Sunday, February 17, 2013

Shrimad BhAgavata in Kannada -Skandha-01-Ch-07(03)


ಪರೀಕ್ಷಿತ ರಾಜನ ಕಥೆ
ಅಶ್ವತ್ಥಾಮನಿಂದ ದ್ರೌಪದಿಯ ಐದು ಮಂದಿ ಮಕ್ಕಳ ಹತ್ಯೆ

ಪರೀಕ್ಷಿತೋSಥ ರಾಜರ್ಷೇರ್ಜನ್ಮಕರ್ಮವಿಲಾಪನಮ್ ।
ಸಂಸ್ಥಾಂ ಚ ಪಾಂಡುಪುತ್ರಾಣಾಂ ವಕ್ಷ್ಯೇ ಕೃಷ್ಣಕಥೋದಯಾಮ್ ॥೧೨॥

ಯದಾ ಮೃಧೇ ಕೌರವಸೃಂಜಯಾನಾಂ ವೀರೇಷ್ವಥೋ ವೀರಗತಿಂ ಗತೇಷು ।
ವೃಕೋದರಾವಿದ್ಧಗದಾಭಿಮರ್ಶ ಭಗ್ನೋರುದಂಡೇ ಧೃತರಾಷ್ಟ್ರಪುತ್ರೇ ॥೧೩॥

ಭರ್ತುಃ ಪ್ರಿಯಂ ದ್ರೌಣಿರಿತಿ ಸ್ಮ ಚಿಂತಯನ್ ಕೃಷ್ಣಾಸುತಾನಾಂ ಸ್ವಪತಾಂ ಶಿರಾಂಸಿ ।
ಉಪಾಹರದ್ ವಿಪ್ರಿಯಮೇತದಸ್ಯ ಜುಗುಪ್ಸಿತಂ ಕರ್ಮ ವಿಗರ್ಹಯಂತೀ ॥೧೪॥


ಮಹಾಭಾರತ ಯುದ್ಧದ ಕೊನೆಯ ದಿನ, ಭೀಮಸೇನ ದುರ್ಯೋಧನನ ತೊಡೆಯನ್ನು ಮುರಿಯುವುದರೊಂದಿಗೆ  ಹದಿನೆಂಟುದಿನಗಳ ಯುದ್ಧ ಕೊನೆಗೊಳ್ಳುತ್ತದೆ. ಈ ರೀತಿ ತೊಡೆಮುರಿದುಬಿದ್ದ ದುರ್ಯೋಧನನನ್ನು ಕಾಣಲು ಅಶ್ವತ್ಥಾಮಾಚಾರ್ಯರು ಹೋಗುತ್ತಾರೆ. ಆಗ ದುರ್ಯೋಧನ ಅಶ್ವತ್ಥಾಮಾಚಾರ್ಯರಲ್ಲಿ ಪ್ರಾರ್ಥಿಸಿಕೊಳ್ಳುತ್ತಾನೆ: “ನಾನು ಸಾಮ್ರಾಟನಾಗಬೇಕೆಂದು ಕನಸು ಕಂಡೆ. ಆದರೆ ನನ್ನ ಆಸೆ ಈಡೇರಲಿಲ್ಲ. ಆದರೂ ಇನ್ನೂ ಒಂದು ಆಸೆ ನನ್ನದು. ಪಾಂಡವರ ವಂಶ ಈ ದೇಶವನ್ನಾಳಬಾರದು. ಅವರ ವಂಶ ನಿರ್ವಂಶವಾಯಿತು ಎನ್ನುವ ಸುದ್ಧಿ ಕೇಳಿ ನಾನು ಪ್ರಾಣಬಿಡಬೇಕು” ಎಂದು.
ಇತ್ತ  ಪಾಂಡವ ಶಿಬಿರದಲ್ಲಿ ಯುದ್ಧಮುಗಿದ ರಾತ್ರಿಯಾಗಿರುವುದರಿಂದ ಎಲ್ಲರೂ ಗಾಢ ನಿದ್ದೆಯಲ್ಲಿದ್ದಾರೆ. ಕೃಷ್ಣ ಪಾಂಡವರನ್ನು ಶಿಬಿರದಿಂದ ದೂರ ಕರೆದುಕೊಂಡು ಹೋಗಿರುವ ಸಂದರ್ಭದಲ್ಲಿ ಅಶ್ವತ್ಥಾಮಾಚಾರ್ಯರು ಮೂರ್ಖ ದುರ್ಯೋಧನನ ಅಭಿಲಾಷೆಯನ್ನು ಈಡೇರಿಸುವುದಕ್ಕಾಗಿ ಪಾಂಡವ ಶಿಬಿರಕ್ಕೆ ನುಗ್ಗಿ, ಅಲ್ಲಿ ಮಲಗಿ ನಿದ್ರಿಸುತ್ತಿದ್ದ ಐದು ಮಂದಿ ದ್ರೌಪದಿಯ ಮಕ್ಕಳ ತಲೆ ಕಡಿಯುತ್ತಾನೆ. ಅವರೆಲ್ಲರೂ ಸುಮಾರು ಹದಿನಾಲ್ಕರಿಂದ ಹದಿನೆಂಟು ವರ್ಷ ವಯಸ್ಸಿನ ಹಸುಳೆಗಳು. ಇಂತಹ ಘೋರ ಪಾತಕ ಅಶ್ವತ್ಥಾಮನಿಗೆ   ಹಿತಕರವಾಗಿರಲಿಲ್ಲ. ಅತ್ತ ದುರ್ಯೋಧನ ಈ ಹತ್ಯೆ ತನಗೆ ಹಿತವೆಂದು ಭಾವಿಸಿದ್ದರೂ ಕೂಡಾ, ಆ ನೀಚ ಕೃತ್ಯ ಅವನಿಗೂ ಹಿತವನ್ನು ತರುವಂತಹದ್ದಾಗಿರಲಿಲ್ಲ.
ಹೀಗೆ ನಿದ್ರಿಸುತ್ತಿದ್ದ ಮಕ್ಕಳ ಕಗ್ಗೊಲೆ ಮಾಡಿದ್ದಷ್ಟೇ ಅಲ್ಲದೆ, ದೃಷ್ಟದ್ಯುಮ್ನನನ್ನು ಕತ್ತು ಹಿಸುಕಿ  ಸಾಯಿಸುತ್ತಾನೆ ಅಶ್ವತ್ಥಾಮ. ಸಾಲದೆನ್ನುವುದಕ್ಕೆ ಇಡೀ ಪಾಂಡವ ಶಿಬಿರಕ್ಕೆ ಬೆಂಕಿಯಿಟ್ಟು ಅಲ್ಲಿರುವ ಎಲ್ಲಾ ದಾಸ ದಾಸಿ ಮತ್ತು ಸೈನಿಕರನ್ನು ಜೀವಂತ ದ್ವಂಸ ಮಾಡುತ್ತಾನೆ. ಈ ಸಂದರ್ಭದಲ್ಲಿ ಯಾರೂ ತಪ್ಪಿಸಿಕೊಂಡು ಹೋಗದಂತೆ ಬಾಗಿಲಲ್ಲಿ ಕೃಪಾಚಾರ್ಯರನ್ನು ಕಾವಲಿಗೆ ನಿಲ್ಲಿಸಿದ್ದ ಅಶ್ವತ್ಥಾಮ!  ಎಂತಹ ಹೇಯ ಕೃತ್ಯ!

ಮಾತಾ ಶಿಶೂನಾಂ ನಿಧನಂ ಸುತಾನಾಂ ನಿಶಮ್ಯ ಘೋರಂ ಪರಿತಪ್ಯಮಾನಾ ।
ತದಾSರುದದ್ ಬಾಷ್ಪಕಲಾಕುಲಾಕ್ಷೀ ತಾಂ ಸಾಂತ್ವಯನ್ನಾಹ ಕಿರೀಟಮಾಲೀ ॥೧೫॥

ಇಂತಹ ಸಂದರ್ಭದಲ್ಲಿ ದಾಸವರ್ಗದ ಒಬ್ಬ ಸೇವಕ ಬೆಂಕಿಯ ಜ್ವಾಲೆಯಿಂದ ಹಾಗೂ ಕೃಪಾಚಾರ್ಯರ ದೃಷ್ಟಿಯಿಂದ ತಪ್ಪಿಸಿಕೊಂಡು ಬಂದು ಪಾಂಡವರಿಗೆ ಸುದ್ದಿ ಮುಟ್ಟಿಸುವಲ್ಲಿ ಸಫಲನಾಗುತ್ತಾನೆ. ಈ ಭಯಾನಕ ಕೃತ್ಯದ ಸುದ್ಧಿ ಕೇಳಿ ದ್ರೌಪದಿಗೆ ತಡೆದು ಕೊಳ್ಳಲಾಗುವುದಿಲ್ಲ. ಆಕೆ ಕಣ್ಣೀರಿಡುತ್ತಾಳೆ. ದ್ರೌಪದಿಯ ಕಣ್ಣೀರನ್ನು ಕಂಡ ಅರ್ಜುನ ಆಕೆಯನ್ನು ಸಂತೈಸುತ್ತಾನೆ. “ನಡೆದ ಘಟನೆಯ ಬಗ್ಗೆ ದುಃಖಿಸಬೇಡ. ನಿನಗೆ ಅನ್ಯಾಯ ಮಾಡಿದ ಆ  ಅಶ್ವತ್ಥಾಮನಿಗೆ ತಕ್ಕ ಶಾಸ್ತಿ ಮಾಡುವುದು ನನ್ನ ಕರ್ತವ್ಯ” ಎನ್ನುತ್ತಾನೆ ಅರ್ಜುನ. ಕಂಬನಿ ಸುರಿಸುವುದರಿಂದ ಕಳೆದುಕೊಂಡಿದ್ದನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎನ್ನುವುದು ನಿಜವಾದರೂ ಕೂಡಾ, ಕಂಬನಿ ಸುರಿಸುವುದು ಪೂರ್ತಿ ವ್ಯರ್ಥವಲ್ಲ. ಕಂಬನಿ ಹರಿದಂತೆ ನಮ್ಮ ಮನಸ್ಸು ಹಗುರವಾಗುತ್ತದೆ. ಕಣ್ಣೀರನ್ನು ತಡೆದರೆ ಒಳಗಿನ ವೇದನೆ ಸ್ಫೋಟವಾಗುವ ಸಾಧ್ಯತೆ ಹೆಚ್ಚು.  ಇಲ್ಲಿ ಅರ್ಜುನ ದ್ರೌಪದಿಯಲ್ಲಿ ‘ಕಣ್ಣೀರು ಸುರಿಸಬೇಡ’ ಎಂದು ಹೇಳುವುದಕ್ಕೆ ಇನ್ನೊಂದು ಕಾರಣವಿದೆ. ಆತನಿಗೆ ದ್ರೌಪದಿಯ ಕಣ್ಣೀರಿನ ಮಹತ್ವ ತಿಳಿದಿತ್ತು. ಹಿಂದೆ ಕೃಷ್ಣ ಸಂಧಾನಕ್ಕೆಂದು ಹೊರಟಾಗ ದ್ರೌಪದಿ ಕಣ್ಣೀರು ಸುರಿಸಿದ್ದಳು. ಆಗ ಕೃಷ್ಣ ಹೇಳಿದ್ದ: “ನೀನು ಕಣ್ಣೀರು ಸುರಿಸಬೇಡ, ನಿನ್ನ ಕಣ್ಣೀರಿನ ಪ್ರತಿ ಹನಿಗೂ ಸಾವಿರ ಸಾವಿರ ತಲೆ ಉರುಳುತ್ತದೆ” ಎಂದು. ಅದರಂತೇ ಮಹಾಭಾರತ ಯುದ್ಧದಲ್ಲಿ ಹದಿನೆಂಟು ಅಕ್ಷೋಹಿಣಿ ಸೈನ್ಯ ನಾಶವಾಗಿತ್ತು. ಅದಕ್ಕಾಗಿ “ಅಳಬೇಡ, ಕಣ್ಣೀರನ್ನು ಒರೆಸಿಕೋ, ದುಃಖವನ್ನು ತಡೆದುಕೋ, ನಿನಗಾಗಿರುವ ಅನ್ಯಾಯಕ್ಕೆ ತಕ್ಕ ಪ್ರತಿಕಾರ ನಾನು ಮಾಡುತ್ತೇನೆ” ಎನ್ನುತ್ತಾನೆ ಅರ್ಜುನ.

