂತನ ಸರ್ವವಿಲಕ್ಷಣವಾದ(ಪರಮ್) ಹಾಗೂ ನಮಗೆ  ಅತ್ಯಂತ ಸಮೀಪದ ಅವತಾರ ಕೃಷ್ಣಾವತಾರ.
ನಮ್ಮಲ್ಲಿ ಇಂದೂ ಕೂಡಾ ಹೆಚ್ಚಿನವರು ಕೃಷ್ಣ ಒಬ್ಬ ಸುಳ್ಳುಗಾರ, ಆತ ಮೋಸದಿಂದ ದ್ರೋಣ-ಕರ್ಣರನ್ನು ಕೊಲ್ಲಿಸಿದ, ಧರ್ಮರಾಯನಿಂದ ಸುಳ್ಳು ಹೇಳಿಸಿದ, ಬೆಣ್ಣೆ ಕದ್ದ, ಗೋಪಿಯರ ಸೀರೆ ಕದ್ದ, ಇತ್ಯಾದಿಯಾಗಿ ತಿಳಿದು ಗೊಂದಲಕ್ಕೊಳಗಾಗುವವರಿದ್ದಾರೆ. ಇದು ಯಾವುದು ಧರ್ಮ ಹಾಗೂ ಯಾವುದು ಅಧರ್ಮ; ಯಾವುದು ಸತ್ಯ ಹಾಗೂ ಯಾವುದು ಸುಳ್ಳು ಎನ್ನುವ ಪರಿಜ್ಞಾನವಿಲ್ಲದಾಗ ಆಗುವ ಗೊಂದಲ. ಸಂಕ್ಷಿಪ್ತವಾಗಿ ಕೆಲವು ಘಟನೆಗಳನ್ನು ಹೇಳಬೇಕೆಂದರೆ: ಮೊದಲನೆಯದಾಗಿ ದ್ರೋಣಾಚಾರ್ಯರನ್ನು ಧರ್ಮರಾಯನಿಂದ ಸುಳ್ಳು ಹೇಳಿಸಿ ಕೊಲ್ಲಿಸಿರುವುದು. ದ್ರೋಣಾಚಾರ್ಯ ಒಬ್ಬ ಬ್ರಹ್ಮರ್ಷಿ. ಅದೊಂದು ಮಹಾನ್ ಚೇತನ. ಆದರೆ ಅದ್ಯಾವುದೋ ಪ್ರಾರಾಬ್ಧಕ್ಕೊಳಗಾಗಿ ಅವರು ಅಧರ್ಮದ ಪರ ಯುದ್ಧಕ್ಕೆ ನಿಂತಿದ್ದರು. ದಿನಕ್ಕೆ ಕನಿಷ್ಠ ಹತ್ತುಸಾವಿರ ಸೈನಿಕರನ್ನು ಕೊಲ್ಲುವುದಾಗಿ ಶಪತತೊಟ್ಟು, ಅದಕ್ಕಾಗಿ ಹಗಲೂ ರಾತ್ರಿ ಹೋರಾಟದಲ್ಲಿ ತೊಡಗಿದ್ದರು. ಇದು ಅವರಿಗೆ ಇನ್ನೆಂದೂ ಮೇಲಕ್ಕೇಳಲು ಅಸಾಧ್ಯವಾದ ತಮಸ್ಸಿನ ಮಾರ್ಗವಾಗಿತ್ತು. ಹೀಗಿರುವಾಗ ದ್ರೋಣಾಚಾರ್ಯರ ಉದ್ಧಾರ ಇದ್ದದ್ದು ಅವರ ಬದುಕಿನಲ್ಲಲ್ಲ, ಬದಲಿಗೆ ಅವರ ಸಾವಿನಲ್ಲಿ. ಅವರೊಬ್ಬರ ಸಾವಿನಿಂದ ದಿನಕ್ಕೆ ಹತ್ತುಸಾವಿರ ಸೈನಿಕರ ಪ್ರಾಣಹಾನಿ ತಪ್ಪುತ್ತದೆ ಮತ್ತು ಅವರು ಕೊಲೆಪಾತಕದಿಂದ ಪಾರಾಗುತ್ತಾರೆ. ಇಂತಹ ಮಹಾನ್ ಚೇತನವನ್ನು ಉದ್ಧಾರಮಾಡಬೇಕು ಎಂದು ಬಯಸಿದ ಕೃಷ್ಣ, ಧರ್ಮರಾಯನಿಂದ ಸುಳ್ಳು ಹೇಳಿಸಿದ. ಇದು ಸಜ್ಜನರ ಉದ್ಧಾರಕ್ಕೋಸ್ಕರ ಭಗವಂತ ನುಡಿಸಿದ ದೊಡ್ಡ ಸತ್ಯ. ತಿರುಳನ್ನು ನೋಡದೇ ಮೇಲ್ನೋಟದಲ್ಲಿ ನಿಂತರೆ ಈ ಸತ್ಯ ನಮಗೆ ಅರ್ಥವಾಗುವುದಿಲ್ಲ ಅಷ್ಟೇ. ಇನ್ನೊಂದು ಘಟನೆ ದುರ್ಯೋಧನನ ತೊಡೆಯನ್ನು ಭೀಮನಿಂದ ಕೃಷ್ಣ ಮುರಿಸಿರುವುದು. ಇದನ್ನು ಬಲರಾಮ ಕೂಡಾ ಅಧರ್ಮ ಎಂದು ವಿರೋಧಿಸುತ್ತಾನೆ. ಆಗ ಕೃಷ್ಣ ಕೊಟ್ಟ ಉತ್ತರ ರೋಚಕ. ಕೃಷ್ಣ ಹೇಳುತ್ತಾನೆ: ಧರ್ಮ ಆಚರಣೆ ಶ್ರೇಯಸ್ಸನ್ನು ತರುತ್ತದೆ ನಿಜ. ಆದರೆ ಯಾವುದು ಧರ್ಮ, ಯಾವುದು ಅಧರ್ಮ ಎಂದು ತೀರ್ಮಾನ ಮಾಡುವುದು ಕಷ್ಟ” ಎಂದು. ಕೃಷ್ಣ ದುರ್ಯೋಧನನನ್ನು ಉದ್ಧೇಶಿಸಿ ಹೇಳುತ್ತಾನೆ: “ನಿನ್ನ ತೊಡೆ ಮುರಿದದ್ದು ಅಧರ್ಮ ಎಂದಿಯಲ್ಲ, ಆ ತೊಡೆ ಎಂತಹ ತೊಡೆ? ತುಂಬಿದ ಸಭೆಗೆ ಒಬ್ಬ ಸ್ತ್ರೀಯನ್ನು ಅರೆನಗ್ನಾವಸ್ತೆಯಲ್ಲಿ ಎಳೆದು ತಂದು, ತೊಡೆತಟ್ಟಿ,  ‘ನನ್ನ ತೊಡೆಯಮೇಲೆ ಬಂದು ಕೂಡು’ ಎಂದು ಹೇಳಿದೆಯಲ್ಲ; ಪರಸ್ತ್ರೀಗೆ ತಟ್ಟಿದ ತೊಡೆಗೆ ಇದು ಕನಿಷ್ಠ ಶಿಕ್ಷೆ. ಇಷ್ಟು ಮಾಡದೇ ಹೋದರೆ ಈ ದೇಶದಲ್ಲಿ ಧರ್ಮದ ಸ್ಥಿತಿ ಏನಾದೀತು” ಎಂದು ಕೇಳುತ್ತಾನೆ ಕೃಷ್ಣ. ಈ ರೀತಿ ಮೇಲ್ನೋಟಕ್ಕೆ ಎಲ್ಲವೂ ವ್ಯತಿರಿಕ್ತವಾಗಿ ಕಂಡರೂ, ಅದಕ್ಕಿಂತ ಬೇರೆ ಆಯಾಮದಲ್ಲಿ ಸತ್ಯ-ಧರ್ಮವನ್ನು ನಮ್ಮ ಮುಂದೆ ತೆರೆದು ತೋರಿಸಿದ ಭಗವಂತನ ಅಪೂರ್ವ ಅವತಾರ ಕೃಷ್ಣಾವತಾರ. ಈ ಸತ್ಯ ತಿಳಿದಾಗ ಮಾತ್ರ ನಮಗೆ ಕೃಷ್ಣಾವತಾರ ಅರ್ಥವಾಗುತ್ತದೆ. ಬನ್ನಿ, ಇಂತಹ ಸತ್ಯ ಸ್ವರೂಪನಾದ ಕೃಷ್ಣನನ್ನು ಧ್ಯಾನ ಮಾಡುತ್ತಾ ಭಾಗವತವನ್ನು ಪ್ರವೇಶಿಸೋಣ.

