Sunday, December 30, 2012

Shrimad BhAgavata in Kannada -Skandha-01 -Ch-02(01)


ದ್ವಿತೀಯೋSಧ್ಯಾಯಃ

ಇತಿ ಸಂಪ್ರಶ್ನಸಂಪೃಷ್ಟೋ ವಿಪ್ರಾಣಾಂ ರೌಮಹರ್ಷಣಿಃ ।
ಪ್ರತಿಪೂಜ್ಯ ವಚಸ್ತೇಷಾಂ ಪ್ರವಕ್ತುಮುಪಚಕ್ರಮೇ          ॥೧॥

ವಿಪ್ರರು ಹಾಕಿದ ಪ್ರಶ್ನೆಗಳನ್ನು  ಕೇಳಿ ರೋಮಹರ್ಷಣರ ಮಗನಾದ ಉಗ್ರಶ್ರವಸ್ಸರಿಗೆ ಬಹಳ ಸಂತೋಷವಾಯಿತು. ಪ್ರಶ್ನೆ ಹಾಕಿದ ಎಲ್ಲಾ ಋಷಿಗಳನ್ನು ಅಭಿನಂದಿಸಿ ಸೂತರು  ತಮ್ಮ ಪ್ರವಚನ ಆರಂಭಿಸುತ್ತಾರೆ.
ಶೌನಕಾದಿಗಳಿಗೆ ಭಾಗವತ ಪ್ರವಚನ ಮಾಡುವ ಮೊದಲು ಸೂತರು ತನ್ನ ಗುರು ಶುಕಾಚಾರ್ಯರಿಗೆ ವಂದಿಸುತ್ತಾರೆ. ಹಿಂದೆ ಹೇಳಿದಂತೆ ಭಗವಾನ್ ವೇದವ್ಯಾಸರು ಭಾಗವತವನ್ನು ಮೊದಲು ಶುಕಮುನಿಗಳಿಗೆ ಉಪದೇಶಿಸಿದರು. ಶುಕಮುನಿಗಳು ಅದನ್ನು ಪರೀಕ್ಷಿತರಾಜನಿಗೆ ಉಪದೇಶ ಮಾಡುವಾಗ ಸೂತರು ಪರೀಕ್ಷಿತ ರಾಜನೊಂದಿಗೆ ಕುಳಿತು ಭಾಗವತವನ್ನು ಕೇಳಿರುವುದರಿಂದ, ಸೂತರ ಸಾಕ್ಷಾತ್ ಗುರು ಶುಕಮುನಿಗಳು. ಹಾಗಾಗಿ ಇಲ್ಲಿ ಸೂತರು ಪ್ರವಚನ ಆರಂಭಿಸುವ ಮೊದಲು ತಮ್ಮ ಗುರುಗಳ ಸ್ತೋತ್ರ ಮಾಡುತ್ತಾರೆ.

ಗುರುಸ್ತುತಿ
ಸೂತ ಉವಾಚ:
ಯಂ ಪ್ರವ್ರಜಂತಮನುಪೇತಮಪೇತಕೃತ್ಯಂ ದ್ವೈಪಾಯನೋ ವಿರಹಕಾತರ ಆಜುಹಾವ ।
ಪುತ್ರೇತಿ ತನ್ಮಯತಯಾ ತರವೋSಭಿನೇದುಸ್ತಂ ಸರ್ವಭೂತಹೃದಯಂ ಮುನಿಮಾನತೋSಸ್ಮಿ       ॥೨॥

