Friday, May 17, 2013

Shrimad BhAgavata in Kannada -Skandha-01-Ch-15(3)


ಪಾಂಡವರ ನಿರ್ಯಾಣ

ವಾಚಂ ಜುಹಾವ ಮನಸಿ ತತ್ಪ್ರಾಣ ಇತರೇ ಪರಮ್ ।
ಧೃತ್ಯಾ ಹ್ಯಪಾನಂ ಸೋತ್ಸರ್ಗಂ ತತ್ಪರತ್ವೇ ಹ್ಯಜೋಹವೀತ್ ॥೧೦॥

ತ್ರಿತ್ವೇ ಹುತ್ವಾSಥ  ಪಂಚತ್ವಂ ತಚ್ಚೈಕತ್ವೇSಜುಹೋನ್ಮುನಿಃ ।
ಸರ್ವಮಾತ್ಮನ್ಯಜುಹವೀದ್ ಬ್ರಹ್ಮಣ್ಯಾತ್ಮಾನಮವ್ಯಯೇ ॥೧೧॥

ಹಿಂದೆ ಧೃತರಾಷ್ಟ್ರನ ನಿರ್ಯಾಣ ಕುರಿತು ವಿವರಿಸುವಾಗ ಒಂದು ವಿಧದ ಧ್ಯಾನ ಪ್ರಕ್ರಿಯೆಯ ವಿವರವನ್ನು ನಾವು ನೋಡಿದ್ದೇವೆ. ಇಲ್ಲಿ ಯುಧಿಷ್ಠಿರನ ಮುಖೇನ ಇನ್ನೊಂದು ಅಪೂರ್ವ ಧ್ಯಾನ ಪ್ರಕ್ರಿಯೆಯನ್ನು ಭಾಗವತ  ವಿವರಿಸುತ್ತದೆ. ನಮ್ಮ ದೇಹ ಲಯಹೊಂದುವಾಗ ಹೇಗೆ ನಾವು ಲಯಚಿಂತನೆ ಮಾಡಬೇಕು ಎನ್ನುವುದನ್ನು ಇಲ್ಲಿ ಯುಧಿಷ್ಠಿರನ ಲಯಚಿಂತನೆಯಲ್ಲಿ ಕಾಣಬಹುದು. ಸಮುದ್ರದೊಳಗೆ ಮೀನುಗಳು ಸೇರಿಕೊಂಡಿರುವಂತೆ, ಕೆಳಗಿನ ಕಕ್ಷ್ಯೆದ ದೇವತೆಗಳು ಮೇಲಿನ ಕಕ್ಷ್ಯೆದ ದೇವತೆಗಳೊಂದಿಗೆ ಲಯಹೊಂದಿ, ಕೊನೆಗೆ ಚತುರ್ಮುಖನೊಳಗೆ ಸೇರಿಕೊಂಡು, ಭಗವಂತನಲ್ಲಿ ಲಯಹೊಂದುವುದನ್ನು ಲಯಚಿಂತನೆ ಎನ್ನುತ್ತಾರೆ.
ಯುಧಿಷ್ಠಿರ ತನ್ನ ಎಲ್ಲಾ ಬಾಹ್ಯೇನ್ದ್ರಿಯಗಳನ್ನು ಅಂತರ್ಮುಖಗೊಳಿಸಿದ. ಅಂದರೆ ಕಣ್ಣಿನ ದೇವತೆ ಸೂರ್ಯ(೧೨ ನೇ ಕಕ್ಷ್ಯೆ), ಕಿವಿಯ ದೇವತೆ ಚಂದ್ರ(೧೨ನೇ ಕಕ್ಷ್ಯೆ), ರಸೇನ್ದ್ರಿಯ ದೇವತೆ ವರುಣ(೧೩ನೇ ಕಕ್ಷ್ಯೆ), ತ್ವಗೇನ್ದ್ರಿಯ ದೇವತೆ ವಿತ್ತಪ(೧೮ನೇ ಕಕ್ಷ್ಯೆ), ಮೂಗಿನ ಅಭಿಮಾನಿ ದೇವತೆಗಳಾದ ಆಶ್ವೀದೇವತೆಗಳು(೧೮ನೇ ಕಕ್ಷ್ಯೆ), ವಾಗೀನ್ದ್ರಿಯ ದೇವತೆ ಅಗ್ನಿ(೧೫ನೇ ಕಕ್ಷ್ಯೆ), ಕಾಲಿನ ದೇವತೆ ಜಯಂತ(೧೯ನೇ ಕಕ್ಷ್ಯೆ). ಈ ಎಲ್ಲಾ ದೇವತೆಗಳನ್ನು ಕೈಯ ಅಭಿಮಾನಿ ದೇವತೆ, ಎಂಟನೇ ಕಕ್ಷ್ಯೆದಲ್ಲಿರುವ ಇಂದ್ರನಲ್ಲಿ ಲಯಗೊಳಿಸಿ, ಸಮಸ್ತ ದೇವತೆಗಳನ್ನು ವಾಗ್ದೇವತೆ ಪಾರ್ವತಿಯಲ್ಲಿ (೭ನೇ ಕಕ್ಷ್ಯೆ) ಲಯಗೊಳಿಸಿದ. [ವಾಗ್ದೇವತೆಯಾಗಿ ಅತ್ಯಂತ ಎತ್ತರದ ಕಕ್ಷ್ಯೆದಲ್ಲಿ ಸರಸ್ವತಿ-ಭಾರತಿಯರಿದ್ದಾರೆ. ಆದರೆ ಕೆಳಗಿನ ಕಕ್ಷ್ಯೆದಲ್ಲಿ ಅಗ್ನಿ ಹಾಗೂ ನಂತರ ಪಾರ್ವತಿ ವಾಗ್ದೇವತೆಯರು. ಭಾಗವತದಲ್ಲಿ ಇಂದ್ರಿಯಾಭಿಮಾನಿ ದೇವತೆಗಳು ವಾಗ್ದೇವತೆಯಲ್ಲಿ ಲಯ ಹೊಂದುವುದನ್ನು ಬಿಡಿಸಿ ಹೇಳಿಲ್ಲ. ಇಲ್ಲಿ ವಾಗ್ದೇವತೆ ಪಾರ್ವತಿ, ಮನಸ್ಸಿನ ದೇವತೆ ಶಿವನಲ್ಲಿ ಲಯ ಹೊಂದುತ್ತಾಳೆ ಎನ್ನುವಲ್ಲಿನಿಂದ ಲಯ ಚಿಂತನೆಯ ವಿವರಣೆ ನೀಡಿದ್ದಾರೆ].
ಯುಧಿಷ್ಠಿರ ಮಾತನ್ನು(ಪಾರ್ವತಿಯನ್ನು) ಮನಸ್ಸಿನಲ್ಲಿ(ಶಿವನಲ್ಲಿ) ಲಯಗೊಳಿಸಿರುವುದರಿಂದ, ಮಾತಿಲ್ಲದೆ ಪೂರ್ಣ ಮನನದಲ್ಲಿ ಕುಳಿತ. ಮನೋಭಿಮಾನಿಯಾದ ಶಿವನಿಂದಾಚೆಗೆ ಮುಖ್ಯಪ್ರಾಣದೇವರ ಸಾಕ್ಷಾತ್ ಐದು ರೂಪಗಳಿವೆ. ಅವುಗಳೆಂದರೆ: ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ.  ಇಲ್ಲಿ ಧರ್ಮರಾಯ ಪ್ರಾಣಶಕ್ತಿಯಲ್ಲಿ ಮನಸ್ಸನ್ನು(ಶಿವನನ್ನು) ಲಯಗೊಳಿಸಿದ. ನಂತರ ಪ್ರಾಣನನ್ನು ಅಪಾನದಲ್ಲಿ ಲಯಗೊಳಿಸಿ, ಶ್ವಾಸೋಚ್ಛ್ವಾಸವನ್ನು ಸ್ಥಬ್ಧಗೊಳಿಸಿದ. ಇದರ ನಂತರದ ಧ್ಯಾನದ ಪ್ರಕ್ರಿಯೆ ತುಂಬಾ ಕಷ್ಟಕರವಾದುದು. ಅದೇನೆಂದರೆ ಪ್ರಾಣಾಪಾನರನ್ನು ವ್ಯಾನನಲ್ಲಿ ಲಯಗೊಳಿಸುವುದು. ಇದು ದೇಹದಲ್ಲಿನ ಸಂಪೂರ್ಣ ಪ್ರಾಣಕ್ರಿಯೆಯನ್ನು ನಿಲ್ಲಿಸಿ ಕುಂಭಕದಲ್ಲಿ ನಿಲ್ಲುವ ಸ್ಥಿತಿ. ಧರ್ಮರಾಯ  ಪ್ರಾಣ-ಅಪಾನ-ವ್ಯಾನ ಈ ಮೂರರ ಸಮಷ್ಟಿಯನ್ನು ಉದಾನ ಮತ್ತು ಸಮಾನರಲ್ಲಿ ಲಯಗೊಳಿಸಿದ. ಹೀಗೆ  ಪ್ರಾಣದೇವರ ಪಂಚರೂಪಗಳನ್ನು ಒಂದರೊಳಗೊಂದು ಆವಿರ್ಭಾವಗೊಳಿಸಿ, ಅದನ್ನು ಅಖಂಡನಾದ ಮುಖ್ಯಪ್ರಾಣದೇವರಲ್ಲಿ ಲಯಗೊಳಿಸಿದ ಯುಧಿಷ್ಠಿರ. ಇಂತಹ ಸ್ಥಿತಿಯಲ್ಲಿ ಮುಖ್ಯಪ್ರಾಣನನ್ನು ಹೃದಯದಲ್ಲಿರುವ ಆತ್ಮನಾಮಕ ಭಗವಂತನಲ್ಲಿ ಹೊಮಿಸಿ, “ನನ್ನ ಬಿಂಬರೂಪದಲ್ಲಿರುವ ಭಗವಂತನೇ  ಇಡೀ ವಿಶ್ವದಲ್ಲಿ ತುಂಬಿರುವ ಭಗವಂತ” ಎಂದು ಸರ್ವಗತನಾದ ಭಗವಂತನಲ್ಲಿ ಅಂತರ್ಯಾಮಿಯಾದ ಭಗವಂತನನ್ನು ಹೋಮಿಸಿದ ಧರ್ಮರಾಜ.   

