Monday, May 27, 2013

Shrimad BhAgavata in Kannada -Skandha-01-Ch-16(5)


೨. ಶೌಚ: ಶೌಚ  ಎಂದರೆ ಶುದ್ಧಿ, ನೈರ್ಮಲ್ಯ. ಭಗವಂತ ನಿತ್ಯ ಶುದ್ಧ. ಆತನಲ್ಲಿ ತ್ರಿಗುಣಗಳ ಸ್ಪರ್ಶವೇ ಇಲ್ಲ. ಜ್ಞಾನಾನಂದಮಯವಾದ ನಿತ್ಯ ಶುದ್ಧ ಸ್ವರೂಪ ಆತನದು. ನಿತ್ಯ ನಿರ್ಮಲನಾದ ಭಗವಂತನನ್ನು ಸೇರುವುದಕ್ಕೋಸ್ಕರ ಕಾಯಾ-ವಾಚಾ-ಮನಸಾ ಪ್ರಯತ್ನಿಸಬೇಕು. ಮನಸ್ಸಿನಲ್ಲಿ ಯಾವುದೇ ಕೊಳೆ ಇಟ್ಟುಕೊಳ್ಳದಿರುವುದರಿಂದ ನಾವು ನಿತ್ಯ ಶುದ್ಧರಾಗಬಹುದು.
೩. ದಯೆ: ದಯೆ ಅಂದರೆ ಅನುಕಂಪೆ. ಯಾರ ಬಗ್ಗೆಯೂ ದ್ವೇಷ ಇಲ್ಲದಿರುವುದು, ಯಾರು ಕಷ್ಟದಲ್ಲಿದ್ದಾರೆ ಅವರ ಮೇಲೆ ಅನುಕಂಪ ತೋರುವುದು ದಯೆ.  ಭಗವಂತ ದುಷ್ಟರಿಗೆ ಶಿಕ್ಷೆ ಕೊಟ್ಟರೆ, ಸಜ್ಜನರಿಗೆ ರಕ್ಷಣೆ ಕೊಡುತ್ತಾನೆ. ಯಾರು ಸರಿಯಾದ ದಾರಿಯಲ್ಲಿದ್ದಾರೆ ಅವರ ಮೇಲೆ ದಯೆ ತೋರುವ ಭಗವಂತ, ಯಾರು ಅಪರಾಧಿಗಳೋ ಅವರಿಗೆ ನಿರ್ದಯವಾಗಿ  ಶಿಕ್ಷೆ ಕೊಡುತ್ತಾನೆ. ಆದರೆ ಭಗವಂತ ಕೊಡುವ ಶಿಕ್ಷೆಯಲ್ಲೂ ಕೂಡಾ ಕಾರುಣ್ಯವಿದೆ. ಅವನಿಗೆ ಯಾರ ಮೇಲೂ ದ್ವೇಷವಿಲ್ಲ. ಅವನು ಪರಮ ಕಾರುಣ್ಯಮೂರ್ತಿ. ನಾವೂ ಕೂಡಾ ಇನ್ನೊಬ್ಬರನ್ನು ದ್ವೇಷಿಸದೇ ದಯೆಯನ್ನು ಬೆಳೆಸಿಕೊಳ್ಳಬೇಕು.
೪. ದಾನ: ಎಲ್ಲರಿಗೂ ಅವರ ಕರ್ಮಕ್ಕನುಗುಣವಾಗಿ ಏನು ಸಿಗಬೇಕೋ, ಅದನ್ನು ದಾನ ಮಾಡುವ ಮಹಾದಾನಿ ಆ ಭಗವಂತ. ಆತ ಭಕ್ತವತ್ಸಲ. ಭಕ್ತರಿಗೆ  ಆತ ತನ್ನನ್ನೇ ತಾನು ಕೊಟ್ಟುಬಿಡುತ್ತಾನೆ. ಆತ ಸರ್ವಾದಿಷ್ಟಪ್ರದ. ದಾನ ಎನ್ನುವುದು ಆತನ ಮೂಲಭೂತ ಗುಣಗಳಲ್ಲೊಂದು. ಭಗವಂತನಲ್ಲಿ ಎಲ್ಲವೂ ಇದೆ, ಆದ್ದರಿಂದ ಕೊಡುತ್ತಾನೆ. ಆದರೆ ನಮ್ಮಲ್ಲಿ ಎಲ್ಲವೂ ಇಲ್ಲ. ಆದರೆ ನಮ್ಮಲ್ಲಿ ಏನಿದೆಯೋ ಅದನ್ನು ಇಲ್ಲದವರಿಗೆ ಮನಪೂರ್ವಕ ಕೊಡುವ ಅಭ್ಯಾಸವನ್ನು ನಾವು ಬೆಳಸಿಕೊಳ್ಳಬೇಕು.
೫. ತ್ಯಾಗ: ಸಾಮಾನ್ಯವಾಗಿ ನಮಗೆ ತಿಳಿದಂತೆ ತ್ಯಾಗ ಅಂದರೆ ಕೊಡುವುದು. ದಾನ ಎಂದರೂ ಕೊಡುವುದು. ಆದ್ದರಿಂದ ತ್ಯಾಗ ಮತ್ತು ದಾನ ಎನ್ನುವುದು ಸಮಾನ ಅರ್ಥವುಳ್ಳ ಪರ್ಯಾಯ ಶಬ್ದವೆಂಬಂತೆ ಕಾಣುತ್ತದೆ. ಆದರೆ ಆಚಾರ್ಯರು ‘ತ್ಯಾಗ’ ಎನ್ನುವುದಕ್ಕೆ ಕೊಶವನ್ನು ನೀಡಿದ್ದಾರೆ.  ಅವರು ಹೇಳುವಂತೆ: “ಮಿಥ್ಯಾಭಿಮಾನವಿರತಿಸ್ತ್ಯಾಗ ಇತ್ಯಭಿಧೀಯತೇ”. ಅಂದರೆ ನಮ್ಮಲ್ಲಿರುವ ಅಭಿಮಾನವನ್ನು ಬಿಡುವುದು ತ್ಯಾಗ. ಭಗವಂತ ಯಾವುದಕ್ಕೂ ಅಭಿಮಾನಿಯಲ್ಲ. ಅವನಿಗೆ ಯಾವುದರ ಮೇಲೂ ಅಭಿಮಾನವಿಲ್ಲ. ನಾವೂ ಕೂಡಾ ನಮ್ಮಲ್ಲಿರುವ ಅಹಂಕಾರ, ಒಣ ಜಂಭವನ್ನು ಬಿಡಬೇಕು.
೬. ಸಂತೋಷ:  ಸಂತೋಷ ಎಂದರೆ ನಿತ್ಯತೃಪ್ತತ್ವ(Contentment). ಭಗವಂತ ಆಪ್ತಕಾಮ. ಅವನು ಪಡೆಯಬೇಕಾದ್ದು ಯಾವುದೂ ಇಲ್ಲ. ಈ ಗುಣ ಭಗವಂತನಲ್ಲಿ ಪೂರ್ಣಪ್ರಮಾಣದಲ್ಲಿದೆ. ನಾವು ಆ ಭಗವಂತನ ಅರಿವಿನಿಂದ ಅವನ ಜ್ಞಾನವಲ್ಲದೆ ಇನ್ನೇನೂ  ಬೇಡ ಎನ್ನುವ ಸ್ಥಿತಿಯನ್ನು ತಲುಪಬೇಕು.
೭. ಆರ್ಜವಂ: ಆಡಿದಂತೆ ನಡೆದುಕೊಳ್ಳುವುದು(Straight forwardness). ಭಗವಂತ ಅಖಂಡವಾದ ಜ್ಞಾನಸ್ವರೂಪ. ಆತ ಆರ್ಜವದ ಸಾಕಾರಮೂರ್ತಿ. ನಾವೂ ಕೂಡಾ ನಮ್ಮ ಜೀವನದಲ್ಲಿ ಆರ್ಜವವನ್ನು ಬೆಳೆಸಿಕೊಳ್ಳಲು ಪ್ರಯತ್ನ ಮಾಡಬೇಕು.

Sunday, May 26, 2013

Shrimad BhAgavata in Kannada -Skandha-01-Ch-16(4)


