Sunday, October 4, 2015

Shrimad BhAgavata in Kannada -Skandha-02-Ch-07(37)

http://bhagavatainkannada.blogspot.in/
ಭಗವಂತನ ಗುಣಲಕ್ಷಣಗಳ ವಿವರಣೆ  ಮುಂದುವರಿದುದು:

ಈ ಶ್ಲೋಕದ ಉತ್ತರಾರ್ಧ ಸಮಾಧಿಗುಹ್ಯ ಭಾಷೆಯಲ್ಲಿದ್ದು, ಅದು ಅತ್ಯಂತ ವಿಶಿಷ್ಟವಾದ ವಿಷಯವನ್ನು ನಮ್ಮ ಮುಂದೆ ಬಿಚ್ಚಿಡುತ್ತದೆ. ಚತುರ್ಮುಖ ಹೇಳುತ್ತಾನೆ: “ಶಬ್ದೋ ನ ಯತ್ರ ಪುರುಕಾರಕವಾನ್ ಕ್ರಿಯಾರ್ಥೋ ಮಾಯಾ ಪರೈತ್ಯಭಿಮುಖೇ ಚ ವಿಲಜ್ಜಮಾನಾ” ಎಂದು.  ಈ ಹಿಂದೆ ಮೊದಲನೇ ಸ್ಕಂಧದಲ್ಲಿ ವಿವರಿಸಿದಂತೆ: ಸಮಾಧಿ ಭಾಷೆಯಲ್ಲಿ ಯಾವುದನ್ನೂ ಮುಚ್ಚಿಡುವುದಿಲ್ಲ. ಆದರೆ ಸಮಾಧಿಗುಹ್ಯ ಭಾಷೆ ಸಂಪುಟದೊಳಗಿನ ಸಾಳಗ್ರಾಮದಂತೆ. ಸಂಪುಟವನ್ನು ತೆರೆದರೆ ಮಾತ್ರ ಸಾಳಗ್ರಾಮ ದರ್ಶನ. ಇಂಥಹ ಸಮಾಧಿಗುಹ್ಯ ಭಾಷೆಯನ್ನು ಭಾಗವತದಲ್ಲಿ ಸಾಕಷ್ಟು ಬಳಸಿದ್ದಾರೆ. ಅಲ್ಲಿ ಅನೇಕ ಗೂಡಾರ್ಥಗಳನ್ನು ತುಂಬಿ ಮೇಲ್ನೋಟಕ್ಕೆ ಅದು ಅರ್ಥವಾಗದಂತೆ ಮುಚ್ಚಿಡಲಾಗಿದೆ. ನಾವು ಆ ಮುಚ್ಚಳವನ್ನು ತೆರೆದು ಕಂಡಾಗ ಮಾತ್ರ ಸತ್ಯದ ಸಾಕ್ಷಾತ್ಕಾರವಾಗುತ್ತದೆ. ಇಡೀ ವೈದಿಕ ಸಾಹಿತ್ಯವೇ ಹೀಗೆ. ಇದಕ್ಕಾಗಿಯೇ ವೇದವನ್ನು ಛಂದಸ್ಸುಗಳೆಂದು ಕರೆದರು.  ಛಾದಯಂತಿ ಇತಿ ಛಂದಃ. ಅಂದರೆ ಹೇಳಬೇಕಾದುದನ್ನು ಮುಚ್ಚಿಟ್ಟು ಹೇಳುವಂಥಹದ್ದು ಎಂದರ್ಥ.
ಶಬ್ದ ಅಥವಾ ಭಾಷೆ  ಎಂದರೆ ಅದು ಕ್ರಿಯೆ ಮತ್ತು  ಕಾರಕಗಳ ಸಮಷ್ಟಿ. ಪ್ರಾಚೀನ ಭಾಷಾಶಾಸ್ತ್ರಜ್ಞರಲ್ಲಿ ಒಂದು ಪಂತ ಶಬ್ದದಲ್ಲಿ ಮುಖ್ಯವಾದುದು ಕ್ರಿಯೆ ಎನ್ನುವ ವಾದದಲ್ಲಿ ತೊಡಗಿತ್ತು. ಇದನ್ನು ‘ಕಾರ್ಯತಾವಾದ’ ಎನ್ನುತ್ತಾರೆ.  ಕ್ರಿಯೆಯ ಮೂಲಕವೇ ಭಾಷಾಜ್ಞಾನ ಬರುವುದು ಮತ್ತು ಕ್ರಿಯೆಗೆ ಅನ್ವಿತವಾಗಿ ಉಳಿದ ಶಬ್ದಗಳು ಅರ್ಥವಾಗುತ್ತದೆ ಎನ್ನುವುದು ಈ ಪಂತದ ತಿಳುವಳಿಕೆಯಾಗಿತ್ತು. ಆದರೆ  ಭಾಷಾಜ್ಞಾನಕ್ಕೆ ಕಾಲಿಡುವ ಪುಟ್ಟ ಮಗು ಭಾಷೆಯನ್ನು ಕಲಿಯುವಾಗ ಮೊತ್ತ ಮೊದಲು ಕಲಿಯುವುದು: “ಇದು ನನ್ನ ಅಮ್ಮ/ಅಪ್ಪ” ಎನ್ನುವ  ಮಾತನ್ನು. ಇಲ್ಲಿ ಕ್ರಿಯಾಪದವೇ ಇಲ್ಲ. ಈ ಹಿನ್ನೆಲೆಯಲ್ಲಿ ನೋಡಿದಾಗ ವ್ಯಕ್ತಿ ಅಥವಾ ವಸ್ತು ಭಾಷೆಯಲ್ಲಿ ಮುಖ್ಯವಾಗುತ್ತದೆ ಮತ್ತು ಕ್ರಿಯೆ ಅದರ ಸುತ್ತ ಹೆಣೆದುಕೊಳ್ಳುತ್ತದೆ ಎನ್ನುವ ವಿಚಾರ. ಹೀಗಾಗಿ ಕಾರ್ಯತಾವಾದ ಕ್ರಮೇಣ ಬಿದ್ದು ಹೋಯಿತು.
ಭಾಷೆಯಲ್ಲಿ ನಾವು ಏಳು ವಿಭಕ್ತಿಗಳ ಮೂಲಕ ಕ್ರಿಯೆಯನ್ನು ಅನ್ವಯ ಮಾಡುತ್ತೇವೆ:

ವಿಭಕ್ತಿ
ಕಾರಕ
ಅರ್ಥ
ಉದಾಹರಣೆ
ಪ್ರಥಮಾ
ಕರ್ತೃ
ಉ
ಅವನು
ದ್ವಿತೀಯಾ
ಕರ್ಮ
ಅನ್ನು
ಅವನನ್ನು
ತೃತೀಯಾ
ಕಾರಣ ಕರ್ತೃ
ಇಂದ
ಅವನಿಂದ
ಚತುರ್ಥೀ
ಸಂಪ್ರದಾನ
ಗೆ, ಇಗೆ, ಕ್ಕೆ
ಅವನಿಗೆ
ಪಂಚಮೀ
ಅಪಾದಾನ
ದೆಸೆಯಿಂದ
ಅವನ ದೆಸೆಯಿಂದ
ಷಷ್ಟೀ
ಸಂಬಂಧ
ಅ
ಅವನ
ಸಪ್ತಮೀ
ಅಧಿಕರಣ
ಅಲ್ಲಿ
ಅವನಲ್ಲಿ