ಉದೀಚೀಂ ಪ್ರವಿವೇಶಾಶಾಂ ಗತಪೂರ್ವಾಂ ಮಹಾತ್ಮಭಿಃ ।
ಹೃದಿ ಬ್ರಹ್ಮ ಪರಂ ಧ್ಯಾಯನ್ ನಾವರ್ತೇತ ಗತೋ ಯತಃ ॥೧೩॥

ಹೀಗೆ ವಿಶ್ವದಲ್ಲಿ ತುಂಬಿರುವ ಅಖಂಡವಾದ ಶಕ್ತಿಯೇ ಬಿಂಬರೂಪನಾಗಿ ತನ್ನೊಳಗೂ ತುಂಬಿದ್ದಾನೆ ಎಂದು ಚಿಂತನೆ ಮಾಡಿ,  ಉತ್ತರಾಭಿಮುಖವಾಗಿ; ಯಾವ ದಾರಿಯಲ್ಲಿ ಹೋದರೆ ಮತ್ತೆ ಮರಳಿ ಬರುವ ಸಂಭವ ಇಲ್ಲವೋ, ಅಂತಹ ದಾರಿಯಲ್ಲಿ ಪರಬ್ರಹ್ಮನನ್ನು ಧ್ಯಾನಿಸುತ್ತಾ ಸಾಗಿದ ಯುಧಿಷ್ಠಿರ.
“ಇಲ್ಲಿ ಯಾವ ಮಾರ್ಗದಲ್ಲಿ ಸಾಗಿದರೆ ಮರಳಿ ಬರುವ ಸಂಭವ ಇಲ್ಲವೋ ಆ ಮಾರ್ಗದಲ್ಲಿ ಸಾಗಿದ” ಎಂದರೆ ‘ಅವರು ಸಾಗಿದ ಮಾರ್ಗ ಮೋಕ್ಷ ಮಾರ್ಗ’ ಎಂದರ್ಥವಲ್ಲ. ಇದು ದೇಹತ್ಯಾಗದ ಒಂದು ವಿಧಾನ ಅಷ್ಟೇ. ಆಚಾರ್ಯರು ತಾತ್ಪರ್ಯ ನಿರ್ಣಯದಲ್ಲಿ ಹೇಳುವಂತೆ: “ನಾವರ್ತೆತ ವೀರಗತಿಮ್”. ಅಂದರೆ: ಎಂತಹ ಪ್ರಸಂಗ ಬಂದರೂ ಮತ್ತೆ ಮರಳಿ ಬರುವ ಪ್ರಶ್ನೆಯೇ ಇಲ್ಲ ಎಂದು ನಿರ್ಧರಿಸಿ, ದೇಹ ಬಿದ್ದುಹೋಗುವ ತನಕ  ಸಾಗುವ ‘ವೀರಗತಿ’.

ತೇ ಸಾಧುಕೃತಸರ್ವಾರ್ಥಾ ಜ್ಞಾತ್ವಾSSತ್ಯಂತಿಕಮಾತ್ಮನಃ ।
ಮನಸಾ ಧಾರಯಾಮಾಸುರ್ವೈಕುಂಠಚರಣಾಂಬುಜಮ್ ॥೧೫॥

ಧರ್ಮರಾಯನೊಂದಿಗೆ  ದ್ರೌಪದಿ ಮತ್ತು ಇತರ ಪಾಂಡವರು “ತಾವು ಇನ್ನು ಭೂಮಿಯಲ್ಲಿ ಇರುವುದು ತರವಲ್ಲ” ಎಂದು ತೀರ್ಮಾನ ಮಾಡಿ, ಭಗವಂತನನ್ನು ಹೃದಯದಲ್ಲಿ ಹೊತ್ತು, ಉತ್ತರಾಭಿಮುಖವಾಗಿ ಹೊರಡುತ್ತಾರೆ. ತಮ್ಮ ಜೀವಿತ ಕಾಲದಲ್ಲಿ ಭೂಮಿಯಲ್ಲಿದ್ದು ಏನನ್ನು ಮಾಡಬೇಕಿತ್ತೋ ಅದೆಲ್ಲವನ್ನೂ ಮಾಡಿ, ಮನಸ್ಸಿನಲ್ಲಿ ಯಾವ ನೆನಪನ್ನೂ ಹೊತ್ತುಕೊಳ್ಳದೇ, ಮನಸ್ಸನ್ನು ಭಗವಂತನಲ್ಲಿ ನೆಟ್ಟು, ಭಗವನ್ಮಯರಾಗಿ ಸಾಗುತ್ತಾರೆ ಪಾಂಡವರು.

ಇಲ್ಲಿನ ಮುಂದಿನ ಕಥಾಭಾಗ ಸ್ವರ್ಗಾರೋಹಣಪರ್ವ. ಆ ಕಥೆ ಮಹಾಭಾರತದಲ್ಲಿ ವಿವರವಾಗಿ ಬರುತ್ತದೆ. ಉತ್ತರಾಭಿಮುಖವಾಗಿ ಸಾಗುತ್ತಿರುವಾಗ ದ್ರೌಪದಿ, ನಕುಲ-ಸಹದೇವ, ಅರ್ಜುನ, ಭೀಮ ಎಲ್ಲರೂ ತಮ್ಮ ದೇಹತ್ಯಾಗ ಮಾಡಿ ಅವತಾರ ಸಮಾಪ್ತಿ ಮಾಡುತ್ತಾರೆ. ಧರ್ಮರಾಯನನ್ನು ನಾಯಿ ರೂಪದಲ್ಲಿ ಯಮ ಹಿಂಬಾಲಿಸಿ ಪರೀಕ್ಷಿಸುತ್ತಾನೆ. ಪರೀಕ್ಷೆಯಲ್ಲಿ ಗೆದ್ದ ಯುಧಿಷ್ಠಿರ ದೇಹ ಸಮೇತನಾಗಿ ಸ್ವರ್ಗವನ್ನು ಸೇರುತ್ತಾನೆ. ಹೀಗೆ ಪಾಂಡವರ ನಿರ್ಯಾಣವನ್ನು ವಿವರಿಸುವುದರೊಂದಿಗೆ ಈ ಅಧ್ಯಾಯ ಕೊನೆಗೊಳ್ಳುತ್ತದೆ.

॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ಪಂಚದಶೋSಧ್ಯಾಯಃ ॥
ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಹದಿನೈದನೇ ಅಧ್ಯಾಯ ಮುಗಿಯಿತು.
*********

Tuesday, May 14, 2013

Shrimad BhAgavata in Kannada -Skandha-01-Ch-15(2)


ನಿಶಮ್ಯ ಭಗವನ್ಮಾರ್ಗಂ ಸಂಸ್ಥಾಂ ಯದುಕುಲಸ್ಯ ಚ ।
ಸ್ವಃಪಥಾಯ ಮತಿಂ ಚಕ್ರೇ ನಿವೃತ್ತಾತ್ಮಾ ಯುಧಿಷ್ಠಿರಃ ॥೪॥

ಶ್ರೀಕೃಷ್ಣನ ಅವತಾರ ಸಮಾಪ್ತಿ ವಿಚಾರ ಕೇಳಿ ಧರ್ಮರಾಯನಿಗೆ ಏನೆನಿಸಿತು ಎನ್ನುವುದನ್ನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಯಾದವರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಸತ್ತ ವಿಚಾರವನ್ನು ಹಾಗೂ ಶ್ರೀಕೃಷ್ಣ ಅವತಾರ ಸಮಾಪ್ತಿ ಮಾಡಿದ ವಿಚಾರವನ್ನು ಅರ್ಜುನನಿಂದ ಕೇಳಿ ಧರ್ಮರಾಯ “ತಾನೂ ಹೊರಟು ಹೋಗಬೇಕು, ಇನ್ನು ಈ ಭೂಮಿಯಲ್ಲಿ ರಾಜ್ಯಭಾರ ಮಾಡುವುದರಲ್ಲಿ ಅರ್ಥವಿಲ್ಲ” ಎಂದು ನಿರ್ಧರಿಸಿದ.
ಇಲ್ಲಿ ವಿಶೇಷ ಏನೆಂದರೆ: ಪಾಂಡವರು ಅನಾರೋಗ್ಯದ ಕಾರಣ ರಾಜ್ಯತ್ಯಾಗ ಮಾಡಿದುದಲ್ಲ; ವಾನಪ್ರಸ್ಥಾಶ್ರಮಮಕ್ಕೆ ಹೋದದ್ದೂ ಅಲ್ಲ. ಅವರು ಭೂಮಿಯಲ್ಲಿ ಇದ್ದದ್ದು ಸಾಕು, ಇನ್ನು ದೇಹತ್ಯಾಗ ಮಾಡಿ ಮೂಲರೂಪ ಸೇರಬೇಕೆಂದು ನಿರ್ಧಾರಮಾಡಿ, ಸ್ವರ್ಗದ ದಾರಿಯಲ್ಲಿ ಪಯಣ ಮಾಡುತ್ತಾರೆ.
ಧರ್ಮರಾಯನ ಮೂಲ ಸ್ವಭಾವವೇ ನಿವೃತ್ತಿಮಾರ್ಗವಾಗಿತ್ತು. ಯುದ್ಧದ ನಂತರ ಆತ “ನನಗೆ ಈ ಸಿಂಹಾಸನ ಬೇಡ, ಭೀಮ ಅಥವಾ ಅರ್ಜುನ ಸಿಂಹಾಸನವನ್ನೇರಲಿ, ನಾನು ಕಾಡಿಗೆ ಹೋಗಿ ತಪಸ್ಸು ಮಾಡುತ್ತೇನೆ” ಎಂದು ಕೇಳಿಕೊಂಡಿದ್ದ. ಆಗ ಶ್ರೀಕೃಷ್ಣ ಮತ್ತು ವೇದವ್ಯಾಸರು “ಇದು ನಿನ್ನ ಕರ್ತವ್ಯ, ನೀನು ರಾಜ್ಯಭಾರ ಮಾಡು” ಎಂದು ಸಲಹೆ ಕೊಟ್ಟಿದ್ದುದಕ್ಕಾಗಿ, ಮೂವತ್ತಾರು ವರ್ಷಗಳ ಕಾಲ ಯಶಸ್ವಿಯಾಗಿ ರಾಜ್ಯಭಾರ ಮಾಡಿದ ಧರ್ಮರಾಯ. ಈಗ ಶ್ರೀಕೃಷ್ಣ ಅವತಾರ ಸಮಾಪ್ತಿ ಮಾಡಿದ ವಿಚಾರ ಕೇಳಿ, ಆತನ ಮನಸ್ಸು ವಿಶೇಷವಾಗಿ ನಿವೃತ್ತಿ ಕಡೆಗೆ ಹರಿಯಿತು. “ಇನ್ನು ನಾನು ಭೂಮಿಯಲ್ಲಿರಬಾರದು, ಹೊರಟುಬಿಡಬೇಕು” ಎಂದು ಆತ ತೀರ್ಮಾನ ಮಾಡಿದ.

ಸ್ವರಾಟ್ ಪೌತ್ರಂ ವಿನೀತಂ ತಮಾತ್ಮನೋSನವಮಂ ಗುಣೈಃ ।
ತೋಯನೀವ್ಯಾಃ ಪತಿಂ ಭೂಮೇರಭ್ಯಷಿಂಚದ್ ಗಜಾಹ್ವಯೇ ॥೭॥

ನಿವೃತ್ತಿ ಮಾರ್ಗದಲ್ಲಿ ಸಾಗಬೇಕೆಂದು ಅನಿಸಿದ ತಕ್ಷಣ ಕ್ಷತ್ರಿಯರು ಹೊರಟುಹೋಗುವಂತಿಲ್ಲ. ಏಕೆಂದರೆ ಅವರ ಮೇಲೆ ಸಿಂಹಾಸನದ ಜವಾಬ್ಧಾರಿ ಇರುತ್ತದೆ. ಹಾಗಾಗಿ ಅದನ್ನು ಒಬ್ಬ ಯೋಗ್ಯ ಉತ್ತರಾಧಿಕಾರಿಗೆ ಒಪ್ಪಿಸದೇ ಧರ್ಮರಾಯ ಹೊರಡುವಂತಿರಲಿಲ್ಲ. ನಮಗೆ ತಿಳಿದಂತೆ ಪಾಂಡವರ ಎಲ್ಲಾ ಮಕ್ಕಳೂ ಸಾವನ್ನಪ್ಪಿದ್ದು,  ಅಲ್ಲಿ ಉಳಿದಿರುವ ಪಾಂಡವರ ಏಕಮಾತ್ರ ವಂಶದ ಕುಡಿ, ಅಭಿಮನ್ಯುವಿನ ಮಗನಾದ ಪರೀಕ್ಷಿತ.
ಮೂವತ್ತಾರು ವರ್ಷ ವಯಸ್ಸಿನ ಪರೀಕ್ಷಿತ ಶಸ್ತ್ರ-ಶಾಸ್ತ್ರ ಪಾರಂಗತನಾಗಿದ್ದು ಸಿಂಹಾಸನವನ್ನೇರಲು ಯೋಗ್ಯನಾಗಿದ್ದ. ಶ್ರೇಷ್ಠ ಪರಂಪರೆಯಲ್ಲಿ ಬೆಳೆದ ಪರೀಕ್ಷಿತ ತುಂಬಾ ವಿನಯಶೀಲನಾಗಿದ್ದ. ಸಜ್ಜೆನಿಕೆ ಮತ್ತು ಗುಣವಂತಿಕೆಯಲ್ಲಿ ತನಗಿಂತ ಪರೀಕ್ಷಿತ ಏನೂ ಕಮ್ಮಿ ಇಲ್ಲ(ಅಧಿಕ-ಉಪಮಾನ)ಎಂಬುದನ್ನು ಗುರುತಿಸಿದ ಧರ್ಮರಾಯ, ಆತನನ್ನು ಸಮುದ್ರವೇ ಸೀಮೆಯಾಗಿರುವ ಭೂಮಿಯ ಸಾಮ್ರಾಟನಾಗಿ ಮಾಡಿ  ಪಟ್ಟಾಭಿಷೇಕ ಮಾಡಿದ.
ಇಲ್ಲಿ ಹಸ್ತಿನಪುರವನ್ನು ‘ಗಜಾಹ್ವಯ’ ಎಂದು ಕರೆದಿದ್ದಾರೆ. ಪಾಂಡವರ ವಂಶಸ್ತನಾಗಿದ್ದ ಹಸ್ತಿ ಎನ್ನುವ ರಾಜನಿಂದ ನಿರ್ಮಾಣಗೊಂಡ ರಾಜಧಾನಿಗೆ ಹಸ್ತಿನಪುರ ಎನ್ನುವ ಹೆಸರು ಬಂತು. ಹಸ್ತಿ ಎಂದರೆ ಆನೆ. ಆನೆಯ ಹೆಸರಿನ ಪುರ- ಹಸ್ತಿನಪುರ ಅಥವಾ ಗಜಾಹ್ವಯ. [ಕೆಲವರು ಇದನ್ನು ‘ಹಸ್ತಿನಾಪುರ’ ಎಂದು ಸಂಬೋಧಿಸುತ್ತಾರೆ. ಆದರೆ ಅದು ಸರಿಯಲ್ಲ. ಏಕೆಂದರೆ ಅದು ಹಸ್ತಿನಃ-ಪುರಂ. ಅಂದರೆ: ಹಸ್ತಿ ಎನ್ನುವ ರಾಜನ ನಗರ. ಆದ್ದರಿಂದ ಹಸ್ತಿನಪುರ].

