Wednesday, September 9, 2015

Shrimad BhAgavata in Kannada -Skandha-02-Ch-07(27)


ಕೃಷ್ಣಾವತಾರದ ಕಥೆ ಮುಂದುವರಿದುದು: <http://bhagavatainkannada.blogspot.in



ಯೇ ವಾ ಮೃಧೇ ಸಮಿತಿಶಾಲಿನ ಆತ್ತಚಾಪಾಃ ಕಾಂಬೋಜಮತ್ಸ್ಯಕುರುಸೃಂಜಯಕೈಕಯಾದ್ಯಾಃ ।
ಯಾಸ್ಯಂತ್ಯದರ್ಶನಮಿತಾ ಬಲಪಾರ್ಥಭೀಮ ವ್ಯಾಜಾಹ್ವಯೇನ ಹರಿಣಾ ನಿಲಯಂ ತದೀಯಮ್ ॥೩೫॥


ಮಹಾಭಾರತ ಯುದ್ಧ ಕಾಲದಲ್ಲಿ ಕಾಂಬೋಜ,  ಮತ್ಸ್ಯ (ವಿರಾಟ), ಕುರುಗಳು, ಸೃಂಜಯ(ಪಾಂಚಾಲ ದೇಶ), ಕೇಕೆ(ಇಂದಿನ ಪಾಕಿಸ್ತಾನ), ಹೀಗೆ ಅನೇಕ ನೆರೆಹೊರೆ ರಾಷ್ಟ್ರದ ವೀರರು, ಸೈನಿಕರು ಎಲ್ಲರೂ ಕಣ್ಮರೆಯಾದರು. ಇವರೆಲ್ಲರನ್ನೂ ಭೀಮ, ಅರ್ಜುನ, ಬಲರಾಮರ ಅಂತರ್ಯಾಮಿಯಾಗಿ ನಿಂತು  ಸಂಹಾರ ಮಾಡಿದವನು ಶ್ರೀಕೃಷ್ಣ. ಮೂಲತಃ ಭೀಮ, ಅರ್ಜುನ ರಾಮ ಈ ಎಲ್ಲಾ ಹೆಸರು ಪೂರ್ಣಪ್ರಮಾಣದಲ್ಲಿ ಅನ್ವಯವಾಗುವುದು ಆ ಭಗವಂತನಲ್ಲಿ. ಈ ಮಾತನ್ನು ಸ್ಕಂಧಪುರಾಣದಲ್ಲಿ ಹೀಗೆ ಹೇಳಿದ್ದಾರೆ:  “ರಾಮಭೀಮಾರ್ಜುನಾದೀನಿ ವಿಷ್ಣೋರ್ನಾಮಾನಿ ಸರ್ವಶಃ । ರಮಣಾಭಯವರ್ಣಾದ್ಯಾಃ ಶಬ್ದವೃತ್ತೇರ್ಹಿ ಹೇತವಃ। ಹರೀರ್ಹಿ ತತ್ರತತ್ರಸ್ಥೋ ರಮಣಾದೀನ್ ಕರೋತ್ಯಜಃ । ಆತಸ್ತಸ್ಯೆೃವ ನಾಮಾನಿ ವ್ಯಾಜಾದನ್ಯಗತಾನಿ ತು । ವ್ಯವಹಾರಪ್ರವೃತ್ತ್ಯರ್ಥಂ ದುಷ್ಟಾನಾಂ ಮೋಹನಾಯ ಚ ॥ ಹೀಗೆ ಸಂಹಾರ ಕಾರ್ಯದಲ್ಲಿ ಎಲ್ಲರನ್ನೂ ಉಪಕರಣವಾಗಿ ಬಳಸಿದ್ದಾನೆ ಕೃಷ್ಣ. ಇಲ್ಲಿ ಚತುರ್ಮುಖ ಹೇಳುತ್ತಾನೆ: “ಯುದ್ಧದಲ್ಲಿ ಪಾಲ್ಗೊಂಡ ವೀರರು, ಸೈನಿಕರು, ಎಲ್ಲರನ್ನೂ ಕೃಷ್ಣ ತನ್ನ ಮನೆಗೆ ಕರೆಸಿಕೊಂಡ” ಎಂದು. ಇದರರ್ಥ ಎಲ್ಲರೂ ಮೋಕ್ಷವನ್ನು ಸೇರಿದರು ಎಂದರ್ಥವಲ್ಲ. ತಮಸ್ಸಿನಿಂದ ಹಿಡಿದು  ಮೋಕ್ಷಲೋಕದವರೆಗಿನ ಎಲ್ಲಾ ಲೋಕಗಳ ಒಡೆಯನೂ ಭಗವಂತನೇ. ಇದನ್ನು ಬೃಹತ್ಸಂಹಿತ ಈ ರೀತಿ ವಿವರಿಸುತ್ತದೆ: ವಿದ್ವೇಷಿಣೋSಪ್ಯುದಾಸೀನಾ ಭಕ್ತಾ ಅಪಿ ನ ಸಂಶಯಃ । ಹರೇರ್ಹಿ ಸದನಂ ಯಾಂತಿ ವ್ಯಕ್ತಂ ಭಕ್ತೈಸ್ತು ಗಮ್ಯತೇ । ಆರಭ್ಯ ತಮ ಆ ಮುಕ್ತೇಃ ಕೃಷ್ಣಸ್ಯ ಸದನಂ ಯತಃ । ಅವ್ಯಕ್ತ ಹರಿಲೋಕತ್ವಾದನ್ಯೇಷಾಮನ್ಯಲೋಕತಾ ॥  ಎಲ್ಲವೂ ಭಗವಂತನ ಮನೆ. ಆದರೆ ಭಗವದ್ ದ್ವೇಷಿಗಳು ಹೊಂದುವ ತಮಸ್ಸಿನ ಲೋಕದಲ್ಲಿ ಭಗವಂತನ ರೂಪ ಅವ್ಯಕ್ತ.    ಎಲ್ಲರೂ ಅವರವರ ಯೋಗ್ಯತೆಗೆ ತಕ್ಕಂತೆ ಎಲ್ಲೆಲ್ಲಿಗೆ ಸೇರಬೇಕೋ ಅಲ್ಲಲ್ಲಿಗೇ  ಸೇರಿದರು. ಇವೆಲ್ಲವೂ ಭಗವಂತ ಕೃಷ್ಣಾವತಾರದಲ್ಲಿ ತೋರಿದ ಅದ್ಭುತ ಲೀಲೆ. 

Sunday, September 6, 2015

Shrimad BhAgavata in Kannada -Skandha-02-Ch-07(26)

ಕೃಷ್ಣಾವತಾರದ ಕಥೆ ಮುಂದುವರಿದುದು: <http://bhagavatainkannada.blogspot.in


ಯೇ ಚ ಪ್ರಲಂಬಖರದರ್ದುರಕೇಶ್ಯರಿಷ್ಟ ಮಲ್ಲೇಭಕಂಸಯವನಾಃ ಕುಜಪೌಂಡ್ರಕಾದ್ಯಾಃ ।
ಅನ್ಯೇSಪಿ ಸಾಲ್ವಕಪಿವಲ್ಕಲದಂತವಕ್ರ ಸಪ್ತೋಕ್ಷಶಂಬರವಿಡೂರಥರುಗ್ಮಿಮುಖ್ಯಾಃ ॥೩೪॥