ಕಾರಕಗಳು ವಸ್ತುವಿನಲ್ಲಿ ಇರತಕ್ಕಂತಹ  ಕ್ರಿಯೆಗೆ ಸಂಬಂಧಪಟ್ಟ ಗುಣಗಳನ್ನು ಹೇಳುತ್ತವೆ ಮತ್ತು ಕ್ರಿಯೆಯನ್ನು ಹೇಳುತ್ತವೆ. ಭಾಷೆ ಎಂದರೆ ಕ್ರಿಯೆ ಮತ್ತು ಕಾರಕಗಳ ಸಂಗಮ. ಯಾವ ಭಾಷೆಯಲ್ಲಾದರೂ ಕೂಡಾ ಅಲ್ಲಿ ಒಂದು ಕ್ರಿಯಾಪದವಿರುತ್ತದೆ ಮತ್ತು ಅದಕ್ಕೆ ಅನ್ವಿತವಾಗುವ ಕಾರಕ ಪದಗಳಿರುತ್ತವೆ. ಕಾರಕ ಪದಗಳಲ್ಲಿ ಒಂದು ಕರ್ತೃ ಇದ್ದು ಅದಕ್ಕೊಂದು ವಿಶೇಷಣವಿರಬಹುದು. ಅಂದರೆ ಒಂದು ವಿಶೇಷ್ಯ ಅದಕ್ಕೊಂದು ವಿಶೇಷಣ. ಆನಂತರ ವಿಭಕ್ತಿಗಳು. ವಿಶೇಷ್ಯಕ್ಕೆ ಯಾವ ವಿಭಕ್ತಿಯೋ ವಿಶೇಷಣಕ್ಕೂ ಅದೇ ವಿಭಕ್ತಿ. ವಿಶೇಷ್ಯಕ್ಕೆ ಯಾವ ಲಿಂಗವೋ ವಿಶೇಷಣಕ್ಕೂ ಅದೇ ಲಿಂಗ. ಸಂಸ್ಕೃತದಲ್ಲಿ ಕಾರಕಗಳಿಗೆ ಲಿಂಗವಿದೆ ಆದರೆ ಕ್ರಿಯಾಪದಗಳಿಗೆ ಲಿಂಗವಿಲ್ಲ. [ಕನ್ನಡದಲ್ಲಿ ಕ್ರಿಯಾಪದಕ್ಕೆ ಲಿಂಗವನ್ನು ಹೇಳುತ್ತಾರೆ. ಉದಾಹರಣೆಗೆ ಅವನು ಹೋಗುತ್ತಾನೆ; ಅವಳು ಹೋಗುತ್ತಾಳೆ. ಆದರೆ ನಿಜವಾಗಿ ಕ್ರಿಯಾಪದಕ್ಕೆ ಲಿಂಗವಿಲ್ಲ. ಹೀಗಾಗಿ ಸಂಸ್ಕೃತದಲ್ಲಿ ಕ್ರಿಯಾಪದಕ್ಕೆ ಲಿಂಗವನ್ನು ಹೇಳುವುದಿಲ್ಲ. ಉದಾಹರಣೆಗೆ: ಗಚ್ಛತಿ]. ಕಾರಕಗಳಿಗೆ ಲಿಂಗವಿರುವುದರಿಂದ ಅದಕ್ಕನುಗುಣವಾಗಿ ವಿಶೇಷ್ಯ-ವಿಶೇಷಣಗಳು ಸ್ತ್ರೀ/ಪುರುಷ/ನಪುಂಸಕ ಲಿಂಗವಾಗಿ ಬದಲಾಗುತ್ತಿರುತ್ತವೆ. ಆದರೆ ಕೆಲವೊಮ್ಮೆ ಲಿಂಗಕ್ಕೂ ಕಾರಕಕ್ಕೂ ಸಂಬಂಧವಿರುವುದಿಲ್ಲ. ಉದಾಹರಣೆಗೆ ಮಗು. ಅಲ್ಲಿ ಅದು ಗಂಡೇ ಇರಬಹುದು  ಅಥವಾ ಹೆಣ್ಣೇ ಇರಬಹುದು. ಆದರೆ ಅಲ್ಲಿ  ಸ್ತ್ರೀ/ಪುರುಷ ಲಿಂಗವನ್ನು ಬಳಸುವುದಿಲ್ಲ. ಕಾರಣವೇನೆಂದರೆ ಮಗುವಿನಲ್ಲಿ ಇನ್ನೂ ಸ್ತ್ರೀತ್ವ ಅಥವಾ ಪುಂಸತ್ವ ಬೆಳೆದಿರುವುಲ್ಲ. ಹಾಗಾಗಿ ಅದನ್ನು ನಪುಂಸಕ ಲಿಂಗದಲ್ಲಿ ಹೇಳಲಾಗುತ್ತದೆ. ಇನ್ನು ಕೆಲವೊಮ್ಮೆ ಲಿಂಗಕ್ಕಿಂತ ಹೆಚ್ಚಾಗಿ ಅರ್ಥಕ್ಕೆ ಮಹತ್ವ ಕೊಡುತ್ತಾರೆ. ಉದಾಹರಣೆಗೆ ಕೆಲವು ಸಂದರ್ಭದಲ್ಲಿ ಹೆಂಡತಿಯನ್ನು ದಾರಾಃ ಎಂದು ಬಹುವಚನ ಮತ್ತು ಪುಲ್ಲಿಂಗದ ಹೇಳಲಾಗುತ್ತದೆ. ಕಾರಣವೇನೆಂದರೆ ಇದು ಲಿಂಗಕ್ಕಿಂತ ಪ್ರಾಧಾನ್ಯವಾಗಿ ಅರ್ಥಕ್ಕೆ ಮಹತ್ವ ಕೊಟ್ಟು ಹೇಳುವ ಮಾತು. ಹೆಂಡತಿ ಎಂದು ಹೇಳುವಾಗಲೆಲ್ಲ ದಾರಾಃ ಎಂದು ಹೇಳುವುದಿಲ್ಲ. ಇದು ಮನೆ ಒಡೆಯುವ(ದಾರಯತಿ) ಗಂಡುಬೀರಿ ಹೆಂಡತಿಗೆ ಉಪಯೋಗಿಸುವ ಪದ.  ಇವೆಲ್ಲವೂ ಮೂಲ ಸಂಸ್ಕೃತದ ಸೊಬಗು. ಆದರೆ ಕ್ರಮೇಣ ವ್ಯಾಕರಣ ಮತ್ತು  ಕೋಶಗಳಿಂದಾಗಿ ಭಾಷೆಯಲ್ಲಿ ಅನೇಕ ದೋಷಗಳು ಸೇರಿಕೊಂಡವು. ಉದಾಹರಣೆಗೆ: ಸಂಖ ಎನ್ನುವ ಪದ ತಪ್ಪಾಗಿ ಸಂಖ್ಯ ಎಂದು ಬಳಕೆಗೆ ಬಂತು; ದುಃಷಂತ ಎನ್ನುವ ಪದ ದುಷ್ಯಂತ ಎಂದು  ಬಳಕೆಗೆ ಬಂತು; ರುಗ್ಮನನ್ನು ರುಕ್ಮ ಮಾಡಲಾಯಿತು; ಬಾಹುಷಾಳಿ ಬಾಹುಶಾಲಿಯಾದ; ಅಕ್ಷೋಹಿಣಿಯನ್ನು ತಪ್ಪಾಗಿ ಅಕ್ಷೌಹಿಣಿ ಮಾಡಲಾಯಿತು. ಹೀಗೆ ಅನೇಕ ತಪ್ಪುಗಳು ಸೇರಿಕೊಂಡವು. ಮೂಲ ಸಂಸ್ಕೃತಕ್ಕೆ ತಪ್ಪು ಸೂತ್ರಗಳನ್ನು ಬರೆದು ತಪ್ಪು ಶಬ್ದಗಳನ್ನು ಸೃಷ್ಟಿ ಮಾಡಲಾಯಿತು; ‘ಳ ಮತ್ತು  ಕ್ಷ’ ಅಕ್ಷರವನ್ನೇ ತಿಂದು ಹಾಕಲಾಯಿತು. ಅಮರಕೊಶದಲ್ಲೂ ಕೂಡ ಅನೇಕ ತಪ್ಪುಗಳು ಸೇರಿಕೊಂಡವು. ಉದಾಹರಣೆಗೆ ಸಣ್ಣಸಣ್ಣ ಎಲೆಗಳಿರುವ ‘ಗಾಯತ್ತ್ರೀ ಬಾಲಪತ್ರೆ’ ಎನ್ನುವ ಔಷಧ ಗಿಡವನ್ನು ಅಮರಕೋಶ ತಪ್ಪಾಗಿ ‘ಗಾಯತ್ತ್ರೀಬಾಲತನಯ’ ಎಂದು ಹೇಳಿದೆ. ಇದಲ್ಲದೆ ಅತ್ಯಂತ ದೊಡ್ಡ ಅನಾಹುತ ಉಚ್ಛಾರ ದೋಷ. ಇಂದು ಭಾಷಾಧ್ವನಿಶಾಸ್ತ್ರ (phonetics) ವಿದ್ಯೆ ಕಣ್ಮರೆಯಾಗುತ್ತಿದೆ. ಇದರಿಂದಾಗಿ ನಾವು ಭಾಷೆಯನ್ನು ತಪ್ಪುತಪ್ಪಾಗಿ ಉಚ್ಛರಿಸುತ್ತಿದ್ದೇವೆ. ಹೀಗೆ ಅನೇಕ ತಪ್ಪುಗಳು ನಡೆದು ಅದರಿಂದಾಗಿ ಭಾಷೆಗೆ ಅನ್ಯಾಯವಾಗುತ್ತಿದೆ.
ಭಾಷೆಯ ವ್ಯಾಪ್ತಿ ಏನೇ ಇದ್ದರೂ ಕೂಡಾ, ಒಟ್ಟಿನಲ್ಲಿ ಹೇಳಬೇಕೆಂದರೆ ಕಾರಕವಿರಲೀ, ವಿಶೇಷ್ಯವಿರಲೀ, ವಿಶೇಷಣವಿರಲಿ, ಇದಾವುದರಿಂದಲೂ ಭಗವಂತನನ್ನು ಪೂರ್ಣವಾಗಿ ವಿವರಿಸಲು ಸಾಧ್ಯವಿಲ್ಲ ಎನ್ನುವುದನ್ನು ಇಲ್ಲಿ  ಚತುರ್ಮುಖ ನಾರದರಿಗೆ ವಿವರಿಸಿದ್ದಾನೆ.
ಯಾವ ಭಾಷೆಯೂ ಕೂಡಾ ಭಗವಂತನನ್ನು ಪೂರ್ಣವಾಗಿ ವಿವರಿಸಲಾರದು ಎನ್ನುವುದು ಮೇಲಿನ ಶ್ಲೋಕದ ಒಂದು ಅರ್ಥವಾದರೆ, ಈ ಶ್ಲೋಕಕ್ಕೆ ರೋಚಕವಾದ ಇನ್ನೊಂದು ಮುಖವಿದೆ.  “ಶಬ್ದಃ ನ ಪುರುಕಾರಕವಾನ್ ನ ಕ್ರಿಯಾರ್ಥಃ”  ಭಗವಂತನ ವಿಷಯದಲ್ಲಿ ಶಬ್ದಗಳು ಅನ್ವಯವಾದಾಗ ಅಲ್ಲಿ ಕಾರಕವೂ ಇಲ್ಲ, ವಿಭಕ್ತಿಯೂ ಇಲ್ಲ. ಎಲ್ಲವೂ ಭಗವಂತನ ನಾಮವಾಗಿ ಬಿಡುತ್ತದೆ. ಇದನ್ನು ತೋರಿಸುವುದಕ್ಕಾಗಿಯೇ ಪ್ರಾಚೀನರು ಒಂದು ಸುಂದರವಾದ ಪರಿಕಲ್ಪನೆ ನೀಡಿದರು. ಈ ಹಿಂದೆ ಹೇಳಿದಂತೆ:  ‘ಅ-ಕಾರದಿಂದ ಕ್ಷ-ಕಾರದವರೆಗಿನ ಐವತ್ತೈದು ವರ್ಣಮಾಲೆಯನ್ನು ಅಕ್ಷರ ಎಂದು ಕರೆಯುತ್ತಾರೆ. ಈ ಐವತ್ತೈದು ಅಕ್ಷರಗಳೂ ಕೂಡಾ ಭಗವಂತನ ನಾಮಧೇಯ ಎನ್ನುವ ಅಪೂರ್ವ ವಿಷಯವನ್ನು ಪ್ರಾಚೀನರು ನೀಡಿದ್ದಾರೆ. [ವಿವರಕ್ಕಾಗಿ ಒಂದನೇ ಸ್ಕಂಧದ ಮೊದಲ ಅಧ್ಯಾಯ ನೋಡಿ ೧.೧.೧]. ನಮಗೆ ತಿಳಿದಂತೆ ಸಂಸ್ಕೃತ ಭಾಷೆ ಸಂಕ್ಷಿಪ್ತ ಪದಗಳ ಭಂಡಾರ. (language of abbreviation). ಇಡೀ ಸಂಸ್ಕೃತ ಭಾಷೆ ಬೆಳೆದಿರುವುದೇ  ಸಂಕ್ಷೇಪಣಾ ತತ್ವದ ಮೇಲೆ. ಇದನ್ನು ಸಂಸ್ಕೃತದಲ್ಲಿ ‘ಸಮಾಹಾರ’ ಎನ್ನುತ್ತಾರೆ. ಎಲ್ಲವೂ ಹುಟ್ಟಿರುವುದು ಮೂಲತಃ ಓಂ-ಕಾರದಿಂದ. ಪ್ರತಿ ಅಕ್ಷರ ಭಗವಂತನ ನಾಮವಾದಾಗ ಪ್ರತಿ ಪದವೂ ಕೂಡಾ ಭಗವಂತನ ನಾಮವಾಗುತ್ತದೆ. ಉದಾಹರಣೆಗೆ: ವಿಶ್ವಂ ಎನ್ನುವ ಪದ ವರ್ಣಮಾಲೆಯಲ್ಲಿನ  ವ+ಇ+ಶ+ವ+ಅಂ ಎನ್ನುವ ಐದು ಅಕ್ಷರಗಳ ಸಂಗಮ. ಪ್ರತಿಯೊಂದು ಅಕ್ಷರಗಳೂ ಭಗವಂತನ ನಾಮವೆಂದಮೇಲೆ  ಅದರ ಸಮಷ್ಠಿಯೂ ಭಗವಂತನ ನಾಮವಾಗಲೇ ಬೇಕು. ಇದನ್ನೇ ವರಾಹಪುರಾಣ ಹೀಗೆ ವರ್ಣಿಸುತ್ತದೆ:  "ಯಾವಂತಿ ಪಟಿಥಾನಿ ತಾವಂತಿ ಹರಿನಾಮಂತಿ ಪಟಿಥಾನಿ ನಾಸಂಶಯಃ" . ಒಮ್ಮೆ ವೇದವನ್ನು ಓದಿದರೆ ಅದರಲ್ಲಿ ಎಷ್ಟು ಅಕ್ಷರಗಳಿವೆಯೋ ಅಷ್ಟು ಹರಿನಾಮವನ್ನು ನಾವು ಪಠಿಸಿದಂತಾಗುತ್ತದೆ.
ಮೇಲ್ನೋಟದಲ್ಲಿ ವೇದವನ್ನು ನೋಡಿದರೆ ಅಲ್ಲಿ ಅನೇಕ ಕರ್ಮವಾಚಕ ಪದಗಳನ್ನು ಕಾಣುತ್ತೇವೆ. ಆದರೆ ನಮಗೆ ತಿಳಿದಂತೆ ವೇದ ಅಂತತಃ ಹೇಳುವುದು ಭಗವಂತನನ್ನು. ಉದಾಹರಣೆಗೆ:  “ವಸಂತೇ ವಸಂತೇ ಜ್ಯೋತಿಷ ಯಜೇತಾ”: ಮೇಲ್ನೋಟದಲ್ಲಿ ನೋಡಿದರೆ: “ಪ್ರತಿಯೊಂದು ವಸಂತದಲ್ಲೂ ಜ್ಯೋತಿಷ್ಟೋಮಯಾಗ ಮಾಡು” ಎನ್ನುವುದು ಈ ಮಾತಿನ ಅರ್ಥ.  ಆದರೆ ಇಲ್ಲಿ ಬರುವ ಪ್ರತಿಯೊಂದು ಪದವನ್ನು ಭಗವಂತನ ಪರ ಅರ್ಥ ಮಾಡಿದಾಗ ಇದು ಭಗವಂತನನ್ನು ಹೇಳುವ ಅಪೂರ್ವವಾದ ಶ್ಲೋಕ ಎನ್ನುವುದು ತಿಳಿಯುತ್ತದೆ. ‘ವಸಂತೇ’ ಎನ್ನುವುದು ಸಂಬೋಧನೆ. ಅಲ್ಲಿ  ವಸಂತಿಃ ಎಂದರೆ ‘ಸರ್ವತ್ರ ವಸತೀತಿ ವಸನ್’;  ತತತ್ವತ್ ತಿತಿಃ. ಹೀಗಾಗಿ ವಸಂತೇ ಎಂದರೆ: ಎಲ್ಲವುದರ ಒಳಗೂ ವಾಸ ಮಾಡುವವನು, ಎಲ್ಲೆಡೆ ತುಂಬಿರುವವನು ಎಂದರ್ಥ.  ಅದೇ ರೀತಿ  ‘ಜ್ಯೋತಿಷ’. ಜ್ಯೋತಿಃ+ಷ= ಜ್ಯೋತಿಷ,   ಷ-ಕಾರೋ ಪ್ರಾಣೋ ಆತ್ಮಾ ಎನ್ನುತ್ತದೆ ಉಪನಿಷತ್. ಹೀಗಾಗಿ ‘ಷ’ ಎಂದರೆ ಸರ್ವಚೇಷ್ಠಕತ್ವ. ಆದ್ದರಿಂದ ಜ್ಯೋತಿಷ ಎಂದರೆ ಸ್ವಯಂ ಪ್ರಕಾಶಸ್ವರೂಪನೂ(ಜ್ಯೋತಿಃ), ಸರ್ವಚೇಷ್ಠಕನೂ(ಷ) ಆದ ಭಗವಂತ ಎಂದರ್ಥ. ಇನ್ನು ‘ಆಯುಜೇತಾ’. ಆಯಜ್ಞೇ ತಸ್ಯ ಆಯುಜೇತಃ. ಅಂದರೆ: ಎಲ್ಲಾ ಯಜ್ಞಗಳಿಂದ ಪೂಜಿತನಾದವನು ಎಂದರ್ಥ. ಹೀಗೆ ಇಲ್ಲಿರುವ ಎಲ್ಲಾ ಪದಗಳೂ ಭಗವಂತನ ಗುಣವರ್ಣನೆ ಮಾಡುವ ಪದಗಳು.  ಈ ರೀತಿ ಪ್ರತಿಯೊಂದು ಪದವನ್ನು  ಭಗವಂತನ ಪರ ನೋಡಿದಾಗ ಅಲ್ಲಿ ಕಾರಕವೂ ಇಲ್ಲ,  ಕ್ರಿಯಾರ್ಥವೂ ಇಲ್ಲ. ಎಲ್ಲವೂ ಭಗವಂತನ ಗುಣವಾಚಕ ಪದಗಳು. ಇದು ಶಬ್ದಪ್ರಪಂಚವನ್ನು ಕೆದಕಿದಾಗ ಅಲ್ಲಿ ಸಿಗುವ ಅಪೂರ್ವ ಒಳಾರ್ಥಗಳು. ಆದರೆ  ಇಷ್ಟೆಲ್ಲಾ ಇದ್ದರೂ ಕೂಡಾ, “ಯಾವುದೇ ಭಾಷೆಯಿಂದಾಗಲೀ, ಶಬ್ದ ಭಂಡಾರದಿಂದಾಗಲೀ ಭಗವಂತನನ್ನು ಪೂರ್ಣವಾಗಿ ವರ್ಣಿಸಲು ಸಾಧ್ಯವಿಲ್ಲ” ಎಂದಿದ್ದಾನೆ ಚತುರ್ಮುಖ.

