ನಾರದ ಉವಾಚ--
ಮಾ ಕಂಚನ ಶುಚೋ
ರಾಜನ್ ಯುದೀಶ್ವರವಶಂ ಜಗತ್ ।
ಸ ಸಂಯುನಕ್ತಿ ಭೂತಾನಿ
ಸ ಏವ ವಿಯುನಕ್ತಿ ಚ ॥೪೧॥
“ಯಾರ ಬಗ್ಗೆಯೂ ದುಃಖಪಟ್ಟು ಉಪಯೋಗವಿಲ್ಲ.
ದುಃಖಿಸುವುದರಿಂದ ಅವರು ಮರಳಿ ಬರುವುದಿಲ್ಲ. ಯಾವ ಜೀವಗಳನ್ನು ಭಗವಂತ ಎಂದು ಒಂದುಗೂಡಿಸುತ್ತಾನೆ,
ಎಂದು ಬೇರ್ಪಡಿಸುತ್ತಾನೆ ಎನ್ನುವುದು ನಮಗೆ ತಿಳಿದಿಲ್ಲ” ಎಂದು ಧರ್ಮರಾಯನನ್ನು ಸಂತೈಸುತ್ತಾರೆ
ನಾರದರು.
ಹುಟ್ಟು-ಸಾವು ನಮ್ಮ
ವಶದಲ್ಲಿಲ್ಲ. ಎಂತಹ ಪುಣ್ಯಾತ್ಮರಾದರೂ ಕೂಡಾ
ಅವರಿಗೆ ಸಾವು ತಪ್ಪಿದ್ದಲ್ಲ. ದುರಂತದ ಸಾವು ಕೇವಲ ಪಾಪಾತ್ಮರ ಲಕ್ಷಣವೇನೂ ಅಲ್ಲ. ಪುಣ್ಯಾತ್ಮರೂ ಕೂಡಾ
ದುರಂತದಲ್ಲಿ ಸಾಯಬಹುದು. ಅದು ಅವರ ಪ್ರರಾಬ್ಧ ಕರ್ಮಕ್ಕನುಗುಣವಾಗಿ ನಡೆಯುತ್ತದೆ ಅಷ್ಟೇ. ಸಾವು
ಸಹಜ ಕ್ರಿಯೆ ಹಾಗೂ ಎಂದು ಏನು ಆಗಬೇಕೋ ಅದು ಆಗಿಯೇ ತೀರುತ್ತದೆ. ಹಾಗಾಗಿ ಯಾರ ಸಾವೇ ಇರಲಿ, ಎಂತಹ
ಸಾವೇ ಇರಲಿ, ಅದಕ್ಕಾಗಿ ದುಃಖಿಸಿ ಫಲವಿಲ್ಲ.
ಯನ್ಮನ್ಯಸೇ ಧ್ರುವಂ
ಲೋಕಮಧ್ರುವಂ ವಾSಥವೋಭಯಮ್ ।
ಸರ್ವಥಾ ಹಿ ನ ಶೋಚ್ಯಾಸ್ತೇ ಸ್ನೇಹಾದನ್ಯತ್ರ ಮೋಹಜಾತ್ ॥೪೪॥
“ಯಾವ ಕಾರಣಕ್ಕಾಗಿ ದುಃಖ? ನಾಶವಿಲ್ಲದ ಜೀವ ದೇಹಬಿಟ್ಟು
ಹೊರಟು ಹೋಯಿತೆಂದೋ? ಅಥವಾ ಶರೀರ ನಾಶವಾಯಿತೆಂದೋ? ಅಥವಾ ಈ ಶರೀರದಲ್ಲಿ ಆ ಜೀವ ಇಲ್ಲಾ ಎಂತಲೋ? ಯಾವುದಕ್ಕೂ ನೀನು ಶೋಕಿಸುವ ಅಗತ್ಯವಿಲ್ಲ” ಎನ್ನುತ್ತಾರೆ
ನಾರದರು.
