Tuesday, March 5, 2013

Shrimad BhAgavata in Kannada -Skandha-01-Ch-08(03)


ಘಾತಯಿತ್ವಾSಸತೋ ರಾಜ್ಞಾಃ ಕಚಸ್ಪರ್ಶಹತಾಯುಷಃ
ಸಾಧಯಿತ್ವಾSಜಾತಶತ್ರೋಃ ಸ್ವಾರಾಜ್ಯಂ ಕಿತವೈರ್ಹೃತಮ್

ದ್ರೌಪದಿಯ ತಲೆಮುಡಿಯನ್ನು ಮುಟ್ಟಿದ್ದರಿಂದಲೇ ತಮ್ಮ ಆಯುಸ್ಸಿನ ಶೇಷವನ್ನು ಕಳೆದುಕೊಂಡ ದುಷ್ಟ ರಾಜರನ್ನು ಕೊಲ್ಲಿಸಿ, ಕಪಟಿಗಳು ಅಪಹಾರ ಮಾಡಿದ್ದ ಧರ್ಮರಾಯನ ಸ್ವರಾಜ್ಯವನ್ನು ಅವನಿಗೆ ಒಪ್ಪಿಸಿ, ಶ್ರೀಕೃಷ್ಣ ದ್ವಾರಕೆಗೆ ಹೊರಟು ನಿಲ್ಲುತ್ತಾನೆ.
  
ಆಮಂತ್ರ್ಯ ಪಾಂಡುಪುತ್ರಾಂಶ್ಚ ಶೈನೇಯೋದ್ಧವಸಂಯುತಃ
ದ್ವೈಪಾಯನಾದಿಭಿರ್ವಿಪ್ರೈಃ ಪೂಜಿತೈಃ ಪ್ರತಿಪೂಜಿತಃ ೧೦

ಕೃಷ್ಣ ಪಾಂಡವರರಲ್ಲಿ ತಾನು ಹೋಗಿ ಬರುತ್ತೇನೆಂದು ಹೇಳುತ್ತಾನೆ. ಅಲ್ಲಿ ಆಗಮಿಸಿದ್ದ ವೇದವ್ಯಾಸರು,ಪರಶುರಾಮ ಮತ್ತು ಆ ಕಾಲದ ಎಲ್ಲಾ ಋಷಿಗಳಿಗೆ ಶ್ರೀಕೃಷ್ಣ ನಮಸ್ಕರಿಸುತ್ತಾನೆ. ಅವರನ್ನು  ಪೂಜಿಸಿ ಸತ್ಕರಿಸುತ್ತಾನೆ. ಇದಕ್ಕೆ ಪ್ರತಿಯಾಗಿ ಅವರೆಲ್ಲರೂ ಕೃಷ್ಣನನ್ನು ಸತ್ಕರಿಸುತ್ತಾರೆ. ಕೃಷ್ಣನ ಜೊತೆಗಾರರಾದ ಸಾತ್ಯಕಿ ಮತ್ತು ಉದ್ಧವ ಕೂಡಾ  ಕೃಷ್ಣನ ಜೊತೆಗೆ ಹೊರಟು ನಿಲ್ಲುತ್ತಾರೆ.

ಗಂತುಂ ಕೃತಮತಿರ್ಬ್ರಹ್ಮನ್ ದ್ವಾರಕಾಂ ರಥಮಾಸ್ಥಿತಃ
ಉಪಲೇಭೇSಭಿಧಾವಂತೀಮುತ್ತರಾಂ ಭಯವಿಹ್ವಲಾಮ್ ೧೧

ಸತ್ಕಾರ, ಬೀಳ್ಕೊಡುಗೆ ಮುಗಿದ ಮೇಲೆ ದ್ವಾರಕೆಗೆ ಹೋಗಲು ಕೃಷ್ಣ ರಥವನ್ನೇರುತ್ತಾನೆ. ಕೃಷ್ಣ ರಥದಲ್ಲಿ ಕುಳಿತಿದ್ದಾಗ ಅಲ್ಲಿ ಒಂದು ಘಟನೆ ನಡೆಯುತ್ತದೆ. ತುಂಬು ಗರ್ಭಿಣಿ, ಅಭಿಮನ್ಯುವಿನ ಪತ್ನಿಯಾದ ಉತ್ತರೆ ಭಯಗ್ರಸ್ತಳಾಗಿ ಕೂಗಿಕೊಂಡು ಕೃಷ್ಣನ ಬಳಿ ಬಂದು, ಕೃಷ್ಣನ ಪಾದವನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾಳೆ.