Sunday, December 23, 2012

Shrimad BhAgavata in Kannada -Skandha-01 CH-01 (5)


ಭಗವಂತ ಈ ಸೃಷ್ಟಿಯನ್ನು ಏಕೆ ನಿರ್ಮಾಣ ಮಾಡಿದ? ಅನಾದಿನಿತ್ಯನಾದ ಜೀವನಿಗೆ ಭಗವಂತ ಏಕೆ ದೇಹವನ್ನು ಕೊಟ್ಟ? ಭಗವಂತನ ಪ್ರಪಂಚ ಸೃಷ್ಟಿಯ ಮೂಲ ಉದ್ದೇಶ ಏನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಶ್ಲೋಕದ ಮುಂದಿನ ಪಾದವಿದೆ. ಇಲ್ಲಿ ಹೇಳುತ್ತಾರೆ: “ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ” ಎಂದು. ನಮಗೆ ಭಗವಂತನ ಸೃಷ್ಟಿ ಅರ್ಥವಾಗಬೇಕಾದರೆ ಆತ ಮೊದಲು ಏನು ಮಾಡಿದ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಭಗವಂತ ತನ್ನ ಸೃಷ್ಟಿಯಲ್ಲಿ ಮೊದಲು ತನ್ನನ್ನು ತಾನು ಅನೇಕ ರೂಪಗಳಿಂದ ಸೃಷ್ಟಿಸಿಕೊಂಡ. ನಂತರ ಜೀವರನ್ನು ಹಾಗೂ ಜಡವನ್ನೂ ಸೃಷ್ಟಿ ಮಾಡಿದ. ಇದೇ ತ್ರಿಸರ್ಗ. ಇಲ್ಲಿ ಬೆಳಕಿನಂತೆ ಭಗವಂತನ ಅನೇಕ ರೂಪಗಳ ಸೃಷ್ಟಿಯಾಯಿತು ಎಂದಿದ್ದಾರೆ. ಇದು ಹೇಗೆಂದರೆ: ನಾವು ಒಂದು ಹಣತೆಯಿಂದ ಇನ್ನೊಂದು ಹಣತೆಯನ್ನು ಹಚ್ಚಿದಂತೆ. ಎಷ್ಟೇ ಹಣತೆಯನ್ನು ಹಚ್ಚಿದರೂ, ಹೇಗೆ ಮೂಲ ಹಣತೆಯ ಪ್ರಕಾಶ ಕುಂದುವುದಿಲ್ಲವೋ, ಹಾಗೇ ಭಗವಂತ. ಆತ ಸಾವಿರಾರು ರೂಪ ಧರಿಸಿದರೂ ಕೂಡಾ, ಆತನ ಮೂಲರೂಪದ ಶಕ್ತಿ ಎಂದೂ ಕುಂದುವುದಿಲ್ಲ. ಆತನ ಮೂಲರೂಪ, ಅನಂತ ಅವತಾರ ರೂಪ, ಎಲ್ಲಾ ರೂಪಗಳಲ್ಲೂ ಸಮಾನ ಶಕ್ತಿ ಅಡಗಿದೆ. ಇದು ಬೆಳಕಿನಿಂದ ಬೆಳಕಿನ ಸೃಷ್ಟಿ. ಭಗವಂತನ ಮೂಲರೂಪವೂ ಪೂರ್ಣ ಹಾಗೂ ಆತನ ಅವತಾರ ರೂಪವೂ ಪೂರ್ಣ. ಭಗವಂತ ಅನೇಕ ರೂಪ ತಾಳುವುದು ಎಂದರೆ ಅದು ಆತನ ತೇಜಸ್ಸಿನ ವಿನಿಮಯ.
ಎರಡನೇ ಸರ್ಗ ‘ಜೀವರು’. ಇವರು ಭಗವಂತನಂತಲ್ಲ. ಜೀವರು ಅನೇಕ. ಅವರ ರೂಪಗಳು ಅನೇಕ. ಜೀವರ ಸ್ವಭಾವ ಭಿನ್ನ. ಅವರವರ ಸಿದ್ಧಿ ಬೇರೆ, ಜ್ಞಾನ ಬೇರೆ, ಕರ್ಮ ಬೇರೆ, ಆನಂದ ಬೇರೆ. ನನ್ನ ಜ್ಞಾನ ನಿಮ್ಮ ಜ್ಞಾನವಲ್ಲ; ನನ್ನ ಆನಂದ ನಿಮ್ಮ ಆನಂದವಲ್ಲ; ನನ್ನ ಸಾಧನೆ ನಿಮ್ಮ ಸಾಧನೆ ಅಲ್ಲ; ನನ್ನ ಸಿದ್ಧಿ ನಿಮ್ಮ ಸಿದ್ಧಿಯಲ್ಲ. ಹೀಗೆ ಎಷ್ಟು ಮಂದಿ ಜೀವರೋ ಅಷ್ಟು ವೈವಿದ್ಯ. ಅನಾದಿನಿತ್ಯನಾದ ಅನಂತ ಜೀವ ಅನಂತ ರೂಪವಾಗಿರುವುದರಿಂದ, ಮೊದಲು ಭಗವಂತ ಅನಂತ ರೂಪನಾಗಿ, ಜೀವರ ಬಿಂಬರೂಪನಾಗಿ ನಿಂತ. ಇದು ಹೇಗೆಂದರೆ: ನಾವು ಸಾವಿರಾರು ತಟ್ಟೆಯಲ್ಲಿ ನೀರನ್ನು ತುಂಬಿಸಿಟ್ಟು, ಅದರಲ್ಲಿ ಏಕನಾಗಿರುವ ಸೂರ್ಯನ ಸಾವಿರಾರು ಪ್ರತಿಬಿಂಬ ಕಂಡಂತೆ. ಈ ರೀತಿ ಭಗವಂತ ಬಿಂಬರೂಪನಾಗಿ, ‘ಜೀವ’ದ ಅಸ್ತಿತ್ವಕ್ಕೆ ಬೇಕಾದ ರೂಪವನ್ನು, ‘ಜೀವ’ರಿಗೆ ಮೂರನೇ ಸರ್ಗ ‘ಜಡ’ವನ್ನು ಸೃಷ್ಟಿಸಿ ಕೊಟ್ಟ. ಹೀಗೆ ಇಡೀ ವಿಶ್ವದಲ್ಲಿನ ಈ ಜಡ ಪ್ರಪಂಚ ಮುಖ್ಯವಾಗಿ ಮಣ್ಣಿನ ವಿಕಾರ. ವಿಶ್ವದಲ್ಲಿನ ಜೀವರು ನೀರಿನಲ್ಲಿನ ಪ್ರತಿಬಿಂಬದಂತೆ ಭಗವಂತನ ಪ್ರತಿಬಿಂಬ. ಈ ಎಲ್ಲಾ ಪ್ರತಿಬಿಂಬಗಳಿಗೆ ಬಿಂಬನಾಗಿ ನಿಂತು ನಡೆಸುವವನು ಬೆಳಕಿನಂತೆ ಅನಂತ ರೂಪನಾಗಿರುವ ಭಗವಂತ.