ಆಚಾರ್ಯರು ತಮ್ಮ
ತಾತ್ಪರ್ಯ ನಿರ್ಣಯದಲ್ಲಿ ಹೇಳುವಂತೆ: ಅಪರಿಹಾರ್ಯತ್ವಾದಶೋಚ್ಯಾಃ । ಈ ಪ್ರಪಂಚದಲ್ಲಿ ಯಾವುದು ಅನಿವಾರ್ಯವೋ ಅದಕ್ಕೆ ನಾವು ಹೊಂದಿಕೊಂಡು
ಬದುಕಬೇಕೇ ಹೊರತು, ಅದಕ್ಕಾಗಿ ಅಳುತ್ತಾ ಕೂರುವುದರಲ್ಲಿ ಅರ್ಥವಿಲ್ಲ. “ದುಃಖಕ್ಕೆ ಮೂಲ ಕಾರಣ ಮೋಹ
ಮತ್ತು ಮೋಹದಿಂದ ಬೆಳೆದ ಸ್ನೇಹ”. ನಾವು ಈ ಮೋಹಪಾಶನ್ನು ಗೆಲ್ಲಬೇಕು.
ಸೋSಯಮದ್ಯ ಮಹಾರಾಜ ಭಗವಾನ್ ಭೂತಭಾವನಃ ।
ಕಾಲರೂಪೋSವತೀರ್ಣೋSಸ್ಯಾಮಭಾವಾಯ ಸುರದ್ವಿಷಾಮ್ ॥೪೯॥
“ಶ್ರೀಕೃಷ್ಣ ಕಾಲ ರೂಪನಾಗಿ, ದೇವತೆಗಳಿಗೆ ದ್ರೋಹಬಗೆದ
ಅಸುರಶಕ್ತಿಗಳ ಸಂಹಾರಕನಾಗಿ ನಮ್ಮ ಕಣ್ಮುಂದೆ ಅವತರಿಸಿ ನಿಂತಿದ್ದಾನೆ. ಇಲ್ಲಿ ಎಲ್ಲವೂ ಅವನ ಸಂಕಲ್ಪದಂತೆ ನಡೆಯುತ್ತದೆಯೇ
ಹೊರತು, ನಮ್ಮ ಸಂಕಲ್ಪದಂತಲ್ಲ” ಎನ್ನುತ್ತಾರೆ ನಾರದರು.
ಇಲ್ಲಿ ಭಗವಂತನನ್ನು
‘ಭೂತಭಾವನಃ’ ಎಂದು ಸಂಬೋಧಿಸಿದ್ದಾರೆ. ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷಗಳಿಗೆ
ಕಾರಣನಾದವ, ಜೀವಿಗಳಿಗೆ ಅವರ ಕರ್ಮಕ್ಕನುಗುಣವಾಗಿ ಸುಖ-ದುಃಖ ಕೊಡುವ ಭಗವಂತ-ಭೂತಭಾವನಃ.
ಇಂತಹ ಭಗವಂತ ಇಲ್ಲಿ ಸಂಹಾರರೂಪಿಯಾಗಿ ನಿಂತಿದ್ದಾನೆ. “ ಭಗವಂತನ ಕಾರ್ಯದಲ್ಲಿ ಅಂಗಭೂತರಾಗಿ ಬಂದ
ನೀನೂ ಕೂಡಾ ಒಂದು ದಿನ ಹೊರಡಬೇಕು. ದುಃಖಿಸುವುದನ್ನು ಬಿಟ್ಟು ಅದಕ್ಕೆ ಸಿದ್ಧನಾಗು” ಎನ್ನುವ
ಧ್ವನಿ ನಾರದರ ಈ ಮಾತಿನಲ್ಲಡಗಿದೆ.