ಶುಕಮುನಿಗಳನ್ನು ಸ್ತುತಿಸುವ ಈ ಶ್ಲೋಕ ಅದ್ಭುತವಾದುದು. ಈ ಶ್ಲೋಕದ ಹಿನ್ನೆಲೆಯಲ್ಲಿ ಒಂದು ಕಥೆ ಇದೆ. ಆದರೆ ಭಾಗವತ ಅದನ್ನು ಹೇಳುವುದಿಲ್ಲ. ಏಕೆಂದರೆ ಅದನ್ನು ಮಹಾಭಾರತದಲ್ಲಿ ವಿವರಿಸಲಾಗಿದೆ. ಮೊದಲು ನಾವು ಆ ಕಥೆಯನ್ನು ಸಂಕ್ಷಿಪ್ತವಾಗಿ ನೋಡೋಣ:
ಒಮ್ಮೆ ಶುಕಾಚಾರ್ಯರು ಪೂರ್ಣಪ್ರಮಾಣದ ವಿರಕ್ತಿ ತಳೆದು, ಆಶ್ರಮದಲ್ಲಿ ಯಾರಿಗೂ ಹೇಳದೆ, ಆಶ್ರಮ ಬಿಟ್ಟು ಹೊರಟು ಹೋಗುತ್ತಾರೆ. ವೇದವ್ಯಾಸರು ಆಶ್ರಮದಲ್ಲಿ ಶುಕಮುನಿ ಇಲ್ಲದ್ದನ್ನು ಕಂಡು ಅವರನ್ನು ಹುಡುಕುತ್ತಾ ಶುಕಾಚಾರ್ಯರು ಹೋದ ಮಾರ್ಗವಾಗಿ ಹೋಗುತ್ತಾರೆ. ಈ ರೀತಿ ವಿರಕ್ತಿ ತಳೆದು ಹೊರಟ ಶುಕಾಚಾರ್ಯರ ಮನಸ್ಥಿತಿ ಹೇಗಿತ್ತೆಂದರೆ: ಅವರು ಹೋಗುತ್ತಿದ್ದ ಮಾರ್ಗದಲ್ಲಿ ಒಂದು ಕೊಳದಲ್ಲಿ ಸ್ತ್ರೀಯರು ವಿವಸ್ತ್ರರಾಗಿ ಸ್ನಾನ ಮಾಡುತ್ತಿದ್ದರೂ, ಅವರಿಗೆ ಆ ಗೋಜೇ ಇಲ್ಲದೆ ಮುಂದೆ ನಡೆದರು ಎನ್ನುತ್ತದೆ ಭಾರತ. ಮೋಹದ ಸೆಳೆತವನ್ನು ಮೀರಿನಿಂತ ವ್ಯಕ್ತಿ ಶುಕ ಎನ್ನುವುದನ್ನು ವ್ಯಾಸರು ಈ ಉದಾಹರಣೆಯಲ್ಲಿ ತೋರಿಸಿದ್ದಾರೆ.
ಇಲ್ಲಿ ಶುಕಾಚಾರ್ಯರು ಎಲ್ಲವನ್ನೂ ತ್ಯಾಗ ಮಾಡಿ ಹೋದಾಗ, ವ್ಯಾಸರು ಪುತ್ರ ಮೋಹದಿಂದ ಅವರನ್ನು ಹಿಂಬಾಲಿಸಿ ಹೋದರು ಎನ್ನುವಂತೆ ವಿವರಣೆ ಇದೆ. ಏಕೆ ಈ ರೀತಿ ಎಂದು ನೀವು ಪ್ರಶ್ನಿಸಬಹುದು.  ಇದರ ಹಿಂದೆ ಒಂದು ಸ್ವಾರಸ್ಯಕರವಾದ ಭಗವಂತನ ಲೀಲೆ ಅಡಗಿದೆ. ವೇದವ್ಯಾಸರು ತಪಸ್ಸನ್ನಾಚರಿಸಿ ಹುಟ್ಟಿದ ಮಗ ಶುಕ. ಈತ ಶಿವನ ಅವತಾರ. ಅದೇ ರೀತಿ ಮಹಾಭಾರತದಲ್ಲಿ ಬರುವ ಅಶ್ವತ್ಥಾಮ ಕೂಡಾ ಸಾಕ್ಷಾತ್ ಶಿವನ ಅವತಾರ. ಮಹಾಭಾರತ ಯುದ್ಧದ ಕೊನೆಯಲ್ಲಿ ಪಾಂಡವರ ವಂಶ ನಿರ್ವಂಶವಾಗಬೇಕೆಂದು ತೊಡೆ ಮುರಿದು ಬಿದ್ದ ದುರ್ಯೋಧನ ಬಯಸಿದಾಗ, ಅಶ್ವತ್ಥಾಮ ದ್ರೌಪದಿಯ ಐದು ಮಂದಿ ಮಕ್ಕಳನ್ನು [ಪ್ರತಿವಿಂಧ್ಯ (ಯುಧಿಷ್ಥಿರ ಪುತ್ರ); ಶೃತಸೋಮ (ಭೀಮ ಪುತ್ರ); ಶೃತಕೀರ್ತಿ (ಅರ್ಜುನ ಪುತ್ರ); ಶತಾನೀಕ (ನಕುಲ ಪುತ್ರ); ಶೃತಕರ್ಮಾ (ಸಹದೇವ ಪುತ್ರ)] ತಲೆಕಡಿದು ಹತ್ಯೆಮಾಡಿ, “ಪಾಂಡವರ ಸಂತತಿಯನ್ನು ನಿರ್ವಂಶ ಮಾಡಿದೆ” ಎಂದು ದುರ್ಯೋಧನನಿಗೆ ಹೇಳುತ್ತಾನೆ. ಆಗ ಪಾತಕಿ ದುರ್ಯೋಧನ ಅಷ್ಟಕ್ಕೆ ಸಮಾಧಾನ ತಾಳದೆ, ಮಸಣದ ಮಣ್ಣಿನಿಂದ ಅಶ್ವತ್ಥಾಮನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಪಟ್ಟಾಭಿಷೇಕ ಮಾಡಿ ಹೇಳುತ್ತಾನೆ: “ನೀನು ನನ್ನ ಪತ್ನಿಯಲ್ಲಿ ಸಂತಾನ ಪಡೆಯಬೇಕು ಮತ್ತು ಆತ ಮುಂದೆ ಈ ದೇಶವನ್ನು ಆಳಬೇಕು” ಎಂದು. ಇದನ್ನು ನಿಯೋಗ ಪದ್ಧತಿ ಎನ್ನುತ್ತಾರೆ. ಇದಕ್ಕಾಗಿ ಅಶ್ವತ್ಥಾಮ ಉತ್ತರೆಯ ಗರ್ಭದಲ್ಲಿ ಬೆಳೆಯುತ್ತಿದ್ದ ಪರೀಕ್ಷಿತನನ್ನು  ಹತ್ಯೆಗಯ್ಯಲು  ಬ್ರಹ್ಮಾಸ್ತ್ರ ಪ್ರಯೋಗಿಸುತ್ತಾನೆ. ಆದರೆ ಆ ಮಗುವನ್ನು ಕೃಷ್ಣ ಕಾಪಾಡುತ್ತಾನೆ. ಉತ್ತರೆಗೆ ಪ್ರಸವವಾದಾಗ ಮಗು ಉಸಿರಾಡುತ್ತಿರಲಿಲ್ಲ. ಆದರೆ ಮಗುವನ್ನು ಕೃಷ್ಣ ಕೈಗೆತ್ತಿಕೊಂಡಾಗ ಮಗು ಕಣ್ತೆರೆಯುತ್ತದೆ. ಈ ಮಗುವೇ ಪಾಂಡವರ ನಂತರ ಮುಂದೆ ಈ ದೇಶದ ಆಡಳಿತ ಚುಕ್ಕಾಣಿ ಹಿಡಿದ ಪರೀಕ್ಷಿತ ರಾಜ. ಈ ರೀತಿ ಶಿವಶಕ್ತಿಯ 'ಅಶ್ವತ್ಥಾಮ' ರೂಪದಲ್ಲಾದ ತಪ್ಪನ್ನು,  ಶಿವಶಕ್ತಿಯಿಂದಲೇ ಪರಿಮಾರ್ಜನ ಮಾಡುವುದಕ್ಕಾಗಿ, ಶಿವನೇ ಶುಕಮುನಿಯಾಗಿ, ವೇದವ್ಯಾಸರಲ್ಲಿ ಜನಿಸಿ, ವ್ಯಾಸರಿಂದ ಭಾಗವತ ಉಪದೇಶ ಪಡೆದು, ಅದನ್ನು ಪರೀಕ್ಷಿತ ರಾಜನಿಗೆ ಉಪದೇಶ ಮಾಡಿದ. ಇದು ದೇವ-ದೇವತೆಯರ ಲೀಲಾ ಪ್ರಸಂಗ. ಈ ಹಿನ್ನೆಲೆಯಲ್ಲಿ ನಾವು ಮೇಲಿನ ಶ್ಲೋಕಾರ್ಥವನ್ನು ನೋಡಬೇಕು.
ಶುಕಾಚಾರ್ಯರು ಸರ್ವಸ್ವವನ್ನೂ ತ್ಯಾಗಮಾಡಿ, ದೇಹದ ಅಭಿಮಾನವನ್ನೂ ಬಿಟ್ಟು, ದೇಹವಿದೆ ಎನ್ನುವ ಪರಿವೆಯೂ ಇಲ್ಲದೆ(ಅನುಪೇತಂ), ಆಶ್ರಮ ಬಿಟ್ಟು ಹೊರಟುಹೋದ ವಿಷಯ ದ್ವೈಪಾಯನ(ವ್ಯಾಸ)ರಿಗೆ ತಲುಪಿದಾಗ, ಅವರು ವಿರಹ ಕಾತರರಾದವರಂತೆ ಪುತ್ರನನ್ನು ಕರೆಯುತ್ತಾ ಹೊರಟರಂತೆ. ಅವರು ತನ್ನ ಪುತ್ರನನ್ನು ಕೂಗಿದಾಗ ಕಾಡಿನಲ್ಲಿನ ಮರಗಳೂ ಕೂಡಾ ಆ ಕೂಗಿಗೆ ಒಗೊಟ್ಟಂತೆ ಪ್ರತಿಧ್ವನಿಸಿದವಂತೆ. ಇಲ್ಲಿ ಸೂತರು: ಯಾರಿಗಾಗಿ ವೇದವ್ಯಾಸರು ‘ಪುತ್ರಾ’ ಎಂದು ಹುಡುಕಾಡಿದರೋ ಅವರಿಗೆ ನಮಸ್ಕಾರ” ಎಂದಿದ್ದಾರೆ. ಶಿವ ಮನದ ಅಭಿಮಾನಿ. ಆತ ಅಹಂಕಾರತತ್ತ್ವವಾಗಿ(Awareness of self) ಪ್ರತಿಯೊಬ್ಬರ ಹೃದಯದಲ್ಲಿ ನೆಲೆಸಿದ್ದಾನೆ. ಅದಕ್ಕಾಗಿ ಶಿವನಿಗೆ ನಮಸ್ಕಾರ ಮಾಡುವಾಗ ಅಜ್ಞಾನದ ಗಂಟನ್ನು ಬಿಚ್ಚಿ ನನಗೆ ಭಗವಂತನ ಅರಿವು ಬರುವಂತೆ ಮಾಡು ಎಂದು ಪ್ರಾರ್ಥಿಸುತ್ತೇವೆ. ಹಾಗಾಗಿ ಇಲ್ಲಿ ಸೂತರು “ಶುಕಾಚಾರ್ಯರು ನನ್ನೊಳಗೆ ನಿಂತು ಭಾಗವತ ನುಡಿಸಲಿ” ಎಂದು ಪ್ರಾರ್ಥಿಸಿದ್ದಾರೆ.
ಆಶ್ರಮ ಬಿಟ್ಟು ತೆರಳಿದ ಶುಕಮುನಿಗಳನ್ನು ಮರಳಿ ಆಶ್ರಮಕ್ಕೆ ಕರೆತಂದ ವೇದವ್ಯಾಸರು: “ನೀನು ವೈರಾಗ್ಯ ತಾಳುವ ಮೊದಲು, ವೈರಾಗ್ಯ ಅಂದರೇನು ಎನ್ನುವುದನ್ನು ತಿಳಿಯಬೇಕು. ಅದನ್ನು ಮಿಥಿಲೆಯ ರಾಜನಾದ ಜನಕನಿಂದ ತಿಳಿದುಕೊಂಡು ಬಾ” ಎಂದು ಅವರನ್ನು ಮಿಥಿಲೆಗೆ ಕಳುಹಿಸಿಕೊಡುತ್ತಾರೆ. ಮಿಥಿಲೆಗೆ ಬಂದ ಶುಕಮುನಿಗಳಿಗೆ ತಕ್ಷಣ ರಾಜ ದರ್ಶನ ನೀಡುವುದಿಲ್ಲ. ಅವರಿಗೆ ಅರಮನೆಯ ಉದ್ಯಾನದಲ್ಲಿ ಇರುವಂತೆ ಸೂಚಿಸಲಾಗುತ್ತದೆ. ಅಲ್ಲಿ ಅವರ ಚಾಕರಿಗಾಗಿ ಭೋಗ ವಸ್ತುಗಳ ಜೊತೆಗೆ ಅತ್ಯಂತ ಸುಂದರ ತರುಣಿಯರನ್ನು ರಾಜ ನೇಮಿಸುತ್ತಾನೆ. ಇದು ಒಂದು ರೀತಿಯ ಪರೀಕ್ಷೆ. ಕಾಯಿಸಿರುವುದರಿಂದಾಗಲಿ ಅಥವಾ ಸುಂದರಿಯರ ಚಾಕರಿಯಿಂದಾಗಲಿ ಶುಕ ಮುನಿಗಳ ಮನಸ್ಸು ಕದಡುವುದಿಲ್ಲ. ಅವರು ಶಾಂತಚಿತ್ತರಾಗಿ ರಾಜನಿಗಾಗಿ ಕಾಯುತ್ತಾರೆ. ಹಲವು ದಿನಗಳ ನಂತರ ರಾಜ ಶುಕರನ್ನು ಭೇಟಿ ಮಾಡಿದ ಮತ್ತು ಹೇಳಿದ: “ವೈರಾಗ್ಯ ಎಂದರೆ ಎಲ್ಲವನ್ನೂ ಬಿಟ್ಟು ಹೋಗುವುದಲ್ಲ, ಎಲ್ಲದರ ಜೊತೆಗಿದ್ದು, ಯಾವುದನ್ನೂ ಅಂಟಿಸಿಕೊಳ್ಳದೇ ಬದುಕುವುದು” ಎಂದು. ಮಿಥಿಲೆಯಿಂದ  ಮರಳಿಬಂದ ಶುಕಾಚಾರ್ಯರನ್ನು ಮತ್ತೆ ಪ್ರವೃತ್ತಿಗೆ ಎಳೆದು, ಪ್ರವೃತ್ತಿಯಲ್ಲಿ ನಿವೃತ್ತಿಯ ಬೀಜವನ್ನು ನೋಡು ಎಂದು ಹೇಳಿ, ವೇದವ್ಯಾಸರು ಅವರಿಗೆ ಭಾಗವತ ಉಪದೇಶ ಮಾಡುತ್ತಾರೆ. ಆನಂತರ ಶುಕಾಚಾರ್ಯರು ಭಾಗವತವನ್ನು ಪರೀಕ್ಷಿತರಾಜನಿಗೆ ಉಪದೇಶ ಮಾಡುತ್ತಾರೆ. ಇಲ್ಲಿ “ಇಂತಹ ಶುಕಾಚಾರ್ಯರಿಗೆ ನಮಸ್ಕಾರ” ಎಂದು ಉಗ್ರಶ್ರವಸ್ಸರು ಸ್ತೋತ್ರ ಮಾಡಿದ್ದಾರೆ.        

Saturday, December 29, 2012

Shrimad BhAgavata in Kannada -Skandha-01 -Ch-01(13)


ಆರು ಪ್ರಶ್ನೆಗಳು

ಭೂರೀಣಿ ಭೂರಿಕರ್ಮಾಣಿ ಶ್ರೋತವ್ಯಾನಿ ವಿಭಾಗಶಃ ।
ಅತಃ ಸಾಧೋSತ್ರ ಯತ್ ಸಾರಂ ಸಮುದ್ಗೃಹ್ಯ ಮನೀಷಯಾ ।
ಬ್ರೂಹಿ ಭದ್ರಾಯ ಭೂತಾನಾಂ ಯೇನಾತ್ಮಾSSಶು ಪ್ರಸೀದತಿ    ॥೧೧॥

ಮುಂದುವರಿದು ಋಷಿಗಳು ಹೇಳುತ್ತಾರೆ: ತಿಳಿಯಬೇಕಾಗಿರುವುದು ತುಂಬಾ ಇದೆ. ಒಂದೊಂದು ವಿಷಯವನ್ನು ವಿಭಾಗಮಾಡಿ ಅಧ್ಯಯನ ಮಾಡಲು ಒಂದು ಜನ್ಮ ಸಾಲದು ಮತ್ತು ಅದಕ್ಕಾಗಿ ಮಾಡಬೇಕಾದ ಕರ್ಮಗಳೂ ಅನಂತ. ಹಾಗಾಗಿ ಸಜ್ಜನರಾದ ತಾವು ಕಲಿಯುಗದ ಜನರಮೇಲೆ ಅನುಕಂಪ ತೋರಿ, ಜೀವಜಾತದ ಕ್ಷೇಮಕ್ಕೋಸ್ಕರ ಜ್ಞಾನವನ್ನು ನೀಡಬೇಕು. ತಾವು ಅಧ್ಯಯನ ಮಾಡಿರುವುದರಲ್ಲಿ, ಇಡೀ ಪ್ರಪಂಚಕ್ಕೆ ಅತ್ಯಂತ ಶ್ರೇಯಸ್ಕರವಾದ, ಸಾರಗಳಲ್ಲೇ ಸಾರವಾದ ವಿಷಯ ಯಾವುದು ಎಂದು ನೀವೇ ಗ್ರಹಣ ಮಾಡಿ ಹೇಳಬೇಕು. ಯಾವ ಮಾತನ್ನು ಕೇಳಿದಾಗ ಮನಸ್ಸು ಆನಂದದಿಂದ ಹುಚ್ಚೆದ್ದು ಕುಣಿಯಬಲ್ಲದೋ-ಅಂತಹ ಜೀವದ ಉದ್ದಾರದ ಮಾತನ್ನು; ಯಾವ ವಿಷಯವನ್ನು ನಾವು ತಿಳಿಯುವುದರಿಂದ ಭಗವಂತ ನಮ್ಮ ಮೇಲೆ ಪ್ರಸನ್ನನಾಗುತ್ತಾನೋ-ಅಂತಹ ಮಾತನ್ನು ಹೇಳಬೇಕಾಗಿ ಋಷಿಗಳು ಸೂತರಲ್ಲಿ ವಿನಂತಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ: ‘ಮನುಷ್ಯ ತನ್ನ ಜೀವನದಲ್ಲಿ ತಿಳಿಯಲೇಬೇಕಾದ ಅತ್ಯಂತ ಮುಖ್ಯವಾದ ಸಾರಭೂತ ಸಂಗತಿ ಯಾವುದು?’  ಇದು ಋಷಿಗಳು ಉಗ್ರಶ್ರವಸ್ಸಿನ ಮುಂದಿಟ್ಟ ಮೊದಲ ಪ್ರಶ್ನೆ.