ಮಧುರಾಯಾಂ ತಥಾ ವಜ್ರಂ ಶೂರಸೇನಪತಿಂ ತತಃ ।
ಪ್ರಾಜಾಪತ್ಯಾಂ ನಿರೂಪ್ಯೇಷ್ಟಿಮಗ್ನೀನಪಿಬದೀಶ್ವರಃ ॥೮॥

ಕೇವಲ ಪರೀಕ್ಷಿತನಿಗೆ ಪಟ್ಟಾಭಿಷೇಕ ಮಾಡಿದರೆ ಮುಗಿದಿಲ್ಲ. ಆ ಕಾಲದಲ್ಲಿ ಅಲ್ಲಿ ಪ್ರಧಾನವಾಗಿ ಎರಡು ವಂಶಗಳಿದ್ದವು. ಅವುಗಳೆಂದರೆ ಯಯಾತಿರಾಜನಿಂದ ಚಂದ್ರವಂಶ ಎರಡು ಕವಲಾಗಿ ಬೆಳೆದು ಬಂದ ಯದುವಂಶ ಮತ್ತು ಕುರುವಂಶ. ಈ ಎರಡು ಕವಲುಗಳಲ್ಲಿ ಒಂದು ಕವಲಿಗೆ ಪರೀಕ್ಷಿತ ಉತ್ತರಾಧಿಕಾರಿಯಾದ. ಆದರೆ ಶ್ರೀಕೃಷ್ಣ ಯದುವಂಶದ ಉತ್ತರಾಧಿಕಾರಿಯನ್ನು ನೇಮಿಸದೇ ಅವತಾರ ಸಮಾಪ್ತಿ ಮಾಡಿದುದರಿಂದ ಯದುವಂಶವನ್ನು ಉಳಿಸುವ ಜವಾಬ್ಧಾರಿ ಕೂಡಾ ಧರ್ಮರಾಯನ ಮೇಲಿತ್ತು. ನಮಗೆ ತಿಳಿದಂತೆ ಯಾದವರೆಲ್ಲರೂ ಹೊಡೆದಾಡಿಕೊಂಡು ಸತ್ತಿದ್ದಾರೆ. ಆದ್ದರಿಂದ ಅಳಿದುಳಿದವರಲ್ಲಿ ಒಬ್ಬ ಯೋಗ್ಯನನ್ನು ಧರ್ಮರಾಯ ಆರಿಸಿ ಪಟ್ಟಾಭಿಷೇಕ ಮಾಡಬೇಕಾಗಿತ್ತು. ಶ್ರೀಕೃಷ್ಣನ ಮಗ ಪ್ರದ್ಯುಮ್ನ, ಪ್ರದ್ಯುಮ್ನನ ಮಗ ಅನಿರುದ್ಧ. ಇವರಿಬ್ಬರೂ ಸತ್ತಿರುವುದರಿಂದ ಅಲ್ಲಿ ಉಳಿದಿದ್ದು ಅನಿರುದ್ಧನ ಮಗ ವಜ್ರ ಎನ್ನುವ ಬಾಲಕ. ಆತನೊಬ್ಬನೇ ಸಿಂಹಾಸನವೇರಲು ಯೋಗ್ಯ ಎನ್ನುವುದನ್ನು ಗುರುತಿಸಿದ ಧರ್ಮರಾಯ, ಮಧುರೆಯಲ್ಲಿ ವಜ್ರನನ್ನು ಯಾದವರ ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ ಮಾಡುತ್ತಾನೆ. ಹೀಗೆ ಪರೀಕ್ಷಿತ ಮತ್ತು ವಜ್ರನನ್ನು ಸಿಂಹಾಸನದಲ್ಲಿ ಕೂರಿಸಿ ಧರ್ಮರಾಯ ಹೊರಡುತ್ತಾನೆ.    

Sunday, May 12, 2013

Shrimad BhAgavata in Kannada -Skandha-01-Ch-15(1)


ಪಂಚದಶೋSಧ್ಯಾಯಃ

ವಾಸುದೇವಾಂಘ್ರ್ಯನುಧ್ಯಾನಪರಿಬೃಂಹಿತರಂಹಸಾ ।
ಭಕ್ತ್ಯಾ ನಿರ್ಮಥಿತಾಶೇಷ ಕಷಾಯಧಿಷಣೋSರ್ಜುನಃ ॥೧॥

ಅರ್ಜುನ ಶ್ರೀಕೃಷ್ಣನ ಜೊತೆಗೇ ಇದ್ದಿದ್ದರೂ ಕೂಡಾ, ಆತ ಭಗವಂತನಿಗೆ ಅತ್ಯಂತ ನಿಕಟವಾದುದ್ದು ಶ್ರೀಕೃಷ್ಣ ಅವತಾರ ಸಮಾಪ್ತಿ ಮಾಡಿದ ಮೇಲೆಯೇ! ಶ್ರೀಕೃಷ್ಣ ಅದೃಶ್ಯನಾದಮೇಲೆ  ಅರ್ಜುನನ ಮನಸ್ಸಿನಲ್ಲಿದ್ದ ಎಲ್ಲಾ ಕೊಳೆ ತೊಳೆದುಹೋಗಿ ಆತ ಪರಿಶುದ್ಧನಾದ. ಸ್ವಯಂ ಅಪರೋಕ್ಷಜ್ಞಾನಿ, ಇಂದ್ರಾಂಶಸಂಭೂತನಾದ  ಆತನಿಗೆ ಶ್ರೀಕೃಷ್ಣ  ಭಗವಂತ ಎನ್ನುವುದು ಮೊದಲೇ ತಿಳಿದಿತ್ತು. ಆದರೂ ಕೂಡಾ  ಪ್ರರಾಬ್ಧಕರ್ಮದಿಂದಾಗಿ ಆಗಾಗ ಆತನ ಮನಸ್ಸು ವಿಚಲಿತವಾಗುತ್ತಿತ್ತು.
ಪ್ರರಾಬ್ಧಕರ್ಮ ಎನ್ನುವುದು ಬಹಳ ಭಯಾನಕ ಬಂಧನ. ಅದು ಎಂತಹಾ ಭಯಾನಕ ಎನ್ನುವುದನ್ನು ಗೀತೆ ಮತ್ತು ವೇದವ್ಯಾಸರ ಅನೇಕ ಗ್ರಂಥಗಳು ಒತ್ತಿಒತ್ತಿ ಹೇಳುತ್ತವೆ. ಇಲ್ಲಿ ಹೇಳುತ್ತಾರೆ: “ಎಲ್ಲಾ ಬಗೆಯಿಂದಲೂ, ಎಲ್ಲವನ್ನೂ ಮರೆತು, ಭಗವಂತನ ಧ್ಯಾನ ಮಾಡುವುದು ಅರ್ಜುನನಿಗೆ ಈಗ ಸಾಧ್ಯವಾಯಿತು”ಎಂದು. ಇದು ಮನಃಶಾಸ್ತ್ರ. ನಾವು ಯಾವುದನ್ನು ಗಾಢವಾಗಿ ಪ್ರೀತಿಸುತ್ತೆವೋ, ಅದು ಹತ್ತಿರದಲ್ಲಿರುವಾಗ ನಮಗೆ ಅದರ ನೆನಪಾಗುವುದಕ್ಕಿಂತ ಹೆಚ್ಚು, ಅದು ಅಗಲಿದಾಗ ನೆನಪಾಗುತ್ತದೆ. ಇಲ್ಲಿ ಅರ್ಜುನನಿಗೆ ಕೂಡಾ ಅದೇ ಅನುಭವವಾಗುತ್ತಿದೆ. ಆತ ಪರಮಮಂಗಳ ಮೂರ್ತಿಯಾಗಿ ಭಗವಂತನನ್ನು ಮನಸ್ಸಿನಲ್ಲಿ ಕಾಣುತ್ತಿದ್ದಾನೆ. ಆತನ ಧ್ಯಾನಶಕ್ತಿ ಹಿಂದೆಂದೂ ಕಾಣದ ಅದಮ್ಯ ವೇಗದಲ್ಲಿ ಚಿಮ್ಮುತ್ತಿದೆ. ಧ್ಯಾನ-ಧ್ಯಾನದಿಂದ ಭಕ್ತಿ; ಭಕ್ತಿಯಿಂದ ಮತ್ತೆ ಧ್ಯಾನ. ಹೀಗೆ ಧ್ಯಾನ-ಭಕ್ತಿಗಳ ಸಮಾಗಮದಲ್ಲಿ ಆತನಲ್ಲಿದ್ದ ಎಲ್ಲಾ ಪ್ರರಾಬ್ಧಕರ್ಮದ ಕೊಳೆ ತೊಳೆದುಹೋಗಿ ಆತನ ಬುದ್ಧಿ ಸ್ವಚ್ಛವಾಗುತ್ತದೆ.
“ಅರ್ಜುನ ಇಂದ್ರಾಂಶಸಂಭೂತ, ಅಪರೋಕ್ಷ ಜ್ಞಾನಿ. ಅಪರೋಕ್ಷಜ್ಞಾನಿಗಳಿಗೆ ಅವರ ಹಿಂದಿನ ಎಲ್ಲಾ ಪಾಪ ನಾಶವಾಗಿರುತ್ತದೆ ಮತ್ತು ಮುಂದೆಂದೂ ಅವರಿಗೆ ಪಾಪ ಅಂಟುವುದಿಲ್ಲ. ಹಾಗಿರುವಾಗ ಅರ್ಜುನನಿಗೆ ಎಲ್ಲಿಂದ ಬಂತು ಈ ಮನಸ್ಸಿನ ಕೊಳೆ” ಎನ್ನುವ ಪ್ರಶ್ನೆ ಇಲ್ಲಿ ನಮಗೆ ಬರಬಹುದು. ಇದಕ್ಕೆ ಉತ್ತರ ಪ್ರಾರಾಬ್ಧಕರ್ಮ. ಪ್ರರಾಬ್ಧಕರ್ಮ ಅಪರೋಕ್ಷ ಜ್ಞಾನಿಯನ್ನೂ ಬಿಡುವುದಿಲ್ಲ. ವೇದವ್ಯಾಸರೇ ಹೇಳಿರುವಂತೆ: “ಪ್ರರಾಬ್ಧಕರ್ಮ ಅಪರೋಕ್ಷ ಜ್ಞಾನದಿಂದ ನಾಶವಾಗುವುದಿಲ್ಲ, ಆದರೆ ಅದರ ವೇಗ ಮಾತ್ರ ಖಂಡಿತವಾಗಿ ಕಡಿಮೆಯಾಗುತ್ತದೆ”. ಇಲ್ಲಿ ಶ್ರೀಕೃಷ್ಣನ ಅಗಲಿಕೆಯ ನಂತರ ಅರ್ಜುನನಲ್ಲಿ ಬೆಳೆದ ಧ್ಯಾನ-ಭಕ್ತಿಯಿಂದಾಗಿ  ಆತನ  ಪ್ರರಾಬ್ಧಕರ್ಮದ ವೇಗ ತ್ರಾಸವಾಗುತ್ತದೆ.