ಉತ್ತರೋವಾಚ-
ಪಾಹಿಪಾಹಿ ಮಹಾಬಾಹೋ ದೇವದೇವ ಜಗತ್ಪತೇ
ನಾನ್ಯಂ ತ್ವದಭಯಂ ಪಶ್ಯೇ ಯತ್ರ ಮೃತ್ಯುಃ ಪರಸ್ಪರಮ್ ೧೨

ಉತ್ತರೆ ಕೃಷ್ಣನ ಪಾದವನ್ನು ಹಿಡಿದುಕೊಂಡು ಹೇಳುತ್ತಾಳೆ: “ಹೇ ಕೃಷ್ಣ, ನನ್ನನ್ನು ಸಾವಿನ ದವಡೆಯಿಂದ ಪಾರುಮಾಡು. ಈ ಪ್ರಪಂಚದಲ್ಲಿ ಭಯಪರಿಹಾರ ಮಾಡುವ ಶಕ್ತಿ ನಿನಗಲ್ಲದೆ ಇನ್ನೊಬ್ಬರಿಗಿಲ್ಲ. ನೀನೇ ನನ್ನನ್ನು ಕಾಪಾಡಬೇಕು” ಎಂದು. ಇಲ್ಲಿ ಉತ್ತರೆ ಹೇಳಿರುವ ಮಾತನ್ನೇ ಉಪನಿಷತ್ತು ಹೇಳುತ್ತದೆ. ಅಭಯಂ ತಿತೀರ್ಷತಾಂ ಪಾರಂ ನಾಚಿಕೇತಂ ಶಕೇಮಹಿ ॥ಕಠ-೧.೩.೨॥ ಭಗವಂತನೊಬ್ಬನೇ ಅಭಯಪ್ರದ. ಉಳಿದವರೆಲ್ಲರೂ ಒಂದಲ್ಲಾ ಒಂದು ರೀತಿಯಿಂದ ಭಯಗ್ರಸ್ಥರೇ. ಉತ್ತರೆ ಹೇಳುತ್ತಾಳೆ: ಎಲ್ಲರೂ ಒಂದಲ್ಲಾ ಒಂದು ದಿನ ಸಾಯುವವರೇ. ಅಂತವರು ಹೇಗೆ ಇನ್ನೊಬ್ಬರನ್ನು ರಕ್ಷಿಸಬಲ್ಲರು? ಜನ್ಮ-ಮರಣಗಳಿಂದಾಚೆಗಿರುವ ನೀನೊಬ್ಬನೇ ನಮ್ಮನ್ನು ರಕ್ಷಿಸಬಲ್ಲೆ” ಎಂದು.

ಅಭಿದ್ರವತಿ ಮಾಮೀಶ ಶರಸ್ತಪ್ತಾಯಸೋ ವಿಭೋ
ಕಾಮಂ ದಹತು ಮಾಂ ನಾಥ ಮಾ ಮೇ ಗರ್ಭೋ ನಿಪಾತ್ಯತಾಮ್ ೧೩

ಮುಂದುವರಿದು ಉತ್ತರೆ ಹೇಳುತ್ತಾಳೆ: “ಒಂದು ಕಾದ ಕಬ್ಬಿಣದ ಸಲಾಕೆಯಂತಹ ಭಯಂಕರ ಬೆಂಕಿ ನನ್ನನ್ನು ಸುಟ್ಟುಬಿಡಬೇಕೆಂದು ನನ್ನ  ಕಡೆ ಓಡಿ ಬರುತ್ತಿದೆ. ಒಂದು ವೇಳೆ ಅದು ನನ್ನನ್ನು ಸುಡುವುದಾದರೆ ಸುಟ್ಟುಬಿಡಲಿ. ನನ್ನ ಆಸೆ ಅದಲ್ಲ. ಇಂದು ಪಾಂಡವರ ಒಂದೇ ಒಂದು ಸಂತಾನ ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ. ಅದನ್ನು ಕಳೆದುಕೊಂಡರೆ ಪಾಂಡವರ ಸಂತು ನಿಸಂತುವಾಗುತ್ತದೆ. ಆದ್ದರಿಂದ ನನ್ನ ಗರ್ಭಕ್ಕೆ ಏನೂ ಅಪಾಯವಾಗದಂತೆ ರಕ್ಷಣೆ ಮಾಡು” ಎಂದು ಕೃಷ್ಣನ ಪಾದಕ್ಕೆ ಶರಣಾಗುತ್ತಾಳೆ ಉತ್ತರೆ.