ಈ ಮೊದಲು ಹೇಳಿದಂತೆ ನಮಗೂ ಭಗವಂತನಿಗೂ ನಡುವೆ ಎರಡು ಮಾಯಾ ಪರದೆಗಳಿವೆ. ಆದರೆ ಇದು ಕೇವಲ ನಮಗೆ ಮಾತ್ರ ಅನ್ವಯವಾಗುವ ಪರದೆ ಹೊರತು ಭಗವಂತನಿಗಲ್ಲ.  ಆದನ ಮುಂದೆ ಯಾವ ಪರದೆಯೂ ಇಲ್ಲ. “ಮಾಯಾತೀತನಾದ ಭಗವಂತನ ಮುಂದೆ ಯಾವ ಮಾಯೆಯೂ ತಲೆ ಎತ್ತಲಾರದು” ಎಂದಿದ್ದಾನೆ ಚತುಮುಖ. ಒಟ್ಟಿನಲ್ಲಿ ಹೇಳಬೇಕೆಂದರೆ: ಈ ಶ್ಲೋಕ ಭಾಷಾಶಾಸ್ತ್ರದ ಅದ್ಭುತ ಒಳನೋಟದೊಂದಿಗೆ “ಮಾಯಾತೀತನಾದ ಭಗವಂತನನ್ನು ಶಬ್ದಗಳಿಂದ ಪೂರ್ಣವಾಗಿ ವರ್ಣಿಸುವುದು ಅಸಾಧ್ಯ” ಎನ್ನುವ ಸಂದೇಶವನ್ನು ನೀಡುವ ಅಪೂರ್ವ ಶ್ಲೋಕ. 

Friday, October 2, 2015

Shrimad BhAgavata in Kannada -Skandha-02-Ch-07(36)


ಭಗವಂತನ ಗುಣಲಕ್ಷಣಗಳ ವಿವರಣೆ  ಮುಂದುವರಿದುದು:

೩. ಪ್ರತಿಬೋಧಃ : ಸಾಮಾನ್ಯವಾಗಿ ಪ್ರತಿಬೋಧ ಎನ್ನುವ ಪದವನ್ನು ‘ಎಚ್ಚರ ತಪ್ಪಿದವನಿಗೆ ಎಚ್ಚರವಾಗುವುದು’ ಎನ್ನುವ ಅರ್ಥದಲ್ಲಿ ಬಳಸಲಾಗುತ್ತದೆ. ಆದರೆ ಭಗವಂತನಿಗೆ ಎಂದೂ ಎಚ್ಚರ ತಪ್ಪುವುದಿಲ್ಲ. ಹೀಗಾಗಿ ಈ ಅರ್ಥ ಇಲ್ಲಿ ಕೂಡುವುದಿಲ್ಲ. ಭಗವಂತನ ಪರವಾಗಿ ಈ ಶಬ್ದವನ್ನು ನೋಡಿದರೆ ಈ ವಿಶೇಷಣಕ್ಕೆ ವಿಶೇಷ ಅರ್ಥವಿರುವುದು ತಿಳಿಯುತ್ತದೆ. ಪ್ರತಿವಸ್ತು ವಿಷಯಕಃ ಬೋಧಃ ಪ್ರತಿಬೋಧಃ. ಅಂದರೆ :ಪ್ರಪಂಚದಲ್ಲಿ ಎಷ್ಟು ವಸ್ತುಗಳಿವೆಯೋ ಅದನ್ನು ತಿಳಿದವನು ಪ್ರತಿಬೋಧ ಎಂದರ್ಥ. ಭಗವಂತನಿಗೆ ಗೋಚರವಾಗದ ಒಂದು ವಸ್ತುವೂ ಈ ಪ್ರಪಂಚದಲ್ಲಿಲ್ಲ. ಹಾಗಾಗಿ ಸರ್ವಜ್ಞನಾದ ಭಗವಂತ ‘ಪ್ರತಿಬೋಧ’. ಇದನ್ನೇ ಶ್ರುತಿ  ಯಃ ಸರ್ವಜ್ಞಃ ಸರ್ವವಿತ್ ಯಸ್ಯ ಜ್ಞಾನಮಯಂ ತಪಃ  ಎಂದು ವರ್ಣಿಸುತ್ತದೆ.   
೪. ಶುದ್ಧಂ: ವೇದದಲ್ಲಿ ಬಂದ ಪದಗಳನ್ನೇ ಇಲ್ಲಿ ಬಳಸಿರುವುದನ್ನು ಕಾಣುತ್ತೇವೆ. ಈಶಾವಾಸ್ಯ ಉಪನಿಷತ್ತಿನಲ್ಲಿ ಭಗವಂತನ ಗುಣವರ್ಣನೆ ಮಾಡುತ್ತಾ ಹೀಗೆ ಹೇಳಿದ್ದಾರೆ: ಸ ಪರ್ಯಗಾಚ್ಛುಕ್ರಮಕಾಯಮವ್ರಣಮಸ್ನಾವಿರಂ ಶುದ್ಧಂ ಅಪಾಪ ವಿದ್ಧಮ್, ಕವಿರ್ಮನೀಷೀ ಪರೀಭೂಸ್ಸ್ವಯಂಭೂರ್ಯಾಥಾತಥ್ಯತೋSರ್ಥಾನ್ ವ್ಯದಧಾಚ್ಛಾಶ್ವತೀಭ್ಯಃ ಸಮಾಭ್ಯಃ (೧-೮). ಯಾವ ದೋಷದ ಸ್ಪರ್ಶವೂ ಇಲ್ಲದ ಸರ್ವಗುಣಗಳ ನೆಲೆಯಾದ ತ್ರಿಗುಣಾತೀತ ಭಗವಂತ ಶುದ್ಧಃ. ತ್ರೈಗುಣ್ಯ ವರ್ಜಿತಂ ಅಜಮ್ ವಿಭುಂ ಆಧ್ಯಂಈಶಂ. ಆತನಿಗೆ ಸತ್ವ-ರಜ-ತಮೋಗುಣಗಳ ಸ್ಪರ್ಶವೇ ಇಲ್ಲ. “ಸಾಕ್ಷೀ ಚೇತಾ ಕೇವಲೋ ನಿರ್ಗುಣಶ್ಚ”  ಭಗವಂತನೊಬ್ಬನೇ ಪೂರ್ಣ ಶುದ್ಧ ಮತ್ತು ಪವಿತ್ರ. ಆತನನ್ನು ಬಿಟ್ಟು ಆತನಿಗೆ ಸಮನಾದ ಅಥವಾ ಶ್ರೆಶವಾದ ಇನ್ನೊಂದು ತತ್ತ್ವವಿಲ್ಲ.
೫. ಸಮಂ: ಈ ವಿಶೇಷಣವನ್ನು ಅನೇಕ ಅರ್ಥದಲ್ಲಿ ಬಳಸುತ್ತಾರೆ. ಗೀತೆಯಲ್ಲಿ ಶ್ರೀಕೃಷ್ಣ ಹೇಳುವಂತೆ: ನಿರ್ದೋಷಂ ಹಿ ಸಮಂ ಬ್ರಹ್ಮ(೫-೧೯).ಎಲ್ಲರನ್ನೂ ಸಮನಾಗಿ ಕಾಣುವ ಭಗವಂತನಿಗೆ ಯಾವುದೇ ತಾರತಮ್ಯ ಅಥವಾ ಭೇದವಿಲ್ಲ. ಪಾಂಡವರ ಕಡೆಯಿಂದ ಶಾಂತಿಧೂತನಾಗಿ ಬಂದ ಶ್ರೀಕೃಷ್ಣ ಹಸ್ತಿನಪುರದಲ್ಲಿ ಉಳಿದುಕೊಂಡಿದ್ದುದು ವಿದುರನ ಮನೆಯಲ್ಲಿ. ಅಲ್ಲಿ ಆತನಿಗೆ ಸಂಬಂಧಿಯಾದ ದುರ್ಯೋಧನ; ವೇದಜ್ಞರಾದ  ದ್ರೋಣಾಚಾರ್ಯರು; ಅಗ್ರಪೂಜೆಮಾಡಿದ ಭೀಷ್ಮಾಚಾರ್ಯರು; ಇವರೆಲ್ಲರಿಗಿಂತ ವಿದುರನ ಭಕ್ತಿ ಮಹತ್ತಾಯಿತು. ಭಗವಂತ ಪುರಸ್ಕರಿಸುವುದು ಧರ್ಮವನ್ನು ಹೊರತು   ಆಸ್ತಿ-ಅಂತಸ್ಥನ್ನಲ್ಲ. ಸಂಬಂಧದ ದೃಷ್ಟಿಯಲ್ಲಿ ನೋಡಿದರೆ: ದುರ್ಯೋಧನನ ಮಗಳು ಲಕ್ಷಣಳನ್ನು ಕೃಷ್ಣನ ಮಗ ಸಾಂಬ ಮದುವೆಯಾಗಿದ್ದ. ಹೀಗಾಗಿ ದತ್ತಕ್ಕೆ ಕೊಟ್ಟ ಸೋದರತ್ತೆಯ ಮಕ್ಕಳಾದ ಪಾಂಡವರಿಗಿಂತ ಕೃಷ್ಣನಿಗೆ ದುರ್ಯೋಧನನೇ ಹತ್ತಿರದ ಸಂಬಂಧಿ. ಆದರೆ ಭಗವಂತನ ಸಂಬಂಧ ಕೇವಲ ಧರ್ಮದ ಸಂಬಂಧ. ಆತ ಜೀವಯೋಗ್ಯತೆಗನುಗುಣವಾಗಿ ಎಲ್ಲರನ್ನೂ ಕಂಡು ಅವರವರ ಕರ್ಮಕ್ಕೆ ತಕ್ಕಂತೆ ಫಲವನ್ನು ನೀಡುತ್ತಾನೆ.
ಅಂತರ್ಯಾಮಿಯಾಗಿರುವ ಭಗವಂತ ಎಲ್ಲದರಲ್ಲೂ ಸಮ. ಅಂದರೆ ಇರುವೆಯೊಳಗಿರುವ ಭಗವಂತ ಮತ್ತು ಆನೆಯಲ್ಲಿರುವ ಭಗವಂತ ಬೇರೆಬೇರೆ ಅಲ್ಲ. ಹಾಗೆಯೇ ಭಗವಂತನ ಮೂಲರೂಪಕ್ಕೂ ಮತ್ತು ಆತನ ಅವತಾರ ರೂಪಕ್ಕೂ ಭೇದ ಚಿಂತನೆ ಇಲ್ಲ. ಆತನ ಮೂಲರೂಪ, ಅವತಾರ ರೂಪ ಎಲ್ಲವೂ ಪೂರ್ಣ.
೬. ಸದಸತ್ : ಭಗವಂತ ಸತ್ ಮತ್ತು ಅಸತ್ತಿನಿಂದಾಚೆಗಿರುವವ ಶ್ರೇಷ್ಠ ತತ್ತ್ವ.  ಈ ಪ್ರಪಂಚ ಸತ್-ಅಸತ್ತಿನ ಮಿಶ್ರಣ. ಸತ್ ಅಂದರೆ ಕಣ್ಣಿಗೆ ಕಾಣುವ ವಸ್ತು.  ಅಸತ್ ಎಂದರೆ ಕಣ್ಣಿಗೆ ಕಾಣದ ವಸ್ತು. ಹೀಗಾಗಿ ಪಂಚಭೂತಗಳಲ್ಲಿ ಮಣ್ಣು-ನೀರು-ಬೆಂಕಿ ಸತ್.  ಗಾಳಿ ಮತ್ತು ಆಕಾಶ ಅಸತ್. ಪಂಚಭೂತಗಳು, ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚತನ್ಮಾತ್ರೆಗಳು ಮತ್ತು  ಪಂಚವಿಧದ ಅಂತಃಕರಣ, ಈ ಪಂಚಕದಿಂದಲೇ ಈ ಪ್ರಪಂಚ ನಿರ್ಮಾಣವಾಗಿದೆ. ಆದರೆ ಭಗವಂತ ಇವೆಲ್ಲವುಗಳಿಂದ ಆಚೆಗಿರುವವನು. ಹೀಗಾಗಿ ಇಂಥಹ ಭಗವಂತನನ್ನು ಶಬ್ದಗಳಿಂದ ವರ್ಣಿಸುವುದು ಸಾಧ್ಯವಿಲ್ಲ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಹೇಳುವಂತೆ: “ನೇತಿ ನೇತಿ ಆತ್ಮಾ ಅಗ್ರಹ್ಯಃ ನ ಹಿ ಗ್ರಹ್ಯತೆ” ಅಂದರೆ ಭಗವಂತನನ್ನು ಮೊದಲು ಏನೆಂದು ತಿಳಿಯಬೇಕೆಂದರೆ: “ಭಗವಂತ ಪೂರ್ಣವಾಗಿ ತಿಳಿಯಲಿಕ್ಕಾಗುವ ವಸ್ತುವಲ್ಲ” ಎಂದು!  ಅವನನ್ನು ಪೂರ್ಣವಾಗಿ ತಿಳಿಯುವುದು ಅಸಾಧ್ಯ ಎಂದು ತಿಳಿಯುವುದೇ ಮೊದಲು ನಾವು ಭಗವಂತನ ಬಗ್ಗೆ ತಿಳಿಯಬೇಕಾದ ವಿಷಯ.
೭. ಪರಮಾತ್ಮತತ್ತ್ವಮ್: ಆತ್ಮ ಶಬ್ದಕ್ಕೆ ಅನೇಕ ಅರ್ಥಗಳಿವೆ. ಆತ್ಮ ಎನ್ನುವ ಪದದ ಅರ್ಥವನ್ನು ಭಾರತ ಹೀಗೆ ವರ್ಣಿಸುತ್ತದೆ:  ‘ಯಚ್ಚಾಪ್ನೋತಿ ಯದಾದತ್ತೇ ಯಚ್ಚಾತ್ತಿ ವಿಷಯಾನಿಹ|  ಯಚ್ಚಾಸ್ಯ ಸನ್ತತೋ ಭಾವಸ್ತಸ್ಮಾದಾತ್ಮೇತಿ ಭಣ್ಯತೇ’ ಇತಿ|  .  ಇಲ್ಲಿ ನಾಲ್ಕು ಧಾತುಗಳ ಮೂಲಕ ಆತ್ಮಶಬ್ದದ ವಿವರಣೆ ನೀಡಿದ್ದಾರೆ. (೧). ಆಪ್ನೋತಿ ಇತಿ ಆತ್ಮಾ. ಅಂದರೆ ಯಾರು ಒಳಗೂ ಹೊರಗೂ ತುಂಬಿ ಎಲ್ಲಾಕಡೆ ವ್ಯಾಪಿಸಿದ್ದಾನೋ ಅವನು ಆತ್ಮಾ. (೨). ಆದತ್ತೇ ಇತಿ ಆತ್ಮಾ. ಎಲ್ಲವನ್ನೂ ಪಡೆಯಬಲ್ಲವನು,  ಭಕ್ತಿಯಿಂದ ಏನನ್ನು ಕೊಟ್ಟರೂ ಸ್ವೀಕಾರ ಮಾಡುವವನು, ಜೀವನಿಗೆ ಮೋಕ್ಷ ನೀಡುವ ಭಗವಂತ ಆತ್ಮಾ. (೩). ಅತ್ತೀತಿ ಆತ್ಮಾ. ಎಲ್ಲರ ಇಂದ್ರಿಯದೊಳಗಿದ್ದು ಎಲ್ಲವನ್ನೂ ಗ್ರಹಣ ಮಾಡುವ ಆನಂದಮಯನಾದ ಭಗವಂತ ಆತ್ಮಾ (೪). ಆತನೋತಿ ಇತಿ ಆತ್ಮಾ:. ಅನಾದಿ ಅನಂತಕಾಲದಲ್ಲಿರುವ ನಿತ್ಯ ಸತ್ಯ ಭಗವಂತ ಆತ್ಮಾ.
ಒಂದನೇ ಸ್ಕಂಧದಲ್ಲಿ ಈಗಾಗಲೇ ವಿವರಿಸಿದಂತೆ ಬ್ರಹ್ಮೇತಿ ಪರಮಾತ್ಮೇತಿ ಭಗವಾನಿತಿ ಶಬ್ದ್ಯತೇ ॥೧.೨.೧೧॥ ಎಲ್ಲಕ್ಕಿಂತಲೂ ಹಿರಿದಾದ, ಸರಿಸಾಟಿ ಇಲ್ಲದ(ಅದ್ವಯಮ್), ಸ್ವತಂತ್ರನಾದ ಭಗವಂತನನ್ನೇ ತತ್ತ್ವಜ್ಞಾನಿಗಳು ‘ತತ್ತ್ವ’ ಎಂದು ಕರೆಯುತ್ತಾರೆ. ಇಂತಹ ಭಗವಂತನನ್ನು ಬ್ರಹ್ಮ, ಪರಂಬ್ರಹ್ಮ, ಆತ್ಮ, ಪರಮಾತ್ಮ, ಭಗಃ, ಭಗವಾನ್ ಇತ್ಯಾದಿ ಗುಣವಾಚಕ ನಾಮಗಳಿಂದ ಕರೆಯುತ್ತಾರೆ.  ತತ್ತ್ವ ಎಂದರೆ: ಹಿಂದೆ ಹೇಗಿತ್ತೋ ಹಾಗೇ ಎಂದೆಂದೂ ಇರುವಂತಹದ್ದು. ನಮ್ಮ ಅಭಿರುಚಿ, ಚಿಂತನೆ, ತೀರ್ಮಾನ ದಿನಕ್ಕೊಂದು ರೀತಿ. ಅದು ಬದಲಾಗುತ್ತಲೇ ಇರುತ್ತದೆ. ಆದರೆ ಭಗವಂತ ಹಾಗಲ್ಲ. ನಿರ್ವಿಕಾರನಾಗಿ ಎಲ್ಲಾ ಕಾಲದಲ್ಲೂ ಸದಾ ಏಕರೂಪವಾಗಿರುವ ತತ್ತ್ವ ಭಗವಂತನೊಬ್ಬನೇ.

ಒಟ್ಟಿನಲ್ಲಿ ಹೇಳಬೇಕೆಂದರೆ ಯಾವುದು ಆನಂದಮಯವೋ, ಯಾವುದು ಎಲ್ಲಾ ಶಬ್ದಗಳ ಕೊನೆಯೋ, ಯಾರಿಗೆ ದುಃಖ ಮತ್ತು ದೋಷದ ಸ್ಪರ್ಶವಿಲ್ಲವೋ, ಯಾವುದು ಜ್ಞಾನಾನಂದಮಯವೋ, ಯಾವುದು ಪ್ರಪಂಚಕ್ಕಿಂತ ಅತೀತವೋ, ಅಂಥಹ ನಿರ್ವಿಕಾರ ಮೂರ್ತಿ  ಭಗವಂತನನ್ನು ನಾವು ನಮ್ಮ ಜೀವಮಾನದಲ್ಲಿ  ನಮ್ಮ ಸಾಮರ್ಥ್ಯವಿದ್ದಷ್ಟು ಅರಿಯಲು ಪ್ರಯತ್ನಿಸಬೇಕು.