ಗೀತಂ ಭಗವತಾ ಜ್ಞಾನಂ ಯತ್ತತ್ಸಂಗ್ರಾಮಮೂರ್ಧನಿ ।
ಕಾಲಕರ್ಮತಮೋರುದ್ಧಂ ಪುನರಧ್ಯಗಮದ್ ವಿಭುಃ ॥೨॥

ಭಗವದ್ಗೀತೆಯನ್ನು ನೇರವಾಗಿ ಭಗವಂತನಿಂದ ಪಡೆದಮೇಲೂ ಅರ್ಜುನನ ಮನಸ್ಸಿನ ಮೇಲೆ ಒಂದು ಆವರಣ ಇತ್ತು. ಆತ ಗೀತೋಪದೇಶ ಪಡೆದದ್ದು ಯುದ್ಧರಂಗದಲ್ಲಿ. ಆನಂತರ ಸುಮಾರು ಮೂವತ್ತಾರು ವರ್ಷಗಳಲ್ಲಿ ಅನೇಕ ಆಡಳಿತದ ಜವಾಬ್ಧಾರಿ, ಶತ್ರುನಿಗ್ರಹದಂತಹ ಕರ್ಮಗಳ ನಡುವೆ  ಕಾಲಕ್ರಮೇಣ ಗೀತೆಯ ಜ್ಞಾನ ಆತನಲ್ಲಿ ಮುಸುಕಾಯಿತು. ಆತನ ಮನಸ್ಸಿನ ಮೇಲೆ ತಮೋಗುಣದ ಆವರಣ ಸೃಷ್ಟಿಯಾಯಿತು. ಆದರೆ ಆ ಜ್ಞಾನ ಇಂದು ಶ್ರೀಕೃಷ್ಣ ಅವತಾರ ಸಮಾಪ್ತಿ ಮಾಡಿದ ಮೇಲೆ, ಮತ್ತೆ  ಜ್ವಲಂತವಾಗಿ ವ್ಯಕ್ತವಾಯಿತು. ಕೃಷ್ಣನನ್ನು ಕಳೆದುಕೊಂಡ ಅರ್ಜುನ ಗೀತೆಯನ್ನು ಮರಳಿ ಪಡೆದ. ಆತನಲ್ಲಿ ಅಂತಹ ಸಾಮರ್ಥ್ಯ ಇದ್ದುದರಿಂದ ಇದು ಆತನಿಗೆ ಸಾಧ್ಯವಾಯಿತು.

ವಿಶೋಕೋ ಬ್ರಹ್ಮಸಂಪತ್ತ್ಯಾ ಸಂಚ್ಛಿನ್ನದ್ವೈತಸಂಶಯಃ ।
ಲೀನಪ್ರಕೃತಿನೈರ್ಗುಣ್ಯಾದಲಿಂಗತ್ವಾದಸಂಭವಃ ॥೩॥

ಗೀತೆಯನ್ನು ನೇರವಾಗಿ ಶ್ರೀಕೃಷ್ಣನಿಂದ ಪಡೆದಮೇಲೂ, ಅರ್ಜುನನಿಗೆ ಪೂರ್ಣ ಜ್ಞಾನೋದಯವಾಗಿರಲಿಲ್ಲ ಎನ್ನುವುದಕ್ಕೆ ಉತ್ತಮ ಉದಾಹರಣೆ- ಅಭಿಮನ್ಯುವಿನ ಮರಣ. ಆಗ ಅರ್ಜುನ ಬಗೆಬಗೆಯಾಗಿ ರೋಧಿಸುತ್ತಾನೆ. ಶ್ರೀಕೃಷ್ಣ ಹುಟ್ಟು-ಸಾವಿನ ಬಗ್ಗೆ ಚಿಂತಿಸಬಾರದು ಎಂದು ಹೇಳಿದ್ದರೂ ಕೂಡಾ, ತನ್ನ ಮಗ ಸತ್ತಾಗ ಅದನ್ನು ಆತನಿಂದ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಇಂದು ಶ್ರೀಕೃಷ್ಣನನ್ನು ಕಳೆದುಕೊಂಡ ಅರ್ಜುನ ಗೀತೆಯನ್ನು ಮರಳಿಪಡೆದ. ಹೊರಗೆ ಭಗವಂತ ಕಣ್ಮರೆಯಾದರೂ ಕೂಡಾ, ಅರ್ಜುನ ಆತನನ್ನು ತನ್ನ ಅಂತರಂಗದಲ್ಲಿ ಪಡೆದ. ಆತನ ಬುದ್ಧಿಗೆ ಅಂಟಿದ್ದ ಮುಸುಕು ಇಂದು ಮಾಯವಾಗಿದೆ. ಆತ ಆನಂದಮಯ ಸ್ಥಿತಿಗೆ ತಲುಪಿದ್ದಾನೆ.
ಅಂತರಂಗದಲ್ಲಿ ಭಗವಂತನನ್ನು ಕಾಣುತ್ತಿರುವ ಅರ್ಜುನನಿಗೆ ಭಗವಂತನನ್ನು ಬಿಟ್ಟು ಎರಡನೆಯದು ಯಾವುದೂ ಬೇಡವಾಗಿದೆ. ನಿಶ್ಚಯಾತ್ಮಕವಾದ ಯಥಾರ್ಥ ಜ್ಞಾನದಲ್ಲಿ ಆತ ಕುಳಿತುಬಿಟ್ಟಿದ್ದಾನೆ. ಭಗವಂತನನ್ನು ಬಿಟ್ಟು ಈ ಪ್ರಪಂಚ, ಈ ಬದುಕು, ಬಾಂಧವ್ಯ, ರಾಜ್ಯಾಡಳಿತ, ಯಾವುದೂ ಬೇಡ; ಭಗವಂತನ ಅಂತರಂಗದ ನೆನಪೊಂದೇ ಸಾಕು ಎನ್ನುವ ನಿಶ್ಚಯದಲ್ಲಿ, ಪೂರ್ಣ ಭಗವನ್ಮಯನಾದ ಅರ್ಜುನ. ಇದರಿಂದಾಗಿ ಆತನಲ್ಲಿದ್ದ ಮಾಯೆಯ ಪರೆದೆ ಹೊರಟುಹೋಯಿತು, ಪ್ರಕೃತಿ ಲೀನವಾಯಿತು. ಲಿಂಗಶರೀರದ ಪ್ರಭಾವವೂ ಇಲ್ಲದಾಗಿ, ಗುಣಾತೀತ ಸ್ಥಿತಿಯಲ್ಲಿ ಆತ ನಿಂತುಬಿಟ್ಟ. ಹೀಗೆ ‘ಇನ್ನೆಂದೂ ಮರಳಿ ಪ್ರರಾಬ್ಧಕರ್ಮಕ್ಕೆ ವಶನಾಗುವುದು ಅಸಂಭವ’ ಎನ್ನುವ ಸ್ಥಿತಿಯನ್ನು ಅರ್ಜುನ ಪಡೆದ.