ಕೃಷ್ಣನ ಬಾಲ ಲೀಲೆಗಳ ಅನೇಕ ಮುಖಗಳನ್ನು ವಿವರಿಸಿದ ಚತುರ್ಮುಖ ಇಲ್ಲಿ ಅವತಾರದಲ್ಲಿ ಕೃಷ್ಣ ಮಾಡಿರುವ ಪ್ರಮುಖ ದುಷ್ಟ ಸಂಹಾರದ ಪಟ್ಟಿ ನೀಡಿದ್ದಾನೆ.
೧.ಪ್ರಲಂಭ: ಈತ ಒಬ್ಬ ಅಸುರ. ಅವನು ಕೃಷ್ಣ-ಬಲರಾಮರು ಗೋಪಬಾಲಕರ ಜೊತೆಗೆ ಆಟವಾಡುತ್ತಿರುವಾಗ ತಾನೂ ಗೋಪಬಾಲಕನ ವೇಷ ಧರಿಸಿ ಆಟವಾಡುತ್ತಾನೆ. ಆಟದ ನಿಯಮದಂತೆ ಯಾರು ಸೋಲುತ್ತಾರೋ ಅವರು ಗೆದ್ದವರನ್ನು ಹೊತ್ತುಕೊಂಡು ಹೋಗಬೇಕು. ಪ್ರಲಂಭ ಬಲರಾಮನ ಜೊತೆ ಆಟವಾಡುತ್ತಾ ಆತನಿಗೆ ಸೋಲುತ್ತಾನೆ. ನಂತರ ಬಲರಾಮನನ್ನು ಹೊತ್ತುಕೊಂಡು ಓಡಲು ಪ್ರಾರಂಭಿಸುತ್ತಾನೆ. ಇದರಿಂದ ಬಲರಾಮ ಗಾಭರಿಗೊಳ್ಳುತ್ತಾನೆ. ಆಗ ಕೃಷ್ಣ “ಭಯಪಡಬೇಡ, ನೀನು ಯಾರು ಎನ್ನುವುದನ್ನು ನೆನಪಿಸಿಕೋ” ಎಂದು ಸನ್ನೆ ಮಾಡುತ್ತಾನೆ. ಆಗ ಬಲರಾಮನಿಗೆ ತನ್ನ ಮೂಲರೂಪದ ನೆನಪಾಗುತ್ತದೆ ಮತ್ತು ಆತ ಪ್ರಲಂಭನನ್ನು ಸಂಹಾರ ಮಾಡುತ್ತಾನೆ. ಈ ರೀತಿ ಬಲರಾಮನೊಳಗಿದ್ದು ಪ್ರಲಂಭನನ್ನು ಕೃಷ್ಣ ಸಂಹಾರ ಮಾಡಿಸುತ್ತಾನೆ. 
೨.ಖರ: ಕಾಡಿನಲ್ಲಿ ಒಮ್ಮೆ ತಾಳೆಕಣ್ಣು ಇರುವ ಪ್ರದೇಶದಲ್ಲಿ ಕೃಷ್ಣ-ಬಲರಾಮರ ಜೊತೆಗಿದ್ದ ಗೋಪಾಲಕರ  ಆ ಹಣ್ಣನ್ನು ಕಂಡು ಅದನ್ನು ಮರದಿಂದ ಕಿತ್ತು ತಿನ್ನ ಬಯಸುತ್ತಾರೆ. ಅಷ್ಟರಲ್ಲಿ ಆ ಪ್ರದೇಶದಲ್ಲಿ ವಾಸವಾಗಿದ್ದ ಖರ ಎನ್ನುವ ಅಸುರ ತನ್ನ ಪಡೆಯೊಂದಿಗೆ ಕತ್ತೆಯ ರೂಪದಲ್ಲಿ ಬಂದು ಎಲ್ಲರನ್ನೂ ತುಳಿದು ಓಡಿಸಲು ಪ್ರಯತ್ನಿಸುತ್ತಾನೆ. ಆಗ ಶ್ರೀಕೃಷ್ಣನ ಸನ್ನೆಯಂತೆ ಬಲರಾಮ ಖರ ಮತ್ತು ಆತನ ಅನುಯಾಯಿಗಳನ್ನು ಮೇಲಕ್ಕೆಸೆದು ಸಂಹಾರ ಮಾಡುತ್ತಾನೆ.
೩. ದರ್ದುರ:  ದುರ್ದರ ಎಂದರೆ ಅರ್ಧ ಕಪ್ಪೆ ಎಂದರ್ಥ. ಆದರೆ ದುರ್ಧರ ಎಂದರೆ ಯಾರು ಎನ್ನುವ ಕಥೆ ಯಾವ ಪುರಾಣದಲ್ಲಿಯೂ ಬರುವುದಿಲ್ಲ. ಕೃಷ್ಣನ ಕಥೆಗೆ ಸಂಬಂಧಿಸಿ ಕಪ್ಪೆಯ ಕಥೆ ಎಲ್ಲೂ ಬರುವುದಿಲ್ಲ. ಹೀಗಾಗಿ ಭಾಗವತವನ್ನು ಅಧ್ಯಯನ ಮಾಡಿದವರ ಅಭಿಪ್ರಾಯದ ಪ್ರಕಾರ ದುರ್ದರ ಎಂದರೆ ಭಕ. ಈತ ಪಕ್ಷಿಯ ರೂಪದಲ್ಲಿ ಬಂದು ಕೃಷ್ಣನನ್ನು ತನ್ನ ಕೊಕ್ಕಿನಿಂದ ಕುಕ್ಕಿ ಕೊಲ್ಲಬೇಕು ಎಂದು ಬಯಸಿದ ಅಸುರ. ಆದರೆ ಶ್ರೀಕೃಷ್ಣ ಆತನ ಕೊಕ್ಕನ್ನು ಹಿಡಿದು ಅವನ ದೇಹವನ್ನು ಎರಡು ಸೀಳಾಗಿ ಮಾಡಿ ಸಂಹಾರ ಮಾಡುತ್ತಾನೆ.
೪.ಕೇಶಿ ಮತ್ತು ೫.ಅರಿಷ್ಟ: ಇವರು ಕುದುರೆ ಮತ್ತು ಗೂಳಿ ರೂಪದಲ್ಲಿ ಕೃಷ್ಣನನ್ನು ಕೊಲ್ಲಬೇಕೆಂದು ಬಂದ ಕಂಸನ ಅನುಯಾಯಿ ಅಸುರರಾಗಿದ್ದರು. ಇವರನ್ನು ಕೃಷ್ಣ ಸಂಹಾರ ಮಾಡಿದ.
೬. ಕಂಸ: ಕೃಷ್ಣ-ಬಲರಾಮರನ್ನು ಮೋಸದಿಂದ ಕೊಲ್ಲಿಸಬೇಕು ಎಂದು ಕಂಸ ಅವರನ್ನು ಬಿಲ್ಲಹಬ್ಬಕ್ಕೆ ಆಮಂತ್ರಿಸುತ್ತಾನೆ. ಹಾಗೆ ಬಂದ ಕೃಷ್ಣ-ಬಲರಾಮರ ಮೇಲೆ ಮದ್ದಾನೆಯನ್ನು ಛೂಬಿಟ್ಟು ಕೊಲ್ಲಿಸುವ ಪ್ರಯತ್ನ ನಡೆಯುತ್ತದೆ. ಆದರೆ ಕೃಷ್ಣ ಆನೆಯ ಹೊಟ್ಟೆಯ ಭಾಗದಲ್ಲಿ ಕುಳಿತು ಅದನ್ನು ಮಣಿಸಿ, ಅದರ ಬೆನ್ನ ಮೇಲೆ ಹತ್ತಿ ಅದರ ದಂತವನ್ನು ಕೀಳುತ್ತಾನೆ. ಈ ರೀತಿ ಆನೆಯ ನೆತ್ತರು ತೊಯ್ದ ಮೈಯಲ್ಲಿ, ಆನೆಯ ದಂತವನ್ನು ಹಿಡಿದು  ಕೃಷ್ಣ-ಬಲರಾಮರು ಕಂಸನ ಸಭೆಗೆ ಹೋಗುತ್ತಾರೆ.  ಅಲ್ಲಿ ಹೋದರೆ ಕಂಸ ಮಲ್ಲ ಯುದ್ಧದ ಸ್ವಾಗತ ನೀಡುತ್ತಾನೆ. ಚಾಣೂರ, ಮುಷ್ಟಿಕ, ಕೂಟ, ಕೋಸಲ, ಛಲ ಹೀಗೆ ಅನೇಕ ಮಂದಿ ಮಲ್ಲರನ್ನು ಕಂಸ ಕೃಷ್ಣ ಬಲರಾಮರ ಮೇಲೆ ಛೂ-ಬಿಡುತ್ತಾನೆ. ಕೃಷ್ಣ ಬಲರಾಮರು ಈ ದುಷ್ಟ ಮಲ್ಲರನ್ನು ಸಂಹಾರ ಮಾಡಿ ಕಂಸನನ್ನು ಸಿಂಹಾಸನದಿಂದ ಎಳೆದು ಸಂಹಾರ ಮಾಡುತ್ತಾರೆ.
೭. ಕಾಲಯವನ: ಕಂಸನ ಸಾವಿನ ವಿಷಯ ಜರಾಸಂಧನಿಗೆ ತಿಳಿಯುತ್ತದೆ. ಜರಾಸಂಧನ ಇಬ್ಬರು ಹೆಣ್ಣುಮಕ್ಕಳನ್ನು ಕಂಸನಿಗೆ ಕೊಟ್ಟು ಮದುವೆ ಮಾಡಿದ್ದ. ಹೀಗಾಗಿ ಜರಾಸಂಧ ಕೃಷ್ಣನನ್ನು ದ್ವೇಶಿಸಲಾರಂಭಿಸುತ್ತಾನೆ. ಜರಾಸಂಧ ದೇಶದ ಸುಮಾರು ಇಪ್ಪತ್ತೆರಡು ಸಾವಿರ ರಾಜಕುಮಾರರನ್ನು ತನ್ನ ಸೆರೆಯಲ್ಲಿಟ್ಟಿದ್ದ. ಇವರ ತಲೆ ಕಡಿದು ರುದ್ರಯಾಗ ಮಾಡಿ ಇಡೀ ದೇಶದ ಆಧಿಪತ್ಯವನ್ನು ತನ್ನ ಕೈಗೆ ತೆಗೆದುಕೊಳ್ಳಬೇಕು ಎನ್ನುವ ದುರುದ್ದೇಶ ಆತನದಾಗಿತ್ತು. ಆತನ ಮಿತ್ರ ನರಕಾಸುರ. ಆತ ಜರಾಸಂಧನಿಗೆ ಸಹಾಯ ಮಾಡಲು ಹದಿನಾರು ಸಾವಿರದ ನೂರು ರಾಜಕುಮಾರಿಯರನ್ನು ತನ್ನ ಸೆರೆಮನೆಯಲ್ಲಿಟ್ಟಿದ್ದ. ಕಂಸನ ಸಾವು ಜರಾಸಂಧನಿಗೆ  ಬಹಳ ದೊಡ್ಡ ಹೊಡೆತವಾಯಿತು. ಆತ ಸುಮಾರು ಇಪ್ಪತ್ತಮೂರು ಅಕ್ಷೋಹಿಣಿ ಸೇನೆಯೊಂದಿಗೆ ಅನೇಕ ಬಾರಿ ಕೃಷ್ಣನ ಮೇಲೆ ದಾಳಿ ಮಾಡುತ್ತಾನೆ. ಆದರೆ ಪ್ರತೀ ಬಾರಿಯೂ ಕೃಷ್ಣ ತಪ್ಪಿಸಿಕೊಳ್ಳುತ್ತಿದ್ದ. ಇದಕ್ಕಾಗಿ ಆತ ಕಾಲಯವನ ಎನ್ನುವ ರಾಕ್ಷಸನನ್ನು ಕೃಷ್ಣನ ಸಂಹಾರಕ್ಕಾಗಿ ಕಳುಹಿಸುತ್ತಾನೆ. ಕೃಷ್ಣ ಕಾಲಯವನ ಬಂದಾಗ ಓಡಿದಂತೆ ನಟಿಸಿ, ಒಂದು ಗವಿಯನ್ನು ಪ್ರವೇಶಿಸುತ್ತಾನೆ. ಅಲ್ಲಿ ದೇವತೆಗಳ ಪರ ಯುದ್ಧ ಮಾಡಿ ವಿಶ್ರಾಂತಿಯ ನಿದ್ದೆಯನ್ನು ವರವಾಗಿ ಪಡೆದು ಮಲಗಿದ್ದ ಮುಚುಗುಂಧನನ್ನು ಕಾಲಯವನ ತುಳಿಯುತ್ತಾನೆ. ಇದರಿಂದ ಎಚ್ಚರಗೊಂಡ ಮುಚುಗುಂಧನ ದೃಷ್ಟಿಗೆ ಮೊದಲು ಬಿದ್ದ ಕಾಲಯವನ ಬಸ್ಮವಾಗುತ್ತಾನೆ. ಹೀಗೆ ಯಾವುದೇ ಯುದ್ಧವಿಲ್ಲದೇ ಉಪಾಯವಾಗಿ ಕಾಲಯವನನನ್ನು ಸಂಹಾರ ಮಾಡುತ್ತಾನೆ ಕೃಷ್ಣ.  
೮. ಕುಜ/ನರಕಾಸುರ: ನರಕಾಸುರನಿಂದ ತಮ್ಮ ರಾಜಕುಮಾರಿಯರನ್ನು ಬಿಡಿಸಿ ಕೊಡಬೇಕೆಂದು ಎಲ್ಲಾ ರಾಜರು ಕೃಷ್ಣನಲ್ಲಿ ಮೊರೆ ಹೋಗುತ್ತಾರೆ. ಕೃಷ್ಣ ನೇರ ನರಕಾಸುರನಿದ್ದಲ್ಲಿಗೆ ಹೋಗಿ ರಾಜಕುಮಾರಿಯಾರನ್ನು ಬಿಡುಗಡೆ ಮಾಡುವಂತೆ ಕೇಳಿಕೊಳ್ಳುತ್ತಾನೆ. ಇದಕ್ಕೆ ಒಪ್ಪದ ನರಕಾಸುರನಿಗೂ ಕೃಷ್ಣನಿಗೂ ಯುದ್ದವಾಗುತ್ತದೆ. ಯುದ್ಧದಲ್ಲಿ ನರಕಾಸುರ ಸಾವನ್ನಪ್ಪುತ್ತಾನೆ. ಹೀಗೆ ನರಕಾಸುರನನ್ನು ಕೊಂದು ಸೆರೆಮನೆಯಲ್ಲಿದ್ದ ಹದಿನಾರು ಸಾವಿರದ ನೂರು ಮಂದಿ ರಾಜಕುಮಾರಿಯರನ್ನು ಬಿಡುಗಡೆಗೊಳಿಸುತ್ತಾನೆ ಕೃಷ್ಣ. ಆದರೆ ಆ ರಾಜಕುಮಾರಿಯರು ಸಮಾಜದಲ್ಲಿ ತಮಗೆ ಯಾವ ಸ್ಥಾನಮಾನವೂ ಸಿಗಲಾರದು ಮತ್ತು ನರಕಾಸುರನ ಸೆರೆಮನೆಯಲ್ಲಿದ್ದ ತಮ್ಮನ್ನು ಯಾರೂ ಮದುವೆಯಾಗಲಾರು ಎಂದಾಗ ಕೃಷ್ಣ  ಅವರಿಗೆ ತನ್ನ ಪಟ್ಟದರಸಿಯರ ಸ್ಥಾನ ಕಲ್ಪಿಸಿ ಕಾಪಾಡುತ್ತಾನೆ.
೯. ಪೌಂಡ್ರಕ: ಈತ ಕೃಷ್ಣನ ಅಣ್ಣ. ಕಾಶೀರಾಜನ ಮಗಳ ಮಗ. ಕಾಶೀರಾಜನಿಗೆ ಗಂಡು ಮಕ್ಕಳಿರಲಿಲ್ಲ. ಹಾಗಾಗಿ ಆ ಕಾಲದ ಸಂಪ್ರದಾಯದಂತೆ ಕಾಶೀರಾಜ ವಸುದೇವನಿಂದ ತನ್ನ ಮಗಳಲ್ಲಿ ಗಂಡು ಮಗುವೊಂದನ್ನು ಪಡೆಯುತ್ತಾನೆ. ಆತನೇ ಪೌಂಡ್ರಕ ವಾಸುದೇವ. ಈತ ತನ್ನನ್ನೇ ಭಗವಂತ ಎಂದು ಬಿಂಬಿಸಿಕೊಂಡು ಅನಾಚಾರ ಮಾಡಿ ಕೃಷ್ಣನ ವಿರುದ್ಧ  ಹೋರಾಟಕ್ಕಿಳಿದು ಕೃಷ್ಣನಿಂದ ಹತನಾಗುತ್ತಾನೆ.  
೧೦. ಸಾಲ್ವ: ಈತ ಬ್ರಹ್ಮದತ್ತನ ಮಗ. [ಕೃಷ್ಣಾವತಾರಕ್ಕೂ ಮೊದಲು ನಡೆದ ಘಟನೆಯ ಪ್ರಕಾರ ಬ್ರಹ್ಮದತ್ತ ಅಂಬೆಯನ್ನು ಪ್ರೀತಿಸುತ್ತಿದ್ದ. ಅವರ ಮದುವೆಯೂ ನಿಶ್ಚಯವಾಗಿತ್ತು. ಆದರೆ ಭೀಷ್ಮಾಚಾರ್ಯರು ಅಂಬೆ-ಅಂಬಿಕೆ-ಅಂಬಾಲಿಕೆಯರನ್ನು ಅಪಹರಿಸಿಕೊಂಡು ಬಂದು ಬಹಳ ದೊಡ್ಡ ಅಚಾತುರ್ಯ ಮಾಡುತ್ತಾರೆ. ಇದರಿಂದಾಗಿ ಬ್ರಹ್ಮದತ್ತ ಅಂಬೆಯನ್ನು ಮದುವೆಯಾಗಲು ನಿರಾಕರಿಸುತ್ತಾನೆ. ಭೀಷ್ಮಾಚಾರ್ಯರೂ ಅಂಬೆಯನ್ನು ನಿರಾಕರಿಸಿದಾಗ ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆಕೆಯೇ ಮುಂದೆ ಶಿಖಂಡಿಯಾಗಿ ಬಂದು ಭೀಷ್ಮಾಚಾರ್ಯರ ಸಾವಿಗೆ ಕಾರಣಳಾಗುತ್ತಾಳೆ]. ಕೃಷ್ಣ ದ್ವೇಷಿಯಾಗಿದ್ದ ಸಾಲ್ವ ಅದಕ್ಕಾಗಿ ಎಲ್ಲಾ ಸೌಕರ್ಯಗಳಿರುವ ಸೇನೆಯನ್ನೂ ಹೊತ್ತೊಯ್ಯಬಲ್ಲ ವಿಮಾನವೊಂದನ್ನು ವರವಾಗಿ ಪಡೆದಿದ್ದ.[ಪ್ರಾಚೀನ ಭಾರತದಲ್ಲಿ ವಿಮಾನ ಬಳಕೆಯ ಕುರಿತು ಮತ್ತು ವಿಮಾನ ಶಾಸ್ತ್ರದ ಕುರಿತು ಭಾರದ್ವಾಜ ಬರೆದಿರುವ ವಿಮಾನ ಶಾಸ್ತ್ರ ಅದ್ಭುತವಾದ ವಿವರಣೆಯನ್ನು ಕೊಡುತ್ತದೆ. ಕಾಲಕ್ರಮೇಣ ಇಂಥಹ ವೈಜ್ಞಾನಿಕ ಬೆಳವಣಿಗೆ ಮನುಕುಲಕ್ಕೆ ಮಾರಕವಾಗುತ್ತದೆ ಎಂದು ತಿಳಿದ ಭಾರತೀಯರು ಇಂಥಹ ಯಂತ್ರದ ಉಪಯೋಗವನ್ನು ಕೈಬಿಟ್ಟರು ಎಂದು ಈ ಗ್ರಂಥ ತಿಳಿಸುತ್ತದೆ]. ಇಂಥಹ ಸಾಲ್ವ ಇಂದ್ರಪ್ರಸ್ಥದಲ್ಲಿ ಪಾಂಡವರ ರಾಜಸೂಯಾ ಯಜ್ಞದಲ್ಲಿ ಕೃಷ್ಣ ಪಾಲ್ಗೊಂಡ ಸಮಯವನ್ನು ಸಾಧಿಸಿ ಯಾದವರ ಮೇಲೆ ಧಾಳಿ ಮಾಡುತ್ತಾನೆ. ಕೃಷ್ಣ ವಿಷಯ ತಿಳಿದು ಇಂದ್ರಪ್ರಸ್ಥದಿಂದ ಮರಳಿ ಬರುತ್ತಾನೆ. ಕೃಷ್ಣನಿಗೂ ಸಾಲ್ವನಿಗೂ ಯುದ್ಧವಾಗುತ್ತದೆ ಮತ್ತು ಆ ಯುದ್ಧದಲ್ಲಿ ಸಾಲ್ವ ಸಾವನ್ನಪ್ಪುತ್ತಾನೆ. ಈ ಯುದ್ಧದ ಸಮಯದಲ್ಲೇ ಕೃಷ್ಣ ಜೊತೆಗಿಲ್ಲದ ಕಾರಣ ಪಾಂಡವರು ದುರ್ಯೋಧನನ ಜೊತೆಗೆ ಜೂಜಾಡಿ ಕಾಡನ್ನು ಸೇರುವಂತಾಗುತ್ತದೆ.
೧೧. ಕಪಿ: ರಾಮಾಯಣ ಕಾಲದ ಎರಡು ಕಪಿಗಳು ಮೃಂದ ಮತ್ತು ವಿವಿಧ/ದ್ವಿವಿಧ. ಇವರು ಆಶ್ವೀದೇವತೆಗಳ ಅವತಾರ. ಇವರಲ್ಲಿ ದ್ವಿವಿಧ ಬಹಳ ಬಲಿಷ್ಠ ಹಾಗೂ ಅಹಂಕಾರಿಯಾಗಿದ್ದ. ರಾಮಾಯಣ ಕಾಲದಲ್ಲಿ ರಾಮನ ಸೇವೆ ಮಾಡಿದ ಈತ ಇಲ್ಲಿ ಯಾದವರಿಗೆ ಉಪಟಳ ಕೊಡಲಾರಂಭಿಸಿದ. ಆಗ ಯಾದವರು ಬಲರಾಮನ ಮೊರೆ ಹೋಗುತ್ತಾರೆ. ರಾಮ ರೂಪದಲ್ಲಿ ಬಲರಾಮನಲ್ಲಿ ಸನ್ನಿಹಿತನಾಗಿರುವ ಭಗವಂತ ಈ ಕಪಿಯನ್ನು ಸಂಹಾರ ಮಾಡುತ್ತಾನೆ.     
೧೨. ವಲ್ಕಲ: [ಈಗ ಮುದ್ರಣವಾಗಿರುವ  ಪುಸ್ತಕಗಳಲ್ಲಿ ಈತನನ್ನು ಬಲ್ವಲ ಎಂದು ಕರೆದಿದ್ದಾರೆ]. ಈತ ಬಾದಾಮಿಯ ವಾತಾಪಿಯ ತಮ್ಮ ಇಲ್ವಲನ ಮಗ. ಈತ ನಿರಂತರ ಋಷಿ ಮುನಿಗಳಿಗೆ ಮತ್ತು ಯಾದವರಿಗೆ  ತೊಂದರೆ ಕೊಡುತ್ತಿದ್ದ. ಮುಖ್ಯವಾಗಿ ಪುರಾಣಪ್ರವಚನ ನಡೆಯುವ ನೈಮಿಶಾರಣ್ಯದಲ್ಲಿ ಈತನ ಉಪಟಳ ಹೆಚ್ಚಾಗಿತ್ತು. ಮಹಾಭಾರತ ಯುದ್ಧ ಕಾಲದಲ್ಲಿ ತಾನು ಯಾರ ಪರವೂ ಯುದ್ಧ ಮಾಡುವುದಿಲ್ಲ ಎಂದು ತೀರ್ಥ ಯಾತ್ರೆಗೆ ಹೋದ ಬಲರಾಮ ನೈಮಿಶಾರಣ್ಯಕ್ಕೆ ಬರುತ್ತಾನೆ. ನಮಗೆ ತಿಳಿದಂತೆ ಅವತಾರ ರೂಪಿಗಳಾಗಿರುವ ಮಹಾಪುರುಷರು ಮನುಷ್ಯ ರೂಪದಲ್ಲಿದ್ದಾಗ  ಮನುಷ್ಯರಂತೆಯೇ ಅಭಿನಯಿಸುತ್ತಾರೆ. ಅಂತಹದ್ದೇ ಒಂದು ಘಟನೆ ಇಲ್ಲಿ ನಡೆಯುತ್ತದೆ.  ಬಲರಾಮನಲ್ಲಿ ಒಂದು ದೌರ್ಬಲ್ಯವನ್ನು ನಾವು ಕಾಣುತ್ತೇವೆ. ಅದೇನೆಂದರೆ ಆತ ಮುಂಗೋಪಿ. ಇಂಥಹ ಮುಂಗೊಪಿಯಾದ ಬಲರಾಮ ನೈಮಿಶಾರಣ್ಯಕ್ಕೆ ಬಂದಾಗ ಅಲ್ಲಿ ಪುರಾಣ ಪ್ರವಚನ ನಡೆಯುತ್ತಿತ್ತು. ವೇದವ್ಯಾಸರ ಮಗ ರೋಮಹರ್ಷಣ ಪ್ರವಚನ ಮಾಡುತ್ತಿದ್ದ. ಇಂಥಹ ಸಮಯದಲ್ಲಿ ಬಲರಾಮನ ಪ್ರವೇಶವಾದಾಗ ಎಲ್ಲಾ ಋಷಿ ಮುನಿಗಳು ಎದ್ದು ನಿಂತು ಆತನನ್ನು ಸ್ವಾಗತಿಸುತ್ತಾರೆ. ಆದರೆ ಪ್ರವಚನ ಧೀಕ್ಷಾಬಂಧನಾದ ರೋಮಹರ್ಷಣ ಎದ್ದು ನಿಲ್ಲುವುದಿಲ್ಲ. ಇದರಿಂದ ಕೋಪಗೊಂಡ ಬಲರಾಮ ಸಿಟ್ಟಿನಲ್ಲಿ ಆತನನ್ನು ಕೊಂದು ಬಿಡುತ್ತಾನೆ! ಇಂಥಹ ಅಚಾತುರ್ಯ ನಡೆದಾಗ ಎಲ್ಲಾ ಋಷಿಗಳು ದುಃಖ ವ್ಯಕ್ತ ಪಡಿಸುತ್ತಾರೆ. ಆಗ ಬಲರಾಮ ರೋಮಹರ್ಷಣನ ಉತ್ತರಾಧಿಕಾರಿಯಾಗಿ ಆತನ ಮಗ ಉಗ್ರಶ್ರವಸ್ಸನ್ನು ನೇಮಿಸುತ್ತಾನೆ ಮತ್ತು ಆತ ರೋಮಹರ್ಷಣನಂತೆಯೇ ಶ್ರೇಷ್ಠ  ಪ್ರವಚನಕಾರನಾಗುತ್ತಾನೆಂದು ಹೇಳುತ್ತಾನೆ. ಇದಾದ ನಂತರ ರೋಮಹರ್ಷಣನನ್ನು ಕೊಂದ ಪಾಪ ಪರಿಹಾರಕ್ಕಾಗಿ ಋಷಿಗಳು ಬಲರಾಮನಲ್ಲಿ ಒಂದು ಉಪಕಾರವನ್ನು ಬಯಸುತ್ತಾರೆ. ಅದೇನೆಂದರೆ ಸದಾ ಉಪಟಳ ಕೊಡುತ್ತಿರುವ ವಲ್ಕಲನಿಂದ ಮುಕ್ತಿ. ಇದಕ್ಕೆ ಒಪ್ಪಿದ ಬಲರಾಮ ವಲ್ಕಲನನ್ನು ಸಂಹಾರ ಮಾಡುತ್ತಾನೆ ಮತ್ತು ತನ್ನ ಯಾತ್ರೆಯನ್ನು ಮುಂದುವರಿಸುತ್ತಾನೆ.
೧೩. ದಂತವಕ್ರ, ೧೪. ವಿಡೂರಥ:  ವಸುದೇವನಿಗೆ ಕುಂತಿ ಅಲ್ಲದೇ ಇನ್ನೂ ನಾಲ್ಕು ಮಂದಿ ತಂಗಿಯರಿದ್ದರು. ಅವರಲ್ಲಿ ಒಬ್ಬಳು ಪ್ರಥುಶ್ರವಾ. ಆಕೆ ಛೇದೀ ದೇಶಕ್ಕೆ ಮದುವೆಯಾಗಿದ್ದಳು.ಅವಳ ಮಗನೇ ಶಿಶುಪಾಲ. ಇನ್ನೊಬ್ಬಳು ಪ್ರಥುದೇವ. ಅವಳಿಗೆ ದಂತವಕ್ರ ಮತ್ತು ವಿಡೂರಥ ಎನ್ನುವ ಇಬ್ಬರು ಮಕ್ಕಳಿದ್ದರು. ಈ ಹಿಂದೆ ಹೇಳಿದಂತೆ ಹಿರಣ್ಯಕಶಿಪು-ಹಿರಣ್ಯಾಕ್ಷರೇ ಶಿಶುಪಾಲ ಮತ್ತು ದಂತವಕ್ರರಾಗಿ ಮರು ಹುಟ್ಟು ಪಡೆದಿರುವುದು. ಇವರಲ್ಲಿ ಶಾಪಗ್ರಸ್ತ ಜಯ-ವಿಜಯರು ಆವಿಷ್ಟರಾಗಿ ತಮ್ಮ ಶಾಪ ವಿಮೋಚನೆಗಾಗಿ ಕಾದಿದ್ದರು. ರಾಜಸೂಯ ಯಜ್ಞದ ದಿನ ಕೃಷ್ಣ ಶಿಶುಪಾಲನ ಸಂಹಾರ ಮಾಡಿರುತ್ತಾನೆ. ಆ ವಿಷಯವನ್ನು ಇಲ್ಲಿ ವಿಶೇಷವಾಗಿ ಉಲ್ಲೇಖಿಸುವುದಿಲ್ಲ. ಆದರೆ ವಿಡೂರಥ ಮತ್ತು ದಂತವಕ್ರರ ಸಂಹಾರವನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಕೃಷ್ಣ ಸುಮಾರು ಐವತ್ತು ವರ್ಷ ವಯಸ್ಸಿನವನಿದ್ದಾಗ ಕುರುಕ್ಷೇತ್ರದಲ್ಲಿ ಒಂದು ಯಾಗ ಮಾಡಿಸುತ್ತಾನೆ. ಈ ಯಾಗಕ್ಕೆ ವೃಂದಾವನದಿಂದ ವಿಶೇಷವಾಗಿ ತನ್ನನ್ನು ಭಕ್ತಿಯಿಂದ ಪ್ರೀತಿಸಿದ್ದ ಗೋಪಿಕಾ ಸ್ತ್ರೀಯರನ್ನು ಕೃಷ್ಣ ಆಹ್ವಾನಿಸಿರುತ್ತಾನೆ. ನಮಗೆ ತಿಳಿದಂತೆ ಬಿಲ್ಲ ಹಬ್ಬಕ್ಕೆಂದು ಮಥುರೆಗೆ ಬರುವಾಗ ಕೃಷ್ಣನಿಗೆ ಸುಮಾರು ಏಳು ವರ್ಷ ವಯಸ್ಸು. ಆಗ ಆತ ತನ್ನನ್ನು ಹಿಂಬಾಲಿಸಿದ ಗೋಪಿಕೆಯರಲ್ಲಿ “ಬೆರಳೆಣಿಕೆಯಷ್ಟು ದಿನಗಳಲ್ಲಿ ಬರುತ್ತೇನೆ” ಎಂದು ಹೇಳಿ ಬಂದಿದ್ದ. ಆದರೆ  ನಂತರ ಸುಮಾರು ನಲವತ್ತು ವರ್ಷಗಳ ಕಾಲ ಅವರನ್ನು ಆತ ಭೇಟಿಯಾಗಿರುವುದಿಲ್ಲ. ಹೀಗಾಗಿ ಈ ಯಜ್ಞಕ್ಕೆ ಎಲ್ಲರನ್ನೂ ಕರೆಸಿಕೊಂಡ ಕೃಷ್ಣ ಅವರ ಯೋಗಕ್ಷೇಮ ವಿಚಾರಿಸುತ್ತಾ “ನನಗಾಗಿ ತುಂಬಾ ಕಾದಿರೇನು?  ನಾನು ಎಲ್ಲೂ ಹೋಗಿರಲಿಲ್ಲ. ನಿಮ್ಮ ಹೃದಯದಲ್ಲೇ ಇದ್ದೆ” ಎನ್ನುತ್ತಾನೆ. ಜೀವನ ಎಂದರೆ ಅಗಲುವಿಕೆ. ಒಂದಾಗುವುದು ಎಂದರೆ ಒಂದು ದಿನ ಅಗಲುವುದು ಎಂದರ್ಥ. “ಜೀವನ ಎಂದರೇನು ಎಂದು ನಿಮಗೆ ತಿಳಿಯಲಿ ಎಂದು ನಾನು ನಿಮ್ಮಿಂದ ದೂರ ನಿಂತೆ” ಎಂದು ಜೀವನದ ಕಟು ಸತ್ಯವನ್ನು ವಿವರಿಸುತ್ತಾನೆ  ಕೃಷ್ಣ. ಈ ರೀತಿ ಎಲ್ಲರ ಉಪಸ್ಥಿತಿಯಲ್ಲಿ ಯಾಗ ನೆರವೇರುತ್ತದೆ. ನಂತರ ಕೃಷ್ಣ ಮರಳಿ ದ್ವಾರಕೆಗೆ ಹೊರಡುತ್ತಾನೆ.  ಈ ರೀತಿ ಬರುತ್ತಿರುವಾಗ ದಾರಿಯಲ್ಲಿ ದಂತವಕ್ರ ಮತ್ತು ವಿಡೂರಥ ಕೃಷ್ಣನನ್ನು ತಡೆದು ಯುದ್ಧ ಮಾಡುತ್ತಾರೆ. ಈ ಯುದ್ಧದಲ್ಲಿ ಇಬ್ಬರನ್ನೂ ಕೃಷ್ಣ ಸಂಹಾರ ಮಾಡುತ್ತಾನೆ.
೧೫. ಸಪ್ತೋಕ್ಷ:  ಕೋಸಲ ದೇಶದ ರಾಜ ನಗ್ನಚಿತ್ ತನ್ನ ಮಗಳ ಸ್ವಯಂವರ ಏರ್ಪಡಿಸಿದ್ದ. ಯಾರು ತನ್ನಲ್ಲಿರುವ ಏಳು ಗೂಳಿಗಳನ್ನು ಹಿಡಿದು ಕಟ್ಟಬಲ್ಲರೋ ಅವರ ಕೊರಳಿಗೆ  ತನ್ನ ಮಗಳು ಮಾಲಾರ್ಪಣೆ ಮಾಡುತ್ತಾಳೆ ಎನ್ನುವ ನಿಯಮವನ್ನೂ ಆತ ಇಟ್ಟಿದ್ದ. ಈ ಸಪ್ತ  ಗೂಳಿಗಳೇ  ಅಸುರ ಶಕ್ತಿಗಳಾಗಿರುವ ಸಪ್ತೋಕ್ಷಗಳು.
ನಗ್ನಚಿತ್ ರಾಜನ ಮಗಳು ನೀಲಾ ಷಣ್ಮಹಿಷಿಯರಲ್ಲಿ ಒಬ್ಬಳಾಗಿದ್ದಳು. ಅವಳಿಗೆ ಕೌಸಲ್ಯಾ ಎನ್ನುವ ಹೆಸರೂ ಇತ್ತು. ಬಾಲ್ಯದಲ್ಲಿ ಕೃಷ್ಣನ ಸ್ನೇಹಿತೆಯಾಗಿರುವ  ಇನ್ನೊಬ್ಬಳು ನೀಲಾಳನ್ನು ನಾವು ಕಾಣುತ್ತೇವೆ. ಅವಳು ಯಶೋದೆಯ ಅಣ್ಣನ ಮಗಳು. ಈ ಇಬ್ಬರೂ ಮೂಲತಃ ಒಂದೇ ಸ್ವರೂಪ. ಬಾಲ್ಯದಲ್ಲಿ ಕೃಷ್ಣನನ್ನು ಪ್ರೀತಿಸುವುದಕ್ಕಾಗಿ ಆಕೆ ಇಲ್ಲಿ ನೀಲಾಳಾಗಿ ಹುಟ್ಟಿದರೆ,  ಅಲ್ಲಿ ಸ್ವಯಂವರದ ವಧುವಾಗುವ ಭಾಗ್ಯಕ್ಕಾಗಿ ಇನ್ನೊಂದು ರೂಪದಲ್ಲಿ ಹುಟ್ಟಿದ್ದಳು. ಕೊನೆಗೆ ಬಾಲ್ಯದ ನೀಲಾ ಸ್ವಯಂವರದ ವಧು ನೀಲಾಳಲ್ಲಿ ಐಕ್ಯಹೊಂದಿದಳು ಎನ್ನುತ್ತಾರೆ ಶಾಸ್ತ್ರಕಾರರು. ಈ ನೀಲಾಳೇ ಕೃಷ್ಣನ ಅಷ್ಟಮಹಿಷಿಯರಲ್ಲಿ ಒಬ್ಬಳಾದ ರಾಧೆ.
 ಸ್ವಯಂವರಕ್ಕೆ ಬಂದ ಶ್ರೀಕೃಷ್ಣನಲ್ಲಿ ನಗ್ನಚಿತ್ ಹೇಳುತ್ತಾನೆ: “ನನಗೆ ನಿನ್ನಂಥಹ ಅಳಿಯ ಸಿಗಬೇಕು ಎನ್ನುವ ಆಸೆ. ಆದರೆ ನಾನು ಸ್ವಯಂವರದ ನಿಯಮ ಮಾಡಿರುವುದರಿಂದ ನೀನು ಆ ಏಳು ಗೂಳಿಗಳನ್ನು ಮಣಿಸಿ ನನ್ನ ಮಗಳನ್ನು ವರಿಸಬೇಕು ಎನ್ನುವುದು ನನ್ನ ಪ್ರಾರ್ಥನೆ” ಎಂದು. ಮುಂದೆ ಭಾಗವತದಲ್ಲೇ ಹೇಳುವಂತೆ: ಕೃಷ್ಣ ಏಳು ರೂಪದಿಂದ ಈ ಏಳು ಗೂಳಿಗಳನ್ನು ಮಣಿಸಿ ನೀಲಾಳನ್ನು ವರಿಸುತ್ತಾನೆ.    
೧೬. ಶಂಭರ: ಕೃಷ್ಣ-ರುಗ್ಮಿಣಿಯಲ್ಲಿ ಜನಿಸಿದ ಪ್ರದ್ಯುಮ್ನನನ್ನು ಮಗು ಹುಟ್ಟಿದ ತಕ್ಷಣ ಶಂಭಾರಾಸುರ ಅಪಹರಿಸಿ ಸಮುದ್ರಕ್ಕೆ ಎಸೆಯುತ್ತಾನೆ. ಆ ಮಗುವನ್ನು ತಕ್ಷಣ 
ಒಂದು ಬೃಹತ್ ಮೀನು ನುಂಗುತ್ತದೆ. ಆ ಮೀನನ್ನು ಬೆಸ್ತರು ಹಿಡಿದು ಶಂಬರಾಸುರನಿಗೇ ಕೊಡುತ್ತಾರೆ. ಅಲ್ಲಿ ಆತನ ಅಡಿಗೆ ಮನೆಯಲ್ಲಿ ಶಾಪಗ್ರಸ್ತ ರತಿದೇವಿಯ ಕೈಗೆ ಈ ಮಗು ಸೇರುತ್ತದೆ. ಮೂಲತಃ ಈ ಮಗುವೇ ಮನ್ಮಥ.  ನಾರದರಿಂದ ಈ ವಿಷಯವನ್ನು ತಿಳಿದಿದ್ದ ರತಿದೇವಿ ಮನ್ಮಥನಿಗೆ ಆತನ ಮೂಲ ಸ್ವರೂಪದ ನೆನಪನ್ನು ತಂದುಕೊಡುತ್ತಾಳೆ. ಬೆಳೆದು ದೊಡ್ಡವನಾದ ಪ್ರದ್ಯುಮ್ನ ಶಂಭರನನ್ನು ಕೊಂದು ತನ್ನ ಪತ್ನಿ ರತಿದೇವಿಯನ್ನು ಕರೆದುಕೊಂಡು ಬರುತ್ತಾನೆ. ಎಷ್ಟೋ ವರ್ಷಗಳ ನಂತರ ಕೃಷ್ಣ-ರುಗ್ಮಿಣಿಯರಿಗೆ ಮಗನ ದರ್ಶನವಾಗುತ್ತದೆ. ಹೀಗೆ ಪ್ರದ್ಯುಮ್ನನೊಳಗೆ ಪ್ರದ್ಯುಮ್ನರೂಪದಿಂದಿದ್ದು ಕೃಷ್ಣ ಶಂಭರನ ಸಂಹಾರ ಮಾಡುತ್ತಾನೆ.   