೧. ಸತ್ಯಂ: ಸತ್ಯ ಎಂದರೆ ಯಥಾರ್ಥವನ್ನು ಹೇಳುವ ಪ್ರಾಮಾಣಿಕತೆ. “ಸತ್ಯಂ ಜ್ಞಾನಂ ಅನಂತಂ ಬ್ರಹ್ಮ” ಎಂದು ವೇದದಲ್ಲಿ ಭಗವಂತನನ್ನು ಮೊದಲು ‘ಸತ್ಯ’ ಎನ್ನುವ ಶಬ್ದದಿಂದಲೇ ಹೇಳುತ್ತಾರೆ. ಭಾಗವತದಲ್ಲಿನ ಮೊದಲನೇ ಶ್ಲೋಕದಲ್ಲಿ ಭಗವಂತನನ್ನು ಸ್ತೋತ್ರ ಮಾಡಿರುವುದು ‘ಸತ್ಯಂ ಪರಂ ಧೀಮಹಿ’ ಎಂದು ಸತ್ಯ ಶಬ್ದದಿಂದಲೇ. ಕೃಷ್ಣ ದೇವಕಿಯ ಗರ್ಭದಲ್ಲಿರುವಾಗ ದೇವತೆಗಳು ಭಗವಂತನನ್ನು ಪ್ರಾರ್ಥನೆ ಮಾಡಿರುವುದು ‘ಸತ್ಯ’ ಶಬ್ದದಿಂದ. ಹಾಗಾಗಿ ‘ಸತ್ಯ’ ಎನ್ನುವುದು ಭಗವಂತನ ಅತ್ಯಂತ ಮುಖ್ಯವಾದ ನಾಮಗಳಲ್ಲೊಂದು. ಸತ್ಯ ಎಂದರೆ - ನಿರ್ದುಷ್ಟವಾದ ಆನಂದಾನುಭವ ಸ್ವರೂಪ. ಜೀವನೂ ಕೂಡಾ ನಿರ್ದುಃಖವಾದ ಆನಂದಾನುಭವವನ್ನು ಮೋಕ್ಷದಲ್ಲಿ ಪಡೆಯುತ್ತಾನೆ. ನಮ್ಮಲ್ಲಿಲ್ಲದ್ದನ್ನು ಎಂದೆಂದೂ ಅಳಿಯದಂತೆ ಪಡೆಯುವ ಪ್ರಯತ್ನವೇ ಮೋಕ್ಷ ಸಾಧನೆ. ಹೀಗೆ ಸದಾ ಆನಂದವಾಗಿರುವ ಅಪೂರ್ವ ಗುಣವನ್ನು ಭಗವಂತ ತನ್ನ ಕೃಷ್ಣಾವತಾರದಲ್ಲಿ ನಡೆದು ತೋರಿದ.
ಮೇಲೆ ಹೇಳಿದಂತೆ ಸತ್ಯ ಎಂದರೆ ಪ್ರಾಮಾಣಿಕತೆ. ಜೀವನದಲ್ಲಿ ಸತ್ಯವನ್ನು ಪಾಲಿಸಬೇಕು, ಸುಳ್ಳು ಹೇಳಬಾರದು. ಇಲ್ಲಿ ನಮಗೊಂದು ಪ್ರಶ್ನೆ ಬರುತ್ತದೆ. ಕೃಷ್ಣ ತನ್ನ ಬಾಲ್ಯದಿಂದ ಹಿಡಿದು, ಎಲ್ಲಾ ಹಂತಗಳಲ್ಲೂ ಸುಳ್ಳು ಹೇಳಿದಂತೆ ನಮಗೆ ಕಾಣಿಸುತ್ತದೆ. ತಾಯಿಯ ಬಳಿ ತಾನು ಮಣ್ಣು ತಿಂದಿಲ್ಲ ಎಂದು ಕೃಷ್ಣ ಹೇಳಿದ ಸುಳ್ಳು; ಕಂಸ ಕರೆದ ಬಿಲ್ಲ ಹಬ್ಬಕ್ಕೆ ಹೋಗುವಾಗ ಗೋಪಿಕಾ ಸ್ತ್ರೀಯರಿಗೆ ಇನ್ನು ಕೆಲವೇ ದಿನಗಳಲ್ಲಿ ಬರುತ್ತೇನೆಂದು ಹೇಳಿ ಸುಮಾರು ಐವತ್ತು ವರ್ಷಗಳ ಕಾಲ  ಕೃಷ್ಣ ಹಿಂತಿರುಗಿ ಬಾರದೇ ಇದ್ದದ್ದು; ಮಹಾಭಾರತ ಯುದ್ಧದಲ್ಲಿ ‘ಅಶ್ವತ್ಥಾಮ ಸತ್ತ’ ಎಂದು ಧರ್ಮರಾಯನಿಂದ ಸುಳ್ಳು ಹೇಳಿಸಿ, ದ್ರೋಣಾಚಾರ್ಯರನ್ನು ಕೊಲ್ಲಿಸಿರುವುದು; ಹೀಗೆ ಅನೇಕ ಘಟನೆಗಳನ್ನು ನಾವು ಕೃಷ್ಣನ ಕಥೆಯಲ್ಲಿ ಕಾಣುತ್ತೇವೆ. ಆದರೆ ಭಗವಂತ ಸತ್ಯದ ಸಾಕಾರಮೂರ್ತಿ. ಆತ ಸುಳ್ಳು ಹೇಳಲು ಸಾಧ್ಯವೇ ಇಲ್ಲ. ನಾವು ಭಗವಂತನ ಎತ್ತರವನ್ನು ತಿಳಿಯದೇ, ನಮ್ಮ ನೆಲೆಯಲ್ಲಿ ನೋಡಿದಾಗ, ನಮಗೆ ಇವೆಲ್ಲವೂ ಸುಳ್ಳು ಎನಿಸುತ್ತದೆ. ದೊಡ್ಡವರು ಏನಾಗಿದೆ ಎಂದು ನೋಡಿ ಮಾತನಾಡುವುದಿಲ್ಲ, ಅವರು ಮಾತನಾಡಿದಂತೆ ಎಲ್ಲವೂ ಆಗುತ್ತದೆ. ಆದ್ದರಿಂದ ‘ಕೃಷ್ಣ ಸುಳ್ಳು ಹೇಳಿದ’ ಎಂದು ಆಪಾದನೆ ಮಾಡುವ ಮೊದಲು, ನಾವು ಆತನ ನೆಲೆಯನ್ನು ತಿಳಿಯಬೇಕು. ಆತ ಏಕೆ ಹಾಗೆ ಮಾಡಿದ ಎನ್ನುವುದನ್ನು ವಿಶ್ಲೇಷಿಸಬೇಕು.
ಸತ್ಯ ಎಂದರೆ ಇದ್ದದ್ದನ್ನು ಇದ್ದಂತೆ ಹೇಳುವುದಲ್ಲ. ಯಾವುದನ್ನು ಹೇಳುವುದರಿಂದ ಸಮಾಜಕ್ಕೆ ಹಿತವಾಗುತ್ತದೋ ಅದು ಸತ್ಯ. ಸತ್ಯಕ್ಕೆ ಹೊಸ ಅರ್ಥ-ಆಯಾಮವನ್ನು ಭಗವಂತ ತನ್ನ ಕೃಷ್ಣಾವತಾರದಲ್ಲಿ ನಮಗೆ ತೋರಿಸಿಕೊಟ್ಟಿದ್ದಾನೆ. ರಾಮಾವತಾರದಲ್ಲಿ ಸತ್ಯಕ್ಕೆ ಈ ಅರ್ಥವನ್ನು ಭಗವಂತ ನೀಡಲಿಲ್ಲ. ಅಲ್ಲಿ ದಶರಥ ತನ್ನ ಹೆಂಡತಿಗೆ ಕೊಟ್ಟ ಮಾತಿಗೆ ಬದ್ಧನಾಗಿ, ಇಡೀ ದೇಶಕ್ಕೆ ಅನ್ಯಾಯವಾಗುವಂತಹ ತೀರ್ಮಾನ ತೆಗೆದುಕೊಂಡಾಗ ಭಗವಂತ ದಶರಥನ ತೀರ್ಮಾನದಂತೆಯೇ ನಡೆದ. ಏಕೆಂದರೆ ಅಲ್ಲಿ ಆತನಿಗೆ ಕಾಡಿಗೆ ಹೋಗಿ ಅನೇಕ ಋಷಿ ಮುನಿಗಳ ಉದ್ಧಾರ ಮಾಡಬೇಕಾಗಿತ್ತು. ಆದ್ದರಿಂದ ದಶರಥನ ಪ್ರರಾಬ್ಧದಂತೆ ಎಲ್ಲವೂ ನಡೆಯಿತು. ಆದರೆ ಮಹಾಭಾರತದಲ್ಲಿ ರಾಮಾಯಣಕ್ಕೆ ಉತ್ತರ ರೂಪವಾಗಿ ಸ್ಪಷ್ಟವಾಗಿ ಹೇಳುತ್ತಾರೆ: “ಯಾವತ್ತೂ ಹೆಣ್ಣಿಗೆ ಕೊಟ್ಟ ಮಾತನ್ನು ಮತ್ತು ಮದುವೆ ಕಾಲದಲ್ಲಿ ಒಬ್ಬರಿಗೆ ಕೊಟ್ಟ ಮಾತನ್ನು ಸಮಾಜದ ಹಿತಕ್ಕೋಸ್ಕರ ಮುರಿದರೆ ಅದು ತಪ್ಪಲ್ಲ” ಎಂದು.
ಮೇಲ್ನೋಟದಲ್ಲಿ ನೋಡಿದರೆ “ಅಶ್ವತ್ಥಾಮ ಸತ್ತ ಎಂದು ಹೇಳು” ಎಂದು  ಶ್ರೀಕೃಷ್ಣ  ಧರ್ಮರಾಯನಲ್ಲಿ ಹೇಳಿ ಅನ್ಯಾಯ ಮಾಡಿದ ಎನಿಸುತ್ತದೆ. ಆದರೆ ಇದನ್ನು ಆಳವಾಗಿ ವಿಶ್ಲೇಷಿಸಿದರೆ ಇಲ್ಲಿರುವ ‘ಸತ್ಯ’ ನಮಗೆ  ತಿಳಿಯುತ್ತದೆ. ದ್ರೋಣಾಚಾರ್ಯರು ಒಬ್ಬ ಮಹಾನ್ ದೇವರ್ಷಿ. ಸಾತ್ವಿಕರಾಗಿದ್ದ ಅವರು, ತನ್ನ ಬಾಲ್ಯ ಮಿತ್ರ ದ್ರುಪದನಿಂದ ಅವಮಾನಿತರಾಗಿ ತಾಮಸ ಮಾರ್ಗವನ್ನು ಹಿಡಿದರು. ತನ್ನ ಮಗುವಿಗೆ ಹಾಲುಣಿಸಲು ಒಂದು ಹಸುವನ್ನು ಕೊಡು ಎಂದು ಬಾಲ್ಯದ ಸಲುಗೆಯಲ್ಲಿ ದ್ರುಪದನಲ್ಲಿ ಕೇಳಿದಾಗ, ಆತ ಬಾಲ್ಯದ ಸ್ನೇಹವನ್ನು ತಿರಸ್ಕರಿಸಿದ. ಇದನ್ನೇ ದ್ವೇಷವಾಗಿ ತೆಗೆದುಕೊಂಡ ದ್ರೋಣಾಚಾರ್ಯರು, ಸೇಡಿನಿಂದ ಕುರುವಂಶದ ಗುರುವಾಗಿ ಸೇರಿ, ನಂತರ ಧುರ್ಯೋಧನನ ಅನ್ನದ ಋಣಕ್ಕೆ ಬಿದ್ದು, ಅದನ್ನು ತೀರಿಸುವುದಕ್ಕಾಗಿ ಸಮಾಜ ಧರ್ಮವನ್ನೂ ಮರೆತು, ದಿನಕ್ಕೆ ಹತ್ತು ಸಾವಿರ ಸೈನಿಕರ ರುಂಡ ಚಂಡಾಡುತ್ತೇನೆ ಎಂದು ಪಣತೊಟ್ಟು, ಪಾಪಕೃತ್ಯದ ಪರಾಕಾಷ್ಠೆಯನ್ನು ತಲುಪುತ್ತಿರುವಾಗ, ಕೃಷ್ಣ ಅದನ್ನು ತಡೆದ. ದ್ರೋಣಾಚಾರ್ಯರ ಉದ್ಧಾರ ಅವರ ಸಾವಿನಲ್ಲಿದೆ ಎನ್ನುವುದು ಕೃಷ್ಣನಿಗೆ ತಿಳಿದಿತ್ತು. ಅಂತಹ ಮಹಾನ್ ಜ್ಞಾನಿ ಪುತ್ರಮೋಹಕ್ಕೊಳಗಾಗಿದ್ದುದ್ದು ಇನ್ನೊಂದು ದುರಂತ. ಹಾಗಾಗಿ  ಸಮಾಜದ ಉದ್ಧಾರಕ್ಕಾಗಿ(ದಿನಕ್ಕೆ ಹತ್ತು ಸಾವಿರ ಸೈನಿಕರ ಹತ್ಯೆಯನ್ನು ತಪ್ಪಿಸುವುದರ ಮೂಲಕ), ದ್ರೋಣಾಚಾರ್ಯರ ಉದ್ಧಾರಕ್ಕಾಗಿ(ಅವರಿಂದ ನಡೆಯಲಿದ್ದ ಮಾರಣ ಹೊಮವನ್ನು ತಪ್ಪಿಸಿ), ದ್ರೋಣಾಚಾರ್ಯರ ಪುತ್ರಮೋಹವನ್ನು ಕಳಚಿ(ಅಶ್ವತ್ಥಾಮ ಸತ್ತ ಎಂದು ಹೇಳಿ), ಸಮಾಜದ ಮತ್ತು ದ್ರೋಣಾಚಾರ್ಯರ ಉದ್ಧಾರ ಮಾಡಿದ ಕೃಷ್ಣ. ಇಲ್ಲಿರುವುದು ಕಾರುಣ್ಯ, ದ್ವೇಷವಲ್ಲ. ಇಂತಹ ಲೋಕೋದ್ಧಾರಕ ‘ಸತ್ಯ’ ನಮಗೆ ಮೇಲ್ನೋಟದಲ್ಲಿ ನೋಡಿದರೆ ತಿಳಿಯುವುದಿಲ್ಲ. 