Saturday, May 11, 2013

Shrimad BhAgavata in Kannada -Skandha-01-Ch-15(Text)


ಪಂಚದಶೋSಧ್ಯಾಯಃ

ವಾಸುದೇವಾಂಘ್ರ್ಯನುಧ್ಯಾನಪರಿಬೃಂಹಿತರಂಹಸಾ ।
ಭಕ್ತ್ಯಾ ನಿರ್ಮಥಿತಾಶೇಷ ಕಷಾಯಧಿಷಣೋSರ್ಜುನಃ ॥೧॥

ಗೀತಂ ಭಗವತಾ ಜ್ಞಾನಂ ಯತ್ತತ್ಸಂಗ್ರಾಮಮೂರ್ಧನಿ ।
ಕಾಲಕರ್ಮತಮೋರುದ್ಧಂ ಪುನರಧ್ಯಗಮದ್ ವಿಭುಃ ॥೨॥

ವಿಶೋಕೋ ಬ್ರಹ್ಮಸಂಪತ್ತ್ಯಾ ಸಂಚ್ಛಿನ್ನದ್ವೈತಸಂಶಯಃ ।
ಲೀನಪ್ರಕೃತಿನೈರ್ಗುಣ್ಯಾದಲಿಂಗತ್ವಾದಸಂಭವಃ ॥೩॥

ನಿಶಮ್ಯ ಭಗವನ್ಮಾರ್ಗಂ ಸಂಸ್ಥಾಂ ಯದುಕುಲಸ್ಯ ಚ ।
ಸ್ವಃಪಥಾಯ ಮತಿಂ ಚಕ್ರೇ ನಿವೃತ್ತಾತ್ಮಾ ಯುಧಿಷ್ಠಿರಃ ॥೪॥

ಯದಾ ಮುಕುಂದೋ ಭಗವಾನಿಮಾಂ ಮಹೀಂ ಜಹೌ ಸ್ವತನ್ವಾ ಶ್ರವಣೀಯಸತ್ಕಥಃ ।
ತದಾ ಹರಾವಪ್ರತಿಬುದ್ಧಚೇತಸಾಮಭದ್ರಹೇತುಃ ಕಲಿರನ್ವವರ್ತತ ॥೫॥

ಯುದಿಷ್ಠಿರಸ್ತತ್ ಪರಿಸರ್ಪಣಂ ಬುಧಃ ಪುರೇ ಚ ರಾಷ್ಟ್ರೇ ಚ ಗೃಹೇ ತಥಾತ್ಮನಿ ।
ವಿಭಾವ್ಯ ಲೋಭಾನೃತಜಿಹ್ಮಹಿಂಸನಾದ್ಯಧರ್ಮಚಕ್ರಂ ಗಮನಾಯ ಪರ್ಯಧಾತ್ ॥೬॥

ಸ್ವರಾಟ್ ಪೌತ್ರಂ ವಿನೀತಂ ತಮಾತ್ಮನೋSನವಮಂ ಗುಣೈಃ ।
ತೋಯನೀವ್ಯಾಃ ಪತಿಂ ಭೂಮೇರಭ್ಯಷಿಂಚದ್ ಗಜಾಹ್ವಯೇ ॥೭॥

ಮಧುರಾಯಾಂ ತಥಾ ವಜ್ರಂ ಶೂರಸೇನಪತಿಂ ತತಃ ।
ಪ್ರಾಜಾಪತ್ಯಾಂ ನಿರೂಪ್ಯೇಷ್ಟಿಮಗ್ನೀನಪಿಬದೀಶ್ವರಃ ॥೮॥

ವಿಸೃಜ್ಯ ತತ್ರ ತತ್ಸರ್ವಂ ದುಕೂಲವಲಯಾದಿಕಮ್ ।
ನಿರ್ಮಮೋ ನಿರಹಂಕಾರಃ ಸಂಚ್ಛಿನ್ನಾಶೇಷಬಂಧನಃ ॥೯॥

 ವಾಚಂ ಜುಹಾವ ಮನಸಿ ತತ್ಪ್ರಾಣ ಇತರೇ ಪರಮ್ ।
ಧೃತ್ಯಾ ಹ್ಯಪಾನಂ ಸೋತ್ಸರ್ಗಂ ತತ್ಪರತ್ವೇ ಹ್ಯಜೋಹವೀತ್ ॥೧೦॥

ತ್ರಿತ್ವೇ ಹುತ್ವಾSಥ  ಪಂಚತ್ವಂ ತಚ್ಚೈಕತ್ವೇSಜುಹೋನ್ಮುನಿಃ ।
ಸರ್ವಮಾತ್ಮನ್ಯಜುಹವೀದ್ ಬ್ರಹ್ಮಣ್ಯಾತ್ಮಾನಮವ್ಯಯೇ ॥೧೧॥

ಚೀರವಾಸಾ ನಿರಾಹಾರೋ ಬದ್ಧವಾಙ್ಮುಕ್ತಮೂರ್ಧಜಃ ।
ದರ್ಶಯನ್ನಾತ್ಮನೋ ರೂಪಂ ಜಡೋನ್ಮತ್ತಪಿಶಾಚವತ್ ।
ಅನಪೇಕ್ಷಮಾಣೋ ನಿರಗಾದಶೃಣ್ವನ್ ಬಧಿರೋ ಯಥಾ ॥೧೨॥

ಉದೀಚೀಂ ಪ್ರವಿವೇಶಾಶಾಂ ಗತಪೂರ್ವಾಂ ಮಹಾತ್ಮಭಿಃ ।
ಹೃದಿ ಬ್ರಹ್ಮ ಪರಂ ಧ್ಯಾಯನ್ ನಾವರ್ತೇತ ಗತೋ ಯತಃ ॥೧೩॥

ಸರ್ವೇ ತಮನು ನಿರ್ಜಗ್ಮುರ್ಭ್ರಾತರಃ ಕೃತನಿಶ್ಚಯಾಃ ।
ಕಲಿನಾSಧರ್ಮಮಿಶ್ರೇಣ ದೃಷ್ಟ್ವಾ ಸ್ಪೃಷ್ಟಾಃ ಪ್ರಜಾ ಭುವಿ ॥೧೪॥

ತೇ ಸಾಧುಕೃತಸರ್ವಾರ್ಥಾ ಜ್ಞಾತ್ವಾSSತ್ಯಂತಿಕಮಾತ್ಮನಃ ।
ಮನಸಾ ಧಾರಯಾಮಾಸುರ್ವೈಕುಂಠಚರಣಾಂಬುಜಮ್ ॥೧೫॥

ತದ್ಧ್ಯಾನೋದ್ರಿಕ್ತಯಾ ಭಕ್ತ್ಯಾ ವಿಶುದ್ಧಧಿಷಣಾಃ ಪರೇ ।
ತಸ್ಮಿನ್ ನಾರಾಯಣಪದ ಏಕಾಂತಮತಯೋSಪತನ್ ॥೧೬॥

ಅವಾಪುರ್ದುರವಾಪಂ ತೇ ಅಸದ್ಭಿರ್ವಿಷಯಾತ್ಮಭಿಃ ।
ವಿಧೂತಕಲ್ಮಷಂ ಸ್ಥಾನಂ ವಿರಜೇನಾತ್ಮನೈವ ಹಿ ॥೧೭॥

ದ್ರೌಪದೀ ಚ ತದಾಜ್ಞಾಯ ಪತೀನಾಮನಪೇಕ್ಷತಾಮ್ ।
ವಾಸುದೇವೇ ಭಗವತಿ ಏಕಾಂತಮತಿರಾಪತತ್ ॥೧೮॥

ಯಃ ಶ್ರದ್ಧಯೈತದ್ ಭಗವತ್ಪ್ರಯಾಣಂ ಪಾಂಡೋಃ ಸುತಾನಾಮಪಿ ಸಂಪ್ರಯಾಣಮ್ ।
ಶೃಣೋತ್ಯಲಂ ಸ್ವಸ್ತ್ಯಯನಂ ಪವಿತ್ರಂ ಲಬ್ಧ್ವಾ ಹರೌ ಭಕ್ತಿಮುಪೈತಿ ಶಾಂತಿಮ್ ॥೧೯॥

॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ಪಂಚದಶೋSಧ್ಯಾಯಃ ॥
ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಹದಿನೈದನೇ ಅಧ್ಯಾಯ ಮುಗಿಯಿತು.
*********

Shrimad BhAgavata in Kannada -Skandha-01-Ch-14(2)


ರಾಜಂಸ್ತ್ವಯಾSನುಭಿಪೃಷ್ಟಾನಾಂ ಸುಹೃದಾಂ ನಃ ಸುಹೃತ್ಪುರೇ ।
ವಿಪ್ರಶಾಪವಿಮೂಢಾನಾಂ ನಿಘ್ನತಾಂ ಮುಷ್ಟಿಭಿರ್ಮಿಥಃ ॥೨೨॥

ವಾರುಣೀಂ ಮದಿರಾಂ ಪೀತ್ವಾ ಮದೋನ್ಮಥಿತಚೇತಸಾಮ್ ।
ಅಜಾನತಾಮಿವಾತ್ಮಾನಂ ಚತುಃಪಂಚಾವಶೇಷಿತಾಃ ॥೨೩॥

ಪಾಂಡವರ ಆತ್ಮೀಯ ಬಂಧುಗಳಾದ ಯಾದವರಿಗೆ ಏನಾಯಿತು ಎನ್ನುವುದನ್ನು ಅರ್ಜುನ ಯುದಿಷ್ಠಿರನಿಗೆ ವಿವರಿಸುತ್ತಾನೆ. ಸುಮಾರು ಇಪ್ಪತ್ತಾರು ವರ್ಷಗಳ ಹಿಂದೆ, ಗರ್ಭಿಣಿ ಹೆಣ್ಣಿನ ವೇಷ ಧರಿಸಿದ್ದ ಸಾಂಬನನ್ನು ಮುಂದಿಟ್ಟುಕೊಂಡು ಯಾದವರು “ಈಕೆಗೆ ಗಂಡು ಮಗುವಾಗುತ್ತದೋ ಅಥವಾ ಹೆಣ್ಣಾಗುತ್ತದೋ” ಎಂದು ಕೆಲಮಂದಿ ಋಷಿಗಳಲ್ಲಿ ಕೇಳುತ್ತಾರೆ. ಇದರಿಂದ ಕೋಪಗೊಂಡ ವಿಪ್ರರು “ಈತ ಖಂಡಿತವಾಗಿ ಹೆರುತ್ತಾನೆ ಮತ್ತು ಅದರಿಂದ ಇಡೀ ಯಾದವ ಕುಲ ನಾಶವಾಗಲಿದೆ” ಎಂದು ಶಾಪ ಕೊಡುತ್ತಾರೆ. ಋಷಿಗಳ ಶಾಪದಿಂದಾಗಿ ಸಾಂಬ ಕಬ್ಬಿಣದ ಸಲಾಕೆಯೊಂದನ್ನು ಹೆರುತ್ತಾನೆ. ಆಗ ಯಾದವರು ಆ ಸಲಾಕೆಯನ್ನು ಪುಡಿಪುಡಿ ಮಾಡಿ ಸಮುದ್ರಕ್ಕೆ ಚೆಲ್ಲುತ್ತಾರೆ. ಹಾಗೆ ಚಲ್ಲಿದ ಪುಡಿ ಸಮುದ್ರದ ತೆರೆಯಿಂದಾಗಿ ಮರಳಿ ದಡಕ್ಕೆ ಬಂದು ಸೇರುತ್ತದೆ. ಈ ರೀತಿ ಅದು ಬಂದು ಸೇರಿದ ಸ್ಥಳದಲ್ಲಿ  ಒಂದು ಜಾತಿಯ ಮುಳ್ಳಿನ ಗಿಡ ಬೆಳೆಯುತ್ತದೆ.
ಸಮುದ್ರಕ್ಕೆ ಚಲ್ಲಿದ ಕಬ್ಬಿಣದ ಸಲಾಕೆಯ ಪುಡಿಯ ಮಧ್ಯದಲ್ಲಿ ಒಂದು ಕಬ್ಬಿಣದ ಚೂರು ಸೇರಿಕೊಂಡಿದ್ದು ಅದನ್ನು ಮೀನೊಂದು ನುಂಗುತ್ತದೆ. ಆ ಮೀನನ್ನು ಬೆಸ್ತರು ಹಿಡಿದಾಗ ಆ ಕಬ್ಬಿಣದ ಚೂರು ಜರಾ ಎನ್ನುವ ಬೇಡನಿಗೆ ಸಿಗುತ್ತದೆ. ಆತ ಅದನ್ನು ಭೇಟೆಯಲ್ಲಿ ಬಾಣದ ರೂಪದಲ್ಲಿ  ಬಳಸಬಹುದೆಂದು ತನ್ನಲ್ಲಿರಿಸಿಕೊಳ್ಳುತ್ತಾನೆ.
ಶ್ರೀಕೃಷ್ಣ ಯಾದವರೆಲ್ಲರನ್ನು ಪ್ರವಾಸಕ್ಕೆ ಹೋಗಿ ಬನ್ನಿರೆಂದು ಕಳುಹಿಸಿಕೊಡುತ್ತಾನೆ. ಇದು ವಿನೋದಕ್ಕಾಗಿ ಯಾದವರು ಕೈಗೊಂಡ ಪ್ರವಾಸ(Picnic). ಹೀಗೆ ಪ್ರವಾಸದಲ್ಲಿದ್ದಾಗ ಅವರು- ಒಂದು ದಿನ ಸಂಜೆ, ಸಮುದ್ರದ ತಡಿಯಲ್ಲಿ ತಂಗುತ್ತಾರೆ. ಆ ಸಮಯದಲ್ಲಿ ಎಲ್ಲರೂ ವಿನೋದಕ್ಕಾಗಿ ಮಧ್ಯಪಾನ ಮಾಡುತ್ತಾರೆ. [ಶಾಸ್ತ್ರದ ಪ್ರಕಾರ ಕ್ಷತ್ರೀಯರಿಗೆ ಮಾಂಸ ಭಕ್ಷಣೆ ಮತ್ತು ಮದ್ಯಪಾನ ನಿಷೇಧವಲ್ಲ]. ಇಲ್ಲಿ ವಿಪ್ರರ ಶಾಪ ಕೆಲಸ ಮಾಡುತ್ತದೆ. ಮಧ್ಯಪಾನದಿಂದಾಗಿ ಅವರು ತಮ್ಮ ಪ್ರಜ್ಞೆಯನ್ನು ಕಳೆದುಕೊಂಡು ವಿನೋದಕ್ಕಾಗಿ ಜಗಳ ಆರಂಭಿಸುತ್ತಾರೆ. ಆದರೆ ಕ್ಷಣಮಾತ್ರದಲ್ಲೇ ವಿನೋದ ಜಗಳವಾಗಿ, ಜಗಳ ದ್ವೇಷವಾಗಿ, ಅವರು ಸಮುದ್ರದ ತಡಿಯಲ್ಲಿದ್ದ ಮುಳ್ಳಿನ ಗಿಡಗಳನ್ನು ತೆಗೆದುಕೊಂಡು ಹೊಡೆದಾಡಲಾರಂಭಿಸುತ್ತಾರೆ. ಈ ಹೊಡೆದಾಟ ವಿಪರೀತಕ್ಕೆ ತಲುಪಿ ಒಬ್ಬರು ಇನ್ನೊಬ್ಬರನ್ನು ಹೊಡೆದು ಸಾಯಿಸುತ್ತಾರೆ! ಎಂತಹ ವಿಪರ್ಯಾಸ! ಅವರೆಲ್ಲರೂ ಕೂಡಾ ದೈವಾಂಶ ಸಂಭೂತರು. ಆದರೆ ವಿಪ್ರರ ಶಾಪ ಮತ್ತು ಭಗವಂತನ ಸಂಕಲ್ಪದ ಮುಂದೆ ಎಲ್ಲವೂ ನಗಣ್ಯ! ಅವರಿಗೆ ತಾವು ತಪ್ಪು ಮಾಡುತ್ತಿದ್ದೇವೆ ಎನ್ನುವ ಪ್ರಜ್ಞೆಯೂ ಬರಲಿಲ್ಲ. ಒಬ್ಬರಿಗೊಬ್ಬರು ಪರಿಚಯ ಇಲ್ಲದವರ ಹಾಗೆ, ಭಗವಂತನ ಎಚ್ಚರ ಇಲ್ಲದವರಂತೆ ಎಲ್ಲರೂ ಹೊಡೆದಾಡಿಕೊಂಡು ಸತ್ತು ಹೆಣವಾಗಿ ಬೀಳುತ್ತಾರೆ. ಅಲ್ಲಿ ಬದುಕುಳಿದದ್ದು ಎಲ್ಲೋ ಮೂರ್ನಾಲ್ಕು ಮಂದಿ ಮಾತ್ರ.
ದೇವತೆಗಳು ಮನುಷ್ಯರನ್ನು ರಕ್ಷಣೆ ಮಾಡುತ್ತಾರೆ, ಪಾಪ-ಪ್ರಾರಾಬ್ಧ ಇದ್ದಾಗ ಶಿಕ್ಷೆಯನ್ನೂ ಕೊಡುತ್ತಾರೆ. ಯಾರನ್ನು ರಕ್ಷಿಸಬೇಕೆಂದು ಅವರು ತೀರ್ಮಾನ ಮಾಡುತ್ತಾರೋ, ಅವರಿಗೆ ವಿವೇಕವನ್ನು ಕೊಡುತ್ತಾರೆ. ಯಾರು ದಾರಿ ತಪ್ಪಬೇಕಾಗಿರುವುದು ಅವರ ಪ್ರಾರಾಬ್ಧದಲ್ಲಿದೆಯೋ, ಅಂತಹ ಸಂದರ್ಭದಲ್ಲಿ ಅವರಿಗೆ ‘ಯಾವುದು ಸರಿ, ಯಾವುದು ತಪ್ಪು’ ಎನ್ನುವ ತೀರ್ಮಾನ ಮಾಡುವ ಒಳಗಿನ ವಿವೇಕವೇ ಇಲ್ಲವಾಗುವಂತೆ ಮಾಡುತ್ತಾರೆ. ಇದರಿಂದಾಗಿ ನಾವು ಮಾಡುವ ತಪ್ಪು ನಮಗೇ ತಿಳಿಯದಾಗುತ್ತದೆ. ಇಲ್ಲಿ ನಡೆದಿರುವುದೂ ಇಷ್ಟೇ. ಇದು ಅಪರೋಕ್ಷ ಜ್ಞಾನಿಗಳ ಪ್ರರಾಬ್ಧ ಕರ್ಮದ ಫಲಿತಾಂಶ.