೧೭. ರುಗ್ಮಿಮುಖ್ಯ:  ಕೃಷ್ಣನಿಗೆ ರುಗ್ಮಿಣಿಯನ್ನು ಮದುವೆ ಮಾಡಿಕೊಡಲು ವಿರೋಧಿಸಿದ ರುಗ್ಮಿ ರುಗ್ಮಿಣಿಯ ಅಣ್ಣ. ಮುಂದೆ ಈತನ ಮೊಮ್ಮಗಳು ಮತ್ತು ಕೃಷ್ಣನ ಮೊಮ್ಮಗನಿಗೂ ಮದುವೆ ನಿಶ್ಚಯವಾಗುತ್ತದೆ. ಈ ಮದುವೆಯಲ್ಲಿ ಕೃಷ್ಣ-ಬಲರಾಮರು ಉಪಸ್ಥಿತರಿರುತ್ತಾರೆ. ಮದುವೆಮನೆಯಲ್ಲಿ ಕ್ಷತ್ರಿಯರೆಲ್ಲರೂ ದ್ಯೂತವಾಡಲು ಕುಳಿತುಕೊಳ್ಳುತ್ತಾರೆ. ಬಲರಾಮನೂ ದ್ಯೂತವಾಡುತ್ತಾನೆ. ಹೀಗಿರುವಾಗ ರುಗ್ಮಿ ಕಾರಣವಿಲ್ಲದೇ ಬಲರಾಮ ಸೋತ ಎಂದು ಛೇಡಿಸುತ್ತಾನೆ. ಆತನೊಂದಿಗೆ ಇತರ ಕ್ಷತ್ರಿಯರೂ ಸೇರಿಕೊಂಡು ಬಲರಾಮನನ್ನು ಅವಮಾನಿಸುತ್ತಾರೆ. ಆಗ ಮುಂಗೋಪಿಯಾಗಿರುವ ಬಲರಾಮ ರುಗ್ಮಿಯನ್ನು ಚಚ್ಚಿ ಕೊಂದು ಬಿಡುತ್ತಾನೆ.  
ಕೃಷ್ಣಾವತಾರದ ಕಥೆ ಮುಂದುವರಿಯುತ್ತದೆ......

Saturday, September 5, 2015

Shrimad BhAgavata in Kannada -Skandha-02-Ch-07(25)

ಕೃಷ್ಣಾವತಾರದ ಕಥೆ ಮುಂದುವರಿದುದು: <http://bhagavatainkannada.blogspot.in>

ಗೋಪೈರ್ಮಖೇ ಪ್ರತಿಹತೇ ವ್ರಜವಿಪ್ಲವಾಯ ದೇವೇSಭಿವರ್ಷತಿ ಪಶೂನ್ ಕೃಪಯಾ ರಿರಕ್ಷುಃ ।
ಧರ್ತೋಚ್ಛಿಲೀಂಧ್ರಮಿವ ಸಪ್ತದಿನಾನಿ ಸಪ್ತ ವರ್ಷೋ ಮಹೀಧ್ರಮನಘೈಕಕರೇ ಸಲೀಲಮ್ ॥೩೨॥

ಶ್ರೀಕೃಷ್ಣನ ಗೋವರ್ಧನ ಗಿರಿ ಧಾರಣೆ ಪ್ರಸಂಗ ಅತ್ಯಂತ ರೋಚಕ. ಪ್ರತೀ ವರ್ಷದಂತೆ ಗೋಪಾಲಕರು ಇಂದ್ರಪೂಜೆಯ ಸಿದ್ಧತೆ ನಡೆಸುತ್ತಿದ್ದರು. ಸುಮಾರು ಆರು ವರ್ಷಗಳ ಕಾಲ ಇಂದ್ರ ಪೂಜೆಯನ್ನು ನೋಡಿಯೂ ಅದರ  ಬಗ್ಗೆ ಏನೂ ಹೇಳದ ಶ್ರೀಕೃಷ್ಣ ಈ ಬಾರಿ “ಏಕೆ ಇಂದ್ರ ಪೂಜೆ ಮಾಡುತ್ತಿದ್ದೀರಿ” ಎಂದು ಕೇಳುತ್ತಾನೆ. ಅದಕ್ಕೆ ಗೋಪಾಲಕರು : “ನಾವು ಜೀವನ ಸಾಗಿಸುವುದು ಹಾಲನ್ನು ಮಾರಿ; ಹಾಲು ಕೊಡುವ ಹಸುಗಳನ್ನು ಸಾಕಲು ಹುಲ್ಲು ಬೇಕು; ಈ ಹುಲ್ಲು ಬೆಳೆಯಲು ಮಳೆ ಅತ್ಯಾವಶ್ಯಕ. ಹೀಗಾಗಿ ಮಳೆ ನೀಡುವ ಇಂದ್ರನನ್ನು ಪ್ರತೀ ವರ್ಷವೂ ಹೀಗೇ ಪೂಜಿಸುತ್ತೇವೆ” ಎಂದು ಉತ್ತರಿಸುತ್ತಾರೆ. ಇದನ್ನು ಕೇಳಿದ ಕೃಷ್ಣ : “ನಿಮಗೆ ಹಾಲನ್ನು ಕೊಡುವುದು ಹಸು.  ಮೊದಲು ನಾವು ಅದನ್ನು ಪೂಜಿಸಬೇಕು. ಆ ಹಸುವಿಗೆ ಹುಲ್ಲು ನೀಡುವುದು ಪರ್ವತ. ಆ ಪರ್ವತವನ್ನು ನಾವು ಪೂಜಿಸಬೇಕು. ಇದನ್ನು ಬಿಟ್ಟು ಇಂದ್ರನನ್ನು ಏಕೆ ಪೂಜಿಸುತ್ತಿರುವಿರಿ? ನಮ್ಮ ಯೋಗ್ಯತೆಗಿಂತ ಹೆಚ್ಚಿದನದನ್ನು ಕೊಡುವ ಯೋಗ್ಯತೆ ಇಂದ್ರನಿಗಿಲ್ಲ. ನಾವು ಏನನ್ನು ಪಡೆದು ಬಂದಿದ್ದೇವೋ ಅದನ್ನು ಖಂಡಿತ ಪಡೆದೇ ಪಡೆಯುತ್ತೇವೆ. ಹೀಗಿರುವಾಗ ಇಂದ್ರನ ಪೂಜೆ ಏಕೆ? ಗೋಪೂಜೆ ಮತ್ತು ಗೋವರ್ದನ ಗಿರಿ ಪೂಜೆ ನನಗೂ ಇಷ್ಟ” ಎನ್ನುತ್ತಾನೆ. ಕೃಷ್ಣನ ಈ ಮಾತು ಗೋಪಾಲಕರಿಗೂ ಸರಿ ಎಂದು ಕಾಣಿಸುತ್ತದೆ. ಅವರು ಕೃಷ್ಣನ ಮಾತಿನಂತೆ ಇಂದ್ರನ ಪೂಜೆಯ ಬದಲಾಗಿ ಗೋ-ಪೂಜೆ ಮತ್ತು ಗೋವರ್ದನ ಗಿರಿ ಪೂಜೆಯನ್ನು ಅದರ ಅಂತರ್ಯಾಮಿ ಭಗವಂತನ ಪೂಜೆಯನ್ನಾಗಿ ಮಾಡಿ ಸಂಭ್ರಮಿಸುತ್ತಾರೆ.
ವಾಸ್ತವಿಕವಾಗಿ ಇಲ್ಲಿ ನಾವು ಮಹತ್ತ್ವದ ಸಂಗತಿಯೊಂದನ್ನು ಗಮನಿಸಬೇಕು. ಮನುಷ್ಯ ಮೊದಲು ಕುಡಿಯುವುದು ತಾಯಿಯ ಹಾಲನ್ನಾದರೆ ನಂತರ ಕುಡಿಯುವುದು ಗೋವಿನ ಹಾಲನ್ನು. ಹೀಗಾಗಿ ಗೋವು ನಮ್ಮ ತಾಯಿ ಸಮಾನ.  ಇದಲ್ಲದೇ ಹಿಂದೆ ಗೋವನ್ನು ದೇಶದ ಸಂಪತ್ತಾಗಿ ವಿನಿಯೋಗಕ್ಕೂ ಬಳಸುತ್ತಿದ್ದರು. ಈ ಹಿಂದೆ ಹೇಳಿದಂತೆ ಮಲ-ಮೂತ್ರ ಕೂಡಾ ಗ್ರಾಹ್ಯವಾಗಿರುವ   ಏಕೈಕ ಪ್ರಾಣಿ ಗೋವು. ಇಂಥಹ ಮಾತೃಸ್ಥಾನೀಯವಾಗಿರುವ ಗೋವನ್ನು ಪೂಜಿಸುವುದರಿಂದ ಅದರೊಳಗೆ ವಿಭೂತಿ ರೂಪಿಯಾಗಿ ನಿಂತಿರುವ ಅಂತರ್ಯಾಮಿ ಭಗವಂತ ಪ್ರಸನ್ನನಾಗುತ್ತಾನೆ. ಕಣ್ಣಿಗೆ ಕಾಣದ ಅವಾಂತರ ದೇವತೆಗಳ ಪೂಜೆಗಿಂತ ಕಣ್ಣಿಗೆ ಕಾಣುವ ಅಪೂರ್ವ ಪ್ರತೀಕಗಳಲ್ಲಿ ಭಗವಂತನನ್ನು ಕಂಡು ಪೂಜಿಸುವುದು ಶ್ರೇಷ್ಠ ಎನ್ನುವ ಅಪೂರ್ವ ಸಂದೇಶವನ್ನು ಕೃಷ್ಣ ಇಲ್ಲಿ ನೀಡಿದ್ದಾನೆ. ಈ ರೀತಿ ಶ್ರೀಕೃಷ್ಣ ಈ ದೇಶದಲ್ಲಿ ಮೊತ್ತಮೊದಲು ಗೋಪೂಜೆಯನ್ನು ಪ್ರಾರಂಭಿಸಿದ.
ಶ್ರೀಕೃಷ್ಣನಿಂದಾಗಿ ಇಂದ್ರ ಪೂಜೆ ನಿಂತು ಹೋದಾಗ ಇಂದ್ರನಿಗೆ ಕೊಪ ಬರುತ್ತದೆ[ಶ್ರೀಕೃಷ್ಣನ ಮಹಿಮೆಯನ್ನು ತೋರುವುದಕ್ಕಾಗಿಯೇ ಇಂದ್ರ ಈ ರೀತಿ ನಟಿಸಿದ ಎನ್ನಬಹುದು]. ಪ್ರತೀಕಾರವಾಗಿ ಆತ ನಿರಂತರ ಏಳು ದಿನ ಮಳೆ ಸುರಿಸುತ್ತಾನೆ. ಆಗ ಶ್ರೀಕೃಷ್ಣ  ಬೆಟ್ಟವನ್ನು ಕೊಡೆಯಂತೆ ಎತ್ತಿ ಹಿಡಿದು ಸಮಸ್ತ ಗೋಕುಲವಾಸಿಗಳ ರಕ್ಷಣೆ ಮಾಡುತ್ತಾನೆ. ಈ ಘಟನೆಯ ನಂತರ ಎಲ್ಲರಿಗೂ ಕೃಷ್ಣನ  ಮೇಲಿನ ಭಯ-ಭಕ್ತಿ ಹೆಚ್ಚುತ್ತದೆ.