Saturday, May 25, 2013

Shrimad BhAgavata in Kannada -Skandha-01-Ch-16(3)


ಸಾರಥ್ಯಪಾರ್ಷದಸೇವನಸಖ್ಯದೌತ್ಯ ವೀರಾಸನಾನುಗಮನಸ್ತವನಪ್ರಣಾಮೈಃ
ಸ್ನಿಗ್ಧೇಷು ಪಾಂಡುಷು ಜಗತ್ಪ್ರಣತಸ್ಯ  ವಿಷ್ಣೋಃ  ಭಕ್ತಿಂ ಕರೋತಿ ನೃಪತಿಶ್ಚರಣಾರವಿಂದೇ ೧೭

ಜನರೆಲ್ಲರೂ ಶ್ರೀಕೃಷ್ಣನನ್ನು, ಪಾಂಡವರನ್ನು ಕೊಂಡಾಡುತ್ತಿದ್ದರು. ಲೋಕನಾಯಕ, ಜಗತ್ತೆಲ್ಲಾ ಯಾರಿಗೆ ನಮಸ್ಕರಿಸಬೇಕೋ ಅಂತಹ ವಿಶ್ವವಂದ್ಯ ಭಗವಂತ, ಅರ್ಜುನನ ಸಾರಥಿಯಾಗಿ ನಿಂತಿದ್ದನ್ನು ಕಂಡಿರುವ ಜನರು ಪರೀಕ್ಷಿತನಲ್ಲಿ ಹೇಳುತ್ತಾರೆ: “ನಿಮ್ಮ ಅಜ್ಜಂದಿರರು ಪುಣ್ಯವಂತರು”ಎಂದು. ಎಲ್ಲಿ ಪಾಂಡವರು ಸಭೆ ನಡೆಸುತ್ತಿದ್ದರೋ ಅಲ್ಲಿ ಕೃಷ್ಣನಿರುತ್ತಿದ್ದ. ಕೃಷ್ಣನಿಲ್ಲದ ಪಾಂಡವರ ಸಭೆ ಇಲ್ಲ. ಪಾಂಡವರಿಗೆ ಏನಾದರೂ ಆಪತ್ತು ಬಂದರೆ ಅವರ ಚಾಕರಿಗೆ ಕೂರುತ್ತಿದ್ದ ಕೃಷ್ಣ. ಎಲ್ಲಾ ಮಂತ್ರಾಲೋಚನೆಗೂ ಕೃಷ್ಣ ಸಹಕಾರ ಕೊಡುತ್ತಿದ್ದ. ಒಬ್ಬ ಸೇವಕನಂತೆ, ಒಬ್ಬ ಆತ್ಮೀಯ ಗೆಳೆಯನಂತೆ, ಸಂಧಾನಕಾರನಾಗಿ, ಧೂತನಾಗಿ, ಸಾರಥಿಯಾಗಿ, ಶ್ರೀಕೃಷ್ಣ ಪಾಂಡವರ ಜೊತೆಗೆ ನಿಂತ. ಸಿಂಹಾಸನವನ್ನು ಅನುಗಮನ ಮಾಡಿ, ಅದರ ರಕ್ಷಣೆಯ ಹೊಣೆಹೊತ್ತು, ರಾಜಪೀಠವನ್ನು ಹಗಲು-ರಾತ್ರಿ ಎನ್ನದೆ ರಕ್ಷೆ ಮಾಡಿದ. ಇಡೀ ಜಗತ್ತು ಯಾರಿಗೆ ನಮಸ್ಕರಿಸುತ್ತದೋ, ಅಂತಹ ಶಕ್ತಿ ಶ್ರೀಕೃಷ್ಣ, ಧರ್ಮರಾಯನಿಗೆ, ಕುಂತಿಗೆ, ಭೀಷ್ಮಾಚಾರ್ಯರಿಗೆ, ಹೀಗೆ ಎಲ್ಲಾ ಗುರು-ಹಿರಿಯರೆಲ್ಲರಿಗೆ ನಮಸ್ಕರಿಸುತ್ತಿದ್ದ. ಹೇಗೆ ಗುರು-ಹಿರಿಯರೊಂದಿಗೆ ನಡೆದುಕೊಳ್ಳಬೇಕು ಎನ್ನುವುದನ್ನು ತಾನು ಸ್ವಯಂ ಮಾಡಿ ತೋರಿಸಿದ ಶ್ರೀಕೃಷ್ಣ.  “ಪಾಂಡವರು ಮಹಾ ಭಾಗ್ಯಶಾಲಿಗಳು, ಈ ಜಗತ್ತು ಯಾರ ಪಾದಕ್ಕೆರಗುತ್ತದೋ, ಅಂತಹ ನಾರಾಯಣ ಪಾಂಡವರಲ್ಲಿ ತನ್ನ ಸ್ನೇಹದ ಪೂರವನ್ನೇ ಹರಿಸಿ, ಅನುಚರನಂತೆ ನಡೆದುಕೊಂಡನಲ್ಲಾ” ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಜನರ ಈ ಮಾತನ್ನು ಕೇಳಿದ ಪರೀಕ್ಷಿತ ಪುಳಕಿತನಾದ. ಅವನಿಗೆ ಮೊದಲೇ ಶ್ರೀಕೃಷ್ಣನಲ್ಲಿ ಅಧಮ್ಯ ಭಕ್ತಿ ಇತ್ತು. ಆದರೆ ಜನರ ಮಾತನ್ನು ಕೇಳಿ ಆ ಭಕ್ತಿ ಮತ್ತಷ್ಟು ಹೆಚ್ಚಿತು.
ಪರೀಕ್ಷಿತ  ಬಹಳ ವಿನಮ್ರನಾಗಿ, ಭಗವಂತನ ಮೇಲೆ ಭಕ್ತಿ ನೆಟ್ಟು ರಾಜ್ಯಭಾರ ಮಾಡುತ್ತಿದ್ದ ಕಾಲದಲ್ಲಿ ಒಮ್ಮೆ ಒಂದು ಘಟನೆ ನಡೆಯಿತು. ಗಂಗಾತೀರ, ಸರಸ್ವತಿ ನದಿ ಪೂರ್ವಾಭಿಮುಖವಾಗಿ ಹರಿಯುವ ಸ್ಥಳದಲ್ಲಿ ಪರೀಕ್ಷಿತನಿಗೆ ಒಂದು ದೃಶ್ಯ ಕಾಣಿಸುತ್ತದೆ(Vision). ಅಲ್ಲಿ ಒಂದು ಎತ್ತು(ವೃಷಭ), ಒಂದೇ ಕಾಲಿನಲ್ಲಿ ನಿಂತಿದೆ. ಅದರ ಮುಂದೆ ಹಸುವೊಂದು(ಧೇನು) ನಿಂತು ದುಃಖಿಸುತ್ತಿದೆ. ವೃಷಭ ಸ್ವಯಂ ದುಃಖಿಯಾಗಿದ್ದರೂ ಕೂಡಾ ಹಸುವನ್ನು ಕುರಿತು ಕೇಳುತ್ತಿದೆ: “ತಾಯೀ, ಏಕೆ ದುಃಖಿಸುತ್ತಿರುವೆ” ಎಂದು. [ಈ ಹಿಂದೆ ಹೇಳಿದಂತೆ ಇಲ್ಲಿ ವೃಷಭ ಧರ್ಮದ ಪ್ರತೀಕ ಮತ್ತು ಹಸು ಭೂಮಾತೆಯ ಪ್ರತೀಕ].