ಪ್ರಾಯೇಣೈತದ್ ಭಗವತ ಈಶ್ವರಸ್ಯ ವಿಚೇಷ್ಟಿತಮ್ ।
ಮಿಥೋ ನಿಘ್ನಂತಿ ಭೂತಾನಿ ಭಾವಯಂತಿ ಚ ಯನ್ಮಿಥಃ ॥೨೪॥

ಯಾದವರು ತಮ್ಮ ಬದುಕಿನ ಪೂರ್ಣ ಭಾಗವನ್ನು ಭಗವಂತನ ಜೊತೆಗೆ ಕಳೆದವರು. ಆದರೂ ಏಕೆ ಹೀಗಾಯ್ತು? “ಇದಕ್ಕೆ ನನ್ನಲ್ಲಿ ವಿವರಣೆ ಇಲ್ಲ” ಎನ್ನುತ್ತಾನೆ ಅರ್ಜುನ. ಎಲ್ಲವೂ ಆ ಭಗವಂತನ ಸಂಕಲ್ಪ. ಯಾವುದೂ ನಮ್ಮ ಕೈಯಲಿಲ್ಲ. ಭಗವಂತ ಸರ್ವಸಮರ್ಥ. ಆತ ನಮ್ಮ ಮನಸ್ಸಿನ ಈಶ (ಮನೀಷಿ). ಪ್ರಪಂಚದಲ್ಲಿ ಬಹುತೇಕ ಎಲ್ಲವೂ ಆತನ  ಇಚ್ಛೆಯಂತೆಯೇ ನಡೆಯುತ್ತದೆ. ಪ್ರಪಂಚದಲ್ಲಿ ಯಾರ ಮೂಲಕವೋ ಯಾರೋ ಹುಟ್ಟುತ್ತಾರೆ.  ಯಾರ ಮೂಲಕವೋ ಯಾರೋ ಸಾಯುತ್ತಾರೆ. ಉದ್ವೇಗದಲ್ಲಿ ಒಬ್ಬರು ಇನ್ನೊಬ್ಬರನ್ನು ನೋಯಿಸಿ ಆನಂತರ ಪಶ್ಚಾತ್ತಾಪಪಡುತ್ತಾರೆ. ತಪ್ಪು ಮಾಡುವಾಗ ತಾನು ಮಾಡುತ್ತಿರುವುದು ಸರಿಯೋ ತಪ್ಪೋ ಎನ್ನುವ ವಿವೇಕವೂ ಇರುವುದಿಲ್ಲ. ಹುಟ್ಟಿಸುವುದು, ರಕ್ಷಿಸುವುದು ಮತ್ತು ಸಾಯಿಸುವುದು ಎಲ್ಲವೂ ಆ ಸರ್ವಸಮರ್ಥ ಭಗವಂತನ ಲೀಲೆ ಎನ್ನುತ್ತಾನೆ ಅರ್ಜುನ.

ಏವಂ ಬಲಿಷ್ಠೈರ್ಯದುಭಿರ್ಮಹದ್ಭಿರಿತರಾನ್ವಿಭುಃ ।
ಯದೂನ್ ಯದುಭಿರನ್ಯೋನ್ಯಂ ಭೂಭಾರಾನ್ಸಂಜಹಾರ ಹ ।
ಕಂಟಕಂ ಕಂಟಕೇನೈವ ದ್ವಯಂ ಚಾಪೀಶಿತುಃ ಸಮಮ್ ॥೨೬॥

ಯದುಗಳು ಭೂಮಿಯಲ್ಲಿ ಹುಟ್ಟುವಂತೆ ಮಾಡಿದ ಅವನೇ, ಅವರು ಹುಟ್ಟಿದ ಕಾರ್ಯ ಮುಗಿದಾಗ ಭೂಮಿಗೆ ಭಾರವಾಗುವಂತೆ ಮಾಡಿದ. ಹೀಗೆ ಭೂಮಿಗೆ ಭಾರವಾದವರನ್ನು ಆತನೇ ಸಂಹಾರ ಮಾಡಿದ. ಹೇಗೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುತ್ತಾರೋ ಹಾಗೆ ಯದುಗಳನ್ನು ಯದುಗಳಿಂದಲೇ ಸಂಹಾರ ಮಾಡಿದ ಶ್ರೀಕೃಷ್ಣ.
ಭಗವಂತನಿಗೆ ಹುಟ್ಟು-ಸಾವಿನಲ್ಲಿ ಯಾವ ಅಂತರವೂ ಇಲ್ಲ. ಏಕೆಂದರೆ ಮೂಲತಃ ಜೀವ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ. ಕಾಣುವ ಶರೀರ ಬರುವುದು ಹುಟ್ಟು, ಆ ಶರೀರದಿಂದ ಜೀವ ಕಳಚಿಕೊಳ್ಳುವುದು ಸಾವು. ಹೀಗಾಗಿ ಭಗವಂತ ಎಲ್ಲವನ್ನೂ ನಿರ್ಲಿಪ್ತನಾಗಿ ಮಾಡುತ್ತಾನೆ.
“ಶ್ರೀಕೃಷ್ಣ ಭೂಮಿಯಲ್ಲಿ ತನ್ನ ಅವತಾರ ಸಮಾಪ್ತಿಮಾಡಿದ, ನಾವು ಕೃಷ್ಣನನ್ನು ಕಳೆದುಕೊಂಡೆವು” ಎಂದು ಅರ್ಜುನ ಶೋಕಿಸುತ್ತಾನೆ ಎನ್ನುವಲ್ಲಿಗೆ ಈ ಅಧ್ಯಾಯ ಕೊನೆಗೊಳ್ಳುತ್ತದೆ. ಒಟ್ಟಾರೆ ಹೇಳಬೇಕೆಂದರೆ: ಶ್ರೀಕೃಷ್ಣನ ಅವತಾರ ಸಮಾಪ್ತಿಯಿಂದಾಗಿ ಅರ್ಜುನನಲ್ಲಿ ಉಂಟಾದ ಶೋಕದ ಆವೇಶವನ್ನು ಈ ಅಧ್ಯಾಯ ಚಿತ್ರಿಸಿದೆ.

॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ಚತುರ್ದಶೋSಧ್ಯಾಯಃ ॥
ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಹದಿನಾಲ್ಕನೇ ಅಧ್ಯಾಯ ಮುಗಿಯಿತು.
*********