ಕ್ರೀಡನ್ ವನೇ ನಿಶಿ ನಿಶಾಕರರಶ್ಮಿಗೌರ್ಯಾಂ ರಾಸೋನ್ಮುಖಃ ಕಳಪದಾಯತಮೂರ್ಚ್ಛಿತೇನ ।
ಉದ್ದೀಪಿತಸ್ಮರರುಜಾಂ ವ್ರಜಸದ್ವಧೂನಾಂ ಹರ್ತುರ್ಹರಿಷ್ಯತಿ ಶಿರೋ ಧನದಾನುಗಸ್ಯ ॥೩೩॥

ಭಕ್ತಿಗೆ ಅನೇಕ ಮುಖಗಳಿವೆ. ಹೆಣ್ಣು ಭಗವಂತ ನನ್ನ ಗಂಡನಾಗಬೇಕು ಎಂದು ಬಯಸುವುದೂ ಭಕ್ತಿಯ ಒಂದು ಮುಖ. ಕೃಷ್ಣ ಸುಮಾರು ಏಳು ವರ್ಷದವನಿದ್ದಾಗ ಆತನ ಸೌಂದರ್ಯಕ್ಕೆ ಸಮಸ್ತ ಗೋಪಾಲಕರ ಪತ್ನಿಯರು ಮನಸೋಲುತ್ತಾರೆ. ಅವರಿಗೆ ಕೃಷ್ಣ ತಮ್ಮ ಪತಿಯಾಗಬೇಕು ಎನ್ನುವಷ್ಟು ಕೃಷ್ಣನ ಮೇಲೆ ಪ್ರೀತಿ. ಕೃಷ್ಣನೂ ಕೂಡಾ ಅವರಲ್ಲಿ ಆ ಭಾವನೆ ಬರುವಂತೆ ಮಾಡುತ್ತಾನೆ. ಆತ ಹುಣ್ಣಿಮೆಯ ರಾತ್ರಿ ಹಾಲು ಚೆಲ್ಲಿದಂತೆ  ತುಂಬಿರುವ ಬೆಳದಿಂಗಳಲ್ಲಿ ಕಾಡಿನಲ್ಲಿ ಕುಳಿತು ಸಪ್ತಸ್ವರಗಳ ಸಮ್ಮಿಲನದಿಂದ ಕೂಡಿದ (ಆಯತಮೂರ್ಚ್ಛನ ) ವೇಣುನಾದ ಮಾಡುತ್ತಿದ್ದ. ಇದರಿಂದ ಎಲ್ಲಾ ಗೋಪಿಕಾ ಸ್ತ್ರೀಯರು ಪ್ರಾಮಾಂಕುರಗೊಂಡು ಮನೆಯಿಂದ ಹೊರ ಬಂದು ಕೃಷ್ಣನೊಂದಿಗೆ ರಾಸ ನೃತ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು. “ಕೃಷ್ಣ ತಾನೂ ಅವರೊಂದಿಗೆ ಕುಣಿದು ಅವರನ್ನು ನಲಿದಾಡಿಸಿ ಆನಂದದ ಹೊಳೆ ಹರಿಸುತ್ತಿದ್ದ” ಎನ್ನುತ್ತಾನೆ ಚತುರ್ಮುಖ.
ಕೃಷ್ಣನ ಈ ನಡೆಯ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದರೆ ಇಲ್ಲಿ ನಾವು ತಿಳಿದುಕೊಳ್ಳಬೇಕಾದ ಅಂಶ ಏನೆಂದರೆ: ಕೃಷ್ಣ ಗೋಪಿಕೆಯರ ಜೊತೆಗೆ ರಾಸಲೀಲೆ ಮಾಡುತ್ತಿದ್ದಾಗ ಆತನ ವಯಸ್ಸು ಕೇವಲ ಏಳು ವರ್ಷ. ಇನ್ನು  ಕೃಷ್ಣನ ಜೊತೆಗೆ ನೃತ್ಯ ಮಾಡುತ್ತಿದ್ದವರು ನಡತೆಗೆಟ್ಟ ಹೆಣ್ಣುಮಕ್ಕಳಲ್ಲ. ಅವರು ಗೋಪಾಲಕರ ಪತ್ನಿಯರು ಮತ್ತು  ಅವರನ್ನು ಚತುರ್ಮುಖ ಇಲ್ಲಿ  ‘ಸದ್ವಧು’ಗಳೆಂದು ಕರೆದಿದ್ದಾನೆ. ಅವರಲ್ಲಿ ಅಂಕುರಿಸಿದ ಕಾಮ ‘ಭಗವಂತನ ಕಾಮ’. ಹೀಗಾಗಿ ಅವರ ಗಂಡದಿರೂ ಕೂಡಾ ಅವರ ಪತ್ನಿಯರ ಕೃಷ್ಣ ಪೇಮವನ್ನು ವಿರೋಧಿಸಲಿಲ್ಲ. ಹೀಗಿರುವಾಗ ಈ ಘಟನೆಯನ್ನು ನಾವು ವಿರೋಧಿಸುವುದು ಅರ್ಥಶೂನ್ಯ! ಜೀವನದಲ್ಲಿ ಭಗವದ್ ಪ್ರಜ್ಞೆಯಿಂದ ಕುಣಿದು ನಲಿದು ಬದುಕನ್ನು ಪಾವನಗೊಳಿಸಿಕೊಳ್ಳಿ ಎನ್ನುವ ಸಂದೇಶವನ್ನು ಇಲ್ಲಿ ಕೃಷ್ಣ ನಮಗೆ ನೀಡಿದ್ದಾನೆ.
ಈ ರೀತಿ ಶ್ರೀಕೃಷ್ಣ ಗೋಪಿಕೆಯರ ಜೊತೆ  ನೃತ್ಯ ಮಾಡುತ್ತಿರುವ ಸಮಯದಲ್ಲಿ ಕುಬೇರನ ಅನುಚರನಾದ ಶಂಖಚೂಢ ಎನ್ನುವ ಒಬ್ಬ ಅಸುರ ನೃತ್ಯ ಮಾಡುತ್ತಿರುವ ಸ್ತ್ರೀಯರನ್ನು ಅಪಹರಿಸುತ್ತಾನೆ. “ಇದನ್ನು ಅರಿತ ಶ್ರೀಕೃಷ್ಣ ಶಂಖಚೂಢನನ್ನು ಬೆನ್ನೆಟ್ಟಿ ಆತನ ಶಿರಸ್ಸನ್ನೇ ಅಪಹರಿಸಿದ” ಎನ್ನುತ್ತಾನೆ ಚತುರ್ಮುಖ. 
ಕೃಷ್ಣಾವತಾರದ ಕಥೆ ಮುಂದುವರಿಯುತ್ತದೆ......

Friday, September 4, 2015

Shrimad BhAgavata in Kannada -Skandha-02-Ch-07(24)

೨೧. ಕೃಷ್ಣಾವತಾರ

ಭಾಗವತ ಬಲರಾಮ ಮತ್ತು ಕೃಷ್ಣರನ್ನು ಎರಡು ಪ್ರತ್ಯೇಕ ಅವತಾರವೆಂದು ಹೇಳುವುದಿಲ್ಲ. ಇದಕ್ಕೆ ಕಾರಣವೇನೆಂದು ಬ್ರಹ್ಮಪುರಾಣ ವಿವರಿಸುತ್ತದೆ. ಅಲ್ಲಿ ಹೇಳುವಂತೆ: ರಾಮ ಏಕೋ ಹ್ಯನಂತಾಂಶಸ್ತತ್ರ ರಾಮಾಭಿಧೋ ಹರಿಃ । ಶುಕ್ಲಕೇಶಾತ್ಮಕಸ್ತಿಷ್ಠನ್ ರಾಮಯಾಮಾಸ ವೈ ಜಗತ್  ॥ ಇತಿ ಬ್ರಾಹ್ಮೇ ॥ ಶೇಷನೊಳಗೆ ಹರಿ ಶುಕ್ಲಕೇಶರೂಪನಾದ ರಾಮನಾಗಿ ಆವಿಷ್ಠನಾಗಿದ್ದ. ಹೀಗಾಗಿ ಶ್ರೀಕೃಷ್ಣ ಭಗವಂತನ ಸ್ವರೂಪಾವತಾರವಾದರೆ ಬಲರಾಮ ಶೇಷನಲ್ಲಿ ಭಗವಂತನ ಆವೇಶಾವತಾರ.

ಭೂಮೇಃ ಸುರೇತರವರೂಥವಿಮರ್ದಿತಾಯಾಃ ಕ್ಲೇಶವ್ಯಯಾಯ ಕಲಯಾ ಸಿತಕೃಷ್ಣಕೇಶಃ ।
ಜಾತಃ ಕರಿಷ್ಯತಿ ಜನಾನುಪಲಕ್ಷ್ಯಮಾರ್ಗಃ ಕರ್ಮಾಣಿ ಚಾತ್ಮಮಹಿಮೋಪನಿಬಂಧನಾನಿ ॥೨೬॥

ಈ ಅವತಾರದ ಉದ್ದೇಶವೇನು ಎನ್ನುವುದನ್ನು ಇಲ್ಲಿ ಚತುರ್ಮುಖ ನಾರದರಿಗೆ  ವಿವರಿಸುವುದನ್ನು ಕಾಣುತ್ತೇವೆ. ತಾಮಸೀ ಸ್ವಭಾವದ ದುಷ್ಟರು ಭೂಮಿಗೆ ಭಾರವಾದ ಪೀಡಕರಾಗಿ ಈ ದೇಶದ ಆಡಳಿತ ಚುಕ್ಕಾಣಿಯನ್ನು ಹಿಡಿದರು.  ಭೂಮಿ ಅಂಥಹ ದುಷ್ಟರ ಆಡಳಿತಕ್ಕೆ ಸಿಕ್ಕಿ ತತ್ತರಿಸಿ ಹೋಯಿತು. ಜರಾಸಂದ, ಕಂಸ, ಕೀಚಕ, ಹೀಗೆ ಅನೇಕಾನೇಕ ದುಷ್ಟ ಶಕ್ತಿಗಳ ನಿಗ್ರಹಕ್ಕಾಗಿ, ಭೂಮಿಯ ದುಃಖ ಪರಿಹಾರಕ್ಕಾಗಿ  ಶ್ರೀಕೃಷ್ಣನ ಅವತಾರವಾಯಿತು.
ಚತುರ್ಮುಖ ಹೇಳುತ್ತಾನೆ: “ದುಷ್ಟಶಕ್ತಿಗಳನ್ನು ನಿಗ್ರಹಸಿ ಭೂದೇವಿಯ ಕ್ಲೇಶವನ್ನು ಕಳೆಯಲು ಬಿಳಿ-ಕಪ್ಪು ಕೇಶದ ಭಗವಂತ ಬಿಳಿಕೂದಲಿನ ಆವೇಶದಿಂದ ಬಲರಾಮನಾಗಿ, ಕಪ್ಪು ಕೂದಲಿನ ಸ್ವರೂಪದಿಂದ ಕೃಷ್ಣನಾಗಿ ಅವತರಿಸಿ, ತಾನು ಭಗವಂತನೆಂದು ತೋರಗೊಡದೆ, ಭಗವಂತನೊಬ್ಬನಿಂದಲೇ ಸಾಧ್ಯವಾಗುವ ಲೀಲೆಗಳನ್ನು ಭೂಮಿಯ ಮೇಲೆ ತೋರಿದ” ಎಂದು. ಇಲ್ಲಿ ಮೇಲ್ನೋಟಕ್ಕೆ ಭಗವಂತನ ಕೇಶ ವ್ಯತ್ಯಾಸ ಹೇಳಿದಂತೆ ಕಾಣಿಸಿದರೂ ಕೂಡಾ, ಕೇಶವ ಮತ್ತು  ಕೇಶ ಬೇರೆಬೇರೆ ಅಲ್ಲ. ಇದು ಕೇವಲ ಶಕ್ತಿಯ ಸಂಕೇತವಾಗಿ ಹೇಳಿದ ಮಾತು. ಬಿಳಿ ರಕ್ಷಣೆಯ  ಸಂಕೇತವಾದರೆ ಕಪ್ಪು ನಾಶದ ಸಂಕೇತ. ರಕ್ಷಣೆಯಾಗಬೇಕಾದರೆ  ಅಧರ್ಮದ ನಾಶವಾಗಲೇ ಬೇಕು. ಇದನ್ನೇ ಶ್ರೀಕೃಷ್ಣ ಗೀತೆಯಲ್ಲಿ “ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್” ಎಂದು ಹೇಳಿರುವುದು. ಇದನ್ನೇ ನಾವು ಶ್ರೀಕೃಷ್ಣ ಜನ್ಮಾಷ್ಟಮಿಯಂದು ಹೀಗೆ ಹೇಳುತ್ತೇವೆ:  “ಕೌರವಾನಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ, ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾರ್ಥಾಯ ಚ. ಹೀಗೆ ಉದ್ಧಾರದ ಜೊತೆಗೆ ನಾಶ ಇದ್ದೇ ಇರುತ್ತದೆ. ಅಧರ್ಮದ ನಾಶ ಮಾಡಿದರೆ ಮಾತ್ರ ಧರ್ಮದ ಉದ್ಧಾರ ಸಾಧ್ಯ. ಇದನ್ನು ತೋರಿಸುವುದಕ್ಕೋಸ್ಕರ ಎರಡು ಬಣ್ಣದ ಕೂದಲನ್ನು ಇಲ್ಲಿ ಹೇಳಲಾಗಿದೆ. ಭೂಮಿಗೆ ಬಂದ ಈ ಎರಡು ಕೂದಲು ‘ನೀಲಮೇಘಶ್ಯಾಮ’  ಮತ್ತು ‘ಬಲರಾಮ’.

    ತೋಕೇನ ಜೀವಹರಣಂ ಯದುಲೂಪಿಕಾಯಾ ಸ್ಟ್ರೈಮಾಸಿಕಸ್ಯ ಚ ಪದಾ ಶಕಟೋSಪವೃತ್ತಃ ।
    ಯದ್ ರಿಂಗತಾSನ್ತರಗತೇನ ದಿವಿಸ್ಪೃಶೋರ್ವಾ ಉನ್ಮೂಲನಂ ತ್ವಿತರಥಾSರ್ಜುನಯೋರ್ನ ಭಾವ್ಯಮ್ ॥೨೭॥