ಸತ್ಯಂ ಶೌಚಂ ದಯಾ ದಾನಂ ತ್ಯಾಗಃ ಸಂತೋಷ ಆರ್ಜವಮ್
ಶಮೋ ದಮಸ್ತಪಃ ಸಾಮ್ಯಂ ತಿತಿಕ್ಷೋಪರತಿಃ ಶ್ರುತಮ್ ೨೭

ಜ್ಞಾನಂ ವಿರಕ್ತಿರೈಶ್ವರ್ಯಂ ಶೌರ್ಯಂ ತೇಜೋ ಧೃತಿಃ ಸ್ಮೃತಿಃ
ಸ್ವಾತಂತ್ರ್ಯಂ ಕೌಶಲಂ ಕಾಂತಿಃ ಸೌಭಗಂ ಮಾರ್ದವಂ ಕ್ಷಮಾ ೨೮

ಪ್ರಾಗಲ್ಭ್ಯಂ ಪ್ರಶ್ರಯಃ ಶೀಲಂ ಸಹ ಓಜೋ ಬಲಂ ಭಗಃ
ಗಾಂಭೀರ್ಯಂ ಸ್ಥೈರ್ಯಮಾಸ್ತಿಕ್ಯಂ ಕೀರ್ತಿರ್ಮಾನೋSನಹಂಕೃತಿಃ ೨೯

ಇಮೇ ಚಾನ್ಯೇ ಚ ಭಗವನ್ ನಿತ್ಯಾ ಯತ್ರ ಮಹಾಗುಣಾಃ
ಪ್ರಾರ್ಥ್ಯಾ ಮಹತ್ತ್ವಮಿಚ್ಛದ್ಭಿಃ ನ ಚ ಯಾಂತಿ ಸ್ಮ ಕರ್ಹಿಚಿತ್ ೩೦

ತೇನಾಹಂ ಗುಣಪಾತ್ರೇಣ ಶ್ರೀನಿವಾಸೇನ ಸಾಂಪ್ರತಮ್
ಶೋಚಾಮಿ ರಹಿತಂ ಲೋಕಂ ಪಾಪ್ಮನಾ ಕಲಿನೇಕ್ಷಿತಮ್ ೩೧

ವೃಷಭದ ಪ್ರಶ್ನೆಗೆ ಉತ್ತರಿಸುತ್ತಾ ಹಸು ಹೇಳುತ್ತದೆ: “ ಶ್ರೀಕೃಷ್ಣ ಹೊರಟುಹೋದ. ಆತನಿಲ್ಲದೇ ನನ್ನ ಅಸ್ತಿತ್ವಕ್ಕೇನು ಅರ್ಥವಿದೆ? ಕೃಷ್ಣನನ್ನು ಅಗಲಿ ಇರಬೇಕಲ್ಲಾ ಎಂದು ದುಃಖಿಸುತ್ತಿದ್ದೇನೆ” ಎಂದು. ಶ್ರೀಕೃಷ್ಣ ಎಲ್ಲಾ ಗುಣಗಳಿಗೆ ಪಾತ್ರನಾಗಿರತಕ್ಕಂತಹ ಶ್ರೀನಿವಾಸ. ಅವನಿಲ್ಲದೇ ಇರುವ ಈ ಲೋಕವನ್ನು ನೋಡಿ ನನಗೆ ದುಃಖವಾಗುತ್ತಿದೆ. ಇಷ್ಟೇ ಅಲ್ಲ, ಶ್ರೀಕೃಷ್ಣನ ನೋಟವನ್ನು ಕಳೆದುಕೊಂಡು, ಪಾಪಿಯಾದ ಈ ಕಲಿಯ ನೋಟಕ್ಕೆ ಬಲಿಯಾಗುತ್ತಿರುವ ಜನರನ್ನು ಕಂಡು ನನಗೆ ದುಃಖ ಬರುತ್ತಿದೆ ಎನ್ನುತ್ತದೆ ಧೇನು. ಹೀಗೆ ಒಂದು ಕಾಲಿನಲ್ಲಿ ನಿಂತಿರುವ ವೃಷಭವನ್ನು ಕಂಡು, ಕಲಿಯ ಕಾಟವನ್ನು ಕಂಡು, ಶ್ರೀಕೃಷ್ಣ ಹೊರಟುಹೋದನಲ್ಲಾ ಎಂದು ತಾನು ದುಃಖಿಸುತ್ತಿರುವುದಾಗಿ ಹಸು ಹೇಳುತ್ತದೆ.
ಶ್ರೀಕೃಷ್ಣ ಭೂಮಿಯಲ್ಲಿದ್ದಾಗ ಜನರು ಯಾವಯಾವ ಗುಣವನ್ನು ಹೊಂದಿರಬೇಕು ಮತ್ತು ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಸ್ವಯಂ ನಡೆದು ತೋರಿದ್ದ. ಶ್ರೀಕೃಷ್ಣ ನಡೆದು ತೋರಿದ ನಲವತ್ತು ಗುಣಗಳನ್ನು ಇಲ್ಲಿ ಧೇನು ನೆನಪಿಸಿಕೊಳ್ಳುತ್ತಿರುವುದನ್ನು ಕಾಣುತ್ತೇವೆ. ಬನ್ನಿ, ನಾವು ಇಲ್ಲಿ ವಿವರಿಸಿದ ಗುಣಗಳನ್ನು ಸಂಕ್ಷಿಪ್ತವಾಗಿ ವಿಶ್ಲೇಷಿಸೋಣ: 

Wednesday, May 22, 2013

Shrimad BhAgavata in Kannada -Skandha-01-Ch-16(2)


ಶೌನಕ ಉವಾಚ--
ಕಸ್ಯ ಹೇತೋರ್ನಿಜಗ್ರಾಹ ಕಲಿಂ ದಿಗ್ವಿಜಯೇ ನೃಪಃ
ನೃದೇವಚಿಹ್ನಧೃಕ್ ಶೂದ್ರಃ ಕೋSಸೌ ಗಾಂ ಯಃ ಪದಾSಹನತ್

“ಪರೀಕ್ಷಿತರಾಜ ಕಲಿಯನ್ನು ದಿಗ್ವಿಜಯ ಕಾಲದಲ್ಲಿ ಗೆದ್ದ” ಎನ್ನುವ ವಿಷಯವನ್ನು ಉಗ್ರಶ್ರವಸ್ಸರಿಂದ ಕೇಳಿದ ಶೌನಕರು: “ಹೇಗೆ ಕಲಿ ಮತ್ತು ಪರೀಕ್ಷಿತರಾಜ ಒಬ್ಬರನ್ನೊಬ್ಬರು ಭೇಟಿಯಾಗುವ ಪ್ರಸಂಗ ಬಂತು? ಕಲಿಯನ್ನು ದಿಗ್ವಿಜಯ ಕಾಲದಲ್ಲಿ ಪರೀಕ್ಷಿತ ಗೆಲ್ಲುವ ಪ್ರಸಂಗ ಯಾವಾಗ ಬಂತು? ಎಂದು ಪ್ರಶ್ನಿಸುತ್ತಾರೆ.
ಇಲ್ಲಿ “ನೃದೇವಚಿಹ್ನಧೃಕ್ ಶೂದ್ರಃ ಕೋSಸೌ” ಎನ್ನುವಲ್ಲಿ “ಅವನು ಯಾರು?” ಎಂದು ಪ್ರಶ್ನಿಸಿದಂತೆ ಕಾಣುತ್ತದೆ. ಆದರೆ ಹಿಂದಿನ ಶ್ಲೋಕದಲ್ಲೇ “ಹಸುವನ್ನು ತುಳಿಯುತ್ತಿದ್ದ ಕಲಿಯನ್ನು ಪರೀಕ್ಷಿತ ಗೆದ್ದ” ಎಂದು ಸ್ಪಷ್ಟವಾಗಿ ಹೇಳಿರುವುದರಿಂದ ಮತ್ತೆ “ಯಾರವನು” ಎನ್ನುವ ಪ್ರಶ್ನೆ ಇಲ್ಲಿ ಕೂಡುವುದಿಲ್ಲ. ಕೋSಸಾ ವಿತ್ಯಾಕ್ಷೇಪಃ ಕಲಿಮಿತ್ಯುಕ್ತತ್ವಾತ್ ಇಲ್ಲಿ  “ಯಾರವನು” ಎನ್ನುವುದು ಆಕ್ಷೇಪ ವಾಚಕ. ಹಸುವನ್ನು ತುಳಿಯಲು ಅವನ್ಯಾರು? ಅವನಿಗೆಷ್ಟು ಧೈರ್ಯ? ಎನ್ನುವ ತಿರಸ್ಕಾರ ವಾಚಕ ಪ್ರಶ್ನೆ ಇದಾಗಿದೆ.