ನಮ್ಮ ಮುಂದಿನ ಪ್ರಶ್ನೆ: ಭಗವಂತ ಈ ಸೃಷ್ಟಿಯನ್ನು ಏಕೆ ನಿರ್ಮಾಣ ಮಾಡಿದ ಎನ್ನುವುದು. ಇದನ್ನು ಸ್ಪಷ್ಟಪಡಿಸಲು ಇಲ್ಲಿ ಹೇಳುತ್ತಾರೆ: ‘ಮೃಷಾ’ ಎಂದು. ಅಂದರೆ ಭಗವಂತ ಯಾವುದೇ ಲಾಭಕ್ಕಾಗಿ ಈ ಸೃಷ್ಟಿಯನ್ನು ನಿರ್ಮಿಸಿಲ್ಲ. ಆತನಿಗೆ ಈ ಸೃಷ್ಟಿ ವ್ಯರ್ಥ. ಆದರೆ ಇದನ್ನು ಆತ ನಮಗಾಗಿ ಸೃಷ್ಟಿಸಿದ. ಒಂದು ವೇಳೆ ಆತ ಈ ಪ್ರಪಂಚವನ್ನು ಸೃಷ್ಟಿಸದೇ ಇರುತ್ತಿದ್ದರೆ, ಇರವಿನ ಅರಿವೂ ಇಲ್ಲದೇ ಇದ್ದ ಸಮಸ್ತ ಜೀವಗಳು, ಉದ್ದಾರದ ಮಾರ್ಗದಿಂದ ವಂಚಿತರಾಗಿ ವ್ಯರ್ಥವಾಗಿ ಹೋಗಬೇಕಾಗುತ್ತಿತ್ತು. ಭಗವಂತನ ಈ ಸೃಷ್ಟಿ ನಾವು ಸಾಧನೆ ಮಾಡುವ ಪಾಠಶಾಲೆ. “ಈ ಶಾಲೆಯಲ್ಲಿ ಕಲಿತು ಪಾಸಾಗಿ ಮೇಲಕ್ಕೆ ಹೋಗು” ಎಂದು ಭಗವಂತ ಈ ಸೃಷ್ಟಿಯನ್ನು ನಮಗಾಗಿ ಸೃಷ್ಟಿಸಿದ.
ಜೀವ ಅನ್ನುವುದು ಒಂದು ಬೀಜದಂತೆ. ಆ ಬೀಜವನ್ನು ಬಿತ್ತಿದರೆ ಅದು ಗಿಡವಾಗಿ, ಹೆಮ್ಮರವಾಗಿ ಬೆಳೆದೀತು. ಆದರೆ ಆ ಬೀಜವನ್ನು ಬಿತ್ತದೆ, ಹಾಗೇ ಬಿಟ್ಟರೆ ಅದು ವ್ಯರ್ಥ. ಅಸೃಜ್ಜಾವಸ್ಥೆಯಲ್ಲಿ ಜೀವರ ಪಾಡು ಬಿತ್ತದ ಬೀಜದಂತೆ. ಅದನ್ನು ಸೃಜ್ಜಾವಸ್ಥೆಗೆ ತಾರದಿದ್ದರೆ ಆ ಜೀವದ ಅಸ್ತಿತ್ವವೇ ವ್ಯರ್ಥವಾಗಿ ಹೋಗುತ್ತದೆ. ಹೀಗೆ ಇರವಿನ ಅರಿವಿಲ್ಲದ ಜೀವನಿಗೆ ದೇಹವನ್ನು ಕೊಟ್ಟು, ಇರವಿನ ಅರಿವನ್ನು ಕೊಟ್ಟು, ಸೃಷ್ಟಿ ಎನ್ನುವ ತೋಟದಲ್ಲಿ ಜೀವ ಎನ್ನುವ ಬೀಜವನ್ನು ಬಿತ್ತಿ, ಜೀವನಿಗೆ ಉದ್ದಾರದ ದಾರಿ ತೋರಿದ ಕಾರುಣ್ಯಮೂರ್ತಿ ಆ ಭಗವಂತ.
ಸಂಸಾರದಲ್ಲಿ ನಾವು ಪಡುವ ಎಲ್ಲಾ ಕಷ್ಟಗಳೂ ಕೂಡಾ ನಮ್ಮ ಉದ್ದಾರದ ದಿಸೆಯಲ್ಲಿ ನಾವು ಅನುಭವಿಸತಕ್ಕಂತಹ ಅನುಭೂತಿಗಳು. ಇವು ನಮ್ಮನ್ನು ಎತ್ತರಕ್ಕೇರಿಸುವ ಮೆಟ್ಟಿಲುಗಳು. ಸಂಸ್ಕೃತದಲ್ಲಿ ಶಿಕ್ಷಾ ಎಂದರೆ ಶಿಕ್ಷಣ ಎಂದರ್ಥ. ಹಾಗಾಗಿ ನಮ್ಮ ಜೀವನದಲ್ಲಿ ಶಿಕ್ಷೆಯಂತೆ ಕಾಣುವ ಪ್ರತಿಯೊಂದು ಘಟನೆ ಕೂಡಾ ಒಂದೊಂದು ಕಲಿಕೆ. ಇದು