ಪುಟ್ಟ ಮಗುವಾಗಿದ್ದಾಗಲೇ ದುಷ್ಟ ರಾಕ್ಷಸರನ್ನು ಶ್ರೀಕೃಷ್ಣ ಸಂಹಾರ ಮಾಡಿರುವ ಕಥೆ ನಮಗೆ ತಿಳಿದೇ ಇದೆ. ಅಂಥಹ ಘಟನೆಗಳಲ್ಲಿ ಪೂತನಿಯ ಸಂಹಾರ ಕೃಷ್ಣ ಮಗುವಾಗಿದ್ದಾಗ ನಡೆದ ಮೊದಲ ಘಟನೆ. ಈ ಘಟನೆಯನ್ನು ಇಲ್ಲಿ   ಚತುರ್ಮುಖ ನಾರದರಿಗೆ ವಿವರಿಸುವುದನ್ನು ಕಾಣುತ್ತೇವೆ. ನಮಗೆ ತಿಳಿದಂತೆ ನಂದಗೋಪ-ಯಶೋದೆಯರು ಕಾಡಿನ ಅಥವಾ ಹುಲ್ಲುಗಾವಲಿನ ಪ್ರದೇಶದಲ್ಲಿ ಶಿಬಿರದಲ್ಲಿ ವಾಸಮಾಡುತ್ತಿದ್ದರು. ಅಂಥಹ ಸಮಯದಲ್ಲಿ ಕಂಸನ ಸೆರೆಮನೆಯಲ್ಲಿದ್ದ ವಸುದೇವ-ದೇವಕಿಯರ ಪುತ್ರನಾಗಿ ಶ್ರೀಕೃಷ್ಣ ಅವತಾರ ತಳೆದ. ಅದೇ ಸಮಯದಲ್ಲಿ ನಂದಗೋಪ-ಯಶೋದೆಯರಿಗೆ ಹೆಣ್ಣು ಮಗುವೊಂದು ಜನಿಸಿತು. ದೈವೇಚ್ಛೆಯಂತೆ  ಕೃಷ್ಣನನ್ನು ಕಂಸನಿಂದ ರಕ್ಷಿಸಲು ಈ ಎರಡು ಮಕ್ಕಳನ್ನು ಅದಲು ಬದಲು ಮಾಡಲಾಯಿತು. ಹೀಗಾಗಿ ಸೆರೆಮನೆಯಲ್ಲಿ ಜನಿಸಿದ ಶ್ರೀಕೃಷ್ಣ ನಂದಗೋಪನ ಶಿಬಿರವನ್ನು ಸೇರಿದ. ಅಲ್ಲಿ ತನಗೆ ವಿಷದ ಹಾಲು ಉಣಿಸಿ ಸಾಯಿಸಬೇಕು ಎನ್ನುವ ಉದ್ದೇಶದಿಂದ ಬಂದಿದ್ದ ದುಷ್ಟ ಪೂತನಿಯನ್ನು ಭಗವಂತ ಬಾಲರೂಪದಲ್ಲಿ ನಿಗ್ರಹಿಸಿದ.
ಈ ಶ್ಲೋಕದಲ್ಲಿ ಪೂತನಿಯ ಸಂಹಾರವನ್ನು ವಿವರಿಸುವಾಗ “ಉಲೂಪಿಕಾ” ಎನ್ನುವ ಪದ ಪ್ರಯೋಗ ಮಾಡಲಾಗಿದೆ. ಇತ್ತೀಚೆಗೆ ಮುದ್ರಣಗೊಂಡ ಹಲವು ಪುಸ್ತಕಗಳಲ್ಲಿ ಈ ಪದವನ್ನು ಪಕ್ಷಿ/ಗೂಬೆ ಎನ್ನುವ ಅರ್ಥದಲ್ಲಿ  “ಉಲೂಕಿಕಾ” ಎಂದು ತಪ್ಪಾಗಿ ಮುದ್ರಿಸಿರುವುದನ್ನು ಕಾಣುತ್ತೇವೆ. ಆದರೆ ಪ್ರಾಚೀನ ಪಾಠದಲ್ಲಿ ಆ ರೀತಿ ಪದ ಪ್ರಯೋಗವಿರುವುದಿಲ್ಲ.  ಉಲೂಪಿಕಾ ಎನ್ನುವುದು  ಅನೇಕ ಆಯಾಮಗಳಲ್ಲಿ ಅರ್ಥವನ್ನು ಕೊಡುವ ಭಾಗವತದ ಪ್ರಕ್ರಿಯೆಗೆ ಪೂರಕವಾದ ಪದಪ್ರಯೋಗ. ರ-ಲಯೋಃ ಅಭೇಧಃ ಎನ್ನುವಂತೆ ಇಲ್ಲಿ ಲೂಪ ಎಂದರೆ ರೂಪ. ಹಾಗಾಗಿ ಉಲೂಪ ಎಂದರೆ ಉತ್ಕೃಷ್ಟವಾದ ರೂಪ ಎಂದರ್ಥ. ಪೂತನಿ ಕೃಷ್ಣನಿಗೆ ವಿಷದ ಹಾಲನ್ನು ಉಣಿಸಿ ಸಾಯಿಸಬೇಕು ಎನ್ನುವ ಇಚ್ಚೆಯಿಂದ ಸುಂದರ ಸ್ತ್ರೀ ರೂಪ ತೊಟ್ಟು ಬಂದಿದ್ದಳು. ಅವಳು ಉಲೂಪ ಆದರೂ ಉಲೂಪಿಕ. ಏಕೆಂದರೆ ಸಂಸ್ಕೃತದಲ್ಲಿ ‘ಕನ್’ ಪ್ರತ್ಯಯವನ್ನು ನಿಂದನೀಯ ಎನ್ನುವ ಅರ್ಥದಲ್ಲಿ ಬಳಕೆ ಮಾಡುತ್ತಾರೆ. ವಸ್ತುತಃ ಪೂತನಿ ಚಂದದ ಹುಡುಗಿ ಅಲ್ಲ; ಅವಳು ರಾಕ್ಷಸಿ ಎನ್ನುವುದನ್ನು ಉಲೂಪಿಕಾ ಪದ ವಿವರಿಸುತ್ತದೆ. ಇಷ್ಟೇ ಅಲ್ಲದೆ ಈ ಪದದಲ್ಲಿ ಇನ್ನೊಂದು ದೇವ ಗುಹ್ಯ ಅಡಗಿದೆ. ಪೂತನಿಯ ಒಳಗೆ ರಾಕ್ಷಸೀ ಜೀವದ ಜೊತೆಗೆ ಇನ್ನೊಂದು ಶಾಪಗ್ರಸ್ತವಾದ ಪುಣ್ಯ ಜೀವ ಕೂಡ ಶ್ರೀಕೃಷ್ಣನಿಗೆ ಹಾಲು ಉಣಿಸಿ ತನ್ನ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು ಎಂದು ಕಾದು ಕುಳಿತಿತ್ತು. ಆ ಜೀವ ಇನ್ನಾರೂ ಅಲ್ಲ. ಆಕೆ ಉತ್ಕೃಷ್ಟವಾದ ರೂಪವುಳ್ಳ ಊರ್ವಶಿ.  ಹೀಗೆ ಎರಡು ಜೀವಗಳು ಒಂದೇ ದೇಹದಲ್ಲಿ ಸೇರಿಕೊಂಡು ಕೃಷ್ಣನನ್ನು ಬಯಸುತ್ತಿದ್ದವು. ರಾಕ್ಷಸೀ ಜೀವ ಕೃಷ್ಣನಿಗೆ ವಿಷ ಉಣಿಸಿ ಸಾಯಿಸಬೇಕು ಎಂದು ಬಯಸಿದರೆ, ಪುಣ್ಯಜೀವಿ ಊರ್ವಶಿ ಕೃಷ್ಣನಿಗೆ ತನ್ನ ಎದೆ ಹಾಲನ್ನು ಉಣಿಸಿ ತನ್ನ ಜನ್ಮ ಉದ್ಧಾರ ಮಾಡಿಕೊಳ್ಳಬೇಕು ಎನ್ನುವ ತುಡಿತದಿಂದ ಕಾದು ಕುಳಿತಿದ್ದಳು. ಒಂದೇ ದೇಹ, ಒಂದೇ ಕ್ರಿಯೆ ಆದರೆ ಎರಡು ಬಯಕೆ. ಇವೆಲ್ಲವನ್ನೂ ಇಲ್ಲಿ ಉಲೂಪಿಕ ಎನ್ನುವ ಏಕಪದ ಎರಡು ಆಯಾಮದಲ್ಲಿ ವಿವರಿಸುತ್ತದೆ. ಇದು ಸಂಸ್ಕೃತ ಭಾಷೆಯ ಸೊಬಗು. ವಿಷದ ಹಾಲು ಕುಡಿಸಿ ಸಾಯಿಸಬೇಕು ಎಂದು ಬಂದ ಪೂತನಿಯ ಪ್ರಾಣ ಹರಣ ಮಾಡಿದ ಶ್ರೀಕೃಷ್ಣ, ಉತ್ಕೃಷ್ಟವಾದ ರೂಪವಿರುವ ಪುಣ್ಯಜೀವಿ ಊರ್ವಶಿಯನ್ನು ಶಾಪಮುಕ್ತಗೊಳಿಸಿ  ಉದ್ಧಾರ ಮಾಡಿದ. ಈ ರೀತಿ ಶ್ರೀಕೃಷ್ಣ ಧರ್ಮ ಸಂಸ್ಥಾಪನೆಯ ಕಾರ್ಯ ಪ್ರಾರಂಭ ಮಾಡಿರುವುದೇ ದುಷ್ಟ ಪೂತನೆಯ ಜೀವ ಹರಣದೊಂದಿಗೆ.
ಶ್ರೀಕೃಷ್ಣ ಸುಮಾರು ಮೂರು ತಿಂಗಳಿನವನಿದ್ದಾಗ ಶಕಟಾಸುರನನ್ನು ಸಂಹಾರ ಮಾಡಿದ  ಘಟನೆಯೊಂದನ್ನು ಇಲ್ಲಿ ಚತುರ್ಮುಖ ನಾರದರಿಗೆ ವಿವರಿಸುವುದನ್ನು ಕಾಣುತ್ತೇವೆ.  ಅಂದು ಶ್ರೀಕೃಷ್ಣನ  ಜನ್ಮನಕ್ಷತ್ರ ದಿನ. ಆ ದಿನ ತಾಯಿ ಯಶೋದೆ ಮಗುವನ್ನು ಮನೆಯ ಮುಂದೆ ನಿಂತಿದ್ದ ಗಾಡಿಯ ಕೆಳಗೆ ಮಲಗಿಸಿ ಅಡುಗೆ ಕೆಲಸದಲ್ಲಿ ಮಗ್ನಳಾಗಿದ್ದಳು.  ಉಳಿದವರೆಲ್ಲರೂ ಅವರವರ ಕೆಲಸ ಕಾರ್ಯದಲ್ಲಿ ಮಗ್ನರಾಗಿದ್ದರು. ಹೀಗಾಗಿ ಮಗುವಿನ ಬಳಿ ಕೇವಲ ಗೋಪಬಾಲಕರಷ್ಟೇ ಇದ್ದರು. ಈ ಸಮಯದಲ್ಲಿ ಶಕಟಾಸುರ ಎನ್ನುವ ಮಾಯಾವಿ ರಾಕ್ಷಸ ಮಗುವಿನ ಬಳಿ ಇದ್ದ ಗಾಡಿಯಲ್ಲಿ ಬಂದು ಸೇರಿಕೊಳ್ಳುತ್ತಾನೆ. ಆಗ ಕೃಷ್ಣ ಅಳಲಾರಂಭಿಸುತ್ತಾನೆ. ಆದರೆ ಅಳುತ್ತಿರುವ ಮಗುವನ್ನು ಸಮಾಧಾನಪಡಿಸಲು ಹಿರಿಯರು ಯಾರೂ ಅಲ್ಲಿರುವುದಿಲ್ಲ.  ಆಗ ಕೃಷ್ಣ ಕಾಲನ್ನು ಜಾಡಿಸಿ ಜೋರಾಗಿ ಅಳುತ್ತಾನೆ. ಇದರಿಂದಾಗಿ ಅವನ ಕಾಲು ಬಳಿಯಲ್ಲಿದ್ದ ಗಾಡಿಗೆ ತಾಗುತ್ತದೆ ಮತ್ತು ಆ ರಭಸಕ್ಕೆ ಗಾಡಿ ಉರುಳಿ ಬೀಳುತ್ತದೆ. ಇದರಿಂದ ಅದರಲ್ಲಿ ತುಂಬಿಟ್ಟಿದ್ದ ಹಾಲು, ಮೊಸರು ಎಲ್ಲವೂ ನಷ್ಟವಾಗುತ್ತದೆ. ಜೊತೆಗೆ ಅದರಲ್ಲಿ ಅವಿತು ಕುಳಿತಿದ್ದ ಶಕಟಾಸುರನ ಸಂಹಾರವಾಗುತ್ತದೆ.  ಇಷ್ಟೆಲ್ಲಾ ಆದರೂ ಮಗುವಿಗೆ ಮಾತ್ರ ಏನೂ ಆಗುವುದಿಲ್ಲ. ಗಾಬರಿಯಿಂದ ಸೇರಿದ ಹಿರಿಯರೆಲ್ಲರನ್ನೂ ನೋಡಿ ಕೃಷ್ಣ ನಗುತ್ತಿದ್ದ. ಈ ಘಟನೆಯ ನಂತರ ಗೋಪಬಾಲಕರು ಮಗುವಿನ ಕಾಲು ತಾಗಿ ಗಾಡಿ ಉರುಳಿ ಬಿತ್ತು ಎನ್ನುವ ಸತ್ಯವನ್ನು ಹಿರಿಯರಿಗೆ ಹೇಳಿದರೆ ಅದನ್ನು ಯಾರೂ ನಂಬುವುದಿಲ್ಲ. ಈ ರೀತಿ ಭಗವಂತನೆಂದು ತೋರಗೊಡದೆ, ಭಗವಂತನೊಬ್ಬನಿಂದಲೇ ಸಾಧ್ಯವಾಗುವ ಲೀಲಗಳನ್ನು ಶ್ರೀಕೃಷ್ಣ ಬಾಲ್ಯದಲ್ಲೇ ತೋರಿದ.
ಕೃಷ್ಣ ಸುಮಾರು ಎರಡು ವರ್ಷದವನಿದ್ದಾಗ ಆತನ ತುಂಟತನ ತಾಳಲಾರದೇ ಯಶೋದೆ ಆತನನ್ನು ಅವಲಕ್ಕಿ ಕುಟ್ಟುವ ಜಿಡ್ಡೆಗೆ ಕಟ್ಟಿ ಹಾಕುತ್ತಾಳೆ. ಕೃಷ್ಣ ಆ  ಜಿಡ್ಡೆಯನ್ನು ಎಳೆದುಕೊಂಡು ಕಾಡಿನತ್ತ ಹೋಗುತ್ತಾನೆ. ಇದನ್ನು ಯಾರೂ ಗಮನಿಸುವುದಿಲ್ಲ. ಅಲ್ಲಿ ಸಮೀಪದಲ್ಲಿ ಎರಡು ಬೃಹತ್ ಗಾತ್ರದ ಮತ್ತೀ ಮರಗಳಿದ್ದವು. ಅವು ಆ ಪರಿಸರದಲ್ಲಿರುವ ಎಲ್ಲಾ ಮರಗಳಿಗಿಂತ ಅತ್ಯಂತ ಎತ್ತರದ ಗಗನಚುಂಬಿ ಮರಗಳಾಗಿದ್ದವು. [ದಿವಿಸ್ಪೃಶೋಃ ಅಥವಾ ಗಗನಚುಂಬಿ ಎನ್ನುವ ಪದದ ಅರ್ಥವನ್ನು ಆಚಾರ್ಯ ಮಧ್ವರು ತಂತ್ರಮಾಲ ಗ್ರಂಥದ ಆಧಾರ ಸಹಿತ ವಿವರಿಸುತ್ತಾ ಹೇಳುತ್ತಾರೆ: “ಸಹಸ್ರ ಧನುಷಸ್ತೂರ್ಧ್ವಂ ದ್ಯುಶಬ್ದೇನಾಪಿ ಭಣ್ಯತೇ । ಇತಿ ತಂತ್ರಮಾಲಾಯಾಂ”  ಯಾವ ಮರ ಒಂದು ಸಾವಿರ ಧನುಃಪ್ರಮಾಣಕ್ಕಿಂತ (ಒಂದು ಸಾವಿರ ಗಜಕ್ಕಿಂತ)  ಎತ್ತರ ಇರುತ್ತದೋ ಅದನ್ನು ದಿವಿಸ್ಪೃಶೋಃ ಅಥವಾ ಗಗನಚುಂಬಿ  ಎಂದು ಕರೆಯುತ್ತಾರೆ] ಕೃಷ್ಣ ಆ ಎರಡು ಮರಗಳ ನಡುವೆ ಆಚೆ ಹೋದಾಗ ಜಿಡ್ಡೆ ಮರಗಳ ನಡುವೆ ಸಿಕ್ಕಿ ಮರಗಳು ತುಂಡಾಗಿ ಬೀಳುತ್ತವೆ. ಇದು ಭಗವಂತನ ಸ್ವರೂಪ ಸಾಮರ್ಥ್ಯದಿಂದ ನಡೆದ ಘಟನೆ. ಏಕೆಂದರೆ ಈ ಕಾರ್ಯವನ್ನು ಮಗುವೇಕೆ, ಪ್ರಬುದ್ಧನಾದವರೂ ಮಾಡಲು ಸಾಧ್ಯವಿಲ್ಲ. ಇಲ್ಲಿ ಯಮಳಾರ್ಜುನ ಮರದ ರೂಪದಲ್ಲಿ ನಿಂತಿದ್ದವರು  ಶಾಪಗ್ರಸ್ಥ ದೇವತೆಗಳಾಗಿದ್ದರು. ಇವರು ಅಪ್ಸರ ಸ್ತ್ರೀಯರ ಜೊತೆ ಭೋಗದಲ್ಲಿ ನಿರತರಾಗಿ, ಎಚ್ಚರತಪ್ಪಿ ನಾರದಾದಿ ಋಷಿಗಳನ್ನು ನಿರ್ಲಕ್ಷಿಸಿ ಶಾಪಗ್ರಸ್ಥರಾದ ‘ನಳಕೂಬರ ಮತ್ತು ಮಣಿಗ್ರೀವ’ ಎನ್ನುವ ಕುಬೇರನ ಇಬ್ಬರು ಮಕ್ಕಳು. ಈ ಘಟನೆಯಿಂದ ಅವರಿಬ್ಬರಿಗೂ ಶಾಪ ವಿಮೋಚನೆಯಾಗುತ್ತದೆ. ಅವರು ಭಗವಂತನಲ್ಲಿ ಶರಣಾಗಿ “ಇನ್ನೆಂದೂ ನಾವು ಎಚ್ಚರ ತಪ್ಪಿ ನಡೆಯುವುದಿಲ್ಲ” ಎಂದು ಮಾತು ಕೊಟ್ಟು ದೇವಲೋಕಕ್ಕೆ  ಹಿಂತಿರುಗುತ್ತಾರೆ. ಈ ಘಟನೆಯಿಂದ ಗಾಬರಿಗೊಂಡ ನಂದಗೋಪ ದೃಷ್ಟಿ ತೆಗೆದು ದೇವರು ರಕ್ಷಣೆ ಮಾಡಲಿ ಎಂದು ಶಾಂತಿ ಮಂತ್ರ ಪಠಣ ಮಾಡಿಸಿದನಂತೆ! ಇವೆಲ್ಲವೂ ಬಾಲರೂಪದಲ್ಲಿ ಭಗವಂತ ತೋರಿದ ಅಸಾಮಾನ್ಯ ಲೀಲಾ ವಿನೋದ ಮತ್ತು ದುಷ್ಟ ಸಂಹಾರ.  

ಯದ್ವೈ ವ್ರಜೇ ವ್ರಜಪಶೂನ್ ವಿಷತೋಯಪೀತಾನ್ ಗೋಪಾಂಸ್ತುಜೀವಯದನುಗ್ರಹದೃಷ್ಟಿವೃಷ್ಟ್ಯಾ ।
ತಚ್ಛುದ್ಧಯೇSತಿವಿಷವೀರ್ಯವಿಲೋಲಜಿಹ್ವಮುಚ್ಚಾಟಯಿಷ್ಯದುರಗಂ ವಿಹರದ್ ಹ್ರದಿನ್ಯಾಮ್ ॥೨೮॥

ತತ್ ಕರ್ಮ ದಿವ್ಯಮಿವ ಯನ್ನಿಶಿ ನಿಃಶಯಾನಂ ದಾವಾಗ್ನಿನಾSSಶು ವಿಪಿನೇ ಪರಿದಹ್ಯಮಾನೇ ।
ಉನ್ನೇಷ್ಯತಿ ವ್ರಜಮಿತೋSವಸಿತಾಂತಕಾಲಂ ನೇತ್ರೇ ಪಿಧಾಯ ಸಬಲೋSನಧಿಗಮ್ಯವೀರ್ಯಃ ॥೨೯॥

ಯಮುನಾ ನದಿ ತೀರದಲ್ಲಿ ನಡೆದ ಕಾಲಿಯ ಮರ್ದನ ಮತ್ತು ಇತರ ಘಟನೆಗಳನ್ನು ವಿವರಿಸುತ್ತಾ ಚತುರ್ಮುಖ ಹೇಳುತ್ತಾನೆ: “ಇದು ಅತ್ಯಂತ ಪ್ರಶಂಸಾರ್ಹವಾದ(ದಿವ್ಯ) ಕರ್ಮ. ಆದರೆ ಇಡೀ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ ಭಗವಂತನಿಗೆ ಇದು ಅತ್ಯಂತ ಸಣ್ಣ ಸಂಗತಿ (ದಿವ್ಯಮಿವ)” ಎಂದು.
ಒಮ್ಮೆ ಯಮನಾ ನದಿ ತೀರದಲ್ಲಿ ಗೋಪಾಲಕರು ಶ್ರೀಕೃಷ್ಣನೊಂದಿಗೆ ಗೋವುಗಳನ್ನು ಕಾಯುತ್ತಿರುವಾಗ ಬಾಯಾರಿದ ಹಸುಗಳು ಮತ್ತು ಕೆಲ ಗೋಪಾಲಕರು ನದಿಯ ನೀರನ್ನು ಕುಡಿಯುತ್ತಾರೆ. ಹೀಗೆ ನೀರು ಕುಡಿದ ತಕ್ಷಣ ಅವರು ಪ್ರಜ್ಞೆ ತಪ್ಪಿ ಬಿದ್ದು ಬಿಡುತ್ತಾರೆ. ಇದನ್ನು ನೋಡಿದ ಕೃಷ್ಣ ನದಿ ತೀರದಲ್ಲಿನ ಒಂದು ಮರವನ್ನು ಏರಿ ಅಲ್ಲಿಂದ ನದಿಗೆ ದುಮುಕುತ್ತಾನೆ.  ಹೀಗೆ ನೀರಿಗೆ ಹಾರಿದ ಕೃಷ್ಣ ಕೆಲವು ಹೊತ್ತು ಮೇಲೆ ಬರುವುದೇ  ಇಲ್ಲ. ಆನಂತರ ನೋಡಿದರೆ ಎಲ್ಲಾ ಕಡೆಯಿಂದಲೂ ಬಿಗಿ ಹಿಡಿದಿರುವಂತೆ ಕಾಣುವ ಹಾವಿನೊಂದಿಗೆ ಕೃಷ್ಣ ಮೇಲೆ ಬರುತ್ತಾನೆ.ಈ ಭಯಾನಕ ದೃಶ್ಯವನ್ನು ಕಂಡ ಗೋಪಾಲಕರು ಓಡಿ ಬಂದು ನಂದಗೋಪ-ಯಶೋದೆಯರಿಗೆ ವಿಷಯ ತಿಳಿಸುತ್ತಾರೆ. ಇದರಿಂದ ಎಲ್ಲರಿಗೂ ಗಾಬರಿಯಾಗುತ್ತದೆ. ಆದರೆ ಬಲರಾಮ ಮಾತ್ರ ನಿಶ್ಚಿಂತನಾಗಿ “ಹೆದರಬೇಡಿ, ಕೃಷ್ಣನಿಗೆ ಏನೂ ಆಗುವುದಿಲ್ಲ” ಎಂದು ಧೈರ್ಯ ಹೇಳುತ್ತಾನೆ. ಎಲ್ಲರೂ  ಓಡಿಕೊಂಡು ನದಿತೀರಕ್ಕೆ ಬರುತ್ತಾರೆ. ಬಂದು ನೋಡಿದರೆ ಕಾಲಿಯ ಮನಮಾಣಿಕ್ಯ ರಂಜಿತ ಪದಾಂಭುಜನಾಗಿ ಶ್ರೀಕೃಷ್ಣ ನಿಂತಿದ್ದಾನೆ! ಈ ರೀತಿ ಕಾಲಿಯನನ್ನು ಮಣಿಸಿ ಅವನನ್ನು ಅಲ್ಲಿಂದ ಕಳುಹಿಸಿ ಕೃಷ್ಣ ನದಿಯಿಂದ ಮೇಲೆ ಬರುತ್ತಾನೆ.
ಕೃಷ್ಣ ಹಾವಿನ ಹೆಡೆಯೇರಿ ನಿಂತಿದ್ದನ್ನು ಕಂಡು ಎಲ್ಲರೂ ವಿಸ್ಮಿತರಾಗುತ್ತಾರೆ. ಕೃಷ್ಣ ನದಿಯಿಂದ ಮೇಲೆ ಬರುವ ತನಕ ಅವರೆಲ್ಲರಿಗೂ ಭಯ. ಆದರೆ ಮೇಲೆ ಬಂದ ಕೃಷ್ಣ ಪ್ರಜ್ಞೆ ತಪ್ಪಿದ ಎಲ್ಲರನ್ನು ಎಚ್ಚರಿಸುತ್ತಾನೆ.  ಆ ಸಮಯದಲ್ಲಿ ಆಗಲೇ ಕತ್ತಲಾಗಿರುತ್ತದೆ. ಹೀಗಾಗಿ ಕಾಡಿನಲ್ಲಿ ಹಿಂತಿರುಗಿ ಮನೆ ಸೇರುವುದು ಸಾಧ್ಯವಾಗದ ಕಾರಣ ಎಲ್ಲರೂ ಅಂದು ಅಲ್ಲೇ ತಂಗುವ ನಿರ್ಧಾರ ಮಾಡಿ ಅಲ್ಲೇ ಮಲಗುತ್ತಾರೆ. ಎಲ್ಲರಿಗೂ ನಿದ್ದೆ ಬಂದಿರುವ ಸಮಯದಲ್ಲಿ ಅವರಿದ್ದ ಸ್ಥಳದ ಸುತ್ತಲೂ ಕಾಳ್ಗಿಚ್ಚು ಆವರಿಸುತ್ತದೆ. ಆಗ ಗಾಬರಿಯಿಂದ ಎಚ್ಚರಗೊಂಡ ಎಲ್ಲರೂ ತಮ್ಮ ಕೊನೆಗಾಲ ಸಮೀಪಿಸಿತು, ನಾವಿನ್ನು ಬದುಕುವುದಿಲ್ಲ ಎನ್ನುವ ಭಾವನೆಯಿಂದ ಭಯಭೀತರಾಗುತ್ತಾರೆ. “ಆಗ ಕೃಷ್ಣ ತೋರಿದ ಚಮತ್ಕಾರ ಎಲ್ಲರೂ ಸ್ತೋತ್ರಮಾಡಿ ನೆನೆದುಕೊಳ್ಳಬೇಕಾಗಿರುವಂಥಹದ್ದು” ಎಂದಿದ್ದಾನೆ ಚತುರ್ಮುಖ. ಕೃಷ್ಣ ಸುತ್ತಲೂ ಆವರಿಸಿರುವ ಬೆಂಕಿಯನ್ನು ತನ್ನ ಬಾಯಲ್ಲಿ ಸೇವಿಸಿ ಎಲ್ಲರನ್ನೂ ರಕ್ಷಿಸಿ ವೃಂದಾವನಕ್ಕೆ ಕರೆದುಕೊಂಡು ಹೋಗುತ್ತಾನೆ.
ಇನ್ನೊಮ್ಮೆ ಮುಂಜಾಟವಿ ಎನ್ನುವ ಹುಲ್ಲುಗಾವಲು ಪ್ರದೇಶದಲ್ಲಿ ಮನುಷ್ಯನ ಗಾತ್ರಕ್ಕಿಂತಲೂ ಎತ್ತರಕ್ಕೆ ಬೆಳೆದುನಿಂತ ಮೌಂಜಿ ಅಥವಾ ಮುಳಿ ಎನ್ನುವ ಹುಲ್ಲಿನ ನಡುವೆ ಗೋವುಗಳು ಸೇರಿಕೊಂಡಿರುವ ಸಮಯದಲ್ಲಿ ಅವುಗಳನ್ನು ಹುಡುಕುತ್ತಾ/ಕರೆಯುತ್ತಾ ಹೋಗುತ್ತಿದ್ದ ಗೋಪಾಲಕರು ಸುತ್ತಲೂ ಆವರಿಸಿರುವ ಕಾಲ್ಗಿಚ್ಚನ್ನು ಕಂಡು ಭಯಬೀತರಾಗುತ್ತಾರೆ. ಆಗ ಶ್ರೀಕೃಷ ಎಲ್ಲರ ಬಳಿ ಕಣ್ಣುಮುಚ್ಚುವಂತೆ ಹೇಳುತ್ತಾನೆ. ಈ ರೀತಿ ಕಣ್ಮುಚ್ಚಿ ತೆರೆದಾಗ ಅಲ್ಲಿ ಯಾವ ಬೆಂಕಿಯೂ ಇರುವುದಿಲ್ಲ. ಈ ರೀತಿ ಎರಡು ಬಾರಿ ಭಗವಂತ ಅಗ್ನಿಪಾನ ಮಾಡಿ ಸೃಷ್ಟಿ ಆದಿಯಲ್ಲಿ ತನ್ನ ಮುಖದಿಂದ ಅಗ್ನಿ ಸೃಷ್ಟಿಯಾಯಿತು ಎನ್ನುವುದನ್ನು ಎಲ್ಲರಿಗೂ ತೋರಿದ.