ಸೂತ ಜಾನಾಸಿ ಭದ್ರಂ ತೇ ಭಗವಾನ್ ಸಾತ್ವತಾಂ ಪತಿಃ ।
ದೇವಕ್ಯಾಂ ವಸುದೇವಸ್ಯ ಜಾತೋ ಯಸ್ಯ ಚಿಕೀರ್ಷಯಾ          ॥೧೨॥

ತನ್ನಃ ಶುಶ್ರೂಷಮಾಣಾನಾಮರ್ಹಸ್ಯಂಗಾನುವರ್ಣಿತುಮ್ ।
ಯಸ್ಯಾವತಾರೋ ಭೂತಾನಾಂ ಕ್ಷೇಮಾಯ ವಿಭವಾಯ ಚ       ॥೧೩॥

ಈ ಹಿಂದೆ ಹೇಳಿದಂತೆ ಋಷಿಗಳ ಈ ಸಂಭಾಷಣೆ ಭಗವಂತ ಕೃಷ್ಣಾವತಾರ ಸಮಾಪ್ತಿ ಮಾಡಿದ ಕೆಲವು ವರ್ಷಗಳ ನಂತರ ನಡೆದ ಸಂಭಾಷಣೆ. ಇಲ್ಲಿ ಋಷಿಗಳು ಹೇಳುತ್ತಾರೆ: ಜಗತ್ತಿನ ಮೂಲಶಕ್ತಿಯಾದ ನಾರಾಯಣ-ಸಾತ್ವಿಕರ ಪತಿಯಾಗಿ ಯಾದವ ಕುಲದಲ್ಲಿ ಅವತರಿಸಿ ಬಂದ.  ಆತ ವಸುದೇವ-ದೇವಕಿಯರ ಮಗನಾಗಿ ಏಕೆ ಹುಟ್ಟಿಬಂದ? ಇದು ಎಂತಹ ಲೀಲೆ? ಕೃಷ್ಣಾವತಾರವನ್ನು ನೋಡಿದರೆ ಅದು ಇತರ ಅವತಾರಗಳಂತೆ ಒಬ್ಬ ದುಷ್ಟನನ್ನು ಸಂಹಾರ ಮಾಡುವುದಕ್ಕೋಸ್ಕರ ಆದ ಅವತಾರವಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಏಕೆಂದರೆ ಕೃಷ್ಣಾವತಾರದಲ್ಲಿ  ದುಷ್ಟ ಸಮಷ್ಟಿಯ ಸಂಹಾರವಿದೆ, ಸಮಷ್ಟಿಯಾದ ಜ್ಞಾನಕಾರ್ಯವಿದೆ. ಇಂತಹ ವಿಶೇಷತೆಯನ್ನು ಭಗವಂತ ತನ್ನ ಬೇರೆ ಅವತಾರಗಳಲ್ಲಿ ತೋರಿಸಿಲ್ಲ. ಹಾಗಾಗಿ ಇದು ಎಲ್ಲರ ಕ್ಷೇಮಕ್ಕೋಸ್ಕರ ಮತ್ತು ಸಾಧಕನ ಅಧ್ಯಾತ್ಮದ ಅಭಿವೃದ್ಧಿಗಾಗಿ ತೋರಿದ ಅವತಾರ ಎನ್ನುವುದು ಸ್ಪಷ್ಟ. ಸರ್ವಸಮರ್ಥನಾದ ಭಗವಂತ ಸಂಕಲ್ಪಮಾತ್ರದಿಂದ ಎಲ್ಲವನ್ನೂ ಮಾಡಬಲ್ಲ. ಹೀಗಿರುವಾಗ ಯಾವುದೋ ಒಂದು ಕ್ರಿಯಾವಿಶೇಷ ಮಾಡುವುದಕ್ಕೋಸ್ಕರ ಭಗವಂತ ಭೂಮಿಗೇಕೆ ಇಳಿದು ಬರುತ್ತಾನೆ?
ಕೃಷ್ಣನ ಅವತಾರದ ಹಿನ್ನೆಲೆ ಏನು? ಅವತಾರದ ಮಹಿಮೆ ಏನು? ಅವನು ಏತಕ್ಕಾಗಿ ಭೂಮಿಗಿಳಿದು ಬಂದು ಅದ್ಭುತ ಲೀಲೆಗಳನ್ನು ತೋರಿದ? ಭಗವಂತನ ಈ ಮಹಿಮೆಯನ್ನು ನಾವು ಕಿವಿಯಾರೆ ಕೇಳಲು ಬಯಸುತ್ತೇವೆ.  ಏಕೆಂದರೆ ಅಂತಹ ಭಗವಂತನ ಅವತಾರದ ಕಥೆಯನ್ನು ಕೇಳುವುದರಿಂದ ಸಿಗುವ ಆನಂದ ಅಪರಂಪಾರ. ಭಗವಂತನ ಅವತಾರದ ರಹಸ್ಯ ನಮಗೆ ಗೊತ್ತಿದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಆದ್ದರಿಂದ ನಮಗಾಗಿ ನೀವು ಅದನ್ನು ವರ್ಣಿಸಬೇಕು ಎಂದು ಶೌನಕಾದಿಗಳು ಕೇಳಿಕೊಳ್ಳುತ್ತಾರೆ. ಇದು ಋಷಿಗಳು ಕೇಳಿದ ಎರಡನೇ ಪ್ರಶ್ನೆ.  

ಆಪನ್ನಃ ಸಂಸೃತಿಂ ಘೋರಾಂ ಯನ್ನಾಮ ವಿವಶೋ ಗೃಣನ್ ।
ತತಃ ಸದ್ಯೋ ವಿಮುಚ್ಯೇತ ಯಂ ಬಿಭೇತಿ ಸ್ವಯಂ ಭವಃ           ॥೧೪॥

ಸಂಸಾರ ಸಾಗರದಲ್ಲಿ ಈಜಾಡಲಾಗದೇ,  ಕಂಗಾಲಾಗಿ ಒದ್ದಾಡುತ್ತಿರುವ ಸಂಸಾರಿಯನ್ನು, ಕೈ ಹಿಡಿದು ದಡ ಹಾಯಿಸುವ ಸಾಧನ “ಭಗವಂತನ ನಾಮಸ್ಮರಣೆ” ಎನ್ನುತ್ತಾರೆ ಋಷಿಗಳು. ಈ ಶ್ಲೋಕ ಕೃಷ್ಣಾವತಾರದ ಹಿನ್ನೆಲೆಯಲ್ಲಿ ಬಂದಿರುವುದರಿಂದ, ವಿಶೇಷವಾಗಿ ಇಲ್ಲಿ ‘ಭಗವಂತನ ನಾಮಸ್ಮರಣೆ’ ಎಂದರೆ ‘ಕೃಷ್ಣಸ್ಮರಣೆ’.  ಈ ಶ್ಲೋಕದಲ್ಲಿ ಸಂಸಾರ ಸಾಗರದಲ್ಲಿರುವವರು ವಿವಶರಾಗಿ ಕೃಷ್ಣ ನಾಮವನ್ನು ಸ್ಮರಿಸಿದರೆ, ಅವರು ಸಂಸಾರ ಬಂಧದಿಂದ ಕಳಚಿಕೊಳ್ಳುತ್ತಾರೆ ಎನ್ನುವ ವಿಚಾರವನ್ನು ಹೇಳಿದ್ದಾರೆ.  ಇಲ್ಲಿ ‘ವಿವಶರಾಗಿ ಭಗವಂತನ ನಾಮವನ್ನು ಹೇಳುವುದು’ ಎಂದರೆ-ಭಗವಂತನ ಎಚ್ಚರವಿಲ್ಲದೆ ಭಗವಂತನ ನಾಮ ಹೇಳುವುದು ಎಂದರ್ಥವಲ್ಲ. ನಿರಂತರ ಭಗವಂತನ ಸ್ಮರಣೆ, ಭಕ್ತಿ ಮತ್ತು ಉಪಾಸನೆಯಿಂದಾಗಿ, ನಮ್ಮ ದೇಹ-ಮಾತು-ಮನಸ್ಸು  ಭಗವಂತನ ಸಾಧನೆಗೆ ಶ್ರುತಿಗೂಡಿ, ತನ್ನಿಂದತಾನೇ(Automatic) ನಾವು ಭಗವಂತನ ನಾಮಸ್ಮರಣೆ ಮಾಡುವಂತಾದರೆ(ವಿವಶರಾದರೆ) ಅದು ಮೊಕ್ಷ ಸಾಧಕ.  ಕೃಷ್ಣನಾಮ ಸ್ಮರಣೆಗೆ ಸಂಸಾರವೂ(ಭವ) ಹೆದರುತ್ತದೆ. ಅಷ್ಟೇಅಲ್ಲ, ಅಂತಹ ಜೀವ ಮೃತ್ಯುವಿನ ನಿಯಂತ್ರಣಕ್ಕೆ ಸಿಗುವುದಿಲ್ಲ.(ಭವಃ ಅಂದರೆ ಶಿವ ಕೂಡಾ ಹೌದು. ಭಗವನ್ನಾಮ ಸ್ಮರಣೆ ಮಾಡುವವರನ್ನು ಶಿವ ಸಂಹಾರ ಮಾಡುವುದಿಲ್ಲ). “ನಿರಂತರ ನಾರಾಯಣ ಸ್ಮರಣೆ ಮಾಡುವವರನ್ನು ಒಮ್ಮೆಗೆ ವಿಚಾರ ಮಾಡದೇ ನನ್ನ ಬಳಿ ಕರೆತರಬೇಡಿ. ಏಕೆಂದರೆ ಅವರು ನಾರಾಯಣನ ಸೊತ್ತು ಮತ್ತು ಅವರ ಮೇಲೆ ನನಗೆ ಹಿಡಿತವಿಲ್ಲ” ಎಂದು ಯಮದೂತರಿಗೆ ಯಮ ಹೇಳುವುದನ್ನು ವಿಷ್ಣುಪುರಾಣದಲ್ಲಿ ಹಾಗೂ ಭಾಗವತದ ಅಜಾಮಿಳನ ಕಥೆಯಲ್ಲಿ ಕಾಣುತ್ತೇವೆ. ಹೀಗಾಗಿ ಯಾರ ಬಾಯಿಯಲ್ಲಿ ನಿರಂತರ ಭಗವಂತನ ನಾಮಸ್ಮರಣೆ ಇದೆಯೋ, ಅವರು ಸಂಸಾರದಿಂದ ಬಿಡುಗಡೆಗೊಂಡು ಮುಕ್ತಿ ಮಾರ್ಗದಲ್ಲಿ ಸಾಗುತ್ತಿದ್ದಾರೆ ಎನ್ನಬಹುದು.