ದಂಡನೆಯಲ್ಲ. ನಾವು ಅದನ್ನು ಕಲಿತು ಮೇಲಕ್ಕೆ ಬರುತ್ತೇವೆ. ಹೀಗೆ ಭಗವಂತ ತನಗೆ ವ್ಯರ್ಥವಾದರೂ ಕೂಡಾ, ಜೀವಗಳ ಉದ್ದಾರಕ್ಕಾಗಿ, ಕಾರುಣ್ಯದಿಂದ ಈ ಸೃಷ್ಟಿಯನ್ನು ನಮಗಾಗಿ ನಿರ್ಮಾಣಮಾಡಿದ. ನಾವು ಭಗವಂತ ಒದಗಿಸಿಕೊಟ್ಟ ಈ ಸಾಧನಾ ಶರೀರ ಬಳಸಿಕೊಂಡು, ಭಗವಂತನತ್ತ ಹೆಜ್ಜೆ ಹಾಕಬೇಕು. ಸಾಧನಾ ಶರೀರದಿಂದಲೇ ಜೀವನಿಗೆ ಸಾಧನೆ. ಈ ರೀತಿ ಸಾಧನೆ ಪೂರ್ತಿಯಾಗಿ ಭಗವಂತ ಕರೆಸಿಕೊಳ್ಳುವ ತನಕ ಜೀವ ಕಾಯಬೇಕು.
ಭಗವಂತ ನಮಗಾಗಿ ನಿರ್ಮಿಸಿದ ಈ ಪ್ರಪಂಚ ನಮಗೆ ಎಂದೂ ವ್ಯರ್ಥವಲ್ಲ. ಈ ಪ್ರಪಂಚ ಮಿಥ್ಯವಲ್ಲ. ಭಗವಂತ ಎಂದೂ ಮಿಥ್ಯವಾದುದ್ದನ್ನು ಮಾಡುವುದಿಲ್ಲ. ಅದನ್ನೇ ಇಲ್ಲಿ ಹೀಗೆ ಹೇಳಿದ್ದಾರೆ: “ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ” ಎಂದು. ಕುಹಕ ಎಂದರೆ ವಂಚನೆ, ಮೋಸ, ಕಪಟ, ಸುಳ್ಳು, ಇತ್ಯಾದಿ. ಆದರೆ ಭಗವಂತ ನಿರಸ್ತಕುಹಕ. ಅದು ನಿಷ್ಕಪಟವಾದ ಪರಿಶುದ್ಧ ತತ್ತ್ವ.  ಭಗವಂತನ ಮತ್ತು ಜೀವನ ನಡುವೆ ನೇರ ಸಂಬಂಧವಾಗಿ ನಡೆಯುವ ಯಾವ ಕ್ರಿಯೆಯಲ್ಲೂ ಕೂಡಾ ಕಪಟವಿಲ್ಲ. ಇದು ಶಾಸ್ತ್ರದ ಮೂಲ ಪ್ರಮೇಯ. ಸೃಷ್ಟಿಯಲ್ಲಿ ಕಪಟ, ಮೋಸ, ವಂಚನೆ ಬೆಳೆದಿರುವುದು ಮಾಧ್ಯಮಗಳಿಂದ. ಉದಾಹರಣೆಗೆ ಸೂರ್ಯನನ್ನು ನೀರು ಪ್ರತಿಫಲಿಸುತ್ತದೆ. ಆಗ ಅಲ್ಲಿ ಸೂರ್ಯ ವಿಕೃತನಾಗಿ ಕಾಣಬಹುದು. ಇದಕ್ಕೆ ಕಾರಣ ಮಾಧ್ಯಮವಾದ ನೀರೇ ಹೊರತು, ಸೂರ್ಯನಲ್ಲ. ಪ್ರತಿಯೊಂದು ಜೀವದ ಯೋಗ್ಯತೆಗನುಗುಣವಾಗಿ ಅದು ಪ್ರತಿಫಲಿಸುತ್ತದೆ. ಆದ್ದರಿಂದ ಪ್ರಪಂಚದಲ್ಲಿ ಮೂಲಸತ್ಯ ವಿಕೃತವಾಗಿ ಅಜ್ಞಾನ, ದುಃಖ ಸೇರಿಕೊಂಡಿವೆ.