ಗೃಹ್ಣೀತ ಯದ್ಯದುಪಬದ್ಧುಮಮುಷ್ಯ ಮಾತಾ ಶುಲ್ಬಂ ಸುತಸ್ಯ ನತು ತತ್ತದಮುಷ್ಯ ಮಾತಿ ।
ಯಜ್ಜೃಂಭತೋSಸ್ಯ ವದನೇ ಭುವನಾನಿ ಗೋಪೀ ಸಂವೀಕ್ಷ್ಯ ಶಂಕಿತಮನಾಃ ಪ್ರತಿಬೋಧಿತಸ್ಯ ॥೩೦॥

ಒಮ್ಮೆ ಯಶೋದೆ ಕೃಷ್ಣನನ್ನು ಕಟ್ಟಿ ಹಾಕಬೇಕು ಎಂದು ಹಗ್ಗ ತರುತ್ತಾಳೆ. ಆದರೆ ಯಾವ ಹಗ್ಗದಿಂದಲೂ ಆಕೆಗೆ ಕೃಷ್ಣನನ್ನು ಕಟ್ಟಲು ಸಾಧ್ಯವಾಗುವುದಿಲ್ಲ. ಎಲ್ಲಾ ಹಗ್ಗವೂ ಕೂಡಾ  ಕೃಷ್ಣನ ಮುಂದೆ ಚಿಕ್ಕದಾಗುತ್ತದೆ. ಆಚಾರ್ಯ ಮಧ್ವರು ಈ ಘಟನೆಯನ್ನು ತಮ್ಮ ಯಮಕ ಭಾರತದಲ್ಲಿ “ತನ್ಮಾತಾ ಕೋಪವಿತಾ ತಮನುಸಸಾರಾತ್ಮ-ವಾದವಾಕೋಪಮಿತ…” ಎಂದು ಬಹಳ ಸುಂದರವಾಗಿ ವಿವರಿಸಿದ್ದಾರೆ. ಭಗವಂತನ ಗುಣಗಾನ ಮಾಡಲು ಶ್ರುತಿವಾಣಿ ಹೇಗೆ ಅವನ ಹಿಂದೆ ಓಡುತ್ತವೋ ಹಾಗೆ, ತಾಯಿ ಯಶೋದೆ ಕೃಷ್ಣನ ತುಂಟತನಕ್ಕೆ ಕೋಪಗೊಂಡು ಆತನ ಬೆನ್ನ ಹಿಂದೆ ಓಡಿದಳಂತೆ. ಆದರೆ ಅವಳಿಗೆ ಕೃಷ್ಣನನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ. ಇದರಿಂದ ಕೃಷ್ಣ ತಾನು ಅನಂತ ಎನ್ನುವುದನ್ನು ತಾಯಿಗೆ ತೋರಿದ. (ಆನಂತರ ತಾಯಿಯ ಮೇಲಿನ ಪ್ರೀತಿಯಿಂದ ಕೃಷ್ಣ ತಾನೇ ತಾಯಿಯ ಕೈಯಿಂದ ತನ್ನನ್ನು ಕಟ್ಟಿಸಿಕೊಂಡ).
ಒಮ್ಮೆ ತಾಯಿಯ ತೊಡೆಯ ಮೇಲೆ ಮಲಗಿದ್ದ ಕೃಷ್ಣ  ಆಕಳಿಸುತ್ತಾನೆ. ಆಗ ಆತನ ಬಾಯಿಯಲ್ಲಿ ಯಶೋದೆ ಇಡೀ ವಿಶ್ವವನ್ನೇ ಕಾಣುತ್ತಾಳೆ. ಮಗುವಿನ ಪುಟ್ಟ ಬಾಯಿಯಲ್ಲಿ ತನ್ನನ್ನೂ ಸೇರಿ ಇಡೀ ವಿಶ್ವವನ್ನು ಕಂಡ ಯಶೋದೆ ಗಾಬರಿಯಾಗುತ್ತಾಳೆ. “ಇದು ಕೇವಲ ನನ್ನ ಮಗನಲ್ಲ. ಇದೊಂದು ದಿವ್ಯ ಶಕ್ತಿ” ಎನ್ನುವ ಅರಿವು ಅವಳಿಗಾಗುತ್ತದೆ. ಆದರೆ ಮರುಕ್ಷಣದಲ್ಲೇ ಕೃಷ್ಣ “ನನ್ನ ಮಗು” ಎಂದು ಕೃಷ್ಣನನ್ನು ಮುದ್ದಿಸುತ್ತಾಳೆ ತಾಯಿ!
ಇನ್ನೊಮ್ಮೆ ಕೃಷ್ಣ ಮಣ್ಣು ತಿನ್ನುತ್ತಿದ್ದಾನೆ ಎಂದು ಗೋಪಬಾಲಕರು ತಾಯಿ ಯಶೋದೆಗೆ ತಿಳಿಸುತ್ತಾರೆ. ಆದರೆ ಮಣ್ಣು ತಿಂದಿದ್ದ ಕೃಷ್ಣ ತಾಯಿಯಲ್ಲಿ “ತಾನು ಮಣ್ಣು ತಿಂದಿಲ್ಲ” ಎಂದು ಸುಳ್ಳು ಹೇಳುತ್ತಾನೆ. ಇದರಿಂದ ಕೋಪಗೊಂಡ ಯಶೋದೆ ಆತನಲ್ಲಿ ಬಾಯಿ ತೆರೆದು ತೋರಿಸುವಂತೆ ಹೇಳುತ್ತಾಳೆ. ಆಗ ಕೃಷ್ಣ ಎರಡನೇ ಬಾರಿ ಯಶೋದೆಗೆ  ತನ್ನ ಬಾಯಿಯಲ್ಲಿ ವಿಶ್ವರೂಪ ದರ್ಶನ ನೀಡುತ್ತಾನೆ. ಕೃಷ್ಣಾವತಾರದಲ್ಲಿ ಭಗವಂತ ತಾಯಿ ಯಶೋದೆಗಲ್ಲದೆ ದೃತರಾಷ್ಟ್ರ, ಉದಂಕ ಮತ್ತು ಅರ್ಜುನನಿಗೂ ವಿಶ್ವರೂಪ ದರ್ಶನ ನೀಡಿರುವುದನ್ನು ಮಹಾಭಾರತ ತಿಳಿಸುತ್ತದೆ. ಆದರೆ ಪ್ರತಿಯೊಂದು ವಿಶ್ವರೂಪ ದರ್ಶನವೂ ಅವರವರ ಅರ್ಹತೆಗನುಗುಣವಾಗಿ ತೆರೆದುಕೊಂಡಿದೆ. ಅರ್ಜುನ ಕಂಡ ವಿಶ್ವರೂಪ ಬಹಳ ಘನವಾದುದು. ತಾಯಿ ಯಶೋದೆಗೆ ತನ್ನೊಳಗೆ ತುಂಬಿರುವ ವಿಶ್ವವನ್ನು ತೋರಿದ ಕೃಷ್ಣ, ಅರ್ಜುನನಿಗೆ ಒಳಗೂ ಹೊರಗೂ ತಾನು ತುಂಬಿರುವುದನ್ನು ತೂರಿದ. ಒಟ್ಟಿನಲ್ಲಿ ಎಲ್ಲರೊಳಗೂ ಭಗವಂತನಿದ್ದಾನೆ,  ಭಗವಂತನೊಳಗೆ ಎಲ್ಲವೂ ಇದೆ ಎನ್ನುವುದನ್ನು ಕೃಷ್ಣ ತನ್ನ ವಿಶ್ವರೂಪ ದರ್ಶನದಲ್ಲಿ ತೋರಿದ.   

   ನಂದಂ ಚ ಮೋಕ್ಷ್ಯತಿ ಭಯಾದ್ ವರುಣಸ್ಯ ಪಾಶಾದ್ ಗೋಪಾನ್ ಬಿಲೇಷು ಪಿಹಿತಾನ್ ಮಯಸೂನುನಾ ಚ ।
   ಜಲ್ಪ್ಯಾವೃತಂ ನಿಶಿ ಶಯಾನಮತಿಶ್ರಮೇಣ ಲೋಕೇ ವಿಕುಂಠ ಉಪಧಾಸ್ಯತಿ ಗೋಕುಲಂ ಸ್ಮಃ ॥೩೧॥

ಒಮ್ಮೆ ನಂದಗೋಪ ಏಕಾದಶಿಯ ಉಪವಾಸ ಮುಗಿಸಿ ದ್ವಾದಶಿಯ ದಿನದಂದು ಬೆಳಿಗ್ಗೆ ಸ್ನಾನಕ್ಕೆಂದು ಹೋದವನು ಹಿಂದಿರುಗಿ ಬರುವುದಿಲ್ಲ. ಅಲ್ಲಿ ವರುಣನ ಸೇವಕನಾಗಿರುವ ಒಬ್ಬ ರಾಕ್ಷಸ ಆತನಿಗೆ ಪಾಶವನ್ನು ಹಾಕಿ ಆತನನ್ನು ವರುಣ ಲೋಕಕ್ಕೆ ಕರೆದುಕೊಂಡು ಹೋಗುತ್ತಾನೆ. ಇತ್ತ ನಂದಗೋಪ ಕಾಣೆಯಾಗಿರುವುದರಿಂದ ಎಲ್ಲರಿಗೂ ಗಾಬರಿ. ಆದರೆ ಕೃಷ್ಣ ಎಲ್ಲರನ್ನೂ ಸಮಾಧಾನಗೊಳಿಸಿ ತಾನೂ ನಂದಗೋಪ ಕಾಣೆಯಾದ ಸ್ಥಳದಲ್ಲೇ ನೀರಿಗೆ ದುಮುಕಿ ನೇರವಾಗಿ ವರುಣಲೋಕಕ್ಕೆ ಬರುತ್ತಾನೆ. ಅಲ್ಲಿ ವರುಣ ಕೃಷ್ಣನ ಕಾಲಿಗೆ ಬಿದ್ದು ಕ್ಷೆಮೆ ಕೇಳಿ ನಂದಗೋಪನನ್ನು ಅರ್ಪಿಸುತ್ತಾನೆ. ಕೃಷ್ಣ ನಂದಗೋಪನೊಂದಿಗೆ ನೀರಿನಿಂದ ಮೇಲೆದ್ದು ಬಂದಿದ್ದನ್ನು ಕಂಡು ಎಲ್ಲರೂ ಸಂಭ್ರಮಿಸುತ್ತಾರೆ.
ಇನ್ನೊಮ್ಮೆ ನಂದಗೋಪ ಕಾಡಿನಲ್ಲಿ ಹೋಗುತ್ತಿರುವಾಗ ಒಂದು ಹೆಬ್ಬಾವು ಆತನನ್ನು ಹಿಡಿದು ನುಂಗಲಾರಂಭಿಸುತ್ತದೆ. ಇದನ್ನು ಕಂಡ ಜನ ಗಾಬರಿಯಾಗಿ ಕೃಷ್ಣನಿಗೆ ವಿಷಯ ತಿಳಿಸುತ್ತಾರೆ. ಕೃಷ್ಣ ಆ ಹಾವನ್ನು ಸೀಳಿ ನಂದಗೊಪನನ್ನು ಬಿಡಿಸುತ್ತಾನೆ. ಕೃಷ್ಣ ಹೆಬ್ಬಾವಿನ ದೇಹವನ್ನು ಸೀಳಿದಾಗ ಅಲ್ಲಿ ಹೆಬ್ಬಾವು ಕಣ್ಮರೆಯಾಗಿ ಒಬ್ಬ ಸುಂದರನಾದ ಯುವಕ ಪ್ರತ್ಯಕ್ಷನಾಗುತ್ತಾನೆ. ಆತನೇ ಶಾಪಗ್ರಸ್ಥನಾಗಿ ಹೆಬ್ಬಾವಿನ ರೂಪದಲ್ಲಿದ್ದ ವಿಧ್ಯಾಧರ ಸುದರ್ಶನ. ಕೃಷ್ಣ ಆತನ ಶಾಪ ವಿಮೋಚನೆ ಮಾಡಿ ಬಿಡುಗಡೆ ನೀಡುತ್ತಾನೆ.
ಒಮ್ಮೆ ಅಸುರಶಿಲ್ಪಿ ಮಾಯಾನ ಮಗ ವ್ಯೋಮ  ಆಟವಾಡುತ್ತಿರುವ ಗೋಪಬಾಲಕರೊಬ್ಬಬ್ಬರನ್ನೇ ಅಪಹರಿಸಿ ಪರ್ವತದ ಬಿಲದೊಳಗೆ ಅವಿಸಿ ಇಡುತ್ತಿದ್ದ. ಆಟವಾಡುತ್ತಿದ್ದ ಬಾಲಕರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ಕೃಷ್ಣ ಆ ಅಸುರನನ್ನು ಬೆನ್ನೆಟ್ಟಿ ಆತನ ಸಂಹಾರ ಮಾಡಿ ಗೋಪಬಾಲಕರನ್ನು ಬಿಡುಗಡೆಗೊಳಿಸುತ್ತಾನೆ.
ಒಮ್ಮೆ ಒಂದು ಅತ್ಯದ್ಭುತವಾದ ಘಟನೆ ನಡೆಯುತ್ತದೆ. ಗೋಕುಲದಲ್ಲಿನ ಜನರು  ಶಾಸ್ತ್ರ ಜ್ಞಾನ ಉಳ್ಳವರಾಗಿರಲಿಲ್ಲ. ಇಂಥಹ ಜನರಿಗೆ ಒಂದು ಯೋಚನೆ ಬರುತ್ತದೆ. ಅದೇನೆಂದರೆ: “ಕೃಷ್ಣ ಮನಸ್ಸು ಮಾಡಿದರೆ ನಮಗೆ ವೈಕುಂಠ ದರ್ಶನ ಮಾಡಿಸಬಲ್ಲ” ಎನ್ನುವ ಯೋಚನೆ. ಜೀವನದ ಜಂಜಡದಲ್ಲಿ ಬಿದ್ದು ಶಾಸ್ತ್ರದ ಅರಿವಿಲ್ಲದೇ ಬೆಳೆದ ಸಾಮಾನ್ಯ ಜನರ ಅಪೇಕ್ಷೆಯನ್ನು ಅವರಿಗೆ ವೈಕುಂಠ ದರ್ಶನ ನೀಡಿ ಕೃಷ್ಣ ಈಡೇರಿಸುತ್ತಾನೆ. ಇಲ್ಲಿ ನಮಗೆ ತಿಳಿಯುವುದೇನೆಂದರೆ ಭಗವಂತನ ಪ್ರೀತಿಗೆ ಪಾತ್ರರಾಗಲು ಮೊದಲು ನಮ್ಮಲ್ಲಿರಬೇಕಾದ ಗುಣ ಮುಗ್ಧತೆ. ಇದನ್ನು ಬಿಟ್ಟು ಶಾಸ್ತ್ರ ತಿಳಿದಿದೆ ಎಂದು ಅಹಂಕಾರ ಪಟ್ಟರೆ ಭಗವಂತನ ದರ್ಶನ ಸಾಧ್ಯವಿಲ್ಲ.
ಹೀಗೆ ಇನ್ನ್ಯಾವುದೇ ಅವತಾರದಲ್ಲಿ ತೋರದ ಅಸಾಮಾನ್ಯ ಮಹಿಮೆಯನ್ನು ಸಾಮಾನ್ಯ ಜನರಿಗೆ ತೋರಿದ ಭಗವಂತನ ವಿಶೇಷ ಅವತಾರ ಕೃಷ್ಣಾವತಾರ. ಕೃಷ್ಣಾವತಾರದಲ್ಲಿ ಭಗವಂತ ಮನುಷ್ಯರೂಪದಲ್ಲಿದ್ದು,  ಅತಿಮಾನುಷ ಲೀಲೆಗಳನ್ನು ತೋರಿದ. [ಇಲ್ಲಿ ನಾರದರಿಗೆ ಕೃಷ್ಣಾವತಾರವನ್ನು ವಿವರಿಸುತ್ತಿರುವ ಚತುರ್ಮುಖ “ಭಗವಂತ ಕೃಷ್ಣ ರೂಪಿಯಾಗಿ ಬಂದು ಈ ಎಲ್ಲಾ ಲೀಲೆಗಳನ್ನು ತೋರಲಿದ್ದಾನೆ” ಎಂದು ಭವಿಷ್ಯತ್ ಕಾಲದಲ್ಲಿ ವಿವರಿಸಿರುವುದನ್ನು ಕಾಣುತ್ತೇವೆ. ಏಕೆಂದರೆ ನಾರದ ಚತುರ್ಮುಖ ಸಂವಾದ ನಡೆದದ್ದು ಕೃಷ್ಣಾವತಾರಕ್ಕೂ ಮೊದಲು. ಹೀಗಾಗಿ ಮುಂದೆ ನಡೆಯಲಿರುವ ಭಗವಂತನ ಅವತಾರ ವಿವರಣೆಯನ್ನು ಮೊದಲೇ ಚತುರ್ಮುಖ ನಾರದರಿಗೆ ವಿವರಿಸಿದ್ದಾನೆ ಎನ್ನುವುದನ್ನು ಓದುಗರು ತಿಳಿಯಬೇಕು]

ಕೃಷ್ಣಾವತಾರದ ಕಥೆ ಮುಂದುವರಿಯುತ್ತದೆ......

Wednesday, August 26, 2015

Shrimad BhAgavata in Kannada -Skandha-02-Ch-07(23)

೨೦. ರಾಮಾವತಾರ

ಭಗವಂತನ ಒಂದು ಅವತಾರದಲ್ಲೇ ಇನ್ನೊಂದು ಅವತಾರದ ಬೀಜಕ್ಷೇಪವಿರುತ್ತದೆ. ಅದೇ ರೀತಿ ಪರಶುರಾಮ ಅವತಾರ ರಾಮಾವತಾರಕ್ಕೆ ಬೀಜಕ್ಷೇಪ. ಎಲ್ಲಾ  ಕ್ಷತ್ರಿಯರನ್ನು ಕೊಂದ ಪರಶುರಾಮ ರಾವಣನನ್ನು ಕೊಲ್ಲಲಿಲ್ಲ. ಅಷ್ಟೇ ಅಲ್ಲ, ಕ್ಷತ್ರಿಯರನ್ನು ಬೇಟೆಯಾಡುತ್ತಾ ಅಯೋಧ್ಯೆಗೆ ಹೋದ ಪರಶುರಾಮ ಅಲ್ಲಿ ರಘುವಂಶದ ಪ್ರಾಚೀನ ಒಬ್ಬ ರಾಜ ಹೆಣ್ಣುಮಕ್ಕಳ ಕೋಣೆಯಲ್ಲಿ  ಅವಿತು ಕುಳಿತಿರುವುದು ತಿಳಿದಿದ್ದರೂ ಅವನನ್ನು ಕೊಲ್ಲಲಿಲ್ಲ. (ಹೆಣ್ಣು ಮಕ್ಕಳ ನಡುವೆ ಕುಳಿತು ಪಾರಾದ ಆ ರಾಜ ನಾರೀಕವಚ ಎಂದು ಹೆಸರಾದ). ಇಪ್ಪತ್ತೊಂದು ಬಾರಿ ಕ್ಷತ್ರಿಯ ಸಂಹಾರ ಮಾಡಿದ ಪರಶುರಾಮ ಇಪ್ಪತ್ತೆರಡನೇ ಬಾರಿ ಸಂಹಾರಕ್ಕೆ ಕೈ ಹಾಕಲಿಲ್ಲ.  ಹೀಗಾಗಿ ನಾರೀಕವಚನ ವಂಶ ಬೆಳೆದು, ಅದರಿಂದ ರಘುವಂಶ  ಬೆಳೆದು, ಆ ವಂಶದಲ್ಲೇ ಭಗವಂತ ಶ್ರೀರಾಮಚಂದ್ರನಾಗಿ ಅವತರಿಸಿದ.
ಇಲ್ಲಿ ಮೂರೇ ಶ್ಲೋಕಗಳಲ್ಲಿ ಚತುರ್ಮುಖ ಇಡೀ ರಾಮಾಯಣದ ಮುಖ್ಯ ಅಂಶಗಳನ್ನು ನಾರದರ ಮುಂದಿಡುವುದನ್ನು  ನಾವು ಕಾಣುತ್ತೇವೆ. ಇಡೀ ರಾಮಾಯಣದ ಒಟ್ಟು ಉದ್ದೇಶ ಹಾಗೂ ಪ್ರಾರಂಭದ ಹಂತದ ಮುಖ್ಯ ಬೆಳವಣಿಗೆಯ ಪೂರ್ಣ ಚಿತ್ರಣವನ್ನು ಮೊದಲನೇ ಶ್ಲೋಕ ನಮಗೆ ನೀಡುತ್ತದೆ.