ನಿಷ್ಪಾದಿತಂ ದೇವಕಾರ್ಯಮವಶೇಷಂ
ಪ್ರತೀಕ್ಷತೇ ।
ತಾವದ್
ಯೂಯಮವೇಕ್ಷಧ್ವಂ ಭವೇದ್ ಯಾವದಿಹೇಶ್ವರಃ ॥೫೦॥
“ಕೃಷ್ಣಾವತಾರಕ್ಕೆ
ಕಾರಣವಾದ ‘ದೇವಕಾರ್ಯ’ ಮುಗಿಯುತ್ತಿದೆ. ಕೃಷ್ಣ ಅವತಾರ ಸಮಾಪ್ತಿ ಮಾಡುವ ತನಕ ನೀನು
ಇಲ್ಲಿರುತ್ತೀಯ. ಆನಂತರ ನೀನೂ ಹೊರಡಬೇಕು. ಹಾಗಾಗಿ ಹೊರಟು ಹೋದವರ ಬಗ್ಗೆ ದುಃಖಿಸದೇ ನಿನ್ನ ಪಯಣದ
ಸಿದ್ಧತೆ ನೀನು ಮಾಡು” ಎನ್ನುತ್ತಾರೆ ನಾರದರು.
ಇಷ್ಟು ಹೇಳಿದ
ನಾರದರು ಮುಂದೆ ಧೃತರಾಷ್ಟ್ರ ತನ್ನ ಕೊನೆಯ ದಿನಗಳನ್ನು ಹೇಗೆ ಕಳೆದ ಎನ್ನುವುದನ್ನು ಧರ್ಮರಾಯನಿಗೆ
ವಿವರಿಸುತ್ತಾರೆ.
ಧೃತರಾಷ್ಟ್ರಃ ಸಹ
ಭ್ರಾತ್ರಾ ಗಾಂಧಾರ್ಯಾ ಚ ಸ್ವಭಾರ್ಯಯಾ ।
ದಕ್ಷಿಣೇನ ಹಿಮವತ
ಋಷೀಣಾಮಾಶ್ರಮಂ ಗತಃ ॥೫೧॥
ತನ್ನ ತಮ್ಮ ಹಾಗೂ
ಪತ್ನಿಯೊಂದಿಗೆ ಕಾಡಿಗೆ ಹೋದ ಧೃತರಾಷ್ಟ್ರ, ಹಸ್ತಿನಾಪುರದಿಂದ ಉತ್ತರ ಹಾಗೂ ಹಿಮಾಲಯ ಪರ್ವತದ
ದಕ್ಷಣದಲ್ಲಿರುವ ತಪ್ಪಲುಪ್ರದೇಶದಲ್ಲಿನ ಋಷಿಗಳ ಆಶ್ರಮದಲ್ಲಿ ನೆಲೆಸಿ ತನ್ನ ಸಾಧನೆ ಆರಂಭಿಸಿದ.
ಸ್ನಾತ್ವಾತ್ರಿಷವಣಂ
ತಸ್ಮಿನ್ ಹುತ್ವಾ ಚಾಗ್ನೀನ್ ಯಥಾವಿಧಿ ।
ಅಬ್ಭಕ್ಷ ಉಪಶಾಂತಾತ್ಮಾ
ಸ ಆಸ್ತೇS ವಿಗತೇಕ್ಷಣಃ ॥೫೩॥
ಧೃತರಾಷ್ಟ್ರ
ಕಾಡಿನಲ್ಲಿ ಮೂರು ಹೊತ್ತು ಸ್ನಾನ ಮಾಡಿ,
ಶಾಸ್ತ್ರಬದ್ಧವಾಗಿ ಅಗ್ನಿಹೋತ್ರ ಮಾಡುತ್ತಿದ್ದ. ಏಳು ಕವಲಾಗಿ ಗಂಗೆ ಹರಿದ ಜಾಗದಲ್ಲಿ ಆತ ತಪಸ್ಸನ್ನಾಚರಿಸಿದ.