ತನ್ಮಾ ಶುಚಸ್ತೇ ನಿವೃಜಾಶ್ರು ಭದ್ರೇ ಯದ್ ಬ್ರಹ್ಮಬಂಧೋಃ ಶಿರ ಆತತಾಯಿನಃ ।
ಗಾಂಡೀವಮುಕ್ತೈರ್ವಿಶಿಖೈರುಪಾಹರೇ ತ್ವಾಕ್ರಮ್ಯ ತತ್ ಸ್ನಾಸ್ಯಸಿ ನೇತ್ರಜೈರ್ಜಲೈಃ ॥೧೬॥

ಸಾಮಾನ್ಯವಾಗಿ “ಸಮಾದಾನ ಮಾಡಿಕೋ” ಎನ್ನುವುದು ಸಾತ್ವಿಕ  ವಿಧಾನ. ಆದರೆ ಕ್ಷತ್ರಿಯರಿಗೆ ಸೇಡು ಪ್ರಧಾನವಾಗುತ್ತದೆ. ಇಲ್ಲಿ ಅರ್ಜುನ ಹೇಳುತ್ತಾನೆ: “ನಿನ್ನ ಮಕ್ಕಳ ತಲೆಯನ್ನು ಯಾರು ಕೆಡವಿದನೋ ಅವನ ತಲೆಯನ್ನು ನಿನ್ನ ಕಾಲ ಬುಡಕ್ಕೆ ಉಡುಗೊರೆಯಾಗಿ ತಂದೊಪ್ಪಿಸುತ್ತೇನೆ” ಎಂದು.
ಈ ಶ್ಲೋಕದಲ್ಲಿ  ಅರ್ಜುನ ಅಶ್ವತ್ಥಾಮನನ್ನು ಬ್ರಹ್ಮಬಂಧುಃ ಮತ್ತು  ಆತತಾಯಿನಃ  ಎನ್ನುವ ಎರಡು ವಿಶೇಷಣ ಬಳಸಿ ಸಂಬೋಧಿಸಿರುವುದನ್ನು ಕಾಣುತ್ತೇವೆ. ಅಶ್ವತ್ಥಾಮಾಚಾರ್ಯರು ಶಾಸ್ತ್ರಪಾರಂಗತ ಬ್ರಾಹ್ಮಣರಾಗಿದ್ದರು. ಆದರೆ ಅವರು ಬ್ರಾಹ್ಮಣ ಧರ್ಮವನ್ನಾಚರಿಸದೇ, ಬ್ರಾಹ್ಮಣಧರ್ಮಕ್ಕೆ ಅಪಚಾರವೆಸಗಿದರು. ಚಿತ್ತ ಸಮತೋಲನ ಇಲ್ಲದ ಚಪಲಚಿತ್ತನಾಗಿದ್ದ ನಡೆ ಅವರದ್ದಾಗಿತ್ತು. ಅಶ್ವತ್ಥಾಮಾಚಾರ್ಯರ ಪಾತ್ರವೇ ಅಂತಹದ್ದು. ಭಗವಂತನನ್ನು ವಿರೋಧಿಸುವ ಪಾತ್ರವದು. ದುಡುಕಿನ ವರ್ತನೆಯಿಂದಾಗುವ ಅನಾಹುತವನ್ನು ತೋರಿಸುವ ಶಿವನ ಅವತಾರ.  ಅವರ ದುಡುಕಿನ ವರ್ತನೆ ಮತ್ತು ಅದರಿಂದಾಗುವ ಅನಾಹುತವನ್ನು ಭಾರತದಲ್ಲಿ ಅನೇಕ ಕಡೆ ಕಾಣುತ್ತೇವೆ. ತನ್ನ ತಂದೆ ಸತ್ತರೆಂಬ ಸುದ್ಧಿ ತಿಳಿದಾಗ, ಹಿಂದೂ ಮುಂದೂ ನೋಡದೆ, ಇಡೀ ಪಾಂಡವ ಸೇನೆಯನ್ನು ಸುಟ್ಟುಬಿಡಬೇಕೆಂದು ನಾರಾಯಣಾಸ್ತ್ರ ಪ್ರಯೋಗಿಸಿದ್ದರು ಅಶ್ವತ್ಥಾಮರು. ಆ ಸಮಯದಲ್ಲಿ ಶ್ರೀಕೃಷ್ಣ ಎಲ್ಲಾ ಸೈನಿಕರಲ್ಲಿ ಶಸ್ತ್ರವನ್ನು ಕೆಳಗಿಟ್ಟು ಕೈಮುಗಿದು ನಿಲ್ಲುವಂತೆ ಹೇಳಿದ ಮತ್ತು ಇದರಿಂದಾಗಿ ಅಲ್ಲಿ ಒಬ್ಬರೂ ಸಾಯಲಿಲ್ಲ.  ಈ ರೀತಿ ದುಡುಕಿನ ನಿರ್ಧಾರದಿಂದ ಅನಾಹುತವನ್ನು ತಂದಿಟ್ಟುಕೊಳ್ಳುವುದನ್ನು ತೋರಿಸುವ ವಿಚಿತ್ರ ಪಾತ್ರ ಅಶ್ವತ್ಥಾಮನದು .
ಆತತಾಯಿಗಳು ಎಂದರೆ ಸಮಾಜ ದ್ರೋಹಿಗಳು. ಬೆಂಕಿ ಹಾಕಿ ಜೀವಂತ ಸುಡುವುದು, ವಿಷ ಹಾಕಿ ಕೊಲ್ಲುವುದು, ದರೋಡೆ ಮಾಡುವುದು, ಪರಪತ್ನಿ ಅಪಹಾರ ಅಥವಾ ಮಾನಭಂಗ, ಇತ್ಯಾದಿ ಕಾರ್ಯವೆಸಗುವವರು ಆತತಾಯಿಗಳು. ದುರ್ಯೋಧನ ಈ ಎಲ್ಲಾ ಕಾರ್ಯವನ್ನೂ ಮಾಡಿದ್ದ. ಇಂತಹ ಆತತಾಯಿಗಳನ್ನು ಕಂಡಲ್ಲಿ ಸಾಯಿಸಿ ಎನ್ನುತ್ತದೆ ಶಾಸ್ತ್ರ. ಅದಕ್ಕಾಗಿ ಇಲ್ಲಿ ಅರ್ಜುನ: “ಅಶ್ವತ್ಥಾಮಾಚಾರ್ಯರ ತಲೆಯನ್ನು ನಿನ್ನ ಪಾದದಲ್ಲಿ ತಂದಿಡುತ್ತೇನೆ” ಎಂದಿದ್ದಾನೆ. “ನನ್ನಲ್ಲಿ ಗಾಂಢೀವ ಧನುಸ್ಸಿದೆ. ಅದರಿಂದ ಅಶ್ವತ್ಥಾಮನನ್ನು ಮಣಿಸಿ, ಆತನ ತಲೆಯನ್ನು ನಿನ್ನ ಪಾದಕ್ಕರ್ಪಿಸುತ್ತೇನೆ. ಅವನ ತಲೆಯನ್ನು ಕಂಡಮೇಲೆ  ಬೇಕಿದ್ದರೆ,  ನೀನು ನಿನ್ನ ಕಣ್ಣೀರಿನಿಂದ ನಿನ್ನನ್ನು ತೊಯಿಸಿಕೋ. ಮೊದಲು ಸೇಡು ಆಮೇಲೆ ದುಃಖಾಪಶಮನ” ಎಂದ ಅರ್ಜುನ, ಕೃಷ್ಣನೊಂದಿಗೆ ಅಶ್ವತ್ಥಾಮಾಚಾರ್ಯರನ್ನು ಹುಡುಕಿಕೊಂಡು ಹೋಗುತ್ತಾನೆ.
ಅರ್ಜುನ ಅಶ್ವತ್ಥಾಮ ಅಡಗಿರುವ ಸ್ಥಳವನ್ನು ಗುರುತಿಸಿದಾಗ “ತನಗೆ ಇನ್ನು ಉಳಿಗಾಲವಿಲ್ಲ” ಎನ್ನುವುದನ್ನು ಮನಗೊಂಡ ಅಶ್ವತ್ಥಾಮ, ಮತ್ತೆ ಇನ್ನೊಂದು ದುಡುಕಿನ ಕೆಲಸವನ್ನು ಮಾಡುತ್ತಾನೆ. ಅದೇ ಬ್ರಹ್ಮಾಸ್ತ್ರ ಪ್ರಯೋಗ!  ಬ್ರಹ್ಮಾಸ್ತ್ರ ಅತ್ಯಂತ ಭಯಾನಕವಾದ ಅಸ್ತ್ರ. ಇದನ್ನು ಯಾರು ಪ್ರಯೋಗ ಮಾಡಿದನೋ ಅವನೇ ಪ್ರಾರ್ಥನೆ ಮಾಡಿ ಉಪಸಂಹಾರ ಮಾಡಬೇಕು ಹೊರತು,  ಇನ್ನೊಂದು ಅಸ್ತ್ರದಿಂದ ಅದನ್ನು ತಡೆಯಲು ಸಾಧ್ಯವಿಲ್ಲ. ಪಂಚರಾತ್ರದಲ್ಲಿ ಬರುವ ಅಹಿರ್ಬುಧ್ನ್ಯ ಸಂಹಿತೆಯಲ್ಲಿ ಬ್ರಹ್ಮಾಸ್ತ್ರದ ವಿವರಗಳಿವೆ. ಅಲ್ಲಿ ಹೇಳುವಂತೆ ಬ್ರಹ್ಮಾಸ್ತ್ರದ ಮಂತ್ರ ಬ್ರಹ್ಮಗಾಯತ್ತ್ರಿ. “ಗಾಯತ್ತ್ರಿ ಮಂತ್ರಸ್ಯ ಬ್ರಹ್ಮಾ ಋಷಿಃ, ನಾರಾಯಣೋ ದೇವತಾ”. ಇದನ್ನು ಗಾಯತ್ತ್ರಿ ಸಿದ್ಧಿ ಇಲ್ಲದೇ ಪ್ರಯೋಗಿಸಲು ಸಾಧ್ಯವಿಲ್ಲ.
ಎಲ್ಲಾ ಮಂತ್ರಗಳಿಗೆ ಮಾತೃ ಸ್ಥಾನದಲ್ಲಿದೆ ಗಾಯತ್ತ್ರಿ. ಈ ಮಂತ್ರ ಮಹಾ ಶಕ್ತಿಶಾಲಿ. ಅದನ್ನು ನಮ್ಮ ರಕ್ಷೆಗಾಗಿ ಬಳಸಬಹುದು ಅಥವಾ ನಾಶಕ್ಕಾಗಿ ಕೂಡಾ! ಹಿಂದಿನ ಕಾಲದಲ್ಲಿ ಅಸ್ತ್ರವಿದ್ಯೆ ಬಳಕೆಯಲ್ಲಿತ್ತು. ಶಸ್ತ್ರ ಎಂದರೆ ಒಂದು ಆಯುಧವನ್ನು ನೇರವಾಗಿ ಬಳಸುವುದು. ಆದರೆ ಅಸ್ತ್ರ ಎಂದರೆ ಯಾವುದೇ ಒಂದು ವಸ್ತುವಿಗೆ ವಿಶಿಷ್ಠ ಮಂತ್ರವನ್ನು ಅಭಿಮಂತ್ರಣ ಮಾಡಿ ಪ್ರಯೋಗ ಮಾಡುವುದು. ಹೀಗಾಗಿ ಮುಖ್ಯವಾಗಿ ಅಸ್ತ್ರ ವಿದ್ಯೆ ಬ್ರಾಹ್ಮಣರ ಕೈಯಲ್ಲಿತ್ತು ಮತ್ತು ಅವರಿಂದ ಅದನ್ನು ಕ್ಷತ್ರಿಯರು ಕಲಿಯುತ್ತಿದ್ದರು. ಬ್ರಹ್ಮಾಸ್ತ್ರ ಮಹಾ ಭಯಂಕರವಾದ ಅಸ್ತ್ರವಾಗಿರುವುದರಿಂದ ಅದರ ಪ್ರಯೋಗ ನಿಷೇಧಿಸಿದ್ದರು. ತೀರಾ ಅನಿವಾರ್ಯವಲ್ಲದ ಹೊರತು ಅದನ್ನು ಪ್ರಯೋಗಿಸುವಂತಿರಲಿಲ್ಲ. ದ್ರೋಣಾಚಾರ್ಯರು ಮೊದಲು ಈ ವಿದ್ಯೆಯನ್ನು ಅರ್ಜುನನಿಗೆ ಹೇಳಿ ಕೊಟ್ಟರು. ಅವರಿಗೆ ತನ್ನ ಮಗನ ಚಪಲ ಬುದ್ಧಿಯ ಅರಿವಿತ್ತು. ಅದಕ್ಕಾಗಿ  ಅಶ್ವತ್ಥಾಮನಿಗೆ ಈ ವಿದ್ಯೆಯನ್ನು ಮೊದಲು ಹೇಳಿರಲಿಲ್ಲ. ಆದರೆ ಅರ್ಜುನನಿಗೆ ಹೇಳಿದುದರಿಂದ ತನಗೂ ಹೇಳಿಕೊಡಬೇಕು ಎಂದು ಆತ ಹಠತೊಟ್ಟದ್ದರಿಂದ, ಆತನಿಗೆ ಬ್ರಹ್ಮಾಸ್ತ್ರ ಪ್ರಯೋಗವನ್ನು ಉಪದೇಶಿಸಿದರು. ಆದರೆ ಉಪಸಂಹಾರ ಹೇಳಿಕೊಡಲಿಲ್ಲ. ಅಸ್ತ್ರವನ್ನು ಹಿಂದೆ ಪಡೆಯಲು ತಿಳಿಯದೇ ಅದನ್ನು ಪ್ರಯೋಗಿಸುವಂತಿಲ್ಲ. ಆದರೆ ಇಲ್ಲಿ ಅಶ್ವತ್ಥಾಮರು ಬ್ರಹ್ಮಾಸ್ತ್ರವನ್ನು ಹಿಂದೆ ಪಡೆಯಲು ತಿಳಿಯದಿದ್ದರೂ ಕೂಡಾ, ಅದನ್ನು ಪ್ರಯೋಗಿಸಿದರು! ಇದು ಅವರು ತಮ್ಮ ಜೀವನದಲ್ಲಿ  ಮಾಡಿದ ಅತ್ಯಂತ ದೊಡ್ಡ ದುಡುಕು. 