ಕೃತ್ಸ್ನಪ್ರಸಾದಸುಮುಖಃ ಕಲಯಾ ಕಲೇಶ ಇಕ್ಷ್ವಾಕುವಂಶ ಅವತೀರ್ಯ ಗುರೋರ್ನಿದೇಶೇ ।
ತಿಷ್ಠನ್ ವನಂ ಸದಯಿತಾನುಜ ಆವಿವೇಶ ಯಸ್ಮಿನ್ ವಿರುಧ್ಯ ದಶಕಂಧರ ಆರ್ತಿಮಾರ್ಚ್ಛತ್ ॥೨೩॥

ಭಗವಂತ ತನ್ನ ಒಂದೊಂದು ಅವತಾರದಲ್ಲಿ ಒಂದೊಂದು ವೈಶಿಷ್ಟ್ಯವನ್ನು ಅಭಿವ್ಯಕ್ತಗೊಳಿಸುತ್ತಾನೆ. ಭಗವಂತನ ರಾಮಾವತಾರದ ಒಂದು ವೈಶಿಷ್ಟ್ಯ ಏನೆಂದರೆ:  ಎಂಥಹ ಕಠಿಣ ಪ್ರಸಂಗದಲ್ಲೂ ಪ್ರಸನ್ನ ಚಿತ್ತನಾಗಿರುವುದು . ನಗು- ನಗುತ್ತಾ ಜೀವನದಲ್ಲಿ ಬರುವ ಎಲ್ಲಾ ದುಃಖವನ್ನೂ ಸ್ವೀಕರಿಸುವ ನಿಲುವು. ಅದನ್ನೇ ಇಲ್ಲಿ “ಕೃತ್ಸ್ನಪ್ರಸಾದಸುಮುಖಃ” ಎಂದಿದ್ದಾರೆ. ಅಂದರೆ ಪೂರ್ಣ ಪ್ರಸನ್ನತೆ. ಯಾವಾಗಲೂ ಮನಸ್ಸು ತಿಳಿಯಾಗಿರುವುದು. ಇಂಥಹ ಸದಾ ಪ್ರಸನ್ನಚಿತ್ತತೆ ಶ್ರೀರಾಮಚಂದ್ರನದಾಗಿತ್ತು.
ಎಂಥಹ ಸಂದರ್ಭದಲ್ಲೂ ಕೂಡಾ ರಾಮ ಪ್ರಸನ್ನಚಿತ್ತನಾಗಿರುತ್ತಿದ್ದ ಎನ್ನುವುದಕ್ಕೆ ಆತನ ಪಟ್ಟಾಭಿಷೇಕ ನಿಂತುಹೋದ ಘಟನೆ ಒಂದು ಉತ್ತಮ ಉದಾಹರಣೆ. ಶ್ರೀರಾಮನಿಗೆ ಮದುವೆಯಾಗಿರುವುದು ಹದಿನಾಲ್ಕನೇ ವಯಸ್ಸಿನಲ್ಲಿ. ಆಗ ಸೀತೆಗೆ ಸುಮಾರು ಎಂಟು ವರ್ಷ. ಮದುವೆಯಾಗಿ ಸುಮಾರು ೧೨ ವರ್ಷ ರಾಮ ತಂದೆಯ ಜೊತೆಗಿದ್ದ. ರಾಮನಿಗೆ ಇಪ್ಪತ್ತಾರು ವರ್ಷ ಕಳೆದು  ಇಪ್ಪತ್ತೇಳನೇ ಹುಟ್ಟುಹಬ್ಬದ ದಿನ (ಪುನರ್ವಸು ನಕ್ಷ್ಗತ್ರ)  ದಶರಥ ಅಲ್ಲಿ ನೆರೆದ ಸಮಸ್ತ ಜನರನ್ನುದ್ದೇಶಿಸಿ ಹೇಳುತ್ತಾನೆ: “ಪಾನ್ದುರಸ್ಯ ಆತಪತ್ರಸ್ಯ ಛಾಯಾಯಾಂ ಜರಿತಂ ಮಯಾ (ಅಯೋಧ್ಯ ೨.೭)”  “ಬೆಳ್ಕೊಡೆಯ ಅಡಿಯಲ್ಲಿ ನನ್ನ ತಲೆ ಬೆಳ್ಳಗಾಯಿತು. ಇನ್ನು  ನನಗೆ ವಿಶ್ರಾಂತಿ ಬೇಕು” ಎಂದು. ಆಗ ಅಲ್ಲಿ ನೆರೆದ ಎಲ್ಲರೂ “ಅಧಿಕಾರವನ್ನು ಶ್ರೀರಾಮಚಂದ್ರನಿಗೆ ಒಪ್ಪಿಸಬಹುದು” ಎನ್ನುವ ಪ್ರಸ್ತಾಪ ಮುಂದಿಡುತ್ತಾರೆ. ರೋಗಿ ಬಯಸಿದ್ದೂ ಹಾಲು ವೈದ್ಯ ಕೊಟ್ಟಿದ್ದೂ ಹಾಲು ಎನ್ನುವಂತೆ ಜನರ ಪ್ರಸ್ತಾಪದಿಂದ ದಶರಥನಿಗೆ ಸಂತೋಷವಾಗುತ್ತದೆ. ಏಕೆಂದರೆ ಆತನ ಅಂತರಂಗದ ಬಯಕೆಯೂ ಅದೇ ಆಗಿತ್ತು. ಆದರೂ ಕೂಡಾ ಮತ್ತೆ ಕೇಳುತ್ತಾನೆ: “ಏಕೆ? ನನ್ನ ಆಡಳಿತ ನಿಮಗೆ ಹಿಡಿಸಲಿಲ್ಲವೇ” ಎಂದು. ಆಗ ಜನ ಹೇಳುತ್ತಾರೆ: “ಶ್ರೀರಾಮಚಂದ್ರನಂಥಹ ವ್ಯಕ್ತಿ ನಮ್ಮ ಸಮಕಾಲಿನವನಾಗಿ ಸಿಕ್ಕಿರುವುದು ನಮ್ಮ ಭಾಗ್ಯ.  ಹೀಗಾಗಿ ನಾವು ಅದರ ಸದುಪಯೋಗ ಮಾಡಿಕೊಳ್ಳಬೇಕು” ಎಂದು. ಆಗ ದಶರಥ ಜನರ ಅಭಿಲಾಷೆಯಂತೆ, ಮರುದಿನವೇ (ಪುಷ್ಯ ನಕ್ಷತ್ರ , ಅಂದರೆ ಜನ್ಮ ಸಂಪತ್ತು) ಪಟ್ಟಾಭಿಷೇಕ ನಿಗದಿ ಮಾಡಿಬಿಡುತ್ತಾನೆ. ಈ ವಿಷಯವನ್ನು ದಾಸಿ (ಮಂತರೆ) ತಕ್ಷಣ ಭರತನ ತಾಯಿ ಕೈಕೇಯಿಗೆ ತಿಳಿಸುತ್ತಾಳೆ. ಭರತನೇ ದೇಶದ ಮುಂದಿನ ಅಧಿಪತಿ ಎಂದು ಕನಸು ಕಟ್ಟಿಕೊಂಡು ಕುಳಿತಿದ್ದ ಕೈಕೇಯಿಗೆ ಈ ವಿಷಯ ಕೇಳಿ ನಿರಾಶೆಯಾಗುತ್ತದೆ. ಇದರಿಂದ ಕೋಪಗೊಂಡ ಆಕೆ ಕೋಪದ ಮನೆಯಲ್ಲಿ ಹೋಗಿ ನೆಲದ ಮೇಲೆ ಮಲಗಿ ಪ್ರತಿಭಟಿಸುತ್ತಾಳೆ.
ದಶರಥ ಸಂಜೆ ಅಂತಃಪುರಕ್ಕೆ ಬಂದಾಗ ಆತನಿಗೆ ಕೈಕೈಯಿ ಕೋಪಗೊಂಡ ವಿಷಯ ತಿಳಿಯುತ್ತದೆ ಮತ್ತು ಆತ  ಕೈಕೇಯಿ ಇದ್ದಲ್ಲಿಗೆ ಹೋಗುತ್ತಾನೆ. ಅಲ್ಲಿ ಆತ ಕೈಕೇಯಿಯ ಮನಸ್ಸಿನಲ್ಲಿನ ವೈಷಮ್ಯದ ಆಳವನ್ನು ಅರಿಯದೇ ಆಕೆಯನ್ನು ಸಂತೈಸಲಿಕ್ಕಾಗಿ “ರಾಮಚಂದ್ರನ ಆಣೆಗೂ ನೀನು ಹೇಳಿದಂತೆ ಮಾಡುತ್ತೇನೆ” ಎಂದು ಮಾತು ಕೊಡುತ್ತಾನೆ. ಆಗ ಕೈಕೇಯಿ ಹೇಳುತ್ತಾಳೆ: “ರಾಮನನ್ನು ಈಗಿಂದೀಗ ಕಾಡಿಗೆ ಕಳುಹಿಸಿ ರಾಜ್ಯವನ್ನು ನನ್ನ ಮಗ ಭರತನಿಗೆ ಒಪ್ಪಿಸಬೇಕು” ಎಂದು. ಈ ಮಾತನ್ನು ಕೇಳಿ ದಶರಥನಿಗೆ ದಿಗ್ಭ್ರಮೆಯಾಗುತ್ತದೆ. ಆತ ಆಕೆಯಲ್ಲಿ ನಿರ್ಧಾರ ಬದಲಿಸುವಂತೆ  ಪರಿಪರಿಯಿಂದ ಕೇಳಿಕೊಳ್ಳುತ್ತಾನೆ. ಆದರೆ ಕೈಕೇಯಿ ಅದ್ಯಾವುದಕ್ಕೂ ಒಪ್ಪದೆ ಹಠ ಹಿಡಿಯುತ್ತಾಳೆ. “ಒಂದು ವೇಳೆ ರಾಮನನ್ನು ಕಾಡಿಗೆ ಕಳುಹಿಸಿದರೆ ದಶರಥ ಜೀವಂತ ಉಳಿಯುವುದಿಲ್ಲ, ನೀನು ವಿದವೆಯಾಗುತ್ತೀಯ” ಎಂದೂ ದಶರಥ ಎಚ್ಚರಿಸುತ್ತಾನೆ. ಆದರೆ ಆಶ್ಚರ್ಯ ಎನ್ನುವಂತೆ ಕೈಕೈಯಿ ಹೇಳುತ್ತಾಳೆ: “ನನ್ನ ಹಣೆಯಲ್ಲಿ ಏನು ಬರೆದಿದೆಯೋ ಅದೇ ಆಗುತ್ತದೆ. ಅದನ್ನು ಬದಲಿಸುವುದು ಸಾಧ್ಯವಿಲ್ಲ” ಎಂದು.  ಇಂಥಹ  ಕಠಿಣ ಪರಿಸ್ಥಿತಿಯೊಂದಿಗೆ ದಶರಥ ನಿದ್ರೆ ಇಲ್ಲದೇ ರಾತ್ರಿ ಕಳೆಯುತ್ತಾನೆ. ಅತ್ತ ಅರಮನೆಯಲ್ಲಿ ರಾಮನ ಪಟ್ಟಾಭಿಷೇಕದ ಸಂಭ್ರಮ. ಎಲ್ಲರೂ ದಶರಥನಿಗಾಗಿ ಕಾದಿದ್ದಾರೆ. ಆದರೆ ರಾಜನ ಪತ್ತೆ ಇಲ್ಲ. ಆಗ ಮಂತ್ರಿ ಸುಮಂತ್ರ ಮಹಾರಾಜರನ್ನು ಹುಡುಕಿಕೊಂಡು ಅಂತಃಪುರಕ್ಕೆ ಬರುತ್ತಾನೆ. ಅಲ್ಲಿ ಆಘಾತದಿಂದ ಬಿದ್ದಿರುವ ದಶರಥನನ್ನು ಕಂಡು “ಏನಾಯಿತು” ಎಂದು ಕೇಳುತ್ತಾನೆ ಸುಮಂತ್ರ. ಆಗ ಕೈಕೇಯಿ ಹೇಳುತ್ತಾಳೆ: “ಈ ತನಕ ತುಂಬಾ ಕುಷಿಯಿಂದ ಮಾತನಾಡಿಕೊಂಡಿದ್ದರು, ಈಗಷ್ಟೇ ಅವರಿಗೆ ಮಂಪರು ಬಂದಿದೆ. ರಾಮಚಂದ್ರನ್ನು ಕರೆದುಕೊಂಡು ಬಾ, ನಾನು ಅವನಲ್ಲಿ ಮಾತನಾಡಬೇಕು” ಎಂದು. ಆದರೆ ಕೈಕೇಯಿಯ ಸ್ವಭಾವವನ್ನು ಅರಿತಿದ್ದ ಸುಮಂತ್ರ ಆಕೆಯ ಮಾತನ್ನು ನಂಬುವುದಿಲ್ಲ. ಆತ “ಕಹಿಬೇವಿನ ಮರದಲ್ಲಿ ಎಂದೂ ಸಿಹಿನೀರು ಬರಲಾರದು. ನೀನು ಸುಳ್ಳು ಹೇಳುತ್ತಿರುವೆ” ಎಂದು ಕಟುವಾಗಿ ಮಾತನಾಡುತ್ತಾನೆ. ಆಗ ದಶರಥ ಸುಮಂತ್ರನಲ್ಲಿ ಶ್ರೀರಾಮನನ್ನು ಕರೆತರುವಂತೆ ಹೇಳುತ್ತಾನೆ. ಪಟ್ಟಾಭಿಷೇಕಕ್ಕೆ ಸಿದ್ಧನಾಗಿ ನಿಂತಿದ್ದ ಶ್ರೀರಾಮಚಂದ್ರ ದಶರಥನಲ್ಲಿಗೆ ಬರುತ್ತಾನೆ. ಆದರೆ ದಶರಥ ರಾಮನಲ್ಲಿ ಮಾತನಾಡದೇ ಕುಸಿದು ಬೀಳುತ್ತಾನೆ. ಆಗ ಕೈಕೈಯೇ ಹೇಳುತ್ತಾಳೆ: “ಮಹಾರಾಜರಿಗೆ ಭರತನೆ ರಾಜನಾಗಬೇಕು ಎನ್ನುವ ಬಯಕೆ. ಆದರೆ ಆ ಮಾತನ್ನು ನಿನಗೆ ಹೇಳಿದರೆ ನೀನು ಬೇಸರಿಸಬಹುದು ಎಂದು ಹೇಳುತ್ತಿಲ್ಲ ಅಷ್ಟೇ. ಅವರ ಬಯಕೆಯನ್ನು ನೀನು ಈಡೇರಿಸಬೇಕು” ಎನ್ನುತ್ತಾಳೆ. ಅದಕ್ಕೆ ಶ್ರೀರಾಮಚಂದ್ರ ಒಪ್ಪುತ್ತಾನೆ. ಅಷ್ಟಕ್ಕೇ ನಿಲ್ಲದ ಆಕೆ:  “ನೀನು ತಕ್ಷಣ ಕಾಡಿಗೆ ಹೋಗಬೇಕು” ಎನ್ನುತ್ತಾಳೆ. ಆಗ ರಾಮಚಂದ್ರ ಪಟ್ಟಾಭಿಷೇಕದ ಉಡುಗೆಯನ್ನು ತೊರೆದು ಕಾಡಿಗೆ ಹೋಗುವ ತಯಾರಿಯಿಂದ ಹೊರ ಬರುತ್ತಾನೆ. ಈ ಘಟನೆಯ ನಂತರ ಅಲ್ಲಿ ನೆರೆದ ಜನಸ್ತೋಮಕ್ಕೆ ಆಘಾತವಾಗುತ್ತದೆ. ಆದರೆ ಶ್ರೀರಾಮನ ಮುಖದಲ್ಲಿ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ಅದೇ ನಗು ಮೊಗದಿಂದ ಹೊರಬಂದ ರಾಮಚಂದ್ರ ಕಾಡಿಗೆ ಹೋಗಲು ಸಿದ್ಧನಾಗುತ್ತಾನೆ. ಈ ರೀತಿಯ ಪ್ರಸನ್ನಚಿತ್ತತೆಯನ್ನು ಇಲ್ಲಿ ಕೃತ್ಸ್ನಪ್ರಸಾದಸುಮುಖಃ ಎಂದು ವರ್ಣಿಸಲಾಗಿದೆ. ಇಷ್ಟೇ ಅಲ್ಲದೇ, ಅನೇಕ ಮಂದಿ ಋಷಿಗಳು ರಾವಣನ ಕಾಟದಿಂದ ಹಿಂಸೆಗೊಳಗಾಗಿ ಭಗವಂತ ಅವತರಿಸಿ ಬರಬೇಕು,  ಆತನ ದರ್ಶನವಾಗಬೇಕು ಎಂದು ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದರು.  ಅಂಥಹ ಋಷಿಗಳ ಮೇಲಿನ ಕರುಣೆಯಿಂದ ಶ್ರೀರಾಮ ಪ್ರಸನ್ನಚಿತ್ತನಾಗಿ ಕಾಡಿಗೆ ತೆರಳಿದ ಎನ್ನುವ ಅರ್ಥವನ್ನೂ ಕೃತ್ಸ್ನಪ್ರಸಾದಸುಮುಖಃ. ಎನ್ನುವ ಪದ ತಿಳಿಸುತ್ತದೆ. ಭಗವಂತ ಸ್ವಯಂ ಕೃತ್ಸ್ನಪ್ರಸಾದಸುಮುಖಃ. ಅಂದರೆ ಪೂರ್ಣಾನಂದ. ರಾಮ ಎನ್ನುವ ನಾಮ ಕೂಡಾ ಇದನ್ನೇ ಹೇಳುತ್ತದೆ. ರಂ ಎಂದರೆ ಆನಂದ. (ರಂ-ಕ್ರೀಡಾಯಾಂ/ ರಮಣ) ಅಮ= ಅಮಿತ. ಹೀಗಾಗಿ ರಾಮ ಎಂದರೆ ಅನಂತವಾದ ಆನಂದಸ್ವರೂಪ ಎಂದರ್ಥ. ಈ ರೀತಿ ಕೃತ್ಸ್ನಪ್ರಸಾದಸುಮುಖಃ ಎನ್ನುವುದು ಒಂದು ಶಬ್ದದ ಮೂಲಕ ಎಲ್ಲವನ್ನೂ ಹೇಳುವ ಅದ್ಭುತ ಶಬ್ದ. ಇದನ್ನು ಬಗೆದಷ್ಟೂ ಹೊಸ ಹೊಸ ಅರ್ಥಗಳು ಕಾಣಿಸಿಕೊಳ್ಳುತ್ತವೆ.
ಇಲ್ಲಿ ಒಂದು ಅಂಶದಲ್ಲಿ ಭಗವಂತ ರಾಮನಾಗಿ ಅವತರಿಸಿ ಬಂದ ಎಂದಿದ್ದಾರೆ.  ಅಂದರೆ ಆತ ವೈಕುಂಠವನ್ನು ತೊರೆದು ಬಂದಿಲ್ಲ, ಆತ ಅಲ್ಲಿಯೂ ಇದ್ದಾನೆ ಇಲ್ಲಿಯೂ ಇದ್ದಾನೆ ಎಂದರ್ಥ. ಭಗವಂತನ ಅಂಶ ಮತ್ತು ಭಗವಂತ ಬೇರೆಬೇರೆ ಅಲ್ಲ. ಆತನ ಅಂಶವೂ ಮೂಲರೂಪದಷ್ಟೇ ಪೂರ್ಣ.
ಶ್ರೀರಾಮಚಂದ್ರನನ್ನು ಚತುರ್ಮುಖ ಕಲೇಶ ಎಂದು ಸಂಬೋಧಿಸಿದ್ದಾನೆ. ನಮಗೆ ತಿಳಿದಂತೆ ಕಲೆಗಳು ಹದಿನಾರು.  ಷಟ್ ಪ್ರಶ್ನ ಉಪನಿಷತ್ತಿನಲ್ಲಿ  ಈ ಹದಿನಾರು ಕಲೆಗಳ ವಿವರ ಬರುತ್ತದೆ. ಸ ಪ್ರಾಣಮಸೃಜತ । ಪ್ರಾಣಾಚ್ಛ್ರದ್ಧಾಂ ಖಂ ವಾಯುರ್ಜ್ಯೋತಿರಾಪಃ ಪೃಥಿವೀಂದ್ರಿಯಂ ಮನೋSನ್ನಮನ್ನಾದ್ ವೀರ್ಯಂ ತಪೋ ಮಂತ್ರಾಃ ಕರ್ಮ ಲೋಕಾ ಲೋಕೇಷು ನಾಮ ಚ ॥೬-೪॥   ಸೃಷ್ಟಿ ಪ್ರಾರಂಭದಲ್ಲಿ ಭಗವಂತ ತನ್ನೊಂದಿಗೆ ಸದಾ ಇರುವ ಒಬ್ಬ ಒಡನಾಡಿ ಬೇಕು ಎಂದು ಇಚ್ಛೆಪಟ್ಟು ಪ್ರಾಣದೇವರನ್ನು ಸೃಷ್ಟಿ ಮಾಡಿದ. ಪ್ರಪಂಚ ಸೃಷ್ಟಿಯಲ್ಲಿ ಪ್ರಾಣದಸೃಷ್ಟಿ ಎಂದರೆ ಜೀವಕಲೆಯ ಸೃಷ್ಟಿ. ಅಂದರೆ ಜೀವರುಗಳ ಸೃಷ್ಟಿ. ಈ ಸಮಸ್ತ ಜೀವರುಗಳಿಗೆ ಅಭಿಮಾನಿ ದೇವತೆ ಪ್ರಾಣದೇವರು.  ಷೋಡಶಕಲೆಗಳಲ್ಲಿ ‘ಜೀವ’ ಹದಿನಾರನೇ ಕಲೆ ಹಾಗೂ ಇದೊಂದೇ ಚೇತನ. ಉಳಿದ ಹದಿನೈದು ಕಲೆಗಳೆಂದರೆ: ಶ್ರದ್ಧೆ, ಖಂ, ವಾಯು, ಜ್ಯೋತಿ, ಆಪಃ, ಪ್ರಥಿವೀ, ಇಂದ್ರಿಯ, ಮನಃ, ಅನ್ನ, ವೀರ್ಯ, ತಪಃ, ಮಂತ್ರಾಃ, ಕರ್ಮ, ಲೋಕಾಃ ಮತ್ತು ನಾಮ. ‘ಜೀವ’ ಈ ಹದಿನೈದು ಕಲೆಗಳ ನಡುವೆ ನಿಂತಿರುವ ಸಂಸಾರಿ. ಈ ಬೇಲಿಯಿಂದ ಬಿಡುಗಡೆಯಾದಾಗ ಜೀವನಿಗೆ ಮೋಕ್ಷಪ್ರಾಪ್ತಿಯಾಗುತ್ತದೆ. ಇಂಥಹ ಜೀವನಿಗೆ ಅಭಿಮಾನಿಯಾದ ಪ್ರಾಣದೇವರು ಅಂದರೆ ಹನುಮಂತನ ಈಶನಾಗಿ (ಕಲೇಶ) ಭಗವಂತ ಅವತರಿಸಿ ಬಂದ.
ಇಲ್ಲಿ ವ್ಯಾಕರಣವನ್ನು ಮುರಿದು ಇಕ್ಷ್ವಾಕುವಂಶ ಅವತೀರ್ಯ ಎಂದಿದ್ದಾರೆ. ಇಂಥಹ ಪ್ರಯೋಗವನ್ನು ವೇದವ್ಯಾಸರಷ್ಟೇ ಮಾಡಬಲ್ಲರು. ಭಗವಂತ ಅವತರಿಸಿರುವುದು ಇಕ್ಷ್ವಾಕುವಂಶದಲ್ಲಿ. ಆದರೆ ಆತ ಇಕ್ಷ್ವಾಕು ವಂಶದ ಒಬ್ಬ ರಾಜಕುಮಾರನಲ್ಲ. ಆತ ಇಡೀ ಜಗತ್ತಿನ ನಿಯಾಮಕ ಶಕ್ತಿ. ಇದನ್ನು ತೋರಿಸುವುದಕ್ಕಾಗಿಯೇ ಇಲ್ಲಿ ಇಂಥಹ ಪ್ರಯೋಗ ಮಾಡಲಾಗಿದೆ. ಇಂಥಹ  ಶ್ರೀರಾಮಚಂದ್ರ ತನ್ನ ಬದುಕಿನಲ್ಲಿ ತಂದೆಯ ಆದೇಶಕ್ಕೆ ಬದ್ದನಾಗಿ ವನವಾಸ ಮಾಡಿದ.
ತನ್ನ ಪತ್ನಿ ಮತ್ತು ತಮ್ಮ ಲಕ್ಷ್ಮಣಯೊಂದಿಗೆ ವನವಾಸ ಮಾಡುತ್ತಿರುವಾಗ ರಾವಣ ರಾಮಚಂದ್ರನನ್ನು ಎದುರು ಹಾಕಿಕೊಂಡ. ಇದಕ್ಕೆ ವಿಶೇಷ ಕಾರಣ ರಾವಣನ ತಂಗಿ ಹಾಗೂ ವಿದ್ಯುಜ್ಜಿಹ್ವನ ಪತ್ನಿ ಶೂರ್ಪನಖಿ. ವಿದ್ಯುಜ್ಜಿಹ್ವ ಯಾವಾಗಲೂ ರಾವಣನ ಜೊತೆಗೆ ಯುದ್ಧಕ್ಕೆ ಹೋಗುತ್ತಿದ್ದ. ಆದರೆ ಒಮ್ಮೆ ರಾವಣ ವಿದ್ಯುಜ್ಜಿಹ್ವನನ್ನು ಶತ್ರುವೆಂದು ತಪ್ಪಾಗಿ ತಿಳಿದು ಹತ್ಯೆ ಮಾಡುತ್ತಾನೆ. ಈ ರೀತಿ ಗಂಡನನ್ನು ಕಳೆದುಕೊಂಡ ಶೂರ್ಪನಖಿ ವಿದವೆಯಾಗುತ್ತಾಳೆ. ರಾವಣ ಆಕೆಯಲ್ಲಿ ಆಕೆಗೆ ಇಷ್ಟವಾದ ಗಂಡನ್ನು  ಮದುವೆಯಾಗುವಂತೆ ಹೇಳುತ್ತಾನೆ. ಇಂಥಹ ಶೂರ್ಪನಖಿ ಒಮ್ಮೆ ವಿಹಾರ ಮಾಡುತ್ತಿದ್ದಾಗ ಶ್ರೀರಾಮನನ್ನು ಕಂಡು ಮೋಹಿತಳಾಗುತ್ತಾಳೆ. ಆಕೆ ನೇರವಾಗಿ ಶ್ರೀರಾಮನ ಬಳಿ ಬಂದು “ತನ್ನನ್ನು ಮದುವೆಯಾಗು” ಎಂದು ಕೇಳಿಕೊಳ್ಳುತ್ತಾಳೆ. ಆಗ ಸೀತೆಯ ಜೊತೆಗಿದ್ದ ರಾಮ ವಿನೋದವಾಗಿ ಹೇಳುತ್ತಾನೆ: “ನನ್ನ ಪತ್ನಿ ನನ್ನೊಂದಿಗಿದ್ದಾಳೆ. ಹೀಗಾಗಿ ನನಗೆ ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ. ಬೇಕಿದ್ದರೆ ಲಕ್ಷ್ಮಣನನ್ನು ಕೇಳು” ಎಂದು. ಆಗ ಶೂರ್ಪನಖಿ ಲಕ್ಷ್ಮಣನ ಬಳಿ ಹೋಗಿ ತನ್ನ ಇಚ್ಛೆಯನ್ನು ಮುಂದಿಡುತ್ತಾಳೆ. ಮಾಯಾವಿ ಶೂರ್ಪನಖಿಯ ದುಷ್ಟತನವನ್ನು ಅರಿತಿದ್ದ ಶ್ರೀರಾಮಚಂದ್ರ ಲಕ್ಷ್ಮಣನಿಗೆ ಸನ್ನೆ ಮಾಡುತ್ತಾನೆ ಮತ್ತು ಅದರಂತೆ ಲಕ್ಷ್ಮಣ ಆಕೆಯ ಮೂಗನ್ನು ಕತ್ತರಿಸುತ್ತಾನೆ. ಇದರಿಂದ ಕೋಪಗೊಂಡ ಶೂರ್ಪನಖಿ ನೇರವಾಗಿ ತನ್ನ ಸಹೋದರರಾದ ಖರ-ದುಷಣರಲ್ಲಿ  ರಾಮ-ಲಕ್ಷ್ಮಣರನ್ನು ಮುಗಿಸಿಬಿಡುವಂತೆ ಕೇಳಿಕೊಳ್ಳುತ್ತಾಳೆ. ಆದರೆ ಶ್ರೀರಾಮ ಖರ-ದುಷಣರು ಮತ್ತು ಅವರ ಹದಿನಾಲ್ಕುಸಾವಿರ ಸೈನಿಕರನ್ನು ನಾಶಮಾಡುತ್ತಾನೆ. ಇದರಿಂದ ಮತ್ತೆ ಅವಮಾನಗೊಂಡ ಶೂರ್ಪನಖಿ ನೇರವಾಗಿ ಲಂಕೆಗೆ ಬಂದು ರಾವಣನಲ್ಲಿ ಸುಳ್ಳು ಹೇಳುತ್ತಾಳೆ! ಆಕೆ ಹೇಳುತ್ತಾಳೆ: “ಅಣ್ಣಾ, ನಾನು ಕಾಡಿನಲ್ಲಿ ವಿಹರಿಸುತ್ತಿರುವಾಗ ಅತ್ಯಂತ ಸುಂದರಿಯಾದ ಸೀತೆಯನ್ನು ಕಂಡೆ. ಆಕೆಯ ಸೌಂದರ್ಯವನ್ನು ಕಂಡಾಗ ನನಗೆ ಆಕೆ ನಿನ್ನ ಪಟ್ಟದ ರಾಣಿ ಆಗಬೇಕು ಎನಿಸಿತು. ನಾನು ಈ ಮಾತನ್ನು ಹೇಳಿದಾಗ ಆಕೆಯ ಜೊತೆಗಿದ್ದ ರಾಮ-ಲಕ್ಷ್ಮಣರು ನನ್ನ ಮೂಗನ್ನು ಕತ್ತರಿಸಿದರು. ಸೀತೆ ನಿನ್ನ ಪತ್ನಿ ಆಗಬೇಕು ಎಂದು ಕೇಳಿಕೊಂಡಿದ್ದಕ್ಕಾಗಿ ನನ್ನ ಮೂಗನ್ನು ಕತ್ತರಿಸಲಾಯಿತು. ಇದು ಅವರು ನಿನಗೆ ಮಾಡಿದ ಅವಮಾನ” ಎಂದು. ಇಲ್ಲಿ ಆಕೆ ಎಲ್ಲಿಯೂ ತಾನು ಶ್ರೀರಾಮನನ್ನು ಬಯಸಿದೆ ಎಂದು ಹೇಳುವುದಿಲ್ಲ. ಈ ಘಟನೆಯನ್ನು ಮೇಲಿನ ಶ್ಲೋಕದಲ್ಲಿ   ಚುಟುಕಾಗಿ ವಿವರಿಸಲಾಗಿದೆ.  “ಹೆಣ್ಣಿನ ಸುಳ್ಳು ಮಾತನ್ನು ಕೇಳಿದ  ರಾವಣ ಶ್ರೀರಾಮನ ವಿರೋಧ ಕಟ್ಟಿಕೊಂಡು ಸೀತೆಯನ್ನು ಮಾರುವೇಷದಲ್ಲಿ ಬಂದು ಅಪಹರಿಸಿ ಜೀವನದಲ್ಲಿ ದುರಂತವನ್ನು ತಂದುಕೊಂಡ”. ಸೀತೆಯನ್ನು ಅಪಹಾರ ಮಾಡಿರುವುದು ರಾವಣ ತನ್ನ ಜೀವಮಾನದಲ್ಲಿ ಮಾಡಿದ ದೊಡ್ಡ ತಪ್ಪು. ಈ ಮಾತನ್ನು ಮುಂದೆ ಮಂಡೋದರಿ ಹೇಳುವುದನ್ನು ನಾವು ರಾಮಾಯಣದಲ್ಲಿ ಕಾಣುತ್ತೇವೆ. ಮಂಡೋದರಿ ಒಬ್ಬ ಸಂಯಮದ ಆದರ್ಶ ಮಹಿಳೆ. ಆಕೆ ಎಂದೂ ದಾರಿತಪ್ಪಿ ಮಾತನಾಡಿದವಳಲ್ಲ.  ಇಂಥಹ ಮಂಡೋದರಿಗೆ  ಹನುಮಂತ ಲಂಕೆಯನ್ನು ಸುಟ್ಟ ವಿಷಯವನ್ನು ತಿಳಿಸಿದಾಗ ಹೇಳುತ್ತಾಳೆ: “ಲಂಕೆ ಇಂದು ಸುಟ್ಟುಹೋಗಿರುವುದಲ್ಲ. ಸೀತೆಯನ್ನು ರಾವಣ ಅಪಹರಿಸಿದ ದಿನವೇ ಸುಟ್ಟುಹೋಗಿದೆ” ಎಂದು. ಈ ರೀತಿ ಲಂಕೆಗೆ ಕುತ್ತನ್ನು ಸೀತೆಯ ರೂಪದಲ್ಲಿ ರಾವಣನೇ ಹೊತ್ತುತಂದಿದ್ದ.