ಯತ್ಪಾದಸಂಶ್ರಯಾಃ ಸೂತ ಮುನಯಃ ಪ್ರಶಮಾಯನಾಃ ।
ಸದ್ಯಃ ಪುನಂತ್ಯುಪಸ್ಪೃಷ್ಟಾಃ ಸ್ವರ್ಧುನೀವಾನುಸೇವಯಾ          ॥೧೫॥

ಕೋ ವಾ ಭಗವತಸ್ತಸ್ಯ ಪುಣ್ಯಶ್ಲೋಕೇಡ್ಯಕರ್ಮಣಃ ।
ಶುದ್ಧಿಕಾಮೋ ನ ಶೃಣುಯಾದ್ ಯಶಃ ಕಲಿಮಲಾಪಹಮ್          ॥೧೬॥

ಕೇವಲ ಭಗವಂತನ ನಾಮವಷ್ಟೇ ಅಲ್ಲ, ಭಗವಂತನ ಭಕ್ತರ ಸೇವೆ ಕೂಡಾ ನಮ್ಮನ್ನು ಪಾವನಗೊಳಿಸುತ್ತದೆ. ಹೇಗೆ ಗಂಗೆಯಲ್ಲಿ ಸ್ನಾನ ಮಾಡುವುದರಿಂದ, ಗಂಗೆಯ ನೀರನ್ನು ಕುಡಿಯುವುದರಿಂದ ದೇಹ ಪವಿತ್ರವಾಗುತ್ತದೋ, ಹಾಗೇ ಕಾಮ-ಕ್ರೋದವನ್ನು ಗೆದ್ದು ಭಗವಂತನಲ್ಲಿ ಮನಸ್ಸನ್ನಿಟ್ಟ ಭಗವದ್ ಭಕ್ತರ ಸೇವೆ ಮಾಡುವುದರಿಂದ ಜೀವನದಲ್ಲಿ ಪರಿಶುದ್ಧರಾಗಿ ಬದುಕಬಹುದು.
ಪುಣ್ಯಶ್ಲೋಕನೂ, ಈಡ್ಯಕರ್ಮನೂ ಆದ ಭಗವಂತ, ಬ್ರಹ್ಮಾದಿ ಸಕಲ ದೇವತೆಗಳಿಂದ ಹಿಡಿದು ಎಲ್ಲರಿಂದ ಸ್ತುತ್ಯನಾದವನು. ಕಲಿಯುಗದಲ್ಲಿ ಅಂತಹ ಭಗವಂತನ ಲೀಲೆಗಳನ್ನು ಕೇಳುವುದರಿಂದ ನಮ್ಮೆಲ್ಲಾ ದೋಷಗಳು ಪರಿಹಾರವಾಗಿ, ನಾವು ಪರಿಶುದ್ಧರಾಗಬಹುದು. ಹೀಗಾಗಿ ನಮಗೆ ತಾವು ಕೃಷ್ಣನ ಅವತಾರದ ಹಿನ್ನೆಲೆ ಮತ್ತು ಮಹಿಮೆಯನ್ನು ಹೇಳಬೇಕು ಎಂದು ಶೌನಕಾದಿಗಳು ಉಗ್ರಶ್ರವಸ್ಸರಲ್ಲಿ ಕೇಳಿಕೊಳ್ಳುತ್ತಾರೆ.

ತಸ್ಯ ಕರ್ಮಾಣ್ಯುದಾರಾಣಿ ಪರಿಗೀತಾನಿ ಸೂರಿಭಿಃ ।
ಬ್ರೂಹಿ ನಃ ಶ್ರದ್ದಧಾನಾನಾಂ ಲೀಲಯಾ ದಧತಃ ಕಲಾಃ             ॥೧೭ ॥

ಮುಂದುವರಿದು ಋಷಿಗಳು ಹೇಳುತ್ತಾರೆ: ಕೇವಲ ಅವತಾರದ ಹಿನ್ನೆಲೆಯಷ್ಟೇ ಅಲ್ಲ, ಕೃಷ್ಣಾವತಾರದಲ್ಲಿ ಭಗವಂತ ತೋರಿದ ಎಲ್ಲಾ ಅಪೂರ್ವ ಲೀಲೆಗಳನ್ನೂ ವಿವರವಾಗಿ ಹೇಳಬೇಕು. ಇತರರು ಮಾಡಲು ಅಸಾಧ್ಯವಾದ, ಜ್ಞಾನಿಗಳು ಸದಾ ಸ್ತೋತ್ರ ಮಾಡುವ, ಮಹತ್ತರವಾದ ಕರ್ಮಗಳನ್ನು ಕೃಷ್ಣ ಮಾಡಿ ತೋರಿದ. ಇಂತಹ ಕೃಷ್ಣನ ಅವತಾರದ ಬಿತ್ತರವನ್ನು, ಕೃಷ್ಣನ ಅವತಾರದಲ್ಲಿ ಮಾಡಿದ ಒಂದೊಂದು ಕರ್ಮಗಳನ್ನು ನೀವು ನಮಗೆ ವಿವರಿಸಿ ಹೇಳಬೇಕು ಎನ್ನುವುದು ಶೌನಕಾದಿಗಳ ಮೂರನೇ ಪ್ರಶ್ನೆ.
ಅಥಾಖ್ಯಾಹಿ ಹರೇರ್ಧೀಮನ್ನವತಾರಕಥಾಃ ಶುಭಾಃ ।
ಲೀಲಾ ವಿದಧತಃ ಸ್ವೈರಮೀಶ್ವರಸ್ಯಾತ್ಮಮಾಯಯಾ               ॥೧೮ ॥

ಭಗವಂತ ಸ್ವಂತ ಇಚ್ಛೆಯಿಂದ, ತನ್ನ ಸ್ವರೂಪಭೂತ ಜ್ಞಾನದಿಂದ, ಸ್ವರೂಪ ಸಾಮರ್ಥ್ಯದಿಂದ  ತಾಳಿದ ಅನೇಕ ಅವತಾರಗಳನ್ನು ಮತ್ತು ವಿವಿಧ ಅವತಾರವನ್ನು ಧಾರಣೆಮಾಡಿ, ಈ ಜಗತ್ತಿನಲ್ಲಿ ತೋರಿದ ನಾನಾ ಲೀಲೆಗಳನ್ನು ನೀವು ನಮಗೆ ವಿವರಿಸಬೇಕು ಎಂದು ಋಷಿಗಳು ಕೇಳಿಕೊಳ್ಳುತ್ತಾರೆ. ಇದು ಶೌನಕಾದಿಗಳು ಕೇಳಿದ ನಾಲ್ಕನೇ ಪ್ರಶ್ನೆ.

ವಯಂ ತು ನ ವಿತೃಪ್ಯಾಮ ಉತ್ತಮಶ್ಲೋಕವಿಕ್ರಮೈಃ ।
ಯತ್ ಶೃಣ್ವತಾಂ ರಸಜ್ಞಾನಾಂ ಸ್ವಾದುಸ್ವಾದು ಪದೇಪದೇ        ॥೧೯ ॥

ನಮಗೆ ಭಗವಂತನ ಮಹಿಮೆಯನ್ನು ಕೇಳಿ ಸಾಕು ಎನಿಸುವುದಿಲ್ಲ.  ಅದು ಎಂದೂ ಸಾಕೆನಿಸದ ಅತ್ಯಂತ ಸವಿಯಾದ ರಸಧಾರೆ. ಹೆಜ್ಜೆಹೆಜ್ಜೆಗೂ ರಸಪಾಕವನ್ನು ಹರಿಸುವ ಈ ಜ್ಞಾನದ ರುಚಿ ನಮಗೆ ತಿಳಿದಿದೆ. ಅಂತಹ ಸ್ವಾರಸ್ಯಭರಿತ ಭಗವಂತನ ಮಹಿಮೆಯನ್ನು ನಮಗೆ ಹೇಳಬೇಕಾಗಿ ಋಷಿಗಳು ಪ್ರಾರ್ಥಿಸುತ್ತಾರೆ.

ಕೃತವಾನ್ ಕಿಲ ವೀರ್ಯಾಣಿ ಸಹ ರಾಮೇಣ ಕೇಶವಃ ।
ಅತಿಮರ್ತ್ಯಾನಿ ಭಗವಾನ್ ಗೂಢಃ ಕಪಟಮಾನುಷಃ                 ॥೨೦ ॥

ರಾಮ-ಲಕ್ಷ್ಮಣರೇ ಕೃಷ್ಣ-ಬಲರಾಮರಾಗಿ ಭೂಮಿಯಲ್ಲಿ ಅವತರಿಸಿದರು. ನಮಗೆ ಬಲರಾಮ-ಕೃಷ್ಣರು ಮಾಡಿದ ಕರ್ಮಗಳನ್ನು ಕೇಳಬೇಕು. ಅವರ ಸಾಹಸ ಪರಾಕ್ರಮ; ಶತ್ರು ಸಂಹಾರದಲ್ಲಿ ಅವರು ತೋರಿದ ಶೌರ್ಯದ ವೀರಗಾಥೆಯನ್ನು ಹೇಳಿರಿ ಎಂದು ಋಷಿಗಳು ಕೇಳಿಕೊಳ್ಳುತ್ತಾರೆ. ಇದು ಅವರ ಐದನೇ ಪ್ರಶ್ನೆ. ಕೃಷ್ಣಾವತಾರದಲ್ಲಿ ಭಗವಂತ ಮನುಷ್ಯರೂಪದಲ್ಲಿದ್ದು,  ಅತಿಮಾನುಷ ಲೀಲೆಗಳನ್ನು ತೋರಿದ. ಅಂತಹ ಕೃಷ್ಣನ ಪರಾಕ್ರಮದ ಕಥೆಯನ್ನು ತಿಳಿಸಬೇಕೆಂದು ಋಷಿಗಳು ಕೇಳಿಕೊಳ್ಳುತ್ತಾರೆ.  