Saturday, February 16, 2013

Shrimad BhAgavata in Kannada -Skandha-01-Ch-07(02)


ಶೌನಕ ಉವಾಚ-
 ಸ ವೈ ನಿವೃತ್ತಿನಿರತಃ ಸರ್ವತ್ರೋಪೇಕ್ಷಕೋ ಮುನಿಃ ।
 ಕಸ್ಯ ವಾ ಬೃಹತೀಮೇತಾಮಾತ್ಮಾರಾಮಃ ಸಮಭ್ಯಸತ್ ॥೯॥

ವೇದವ್ಯಾಸರು ಶುಕಾಚಾರ್ಯರಿಗೆ ಭಾಗವತ ಉಪದೇಶ ಮಾಡಿದರು ಎನ್ನುವ ಮಾತನ್ನು ಕೇಳಿ ಶೌನಕಾದಿಗಳು ಕೇಳುತ್ತಾರೆ: “ಶುಕಾಚಾರ್ಯರು ಎಲ್ಲವನ್ನೂ ತೊರೆದುಹೋದವರು. ಅವರು ಎಲ್ಲವನ್ನೂ ಉಪೇಕ್ಷೆ ಮಾಡುವವರು. ಅಂತಹ ಸರ್ವಪರಿತ್ಯಾಗಿ  ಹೇಗೆ ಭಾಗವತವೆಂಬ ಮಹಾಸಂಹಿತೆಯನ್ನು  ಕೇಳಬೇಕೆಂದು ಇಚ್ಛೆಪಟ್ಟು ಬಂದು ಕೇಳಿದರು?” ಎಂದು.  ಒಬ್ಬ ಆತ್ಮಾನಂದವನ್ನು ಒಳಗಿನಿಂದ ಅನುಭವಿಸಬಲ್ಲ ಯೋಗಿಗೆ ಮತ್ತೆ ಗ್ರಂಥ ಓದುವ ಅವಶ್ಯಕತೆ ಏನಿದೆ? ಅಂತರಂಗದಲ್ಲಿ ಸರ್ವಾನಂದವಿರುವಾಗ, ಹೊರಗಿನಿಂದ ಆನಂದ ಪಡೆಯುವ ಪ್ರಯತ್ನ ಏಕೆ? ಇದು ಶೌನಕರ ಪ್ರಶ್ನೆ.

ಸೂತ ಉವಾಚ-
ಆತ್ಮಾರಾಮಾಶ್ಚ ಮುನಯೋ ನಿರ್ಗ್ರಂಹ್ಯಾ ಅಪ್ಯುರುಕ್ರಮೇ ।
 ಕುರ್ವಂತ್ಯಹೈತುಕೀಂ ಭಕ್ತಿಮಿತ್ಥಂಭೂತಗುಣೋ ಹರಿಃ ॥೧೦॥

ಹರೇರ್ಗುಣಾಕ್ಷಿಪ್ತಮತಿರ್ಭಗವಾನ್ ಬಾದರಾಯಣಿಃ ।
 ಅಧ್ಯಗಾನ್ಮಹದಾಖ್ಯಾನಂ ನಿತ್ಯಂ ವಿಷ್ಣುಜನಪ್ರಿಯಮ್ ॥೧೧॥

ಶೌನಕರ ಪ್ರಶ್ನೆಗೆ ಉತ್ತರಿಸುತ್ತಾ ಉಗ್ರಶ್ರವಸ್ಸರು ಹೇಳುತ್ತಾರೆ: “ಹೌದು, ಶುಕಾಚಾರ್ಯರು ಎಲ್ಲವನ್ನೂ ತೊರೆದವರು. ಅವರಲ್ಲಿ ‘ಬೇಕು’ ಎನ್ನುವ ಯಾವುದೇ ಅಪೇಕ್ಷೆ ಇರಲಿಲ್ಲ. ಅಂತಹ  ನಿರ್ಗ್ರಂಹ್ಯರವರು. ಅವರಿಗೆ ಭಗವಂತನ ಅನುಭವಕ್ಕಾಗಿ ಹೊರಗಿನಿಂದ ಏನನ್ನೂ ಗ್ರಹಣ ಮಾಡಬೇಕಾಗಿರಲಿಲ್ಲ. ಆದರೆ ಎಂತಹ ನಿವೃತ್ತಿನಿರತ ವ್ಯಕ್ತಿಯಾಗಿದ್ದರೂ ಸಹ, ಅವರಿಗೆ ಭಗವಂತ ಬೇಕು ಎನ್ನುವ ಬಯಕೆ ಇದ್ದೇ ಇರುತ್ತದೆ. ಹರಿಯ ಮಹಿಮೆಯೇ ಅಂತಹದ್ದು. ಗೀತೆಯಲ್ಲಿ ಕೃಷ್ಣ ಹೇಳುವಂತೆ: ಯದಾ ತೇ ಮೋಹಕಲಿಲಂ ಬುದ್ಧಿರ್ವ್ಯತಿತರಿಷ್ಯತಿ । ತದಾ ಗಂತಾನಿ ನಿರ್ವೇದಂ ಶ್ರೋತವ್ಯಸ್ಯ ಶ್ರುತಸ್ಯ ಚ ॥೨-೫೨॥ ಯಾವಾಗ ಭಗವಂತನ ಅನುಭೂತಿ ನಮಗಾಗುತ್ತದೋ, ಆಗ ‘ಹಿಂದೆ ಅಧ್ಯಯನ ಮಾಡಿರುವುದು, ಹಾಗೂ ಮುಂದೆ ಅಧ್ಯಯನ ಮಾಡುವುದು’ ಎಲ್ಲವೂ ಸಾಫಲ್ಯ(ನಿರ್ವೇದ)ವಾಗುತ್ತದೆ.  ಅಪರೋಕ್ಷ ಜ್ಞಾನಿಗಳು ಎಂದರೆ ಅವರು ಎಲ್ಲವನ್ನೂ ತಿಳಿದವರಲ್ಲ. ಅವರಿಗೆ ಅಂತರಂಗದ ಅನುಭವವಾದರೂ ಕೂಡಾ, ಅವರಿಗಿಂತ ಹೆಚ್ಚು ತಿಳಿದವರ ಮಾತಿನಿಂದ ಅವರ ಅಂತರಂಗದ ಬೆಳಕು ಮತ್ತಷ್ಟು ಹೆಚ್ಚುತ್ತದೆ. ಇಲ್ಲಿ ಭಗವಂತನ ಮಹಿಮೆಯನ್ನು ಕೇಳಿ ತಿಳಿದು, ತಮ್ಮ ಅಂತರಂಗದ ಆನಂದದ ಅನುಭವವನ್ನು ವಿಸ್ತರಿಸಿಕೊಳ್ಳುವುದಕ್ಕಾಗಿ ಶುಕಾಚಾರ್ಯರು ತಂದೆಯಿಂದ ಭಾಗವತ ಉಪದೇಶ ಪಡೆಯುತ್ತಾರೆ.
ಒಬ್ಬ ಜ್ಞಾನಿಯಲ್ಲಿ ಎಷ್ಟೇ ಜ್ಞಾನವಿದ್ದರೂ ಸಹ, ಅದು ಭಗವಂತನೆಂಬ  ಮಹಾ ಹರವಿನ ಮುಂದೆ  ಒಂದು ಬಿಂದು ಮಾತ್ರ. ಜ್ಞಾನ ಎನ್ನುವುದು ಒಂದು ಸಾಗರವಿದ್ದಂತೆ. ಆ ಸಾಗರದ ಒಂದು ಹನಿಯನ್ನು ಸೇವಿಸಿದರೂ ಕೂಡಾ  ಸಾಗರದ ಸವಿ ತಿಳಿಯುತ್ತದೆ. ಆದರೆ ಎಂದೂ ಪೂರ್ಣ ಸಾಗರವನ್ನು ಪಾನಮಾಡಲು ಯಾರಿಂದಲೂ ಸಾಧ್ಯವಿಲ್ಲ. ಶುಕಾಚಾರ್ಯರು ಆತ್ಮಾರಾಮರು. ಅವರು ಅಂತರಂಗದಲ್ಲಿ ಸದಾ ಭಗವಂತನನ್ನು ಕಾಣಬಲ್ಲವರು. ಭಗವಂತನ ಭಕ್ತಿಗಾಗಿಯೇ ಎಲ್ಲವನ್ನೂ ತೊರೆದವರು. ಹೀಗಿರುವಾಗ ಭಗವಂತನ ಹಿರಿಮೆಯನ್ನು ಹೇಳುವ ಭಾಗವತವನ್ನು ಅವರು ಕೇಳದೇ ಇರುವರೇ? ಶುಕಾಚಾರ್ಯರ ಭಕ್ತಿ ನಮ್ಮ ಭಕ್ತಿಯಂತೆ ಹೈತುಕವಾದುದ್ದಲ್ಲ. ಅದು ಸಕಾರಣವಾದ ನಿರ್ವ್ಯಾಜ-ನಿಷ್ಕಾರಣ-ನಿಷ್ಕಪಟ ಭಕ್ತಿ. ಹಾಗಾಗಿ ಅವರು ಭಕ್ತಿಯಿಂದ ಪರವಶರಾಗಿ ಭಾಗವತ ಕೇಳುತ್ತಾರೆ. ಭಗವದ್ಭಕ್ತರಿಗೆ ಹರಿಮಹಿಮೆಯನ್ನು ತಿಳಿಸುವ ಭಗವದ್ಸಂಕಲ್ಪಕ್ಕೆ ಮಾದ್ಯಮವಾಗುವುದೂ ಅವರ ಇನ್ನೊಂದು ಉದ್ದೇಶವಾಗಿತ್ತು”.
ಹೀಗೆ ನಾರದರ ಪ್ರಚೋದನೆಯಿಂದ ವೇದವ್ಯಾಸರು ಭಾಗವತ ರಚನೆ ಮಾಡಿ ಅದನ್ನು ಶುಕಾಚಾರ್ಯರಿಗೆ ಉಪದೇಶ ಮಾಡಿದರು. ಮುಂದೆ ಈ ಜ್ಞಾನ ಧಾರೆ ಶುಕಾಚಾರ್ಯರಿಂದ ಪರೀಕ್ಷಿತನಿಗೆ ಉಪದೇಶಿಸಲ್ಪಟ್ಟಿತು. ಈ ಹಿನ್ನೆಲೆಯಲ್ಲಿ ಸೂತರು ಇಲ್ಲಿ ಪರೀಕ್ಷಿತ ರಾಜನ ಜನನಕ್ಕೆ ಸಂಬಂಧಿಸಿದ ಪೂರ್ವ ಕಥೆಯನ್ನು  ಶೌನಕಾದಿಗಳಿಗೆ ವಿವರಿಸುವುದನ್ನು ಮುಂದೆ ಕಾಣುತ್ತೇವೆ. 