‘ಸತ್ಯಂ ಪರಂ ಧೀಮಹಿ’. ಇಲ್ಲಿ ಭಗವತನನ್ನು ‘ಸತ್ಯಃ’ ಎಂದು ಕರೆದಿದ್ದಾರೆ. ಈ ಶಬ್ದವನ್ನು ಒಡೆದು ನೋಡಿದರೆ: ಸತ್+ತಿ+ಯ. ಇಲ್ಲಿ ಸತ್ ಎಂದರೆ ನಿರ್ದುಷ್ಟವಾದದ್ದು; ‘ತಿ’ ಅಂದರೆ ಆನಂದ; ‘ಯ’ ಅಂದರೆ ಜ್ಞಾನ. ಆದ್ದರಿಂದ ಸತ್ಯಃ ಎಂದರೆ ‘ಸಚ್ಚಿದಾನಂದ ಸ್ವರೂಪ’ ಎಂದರ್ಥ. ಭಗವಂತ ಅಜ್ಞಾನ, ದುಃಖದ ಸ್ಪರ್ಶವೇ ಇಲ್ಲದ ಪರಿಪೂರ್ಣ ಜ್ಞಾನಾನಂದಸ್ವರೂಪ. ಸತ್ ಅನ್ನುವ ಪದಕ್ಕೆ ಇನ್ನೂ ಅನೇಕ ಅರ್ಥಗಳಿವೆ. ಸರ್ವಸೃಷ್ಟ, ಸರ್ವ ನಿಯಾಮಕ, ಸರ್ವ ಸ್ಥಿತಿ ಕಾರಣ, ಸರ್ವ ಸಂಹಾರಕ ಇತ್ಯಾದಿ. ಅದೇ ರೀತಿ ಸತ್ ಅಂದರೆ ಜ್ಞಾನ-ಅಜ್ಞಾನ-ಬಂಧ-ಮೋಕ್ಷ. ಆದ್ದರಿಂದ ಸತ್ಯಃ ಎಂದರೆ ಸೃಷ್ಟಿಪ್ರದ, ಸ್ಥಿತಿಪ್ರದ, ಸಂಹಾರಪ್ರದ, ನಿಯಾಮಕ, ಜ್ಞಾನಪ್ರದ, ಅಜ್ಞಾನಪ್ರದ, ಬಂಧಪ್ರದ ಮತ್ತು ಮೋಕ್ಷಪ್ರದನಾದ ಭಗವಂತ. ಸೃಷ್ಟಿ-ಸ್ಥಿತಿ-ಸಂಹಾರ ನಿಯಾಮಕನಾಗಿ, ಜ್ಞಾನಾಜ್ಞಾನ-ಬಂಧ-ಮೋಕ್ಷಗಳಿಗೆ ಕಾರಣನಾಗಿರುವ, ಸದ್ಗುಣಸ್ವರೂಪಜ್ಞಾನಾನಂದಮಯನಾದ ಭಗವಂತ 'ಸತ್ಯಃ'.   ಇಂತಹ ಭಗವತನನ್ನು ಇಲ್ಲಿ ‘ಪರಮ್’ ಎಂದು ಸಂಬೋಧಿಸಿದ್ದಾರೆ. ಪರಮ್ ಎಂದರೆ: ಸರ್ವೋತ್ತಮ, ಸರ್ವವಿಲಕ್ಷಣ, ಸರ್ವಗುಣಪೂರ್ಣ, ಸರ್ವಪಾಲಕ ಎಂದರ್ಥ. ಇಂತಹ ಭಗವಂತನನ್ನು ನಾವೆಲ್ಲರೂ ಧ್ಯಾನ ಮಾಡೋಣ(ಧೀಮಹಿ) ಎನ್ನುವಲ್ಲಿಗೆ ಭಾಗವತದ ಮೊದಲ ಶ್ಲೋಕ ಮುಕ್ತಾಯವಾಗುತ್ತದೆ.
ಹಿಂದೆ ಹೇಳಿದಂತೆ ಎಪ್ಪತ್ತಾರು ಅಕ್ಷರಗಳ ಈ ಶ್ಲೋಕ ಇಡೀ ತತ್ತ್ವ ಮತ್ತು ಮಾತೃಕೆಗಳ ಸಾರಸರ್ವಸ್ವವನ್ನು ತನ್ನ ಗರ್ಭದಲ್ಲಿ ಧರಿಸಿದೆ. ಮೇಲೆ ವಿವರಿಸಿದ ವಿವರಣೆ ಕೇವಲ ಒಂದು ಆಯಾಮದಲ್ಲಿ ನಾವು ಕಾಣಬಹುದಾದ ಅರ್ಥಸಾರ. ಆದರೆ ಈ ಶ್ಲೋಕಕ್ಕೆ ಅನೇಕ ನೆಲೆಗಳಿವೆ. ಇನ್ನೊಂದು ನೆಲೆಯಲ್ಲಿ ನೋಡಿದರೆ ಭಾಗವತ ಎನ್ನುವುದು ಕೃಷ್ಣನ ಕಥೆ. ಕೃಷ್ಣ ಭೂಮಿಯಲ್ಲಿ ಅವತಾರ ಸಮಾಪ್ತಿ ಮಾಡಿ ಹೊರಟುಹೋದ ಮೇಲೆ  ‘ಧರ್ಮ’ ಭಾಗವತವನ್ನು ಬಂದು ಸೇರಿತು ಎನ್ನುತ್ತಾರೆ. ಕೃಷ್ಣನ ಇನ್ನೊಂದು ರೂಪ ಭಾಗವತ ಎಂದು ಭಾಗವತವೇ ಹೇಳುತ್ತದೆ. ಕೃಷ್ಣ ದೇವಕಿಯ ಗರ್ಭದಲ್ಲಿದ್ದಾಗ ದೇವತೆಗಳು ಮಾಡಿದ ಸ್ತೋತ್ರವನ್ನು ಭಾಗವತದಲ್ಲೇ ಹೀಗೆ ಹೇಳಿದ್ದಾರೆ:

ಸತ್ಯವ್ರತಂ ಸತ್ಯಪರಂ ತ್ರಿಸತ್ಯಂ ಸತ್ಯಸ್ಯ ಯೋನಿಂ ನಿಹಿತಂ ಚ ಸತ್ಯೇ ।
ಸತ್ಯಸ್ಯ ಸತ್ಯಮುತ ಸತ್ಯನೇತ್ರಂ ಸತ್ಯಾತ್ಮಕಂ ತ್ವಾಂ ಶರಣಂ ಪ್ರಪನ್ನಾಃ ॥೧೦-೩-೨೭॥

ಇಲ್ಲಿ ಭಗವಂತನನ್ನು ದೇವತೆಗಳು ‘ಸತ್ಯಃ’ ಎಂದು ಸ್ತೋತ್ರ ಮಾಡಿರುವುದನ್ನು ಕಾಣುತ್ತೇವೆ. ‘ಸತ್ಯಃ’ ಎನ್ನುವುದು ಕೃಷ್ಣಾವತಾರದ ವಿಶಿಷ್ಠ ನಾಮಧೇಯ. ಅದನ್ನೇ ಇಲ್ಲಿ ‘ಸತ್ಯಂ ಪರಂ ಧೀಮಹಿ’ ಎನ್ನುವಲ್ಲಿ ಕಾಣುತ್ತೇವೆ. ಭಾಗವತದ ಮೊದಲ ಶ್ಲೋಕಕ್ಕೆ ಕೃಷ್ಣಾವತಾರ ಪರವಾದ ಇನ್ನೊಂದು ಅರ್ಥವಿದೆ. ಬನ್ನಿ, ಭಗವಂತನ ಕೃಪೆ ಬೇಡಿ ಆ ಅರ್ಥ ವಿಶೇಷವನ್ನು ಸಂಕ್ಷಿಪ್ತವಾಗಿ ತೆರೆದು ನೋಡೋಣ. 

Saturday, December 22, 2012

Shrimad BhAgavata in Kannada -Skandha-01 CH-01 (4)

ಸೃಷ್ಟಿಯ ಆದಿಯಲ್ಲಿ ಭಗವಂತ ಜೀವರಲ್ಲಿ ಎಲ್ಲರಿಗಿಂತ ಶ್ರೇಷ್ಠ ಜೀವ ಚತುರ್ಮುಖಬ್ರಹ್ಮನಿಗೆ ವೇದವನ್ನು ಉಪದೇಶಿಸಿದ. ತನ್ನ ಪ್ರಥಮ ಪುತ್ರ ಚತುರ್ಮುಖನಿಗೆ ಹೃದಯಪೂರ್ವಕವಾಗಿ, ಪೂರ್ಣ ಅರ್ಥವಾಗುವಂತೆ ಭಗವಂತ ವೇದವನ್ನು ಉಪದೇಶಿಸಿದ ಎನ್ನುವುದನ್ನು ಇಲ್ಲಿ ‘ಹೃದಾ’ ಎನ್ನುವ ವಿಶೇಷಣ ಎತ್ತಿ ಹೇಳುತ್ತದೆ. ಋಗ್ವೇದದಲ್ಲಿ ಹೇಳುವಂತೆ: “ಕಶ್ಛಂದಸಾಂ ಯೋಗಮಾ ವೇದ ಧೀರಃ”॥ ೧೦.೧೧೪.೦೯ ॥  ಅಂದರೆ ಇಲ್ಲಿ  “ವೇದಗಳ ಅರ್ಥವನ್ನು ಪೂರ್ಣ ಬಲ್ಲೆ ಎಂದು ಹೇಳುವ ಧೀರ ಯಾರಿದ್ದಾರೆ” ಎಂದು ವೇದವೇ ಪ್ರಶ್ನಿಸುತ್ತಿದೆ ಮತ್ತು ಹೇಳುತ್ತದೆ: “ವೇದಾರ್ಥವನ್ನು ಬ್ರಹ್ಮ-ವಾಯು(ಕಃ) ತಿಳಿದಾರು” ಎಂದು.
ಸರ್ವ ಶ್ರುತಿಗಳು, ತರ್ಕಗಳು, ಎಲ್ಲವೂ ಭಗವಂತನನ್ನೇ ಹೇಳುತ್ತವೆ, ಆದರೆ ಅವನನ್ನು ತಿಳಿಯಲು ಸಾಧ್ಯವಾಗುವುದಿಲ್ಲವಲ್ಲಾ  ಎಂದರೆ ಇಲ್ಲಿ ಹೇಳುತ್ತಾರೆ:  “ಮುಹ್ಯಂತಿ ಯಂ ಸೂರಯಃ” ಎಂದು. ಭಗವಂತನ ಬಗ್ಗೆ ಜ್ಞಾನಿ(ಸೂರಿ)ಗಳೂ ಕೂಡಾ ಗೊಂದಲಕ್ಕೊಳಗಾಗುತ್ತಾರೆ. ಅಷ್ಟೇ ಅಲ್ಲ, ಜ್ಞಾನಿಗಳೊಂದಿಗೆ ದೇವತೆಗಳೂ ಕೂಡಾ ಒಮ್ಮೊಮ್ಮೆ ವಿಸ್ಮರಣಕ್ಕೊಳಗಾಗಿ ಭಗವಂತನನ್ನು ಮರೆತುಬಿಡುತ್ತಾರೆ! ಹೀಗಾಗಿ ಭಗವಂತನನ್ನು ತಿಳಿಯಲು ಹಾಗೂ ಎಂದೂ ಆತನನ್ನು ಮರೆಯದೇ ಇರಲು ನಾವು ಆತನಲ್ಲೇ ಶರಣಾಗಬೇಕು. ಶಾಸ್ತ್ರವೇದ್ಯ ಭಗವಂತನ ಕರುಣೆ ಇಲ್ಲದೇ ಆತನನ್ನು ಅರಿಯಲು ಸಾಧ್ಯವಿಲ್ಲ.