ಸೂತ ಉವಾಚ-
ಉಪಧಾರ್ಯ ವಚಸ್ತಸ್ಯಾ ಭಗವಾನ್ ಭಕ್ತವತ್ಸಲಃ
ಅಪಾಂಡವಮಿದಂ ಕರ್ತುಂ ದ್ರೌಣೇರಸ್ತ್ರಮಬುಧ್ಯತ ೧೪

ಉತ್ತರೆಯ ಮಾತನ್ನು ಕೇಳಿದ ತಕ್ಷಣ, ಪಾಂಡವರ ವಂಶವನ್ನು ನಿರ್ವಂಶಮಾಡುವ ದುರುದ್ದೇಶದಿಂದ ಅಶ್ವತ್ಥಾಮ ಪ್ರಯೋಗಿಸಿದ ಬ್ರಹ್ಮಾಸ್ತ್ರವೇ ಉತ್ತರೆಯ ಬೆನ್ನೆಟ್ಟಿ ಬಂದಿದೆ ಎನ್ನುವ ಸತ್ಯ  ಕೃಷ್ಣನಿಗೆ ತಿಳಿಯುತ್ತಾನೆ.

ವ್ಯಸನಂ ವೀಕ್ಷ್ಯ ತತ್ ತೇಷಾಮನನ್ಯವಿಷಯಾತ್ಮನಾಮ್
ಸುದರ್ಶನೇನ ಸ್ವಾಸ್ತ್ರೇಣ ಸ್ವಾನಾಂ ರಕ್ಷಾಂ ವ್ಯಧಾದ್ ವಿಭುಃ ೧೬

ಇದು ಉತ್ತರೆಯೊಬ್ಬಳ ದುಃಖವಲ್ಲ. ಇಡೀ ಪಾಂಡವ ವಂಶದ ದುಃಖ. ಇಲ್ಲಿ ಪಾಂಡವರ ಎಲ್ಲಾ ಸಾಧನೆಯನ್ನು ವ್ಯರ್ಥ ಮಾಡುವ ಪ್ರಯತ್ನ ಅಶ್ವತ್ಥಾಮನಿಂದ ನಡೆಯುತ್ತಿದೆ. ಇಡೀ ಪಾಂಡವ ಮನೆತನಕ್ಕೆ ಬಂದಿರುವ ಈ ವ್ಯಸನವನ್ನು ಕೃಷ್ಣ ಗಮನಿಸಿದ. ಈ ಹಿಂದೆ ಹೇಳಿದಂತೆ ಭಗವಂತ ಭಕ್ತವತ್ಸಲ. ಆತ ಒಬ್ಬ ಸಾಮಾನ್ಯ ಭಕ್ತನ ಕರೆಗೂ ಓಗೊಡುತ್ತಾನೆ. ಹೀಗಿರುವಾಗ ಪಾಂಡವರ ಕರೆಗೆ ಸ್ಪಂದಿಸನೇ ಭಗವಂತ? ಪಾಂಡವರ ಪ್ರತಿಯೊಂದು ಕ್ರಿಯೆಯ ಹಿಂದೆ ಭಗವದಾರಾಧನೆ ಇದೆ. ಅವರು ತಮ್ಮ ಇಡೀ ಬದುಕಿನಲ್ಲಿ ಭಗವಂತನನ್ನು ಅನನ್ಯವಾಗಿ ಪ್ರೀತಿಸಿದವರು. ಗೀತೆಯಲ್ಲಿ ಹೇಳುವಂತೆ: ಅನನ್ಯಚೇತಾಃ ಸತತಂ ಯೋ ಮಾಂ ಸ್ಮರತಿ ನಿತ್ಯಶಃ । ತಸ್ಯಾಹಂ ಸುಲಭಃ ಪಾರ್ಥ ನಿತ್ಯಯುಕ್ತಸ್ಯ ಯೋಗಿನಃ ॥೮-೧೪॥ ಅಂದರೆ: “ನಿರಂತರ ನನ್ನನ್ನು ನೆನೆಯುವವನಿಗೆ, ಅಂತಹ ನಿರಂತರ ಸಾಧನೆಯಿಂದ ಸಿದ್ಧಿಪಡೆದವನಿಗೆ ನಾನು ಕೈಸೆರೆ” ಎಂದರ್ಥ. ಈ ಹಿನ್ನೆಲೆಯಲ್ಲಿ ಪಾಂಡವರನ್ನು ನೋಡಿದರೆ ಅವರು ಕೃಷ್ಣ ಇಟ್ಟ ಹೆಜ್ಜೆಯನ್ನು ಅನುಸರಿಸಿ ನಡೆದವರು. ತಮ್ಮ ಜೀವನರಥಕ್ಕೆ ಕೃಷ್ಣನನ್ನು ಸಾರಥಿಯನ್ನಾಗಿಸಿಕೊಂಡು ಬದುಕಿದವರು. ಅಂತಹ ಪಾಂಡವರ ರಕ್ಷಣೆಯ ಭಾರವನ್ನು ಇಲ್ಲಿ ಶ್ರೀಕೃಷ್ಣ ವಹಿಸುತ್ತಾನೆ.
ನಮಗೆ ತಿಳಿದಂತೆ ಅಶ್ವತ್ಥಾಮ ಬ್ರಹ್ಮಾಸ್ತ್ರ ಪ್ರಯೋಗಿಸಿ ಈಗಾಗಲೇ ಅನೇಕ ದಿನಗಳಾಗಿವೆ. ಆದರೆ ಇಲ್ಲಿಯ ತನಕ ಯಾವುದೇ ಪ್ರಭಾವ ಬೀರದ ಆ ಅಸ್ತ್ರ, ಈಗ ಕೃಷ್ಣ ದ್ವಾರಕೆಗೆ ಹೊರಟು ನಿಂತಾಗ ಕೆಲಸ ಮಾಡಲಾರಂಭಿಸಿದೆ. ಇಂತಹ ಸಂದರ್ಭದಲ್ಲಿ  ಶ್ರೀಕೃಷ್ಣ ಉತ್ತರೆಯ ಗರ್ಭದಲ್ಲಿ ಚಕ್ರಧಾರಿಯಾಗಿ ನಿಂತು ಮಗುವಿನ ರಕ್ಷಣೆ ಮಾಡುವುದರ ಮೂಲಕ ಪಾಂಡವರ ರಕ್ಷಣೆ ಮಾಡುತ್ತಾನೆ.