Friday, February 15, 2013

Shrimad BhAgavata in Kannada -Skandha-01-Ch-07(01)


ಸಪ್ತಮೋSಧ್ಯಾಯಃ

ಭಾಗವತ ರಚನೆ ಮತ್ತು ಶುಕಾಚಾರ್ಯರಿಗೆ ಉಪದೇಶ


ಶೌನಕ ಉವಾಚ-
 ನಿರ್ಗತೇ ನಾರದೇ ಸೂತ ಭಗವಾನ್ ಬಾದರಾಯಣಃ ।
 ಶ್ರುತವಾಂಸ್ತದಭಿಪ್ರೇತಂ ತತಃ ಕಿಮಕರೋದ್ ವಿಭುಃ ॥೧॥

ವ್ಯಾಸ-ನಾರದ  ಸಂವಾದವನ್ನು ಸೂತರಿಂದ ಕೇಳಿ ತಿಳಿದ ಶೌನಕಾದಿಗಳು ಕೇಳುತ್ತಾರೆ: “ನಾರದರು ಹೊರಟುಹೋದ ಮೇಲೆ  ವ್ಯಾಸರು ಏನು ಮಾಡಿದರು?” ಎಂದು. ಶೌನಕಾದಿಗಳ ಪ್ರಶ್ನೆಗೆ ಉತ್ತರಿಸುತ್ತಾ ಸೂತರು ವ್ಯಾಸರು ಭಾಗವತ ರಚನೆ ಮಾಡಿ, ಅದನ್ನು ತನ್ನ ಮಗನಾದ ಶುಕಾಚಾರ್ಯರಿಗೆ ಉಪದೇಶಿಸಿರುವ ಪ್ರಸಂಗವನ್ನು ಮುಂದೆ ವಿವರಿಸುತ್ತಾರೆ.

 ಸೂತ ಉವಾಚ-
 ಬ್ರಹ್ಮನದ್ಯಾಂ ಸರಸ್ವತ್ಯಾ ಆಶ್ರಮಃ ಪಶ್ಚಿಮೇ ತಟೇ ।
 ಶಮ್ಯಾಪ್ರಾಸ ಇತಿ ಪ್ರೋಕ್ತ ಋಷೀಣಾಂ ಸತ್ರವರ್ಧನಃ ॥೨॥

ಸರಸ್ವತಿ ನದಿ ಉತ್ತರದಿಂದ ದಕ್ಷಿಣಕ್ಕೆ ಹರಿದು ಬರುತ್ತದೆ. ಆ ನದಿಯ ಪಶ್ಚಿಮ ತಡಿಯಲ್ಲಿ ವ್ಯಾಸಾಶ್ರಮವಿದೆ.  ಅದು ಎಲ್ಲಾ ಋಷಿಗಳು ನಾನಾ ವಿಧದಲ್ಲಿ ಯಜ್ಞ ಯಾಗಾದಿಗಳನ್ನು ಮಾಡುವ ತಾಣ. ಇಲ್ಲಿ ಆಶ್ರಮದ ಹೆಸರು ‘ಶಮ್ಯಾಪ್ರಾಸ’ ಎಂದಿದ್ದಾರೆ. ಇದು ಸಾಮಾನ್ಯವಾಗಿ ಸಂಸ್ಕೃತ ಸಾಹಿತ್ಯದಲ್ಲಿ ಕಾಣಿಸದ ವಿಚಿತ್ರವಾದ ಹೆಸರು. ‘ಶಮ್ಯ’ ಎಂದರೆ ಗುದ್ದಲಿಯಂತಹ ಸಲಕರಣೆ. ಸಾಮಾನ್ಯವಾಗಿ ಯಾಗ ಶಾಲೆಯನ್ನು ನಿರ್ಮಾಣ ಮಾಡುವ ಮೊದಲು ಆ ಸ್ಥಳವನ್ನು ಅಗೆದು ಶೋಧನೆ ಮಾಡಿ ನಂತರ ಶುದ್ಧೀಕೃತವಾದ ಜಾಗದಲ್ಲಿ ಯಾಗ ಶಾಲೆ ಕಟ್ಟುತ್ತಿದ್ದರು.  ಈ ಕಾರಣದಿಂದ ಆಶ್ರಮವನ್ನು ‘ಶಮ್ಯಪ್ರಾಸ’ ಎಂದು ಕರೆದಿದ್ದಾರೆ.

 ತಸ್ಮಿನ್ ಋಷ್ಯಾಶ್ರಮೇ ವ್ಯಾಸೋ ಬದರೀಷಂಡಮಂಡಿತೇ ।
 ಆಸೀನೋSಪ ಉಪಸ್ಪೃಶ್ಯ ಪ್ರಣಿದಧ್ಯೌ ಮನಶ್ಚಿರಮ್ ॥೩॥

 ಭಕ್ತಿಯೋಗೇನ ಮನಸಿ ಸಮ್ಯಕ್ ಪ್ರಣಿಹಿತೇSಮಲೇ ।
 ಅಪಶ್ಯತ್ ಪುರುಷಂ ಪೂರ್ಣಂ ಮಾಯಾಂ ಚ ತದಪಾಶ್ರಯಾಮ್ ॥೪॥

ನಾರದರು ಹೊರಟುಹೋದ ಮೇಲೆ ವ್ಯಾಸರು ಭಕ್ತಿಯೋಗದಿಂದ ತುಂಬಿದ ಜ್ಞಾನಿಗಳ ನಿರ್ಮಲವಾದ ಮನಸ್ಸಿನಲ್ಲಿ  ಭಗವಂತನಿರುವುದನ್ನು ಕಾಣುತ್ತಾರೆ. “ಭಕ್ತಿಯೋಗೇನ ಸಮ್ಯಕ್ ಪ್ರಣಿಹಿತೇ ಲೋಕಾನಾಂ ಮನಸಿ”. ಮಾಯೆಯ ಮುಸುಕಿನಲ್ಲಿ ‘ತನ್ನ’ ಅರಿವಾಗಲೀ ‘ಭಗವಂತನ’ ಅರಿವಾಗಲೀ ಇಲ್ಲದೇ ಇರುವ, ಲೌಕಿಕತೆಯ ಬೆನ್ನುಹತ್ತಿದ  ಜನರನ್ನು ಅವರು ಕಾಣುತ್ತಾರೆ.
 ಅನರ್ಥೋಪಶಮಂ ಸಾಕ್ಷಾದ್ ಭಕ್ತಿಯೋಗಮಧೋಕ್ಷಜೇ ।
 ಲೋಕಸ್ಯಾಜಾನತೋ ವಿದ್ವಾಂಶ್ಚಕ್ರೇ ಸಾತ್ವತಸಂಹಿತಾಮ್ ॥೬॥