ತತ್ಕ ಕಥ್ಯತಾಂ ಮಹಾಭಾಗ ಯದಿ ವಿಷ್ಣುಕಥಾಶ್ರಯಮ್
ಅಥವಾSಸ್ಯ ಪದಾಂಭೋಜ ಮಕರಂದಲಿಹಾಂ ಸತಾಮ್

“ಕಲಿ ಏಕೆ ಹಾಗೆ ಮಾಡಿದ? ಕಲಿಗೂ ಪರೀಕ್ಷಿತನಿಗೂ ಯುದ್ಧವಾಗುವ ಮೊದಲು ಏನಾಯ್ತು ಎನ್ನುವುದನ್ನು ವಿವರಿಸಿ” ಎಂದು ಶೌನಕರು ಸೂತರಲ್ಲಿ ಕೇಳುತ್ತಾರೆ. ಇಲ್ಲಿ ಶೌನಕರು ಹೇಳುತ್ತಾರೆ: ಈ ವಿಷಯ ಭಗವಂತನ ಮಹಾತ್ಮ್ಯವನ್ನು ಅಭಿವ್ಯಕ್ತಗೊಳಿಸುವ ಕಥೆಯಾಗಿದ್ದರೆ ಅಥವಾ ಭಗವಂತನ ಪಾದವೆಂಬ ತಾವರೆಯ ಮದುರಸವನ್ನು ಹೀರುವ ಸಜ್ಜನರ ಕಥೆಯಾಗಿದ್ದರೆ ಮಾತ್ರ ವಿವರಿಸಿ. ಇಲ್ಲದಿದ್ದರೆ ಬೇಡ” ಎಂದು. ಏಕೆಂದರೆ ಯಾವುದಕ್ಕೂ ಉಪಯೋಗವಿಲ್ಲದ ಮಾತನ್ನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಆದರೆ ಬದುಕಿನ ಒಂದೊಂದು ಕ್ಷಣವನ್ನೂ ಸಾರ್ಥಕಗೊಳಿಸುವ ಭಗವಂತನ ವಿಷಯವನ್ನು ಎಂದೂ ಬಿಡದೇ ಕೇಳಬೇಕು.   

ಕಿಮನ್ಯೈರಸದಾಲಾಪೈರಾಯುಷೋ ಯದಸದ್ ವ್ಯಯಃ
 ಕ್ಷುದ್ರಾಯುಷಾಂ ನೃಣಾಮಂಗ ಮರ್ತ್ಯಾನಾಮೃತಮಿಚ್ಛತಾಮ್

ಇಹೋಪಹೂತೋ ಭಗವಾನ್ ಮೃತ್ಯುಃ ಶಾಮಿತ್ರಕರ್ಮಣಿ
ನ ಕಶ್ಚಿನ್ ಮ್ರಿಯತೇ ತಾವದ್ ಯಾವದಾಸ್ತ ಇಹಾಂತಕಃ

ಏತದರ್ಥಂ ಹಿ ಭಗವಾನಾಹೂತಃ ಪರಮರ್ಷಿಭಿಃ
ಅಹೋ ನೃಲೋಕೇ ಪೀಯೇತ ಹರಿಲೀಲಾಮೃತಂ ವಚಃ

ಇಲ್ಲಿ ಶೌನಕರು  ಹೇಳುತ್ತಾರೆ: “ಇಲ್ಲಿ ಪ್ರವಚನ ನಡೆಯುವಾಗ ಯಾರಿಗೂ ಮೃತ್ಯುವಿನ ಆತಂಕವಿಲ್ಲ. ಆದ್ದರಿಂದ ನೀವು ಯಾವುದೇ ಅವಸರವಿಲ್ಲದೆ ವಿವರವಾಗಿ ಎಲ್ಲವನ್ನೂ ಹೇಳಿ” ಎಂದು. ಶೌನಕರ ಈ ಮಾತಿನ ಹಿಂದೆ ಒಂದು ಹಿನ್ನೆಲೆ ಇದೆ. ನಮಗೆ ತಿಳಿದಂತೆ ಈ ಸಂಭಾಷಣೆ ನಡೆಯುತ್ತಿರುವುದು ನೈಮಿಶಾರಣ್ಯದಲ್ಲಿ. ಅಲ್ಲಿ ನಿತ್ಯ ಪ್ರವಚನ ನಡೆಯುತ್ತಿತ್ತು. ಆ ಕಾಲದಲ್ಲಿ ಅಲ್ಲಿನ ಋಷಿಗಳು  ಭಗವಂತನ ಗುಣಗಾನ ನಡೆಯುವಾಗ ಯಾರೂ ಸಾಯಬಾರದು ಎಂದು ಮೃತ್ಯುದೇವತೆಯನ್ನು ಪ್ರಾರ್ಥಿಸಿ, ಆಹ್ವಾನ ಮಾಡಿ, ಪ್ರತಿಷ್ಠಾಪನೆ ಮಾಡಿದ್ದರು. ಇಲ್ಲಿ ಮೃತ್ಯುದೇವತೆ ಎಂದರೆ ಯಮನಲ್ಲ. ಯಮನ ಅಂತರ್ಗತ ಶಿವ, ಶಿವನ ಅಂತರ್ಗತನಾದ-ನರಸಿಂಹ ಮೃತ್ಯುದೇವತೆ. ಎಲ್ಲಾ ಮಹರ್ಷಿಗಳು ತಮ್ಮ ತಪಃಶಕ್ತಿಯನ್ನು  ಧಾರೆಯರೆದು ನರಸಿಂಹನನ್ನು ಆಹ್ವಾನ ಮಾಡಿ ಅಲ್ಲಿ ಪ್ರತಿಷ್ಠಾಪನೆ ಮಾಡಿದ್ದರು.
ಅಸ್ಥಿರವೂ ಕ್ಷಣಿಕವೂ ಆದ ಈ ಮನುಷ್ಯಲೋಕದಲ್ಲಿ ಕೂಡಾ ಭಗವಂತನ ಗುಣಗಾನ ಎನ್ನುವ ಅಮೃತವನ್ನು ಜನ ಬಯಸಿದಷ್ಟು ಕಾಲ ಸವಿಯಬೇಕು. ಕಲಿಯುಗದಲ್ಲಿ ಕೂಡಾ ಹರಿನಾಮ ವರ್ಚಸ್ಸು ಉಳಿಯಬೇಕು ಎನ್ನುವುದಕ್ಕಾಗಿ ಶೌನಕರು ನರಸಿಂಹನನ್ನು ಪ್ರಾರ್ಥಿಸಿ, ಅವನನ್ನು ಅಲ್ಲಿ ಪ್ರತಿಷ್ಠಾಪನೆ ಮಾಡಿದ್ದರು. “ಆದ್ದರಿಂದ ಇಲ್ಲಿ ಪ್ರವಚನ ನಡೆಯುವಾಗ ಯಾರೂ ಸಾಯುವುದಿಲ್ಲ, ನೀವು ಎಲ್ಲವನ್ನೂ ಅವಸರವಿಲ್ಲದೆ ವಿವರವಾಗಿ ವಿವರಿಸಿ” ಎಂದು ಕೇಳಿಕೊಳ್ಳುತ್ತಾರೆ ಶೌನಕರು.
ಶೌನಕರ ಕೋರಿಕೆಯಂತೆ ಉಗ್ರಶ್ರವಸ್ಸರು ಪರೀಕ್ಷಿತ ರಾಜನ ಕಥೆಯನ್ನು ವಿವರಿಸುತ್ತಾರೆ. ಪರೀಕ್ಷಿತರಾಜ ತಾನು ಅಧಿಕಾರಕ್ಕೆ ಬಂದ ಮೇಲೆ ಇಡೀ ದೇಶವನ್ನು ಸಂಚಾರ ಮಾಡಿದ. ಶ್ರೀಕೃಷ್ಣ ಮತ್ತು ಪಾಂಡವರು ಇಲ್ಲದ ಕಾಲದಲ್ಲಿ ಆಡಳಿತ ಬಿಗಿ ತಪ್ಪದಂತೆ ನೋಡಿಕೊಳ್ಳಲು ಮತ್ತು ಅಧಿಕಾರಿಗಳ ಪ್ರಾಮಾಣಿಕತೆಯನ್ನು ಪರೀಕ್ಷಿಸಲು ಸಮಗ್ರ ದೇಶ ಸಂಚಾರ ಮಾಡಿದ. ಹೀಗೆ ಸಂಚಾರ ಮಾಡುವಾಗ ಆತನಿಗೆ ಅತ್ಯಂತ ಸಂತೋಷಕೊಟ್ಟ ವಿಚಾರವೆಂದರೆ- ಆತ ಹೋದಲ್ಲೆಲ್ಲಾ “ನಾವು ಪಾಂಡವರನ್ನು, ಶ್ರೀಕೃಷ್ಣನನ್ನು ಕಂಡಿದ್ದೇವೆ” ಎಂದು  ಜನ ಹೇಳಿಕೊಳ್ಳುತ್ತಿದ್ದರು. ಊರ ಜನರು ಶ್ರೀಕೃಷ್ಣನ ಬಗೆಗೆ ಹೇಳುವುದನ್ನು ಕೇಳಿ ಪರೀಕ್ಷಿತನಿಗೆ, ತನ್ನನ್ನು ಗರ್ಭದಲ್ಲೇ ರಕ್ಷಿಸಿದ ಶ್ರೀಕೃಷ್ಣನ ಮೇಲೆ ಇನ್ನಷ್ಟು ಭಕ್ತಿ ಹೆಚ್ಚಾಗುತ್ತದೆ.  