ಅಂತಃಸ್ಥಃ ಸರ್ವಭೂತಾನಾಮಾತ್ಮಾ ಯೋಗೇಶ್ವರೋ ಹರಿಃ
ಸ್ವಮಾಯಯಾSSವೃಣೋದ್ ಗರ್ಭಂ ವೈರಾಟ್ಯಾಃ ಕುರುತಂತವೇ ೧೭

ಭಗವಂತ ಸರ್ವಾಂತರ್ಯಾಮಿ. ಆತ ದ್ವಾರಕೆಗೆ ಹೊರಟು ನಿಂತ ಎಂದರೆ ಹಸ್ತಿನಾಪುರವನ್ನು ತ್ಯಜಿಸಿದ ಎಂದರ್ಥವಲ್ಲ. ಸರ್ವಗತನಾದ ಭಗವಂತ ಒಂದು ರೂಪದಿಂದ ಹೊರಟರೆ ಇನ್ನೊಂದು ರೂಪದಲ್ಲಿ  ಇದ್ದೇ ಇರುತ್ತಾನೆ. ವಾಸ್ತವವಾಗಿ ನೋಡಿದರೆ ಭಗವಂತ ಪ್ರತಿಯೊಬ್ಬರೊಳಗೂ ತದ್ದತ್ ರೂಪನಾಗಿ ನೆಲೆಸಿದ್ದಾನೆ. ಇಲ್ಲಿ ಒಂದು ರೂಪದಲ್ಲಿ ಉತ್ತರೆಯ ಒಳಗಿರುವ ಭಗವಂತ, ಇನ್ನೊಂದು ರೂಪನಾಗಿ ಆಕೆಯ ದೇಹವನ್ನು ಪ್ರವೇಶಿಸಿದ. ಇದು ಭಗವಂತನ ಲೀಲೆ.  
ಇಲ್ಲಿ ಭಗವಂತನನ್ನು ‘ಆತ್ಮಾ’ ಮತ್ತು  ‘ಯೋಗೇಶ್ವರಃ’ ಎಂದು ಸಂಬೋಧಿಸಿದ್ದಾರೆ. ಆತ್ಮಾ ಎಂದರೆ ಸ್ವಾಮಿ. ನಮ್ಮೊಳಗೆ ತುಂಬಿ, ನಮ್ಮನ್ನು ನಿಯಂತ್ರಿಸಿ, ವಿಷಯಭೋಗಗಳನ್ನು ಮಾಡಿ, ನಮಗೂ ವಿಷಯ ಭೋಗಗಳನ್ನು ಕೊಡುತ್ತಾ, ನಮ್ಮ ಜೀವನದ ಎಲ್ಲಾ ಮುಖಗಳನ್ನೂ  ನಿಯಂತ್ರಿಸುವ ‘ಸ್ವಾಮಿ’ ಭಗವಂತ ‘ಆತ್ಮಾ’. ಇನ್ನು ‘ಯೋಗೇಶ್ವರಃ’ ಎಂದರೆ:  ಎಲ್ಲಾ ಐಶ್ವರ್ಯಗಳ ಸಿದ್ಧಿ ಉಳ್ಳವನು. ಗೀತೆಯಲ್ಲಿ ಹೇಳುವಂತೆ ‘ಯತ್ರ ಯೋಗೇಶ್ವರಃ ಕೃಷ್ಣಃ’. ಆತ  ಎಲ್ಲಾ ಯೋಗಗಳ ಒಡೆಯ. ಇಂತಹ ಯೋಗೇಶ್ವರ ಕೃಷ್ಣ, ವಿರಾಟನ ಮಗಳಾದ  ಉತ್ತರೆಯ ಗರ್ಭದಲ್ಲಿ ಬೆಳೆಯುತ್ತಿರುವ ಕುರುವಂಶದ ಸಂತತಿಗೆ ವಿಶೇಷ ಆವರಣವಾಗಿ ನಿಂತುಬಿಟ್ಟ.  [ತಾನು ಗರ್ಭದಲ್ಲಿದ್ದಾಗ ಚಕ್ರಧಾರಿ ರೂಪದಲ್ಲಿ ಕೃಷ್ಣ ದರ್ಶನ ಕೊಟ್ಟಿರುವುದನ್ನು ಪರೀಕ್ಷಿತ ರಾಜ ವಿವರಿಸುವುದನ್ನು ಮುಂದೆ ಭಾಗವತವೇ ವಿವರಿಸುತ್ತದೆ]. 

5 comments:

  1. Dear Sir,can you please inform me from where can i download or buy audio of Acharya Bannanje's Bhagavata discourses

    ReplyDelete
  2. ಆಚಾರ್ಯರ ಎಲ್ಲಾ ಪ್ರವಚನಗಳು ಬೆಂಗಳೂರಿನ ವಿದ್ಯಾಪೀಠದಲ್ಲಿ ದೊರೆಯುತ್ತದೆ.
    ಸಂಕ್ಷಿಪ್ತ ಪ್ರವಚನ ಕೊಂಡಿ: http://www.kannadaaudio.com/Songs/Discourses/home/Bhagavata-BannanjeGovindacharya.php
    ಪ್ರಾಯಃ ಸಂಪೂರ್ಣ ಭಾಗವತ ಇನ್ನೂ ಲಭ್ಯವಿಲ್ಲ. ಈ ಕುರಿತು ವಿದ್ಯಾಪೀಠದಲ್ಲಿ ವಿಚಾರಿಸಿ

    ReplyDelete
    Replies
    1. ಮಾಹಿತಿ ಕೊಟ್ಟಿರುವುದಕ್ಕಾಗಿ ದನ್ಯವಾದಗಳು.ವಿದ್ಯಾಪೀಠದ ವಿಳಾಸವನ್ನು ದಯವಿಟ್ಟು ತಿಳಿಸುವಿರಾ?

      Delete
  3. Just search: Poornaprajna Vidyapeetha, Banashankari Stage III, Bangalore, in Google map
    Address : Kattri Guppe Main Road, Poorna Pragna Nagar,
    Thyagaraja Nagar,
    Bangalore -560028 .
    Phone: 080-26791225
    Note: Tuesday Holiday

    ReplyDelete
    Replies
    1. Thank you very much for giving info.The work you are doing is very challenging one.Please continue doing this type of work.May the Lord Sri Hari bless you.

      Delete