ಇಂತಹ ಅನರ್ಥದಿಂದ ಲೋಕದ ಜನರು ಪಾರಾಗಲು ಭಕ್ತಿಯೋಗವೊಂದೇ  ಮಾರ್ಗ ಎಂದು ಅರಿತ ವ್ಯಾಸರು, ಭಗವಂತನಲ್ಲಿ ನೇರವಾಗಿ ಭಕ್ತಿಯನ್ನು ಗಾಢಗೊಳಿಸುವ ಒಂದು ಗ್ರಂಥ ರಚನೆಯಾಗಬೇಕೆಂದು ಸಂಕಲ್ಪ ಮಾಡಿದರು. ತಿಳುವಳಿಕೆ ಇಲ್ಲದೇ ದಾರಿತಪ್ಪುತ್ತಿರುವ ಜನರಿಗಾಗಿ ವ್ಯಾಸರು ಒಂದು ಅಪೂರ್ವವಾದ, ಸಾತ್ವಿಕವಾದ ಮತ್ತು ಗುಣಪೂರ್ಣನಾದ ಭಗವಂತನ ಬಗೆಗೆ ಹೇಳುವ ಸಂಹಿತೆಯನ್ನು ರಚಿಸಿದರು. ಈ ಹಿಂದೆ ಹೇಳಿದಂತೆ ವ್ಯಾಸರು ಭಾಗವತವನ್ನು ಬರೆದದ್ದಲ್ಲ. ಅದು ಅವರ ಮಾನಸಿಕ ರಚನೆ ಮತ್ತು ಅದನ್ನು ಅವರು ತನ್ನ ಶಿಷ್ಯರಿಗೆ ಉಪದೇಶಿಸಿದರು. ಕಣ್ಣಿಗೆ ಕಾಣದ ಭಗವಂತನನ್ನು ನಮ್ಮ ಮನಸ್ಸಿಗೆ ಶಬ್ದದ ಮುಖೇನ ಮನವರಿಕೆ ಮಾಡುವುದಕ್ಕೋಸ್ಕರ ಭಾಗವತ ರಚನೆಯಾಯಿತು. ಇಲ್ಲಿ  ‘ಅಧೋಕ್ಷಜ’ ಎನ್ನುವ ಪದ ಬಳಕೆಯಾಗಿದೆ. ಭಗವಂತ ನಮ್ಮ ಹೊರಗಣ್ಣಿಗೆ ಕಾಣಲಾರ, ಆದರೆ ಆತನನ್ನು ಇಂದ್ರಿಯ ನಿಗ್ರಹ ಮಾಡಿ ಸಾಧನೆಯಿಂದ ಒಳಗಣ್ಣಿನಿಂದ ಕಾಣಬಹುದು. ಭಾಗವತ ಭಗವಂತನನ್ನು ಅಂತರಂಗದಲ್ಲಿ ಕಾಣುವ ಬಗೆಯನ್ನು ತಿಳಿಸುವ ಗ್ರಂಥ. ಇದು ಭಗವಂತನ ಮಹಿಮೆಯ ಅರಿವಿನ ಮೂಲಕ, ಭಗವದ್ಭಕ್ತಿಯನ್ನು ಭರಿಸಿ, ಸಂಸಾರದಲ್ಲಿನ ಅನರ್ಥ ಪರಿಹಾರಕ್ಕೆ ದಾರಿ ತೋರಿಸುವ ಗ್ರಂಥ.
ನಾವು ನಮ್ಮ ಬದುಕಿನಲ್ಲಿ ಮುಖ್ಯವಾಗಿ ತಿಳಿಯಬೇಕಾದ ವಿಚಾರ ಅಂದರೆ: ‘ನಮ್ಮ ಬದುಕನ್ನು ಭಗವಂತನ ಜೊತೆಗೆ ಶ್ರುತಿಗೂಡಿಸಿಕೊಂಡು ಬದುಕುವುದು’. ಇದು ಅರಿಯದಿದ್ದಾಗ ನಾವು ಅನರ್ಥವನ್ನು ಆಹ್ವಾನಿಸಬೇಕಾಗುತ್ತದೆ. ಇಂತಹ ಮೂಲಭೂತ ವಿಷಯವನ್ನೂ ಮರೆತು ಬದುಕುತ್ತಿರುವ ಜನರಿಗೆ ಸತ್ಯವನ್ನು ತಿಳಿಸುವುದಕ್ಕೋಸ್ಕರ ವ್ಯಾಸರು ಇಂತಹ ಸಾತ್ವತಸಂಹಿತೆಯನ್ನು ರಚಿಸಿದರು.

 ಯಸ್ಯಾಂ ವೈ ಶ್ರೂಯಮಾಣಾಯಾಂ ಕೃಷ್ಣೇ ಪರಮಪೂರುಷೇ ।
 ಭಕ್ತಿರುತ್ಪದ್ಯತೇ ಪುಂಸಾಂ ಶೋಕಮೋಹಭಯಾಪಹಾ ॥೭॥

ಸೂತರು ಹೇಳುತ್ತಾರೆ: ವ್ಯಾಸರು ರಚಿಸಿರುವ ಈ ಭಾಗವತವನ್ನು ಕೇಳುತ್ತಿದ್ದರೆ ನಮ್ಮಲ್ಲಿರುವ ಎಲ್ಲ ಅಜ್ಞಾನಗಳು ಮರೆಯಾಗಿ, ಭಗವಂತನಲ್ಲಿ ಭಕ್ತಿ ಗಾಢವಾಗುತ್ತದೆ. ಭಾಗವತ ಕೇಳಿದಾಗ ಭಕ್ತಿ ಸಾಗರದಲ್ಲಿ ತೇಲಿದ ಅನುಭವವಾಗುತ್ತದೆ. ಅಂತಹ ಅಪೂರ್ವವಾದ ಭಾಗವತ ಮಹಾಪುರಾಣವನ್ನು ವ್ಯಾಸರು ರಚನೆ ಮಾಡಿದರು

 ಸ ಸಂಹಿತಾಂ ಭಾಗವತೀಂ ಕೃತ್ವಾSನುಕ್ರಮ್ಯ ಚಾತ್ಮಜಮ್ ।
 ಶುಕಮಧ್ಯಾಪಯಾಮಾಸ ನಿವೃತ್ತಿನಿರತಂ ಮುನಿಮ್ ॥೮॥

 ತನ್ನ ಮಾನಸ ರಚನೆಯಾದ ಭಾಗವತವನ್ನು ಲೋಕಕ್ಕೆ ನೀಡುವುದಕ್ಕಾಗಿ ವ್ಯಾಸರು ಅದನ್ನು ನಿವೃತ್ತಿನಿರತ ತನ್ನ ಮಗನಾದ ಶುಕಾಚಾರ್ಯರಿಗೆ ಉಪದೇಶ ಮಾಡುತ್ತಾರೆ.

Wednesday, February 13, 2013

Shrimad BhAgavata in Kannada -Skandha-01-Ch-06(01)


ಷಷ್ಠೋSಧ್ಯಾಯಃ

ನಾರದರಿಗೆ ಅಂತರಂಗ ದರ್ಶನ ಮತ್ತು ಅಶರೀರವಾಣಿ

ಈ ಅಧ್ಯಾಯದಲ್ಲಿ ನಾರದರ ಪೂರ್ವ ಕಥೆ ಮುಂದುವರಿಯುತ್ತದೆ.  ನಮಗೆ ನಾರದರ ಪೂರ್ವ ಕಲ್ಪದ ಕಥೆಯನ್ನು ತಿಳಿಸಿಕೊಡುವುದಕ್ಕಾಗಿಯೇ ವ್ಯಾಸರು ನಾರದರಲ್ಲಿ ಈ ರೀತಿ ಪ್ರಶ್ನೆ ಹಾಕುತ್ತಾರೆ:

ಶ್ರೀವ್ಯಾಸ ಉವಾಚ-
ಭಿಕ್ಷುಭಿರ್ವಿಪ್ರವಸಿತೇ ವಿಜ್ಞಾನಾದೇಷ್ಟೃಭಿಸ್ತವ ।
ವರ್ತಮಾನೋ ವಯಸ್ಯಾದ್ಯೇ ತತಃ ಕಿಮಕರೋದ್ ಭವಾನ್ ॥೨॥

ಸ್ವಾಯಂಭುವ ಕಯಾ ವೃತ್ತ್ಯಾ ವರ್ತಿತಂ ತೇ ಪರಂ ವಯಃ ।
ಕಥಂ ವೇದಮುದಸ್ರಾಕ್ಷೀಃ ಕಾಲೇ ಪ್ರಾಪ್ತೇ ಕಳೇಬರಮ್ ॥೩॥

ಪ್ರಾಕ್ಕಲ್ಪವಿಷಯಾಮೇತಾಂ ಸ್ಮೃತಿಂ ತೇ ಸುರಸತ್ತಮ ।
ನ ಹ್ಯೇವ ವ್ಯವಧಾತ್ ಕಾಲ ಏಷ ಸರ್ವನಿರಾಕೃತಿಃ ॥೪॥

ವ್ಯಾಸರು ಹೇಳುತ್ತಾರೆ:  “ನೀವು ವಿವರಿಸಿದ ಹಿಂದಿನ ಕಲ್ಪದಲ್ಲಿನ ನಿಮ್ಮ ಕಥೆ ತಿಳಿಯಿತು. ಆದರೆ ಮುಂದೆ ನೀವು ಎಷ್ಟು ಕಾಲ ಇದ್ದಿರಿ? ಏನು ಸಾಧನೆ ಮಾಡಿದಿರಿ?  ಕೋಟಿ-ಕೋಟಿ ವರ್ಷಗಳ ಹಿಂದೆ ನಡೆದ ಈ ಘಟನೆ ನಿಮಗೆ ಹೇಗೆ ಇಂದೂ ನೆನಪಿದೆ?  ಸತ್ತು ಹೊಸದೇಹದಲ್ಲಿ ಹುಟ್ಟಿದರೂ ಕೂಡಾ, ಹೇಗೆ ಎಲ್ಲವನ್ನೂ ನೀವು ನೆನಪಿಸಿಕೊಂಡು ಹೇಳುತ್ತಿದ್ದೀರಿ? ಇವೆಲ್ಲವನ್ನೂ ವಿವರವಾಗಿ ವಿವರಿಸಿ” ಎಂದು. ಈ ಎಲ್ಲಾ ಪ್ರಶ್ನೆಗಳು ನಮ್ಮ-ನಿಮ್ಮೆಲ್ಲರ ಪ್ರಶ್ನೆ. ನಮಗೆ ತಿಳಿಸಿ ಹೇಳುವುದಕ್ಕಾಗಿ ಇದು ವ್ಯಾಸರೂಪದಲ್ಲಿ  ಭಗವಂತನ ಲೀಲೆ. 

ಶ್ರೀನಾರದ ಉವಾಚ-
ಭಿಕ್ಷುಭಿರ್ವಿಪ್ರವಸಿತೇ ವಿಜ್ಞಾನಾದೇಷ್ಟೃಭಿರ್ಮಮ ।
ವರ್ತಮಾನೋ ವಯಸ್ಯಾದ್ಯೇ ತತ ಏತದಕಾರ್ಷಮ್ ॥೫॥

ಏಕಾತ್ಮಜಾ ಮೇ ಜನನೀ ಯೋಷಿನ್ಮೂಢಾ ಚ ಕಿಂಕರೀ ।
ಮಯ್ಯಾತ್ಮಜೇSನನ್ಯಗತೌ ಚಕ್ರೇ ಸ್ನೇಹಾನುಬಂಧನಮ್ ॥೬॥

ವ್ಯಾಸರ ಪ್ರಶ್ನೆಗೆ ಉತ್ತರಿಸುತ್ತಾ ನಾರದರು ಹೇಳುತ್ತಾರೆ: ಋಷಿಗಳೆಲ್ಲರೂ ಚಾತುರ್ಮಾಸ್ಯ ಮುಗಿಯುತ್ತಿದ್ದಂತೆಯೇ ಅಲ್ಲಿಂದ  ಹೊರಟುಹೋದರು. ಆದರೆ ನನಗೆ ಋಷಿಗಳು ಹೇಳಿದ ಚತುರ್ಮೂರ್ತಿಗಳೇ ತಲೆಯಲ್ಲಿ ಸುತ್ತುತ್ತಿದ್ದರು. ನನ್ನ ತಾಯಿ ನಿರ್ಗತಿಕಳಾಗಿರುವುದರಿಂದ ನಾನು ಆಕೆಯನ್ನು ಬಿಟ್ಟು ಹೋಗುವಂತಿರಲಿಲ್ಲ. ಹಾಗಾಗಿ ಅಲ್ಲೇ ನನ್ನ ತಾಯಿಯ ಜೊತೆಗೆ ಇದ್ದೆ.
ಹೀಗಿರುವಾಗ ಒಂದು ದಿನ ನನ್ನ ತಾಯಿ ರಾತ್ರಿ ಹೊತ್ತು ಹೊರಗೆ ಹಸುವಿನ ಹಾಲು ಕರೆಯಲೆಂದು ಹೋಗಿದ್ದಾಗ, ಹಾವು ಕಚ್ಚಿ ಸಾವನ್ನಪ್ಪಿದಳು. ಇದರಿಂದಾಗಿ ನಾನು ಒಂಟಿಯಾದೆ. ತಾಯಿಯನ್ನು ಕಳೆದುಕೊಂಡು ದುಃಖವಾದರೂ ಕೂಡಾ, ಇನ್ನೊಂದು ರೀತಿಯಲ್ಲಿ ಯಾವುದೇ ಸಂಸಾರ ಪಾಶವೂ ಇಲ್ಲದೇ, ಸಾಧನೆ ಮಾಡಲು ಈ ಘಟನೆ ನನಗೆ ಸಹಾಯ ಮಾಡಿತು.  ಇದು ಭಗವಂತನ ಅನುಗ್ರಹ ಎಂದುಕೊಂಡ ನಾನು, ಎಲ್ಲಾ ಮೋಹವನ್ನು ಕಳಚಿಕೊಂಡು  ಉತ್ತರಾಭಿಮುಖವಾಗಿ ಹೊರಟೆ.
  