ಕೊನೆ-ಕೊನೆಗೆ ಆತ ಆಹಾರ ಸೇವನೆಯನ್ನೂ ತ್ಯಜಿಸಿ, ಕೇವಲ ನೀರನ್ನು ಸೇವಿಸುತ್ತಾ, ಉನ್ನತವಾದ
ಸ್ಥಿತಿಯಲ್ಲಿ, ಮನಸ್ಸನ್ನು ಭಗವಂತನಲ್ಲಿ ನೆಲೆಸಿ, ಅಖಂಡ ಸಾಧನೆ ಮಾಡಿದ. ಕಣ್ಣಿಲ್ಲದ
ಕುರುಡನಾದರೂ ಸಹ, ತನ್ನ ಅಂತರಂಗದ ಕಣ್ಣಿನಿಂದ ನಿರಂತರ ಭಗವಂತನನ್ನು ಕಾಣುತ್ತಾ, ಸಾಧನೆಯ ಉತ್ತುಂಗವನ್ನು ತಲುಪಿದ(ವಿಗತೇಕ್ಷಣಃ ಎನ್ನುವ
ಪಾಠದಂತೆ). ಮಕ್ಕಳಮೋಹ, ಹಣದಮೋಹ ಮತ್ತು ಲೋಕದ ಮೋಹವನ್ನು ತೊರೆದು, ಭಗವಂತನನ್ನು ಸದಾ ಹೃದಯದಲ್ಲಿ
ತುಂಬಿಕೊಂಡು ಸಾಧನೆ ಮಾಡಿದ ಧೃತರಾಷ್ಟ್ರ(ವಿಗತೇಶಣಃ ಎನ್ನುವ ಪಾಠದಂತೆ).
ಇಲ್ಲಿ ‘ಆಸ್ತೇ’ ಎನ್ನುವ
ಪದ ವರ್ತಮಾನ ಕಾಲದಲ್ಲಿದೆ. ಇದರಿಂದ ‘ಧೃತರಾಷ್ಟ್ರ
ಈಗಲೂ ತಪಸ್ಸು ಮಾಡುತ್ತಿದ್ದಾನೆ’ ಎಂದು ಹೇಳಿದಂತಾಗುತ್ತದೆ. ಆದರೆ ನಮಗೆ ತಿಳಿದಂತೆ ಧೃತರಾಷ್ಟ್ರ
ಈಗಾಗಲೇ ದೇಹತ್ಯಾಗ ಮಾಡಿದ್ದಾನೆ. ಈ ರೀತಿ ಕಾಲವನ್ನು ವ್ಯತ್ಯಾಸಮಾಡಿ ಹೇಳುವುದು ಪುರಾಣದ,
ಪ್ರಾಚೀನ ಸಂಸ್ಕೃತದ ಒಂದು ವಿಶಿಷ್ಠ ವೈಖರಿ. ಇಂತಹ ಅನೇಕ ಉದಾಹರಣೆಗಳನ್ನು ಪುರಾಣಗಳಲ್ಲಿ
ಕಾಣಬಹುದು. ಏಕೆ ಹೀಗೆ ಕಾಲವನ್ನು ಬದಲಿಸಿ ಹೇಳುತ್ತಾರೆ ಎಂದರೆ: ತ್ರಿಕಾಲದರ್ಶಿಗಳಿಗೆ ಎಲ್ಲವೂ ವರ್ತಮಾನವೇ.
ಅಷ್ಟೇ ಅಲ್ಲ ಇದು ಗುಹ್ಯ ಭಾಷೆಯ ನಿರೂಪಣಾ ವೈಖರಿ.
ಜಿತಾಸನೋ ಜಿತಶ್ವಾಸಃ
ಪ್ರತ್ಯಾಹೃತಷಡಿಂದ್ರಿಯಃ ।
ಹರಿಭಾವನಯಾ ಧ್ವಸ್ತರಜಃಸತ್ತ್ವತಮೋಮಲಃ
॥೫೪॥
ಸಾಧನೆ ಮಾಡುತ್ತಾ-
ಆಸನ, ಶ್ವಾಸ ಮತ್ತು ಇಂದ್ರಿಯಗಳನ್ನು ಗೆಲ್ಲುತ್ತಾನೆ ಧೃತರಾಷ್ಟ್ರ. [ಇಲ್ಲಿ ಜಿತಾಸನ ಎಂದರೆ:
ಒಂದು ಆಸನದಲ್ಲಿ ಕದಲದೇ ಕುಳಿತುಕೊಳ್ಳುವ ಸಾಧನೆ]. ಪ್ರಾಣಾಯಾಮದ ಮೂಲಕ ಶ್ವಾಸವನ್ನು
ನಿಯಂತ್ರಿಸಿ, ಬಾಹ್ಯೇಂದ್ರಿಯನಿಗ್ರಹ ಮಾಡಿ, ತನ್ನೊಳಗೆ ಕೇವಲ ಹರಿ ಭಾವನೆ ತುಂಬಿಕೊಂಡು,
ತ್ರೈಗುಣ್ಯದ ಪ್ರಭಾವದಿಂದ ಸಂಪೂರ್ಣ ಆಚೆ ಬಂದು,
ಸ್ವರೂಪದಲ್ಲಿ ಭಗವಂತನನ್ನು ಕಾಣುತ್ತಾನೆ ಆತ.