Monday, May 20, 2013

Shrimad BhAgavata in Kannada -Skandha-01-Ch-16(1)


ಷೋಡಶೋSಧ್ಯಾಯಃ

ಸೂತ ಉವಾಚ--
ತತಃ ಪರೀಕ್ಷಿದ್ದ್ವಿಜವರ್ಯಶಿಕ್ಷಯಾ ಮಹೀಂ ಮಹಾಭಾಗವತಃ ಶಶಾಸ ಹ
ಯಥಾ ಹಿ ಸೂತ್ಯಾಮಭಿಜಾತಕೋವಿದಾಃ ಸಮಾದಿಶನ್ವಿಪ್ರ ಮಹದ್ಗುಣಸ್ತಥಾ

ಸ ಉತ್ತರಸ್ಯ ತನಯಾಮುಪಯೇಮ ಇರಾವತೀಮ್
ಜನಮೇಜಯಾದೀಂಶ್ಚತುರಸ್ತಸ್ಯಾಮುತ್ಪಾದಯತ್ ಸುತಾನ್

ಆಜಹಾರಾಶ್ವಮೇಧಾಂಸ್ತ್ರೀನ್ ಗಂಗಾಯಾಂ ಭೂರಿದಕ್ಷಿಣಾನ್
ಶಾರದ್ವತಂ ಗುರುಂ ಕೃತ್ವಾ ದೇವಾ ಯತ್ರಾಕ್ಷಿಗೋಚರಾಃ

ಪಾಂಡವರ ನಂತರ ಪರೀಕ್ಷಿತ ರಾಜ್ಯಭಾರದ ಹೊಣೆ ಹೊತ್ತ. ಉತ್ತರನ ಮಗಳಾದ ಇರಾವತಿಯನ್ನು ಮದುವೆಯಾದ ಆತನಿಗೆ ಜನಮೇಜಯ ಮುಂತಾದ ನಾಲ್ವರು ಮಕ್ಕಳಿದ್ದರು. ಕೃಪಾಚಾರ್ಯರನ್ನು ತನ್ನ ಗುರುವಾಗಿ ಪಡೆದ ಪರೀಕ್ಷಿತ, ತನ್ನ ಆಡಳಿತ ಕಾಲದಲ್ಲಿ ಮೂರು ಅಶ್ವಮೇಧಯಾಗವನ್ನು ಮಾಡಿ ಉತ್ತಮ ರಾಜ್ಯಾಡಳಿತ ನೀಡಿದ.

ನಿಜಗ್ರಾಹೌಜಸಾ ಧೀರಃ ಕಲಿಂ ದಿಗ್ವಿಜಯೇ ಕ್ವಚಿತ್
ನೃಪಲಿಂಗಧರಂ ಶೂದ್ರಂ ಘ್ನಂತಂ ಗೋಮಿಥುನಂ ಪದಾ

ಒಮ್ಮೆ  ಪರೀಕ್ಷಿತರಾಜ ದಿಗ್ವಿಜಯ ಮಾಡುತ್ತಿದ್ದಾಗ,  ‘ಕ್ಷತ್ರಿಯವೇಷ ಧರಿಸಿದ ಶೂದ್ರ’ನಂತೆ ಕಾಣುತ್ತಿದ್ದ ‘ಕಲಿ’, ಒಂದು ಎತ್ತು ಮತ್ತು ಒಂದು ದನವನ್ನು ತನ್ನ ಕಾಲಿನಿಂದ ಒದೆದು ಹಿಂಸಿಸುತ್ತಿರುವ ದೃಶ್ಯವನ್ನು ಕಾಣುತ್ತಾನೆ. ಆತ ಜ್ಞಾನದ ಮಾರ್ಗದಲ್ಲಿ ರಥನೂ(ಧೀರ) ಹಾಗೂ ಧೈರ್ಯಶಾಲಿಯೂ ಆಗಿದ್ದ. ಅಜ್ಞಾನದ ಅಧಿಕಾರವನ್ನು ಜನರ ಮೇಲೆ ಹೇರ ಬಯಸುವ ಕಲಿಯನ್ನು ನಿಗ್ರಹ ಮಾಡುವ ಆತ್ಮವಿಶ್ವಾಸ ಮತ್ತು ಶತ್ರುಗಳನ್ನು ಮಣಿಸುವ  ಶಕ್ತಿ(ಓಜಸ್ಸು) ಪರೀಕ್ಷಿತನಲ್ಲಿತ್ತು.

ಪರೀಕ್ಷಿತನಿಗೆ ಕಲಿಯನ್ನು ನಿಗ್ರಹಮಾಡುವ ಶಕ್ತಿ ಬರಲು ಇನ್ನೊಂದು ಕಾರಣ ಭಗವಂತನ ಅನುಗ್ರಹ.  ಹಿಂದೊಮ್ಮೆ ಭೀಮಸೇನ ಕಲಿಯನ್ನು ನಿಗ್ರಹ ಮಾಡಿದ್ದಾಗ, ಶ್ರೀಕೃಷ್ಣ ಕಲಿಗೆ ಒಂದು ಮಾತನ್ನು ಹೇಳಿದ್ದ: “ನಾನು ಮತ್ತು ಪಾಂಡವರು ಭೂಮಿಯಲ್ಲಿ ಇರುವ ತನಕ ಇಲ್ಲಿ ನಿನ್ನ ಪ್ರಭಾವ ತೋರಬೇಡ; ಅಷ್ಟೇ ಅಲ್ಲ, ಪಾಂಡವರ ಸಂತತಿ ಈ ದೇಶವನ್ನಾಳುವ ತನಕ ನಿನಗೆ ಈ ಭೂಮಿಯಲ್ಲಿ ಪೂರ್ಣಪ್ರಮಾಣದ ಅಧಿಕಾರವಿಲ್ಲ” ಎಂದು. ಹೀಗೆ ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರನಾದ ಧೀರ ಪರೀಕ್ಷಿತ ಕಲಿಯನ್ನು ನಿಗ್ರಹಿಸಿದ.
ಇಲ್ಲಿ ಕಲಿ ಪರೀಕ್ಷಿತನಿಗೆ ಕಾಣಿಸಿರುವುದು ‘ಕ್ಷತ್ರಿಯವೇಷ ಧರಿಸಿದ ಶೂದ್ರ’ನಂತೆ. ಇದು ಕಲಿಯುಗದ ಚಿತ್ರಣ. “ಕಲಿಯುಗದಲ್ಲಿ ಒಬ್ಬ ಯೋಗ್ಯ ಕ್ಷತ್ರೀಯ ರಾಜ್ಯಭಾರ ಮಾಡುವುದಿಲ್ಲ; ಬದಲಿಗೆ ಕ್ಷತ್ರೀಯ ವೇಷ ತೊಟ್ಟವರು, ಆಡಳಿತ ಸ್ವಭಾವವೇ ಇಲ್ಲದವರು ಆಡಳಿತ ಚುಕ್ಕಾಣಿ ಹಿಡಿಯುತ್ತಾರೆ” ಎನ್ನುವುದನ್ನು ಕಲಿಯ ಈ ರೂಪ ಸೂಚಿಸುತ್ತದೆ.
ಇಲ್ಲಿ ‘ಶೂದ್ರ’ ಎನ್ನುವುದು ಜಾತಿಯನ್ನು ಹೇಳುವ ಪದವಲ್ಲ. ಇದು ‘ವರ್ಣ’ವನ್ನು ಸೂಚಿಸುತ್ತದೆ. ವರ್ಣಗಳು ನಾಲ್ಕು. ಅವುಗಳೆಂದರೆ  ಬ್ರಾಹ್ಮಣ(ಅಧ್ಯಯನ ಮತ್ತು ಅಧ್ಯಾಪನ ಸ್ವಭಾವವುಳ್ಳ ಜನ), ಕ್ಷತ್ರೀಯ(ಆಡಳಿತ ಸ್ವಭಾವವುಳ್ಳ ಜನ), ವೈಶ್ಯ(ಕೃಷಿ, ಹೈನುಗಾರಿಕೆ, ವ್ಯಾಪಾರ ಸ್ವಭಾವವುಳ್ಳ ಜನ) ಮತ್ತು ಶೂದ್ರ(ಸೇವಾ ಸ್ವಭಾವವುಳ್ಳ ಜನ). ಈ ನಾಲ್ಕು ವರ್ಣದ ಜನರನ್ನು  ಪ್ರಪಂಚದ ಎಲ್ಲಾ ಭಾಗದಲ್ಲೂ ಕಾಣಬಹುದು ಮತ್ತು ಈ ನಾಲ್ಕೂ ವರ್ಣದವರು ಮೋಕ್ಷ ಯೋಗ್ಯರು. ಆದರೆ ಆಯಾ ವರ್ಣದವರು ತಮ್ಮ ಸ್ವಭಾವಕ್ಕನುಗುಣವಾದ ಕಸುಬನ್ನು ಮಾಡದೇ, ಇನ್ನೊಂದು ಸ್ವಭಾವದ ವೇಷ ಹಾಕಿಕೊಂಡು ಬದುಕಿದರೆ ಅದು ಅನರ್ಥ.
ಇಲ್ಲಿ ಹೇಳಿದ ಎತ್ತು ಧರ್ಮವನ್ನು ಸೂಚಿಸುತ್ತದೆ ಮತ್ತು ದನ ಭೂಮಿಯನ್ನು ಸೂಚಿಸುತ್ತದೆ. ಇವೆರಡನ್ನೂ ಕಲಿ ಒದೆಯುತ್ತಿದ್ದಾನೆ. ಇದು ಕಲಿಯುಗದಲ್ಲಾಗುವ ಅವ್ಯವಸ್ಥೆಯನ್ನು ಸೂಚಿಸುತ್ತದೆ. ‘ಅಯೋಗ್ಯ’ ಅಧಿಕಾರದಲ್ಲಿ ಕುಳಿತು ದೇಶವನ್ನಾಳುತ್ತಾನೆ; ಮನುಷ್ಯ ಭೂಮಿಗೆ ಭಾರವಾಗಿ ಧರ್ಮವನ್ನು ತುಳಿದು ಅಧರ್ಮಿಯಾಗಿ ಬದುಕುತ್ತಾನೆ. 
ಇಲ್ಲಿ ಉಗ್ರಶ್ರವಸ್ಸರು ಶೌನಕಾದಿಗಳಲ್ಲಿ ಹೇಳುತ್ತಾರೆ: “ಈ ರೀತಿ ಕೆಟ್ಟ ಪ್ರಭಾವ ಬೀರಬಲ್ಲ ಕಲಿಯನ್ನು ಗೆದ್ದು, ಕಲಿಯ  ಪ್ರಭಾವ ತನ್ನ ರಾಜ್ಯದಲ್ಲಾಗದಂತೆ ತಡೆದು, ಸುಮಾರು ಮೂವತ್ತು ವರ್ಷಗಳ ಕಾಲ ಧಾರ್ಮಿಕವಾಗಿ ಆಡಳಿತ ನಡೆಸಿದ ಪರೀಕ್ಷಿತ” ಎಂದು.    