ಸ್ಫೀತಾನ್ ಜನಪದಾಂಸ್ತತ್ರ ಪುರಗ್ರಾಮವ್ರಜಾಕರಾನ್ ।
ಖೇಟಾನ್ ಪಟ್ಟನವಾಟೀಶ್ಚ ವನಾನ್ಯುಪವನಾನಿ ಚ ॥೧೧॥

ಹೀಗೆ ಹೋಗುತ್ತಿರುವಾಗ ಅನೇಕ ಊರು ಕೇರಿಗಳು ಸಿಕ್ಕಿದವು. ಆದರೆ ನಾನು ಯಾವುದರ ಗೋಜೂ ಇಲ್ಲದೇ,  ಕಾಡು-ಮೇಡನ್ನು ದಾಟಿಕೊಂಡು ಮುನ್ನೆಡೆದೆ ಎನ್ನುತ್ತಾರೆ ನಾರದರು. ಇಲ್ಲಿ ನಾರದರು ಕೆಲವು ವಿಶಿಷ್ಠ ಪದಗಳನ್ನು ಉಪಯೋಗಿಸಿರುವುದನ್ನು ಕಾಣುತ್ತೇವೆ. ಉದಾಹರಣೆಗೆ ೧. ಖೇಟ: “ಮೃಗಯಾಜೀವಿನಾಂ ಖೇಟಃ”. ಅಂದರೆ ಬೇಟೆಗಾರರು ವಾಸಮಾಡುವ ಹಳ್ಳಿ. ೨. ವಾಟೀ: “ವಾಟೀ ಪುಷ್ಪೋಪಜೀವಿನಾಂ” ಹೂ ಬೆಳೆಸಿಕೊಂಡು ಬದುಕುವ ಜನರಿರುವ ಹಳ್ಳಿ. ೩. ವ್ರಜ: ಗೋವಳರ ಕೇರಿ. ೪. ಆಕರ: ಗಣಿಗಳಿರುವ ಊರು. ೫.ಗ್ರಾಮ: ಎಲ್ಲಾ ರೀತಿಯ ಜನರು ವಾಸಮಾಡುವ ಸ್ಥಳ. ೬. ಪುರ: ರಾಜರು ನೆಲೆಸಿರುವ ಸ್ಥಳ. ೭. ಉಪವನ: ನಮ್ಮ ಅನುಕೂಲಕ್ಕಾಗಿ ನಾವು ಬೆಳೆಸಿಕೊಂಡ ಕಾಡು. ೮. ವನ: ಸಹಜವಾಗಿ ಬೆಳೆದ ಕಾಡು.
ಮುಂದುವರಿದು ನಾರದರು ಹೇಳುತ್ತಾರೆ: ಹೀಗೆ ಎಲ್ಲವನ್ನೂ ದಾಟಿಕೊಂಡು ಮುನ್ನೆಡೆದ ನನಗೆ ಒಂದು ಭೀಕರವಾದ ಗೊಂಡಾರಣ್ಯ ಸಿಗುತ್ತದೆ. ಅಲ್ಲಿ ಯಾವ ಮನುಷ್ಯರ ಸುಳಿಯೂ ಇರುವುದಿಲ್ಲ. ಆ ಸ್ಥಳವನ್ನು ನೋಡಿದಾಗ ನನಗೆ ಸಾಧನೆಗೆ ಇದೇ ಪ್ರಶಸ್ತ ಸ್ಥಳ ಎನಿಸುತ್ತದೆ. ಹಾಗಾಗಿ ಅಲ್ಲೇ ನಿಂತು ಅಲ್ಲಿರುವ ಒಂದು ಅಶ್ವತ್ಥ ಮರದ ಬುಡದಲ್ಲಿ ತಪಸ್ಸಿಗೆ ಕುಳಿತೆ. ಹೀಗೆ ಕಣ್ಮುಚ್ಚಿ ಕುಳಿತಾಗ ನನಗೆ ಭಗವಂತನ ಅದ್ಭುತ ರೂಪ ಕಾಣಿಸುತ್ತದೆ!  ಈ ರೀತಿ ಭಗವಂತನ ದರ್ಶನ ಅಂತರಂಗದಲ್ಲಾದಾಗ, ನನಗಾದ ಅನುಭವ ವರ್ಣಿಸಲು ಅಸಾಧ್ಯವಾದುದು.

ಪ್ರೇಮಾತಿಭರನಿರ್ಭಿನ್ನ ಪುಲಕಾಂಗೋSSತಿನಿರ್ವೃತಃ ।
ಆನಂದಸಂಪ್ಲವೇ ಲೀನೋ ನಾಪಶ್ಯಮುಭಯಂ ಮುನೇ ॥೨೧॥

ಭಗವಂತನ ಪ್ರೀತಿ ಉಕ್ಕಿ ಹರಿದಾಗ ಅಳೆಯಲಾಗದ ಆನಂದ ನನ್ನದಾಯಿತು. ಮೈಯೆಲ್ಲಾ ರೋಮಾಂಚನ. ಆನಂದದ ಸಮುದ್ರದಲ್ಲಿ ಈಜಾಡಿದ ಅನುಭವ ನನ್ನದು. ಆಗ ಭಗವಂತನನ್ನು ಬಿಟ್ಟು ಇನ್ನೇನನ್ನೂ ಕಾಣದಾದೆ ಎನ್ನುತ್ತಾರೆ ನಾರದರು. ಇಲ್ಲಿ  “ನಾಪಶ್ಯಮುಭಯಂ” ಎಂದರೆ ಭಗವಂತನನ್ನು ಹೊರತುಪಡಿಸಿ ಬೇರೇನನ್ನೂ ಕಾಣದಾದೆ ಎಂದರ್ಥ. ಪ್ರಾಚೀನ ವ್ಯಾಕರಣ ನೋಡಿದರೆ ಮಾತ್ರ ಈ ಮಾತು ಅರ್ಥವಾಗುತ್ತದೆ. “ಉಭಯಂ ದ್ವಿತೀಯಂ ನಾಪಶ್ಯಂ ತಮೇವಾಪಶ್ಯಂ”. ಇಲ್ಲಿ ‘ಉಭಯಂ’ ಎಂದರೆ ಬೇರೆ ಪ್ರಪಂಚವನ್ನು ನೋಡಲಿಲ್ಲ-ಭಗವಂತನನ್ನೇ ನೋಡಿದೆ ಎಂದರ್ಥ.
ಮುಂದುವರಿದು ನಾರದರು ಹೇಳುತ್ತಾರೆ: ನನಗೆ ಬಹಳ ಸಂತೋಷವಾಯಿತು. ಆನಂದದ ಸಮುದ್ರದಲ್ಲಿ ಓಡಾಡುತ್ತಿದ್ದೇನೆ ಅನಿಸಿತು. ಆದರೆ ಇದ್ದಕ್ಕಿದ್ದಂತೆ ಆ ರೂಪ ಅದೃಶ್ಯವಾಯಿತು! ಆಗ ನನಗೆ ಗಾಬರಿಯಾಯಿತು. ಮರಳಿ ಎಷ್ಟೇ ಪ್ರಯತ್ನಿಸಿದರೂ ಭಗವಂತನ ದರ್ಶನವಾಗಲಿಲ್ಲ. ಪ್ರತ್ಯಕ್ಷವಾಗಿ ಭಗವಂತನನ್ನು ಕಾಣಲೇಬೇಕೆಂದು ಗೋಗರೆದಾಗ ನನಗೊಂದು ಅಶರೀರವಾಣಿ ಕೇಳಿಸಿತು. “ನನ್ನನ್ನು ನೋಡಲು ಬೇಕಾದ ಪಕ್ವತೆ ಇನ್ನೂ ನಿನಗೆ ಬಂದಿಲ್ಲ. ನೀನು ನನ್ನನು ಕಾಣುತ್ತಿ. ಯಾವಾಗ ಬೇಕೋ ಆವಾಗ ಕಾಣುವಷ್ಟು ದೊಡ್ಡವನಾಗಿ ಬೆಳೆಯುತ್ತಿ. ಆದರೆ ಸದ್ಯಕ್ಕೆ ಇಷ್ಟೇ. ಇದರಿಂದ ಹೆಚ್ಚು ನೋಡುವ ಆಸೆ ಬೇಡ. ನಿನ್ನ ಸಾಧನೆಯಿಂದಾಗಿ, ಈ ಜನ್ಮದಲ್ಲಿ ನೀನು ಏನನ್ನು ಕಂಡೆ, ಅದನ್ನು ನೀನೆಂದೂ ಮರೆಯುವುದಿಲ್ಲ. ನಿನ್ನ ಪೂರ್ವ ಸ್ಮೃತಿ ಸದಾ ನಿನ್ನೊಂದಿಗಿರುತ್ತದೆ” ಎನ್ನುವ ಸಂದೇಶ ಆ ಅಶರೀರವಾಣಿಯಿಂದ ಬಂದಿತು. ಈ ಘಟನೆಯ ನಂತರ ನಾನು ಇಡೀ ಜೀವನವನ್ನು ಭಗವಂತನ ಚಿಂತನೆಯಲ್ಲಿ ಕಳೆದೆ. ವಯಸ್ಸಾದ ನಂತರ ನನ್ನ ಪಾಂಚಭೌತಿಕ ಶರೀರ ಬಿದ್ದು ಹೋಯಿತು. ಆ ಕಲ್ಪದ ಕಥೆ ಅಲ್ಲಿಗೆ ಮುಗಿಯಿತು. ಆ ನಂತರ ಈ ಕಲ್ಪದಲ್ಲಿ ನಾನು ಬ್ರಹ್ಮನ ಮಾನಸಪುತ್ರನಾಗಿ ಜನಿಸಿದೆ. ವೀಣೆ ನನ್ನ ಕೈಯಲ್ಲಿದೆ. ನಾನು ಕಾಣಬೇಕೆಂದುಕೊಂಡಾಗಲೆಲ್ಲಾ ಆ ಭಗವಂತ ದರ್ಶನ ಕೊಡುತ್ತಾನೆ. ಎಂತಹ ಭಾಗ್ಯ ನನ್ನದು. ಇದಕ್ಕೆಲ್ಲಾ ಕಾರಣ ನಾನು ಭಗವಂತನ ಮಹಿಮೆಯನ್ನು ಋಷಿಗಳಿಂದ ಕೇಳಿ ತಿಳಿದಿರುವುದು. ಆದ್ದರಿಂದ ಅಂತಹ ಭಗವಂತನ ಮಹಿಮೆಯನ್ನು ಜನರಿಗೆ ತಾವು ಪರಿಚಯಿಸಬೇಕು ಎನ್ನುವುದು ನನ್ನ  ಅಪೇಕ್ಷೆ ಎನ್ನುತ್ತಾರೆ ನಾರದರು.
ಇಷ್ಟು ಹೇಳಿ ನಾರದರು ತಮ್ಮ ವೀಣೆಯನ್ನು ಮೀಟುತ್ತಾ ಅಲ್ಲಿಂದ ಹೊರಟುಹೋಗುತ್ತಾರೆ ಎನ್ನುವಲ್ಲಿಗೆ ಈ ಅಧ್ಯಾಯ ಮುಕ್ತಾಯವಾಯಿತು.    


॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ಷಷ್ಠೋSಧ್ಯಾಯಃ ॥
ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಆರನೇ  ಅಧ್ಯಾಯ ಮುಗಿಯಿತು.
*********

Tuesday, February 12, 2013

Shrimad BhAgavata in Kannada -Skandha-01-Ch-05(04)


ಇದಂ ಹಿ ವಿಶ್ವಂ ಭಗವಾನಿವೇತರೋ ಯತೋ ಜಗತ್ ಸ್ಥಾನನಿರೋಧಸಂಭವಃ ।
ತದ್ಧಿ ಸ್ವಯಂ ವೇದ ಭವಾಂಸ್ತಥಾಪಿ ಪ್ರಾದೇಶಮಾತ್ರಂ ಭವತಃ ಪ್ರದರ್ಶಿತಮ್ ॥೨೦॥

ಈ ಜಗತ್ತು ಅಂದರೇನು? ಜಗತ್ತೇ ಭಗವಂತ-ಭಗವಂತನೇ ಜಗತ್ತೇ?  “ಸರ್ವಂ ಖಲ್ವಿದಂ ಬ್ರಹ್ಮಾ”  ಎಂದು ವೇದದಲ್ಲಿ ಹೇಳಿದ ಮಾತಿನ ಅರ್ಥವೇನು? ದರ್ಶನ ಭಾಷೆಯಲ್ಲಿರುವ ಈ ಶ್ಲೋಕ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರರೂಪದಲ್ಲಿದೆ. ಮೇಲ್ನೋಟಕ್ಕೆ ‘ಭಗವಂತನೇ ವಿಶ್ವ’ ಎಂದು ಶಾಸ್ತ್ರಗಳು ಹೇಳಿದಂತೆ ಕಾಣುತ್ತದೆ. ಆದರೆ ಭಗವಂತನೇ ವಿಶ್ವವಲ್ಲ. ಅವನು ‘ಇತರಃ’ ಎನ್ನುತ್ತಾರೆ ನಾರದರು. ವೇದಗಳಲ್ಲಿ ‘ಭಗವಂತನೇ ಜಗತ್ತು’ ಎಂದು ಹೇಳಿದ್ದಾರೆ. ಭಗವಂತನನ್ನು ಬಿಟ್ಟು ಈ ಜಗತ್ತಿಗೆ ಸ್ವತಂತ್ರ ಅಸ್ತಿತ್ವವಿಲ್ಲ ಎನ್ನುವುದು ಆ ಮಾತಿನ ಅರ್ಥ. ಭಗವಂತನಿಂದ ಈ ವಿಶ್ವ ಸೃಷ್ಟಿಯಾಗಿರುವುದರಿಂದ, ಕಾರ್ಯ-ಕಾರಣ ಭಾವದಿಂದ ‘ವಿಶ್ವವೇ ಭಗವಂತ’ ಎನ್ನುತ್ತಾರೆ. ಇದೇ ಮಾತು ಗೀತೆಯಲ್ಲಿ ಬರುತ್ತದೆ. ಅಲ್ಲಿ ಕೃಷ್ಣ ಹೇಳುತ್ತಾನೆ:  “ನ ತದಸ್ತಿ ವಿನಾ ಯತ್ ಸ್ಯಾನ್ಮಯಾ ಭೂತಂ ಚರಾಚರಮ್” ಎಂದು. ॥೧೦-೩೯॥ ಅಂದರೆ: ನನ್ನನ್ನು ಬಿಟ್ಟು ಈ ಚರಾಚಾರಾತ್ಮಕ ಪ್ರಪಂಚಕ್ಕೆ ಅಸ್ತಿತ್ವವಿಲ್ಲ ಎಂದರ್ಥ. ಭಾಷೆಯನ್ನು ಈ ರೀತಿಯಾಗಿ ಬಳಸುವುದು ಸರ್ವೇಸಾಮಾನ್ಯ. ಉದಾಹರಣೆಗೆ ನಾವು ಕೆಲವೊಮ್ಮೆ “ನೀವೇ ಎಲ್ಲಾ” ಎಂದು ಹೇಳುತ್ತೇವೆ. ಇದರರ್ಥ “ಎಲ್ಲಾ ಜಡ-ಚೇತನ  ವಸ್ತುಗಳು ನೀವೇ” ಎಂದಲ್ಲ. ಬದಲಿಗೆ,  “ನಿಮ್ಮನ್ನು ಬಿಟ್ಟರೆ ಅದಕ್ಕೆ ಅಸ್ತಿತ್ವವಿಲ್ಲ” ಎಂದರ್ಥ. ಹೀಗಾಗಿ ಎಲ್ಲವೂ ಭಗವಂತನಲ್ಲ, ಭಗವಂತ ಬೇರೆಯೇ ಇದ್ದಾನೆ. ಎಲ್ಲವೂ ಭಗವಂತನ ಅಧೀನವಾಗಿದೆ ಮತ್ತು ಆತನಿಂದಲೇ ಈ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ ನಿರಂತರ ನಡೆಯುತ್ತಿರುತ್ತದೆ.
ಇಲ್ಲಿ ನಾರದರು ವ್ಯಾಸರಲ್ಲಿ ಹೇಳುತ್ತಾರೆ: “ಭಗವಂತನ ಅವತಾರರೂಪಿಯಾದ ನಿಮಗೆ ಎಲ್ಲವೂ ತಿಳಿದಿದೆ. ನಿಮಗೆ ತಿಳಿದಿರುವುದು ಅನಂತ ಆಕಾಶವಾದರೆ, ನಾನು ಇಲ್ಲಿ ಹೇಳಿರುವುದು ಒಂದು ಅಂಗುಲದಷ್ಟು. ನಿಮ್ಮ ಶಿಷ್ಯನಾದ ನನ್ನಲ್ಲಿ ಕೇಳಬೇಕೆಂದು ನೀವು ಅಪೇಕ್ಷೆಪಟ್ಟಿರುವುದರಿಂದ, ನಾನು ಈ ವಿವರಣೆ ಕೊಟ್ಟೆ” ಎಂದು.  ಇಷ್ಟು ಹೇಳಿ ನಾರದರು ಭಗವಂತನ ಗುಣಗಳ ಮಹಿಮೆಯನ್ನು ನಿರೂಪಣೆ ಮಾಡತಕ್ಕಂತಹ ಅವಶ್ಯಕತೆ ಏನು ಎನ್ನುವುದಕ್ಕೆ, ತನ್ನದೇ ಕಥೆಯನ್ನು ದೃಷ್ಟಾಂತವಾಗಿ ಹೇಳುತ್ತಾರೆ. “ಭಗವಂತನ ಮಹಿಮೆಯನ್ನು ಕೇಳಿರುವುದರಿಂದಲೇ ಈ ಕಲ್ಪದಲ್ಲಿ ನಾನು ನಾರದ ಪದವಿಗೆ ಬಂದೆ” ಎಂದು ತಮ್ಮ ಕಥೆಯನ್ನು ಪ್ರಾರಂಭಿಸುತ್ತಾರೆ ನಾರದರು.
ನಾರದರ ಪೂರ್ವ ಕಥೆ
ನಾರದರು ಹೇಳುತ್ತಾರೆ: ಹಿಂದಿನ ಬ್ರಹ್ಮಕಲ್ಪದಲ್ಲಿ  ನಾನು ಒಬ್ಬಳು ದಾಸಿಯ ಮಗನಾಗಿದ್ದೆ. ನನ್ನ ತಾಯಿ ಹಸು ಸಾಕಿಕೊಂಡು, ಇನ್ನೊಬ್ಬರ ಮನೆಯ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಳು. ಆಗ ನನಗೆ ಐದು ವರ್ಷ ವಯಸ್ಸು. ಹೊಟ್ಟೆಯ ಹಿಟ್ಟಿಗಾಗಿ ಪರದಾಡುವ ಬಡತನ ನಮ್ಮದು. ಹೀಗಿರುವಾಗ ನಮ್ಮ ಊರಿಗೆ ಚಾತುರ್ಮಾಸ್ಯ ಆಚರಣೆಗಾಗಿ ಋಷಿಗಳ ಸಮುದಾಯವೊಂದು ಬಂದು ಬೀಡುಬಿಟ್ಟಿತು. ಅವರು ನನ್ನ ತಾಯಿಯನ್ನು ಪರಿಚಾರಿಕೆಯಾಗಿ ಕೆಲಸಕ್ಕೆ ಸೇರಿಸಿಕೊಂಡರು. ಅಲ್ಲಿ ನಾನು ಋಷಿಗಳು ಊಟಮಾಡಿದ ಎಲೆಯನ್ನು ಎತ್ತುವ ಕೆಲಸ ಮಾಡುತ್ತಿದ್ದೆ. ಅಡುಗೆ ಪಾತ್ರೆಯಲ್ಲಿ ಉಳಿದ ಆಹಾರ ಸೇವಿಸುತ್ತಾ, ಬಹಳ ಸಂತೋಷದಿಂದ ಋಷಿಗಳ ಚಾಕರಿ ಮಾಡಿಕೊಂಡಿದ್ದೆ. ಇದರಿಂದ ನನಗೆ ಆ ಋಷಿಗಳಲ್ಲಿ ಆತ್ಮೀಯತೆ ಬೆಳೆಯಿತು. ಅವರು ಸದಾ ಭಗವಂತನ ಬಗೆಗೆ ಮಾತನಾಡುತ್ತಿದ್ದರು. ನನ್ನನ್ನು ಕರೆದು ಕುಳ್ಳಿರಿಸಿಕೊಂಡು ಭಗವಂತನ ಮಹಿಮೆಯನ್ನು ಹೇಳುತ್ತಿದ್ದರು. ಇದರಿಂದಾಗಿ ನನಗೆ ಭಗವಂತನಲ್ಲಿ ಆಸಕ್ತಿ ಹುಟ್ಟಿತು.
[ನಾರದರ ಈ ಕಥಾಭಾಗವನ್ನು ಕೇಳಿದಾಗ ನಮಗೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೇನೆಂದರೆ: ನಾವೆಂದೂ ನಮ್ಮ ಗುರುವನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ. ನಾವು ನಮ್ಮ ಹೃದಯದ ಬಾಗಿಲನ್ನು ತೆರೆದು ನಿರೀಕ್ಷಿಸುತ್ತಿರಬೇಕು ಅಷ್ಟೇ.  ಜ್ಞಾನಿಗಳು ಸಿಕ್ಕಿದ ತಕ್ಷಣ ನಮಗೆ ಮಾರ್ಗದರ್ಶನ ಸಿಗುತ್ತದೆ ಎಂದು ಹೇಳಲು ಬರುವುದಿಲ್ಲ. ನಮ್ಮ ಜೀವಸ್ವರೂಪಕ್ಕನುಗುಣವಾಗಿ, ಸ್ವರೂಪೋದ್ಧಾರಕ ಗುರು ಮಾತ್ರ ನಮ್ಮ ಮಾರ್ಗದರ್ಶನ ಮಾಡಬಲ್ಲ. ಕಾಲ ಪಕ್ವವಾದಾಗ ಅಂತಹ ಗುರುವನ್ನು ಭಗವಂತನೇ ನಮಗೆ ಪರಿಚಯಿಸುತ್ತಾನೆ].