ಇಲ್ಲಿ “ಭಗವಂತನ ಪ್ರಜ್ಞೆಯನ್ನು
ಮನಸ್ಸಿನಲ್ಲಿ ತುಂಬಿಸಿಕೊಂಡ ಧೃತರಾಷ್ಟ್ರ, ಸತ್ತ್ವ-ರಜಸ್ಸು-ತಮಸ್ಸು ಎನ್ನುವ ಕೊಳೆಯನ್ನು
ತೊಳೆದುಕೊಂಡ” ಎಂದಿದ್ದಾರೆ. ಇದರಿಂದಾಗಿ ನಮಗೊಂದು ಪ್ರಶ್ನೆ ಬರುತ್ತದೆ. “ಸತ್ತ್ವಾತ್
ಸಂಜಾಯತೇ ಜ್ಞಾನಮ್” ಎಂದು ಶ್ರೀಕೃಷ್ಣ ಗೀತೆಯಲ್ಲೇ ಹೇಳಿದ್ದಾನೆ.
ಹಾಗಿರುವಾಗ ಇಲ್ಲಿ -ಸತ್ತ್ವವನ್ನು ಕೊಳೆ ಎಂದು ಏಕೆ ಹೇಳಿದ್ದಾರೆ ಎಂದು. ಇದಕ್ಕೆ ಕಾರಣವೆಂದರೆ: ಎಂದೂ
ನಮಗೆ ಶುದ್ಧ ಸತ್ತ್ವ ಸಿಗುವುದಿಲ್ಲ. ಹೇಗೆ ಕಟ್ಟಿಗೆ(ತಮಸ್ಸು) ಮತ್ತು ಹೊಗೆ(ರಜಸ್ಸು) ಜೊತೆಗೆ
ಬೆಂಕಿ(ಸತ್ತ್ವ) ಇರುತ್ತದೋ ಹಾಗೇ, ಸತ್ತ್ವಗುಣ ರಜಸ್ಸು ತಮಸ್ಸಿನೊಂದಿಗಿರುತ್ತದೆ. ಇದಲ್ಲದೆ ಸತ್ತ್ವಮಯವಾದ
ಕರ್ಮ ಮಾಡುವುದರಿಂದ ಸ್ವರ್ಗಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ. ಆದರೆ ನಿಜವಾದ ಸಾಧಕನಿಗೆ ಬೇಕಾಗಿರುವುದು
ಸ್ವರ್ಗವಲ್ಲ, ಮೋಕ್ಷ. ಅದಕ್ಕಾಗಿ ಸಾಧನೆಯಲ್ಲಿ ನಾವು ತ್ರಿಗುಣವನ್ನು ಮೀರಿ ನಿಂತು ಸಾಧನೆ ಮಾಡಬೇಕಾಗುತ್ತದೆ.
“ತ್ರೈಗುಣ್ಯವಿಷಯಾ ವೇದಾ ನಿಸ್ತ್ರೈಗುಣ್ಯೋ ಭವಾರ್ಜುನ”
ಎಂದು ಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ. ಹೀಗೆ ತ್ರಿಗುಣಾತೀತ
ಭಗವಂತನನ್ನು ಹೃದಯದಲ್ಲಿ ತುಂಬಿಕೊಂಡು, ಶುದ್ಧ ಅಂತರಂಗ ಭಾವದಿಂದ ಸಮಾಧಿಸ್ಥಿತಿಯಲ್ಲಿ ಧೃತರಾಷ್ಟ್ರ
ತಪಸ್ಸನ್ನಾಚರಿಸಿದ.