ಕಲಿಮಾಗತಮಾಜ್ಞಾಯ ಕ್ಷೇತ್ರೇSಸ್ಮಿನ್ ವೈಷ್ಣವೇ ವಯಮ್ ।
ಆಸೀನಾ ದೀರ್ಘಸತ್ರೇಣ ಕಥಾಯಾಂ ಸಕ್ಷಣಾ ಹರೇಃ               ॥೨೧ ॥

ತ್ವಂ ನಃ ಸಂದರ್ಶಿತೋ ಧಾತ್ರಾ ದುಸ್ತರಂ ನಿಸ್ತಿತೀರ್ಷತಾಮ್ ।
ಕಲಿಂ ಸತ್ತ್ವಹರಂ ಪುಂಸಾಂ ಕರ್ಣಧಾರ ಇವಾರ್ಣವಮ್                        ॥೨೨ ॥

ಈ ಕಲಿಯುಗದಲ್ಲಿ ಭಗವಂತನ ಮಹಿಮೆ ಕೇಳುವವರಿಲ್ಲ. ಆದರೆ ಅಂತಹ ಸ್ಥಿತಿ ಬರಬಾರದು. ಕಲಿಯುಗದಲ್ಲೂ ಜನ ಜಾಗೃತರಾಗಬೇಕು ಎನ್ನುವ ಉದ್ದೇಶದಿಂದ, ನಾವು ಈ ಕ್ಷೇತ್ರದಲ್ಲಿ  ಹರಿಯ ಕಥೆಯ ಶ್ರವಣ ನಡೆಯವ ವ್ಯವಸ್ಥೆ ಮಾಡಿದ್ದೇವೆ. ಈ ಕಥಾ ಶ್ರವಣದಿಂದ ಭಗವಂತನ ಮಹಿಮೆ ಎಲ್ಲೆಡೆ ಹಬ್ಬಬೇಕು ಎನ್ನುವ ಸಂಕಲ್ಪ ನಮ್ಮದು. ನಾವು ಕೇಳಲು ಸಿದ್ದರಾಗಿ ಕುಳಿತಿದ್ದೇವೆ. ಹೇಳುವುದಕ್ಕಾಗಿ ಆ ಭಗವಂತ ನಿಮ್ಮನ್ನು ಇಲ್ಲಿಗೆ ಕಳುಹಿಸಿ ಕೊಟ್ಟಿದ್ದಾನೆ. ಇದು ಪುಣ್ಯಫಲದಿಂದ  ನಮಗೊದಗಿ ಬಂದ ಭಾಗ್ಯ ಮತ್ತು ಆ ಭಗವಂತನ ಸಂಕಲ್ಪ.
ಮನುಷ್ಯರ ಸಮಸ್ತ ಸಾಮರ್ಥ್ಯವನ್ನು ನಾಶಮಾಡಿ, ನಿಸ್ತೇಜ-ನಿರ್ಲಿಪ್ತರನ್ನಾಗಿ ಮಾಡುವ ಈ ಕಲಿಯ ಪ್ರಭಾವದಿಂದ ಪಾರುಮಾಡಲು ಭಗವಂತ ನಿಮ್ಮನ್ನು ಕಳುಹಿಸಿ ಕೊಟ್ಟಿದ್ದಾನೆ. ಕಲಿಯ ಪ್ರಭಾವದ ಸಮುದ್ರದಲ್ಲಿ ಈಜಲಾಗದೆ ಕೈಸೋತು ಮುಳುಗುವ ಪರಿಸ್ಥಿತಿಯಲ್ಲಿ  ನಮ್ಮನ್ನು ಪಾರುಮಾಡಲು ಆ ಭಗವಂತ ಕಳುಹಿಸಿದ ಅಂಬಿಗ ನೀವು. ನಿಮ್ಮಿಂದ ಜ್ಞಾನಧಾರೆಯನ್ನು ನಾವು ಕೇಳಲು ಸಿದ್ದರಾಗಿ ನಿಂತಿದ್ದೇವೆ. ನೀವು ಹೇಳಬೇಕು.

ಬ್ರೂಹಿ ಯೋಗೇಶ್ವರೇ ಕೃಷ್ಣೇ ಬ್ರಹ್ಮಣ್ಯೇ ಧರ್ಮಕರ್ಮಣಿ ।
ಸ್ವಾಂ ಕಾಷ್ಠಾಮಧುನೋಪೇತೇ ಧರ್ಮಃ ಕಂ ಶರಣಂ ಗತಃ        ॥೨೩ ॥

ಧರ್ಮಸಂಸ್ಥಾಪಕನಾಗಿ ಬಂದ ಕೃಷ್ಣ ಧರ್ಮವನ್ನು ಹೆಗಲಲ್ಲಿ ಹೊತ್ತ. ಈ ದೇಶವನ್ನು ಧರ್ಮದ ದಾರಿಯಲ್ಲಿ ನಡೆಸುವ ಪಾಂಡವರ ಕೈಯಲ್ಲಿ ಕೊಟ್ಟ. ಧರ್ಮಕ್ಕೆ ಆಶ್ರಯನಾಗಿದ್ದ ಕೃಷ್ಣ ಅವತಾರ ಸಮಾಪ್ತಿಮಾಡಿದ ಮೇಲೆ ಭೂಮಿಯಲ್ಲಿ ಧರ್ಮಕ್ಕೆ ಯಾರು ಗತಿ? ಇದು ಋಷಿಗಳ ಆರನೇ ಮತ್ತು ಕೊನೇಯ ಪ್ರಶ್ನೆ.
ಯೋಗಶಾಸ್ತ್ರವಾದ ಭಗವದ್ಗೀತೆಯನ್ನು ಎಲ್ಲಾಯೋಗಿಗಳಿಗೆ ಮಹಾಯೋಗಿಯಾಗಿ ಹೇಳಿದ ಯೋಗಾಚಾರ್ಯ ಕೃಷ್ಣ. ಈ ದೇಶದ ಧರ್ಮಸಂಸ್ಥಾಪಕನಾಗಿ ಆತ ೧೦೬.೫ ವರ್ಷ ನಮಗೆ ಕಾಣಿಸಿಕೊಂಡ. ಧರ್ಮವನ್ನು ಎತ್ತಿಹಿಡಿದು ಸದಾ ಭಗವಂತನ ಭಕ್ತರಿಗೆ ಆಶ್ರಯನಾಗಿ ನಿಂತ ಕೃಷ್ಣ. ಈಗ ಕೃಷ್ಣ ತನ್ನ ಅವತಾರ ಸಮಾಪ್ತಿ ಮಾಡಿರುವುದರಿಂದ, ಈ ಭೂಮಿಯಲ್ಲಿ ಧರ್ಮ ಯಾರ ಆಲಂಭನದಲ್ಲಿ ನಿಂತಿದೆ? ಈ ಕಲಿಯುಗದಲ್ಲಿ ಕೃಷ್ಣನ ಪ್ರತೀಕ ಯಾವುದು? ಯಾವುದರ ಮೂಲಕ ನಾವು ಧರ್ಮವನ್ನು ತಿಳಿಯಬೇಕು? ಇದನ್ನು ನಮಗೆ ಹೇಳು ಎಂದು ಶೌನಕಾದಿಗಳು ಉಗ್ರಶ್ರವಸ್ಸರನ್ನು ಕೇಳಿಕೊಳ್ಳುತ್ತಾರೆ.  ಈ ಎಲ್ಲಾ ಪ್ರಶ್ನೆಗಳಿಗೆ ಉಗ್ರಶ್ರವಸ್ ಕೊಡುವ ಉತ್ತರವೇ ಭಾಗವತ. ಭಾಗವತ ಹೇಗೆ ರೂಪುಗೊಂಡಿತು ಎನ್ನುವುದಕ್ಕೆ ಈ ಅಧ್ಯಾಯ ಪ್ರಸ್ತಾವನೆ.

ಇತಿ ಶ್ರೀಮದ್ಭಾಗವತೇ ಮಹಾ ಪುರಾಣೇ ಪ್ರಥಮಸ್ಕಂಧೇ ಪ್ರಥಮೋsಧ್ಯಾಯಃ॥
ಭಾಗವತ ಮಹಾ ಪುರಾಣದ ಮೊದಲ ಸ್ಕಂಧದ ಮೊದಲನೇ ಅಧ್ಯಾಯ ಮುಗಿಯಿತು.
        

*******

Shrimad BhAgavata in Kannada -Skandha-01 -Ch-01(12)


ಯಾನಿ ವೇದವಿದಾಂ ಶ್ರೇಷ್ಠೋ ಭಗವಾನ್ ಬಾದರಾಯಣಃ ।
ಅನ್ಯೇ ಚ ಮುನಯಃ ಸೂತ ಪರಾವರವಿದೋ ವಿದುಃ                ॥೭॥

ವೇತ್ಥ ತ್ವಂ ಸೌಮ್ಯ ತತ್ ಸರ್ವಂ ತತ್ತ್ವತಸ್ತದನುಗ್ರಹಾತ್ ।
ಬ್ರೂಯುಃ ಸ್ನಿಗ್ಧಸ್ಯ ಶಿಷ್ಯಸ್ಯ ಗುರವೋ ಗುಹ್ಯಮಪ್ಯುತ                ॥೮॥

ಇಲ್ಲಿ ಋಷಿಗಳು ಸೂತರನ್ನು ಕುರಿತು ಹೇಳುವ ಮಾತನ್ನು ಈ ಶ್ಲೋಕದ ಮೇಲ್ನೋಟದ ಅರ್ಥದಲ್ಲಿ ನೋಡಿದರೆ  ಸ್ವಲ್ಪ ಗಾಬರಿಯಾಗುತ್ತದೆ! ಮೇಲ್ನೋಟದಲ್ಲಿ ನೋಡಿದರೆ: “ವೇದವ್ಯಾಸರು ಮತ್ತು ಈ ಕಾಲದ ಎಲ್ಲಾ ಋಷಿಗಳು ಏನೇನು ತಿಳಿದಿದ್ದಾರೆ, ಅದೆಲ್ಲವೂ ತದ್ವತ್ತಾಗಿ, ಪೂರ್ಣಪ್ರಮಾಣದಲ್ಲಿ  ತಮಗೆ ತಿಳಿದಿದೆ” ಎಂದು ಹೇಳಿದಂತೆ ಕಾಣುತ್ತದೆ. ಈ ರೀತಿ ಹೊಗಳಿದರೆ ಅದು ಅತಿಶಯೋಕ್ತಿಯಾಗುತ್ತದೆ. ಏಕೆಂದರೆ ಸ್ವಯಂ ಭಗವಂತನ ಅವತಾರವಾದ ವೇದವ್ಯಾಸರಿಗೆ ತಿಳಿದ ಎಲ್ಲಾ ವಿಚಾರ ಇನ್ಯಾರಿಗೂ ತದ್ವತ್ತಾಗಿ ತಿಳಿದಿರಲು ಸಾಧ್ಯವೇ ಇಲ್ಲ. ಆದ್ದರಿಂದ ಇದು ಈ ಶ್ಲೋಕದಲ್ಲಿನ ವಸ್ತುಸ್ಥಿತಿ ಅಲ್ಲ. ಈ ಶ್ಲೋಕವನ್ನು ಎಚ್ಚರಿಕೆಯಿಂದ ನೋಡಿದಾಗ ಅಲ್ಲಿರುವ ನಿಜಾರ್ಥ ತಿಳಿಯುತ್ತದೆ. “ಯಾನಿ ವೇದ, ವಿದಾಂ ಶ್ರೇಷ್ಟಃ, ಭಗವಾನ್ ಬಾದರಾಯಣಃ”: ಜ್ಞಾನಿಗಳಲ್ಲಿ ಶ್ರೇಷ್ಟರು ಭಗವಾನ್ ವೇದವ್ಯಾಸರು[ಬಾದರಾಯಣರು].  ಅವರು ಏನನ್ನು ತಿಳಿದಿದ್ದಾರೋ-ಆ ಜ್ಞಾನದ ತುಣುಕನ್ನೇ  ಭಗವಂತನನ್ನು ಬಲ್ಲ ಹಾಗೂ ಸಮಸ್ತವಿಶ್ವವನ್ನು ಅದರ ತರತಮಭಾವದಿಂದ ತಿಳಿದ ಋಷಿಗಳು[ಪರಾವರವಿದೋ ವಿದುಃ] ತಿಳಿದಿದ್ದಾರೆ. ಅಂತಹ ಜ್ಞಾನವನ್ನು ವೇದವ್ಯಾಸರಿಂದ ನೇರ ಉಪದೇಶ ಪಡೆದ ತಾವು, ವೇದವ್ಯಾಸರ ಅನುಗ್ರಹದಿಂದ, ಅವರು ಕೊಟ್ಟ ಜ್ಞಾನವನ್ನು ಪೂರ್ಣವಾಗಿ ಅರಿತಿದ್ದೀರಿ. ನೀವು ವ್ಯಾಸರ ಪ್ರೀತಿಯ ಶಿಷ್ಯನಾಗಿರುವುದರಿಂದ ಅವರು ನಿಮ್ಮಲ್ಲಿ ಅನೇಕ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ತಮಗೆ ತಿಳಿದ ಪುರಾಣದ ರಹಸ್ಯ ನಮಗೆ ತಿಳಿಯದು. ಆದ್ದರಿಂದ ತಾವು ಆ ಜ್ಞಾನವನ್ನು ನಮಗೆ ಹೇಳಬೇಕು ಎಂದು ಋಷಿಗಳು ಉಗ್ರಶ್ರವಸ್ಸರಲ್ಲಿ ಕೇಳಿಕೊಳ್ಳುತ್ತಾರೆ.
ಇಲ್ಲಿ ‘ಸೌಮ್ಯ’ ಎನ್ನುವ ವಿಶೇಷಣ ಬಳಸಲಾಗಿದೆ. ಸೌಮ್ಯ ಎಂದರೆ ಸಾತ್ತ್ವಿಕಸ್ವಭಾವದವರು ಎನ್ನುವುದು ಒಂದರ್ಥವಾದರೆ ಈ ಪದವನ್ನು ಬಿಡಿಸಿ ನೋಡಿದರೆ: ಉಮಾ ಎಂದರೆ ಉತ್ಕೃಷ್ಟವಾದ ಜ್ಞಾನ ಅಥವಾ ಭಗವದ್ ವಿಷಯಿಕವಾದ ಅರಿವು. ಇಂತಹ ಅರಿವು ಉಳ್ಳವರು ಸೋಮರು. ವಾಯುದೇವರನ್ನು ಸೋಮ ಎಂದೂ ಕರೆಯುತ್ತಾರೆ. ಇಂತಹ ಗುಣ ಇರುವಿಕೆ ಸೌಮ್ಯ.