ಮುಂದುವರಿಯುತ್ತದೆ.,,,

Tuesday, September 29, 2015

Shrimad BhAgavata in Kannada -Skandha-02-Ch-07(35)

http://bhagavatainkannada.blogspot.in/
ಭಗವಂತನ ಗುಣಲಕ್ಷಣಗಳ ವಿವರಣೆ  ಮುಂದುವರಿದುದು:

ಎರಡನೆಯದಾಗಿ ಚತುರ್ಮುಖ ಭಗವಂತನನ್ನು ‘ಅಭಯಂ’ ಎಂದು ಕರೆದಿದ್ದಾನೆ. ಈ ಪ್ರಪಂಚದಲ್ಲಿ ಯಾರನ್ನೇ ತೆಗೆದುಕೊಂಡರೂ ಕೂಡಾ ಅವರು ಒಂದಲ್ಲಾ ಒಂದು ರೀತಿಯಲ್ಲಿ ಭಯಕ್ಕೊಳಪಟ್ಟವರಾಗಿರುತ್ತಾರೆ. ಭಾಗವತದಲ್ಲೇ ಹೇಳುವಂತೆ: ನೋ ಭಯಂ ಸಸೃಜುರ್ಹ್ಯದಃ (೨-೫-೩೩).  ಈ ಸಂಸಾರಕ್ಕೇ ‘ಭಯ’ ಎಂದು ಹೆಸರು. ಅಪಾಯ ಅಥವಾ ದುಃಖದ ನಿರೀಕ್ಷೆಯೇ ಭಯ. ಸಾಮಾನ್ಯವಾಗಿ ಭಯದ ಮೂಲ ಸಾವು  ಅಥವಾ ನಮ್ಮಿಂದ ಬಲಿಷ್ಠರು ಅಥವಾ ನಮ್ಮ ಸಮಾನಸ್ಕಂಧರು. ಆದರೆ ಶಾಸ್ತ್ರದಲ್ಲಿ ಹೇಳುವಂತೆ: “ಏಕಮೇವ, ಅದ್ವಿತೀಯಂ ಬ್ರಹ್ಮಾ”.  ಅನಂತಕಾಲದಲ್ಲಿರುವ ಭಗವಂತನ ಸಮಾನನಾಗಲೀ, ಆತನಿಗಿಂತ ಉತ್ತಮನಾಗಲೀ ಈ ಪ್ರಪಂಚದಲ್ಲಿಲ್ಲ. ಹೀಗಾಗಿ ಭಗವಂತ ಭಯಾತೀತ.
ಭಗವಂತನಿಗೆ ಅಭಯ ಎನ್ನುವ ವಿಶೇಷಣವನ್ನು ಏಕೆ ಬಳಸಿದ್ದಾರೆ ಎಂದರೆ: ಪ್ರತಿಯೊಬ್ಬ ಮನುಷ್ಯನೂ ಕೂಡಾ ಭಯಾತೀತನಾಗ ಬಯಸುತ್ತಾನೆ. ಯತಾ ಉಪಾಸತೇ ತತಾ ಭವತಿ. ಆತ ಏನನ್ನು ಬಯಸುತ್ತಾನೋ ಅದನ್ನೇ ಭಗವಂತನಲ್ಲಿ ಚಿಂತನೆ ಮಾಡುತ್ತಾನೆ. ಆದರೆ ಸಂಸಾರ ಭಯದಿಂದ ಪಾರಾಗಲು ನಮಗೊಬ್ಬ ಭಯಾತೀತ ಬೇಕು ಮತ್ತು ನಾವು ಅವನಲ್ಲಿ ಶರಣಾಗಿ ಭಯದಿಂದ ಪಾರಾಗಬೇಕು. ಆಗ ಅವನು ಅಭಯಹಸ್ತನಾಗಿ ನಮ್ಮನ್ನು ಕಾಪಾಡುತ್ತಾನೆ. ಅಂಥಹ ಭಯಾತೀತ ಕೇವಲ ಭಗವಂತನೊಬ್ಬನೆ.
ಹೌದು, ಈ ಪ್ರಪಂಚದಲ್ಲಿ ಭಗವಂತನನ್ನು ಬಿಟ್ಟು ಪೂರ್ಣ ಪ್ರಮಾಣದಲ್ಲಿ ಭಯಾತೀತರಾಗಿರುವವರು ಯಾರೂ ಇಲ್ಲಾ. ಚತುರ್ಮುಖ ಕೂಡಾ ನಾಭೀ ಕಮಲದಲ್ಲಿ ಕಣ್ತೆರೆದಾಗ ಒಂದು ಕ್ಷಣ ಪ್ರಳಯ ಸಮುದ್ರದ ನಡುವೆ “ನಾನೆಲ್ಲಿಂದ ಬಂದೇ?”  ಎಂದು ಭಯಗೊಂಡನಂತೆ. ಆನಂತರ ಯೋಚನೆ ಮಾಡಿ ಮುಂದುವರಿದನಂತೆ.

ಸಾಮಾನ್ಯವಾಗಿ ಮೃತ್ಯುವಿನ ಭಯ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಮೃತ್ಯುವಿಗೂ(ಯಮ/ಧರ್ಮದೇವತೆಗೂ) ಕೂಡಾ ಮೃತ್ಯುವಿನ(ಭಗವಂತನ) ಭಯವಿದೆ. ಇದನ್ನೇ ಕಠ ಉಪನಿಷತ್ತಿನಲ್ಲಿ ಯಮ ಹೀಗೆ ಹೇಳಿದ್ದಾನೆ:  ಯಸ್ಯ ಬ್ರಹ್ಮ ಚ ಕ್ಷತ್ರಂ ಚ ಉಭೇ ಭವತ ಓದನಃ । ಮೃತ್ಯುರ್ಯಸ್ಯೋಪಸೇಚನಂ ಕಃ ಇತ್ಥಾ ವೇದ ಯತ್ರ ಸಃ ॥೧-೨-೨೫॥ ನಾನು ನಿಮ್ಮೆಲ್ಲರನ್ನು ಸಂಹರಿಸುವ ಶಕ್ತಿಯಾದರೆ, ವಿಶ್ವಸಂಹಾರಕನಾದ ಭಗವಂತನಿಗೆ ಪ್ರಳಯಕಾಲದಲ್ಲಿ ಇಡೀ ವಿಶ್ವವೇ ಅನ್ನ ಮತ್ತು ಅದರಲ್ಲಿ ನಾನು ಊಟಕ್ಕೆ ಕಲಸಿಕೊಳ್ಳುವ ವ್ಯಂಜನವಿದ್ದಂತೆ” ಎಂದು.  ಹೀಗಾಗಿ ಸಾವಿಗೂ ಕೂಡಾ ಸಾವಿನ ಭಯವಿದೆ! ಮುಂದುವರಿದು ಯಮ ಹೇಳುತ್ತಾನೆ:   “ಅಭಯಂ ತಿತೀರ್ಷತಾಂ ಪಾರಂ ನಾಚಿಕೇತಂ ಶಕೇಮಹಿ(೧.೩.೨) ನಮ್ಮ  ಭಯವನ್ನು ಪರಿಹರಿಸುವವನು ಆ ಭಗವಂತನೊಬ್ಬನೇ ಮತ್ತು ಅವನನ್ನು ಮೋಕ್ಷದಲ್ಲಿ ಸೇರಿದಾಗ ಜೀವ 'ಅಭಯ'ವನ್ನು ಪಡೆಯುತ್ತಾನೆ” ಎಂದು.  ಹೀಗಾಗಿ ಎಂದೂ ಅಳಿವಿಲ್ಲದ ತತ್ತ್ವ ಭಗವಂತ ಅಭಯ; ಹುಟ್ಟು ಸಾವಿನಿಂದ ಪಾರಾದವನು ಅಭಯ. ಹಾಗಾಗಿ ಹುಟ್ಟು-ಸಾವಿನಿಂದ ಪಾರಾಗಬಯಸುವವನು ಆ ‘ಅಭಯ’ನಲ್ಲಿ ಶರಣಾಗಬೇಕು.

ಮುಂದುವರಿಯುತ್ತದೆ.,,,

Sunday, September 27, 2015

Shrimad BhAgavata in Kannada -Skandha-02-Ch-07(34)

http://bhagavatainkannada.blogspot.in

ಭಗವಂತನ ಲಕ್ಷಣಗಳು

ಶಶ್ವತ್ ಪ್ರಶಾಂತಮಭಯಂ ಪ್ರತಿಬೋಧಮಾತ್ರಂ ಶುದ್ಧಂ ಸಮಂ ಸದಸತಃ ಪರಮಾತ್ಮತತ್ತ್ವಮ್ ।
ಶಬ್ದೋ ನ ಯತ್ರ ಪುರುಕಾರಕವಾನ್ ಕ್ರಿಯಾರ್ಥೋ ಮಾಯಾ ಪರೈತ್ಯಭಿಮುಖೇ ಚ ವಿಲಜ್ಜಮಾನಾ ॥೪೭॥