ಒಟ್ಟಿನಲ್ಲಿ ಹೇಳಬೇಕೆಂದರೆ: ಭಗವಂತ ಆದಿಜೀವನಾದ ಚತುರ್ಮುಖನಿಗೆ ಸಮಸ್ತ ವೇದವಾಙ್ಮಯವನ್ನು ಕೊಟ್ಟ. ನಾವು ಈ ರೀತಿ ಭಗವಂತನಿಂದ ಇಳಿದುಬಂದ ವೇದದಿಂದ,  ವೇದವೇದ್ಯನಾದ ಭಗವಂತನನ್ನು ವೇದದ ಒಂದೊಂದು ಪದದಿಂದಲೂ ಸಮನ್ವಯಮಾಡಿ ಅರಿತುಕೊಳ್ಳಬೇಕು. ತರ್ಕದಿಂದಲೂ ಆತನ ಅಸ್ತಿತ್ವವನ್ನು ತಿಳಿದುಕೊಳ್ಳಬೇಕು. ಭಗವಂತ ಈ ಜಗತ್ತಿನ ಸರ್ವಕಾರಣ, ಸರ್ವಜ್ಞ, ಸರ್ವಶಕ್ತ, ಸರ್ವತಂತ್ರ-ಸ್ವತಂತ್ರ ಆತ. ಇಂತಹ ಭಗವಂತನನ್ನು ಆತನ ಕರುಣೆಯಿಂದ ಅರಿಯಬೇಕು ಎನ್ನುವುದು ಭಾಗವತದ ಪ್ರಥಮ ಶ್ಲೋಕದ ಮೊದಲ ಎರಡು ಪಾದದ ಸಾರ.  

Friday, December 21, 2012

Shrimad BhAgavata in Kannada -Skandha-01 CH-01 (3)


ಇಲ್ಲಿ ಭಗವಂತನನ್ನು “ಅರ್ಥೇಷು ಅಭಿಜ್ಞಃ” ಎಂದು ಕರೆದಿದ್ದಾರೆ. ಸಮಸ್ತ ವೇದವಾಙ್ಮಯ, ಪುರಾಣ, ಇತಿಹಾಸಗಳು, ನಮಗೆ ತಿಳಿದಿರುವ ತರ್ಕಗಳು, ಎಲ್ಲವೂ ಜಗತ್ಕಾರಣ ಭಗವಂತನನ್ನು ಹೇಳುತ್ತವೆ. ಒಂದು ವಸ್ತುವನ್ನು ಸೃಷ್ಟಿ ಮಾಡಬೇಕಾದರೆ ನಮಗೆ ಇಚ್ಛಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿ ಬೇಕು. ವಸ್ತುವಿನ ಅರಿವಿಲ್ಲದವನಿಗೆ ಒಂದು ವಸ್ತುವನ್ನು ಸೃಷ್ಟಿಮಾಡಲು ಸಾಧ್ಯವಿಲ್ಲ. ಆದ್ದರಿಂದ ಯಾರು ಸರ್ವಜ್ಞನಲ್ಲವೋ ಅವನು ಸರ್ವಕರ್ತನಾಗಲು ಸಾಧ್ಯವಿಲ್ಲ. ಇಡೀ ಜಗತ್ತನ್ನು ಸೃಷ್ಟಿಮಾಡಿದ ಭಗವಂತನಿಗೆ ಇಡೀ ಜಗತ್ತಿನಲ್ಲಿರುವ ಸಮಸ್ತ ಕಾರ್ಯ ಕಾರಣಗಳ ಅರಿವಿರಲೇಬೇಕು. ಆದ್ದರಿಂದ ಭಗವಂತ ಕೇವಲ ಅರ್ಥಜ್ಞನಲ್ಲ, ಅವನು ‘ಅರ್ಥೇಷು ಅಭಿಜ್ಞಃ’. ಆತನಲ್ಲಿ ಅನಂತಾನಂತ ವಸ್ತುಗಳ ಅನಂತಾನಂತ ಅರಿವು ತುಂಬಿದೆ.
ಇಲ್ಲಿ ನಿಮಗೊಂದು ಪ್ರಶ್ನೆ ಬರಬಹುದು. ಚತುರ್ಮುಖ ಬ್ರಹ್ಮನನ್ನು ವಿಧಿ, ವಿಧಾತ, ಸೃಷ್ಟಿಕರ್ತಾ, ಇತ್ಯಾದಿಯಾಗಿ ಕರೆಯುತ್ತಾರೆ. ಸೃಷ್ಟಿ ಕಾರಣಳಾಗಿ ಪ್ರಕೃತಿ ಇದ್ದಾಳೆ. ಆದರೆ ಕೇವಲ ಭಗವಂತ ಮಾತ್ರ ಏಕೆ ‘ಅರ್ಥೇಷು ಅಭಿಜ್ಞಃ’ ಎಂದು. ಇದು ಉತ್ತಮವಾದ ಪ್ರಶ್ನೆ. ಈ ಪ್ರಶ್ನೆಗೆ ಪೂರಕ ಎನ್ನುವಂತೆಈ ಕೆಳಗಿನ ವೇದಮಂತ್ರವಿದೆ:

ಅಹಮೇವ ಸ್ವಯಮಿದಂ ವದಾಮಿ ಜುಷ್ಟಂ ದೇವೇಭಿರುತ ಮಾನುಷೇಭಿಃ ।
ಯಂ ಕಾಮಯೇ ತಂತಮುಗ್ರಂ ಕೃಣೋಮಿ ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಂ॥ ಋಗ್ವೇದ೧೦-೧೨೫-೦೫ ॥

ಇಲ್ಲಿ ಹೇಳುವಂತೆ: ಜಗತ್ತನ್ನು ಸೃಷ್ಟಿಮಾಡಬಲ್ಲ ಚತುರ್ಮುಖನನ್ನು ನಾನು ಸೃಷ್ಟಿಸಬಲ್ಲೆ ಎಂದಿದ್ದಾಳೆ ಶ್ರೀಲಕ್ಷ್ಮಿ. ಆದರೂ ಕೂಡಾ ಭಗವಂತನೇ ‘ಅರ್ಥೇಷು ಅಭಿಜ್ಞಃ’ ಏಕೆಂದರೆ  ತಾಯಿ ಲಕ್ಷ್ಮಿಯೇ ಹೇಳುವಂತೆ:

ಅಹಂ ಸುವೇ ಪಿತರಮಸ್ಯ ಮೂರ್ಧನ್ಮಮ ಯೋನಿರಪ್ಸ್ವಂತಃ ಸಮುದ್ರೇ ।
ತತೋ ವಿ ತಿಷ್ಠೇ ಭುವನಾನು ವಿಶ್ವೋತಾಮೂಂ ದ್ಯಾಂ ವರ್ಷ್ಮಣೋಪ ಸ್ಪೃಶಾಮಿ   ॥ ಋಗ್ವೇದ ೧೦-೧೨೫-೦೭ ॥

ಇಲ್ಲಿ ಲಕ್ಷ್ಮಿ ಹೇಳುತ್ತಾಳೆ: ನನಗೊಬ್ಬ ಕಾರಣಪುರುಷನಿದ್ದಾನೆ, ಅವನು ಸಮುದ್ರದಲ್ಲಿ ಮಲಗಿದ್ದಾನೆ ಎಂದು. ಅಂದರೆ ಪ್ರಕೃತಿ ಕೂಡಾ ಭಗವಂತನ ಅಧೀನ. ಪ್ರಕೃತಿಗೆ ಸರ್ವ ಕರ್ತೃತ್ವ ಇದ್ದರೂ ಕೂಡಾ, ಅದು ಭಗವಂತನ ಅಧೀನ. ಹೇಗೆ ಪ್ರಕೃತಿಯೋ ಹಾಗೇ  ಚತುರ್ಮುಖ ಬ್ರಹ್ಮ ಕೂಡಾ. ಶ್ವೇತಾಶ್ವತರ  ಉಪನಿಷತ್ತಿನಲ್ಲಿ ಹೇಳುವಂತೆ:

ಯೋ ಬ್ರಹ್ಮಾಣಂ ವಿದಧಾತಿ ಪೂರ್ವಂ ಯೋ ವೈ ವೇದಾಶ್ಚ ಪ್ರಹಿಣೋತಿ ತಸ್ಮೈ ।
ತಂ ಹ ದೇವಮಾತ್ಮಬುದ್ಧಿ ಪ್ರಕಾಶಂ ಮುಮುಕ್ಷು ರ್ವೈ ಶರಣಮಹಂ ಪ್ರಪದ್ಯೇ  ॥ ೬-೧೮ ॥

ಚತುರ್ಮುಖನಿಗೆ ಬುದ್ಧಿಯ ಬೆಳಕನ್ನು ಕೊಟ್ಟವ ಹಾಗೂ ಸೃಷ್ಟಿಯ ಅರಿವನ್ನು ಕೊಟ್ಟ ಭಗವಂತ ‘ಅರಿವಿನ ಮಡು’. ಇಂತಹ ಭಗವಂತನನ್ನು ಇಲ್ಲಿ ‘ಸ್ವರಾಟ್’ ಎಂದು ಕರೆದಿದ್ದಾರೆ. ಅಂದರೆ ಆತ ಇನ್ನೊಬ್ಬರಿಂದ ಅರಿವು ಪಡೆಯುವುದಿಲ್ಲ. ಚತುರ್ಮುಖ ಬ್ರಹ್ಮ ಸ್ವಯಂ ಸ್ವರಾಟ್ ಅಲ್ಲ. ಏಕೆಂದರೆ ಇಲ್ಲಿ : “ತೇನೇ ಬ್ರಹ್ಮ ಹೃದಾ ಯ ಆದಿಕವಯೇ” ಎಂದಿದ್ದಾರೆ. ‘ತೇನೇ’ ಅಂದರೆ  ಬಿತ್ತರಿಸುವುದು. ಶಬ್ದಗಳ ಬೃಹತ್ ಸಮುದಾಯವಾದ ವೇದವನ್ನು ಇಲ್ಲಿ ‘ಬ್ರಹ್ಮ’ ಎಂದಿದ್ದಾರೆ. ವೇದವನ್ನು ಆದಿಕವಿ ಚತುರ್ಮುಖ ಬ್ರಹ್ಮನಿಗೆ ಬಿತ್ತರಿಸಿದ ಭಗವಂತ ನಿಜವಾದ ‘ಅರ್ಥೇಷು ಅಭಿಜ್ಞಃ’. ಇಲ್ಲಿ ಆದಿಕವಿ ಎಂದು ಚತುರ್ಮುಖನನ್ನು ಸಂಬೋಧಿಸಿದ್ದಾರೆ. ಸಾಮಾನ್ಯವಾಗಿ ವಾಲ್ಮೀಕಿಯನ್ನು ಆದಿಕವಿ ಎಂದು ಕರೆಯುತ್ತಾರೆ. ಆದರೆ ವಾಲ್ಮೀಕಿಗೂ  ಸ್ಫೂರ್ತಿಕೊಟ್ಟ ಚತುರ್ಮುಖ ನಿಜವಾದ ಆದಿಕವಿ. ಕವಿ ಎಂದರೆ ಎಲ್ಲ ಶಬ್ದಗಳಿಂದಲೂ ಭಗವಂತನ ಗುಣವಿಶೇಷ ಕಾಣುವವ. ಈ ಸೃಷ್ಟಿಯ ಮೊದಲ ಜೀವನಾಗಿರುವ, ಸರ್ವಶಬ್ದಗಳಲ್ಲೂ ಭಗವಂತನನ್ನು ಕಾಣಬಲ್ಲ ಚತುರ್ಮುಖ ‘ಆದಿಕವಿ’. ಈ ಆದಿಕವಿಗೆ ಸೃಷ್ಟಿಯ ಪೂರ್ವದಲ್ಲಿ ವೇದವನ್ನು ಬಿತ್ತರಿಸಿದ ಭಗವಂತ ‘ಅರ್ಥೇಷು ಅಭಿಜ್ಞಃ’