Saturday, May 18, 2013

Shrimad BhAgavata in Kannada -Skandha-01-Ch-16(Text)


ಷೋಡಶೋSಧ್ಯಾಯಃ

ಸೂತ ಉವಾಚ--
ತತಃ ಪರೀಕ್ಷಿದ್ದ್ವಿಜವರ್ಯಶಿಕ್ಷಯಾ ಮಹೀಂ ಮಹಾಭಾಗವತಃ ಶಶಾಸ ಹ
ಯಥಾ ಹಿ ಸೂತ್ಯಾಮಭಿಜಾತಕೋವಿದಾಃ ಸಮಾದಿಶನ್ವಿಪ್ರ ಮಹದ್ಗುಣಸ್ತಥಾ

ಸ ಉತ್ತರಸ್ಯ ತನಯಾಮುಪಯೇಮ ಇರಾವತೀಮ್
ಜನಮೇಜಯಾದೀಂಶ್ಚತುರಸ್ತಸ್ಯಾಮುತ್ಪಾದಯತ್ ಸುತಾನ್

ಆಜಹಾರಾಶ್ವಮೇಧಾಂಸ್ತ್ರೀನ್ ಗಂಗಾಯಾಂ ಭೂರಿದಕ್ಷಿಣಾನ್
ಶಾರದ್ವತಂ ಗುರುಂ ಕೃತ್ವಾ ದೇವಾ ಯತ್ರಾಕ್ಷಿಗೋಚರಾಃ

ನಿಜಗ್ರಾಹೌಜಸಾ ಧೀರಃ ಕಲಿಂ ದಿಗ್ವಿಜಯೇ ಕ್ವಚಿತ್
ನೃಪಲಿಂಗಧರಂ ಶೂದ್ರಂ ಘ್ನಂತಂ ಗೋಮಿಥುನಂ ಪದಾ

ಶೌನಕ ಉವಾಚ--
ಕಸ್ಯ ಹೇತೋರ್ನಿಜಗ್ರಾಹ ಕಲಿಂ ದಿಗ್ವಿಜಯೇ ನೃಪಃ
ನೃದೇವಚಿಹ್ನಧೃಕ್ ಶೂದ್ರಃ ಕೋSಸೌ ಗಾಂ ಯಃ ಪದಾSಹನತ್

ತತ್ಕ ಕಥ್ಯತಾಂ ಮಹಾಭಾಗ ಯದಿ ವಿಷ್ಣುಕಥಾಶ್ರಯಮ್
ಅಥ ವಾSಸ್ಯ ಪದಾಂಭೋಜ ಮಕರಂದಲಿಹಾಂ ಸತಾಮ್

 ಕಿಮನ್ಯೈರಸದಾಲಾಪೈರಾಯುಷೋ ಯದಸದ್ ವ್ಯಯಃ
 ಕ್ಷುದ್ರಾಯುಷಾಂ ನೃಣಾಮಂಗ ಮರ್ತ್ಯಾನಾಮೃತಮಿಚ್ಛತಾಮ್

ಇಹೋಪಹೂತೋ ಭಗವಾನ್ ಮೃತ್ಯುಃ ಶಾಮಿತ್ರಕರ್ಮಣಿ
ನ ಕಶ್ಚಿನ್ ಮ್ರಿಯತೇ ತಾವದ್ ಯಾವದಾಸ್ತ ಇಹಾಂತಕಃ

ಏತದರ್ಥಂ ಹಿ ಭಗವಾನಾಹೂತಃ ಪರಮರ್ಷಿಭಿಃ
ಅಹೋ ನೃಲೋಕೇ ಪೀಯೇತ ಹರಿಲೀಲಾಮೃತಂ ವಚಃ


ಮಂದಸ್ಯ ಮಂದಪ್ರಜ್ಞಸ್ಯ ಪ್ರಾಯೋ ಮಂದಾಯುಷಶ್ಚ ವೈ
ನಿದ್ರಯಾ ಹ್ರಿಯತೇ ನಕ್ತಂ ದಿವಾ ಚಾಪ್ಯರ್ಥಕರ್ಮಭಿಃ೧೦

ಸೂತ ಉವಾಚ--
ಯದಾ ಪರೀಕ್ಷಿತ್ ಕುರುರುಜಾಂಗಲೇ ವಸಣ್ ಕಲಿಂ ಪ್ರವಿಷ್ಟಂ ನಿಜಚಕ್ರವರ್ತಿತೇ
ನಿಶಮ್ಯ ವಾರ್ತಾಮನತಿಪ್ರಿಯಾಂ ತತಃ ಶರಾಸನಂ ಸಂಯುಗರೋಚಿರಾದದೇ ೧೧

ಸ್ವಲಂಕೃತಂ ಶ್ಯಾಮತುರಂಗಯೋಜಿತಂ ರಥಂ ಮೃಗೇಂದ್ರಧ್ವಜಮಾಸ್ಥಿತಃ ಪುರಾತ್
ವೃತೋ ರಥಾಶ್ವದ್ವಿಪಪತ್ತಿಯುಕ್ತಯಾ ಸ್ವಸೇನಯಾ ದಿಗ್ವಿಜಯಾಯ ನಿರ್ಗತಃ ೧೨

ಭದ್ರಾಶ್ವಂ ಕೇತುಮಾಲಂ ಚ ಭಾರತಂ ಚೋತ್ತರಾನ್ ಕುರೂನ್
ಕಿಂಪುರುಷಾದೀನಿ ಸರ್ವಾಣಿ ವಿಜಿತ್ಯ ಜಗೃಹೇ ಬಲಿಮ್ ೧೩

ತತ್ರ ತತ್ರೋಪಶೃಣ್ವಾನಃ ಸ್ವಪೂರ್ವೇಷಾಂ ಮಹಾತ್ಮನಾಮ್
ಪ್ರಗೀಯಮಾನಂ ಪುರತಃ ಕೃಷ್ಣಮಾಹಾತ್ಮ್ಯಸೂಚನಮ್ ೧೪

ಆತ್ಮಾನಂ ಚ ಪರಿತ್ರಾತಮಶ್ವತ್ಥಾಮ್ನೋSಸ್ತ್ರತೇಜಸಃ
ಸ್ನೇಹಂ ಚ ವೃಷ್ಣಿಪಾರ್ಥಾನಾಂ ತೇಷಾಂ ಭಕ್ತಿಂ ಚ ಕೇಶವೇ ೧೫

ತೇಭ್ಯಃ ಪರಮಸಂತುಷ್ಟಃ ಪ್ರೀತ್ಯುಜ್ಜೃಂಭಿತಲೋಚನಃ
ಮಹಾಧನಾನಿ ವಾಸಾಂಸಿ ದದೌ ಹಾರಾನ್ ಮಹಾಮನಾಃ ೧೬

 ಸಾರಥ್ಯಪಾರ್ಷದಸೇವನಸಖ್ಯದೌತ್ಯ ವೀರಾಸನಾನುಗಮನಸ್ತವನಪ್ರಣಾಮೈಃ
ಸ್ನಿಗ್ಧೇಷು ಪಾಂಡುಷು ಜಗತ್ಪ್ರಣತಸ್ಯ  ವಿಷ್ಣೋಃ  ಭಕ್ತಿಂ ಕರೋತಿ ನೃಪತಿಶ್ಚರಣಾರವಿಂದೇ ೧೭

ತಸ್ಯೈವಂ ವರ್ತಮಾನಸ್ಯ ಪೂರ್ವೇಷಾಂ ವೃತ್ತಮನ್ವಹಮ್
ನಾತಿದೂರೇ ಕಿಲಾಶ್ಚರ್ಯಂ ಯದಾಸೀತ್ ತನ್ನಿಬೋಧ ಮೇ ೧೮