ನಾರದರು ಮುಂದುವರಿದು ಹೇಳುತ್ತಾರೆ: ಋಷಿಗಳು ಕೊಟ್ಟ ಈ ಎಲ್ಲಾ ಜ್ಞಾನದಿಂದ ನನಗೆ ಭಗವಂತನನ್ನು ಬಿಟ್ಟು ಇನ್ನೇನೂ ಬೇಡ ಅನಿಸಲಾರಂಭಿಸಿತು. ಭಗವಂತನ ಸ್ಮರಣೆಯೊಂದೇ ಸರ್ವಸ್ವ ಎನ್ನುವ ಧೃಡ ನಂಬಿಕೆ ನನಗೆ ಬಂತು. ಕಣ್ಮುಚ್ಚಿ ಕುಳಿತರೆ ಇಡೀ ಜಗತ್ತು ನನ್ನೊಳಗಿರುವ ಆ ಭಗವಂತನೊಳಗಿದೆ ಎನ್ನುವ  ಅನುಭವ. ನನ್ನೊಳಗೆ ಅಣುವಿಗಿಂತ ಅಣುವಾಗಿ ಆ ಭಗವಂತ, ಹಾಗೂ  ಅವನೊಳಗೆ ಅನಂತ ಬ್ರಹ್ಮಾಂಡವಿರುವುದು ನನಗೆ ಕಲ್ಪಿತವಾಗುತ್ತಿತ್ತು. [ಇಲ್ಲಿ ಬಳಕೆಯಾಗಿರುವ ‘ಕಲ್ಪಿತ’ ಎನ್ನುವ ಪದದ ಅರ್ಥ  ‘ಭ್ರಾಂತಿ’ ಎಂದಲ್ಲ. ಸಂಸ್ಕೃತದ ‘ಕಲ್ಪಿತ’ ಎನ್ನುವ ಪದ ‘ಕ್ಲಪ’ ಎನ್ನುವ ಧಾತುವಿನಿಂದ ಬಂದಿದೆ. ಇದರರ್ಥ ಭಾವಿಸುವುದು; ಮನಸ್ಸಿನ ಅನುಸಂಧಾನ. “ನನ್ನ ಭಾವನೆಯಲ್ಲಿ ಹಾಗೆ ಕಂಡಿತು” ಎನ್ನುವುದನ್ನು ಕಲ್ಪಿತಾಃ ಎನ್ನುವ ಪದದಿಂದ ವಿವರಿಸಲಾಗಿದೆ]
ಭಗವಂತನ ಉಪಾಸನೆಯಲ್ಲಿ ಅತ್ಯಂತ ಶ್ರೇಷ್ಠ ಉಪಾಸನೆ ಚತುರ್ಮೂರ್ತಿ ಉಪಾಸನೆ. ಇದು ಬಹಳ ಪುರಾತನವಾದ ಉಪಾಸನೆ. ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಮತ್ತು ಅನಿರುದ್ದ ರೂಪದಲ್ಲಿ ಭಗವಂತನ ಉಪಾಸನೆಯನ್ನು ಪಂಚರಾತ್ರದಲ್ಲಿ ಕೂಡಾ ಹೇಳಲಾಗಿದೆ. ಭಗವಂತನ ಈ ನಾಲ್ಕು ರೂಪದಲ್ಲಿ ಎಲ್ಲವೂ ಅಡಗಿದೆ. ಸೃಷ್ಟಿ-ಸ್ಥಿತಿ-ಸಂಹಾರ ಕ್ರಿಯೆಯನ್ನು ಭಗವಂತ ಕ್ರಮವಾಗಿ ಪ್ರದ್ಯುಮ್ನ-ಅನಿರುದ್ಧ-ಸಂಕರ್ಷಣ ರೂಪದಲ್ಲಿ ಮಾಡುತ್ತಾನೆ. ನಮಗೆ ತಿಳಿದಂತೆ ಸೃಷ್ಟಿ-ಸ್ಥಿತಿ-ಸಂಹಾರ ಎನ್ನುವುದು  ಸಂಸಾರ ಬಂಧನ. ಈ ಬಂಧನದಲ್ಲಿ ಸಿಕ್ಕಿಹಾಕಿಕೊಂಡಿರುವ ‘ಜೀವ’ನನ್ನು ಬಿಡುಗಡೆ ಮಾಡಿ ಮೋಕ್ಷ ಕೊಡುವ ಭಗವಂತನ ವಿಶೇಷ ರೂಪ-ವಾಸುದೇವರೂಪ. “ಇಂತಹ ಭಗವಂತನ ಚತುರ್ಮೂರ್ತಿ ಉಪಾಸನೆ ಮಾಡಿದರೆ, ಎಲ್ಲವೂ ಮರೆತುಹೋಗಿ ಕೇವಲ ಆನಂದ ನಮ್ಮದಾಗುತ್ತದೆ” ಎಂದ ನಾರದರು, ಬಾಲ್ಯದಲ್ಲಿ ತಾನು ಪಡೆದ  ಚತುರ್ಮೂರ್ತಿ ಉಪಾಸನೆಯ ಜ್ಞಾನೋಪದೇಶವನ್ನು ವಿವರಿಸುತ್ತಾರೆ.

ಓಂ ನಮೋ ಭಗವತೇ ತುಭ್ಯಂ ವಾಸುದೇವಾಯ ಧೀಮಹಿ ।
ಪ್ರದ್ಯುಮ್ನಾಯಾನಿರುದ್ಧಾಯ ನಮಃ ಸಂಕರ್ಷಣಾಯ ಚ ॥೩೭॥

ಈ ಮಂತ್ರ ವಾಸುದೇವ ದ್ವಾದಶಾಕ್ಷರ ಪ್ರತೀಕವಾಗಿದೆ. ಇಲ್ಲಿ ‘ತುಭ್ಯಂ’ ಮತ್ತು  ‘ಧೀಮಹಿ’ ಎನ್ನುವ ಎರಡು ಪದಗಳನ್ನು ಸೇರಿಸಲಾಗಿದೆ. ಭಗವಂತನ ವಾಸುದೇವ ರೂಪ-ಮೋಕ್ಷಪ್ರದರೂಪ. ನಮ್ಮೊಳಗೆ ಸದಾ ಇದ್ದರೂ ಕೂಡಾ, ಮೋಕ್ಷಪ್ರಾಪ್ತಿಯಾಗುವ ತನಕ  ಗೋಚರವಾಗದ ರೂಪವಿದು. ತನ್ನನ್ನು ತಾನು ಮುಚ್ಚಿಕೊಂಡು(ವಾಸುವಾಗಿ), ಕೊನೆಗೆ ಮೋಕ್ಷದಲ್ಲಿ ಬೆಳಕಾಗಿ(ದೇವಯತಿ) ಕಾಣಿಸಿಕೊಳ್ಳುವ ಭಗವಂತ ವಾಸುದೇವ.  ‘ವಸುದೇವ’ ಎಂದರೆ ಶುದ್ಧವಾದ ಮನಸ್ಸು. [ಇದನ್ನು ಮುಂದೆ ಭಾಗವತದಲ್ಲೇ ಹೇಳುತ್ತಾರೆ. ಸತ್ತ್ವಂ ವಿಶುದ್ಧಂ ವಸುದೇವಶಬ್ದಿತಂ(೦೧-೦೩-೨೩)]. ಬಾಳಿಗೆ ಬೆಳಕು ನೀಡುವ ಅತಿದೊಡ್ಡ ಸಂಪತ್ತು ಈ ‘ಶುದ್ಧವಾದ ಮನಸ್ಸು’. ಇಂತಹ ಶುದ್ಧವಾದ ಮನಸ್ಸಿಗೆ ಗೋಚರನಾಗುವ ಭಗವಂತ ‘ವಾಸುದೇವ’.
 ‘ದ್ಯುಮ್ನ’ ಎಂದರೆ ಸಂಪತ್ತು. ಈ ವಿಶ್ವ ಎನ್ನುವುದು ದೇವತೆಗಳಿಗೆ ಸುವರ್ಣ ಕೊಪ್ಪರಿಗೆಯಂತೆ. ಇಂತಹ ಸಮೃದ್ಧವಾದ ಈ ವಿಶ್ವವನ್ನು ನಿರ್ಮಿಸಿದ ಭಗವಂತ ಪ್ರದ್ಯುಮ್ನ. ಸೃಷ್ಟಿ ನಿರ್ಮಾಣದ ನಂತರ ಯಾವ ನಿರೋಧವೂ ಇಲ್ಲದೆ, ಪ್ರತಿಯೊಂದು ವಸ್ತುವಿನೊಳಗೂ ಪ್ರವೇಶಿಸಿ, ರಕ್ಷಣೆ ಮಾಡುವ ಭಗವಂತ ಅನಿರುದ್ಧ. ಕೊನೆಗೆ ಎಲ್ಲವನ್ನೂ ಕರ್ಷಣೆಮಾಡಿ, ಸಂಹಾರ ಮಾಡುವವನು ಸಂಕರ್ಷಣ. “ಹೀಗೆ ‘ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣನಾಗಿರುವ, ಮೋಕ್ಷಪ್ರದ ಭಗವಂತ-ವಾಸುದೇವನನ್ನು ಧ್ಯಾನ ಮಾಡು’ ಎಂದು ಋಷಿಗಳು ನನಗೆ ಉಪದೇಶಿಸಿದರು. ನಾನು ಋಷಿಗಳು ಹೇಳಿದ ಮಾತನ್ನು ಚಾಚೂತಪ್ಪದೆ ಪಾಲಿಸಿದೆ. ಮೈಮರೆತು ಧ್ಯಾನ ಮಾಡಿದೆ. ಹಾಗಾಗಿ ಅಂದು ಋಷಿಗಳು ಮೂಡಿಸಿದ ಜಾಗೃತಿಯಿಂದ, ಇಂದು ಬ್ರಹ್ಮದೇವರ ಮಾನಸಪುತ್ರನಾಗಿ ಹುಟ್ಟಿ ನಾರದ ಪದವಿಯನ್ನು ಪಡೆಯುವ ಭಾಗ್ಯ ನನಗೆ ದೊರೆಯಿತು” ಎನ್ನುತ್ತಾರೆ ನಾರದರು.  

ತ್ವಮಪ್ಯದಭ್ರಶ್ರುತ ವಿಶ್ರುತಂ ವಿಭೋಃ ಸಮಾಪ್ಯತೇ ಯೇನ ವಿದಾಂ ಬುಭುತ್ಸಿತಮ್ ।
ಪ್ರಾಖ್ಯಾಹಿ ದುಃಖೈರ್ಮುಹುರರ್ದಿತಾತ್ಮನಾಂ ಸಂಕ್ಲೇಶನಿರ್ವಾಣಮುಶಂತಿ ನಾನ್ಯಥಾ ॥೪೦॥

“ನೀವು ನಿತ್ಯತೃಪ್ತರು. ನಿಮಗಾಗಿ ನೀವು ಏನೂ ಮಾಡಬೇಕಾಗಿಲ್ಲ. ಆದರೆ ದುಃಖದಿಂದ ಪಾರಾಗುವ ಬಗೆಯನ್ನು ಅರಿಯದ ಜನರಿಗಾಗಿ, ಅವರಿಗೆ  ಮಾರ್ಗದರ್ಶನ ರೂಪವಾಗಿ, ಮಹಾತ್ಮರೂ ಹಾಡಿ ಹೊಗಳುವಂತಹ, ಜ್ಞಾನಿಗಳ ಜ್ಞಾನದಾಹವನ್ನು ತಣಿಸುವಂತಹ ಒಂದು ಗ್ರಂಥ ರಚನೆ ತಮ್ಮಿಂದಾಗಬೇಕು” ಎಂದು, ನಾರದರು ವೇದವ್ಯಾಸರಲ್ಲಿ ಹೇಳಿದರು-ಎನ್ನುವಲ್ಲಿಗೆ ಈ ಅಧ್ಯಾಯ ಕೊನೆಗೊಳ್ಳುತ್ತದೆ.  

॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ಪಂಚಮೋSಧ್ಯಾಯಃ ॥
ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಐದನೇ  ಅಧ್ಯಾಯ ಮುಗಿಯಿತು.
*********