ತತ್ರ ತತ್ರಾಂಜಸಾSSಯುಷ್ಮನ್ ಭವತಾ ಯದ್ ವಿನಿಶ್ಚಿತಮ್ ।
ಪುಂಸಾಮೇಕಾಂತತಃ ಶ್ರೇಯಸ್ತನ್ನಃ ಶಂಸಿತುಮರ್ಹಸಿ                         ॥೯॥

ಪ್ರಾಯೇಣಾಲ್ಪಾಯುಷೋ ಮರ್ತ್ಯಾಃ ಕಲಾವಸ್ಮಿನ್ ಯುಗೇ ಜನಾಃ ।
ಮಂದಾಃ ಸುಮಂದಮತಯೋ ಮಂದಭಾಗ್ಯಾ ಹ್ಯುಪದ್ರುತಾಃ    ॥೧೦॥

ಈ ಶ್ಲೋಕದಲ್ಲಿ ಋಷಿಗಳು ತಮ್ಮ ಅಭಿಲಾಷೆಯನ್ನು ಸೂತರ ಮುಂದಿಡುತ್ತಾ ಹೇಳುತ್ತಾರೆ: “ತಾವು ಎಲ್ಲಾ ಪುರಾಣ, ಇತಿಹಾಸ ಹಾಗೂ ಧರ್ಮಶಾಸ್ತ್ರಗಳನ್ನು ಓದಿದವರು. ಅಂತಹ ಗ್ರಂಥಗಳಲ್ಲಿ ಮನುಷ್ಯನ ಬದುಕಿಗೆ ಅವಶ್ಯವಾಗಿ ಬೇಕಾಗಿರುವ, ಆಯಾ ಗ್ರಂಥಗಳ ಸಾರವನ್ನು ನಮಗೆ ತಿಳಿಸಿ” ಎಂದು. ಇಡೀ ಜೀವಮಾನದಲ್ಲಿ ಮಾನವನು ತಿಳಿಯಲೇ ಬೇಕಾದ ಅತ್ಯಂತ ಶ್ರೇಯಸ್ಕರ ವಿಷಯವನ್ನು, ಈ ಜಗತ್ತಿನ ಶ್ರೇಯಸ್ಸಿಗೋಸ್ಕರ ಹೇಳಿ ಎಂದು ಶೌನಕಾದಿಗಳು ಸೂತರಲ್ಲಿ ಕೇಳಿಕೊಳ್ಳುತ್ತಾರೆ. ಋಷಿಗಳ ಈ ಮಾತಿನಿಂದ ನಮಗೆ ತಿಳಿಯುವುದೇನೆಂದರೆ: ಅವರು ತಮಗಾಗಿ ಈ ಪ್ರಶ್ನೆಯನ್ನು ಸೂತರ ಮುಂದಿಟ್ಟಿಲ್ಲ. ಬದಲಾಗಿ ಜಗತ್ತಿನಲ್ಲಿ ಗೊತ್ತಿಲ್ಲದವರಿಗೆ ಗೊತ್ತಾಗಲಿ ಎಂದು. ಈ ಪ್ರಶ್ನೋತ್ತರ ಸಂವಾದ ದಾಖಲೆಯಾಗಿ ಮುಂದಿನ ಜನಾಂಗಕ್ಕೆ ತಿಳಿಯಲಿ ಎನ್ನುವ ಉದ್ದೇಶದಿಂದ ಈ ಮೇಲಿನ ಬೇಡಿಕೆಯನ್ನು ಸೂತರ ಮುಂದಿಡುತ್ತಾರೆ.  ತಾವು ಏಕೆ ಈ ರೀತಿ ಕೇಳುತ್ತಿದ್ದೇವೆ ಎನ್ನುವುದನ್ನು ಹೇಳುತ್ತಾ ಋಷಿಗಳು ಹೇಳುತ್ತಾರೆ: ಇದು ಕಲಿಯುಗ. ಕಲಿಯುಗದ ಜನರು ಹೆಚ್ಚಾಗಿ ಅಲ್ಪಾಯುಷಿಗಳು. ಜನರ ಪ್ರವೃತ್ತಿ ಮತ್ತು ಬುದ್ಧಿ ಕಲಿಯುಗದಲ್ಲಿ ಮಂದ. ಒಂದು ವೇಳೆ ಬುದ್ಧಿ ಚುರುಕಾಗಿದ್ದರೂ ಕೂಡಾ, ಅಲ್ಲಿ ಯಾವುದೋ ಸಾಮಾಜಿಕ ತೊಂದರೆಯಿರುತ್ತದೆ. ಅದಕ್ಕಾಗಿ, ಜ್ಞಾನಸಾರವನ್ನು ತಾವು ಹೇಳಬೇಕು ಎಂದು ಋಷಿಗಳು ಉಗ್ರಶ್ರವಸ್ಸರಲ್ಲಿ ಕೇಳಿಕೊಂಡು ತಮ್ಮ ಆರು ಪ್ರಶ್ನೆಗಳನ್ನು ಅವರ ಮುಂದಿಡುತ್ತಾರೆ. 

Friday, December 28, 2012

Shrimad BhAgavata in Kannada -Skandha-01 -Ch-01(11)


ಆಖ್ಯಾಯಿಕಾ
ಗ್ರಂಥ ರಚನೆಯ ಹಿನ್ನೆಲೆ, ರಚನೆಯಾಗಿ ಅದು ಭೂಮಿಗೆ ಇಳಿದು ಬಂದ ಬಗೆಯನ್ನು ಹೇಳುವ ಕಥೆ ಆಖ್ಯಾಯಿಕಾ. ‘ಹಿಂದೆ ಹೀಗೆ ನಡೆದಿತ್ತು’ ಎಂದು ದಾಖಲೆಯನ್ನು ಹೇಳುವುದನ್ನು ಆಖ್ಯಾಯಿಕಾ ಎನ್ನುತ್ತಾರೆ. ಇಂತಹ ಆಖ್ಯಾಯಿಕಗಳನ್ನು ವೇದದಲ್ಲೂ ಕಾಣಬಹುದು. ಉದಾಹರಣೆಗೆ: “ತಸ್ಯ ಹ ನಚಿಕೇತಾ ನಾಮ ಪುತ್ರ ಆಸ” ॥ಕಠ ಉಪನಿಷತ್- ೧.೧.೧॥. ವೇದ, ಪುರಾಣ, ಇತಿಹಾಸದಲ್ಲಿ ಆಖ್ಯಾಯಿಕೆಗಳನ್ನು ಏಕೆ ಹೇಳುತ್ತಾರೆ ಎಂದರೆ: “ಹಿಂದೆ ಹೀಗೆ ನಡೆದಿತ್ತು ಹಾಗೂ ಅಂತಹ ಫಲ ಪ್ರಾಪ್ತಿಗೆ  ಇರುವ ಮಾರ್ಗ ಇದೊಂದೇ” ಎಂದು ಹೇಳುವುದಕ್ಕಾಗಿ ಮತ್ತು ದಾಖಲೆ ಸಹಿತ ಹೇಳಿ ನಮ್ಮ  ಶ್ರದ್ದೆಯನ್ನು  ವೃದ್ಧಿಗೊಳಿಸುವುದಕ್ಕಾಗಿ.  ಭಾಗವತದಲ್ಲಿ ಭಗವಂತನ ಕಥೆ ಪ್ರಾರಂಭವಾಗುವುದು ಎರಡನೇ ಸ್ಕಂಧದಿಂದ. ಮೊದಲ ಸ್ಕಂಧ ಭಾಗವತದ ಪೀಠಿಕೆ ರೂಪದಲ್ಲಿದ್ದು, ಇಲ್ಲಿ ಒಟ್ಟು ಇಪ್ಪತ್ತು ಅಧ್ಯಾಯಗಳಿವೆ. ಈ ಪೀಠಿಕೆಯಲ್ಲಿನ ಮೊದಲ ಕಥೆ ಇಲ್ಲಿಂದ ಆರಂಭವಾಗುತ್ತದೆ.