ಧರ್ಮಃ ಪದೈಕೇನ ಚರನ್ ವಿಚ್ಛಾಯಾಮುಪಲಭ್ಯ ಗಾಮ್
ಪೃಚ್ಛತಿ ಸ್ಮಾಶ್ರುವದನಾಂ ವಿವತ್ಸಾಮಿವ ಮಾತರಮ್ ೧೯


ಧರ್ಮ ಉವಾಚ--
ಕಚ್ಚಿದ್ ಭದ್ರೇSನಾಮಯಮಾತ್ಮನಸ್ತೇ ವಿಚ್ಛಾಯಾSಸಿ ಮ್ಲಾಯತಾ ಯನ್ಮುಖೇನ
ಆಲಕ್ಷಯೇ ಭವತೀಮಂತರಾಧಿಂ ದೂರೇಬಂಧುಂ ಕಂಚನ ಶೋಚಸೀವ ೨೦

ಪಾದೈರ್ನ್ಯೂನಂ ಶೋಚಸಿ ಮೈಕಪಾದ ಮುತಾತ್ಮಾನಂ ವೃಷಳೈರ್ಭೋಕ್ಷ್ಯಮಾಣಮ್
ಆಥೋ ಸುರಾದೀನ್ ಹೃತಯಜ್ಞಭಾಗಾನ್ ಪ್ರಜಾ ಉತ ಸ್ವಿನ್ಮಘವತ್ಯವರ್ಷತಿ ೨೧

ಅರಕ್ಷ್ಯಮಾಣಾಃ ಸ್ತ್ರಿಯ ಉರ್ವಿ ಬಾಲಾಂಛೊಚಸ್ಯಥೋ ಪುರುಷಾದೈರಿವಾರ್ತಾನ್
ವಾಚಂ ದೇವೀಂ ಬ್ರಹ್ಮಕುಲೇ ಕುಕರ್ಮಣ್ಯಬ್ರಹ್ಮಣ್ಯೇ ರಾಜಕುಲೇ ಕುಲಾಗ್ರ್ಯಾಮ್ ೨೨

 ಕಿಂ ಕ್ಷತ್ರಬಂಧೂನ್ ಕಲಿನೋಪಸೃಷ್ಟಾನ್ ರಾಷ್ಟ್ರಾಣಿ ವಾ ತೈರವರೋಪಿತಾನಿ
ಇತಸ್ತತೋ ವಾSಶನಪಾನವಾಸ ಸ್ನಾನವ್ಯವಾಯೋತ್ಸುಕಜೀವಲೋಕಮ್ ೨೩

ಯದ್ವಾSಥ  ತೇ  ಭೂರಿಭರಾವತಾರ ಕೃತಾವತಾರಸ್ಯ ಹರೇರ್ಧರಿತ್ರಿ
ಅಂತರ್ಹಿತಸ್ಯ ಸ್ಮರತೀ ವಿಸೃಷ್ಟಾ ಕರ್ಮಾಣಿ ನಿರ್ವಾಣವಿಲಂಬಿತಾನಿ ೨೪

ಇದಂ ಮಮಾಚಕ್ಷ್ವ ತವಾಧಿಮೂಲಂ ವಸುಂಧರೇ ಯೇನ ವಿಕರ್ಶಿತಾSಸಿ
ಕಾಲೇನ ವಾ ತೇ ಬಲಿನಾSವಲೀಢಂ ಸುರಾರ್ಚಿತಂ ಕಿಂ ಪ್ರಭುಣಾSದ್ಯ ಸೌಭಗಮ್ ೨೫

ಧರೋವಾಚ--
ಭವಾನ್ ಹಿ ವೇದ ತತ್ ಸರ್ವಂ ಯನ್ಮಾಂ ಧರ್ಮಾನುಪೃಚ್ಛಸಿ
ಚತುರ್ಭಿರ್ವರ್ತಸೇ ಯೇನ ಪಾದೈರ್ಲೋಕಸುಖಾವಹೈಃ ೨೬

ಸತ್ಯಂ ಶೌಚಂ ದಯಾ ದಾನಂ ತ್ಯಾಗಃ ಸಂತೋಷ ಆರ್ಜವಮ್
ಶಮೋ ದಮಸ್ತಪಃ ಸಾಮ್ಯಂ ತಿತಿಕ್ಷೋಪರತಿಃ ಶ್ರುತಮ್ ೨೭

ಜ್ಞಾನಂ ವಿರಕ್ತಿರೈಶ್ವರ್ಯಂ ಶೌರ್ಯಂ ತೇಜೋ ಧೃತಿಃ ಸ್ಮೃತಿಃ
ಸ್ವಾತಂತ್ರ್ಯಂ ಕೌಶಲಂ ಕಾಂತಿಃ ಸೌಭಗಂ ಮಾರ್ದವಂ ಕ್ಷಮಾ ೨೮

 ಪ್ರಾಗಲ್ಭ್ಯಂ ಪ್ರಶ್ರಯಃ ಶೀಲಂ ಸಹ ಓಜೋ ಬಲಂ ಭಗಃ
 ಗಾಂಭೀರ್ಯಂ ಸ್ಥೈರ್ಯಮಾಸ್ತಿಕ್ಯಂ ಕೀರ್ತಿರ್ಮಾನೋSನಹಂಕೃತಿಃ ೨೯

ಇಮೇ ಚಾನ್ಯೇ ಚ ಭಗವನ್ ನಿತ್ಯಾ ಯತ್ರ ಮಹಾಗುಣಾಃ
ಪ್ರಾರ್ಥ್ಯಾ ಮಹತ್ತ್ವಮಿಚ್ಛದ್ಭಿಃ ನ ಚ ಯಾಂತಿ ಸ್ಮ ಕರ್ಹಿಚಿತ್ ೩೦

ತೇನಾಹಂ ಗುಣಪಾತ್ರೇಣ ಶ್ರೀನಿವಾಸೇನ ಸಾಂಪ್ರತಮ್
ಶೋಚಾಮಿ ರಹಿತಂ ಲೋಕಂ ಪಾಪ್ಮನಾ ಕಲಿನೇಕ್ಷಿತಮ್ ೩೧

ಆತ್ಮಾನಂ ಚಾನುಶೋಚಾಮಿ ಭವಂತಂ ಚಾಮರೋತ್ತಮ
ದೇವಾನ್ ಋಷೀನ್ ಪಿತೃನ್ ಸಾಧೂನ್ ಸರ್ವಾನ್ ವರ್ಣಾಂಸ್ತಥಾಶ್ರಮಾನ್ ೩೨

ಬ್ರಹ್ಮಾದಯೋ ಬಹುತಿಥಂ ಯದಪಾಂಗಮೋಕ್ಷ ಕಾಮಾ ಯಥೋಕ್ತವಿಧಿನಾ ಭಗವತ್ ಪ್ರಪನ್ನಾಃ
ಸಾ ಶ್ರೀಃ ಸ್ವವಾಸಮರವಿಂದವನಂ ವಿಹಾಯ ಯತ್ಪಾದಸೌಭಗಮಲಂ ಭಜತೇSನುರಕ್ತಾ ೩೩

ತಸ್ಯಾಹಮಬ್ಜಕುಲಿಶಾಂಕುಶಕೇತುಕೇತೈಃ ಶ್ರೀಮತ್ಪದೈರ್ಭಗವತಃ ಸಮಲಂಕೃತಾಂಗೀ
ತ್ರೀನತ್ಯರೋಚಮುಪಲಬ್ದ ತಪೋ ವಿಭೂತಿರ್ಲೋಕಾನ್ ಸ ಮಾಂ ವ್ಯಸೃಜದುತ್ ಸ್ಮಯತೀಂ ತದಂತೇ ೩೪

ಯೋ ವೈ ಮಮಾತಿಭರಮಾಸುರವಂಶರಾಜ್ಞಾಮಕ್ಷೋಹಿಣೀಶತಮಪಾನುದದಾತ್ಮತಂತ್ರಃ
ತ್ವಾಂ ದುಃಸ್ಥಮೂನಪದಮಾತ್ಮನಿ ಪೌರುಷೇಣ  ಸಂಪಾದಯನ್ ಯದುಷು ರಮ್ಯಮಬಿಭ್ರದಂಗಮ್ ೩೫

ಕಾ ವಾ ಸಹೇತ ವಿರಹಂ ಪುರುಷೋತ್ತಮಸ್ಯ ಪ್ರೇಮಾವಲೋಕರುಚಿರಸ್ಮಿತವಲ್ಗುಜಲ್ಪೈಃ
 ಸ್ಥೈರ್ಯಂ ಸಮಾನಮಹರನ್ಮಧುಮಾನಿನೀನಾಂ ರೋಮೋತ್ಸವೋ ಮಮ ಯದಂಘ್ರಿವಿಟಂಕಿತಾಯಾಃ ೩೬

 ತಯೋರೇವಂ ಕಥಯತೋಃ ಪೃಥಿವೀಧರ್ಮಯೋಸ್ತದಾ
 ಪರೀಕ್ಷಿನ್ನಾಮ ರಾಜರ್ಷಿಃ ಪ್ರಾಪ್ತಃ ಪ್ರಾಚೀಂ ಸರಸ್ವತೀಮ್ ೩೭

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ಷೋಡಶೋSಧ್ಯಾಯಃ
ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಹದಿನಾರನೇ ಅಧ್ಯಾಯ ಮುಗಿಯಿತು.
*********