ಭಗವಂತನ ಚಿಂತನೆ ಹೇಗೆ ಮಾಡಬೇಕು ಎನ್ನುವ ಸುಂದರವಾದ ಮಾತನ್ನು ಇಲ್ಲಿ ಚತುರ್ಮುಖ ನಾರದರಿಗೆ ವಿವರಿಸಿದ್ದಾನೆ. ಈ ಶ್ಲೋಕದ ಪ್ರಾರಂಭದಲ್ಲಿ  ‘ಶಶ್ವತ್’ ಎನ್ನುವ ಪದಪ್ರಯೋಗವಾಗಿರುವುದನ್ನು ನಾವು ಕಾಣುತ್ತೇವೆ. ಶಶ್ವತ್  ಎಂದರೆ ಸದಾಕಾಲ/ ಸರ್ವದಾ/ಎಂದೆಂದಿಗೂ  ಎಂದರ್ಥ. ಈ ಪ್ರಯೋಗವನ್ನು ಲೋಕದ ಗುಣವರ್ಣನೆ ಮಾಡುವಾಗ ಪ್ರಯೋಗಿಸಲು ಬರುವುದಿಲ್ಲ. ಏಕೆಂದರೆ  ಈ ಪ್ರಪಂಚ ಅಶ್ವತ್ಥ. ಅಂದರೆ  ಶಾಶ್ವತವಲ್ಲದ್ದು. ಆದರೆ ಭಗವಂತನ ಗುಣಗಳು ಶಶ್ವತ್. ಅದು ಯಾವ ವಿಕಾರಕ್ಕೂ ಒಳಪಡದ, ಅನಾದಿ ಅನಂತ ಕಾಲದಲ್ಲಿ ಏಕರೂಪವಾಗಿರುವಂಥಹದ್ದು.
ಅನಂತಕಾಲದಲ್ಲಿರುವ  ಭಗವಂತನ ಗುಣಗಳನ್ನು ವರ್ಣಿಸುತ್ತಾ ಚತುರ್ಮುಖ ಮೊತ್ತಮೊದಲು ‘ಪ್ರಶಾಂತಮ್’ ಎನ್ನುತ್ತಾನೆ.  ಬ್ರಹ್ಮಸೂತ್ರದಲ್ಲಿಯೂ ಕೂಡಾ ಇದನ್ನೇ ಆನಂದಮಯೋSಭ್ಯಾಸಾತ್” ಎಂದು   ಒತ್ತುಕೊಟ್ಟು ಹೇಳುತ್ತಾರೆ.  ಪ್ರತಿಯೊಬ್ಬ ಮನುಷ್ಯನೂ ಕೂಡಾ ಆನಂದವನ್ನು ಬಯಸುತ್ತಾನೆ. ಆದರೆ ಆನಂದವನ್ನು ಅರಸುವಿಕೆಯಿಂದಲೇ ಆತ ದುಃಖವನ್ನು ಪಡೆಯುತ್ತಾನೆ. ಹೀಗಾಗಿ ಆನಂದದ ಸೆಲೆ ಎಲ್ಲಿದೆ ಎನ್ನುವುದರ ಅರಿವಿಲ್ಲದಿರುವುದೇ ಮನುಷ್ಯನ ದುಃಖದ ಹಿಂದಿನ ಮೂಲಭೂತ ಸಮಸ್ಯೆ.
ಆನಂದದ ಮೂಲವನ್ನು ಹುಡುಕ ಹೊರಟವರಿಗೆ  ಮೊದಲು ತಿಳಿದದ್ದು ಅದು ನಿದ್ರೆಯಲ್ಲಿ ಸಿಗುತ್ತದೆ ಎನ್ನುವ ಸತ್ಯ. ನಿಜ, ನಮಗೆ ನಿದ್ರೆಯಲ್ಲಿ ಯಾವ ದುಃಖವೂ ಇರುವುದಿಲ್ಲ. ಅಲ್ಲಿ ಎಲ್ಲವೂ ಆನಂದ. ಆದರೆ ಅದೇ ಆನಂದ ಎಚ್ಚರ ಮತ್ತು ಕನಸಿನ ಸ್ಥಿತಿಯಲ್ಲಿ ಇರುವುದಿಲ್ಲ. ನಿದ್ದೆಯಲ್ಲಿ ಆನಂದ ಸಿಗಲು ಕಾರಣ ಅಲ್ಲಿ ಅಹಂಕಾರ-ಮಮಕಾರ ಇಲ್ಲದಿರುವುದು. ನಾವು ಎಚ್ಚರ/ಕನಸಿನಲ್ಲಿ ನಾನು-ನನ್ನದು ಎನ್ನುವ ಅಹಂಕಾರ-ಮಮಕಾರಕ್ಕೆ ಒಳಗಾಗದೇ ಇರುತ್ತಿದ್ದರೆ ಅಲ್ಲಿಯೂ ಕೂಡಾ  ಆನಂದ ಸಿಗುತ್ತಿತ್ತು. ಏಕೆಂದರೆ ಆನಂದ(Bliss) ಹೊರಗೆ ಸಿಗುವ ವಿಷಯವಲ್ಲ. ಅದು ನಮ್ಮೊಳಗೇ ಇದೆ. ಆದರೆ ಆ ಆನಂದವನ್ನು ಅಹಂಕಾರ-ಮಮಕಾರವೆನ್ನುವ ಪೊರೆ ಸುತ್ತುವರಿದಿರುತ್ತದೆ. ನಾವು ಅಹಂಕಾರ-ಮಮಕಾರದಿಂದ ಕಳಚಿಕೊಂಡರೆ ಮಾತ್ರ ಒಳಗಿರುವ ಆನಂದ ವ್ಯಕ್ತವಾಗುತ್ತದೆ. ಆದರೆ ಈ ಅಂತರಂಗದಲ್ಲಿರುವ ಆನಂದದ ಸೆಲೆಯನ್ನು ಗುರುತಿಸದ ನಾವು  ಸದಾ ಬಾಹ್ಯಸುಖ(Plesure/ಮೋದ/ಪ್ರಮೋದ)ವನ್ನು ಅರಸುತ್ತಾ ದುಃಖಕ್ಕೊಳಗಾಗುತ್ತೇವೆ.
ಈ ಮೇಲಿನ ವಿಶ್ಲೇಷಣೆಯಿಂದ ನಮಗೆ ತಿಳಿಯುವುದೇನೆಂದರೆ: ನಾವು ದುಃಖವನ್ನು ತೊರೆದು ಆನಂದವನ್ನು ಪಡೆಯಬೇಕಾದರೆ  ಮೊದಲು ಅಹಂಕಾರ-ಮಮಕಾರವನ್ನು ತೊರೆಯಬೇಕು ಎನ್ನುವ ಸತ್ಯ. ಆದರೆ ಅದನ್ನು ತೊರೆಯುವುದು ಹೇಗೆ?  ಇದು ಎಲ್ಲರನ್ನೂ ಕಾಡುವ ಕಠಿಣ ಪ್ರಶ್ನೆ. “ನಾನು-ನನ್ನದು ಎನ್ನುವುದು ಈ ಜಗತ್ತಿನಲ್ಲಿ ಯಾವುದೂ ಇಲ್ಲಾ” ಎನ್ನುವ ಕಠುಸತ್ಯವನ್ನರಿತವನು ಅಹಂಕಾರ-ಮಮಕಾರದಿಂದ ಮುಕ್ತಿ ಪಡೆಯಬಲ್ಲ. ಇದನ್ನೇ ಮೂಲತಃ ಅರ್ಪಣೆ ಎನ್ನುವುದು.  ಪೂಜೆಯಲ್ಲಿ ಬಳಸುವ ಸ್ವಾಹಾಃ, ನಮಃ, ನಮಮ ಇತ್ಯಾದಿ ಪದಗಲೂ ಕೂಡಾ  ಇದನ್ನೇ ಸೂಚಿಸುತ್ತವೆ. ನನ್ನತನವನ್ನು ತೊರೆದು ‘ನಿನಗೆ’ ಅರ್ಪಿಸುವುದೇ ಸ್ವಾಹಾಃ/ನಮಃ/ನಮಮ.   ಒಟ್ಟಿನಲ್ಲಿ ಹೇಳಬೇಕೆಂದರೆ: ಎಲ್ಲವೂ ಭಗವಂತನ ಅಧೀನ, ನನ್ನ ಅಧೀನ ಯಾವುದೂ ಇಲ್ಲಾ ಎನ್ನುವ ಮೂಲಸತ್ಯವನ್ನು ಅರಿತವನು ಜೀವನದಲ್ಲಿ ಆನಂದವನ್ನು ಕಾಣಬಲ್ಲ.
ಪವಮಾನ ಮಂಡಲದ ಕೊನೆಯ ಸೂಕ್ತವಾದ ಕರ್ಣಸೂಕ್ತದಲ್ಲಿ ಅನೇಕ ಅಪೂರ್ವದಾದ ಮಾತುಗಳು ಬರುತ್ತವೆ. “ಓ ಪ್ರಾಣನೇ, ನನ್ನೊಳಗಿನ ಆನಂದ ಅಭಿವ್ಯಕ್ತಗೊಳ್ಳಲಿ; ಅಂಥಹ ಆನಂದವನ್ನು ಕೊಡತಕ್ಕಂತಹ ಭಗವಂತನೆಡೆಗೆ ನನ್ನನ್ನು ಕರೆದೊಯ್ಯಿ”  ಎನ್ನುವ ಅಪೂರ್ವವಾದ ಪ್ರಾರ್ಥನೆ ಕರ್ಣಸೂಕ್ತದಲ್ಲಿದೆ. “ಯತ್ರಾನಂದಶ್ಚ ಮೋದಾಶ್ಚ ಮುದ ಪ್ರಮೋದ ಆಸತೇ : ಆನಂದ, ಮೋದ, ಪ್ರಮೋದ, ಎಲ್ಲವೂ ಪೂರ್ಣಪ್ರಮಾಣದಲ್ಲಿ ಎಲ್ಲಿದೆಯೋ,  ಅಲ್ಲಿಗೆ ನನ್ನನ್ನು ಕರೆದೊಯ್ಯಿ” ಎನ್ನುವ ಪ್ರಾರ್ಥನೆ ಇದಾಗಿದೆ.  ಇದು ಪ್ರಾಣೋತ್ಕ್ರಮಣ ಕಾಲದಲ್ಲಿ ಮಾಡಬೇಕಾದ ಪ್ರಾರ್ಥನೆ. ಪ್ರಾಣೋತ್ಕ್ರಮಣ ಕಾಲದಲ್ಲಿ ಇಂಥಹ ಪ್ರಾರ್ಥನೆ ಮಾಡಲು ಸಾಧ್ಯವಾಗದವರ ಕಿವಿಯಲ್ಲಿ ಈ ಮಂತ್ರವನ್ನು ಹೇಳುವುದು ಸಂಪ್ರದಾಯ. ಹೀಗಾಗಿ ಈ ಸೂಕ್ತಕ್ಕೆ ಕರ್ಣಸೂಕ್ತ ಎನ್ನುವ ಹೆಸರು ಬಂತು. ಕರ್ಣಸೂಕ್ತವನ್ನು ಬದುಕಿದ್ದಾಗ ಓದಬಾರದು, ಸತ್ತ ಮೇಲೆ ಹೇಳಬೇಕು ಎನ್ನುವ ಸಂಪ್ರದಾಯ ಇಂದು ತಪ್ಪಾಗಿ ಪ್ರಚಲಿತಕ್ಕೆ ಬಂದಿದೆ. ಯಾವುದೇ ಪ್ರಾರ್ಥನೆ ಮಾಡುವ ಮುನ್ನ ಆ ಪ್ರಾರ್ಥನೆಯ ಹಿಂದಿನ ಅನುಸಂಧಾನ ತಿಳಿದುಕೊಂಡಿರಬೇಕಾಗುತ್ತದೆ. ಬದುಕಿದ್ದಾಗ ಕರ್ಣಸೂಕ್ತವನ್ನು ಓದಿ ಅರ್ಥಮಾಡಿಕೊಳ್ಳದವನಿಗೆ ಆ ಪ್ರಾರ್ಥನೆಯನ್ನು ಪ್ರಾಣೋತ್ಕ್ರಮಣ ಕಾಲದಲ್ಲಿ ನೆನೆಯಲು ಸಾಧ್ಯವಿಲ್ಲ. ಹೀಗಾಗಿ ಕರ್ಣಸೂಕ್ತ, ಗರುಡಪುರಾಣ ಇತ್ಯಾದಿ ಗ್ರಂಥಗಳ ಅಧ್ಯಯನ ದೇಹದಲ್ಲಿ ತ್ರಾಣ ಇರುವಾಗಲೇ ನಡೆಯಬೇಕು.  

ಹೃತ್ಕಮಲ ಮಧ್ಯನಿವಾಸಿಯಾದ ಭಗವಂತ ಆನಂದದ ಪರಾಕಾಷ್ಠೆ. ಹೀಗಾಗಿ ಆತನನ್ನು  ಇಲ್ಲಿ ‘ಪ್ರಶಾಂತಮ್’ ಎಂದು ಸಂಬೋಧಿಸಿದ್ದಾನೆ ಚತುರ್ಮುಖ.  ‘ಪ್ರಶಾಂತ’ ಎನ್ನುವಲ್ಲಿ ‘ಪ್ರ’ ಎಂದರೆ ಶ್ರೇಷ್ಠ;  ‘ಶಂ’ ಎಂದರೆ ಆನಂದ; ‘ಅಂತ’ ಎಂದರೆ ತುತ್ತತುದಿ. ಆದ್ದರಿಂದ ಸಾರ್ವಕಾಲಿಕವಾದ, ಉತ್ಕೃಷ್ಟವಾದ, ದುಃಖದ ಸ್ಪರ್ಶವೇ ಇಲ್ಲದ, ತುದಿ-ಮೊದಲಿಲ್ಲದ, ಅನಂತವಾದ, ಆನಂದದ ಪರಾಕಾಷ್ಠೆಯಾದ ಭಗವಂತನ ಸ್ವರೂಪ  ‘ಪ್ರಶಾಂತ’.  ಇದೇ ಅರ್ಥದಲ್ಲಿ ‘ಶಾಂತಿಃ’  ಪದ ಬಳಕೆಯಾಗುತ್ತದೆ. ಶಂ+ಅಂತ+ಇ= ಶಾಂತಿ. ಇಲ್ಲಿ ಇ=ಜ್ಞಾನ (ಇ->ಇಹಿ, ಇಣ ಗತೌ). ಹಾಗಾಗಿ ‘ಶಾಂತಿಃ’ ಎಂದರೆ ಜ್ಞಾನಾನಂದಗಳ ಪರಾಕಾಷ್ಠೆ ಎಂದರ್ಥ.


ಮುಂದುವರಿಯುತ್ತದೆ....