ನೈಮಿಶೇSನಿಮಿಷಕ್ಷೇತ್ರೇ ಋಷಯಃ ಶೌನಕಾದಯಃ  ।
ಸತ್ತ್ರಂ ಸ್ವರ್ಗಾಯ ಲೋಕಾಯ ಸಹಸ್ರಸಮಮಾಸತ    ॥೪॥

ಸುಮಾರು ಐದುಸಾವಿರ ವರ್ಷಗಳ ಹಿಂದೆ, ಪರೀಕ್ಷಿತರಾಜನ ಹಿರಿಮಗ ಜನಮೇಜಯ ರಾಜ್ಯಭಾರ ಮಾಡುತ್ತಿದ್ದ ಕಾಲದಲ್ಲಿ, ನೈಮಿಶಾರಣ್ಯದಲ್ಲಿ  ಶೌನಕರು ಕಟ್ಟಿದ ಗುರುಕುಲ ಒಂದಿತ್ತು. ‘ನಿಮಿಶ’ ಎನ್ನುವ ಮರಗಳು ಹೇರಳವಾಗಿದ್ದ ಈ ಪ್ರದೇಶವನ್ನು ನೈಮಿಶಾರಣ್ಯ ಎಂದು ಕರೆಯುತ್ತಿದ್ದರು. ಹಿಂದೆ ಈ ಮರದ ಹಣ್ಣನ್ನು ಆಹಾರವಾಗಿ ಮತ್ತು ತೊಗಟೆಯನ್ನು ಉಡುಪಾಗಿ ಬಳಸುತ್ತಿದ್ದರು. ಇಂತಹ ನಿಮಿಶವೃಕ್ಷ ಸಮೃದ್ಧವಾಗಿರುವ ಕಾರಣದಿಂದ ಮತ್ತು ಅದು ‘ಅನಿಮಿಷ’ ಕ್ಷೇತ್ರವಾದ್ದರಿಂದ ಶೌನಕರು ಅಲ್ಲಿ ತಮ್ಮ ಗುರುಕುಲವನ್ನು ನಿರ್ಮಿಸಿದ್ದರು. ಅನಿಮಿಷಃ ಎನ್ನುವುದು ಭಗವಂತನ ಅಸಾಧಾರಣ ಹೆಸರುಗಳಲ್ಲಿ ಒಂದು. ಈ ನಾಮ ವಿಷ್ಣುಸಹಸ್ರನಾಮದಲ್ಲಿ ಕೂಡಾ ಬಂದಿದೆ. ಅನಿಮಿಷಃ ಎಂದರೆ: ಎಂದೂ ನಿದ್ರಿಸದ ಭಗವಂತ! ಆತನಿಗೆ ನಿದ್ರೆಯೇ ಇಲ್ಲ. ಆತನ ನಿದ್ರೆ ಕೇವಲ ಎಚ್ಚರದ ಯೋಗ ನಿದ್ರೆ.  ಸಮಸ್ತ ದೇವತಾ ಸನ್ನಿಧಾನವಿರುವ, ಸ್ವತಃ ಅನಿಮಿಷನಾದ ಭಗವಂತನ ಸನ್ನಿಧಾನವಿರತಕ್ಕ, ಆದ್ದರಿಂದ ಋಷಿಗಳಿಗೆ ಪ್ರಿಯವಾದ ಕ್ಷೇತ್ರ ನಿಮಿಷಕ್ಷೇತ್ರ. “ಕ್ಷಪಯಿತ್ತ್ವಾ ತ್ರಾಯತೇ ಇತಿ ಕ್ಷೇತ್ರಃ”. ಕ್ಷೇತ್ರ ಎಂದರೆ ನಮ್ಮೆಲ್ಲಾ ಪಾಪಗಳನ್ನು ಪರಿಹಾರ ಮಾಡಿ ನಮ್ಮನ್ನು ರಕ್ಷಿಸುವಂತಹ, ಭಗವಂತನ ಸಾನಿಧ್ಯ ವಿಶೇಷವಾಗಿರುವ ಸ್ಥಳ. ಕ್ಷೇತ್ರದಲ್ಲಿ ನಮ್ಮೆಲ್ಲಾ ಪಾಪಗಳು ತಾನೇ ತಾನಾಗಿ ಕರಗಿ ಹೋಗುತ್ತವೆ. ಇಂತಹ ಪವಿತ್ರ ಕ್ಷೇತ್ರವಾದ ನಿಮಿಷಕ್ಷೇತ್ರದಲ್ಲಿ ಶೌನಕರ ನೇತ್ರತ್ವದಲ್ಲಿ ಋಷಿಗಳ ಒಂದು ದೊಡ್ಡ ಪಡೆ ಸೇರಿತ್ತು. ಶೌನಕರು ಎಂದರೆ ‘ಶುನಕ’ ವಂಶದಿಂದ ಬಂದವರು. ಶುನಕ ಅಥವಾ ಶೋನತಿ ಅಂದರೆ- “ಮುಕ್ತಿಯೋಗ್ಯೋ ಭವತಿ ಇತಿ ಶುನಕಃ” ಅಂದರೆ ಮೋಕ್ಷ ಯೋಗ್ಯ ಎಂದರ್ಥ. ಇನ್ನೊಂದು ರೀತಿಯಲ್ಲಿ ಶುನ-ಗತೌ ಧಾತು. ಅಂದರೆ ಜ್ಞಾನಿ ಎಂದರ್ಥ. ಆದ್ದರಿಂದ ಶುನಕ ಎಂದರೆ: “ಜ್ಞಾನದ ಮೂಲಕ ಮುಕ್ತಿ ಸಾಧನೆ ಮಾಡುವವರು”.
ಶೌನಕರ ನೇತ್ರತ್ವದಲ್ಲಿ ನಿಮಿಷಕ್ಷೇತ್ರದಲ್ಲಿ ಅನೇಕ ಮಂದಿ ಋಷಿಗಳು ಒಂದಾಗಿ, ಮೋಕ್ಷ ಸಾಧನೆಗಾಗಿ ಒಂದು ಸತ್ರಯಾಗವನ್ನು ಪ್ರಾರಂಭಿಸಿದ್ದರು. [ಅನೇಕ ಮಂದಿ ಕಲೆತು, ಸಾರ್ವಜನಿಕವಾಗಿ ಮಾಡುವ ಯಜ್ಞವನ್ನು ಸತ್ರಯಾಗ ಎನ್ನುತ್ತಾರೆ]. ಇಲ್ಲಿ  ಸಾವಿರ ವರ್ಷಗಳ ಕಾಲ ನಡೆಯುವ ಯಜ್ಞ ಮಾಡಿದರು ಎಂದಿದೆ. ಆದರೆ ವೇದಗಳಲ್ಲಿ ಎಲ್ಲಿಯೂ ಈ ರೀತಿಯ ಯಜ್ಞದ ಕುರಿತ ವಿವರಣೆ ಕಾಣಸಿಗುವುದಿಲ್ಲ. ಆದ್ದರಿಂದ ಪ್ರಾಯಃ ಇದು ಒಂದು ಸಾವಿರ ದಿನಗಳ ಸತ್ರಯಾಗ ಇದ್ದರೂ ಇರಬಹುದು. ಅದೇ ರೀತಿ ಇಲ್ಲಿ “ಸ್ವರ್ಗಲೋಕ ಪ್ರಾಪ್ತಿಗಾಗಿ ಸತ್ರಯಾಗ ಮಾಡಿದರು” ಎಂದಿದೆ. ಇಲ್ಲಿ ಹೇಳುವ ಸ್ವರ್ಗಲೋಕ ದೇವತೆಗಳ ಲೋಕವಲ್ಲ. ಸ್ವರ್ಗಾಯ ಲೋಕಾಯ  ಎಂದರೆ ದುಃಖ-ಭಯ, ಮುಪ್ಪು-ಸಾವಿಲ್ಲದ ಮೋಕ್ಷಲೋಕ. ಸ್ವರ್ಗಾಯಲೋಕಾಯ ಎಂದು ಏಕಪದವಾಗಿ ನೋಡಿದಾಗ: ಯಾರನ್ನು ನಾವು ಸ್ವಃ ಎಂದು ಗಾಯನ ಮಾಡುತ್ತೇವೆ, ಆ ಭಗವಂತನ ಲೋಕ.  ಅಂತಹ ಭಗವಂತನ ಲೋಕವಾದ ಮೋಕ್ಷ ಪ್ರಾಪ್ತಿಗಾಗಿ ಋಷಿಗಳು ಸತ್ರಯಾಗ ಮಾಡಿದರು.

ತ ಏಕದಾ ತು ಮುನಯಃ ಪ್ರಾತರ್ಹುತಹುತಾಶನಾಃ ।
ಸತ್ಕೃತಂ ಸೂತಮಾಸೀನಂ ಪಪ್ರಚ್ಛುರಿದಮಾದೃತಾಃ               ॥೫ ॥

ಯಜ್ಞ ನಡೆಯುವ ಸ್ಥಾನದಲ್ಲಿ ಪ್ರತಿದಿನ ಸಂಜೆ  ಪುರಾಣ ಇತ್ಯಾದಿ ಪ್ರವಚನ ಕಾರ್ಯಕ್ರಮ ಸಾಮಾನ್ಯ. ಅದಕ್ಕಾಗಿ ವಿದ್ವಾಂಸರಿಗೆ ಆಹ್ವಾನ ಹೋಗುತ್ತಿತ್ತು ಮತ್ತು ಪುರಾಣವನ್ನು ಹೇಳುವ ಪೌರಾಣಿಕರು ಅಲ್ಲಿಗೆ ಬರುತ್ತಿದ್ದರು. ಆಗಿನ ಕಾಲದಲ್ಲಿ ಪುರಾಣ ಪ್ರವಚನ ಮಾಡುತ್ತಿದ್ದವರು ರೋಮಹರ್ಷಣರು. ಅವರ ಕಾಲದ ನಂತರ, ಭಾಗವತ ಮತ್ತು ಮಹಾಭಾರತ ಪ್ರವಚನ ಮಾಡಿದವರು ರೋಮಹರ್ಷಣರ ಮಗನಾದ ಉಗ್ರಶ್ರವಸ್ಸು ಎನ್ನುವ ಸೂತರು. ಒಂದು ದಿನ ಸತ್ರಯಾಗ ನಡೆಯುತ್ತಿದ್ದ  ನಿಮಿಷಕ್ಷೇತ್ರಕ್ಕೆ, ಯಜ್ಞದ ಪೂರ್ಣಾಹುತಿಯಲ್ಲಿ ಪಾಲ್ಗೊಳ್ಳಲು ಸೂತರು ಆಗಮಿಸುತ್ತಾರೆ. ಆಗ ಎಲ್ಲಾ ಋಷಿಗಳು ಅಗ್ನಿ ಆಹುತಿ ಮುಗಿಸಿ, ಅತಿಥಿಯಾಗಿ ಬಂದ ಉಗ್ರಶ್ರವಸ್ಸರನ್ನು ಸತ್ಕರಿಸುತ್ತಾರೆ.  ವೇದವ್ಯಾಸರಿಂದ ಪಾಠ ಕೇಳಿದ, ಸಮಸ್ತ ಪುರಾಣ ಬಲ್ಲ ಸೂತರಲ್ಲಿ ಋಷಿಗಳು “ನಮ್ಮ ಗುರುಕುಲದಲ್ಲಿ ತಾವು ಪುರಾಣ ಪ್ರವಚನ ಮಾಡಬೇಕು” ಎಂದು ಕೇಳಿಕೊಳ್ಳುತ್ತಾರೆ.  