ಯಸ್ಮಾ ಅದಾದುದಧಿರೂಢಭಯಾಂಗವೇಪೋ ಮಾರ್ಗಂ ಸಪದ್ಯರಿಪುರಂ ಹರವದ್ ದಿಧಕ್ಷೋಃ ।
ದೂರೇಸುಹೃನ್ಮಥಿತರೋಷಸುಶೋಷದೃಷ್ಟ್ಯಾ ತಾತಪ್ಯಮಾನಮಕರೋರಗನಕ್ರಚಕ್ರಃ ॥೨೪॥

ರಾವಣ ಸೀತೆಯನ್ನು ಅಪಹಾರ ಮಾಡಿದ ವಿಷಯ ತಿಳಿದಾಗ ಶ್ರೀರಾಮಚಂದ್ರ ಲಂಕೆಯನ್ನು ಸುಟ್ಟು ನಿರ್ನಾಮ ಮಾಡಿಬಿಡಬೇಕೆಂದು ತೀರ್ಮಾನ ಮಾಡುತ್ತಾನೆ.  ಆತನ ಸಂಕಲ್ಪವನ್ನು ಮೊದಲು ಆಂಜನೇಯ ಲಂಕಾದಹನದ ಮೂಲಕ ನೆರವೇರಿಸುತ್ತಾನೆ. (ಇಲ್ಲಿ ದಿಧಕ್ಷೋಃ ಎನ್ನುವ ಪ್ರಯೋಗ ರಾಮಾಯಣದ ಇಡೀ ಸುಂದರಕಾಂಡವನ್ನು ಸೂಚಿಸುತ್ತದೆ).  ಆನಂತರ ಶ್ರೀರಾಮಚಂದ್ರ ಹೇಗೆ ತ್ರಿಪುರಾಂತಕನಾದ ಶಿವ ತ್ರಿಪುರಾಸುರರ ಮೂರು ಪುರಗಳನ್ನು ಸುಟ್ಟನೋ ಹಾಗೆ ಲಂಕೆಯನ್ನು ಸುಟ್ಟುಬಿಡಬೇಕೆಂದು ತೀರ್ಮಾನ ಮಾಡಿ ಲಂಕಾಮಾರ್ಗವಾಗಿ ಸಮುದ್ರ  ತಟಿಗೆ ಬರುತ್ತಾನೆ. (ಇಂದಿನ ಮದುರೆಯಲ್ಲಿನ ದರ್ಭಶಯನ ಎನ್ನುವ ಸ್ಥಳಕ್ಕೆ ಬಂದು ಮಲಗಿ ರಾಮ ವಿಶ್ರಾಂತಿ ಪಡೆದ ಎನ್ನುತ್ತಾರೆ)  ಈ ರೀತಿ ಪತ್ನಿಯನ್ನು ಕಳೆದುಕೊಂಡು ಲಂಕೆಗೆ ಹೊರಟಿರುವ ರಾಮಚಂದ್ರ ಸಮುದ್ರ ತೀರಕ್ಕೆ ಬಂದು ಕಾದು ನಿಂತರೂ  ಸಮುದ್ರರಾಜ ವರುಣನಿಂದ ಯಾವ ಪ್ರತಿಕ್ರಿಯೆಯೂ ಬರುವುದಿಲ್ಲ. ಇದರಿಂದಾಗಿ ರಾಮನ ಮನಸ್ಸು ಕದಡುತ್ತದೆ ಮತ್ತು ಅದು ಕೋಪದ ಬೆಂಕಿಯ ಕಿಡಿಯಾಗಿ ಆತನ ಕಣ್ಣಿನಿಂದ ಹೊರಬರುತ್ತದೆ. ಆ ಕೊಪಾಗ್ನಿಯಲ್ಲಿ ಸಮುದ್ರದಲ್ಲಿನ ಸಮಸ್ತ ಜೀವಿಗಳು ಬೆಂದು ವಿಲವಿಲ ಒದ್ದಾಡುತ್ತವೆ.  ಆಗ ಸಮುದ್ರರಾಜ ಭಯಭೀತನಾಗಿ ನಡುಗುತ್ತಾ  ಶ್ರೀರಾಮನ ಮುಂದೆ ಬಂದು ನಿಂತು ಕ್ಷೆಮೆ ಬೇಡಿ  ಸೇತುವೆ ಕಟ್ಟಬೇಕು ಎಂದು ನಿವೇದಿಸಿಕೊಳ್ಳುತ್ತಾನೆ. ಈ ರೀತಿ  ಸೇತುವೆ ನಿರ್ಮಾಣವಾಗುತ್ತದೆ.

ವಕ್ಷಃಸ್ಥಲಸ್ಪರ್ಶರುಗ್ಣ  ಮಹೇಂದ್ರವಾಹ ದಂತೈರ್ವಿಳಂಬಿತಕಕುಬ್ಜಯರೂಢಹಾಸಃ ।
ಸದ್ಯೋSಸುಭಿಃ ಸಹ ವಿನೇಷ್ಯತಿ ದಾರಹರ್ತುರ್ವಿಸ್ಫೂರ್ಜಿತೈರ್ಧನುಷ ಉಚ್ಚರಿತ್ಯೆಃ ಸಸೈನ್ಯಃ ॥೨೫॥


ಇಲ್ಲಿ ರಾವಣ ಎಂಥಹ ಪರಾಕ್ರಮಿ ಎನ್ನುವುದನ್ನು ಚತುರ್ಮುಖ ವಿವರಿಸಿರುವುದನ್ನು ಕಾಣುತ್ತೇವೆ. ರಾವಣ ದೇವಲೋಕದ ಮೇಲೆ  ದಾಳಿ ಇಟ್ಟ ಸಮಯದಲ್ಲಿ ಇಂದ್ರ ಐರಾವತದ ಮೇಲೆ ಬಂದು ರಾವಣನೊಂದಿಗೆ ಯುದ್ಧ ಮಾಡುತ್ತಾನೆ. ಇಂದ್ರನ ಆನೆ ರಾವಣನ ವಕ್ಷಸ್ಥಳಕ್ಕೆ ತಿವಿಯುತ್ತದೆ. ಆದರೆ ಈ ತಿವಿತದಿಂದ ಆನೆಯ ದಾಡೆಗೆ ನೋವಾಯಿತೇ ವಿನಃ ರಾವಣನಿಗೆ ಏನೂ ಆಗುವುದಿಲ್ಲ. ಆನೆಯ ತಿವಿತದಿಂದ ಸ್ವಲ್ಪ ವಿಳಂಭವಾದರೂ ಕೂಡಾ ನಗುವಿನ ಅಟ್ಟಹಾಸದೊಂದಿಗೆ ರಾವಣ ಅಷ್ಟದಿಕ್ಕುಗಳನ್ನೂ ಗೆಲ್ಲುತ್ತಾನೆ. ಇಂಥಹ ಪರಾಕ್ರಮಶಾಲಿ ರಾವಣ ತನ್ನ ಹೆಂಡತಿಯನ್ನು ಮರಳಿ ಪಡೆಯುವುದಕ್ಕೆ ಬಂದ ಶ್ರೀರಾಮಚಂದ್ರನ ಬಿಲ್ಲಿನ  ಠೇಂಕಾರಕ್ಕೆ ನಡುಗಿ ಹೋಗುತ್ತಾನೆ. ಕೇವಲ ಬಿಲ್ಲಿನ ಜೇಂಕಾರಕ್ಕೆ ಆತನ ಇಂದ್ರಿಯಗಳು ಉಡುಗಿ ಹೋಗುತ್ತವೆ. ಆತನ ಕೋಟಿ-ಕೋಟಿ ಸೇನೆ ತತ್ತರಿಸಿ ಹೋಗುತ್ತದೆ. ಯುದ್ಧಕ್ಕೂ ಮೊದಲು  “ನನ್ನ ಕಥೆ ಮುಗಿಯಿತು” ಎಂದು ರಾವಣ ಕಂಗಾಲಾಗುತ್ತಾನೆ. “ಇಂಥಹ ಪರಾಕ್ರಮಿ ಶ್ರೀರಾಮಚಂದ್ರನಾಗಿ ಭಗವಂತ ಭೂಮಿಯಲ್ಲಿ ಅವತರಿಸಿದ” ಎಂದಿದ್ದಾನೆ ಚತುರ್ಮುಖ.