Saturday, September 26, 2015

Shrimad BhAgavata in Kannada -Skandha-02-Ch-07(33)

http://bhagavatainkannada.blogspot.in
ಭಗವಂತನನ್ನು ಸೇರುವ ಯೋಗ್ಯೆತೆಯುಳ್ಳವರು ಯಾರು?

ತೇ ವೈ ವಿದಂತ್ಯತಿತರಂತಿ ಚ ದೇವಮಾಯಾಂ ಸ್ತ್ರೀಶೂದ್ರಹೂಣಶಬರಾ ಅಪಿ ಪಾಪಜೀವಾಃ । ಯದ್ಯದ್ಭುತಕ್ರಮಪರಾಯಣಶೀಲಶಿಕ್ಷಾಸ್ತಿರ್ಯಗ್ಜನಾ ಅಪಿ ಕಿಮು ಶ್ರುತಧಾರಣಾ ಯೇ ॥೪೬॥

ಕೇವಲ ವೇದಾಧ್ಯಯನ ಮಾಡುವವರಿಗಷ್ಟೇ ಭಗವಂತನ ಅನುಗ್ರಹ ಪ್ರಾಪ್ತಿಯಾಗುವುದಲ್ಲ. “ಸ್ತ್ರೀಯರು, ಶೂದ್ರರು, ಹೂಣರು, ಶಬರರು ಮತ್ತು ಪಾಪಯೋನಿಯಲ್ಲಿ ಹುಟ್ಟಿದವರು, ಹೀಗೆ ಯಾರೇ ಆಗಲಿ, ಅವರು ಭಗವಂತನಿಗೆ ತಮ್ಮನು ತಾವು ಅರ್ಪಿಸಿಕೊಂಡಾಗ, ಅವರಿಗೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ” ಎನ್ನುತ್ತಾನೆ ಚತುರ್ಮುಖ. ಇಲ್ಲಿ ವಿಶೇಷವಾಗಿ ಸ್ತ್ರೀಯರು, ಶೂದ್ರರು, ಹೂಣರು, ಶಬರರು ಮತ್ತು ಪಾಪಯೋನಿಯಲ್ಲಿ ಹುಟ್ಟಿದವರನ್ನು ಚತುರ್ಮುಖ ಉಲ್ಲೇಖಿಸಿರುವುದರ ಔಚಿತ್ಯವನ್ನು ನಾವಿಲ್ಲಿ ತಿಳಿಯಬೇಕು.
೧. ಸ್ತ್ರೀಯರು: ವಿಚಿತ್ರವೆಂದರೆ ಇಂದಿಗೂ ಕೂಡಾ ಕೆಲವರು ಸ್ತ್ರೀಯರಿಗೆ ಮೋಕ್ಷವಿಲ್ಲ, ಗ್ರಹಸ್ಥರಿಗೆ ಮೋಕ್ಷವಿಲ್ಲ, ಇತ್ಯಾದಿ ಅಸಂಬದ್ಧವಾದ ಹೇಳಿಕೆ ನೀಡುತ್ತಾ ಮೂಢನಂಬಿಕೆಯ ಕಡಲಲ್ಲಿ ಬದುಕುತ್ತಿದ್ದಾರೆ. ಸ್ತ್ರೀಜನ್ಮ ಪಾಪದ ಫಲ; ಮೊಕ್ಷಪ್ರಾಪ್ತಿಗೆ ಗಂಡಸರಾಗಿ ಹುಟ್ಟಬೇಕು ಎನ್ನುವ ಅಜ್ಞಾನಿಗಳಿವರು. ಈ ರೀತಿ ಮಾತನಾಡುವ ಮಂದಿಗೆ  ಶಾಸ್ತ್ರದ ಪರಿಜ್ಞಾನವಿರುವುದಿಲ್ಲ. ಸ್ತ್ರೀಜನ್ಮ ಎಂದೆಂದಿಗೂ ಪಾಪದ ಫಲವಲ್ಲ. ಭಗವಂತನ ನಂತರ ಈ ಜಗತ್ತನ್ನು ನಿಯಂತ್ರಿಸುವ ತತ್ತ್ವ  ಶ್ರೀಲಕ್ಷ್ಮಿ  ‘ಸ್ತ್ರೀ’ ಎನ್ನುವುದು ಈ ಅಜ್ಞಾನಿಗಳಿಗೆ ತಿಳಿದಿಲ್ಲ. ವೇದದಲ್ಲಿ ಹೇಳುವಂತೆ: ಮೊಕ್ಷದಲ್ಲೂ ಕೂಡಾ ಸ್ತ್ರೀ ಪುರುಷರಿರುತ್ತಾರೆ.  ಹೀಗಾಗಿ ಲಿಂಗ ಮೂಲತಃ ಜೀವಕ್ಕೆ ಸಂಬಂಧಿಸಿದ ವಿಷಯ. ಗಂಡು-ಹೆಣ್ಣು ಎನ್ನುವುದು ಜೀವಧರ್ಮವೇ ಹೊರತು ಶರೀರಧರ್ಮವಲ್ಲ. ಈ ಎಲ್ಲಾ ಹಿನ್ನೆಲೆಯೊಂದಿಗೆ ನೋಡಿದಾಗ ಸ್ತ್ರೀಜನ್ಮ ಕೇವಲ ಪಾಪಮಾಡಿದವರಿಗೆ ಬರುವಂತಹದ್ದು ಎನ್ನುವುದು ಅರ್ಥಶೂನ್ಯ.  ಉದಾಹರಣೆಗೆ ೧೬೧೦೦ ಮಂದಿ ಅಗ್ನಿಪುತ್ರರು ಭಗವಂತನ ಪತ್ನಿಯರಾಗಬೇಕು ಎಂದು ತಪಸ್ಸು ಮಾಡಿ, ಸ್ತ್ರೀಜನ್ಮ ಪಡೆದು ಭೂಮಿಯಲ್ಲಿ ಜನಿಸಿ, ಶ್ರೀಕೃಷ್ಣನ ಪತ್ನಿಯರಾಗುವ ಮಹಾಪುಣ್ಯವನ್ನು ಪಡೆದರು.  ಆದರೆ ತನ್ನ ಅಣ್ಣನಾದ ವಾಲಿಯನ್ನು ಕೊಲ್ಲಿಸಿದ ಪಾಪದಿಂದ ಸುಗ್ರೀವ ಕರ್ಣನಾಗಿ ಹುಟ್ಟಿ ಅಸುರ ದುರ್ಯೋಧನನ ಪರ ನಿಲ್ಲುವಂತಾಯಿತು.[ವಾಲೀ ತಪ್ಪು ಮಾಡಿದ್ದರೂ ಕೂಡಾ, ಆತ ಸುಗ್ರೀವನ ಒಡಹುಟ್ಟಿದ ಅಣ್ಣನಾಗಿದ್ದ. ಹೀಗಿರುವಾಗ ಆತನನ್ನು ಸರಿದಾರಿಗೆ ತರುವುದು ಸುಗ್ರೀವನ ಕರ್ತವ್ಯವಾಗಿತ್ತು. ಆದರೆ ಆತ ಅಣ್ಣನನ್ನು ಕೊಲ್ಲಬೇಕು ಎನ್ನುವ ಸಂಕಲ್ಪಮಾಡಿ ಪಾಪ ಕಟ್ಟಿಕೊಂಡ. ಇದೊಂದು ದೈವೀಸಂಕಲ್ಪವೂ ಹೌದು] ಹೀಗಾಗಿ ಪುರುಷ ಜನ್ಮವೆಲ್ಲವೂ ಪುಣ್ಯದ ಫಲವಲ್ಲ; ಸ್ತ್ರೀಜನ್ಮ ಪಾಪದ ಫಲವಲ್ಲ. ಜೀವ ಹೆಣ್ಣಾಗಿದ್ದರೆ ಅದಕ್ಕೆ ಸ್ತ್ರೀ ಜನ್ಮ, ಗಂಡಾಗಿದ್ದರೆ ಪುರುಷ ಜನ್ಮ.  ಉಳಿದದೆಲ್ಲವೂ ಜೀವಯೋಗ್ಯತೆ ಮತ್ತು ಕರ್ಮಫಲದ  ಪ್ರತಿಫಲ ಅಷ್ಟೇ. ಹೀಗಾಗಿ ಮೊದಲು ಇಂಥಹ ತಪ್ಪು ತಿಳುವಳಿಕೆ ತೊಲಗಬೇಕು.
ಈ ಮೇಲಿನ ಶ್ಲೋಕದಲ್ಲಿ ಸ್ತ್ರೀಯರನ್ನು ವಿಶೇಷವಾಗಿ ಉಲ್ಲೇಖಿಸಲು ಒಂದು ಕಾರಣವಿದೆ. ಸಮಾಜಕ್ಕೆ ಒಂದು ಒಳ್ಳೆಯ ಮಗುವನ್ನು ನೀಡುವ ಜವಾಬ್ಧಾರಿ ಮುಖ್ಯವಾಗಿ ಸ್ತ್ರೀ ಹೊತ್ತಿರುವ ಹೊಣೆ. ಈ ಕಾರ್ಯ ಅತ್ಯಂತ ಕಠಿಣ ಮತ್ತು ಇದು ವೇದಾಧ್ಯಯನಕ್ಕೆ ಸಮಾನ ಎನ್ನುತ್ತಾರೆ ಶಾಸ್ತ್ರಕಾರರು. ಹೀಗಿರುವಾಗ ಆಕೆ ಸಂಸಾರದ ನಿರ್ವಹಣೆಯೊಂದಿಗೆ ವೇದಾಧ್ಯಯನ ಮಾಡುವುದು ಸಾಧ್ಯವಿಲ್ಲ. ಹಾಗೇನಾದರೂ ಮಾಡಿದರೆ ಅದು ಎರಡು ದೋಣಿಯ ಮೇಲೆ ಕಾಲಿಟ್ಟ ಪಯಣವಾಗುತ್ತದೆ ಮತ್ತು ಅದರಿಂದ ಓಜಕ್ಷಯ(ತ್ರಾಣ ಕಡಿಮೆಯಾಗುವುದು) ಉಂಟಾಗಿ ಅದು ಮುಂದಿನ ಸಂತಾನದ ಮೇಲೆ ಕೆಟ್ಟ ಪರಿಣಾಮ ಬೀರುವಂತಾಗಬಹುದು. ಈ ಕಾರಣದಿಂದಲೇ ಗೃಹಿಣಿಯಾದವಳು ಅಧ್ಯಯನ ತ್ಯಾಗ ಮಾಡಬೇಕಾಗಿ ಬರುತ್ತದೆ. ಈ ರೀತಿ ಅನಿವಾರ್ಯವಾಗಿ ಅಧ್ಯಯನ ತ್ಯಾಗ ಮಾಡಿದ ಸ್ತ್ರೀ ಭಗವಂತನ  ಅನುಗ್ರಹದಿಂದ ವಂಚಿತಳಾಗುವುದಿಲ್ಲ ಎನ್ನುವುದನ್ನು ಮೇಲಿನ ಶ್ಲೋಕ ಸ್ಪಷ್ಟಪಡಿಸುತ್ತದೆ. ಈ ಹಿಂದೆ ಹೇಳಿದಂತೆ ಹೆಣ್ಣಿಗೆ ವಿಶೇಷವಾದ ಅರ್ಪಣಾಭಾವವನ್ನು ಭಗವಂತ ಕರುಣಿಸಿದ್ದಾನೆ. ಆಕೆ ವಿಶೇಷ ಅಧ್ಯಯನ ಮಾಡದಿದ್ದರೂ ಕೂಡಾ, ಉತ್ತಮ ಸಂತಾನವನ್ನು ಪ್ರಪಂಚಕ್ಕೆ ಕೊಟ್ಟು, ಭಗವಂತನಿಗೆ ತನ್ನನ್ನು ತಾನು ಅರ್ಪಿಸಿಕೊಂಡು ಮೋಕ್ಷವನ್ನು ಪಡೆಯಬಲ್ಲಳು ಎನ್ನುವ ಸಂದೇಶ ಈ ಶ್ಲೋಕದಲ್ಲಿದೆ.
೨. ಶೂದ್ರ:  ವರ್ಣ ಪದ್ದತಿಯ ಪ್ರಕಾರ ಯಾರಲ್ಲಿ ಸೇವಾ ಮನೋವೃತ್ತಿ ಹೆಚ್ಚಾಗಿದ್ದು, ವೇದಾಧ್ಯನ ಮಾಡುವಷ್ಟು ಬುದ್ಧಿಶಕ್ತಿ ಇರುವುದಿಲ್ಲವೂ ಆತ ಶೂದ್ರ ಎನಿಸುತ್ತಾನೆ. ಈ ರೀತಿ ವೇದಾಧ್ಯಯನ ಮಾಡಲು ಆಶಕ್ತರಾದವರು ಭಗವಂತನಲ್ಲಿ ಅಪರಂಪಾರವಾದ ಭಕ್ತಿಯನ್ನು ಬೆಳೆಸಿಕೊಂಡರೆ ಅವರಿಗೂ ಕೂಡಾ ಭಗವಂತನ ಅನುಗ್ರಹವಾಗುತ್ತದೆ ಎನ್ನುವುದು ಮೇಲಿನ ಶ್ಲೋಕದ ಸಂದೇಶ.
ಇದಲ್ಲದೆ ಯೋನಿ ಭೇದದಿಂದ ಶೂದ್ರ ಎನಿಸುವುದು ಸಾಮಾಜಿಕವಾಗಿ ಬೆಳೆದುಬಂದ ಪದ್ಧತಿ. ಉದಾಹರಣೆಗೆ ವಿದುರ.  ಮಹಾಭಾರತದಲ್ಲಿ ಹೇಳುವಂತೆ ಶ್ರೀಕೃಷ್ಣ ಹಸ್ತಿನಾಪುರಕ್ಕೆ ಬಂದಾಗಲೆಲ್ಲಾ ಉಳಿದುಕೊಳ್ಳುತ್ತಿದ್ದುದು ವಿದುರನ ಮನೆಯಲ್ಲಿ. ಪಾಂಡವರ ವನವಾಸ ಕಾಲದಲ್ಲಿ ಕುಂತಿ ಉಳಿದುಕೊಂಡಿದ್ದುದು ವಿದುರನ ಮನೆಯಲ್ಲಿ. ವಿದುರನ ಪತ್ನಿ ಆರುಣಿ ಕುಂತಿಯ ತಂಗಿ(ಆಕೆಯ ತಂದೆ ಶೂರಸೇನ, ಆಕೆ ಶೂದ್ರ ಸ್ತ್ರೀಯಲ್ಲಿ ಜನಿಸಿದವಳು). ಹೀಗೆ ಸಾಮಾಜಿಕ ವ್ಯವಸ್ಥೆಯಿಂದ ಶೂದ್ರನೆನಿಸಿದವರಿಗೆ  ವೇದಾಧ್ಯಯನ ಅಸಾಧ್ಯವಾದರೆ ಅವರು ಭಗವಂತನ ಗುಣ ಚಿಂತನೆಯಿಂದ ಆತನ ಅನುಗ್ರಹಕ್ಕೆ ಪಾತ್ರರಾಗಬಲ್ಲರು. ಇದಕ್ಕಾಗಿಯೇ ಭೀಷ್ಮಾಚಾರ್ಯರು “ಧರ್ಮಗಳಲ್ಲಿ ಶ್ರೇಷ್ಠ ಧರ್ಮ ವಿಷ್ಣುಸಹಸ್ರನಾಮ ಪಾರಾಯಣ” ಎನ್ನುವ ಸಂದೇಶವನ್ನು ಧರ್ಮರಾಯನಿಗೆ ನೀಡಿದರು. ಹೀಗೆ ಭಗವಂತನ ಗುಣವಾಚಕ ನಾಮಗಳಿಂದ ಆತನ ಗುಣಚಿಂತನೆ ಮಾಡಿ ಆತನ ಅನುಗ್ರಹಕ್ಕೆ ಪಾತ್ರರಾಗಬಹುದು.
೩. ಹೂಣರು: ವೈದಿಕ ಭಾಷೆಯ ಪರಿಚಯ ಮತ್ತು  ವೈದಿಕ ಸಂಸ್ಕೃತಿಯ ತಿಳುವಳಿಕೆಯೇ ಇಲ್ಲದ ಮ್ಲೇಚ್ಛರನ್ನು ಹೂಣರು ಎನ್ನುತ್ತಾರೆ. ಇವರು ಅನಾಗರಿಕರಾಗಿರಬಹುದು. ಆದರೆ ಒಮ್ಮೆ ಅವರು ಭಗವಂತನಲ್ಲಿ ಶರಣಾದರೆಂದರೆ ಅವರೂ ಕೂಡಾ ಉದ್ಧಾರವಾಗಬಲ್ಲರು.
೪.ಶಬರರು: ಭೇಟೆಯಾಡಿಕೊಂಡು ಕಾಡಿನಲ್ಲಿ ವಾಸಿಸುವ ಜನರನ್ನು ಶಬರರು ಎನ್ನುತ್ತಾರೆ. ಇಂಥವರೂ ಕೂಡಾ ಅಂತರಗದಲ್ಲಿ ಭಗವದ್ಭಕ್ತಿ ಬೆಳೆಸಿಕೊಂಡರೆ ಅವರಿಗೆ ಭಗವಂತ ಅನುಗ್ರಹಿಸುತ್ತಾನೆ.
೫. ಮಹಾಪಾಪಿ: ಒಬ್ಬ ನೀಚ ಕೃತ್ಯವೆಸಗಿದ ಪಾಪಿ ತನ್ನ ತಪ್ಪಿಗೆ ಪಶ್ಚಾತ್ತಾಪಪಟ್ಟು ಭಗವಂತನಿಗೆ ತನ್ನನ್ನು ತಾನು ಅರ್ಪಿಸಿಕೊಂಡರೆ, ಆತನನ್ನೂ ಕೂಡಾ ಭಗವಂತ ಅನುಗ್ರಹಿಸುತ್ತಾನೆ. ಇದಕ್ಕೆ ಉತ್ತಮ ಉದಾಹರಣೆ ಅಜಾಮಿಳ. ತಾನು ಮದುವೆಯಾದ ಹೆಂಡತಿಯನ್ನೂ ಬಿಟ್ಟು, ಯಾವುದೋ ದುಷ್ಟ ಹೆಣ್ಣಿನ ಮೋಹಕ್ಕೊಳಗಾಗಿ, ಜೀವನದಲ್ಲಿ ಮಾಡಬಾರದ ಪಾಪಗಳನ್ನು ಮಾಡಿದ ಅಜಾಮಿಳ, ಕೊನೆಗೆ ಪಶ್ಚಾತ್ತಾಪಪಟ್ಟು ಭಗವಂತನಿಗೆ ತನ್ನನ್ನು ತಾನು ಅರ್ಪಿಸಿಕೊಂಡು ಉದ್ಧಾರವಾದ ಕಥೆಯನ್ನು ಭಾಗವತವೇ ಮುಂದೆ ವಿವರಿಸುತ್ತದೆ.  ಜಾರಿ ಬೀಳುವುದು ತಪ್ಪಲ್ಲ. ಆದರೆ ಜಾರಿದ ಮೇಲೆ ಅದನ್ನು ಸರಿಪಡಿಸಿಕೊಳ್ಳದೆ ಜಾರುತ್ತಲೇ ಇರುವುದು ತಪ್ಪು.

ಒಟ್ಟಿನಲ್ಲಿ ಹೇಳಬೇಕೆಂದರೆ: ಮೂರು ಹೆಜ್ಜೆಗಳಿಂದ ವಿಶ್ವವನ್ನು ಅಳೆದ ‘ಅದ್ಭುತಕ್ರಮಃ’ ಭಗವಂತನ ಪಾದದಲ್ಲಿ ಶರಣಾದವನಿಗೆ ಭಗವಂತ ಜಾತಿ, ಲಿಂಗ, ದೇಶ, ಪಾಪ, ಪುಣ್ಯದ ಭೇದವಿಲ್ಲದೆ  ಅನುಗ್ರಹ ಮಾಡುತ್ತಾನೆ. ಇಷ್ಟೇ ಅಲ್ಲದೇ ಜ್ಞಾನಿಗಳ ಗುಣ ನಡತೆಯನ್ನು ಹಿಂಬಾಲಿಸಿ ಅದರಂತೆ ಜೀವನ ನಡೆಸಲು ಕಲಿತವರನ್ನೂ ಕೂಡಾ ಭಗವಂತ ಅನುಗ್ರಹಿಸುತ್ತಾನೆ. ಕೇವಲ ಮನುಷ್ಯರನ್ನಷ್ಟೇ ಅಲ್ಲ, ಪ್ರಾಣಿಗಳೂ ಭಗವಂತನನ್ನು ಪ್ರೀತಿಸಿ ಆತನ ಅನುಗ್ರಹಕ್ಕೆ ಪಾತ್ರವಾಗುತ್ತವೆ. ರಾಮಾಯಣ ಕಾಲದಲ್ಲಿ ನೋಡಿದಾಗ ಕಪಿಗಳು, ಪಕ್ಷಿಗಳೂ ಕೂಡಾ ಭಗವಂತನ ಅನುಗ್ರಹಕ್ಕೆ ಪಾತ್ರವಾಗಿರುವುದು ಕಾಣಸಿಗುತ್ತದೆ. ಕೃಷ್ಣ ಕೊಳಲನೂದಿದಾಗ ಹುಲ್ಲು ತಿನ್ನುವುದನ್ನು ಮರೆತು ಬಾಯಲ್ಲಿ ಅರ್ಧ ಜಗಿದ ಹುಲ್ಲನ್ನು ಹಾಗೇ ಹಿಡಿದು, ಕಿವಿ ನೆಟ್ಟಗೆ ಮಾಡಿ ನಿಂತ ಗೋವುಗಳ ಕಥೆಯನ್ನು ನಾವು ಕೃಷ್ಣಾವತಾರದಲ್ಲಿ ಕಾಣುತ್ತೇವೆ. ಭಗವಂತ ತನ್ನನ್ನು ಪ್ರೀತಿಸುವ ಎಲ್ಲರನ್ನೂ ಸೆಳೆಯುತ್ತಾನೆ. “ಹೀಗಿರುವಾಗ ಅಗಾಧವಾದ ಶಾಸ್ತ್ರ ಪಾಂಡಿತ್ಯವಿರುವ  ಜ್ಞಾನನಿಧಿಗಳು ಭಗವಂತನನ್ನು ಸೇರುತ್ತಾರೆ ಎನ್ನುವುದನ್ನು ಬಿಡಿಸಿ ಹೇಳಬೇಕೇ?” ಎಂದು ಪ್ರಶ್ನಿಸುತ್ತಾನೆ ಚತುರ್ಮುಖ. ಒಟ್ಟಿನಲ್ಲಿ ಹೇಳಬೇಕೆಂದರೆ: “ಯಾರ ಮನಸ್ಸಿನಲ್ಲಿ ಭಗವಂತನ ಬಗ್ಗೆ ಚಿಂತನೆ, ಶರಣಾಗತಿ ಇದೆ, ಅಲ್ಲಿ ಭಗವಂತನಿದ್ದಾನೆ” ಎನ್ನುವ ಭರವಸೆಯನ್ನು ಭಗವಂತನ ಅತ್ಯಂತ ಸಮೀಪವಿರುವ, ಭಗವಂತನ ಮೊದಲ ಪುತ್ರ ಚತುರ್ಮುಖ ಇಲ್ಲಿ ನೀಡಿದ್ದಾನೆ.