ಋಷಯ ಊಚುಃ
ತ್ವಯಾ ಖಲು ಪುರಾಣಾನಿ ಸೇತಿಹಾಸಾನಿ ಚಾನಘ
ಆಖ್ಯಾತಾನ್ಯಪ್ಯಧೀತಾನಿ ಧರ್ಮಶಾಸ್ತ್ರಾಣಿ ತಾನ್ಯುತ                ॥೬॥

ಅಲ್ಲಿ ಸೇರಿರುವ ಋಷಿಗಳು ಗೌರವಪೂರ್ವಕವಾಗಿ  ಸೂತರಲ್ಲಿ ಒಂದು ಪ್ರಶ್ನೆಯನ್ನು ಕೇಳುತ್ತಾರೆ. ಅವರು ಹೇಳುತ್ತಾರೆ: “ನೀವು ಪುರಾಣ, ಇತಿಹಾಸ ಮತ್ತು ಧರ್ಮಶಾಸ್ತ್ರಗಳನ್ನು ಚನ್ನಾಗಿ ಅಧ್ಯಯನ ಮಾಡಿ, ಪ್ರವಚನ ಮಾಡಿ ಬಲ್ಲವರು” ಎಂದು. ಋಷಿಗಳ ಈ ಮಾತು ನಮಗೆ ಪೂರ್ಣ ಅರ್ಥವಾಗಬೇಕಾದರೆ ಮೊದಲು ನಮಗೆ ಪುರಾಣ ಮತ್ತು ಇತಿಹಾಸಗಳ ನಡುವಿನ ವ್ಯತ್ಯಾಸ ಏನು ಎನ್ನುವುದು ತಿಳಿದಿರಬೇಕು. ಪುರಾಣ ಎಂದರೆ ಪ್ರಾಚೀನ ದಾಖಲೆ; ಇತಿಹಾಸ ಎಂದರೆ “ಹೀಗೆ ಇತ್ತು” ಎನ್ನುವ ದಾಖಲೆ! ಹಾಗಾದರೆ ಇವೆರಡರ ನಡುವಿನ ಅರ್ಥಭೇದವೇನು? ಇತಿಹಾಸ ನಡೆದ ಘಟನೆಗಳನ್ನು ನಿರೂಪಿಸುವ ಗ್ರಂಥವಾದರೆ, ಪುರಾಣ ಹಾಗಲ್ಲ. ಅಲ್ಲಿ ಇತಿಹಾಸವಿದೆ, ಆದರೆ ಪುರಾಣವೇ ಇತಿಹಾಸವಲ್ಲ. ಪುರಾಣದಲ್ಲಿ ಅರ್ಥವಾದವಿದೆ. ಅಲ್ಲಿ ಅನೇಕ ಕಥೆಗಳ ಮೂಲಕ ಸಂದೇಶವನ್ನು ಕೊಡುತ್ತಾರೆ. ಮಹಾಭಾರತದಲ್ಲಿ ಪುರಾಣದ ಲಕ್ಷಣಗಳಿವೆ, ಆದರೆ ಅಲ್ಲಿ ಇತಿಹಾಸ ಪ್ರಧಾನವಾಗಿರುವುದರಿಂದ ಅದು ಇತಿಹಾಸ. ಭಾಗವತದಲ್ಲಿ ಇತಿಹಾಸಕ್ಕಿಂತ ಪುರಾಣದ ಅಂಶಕ್ಕೆ ಹೆಚ್ಚು ಒತ್ತು. ಮನ್ವಂತರಗಳ ಚರಿತ, ರಾಜರ್ಷಿಗಳ ವಂಶಾನುಚರಿತ, ಸೃಷ್ಟಿ-ಸ್ಥಿತಿ-ಸಂಹಾರಗಳ ಬಿತ್ತರವನ್ನು ಹೇಳುವ ಗ್ರಂಥ-ಪುರಾಣ. ಹೀಗೆ ಪುರಾಣದಲ್ಲಿ ಇತಿಹಾಸವೂ ಸೇರಿಕೊಂಡಿದ್ದರೂ ಕೂಡಾ, ಅಲ್ಲಿ ಬರುವ ಎಲ್ಲಾ ಕಥೆಗಳೂ ಇತಿಹಾಸವಾಗಿರಬೇಕೆಂದೇನೂ ಇಲ್ಲಾ.
ಪುರಾಣಗಳಲ್ಲಿ ಒಂದು ಕಥೆಯನ್ನು ಹೇಳಿ ಒಂದು ನೀತಿಯನ್ನು ಹೇಳುತ್ತಾರೆ. ಹಾಗೆ ಕಥೆಯನ್ನು ರೂಪಕವಾಗಿ ಹೇಳಿದಾಗ ನಾವು ತಪ್ಪಾಗಿ ತಿಳಿದುಕೊಳ್ಳಬಾರದು. ಅಲ್ಲಿ ಆ ಕಥೆಯ ಹಿಂದಿರುವ ಸಂದೇಶ ಮಾತ್ರ ಗ್ರಾಹ್ಯ. ಈ ವಿಷಯ ತಿಳಿಯದೇ ಪುರಾಣ ಅನುವಾದ ಮಾಡಿದರೆ ನರಕಾದಿ ಅನಾಹುತವಾದೀತು! ಇದಕ್ಕೆ ಒಂದು ಉತ್ತಮ ಉದಾಹರಣೆ ಪದ್ಮಪುರಾಣದಲ್ಲಿ ಬರುವ ‘ಕಾರ್ತ್ತಿಕಮಾಸ ಮಹಾತ್ಮೆ’ ಕಥೆ. ಅಲ್ಲಿ ಕಾರ್ತ್ತಿಕ ಮಾಸದಲ್ಲಿ ಆಕಾಶ ದೀಪವಿಡುವುದರ ಮಹಾತ್ಮೆಯನ್ನು ಹೇಳುವುದಕ್ಕಾಗಿ ಒಂದು ಕಥೆಯನ್ನು ಹೇಳುತ್ತಾರೆ. ಆ ಕಥೆ ಹೀಗಿದೆ: ಒಂದು ಸಂಜೆ ಕಾಗೆಯೊಂದು ಆಕಾಶ ಮಾರ್ಗವಾಗಿ ತನ್ನ ಗೂಡಿನತ್ತ ಸಾಗುತ್ತಿತ್ತು. ಆಗ ಅದಕ್ಕೆ ಒಂದು ಮನೆಯ ಅಂಗಳದಲ್ಲಿನ ತುಳಸೀಕಟ್ಟೆಯಲ್ಲಿ ಹಚ್ಚಿದ ದೀಪ ಕಾಣಿಸುತ್ತದೆ. ಕಾಗೆ ಆ ದೀಪವನ್ನು ಹಣ್ಣು ಎಂದು ಭಾವಿಸಿ, ಕೆಳಕ್ಕೆ ಬಂದು ತನ್ನ ಕೊಕ್ಕಿನಿಂದ ದೀಪದ ಬತ್ತಿಯನ್ನು ಹಿಡಿದುಕೊಂಡು ಮೇಲಕ್ಕೆ ಹಾರುತ್ತದೆ. ಹಾಗೆ ಹಾರುವಾಗ ಅದಕ್ಕೆ ಅದು ಹಣ್ಣಲ್ಲ, ಬೆಂಕಿ ಎನ್ನುವುದು ತಿಳಿದು, ತನ್ನ ಬಾಯಿಯಿಂದ ದೀಪವನ್ನು ಕೆಳಕ್ಕೆ ಬೀಳಿಸುತ್ತದೆ. ಹೀಗೆ ಕಾಗೆಯ ಕೊಕ್ಕಿನಿಂದ ಬಿದ್ದ ದೀಪ ಒಂದು ಹುಲ್ಲುಮನೆಯಮೇಲೆ ಬಿದ್ದು, ಆ ಮನೆ ಹೊತ್ತಿಕೊಂಡು ಉರಿದು ದೊಡ್ಡ ಆಕಾಶ ದೀಪವಾಗುತ್ತದೆ. ಈ ರೀತಿ ದೊಡ್ಡ ಆಕಾಶದೀಪ ಹಚ್ಚಿದ ಪುಣ್ಯದಿಂದ ಕಾಗೆ ಸ್ವರ್ಗವನ್ನು ಪಡೆಯುತ್ತದೆ! ಇದು ಕಥೆ. ಈ ಕಥೆಯನ್ನು ಓದಿ, ಅದು ವಾಸ್ತವ ಎಂದು ತಿಳಿದು, ಕಾರ್ತ್ತಿಕ ಮಾಸದಲ್ಲಿ ಯಾರದ್ದಾದರೂ ಮನೆಗೆ ಬೆಂಕಿ ಕೊಟ್ಟರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ನಾವು ತಿಳಿದರೆ ಅದು ಅನಾಹುತ. ಇಲ್ಲಿ ಹೇಳಿರುವುದು ‘ಕಾರ್ತ್ತಿಕ ಮಾಸದಲ್ಲಿ ಆಕಾಶದೀಪ ಹಚ್ಚಿದರೆ ಮಹಾ ಪುಣ್ಯಫಲ ಪ್ರಾಪ್ತಿಯಾಗುತ್ತದೆ’ ಎನ್ನುವ ಸಂದೇಶ ಅಷ್ಟೇ. ಇಲ್ಲಿರುವ ಇತರ ಕಥಾಂಶವನ್ನು ನಾವು ಅಲ್ಲೇ ಬಿಟ್ಟು ಬಿಡಬೇಕು. ಇಂತಹ ಅನೇಕ ಕಥೆಗಳು ಪುರಾಣದಲ್ಲಿ ಬರುತ್ತವೆ. ಪುರಾಣವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ತಿಳಿಯಲಿಕ್ಕಾಗಿ ಇಂತಹ ಕಥೆಗಳಿವೆ.
ಪುರಾಣದಲ್ಲಿ ಕೆಲವೊಮ್ಮೆ ದರ್ಶನ ಭಾಷೆಯಲ್ಲಿ ಕಥೆಗಳನ್ನು ಹೇಳಲಾಗುತ್ತದೆ. ಉದಾಹರಣೆಗೆ ‘ಮಹಾಭಾರತ ಯುದ್ಧದಲ್ಲಿ ಬಾಣಗಳಿಂದ ಕೃಷ್ಣನ ಕವಚ ಒಡೆದುಹೋಗಿ, ಮೈಯಲ್ಲೆಲ್ಲಾ ರಕ್ತ ಸುರಿಯುತ್ತಿತ್ತು’ ಎನ್ನುತ್ತಾರೆ. ಇದು ದರ್ಶನ ಭಾಷೆ. ತ್ರಿಗುಣಾತೀತನಾದ, ಸ್ವರೂಪಭೂತನಾದ ಭಗವಂತನ ಮೈಯಲ್ಲಿ ಅದೆಲ್ಲಿಯ ರಕ್ತ?  ಇದು ಅಲ್ಲಿರುವ ಕೌರವ ಸೈನಿಕರಿಗೆ ಕಾಣಿಸಿದ ದೃಶ್ಯ ಅಷ್ಟೇ. ಇಲ್ಲಿ ಕಾಣಿಸಿದ್ದೇ ಬೇರೆ-ಇರುವುದೇ ಬೇರೆ. ಈ ರೀತಿ ಪುರಾಣಗಳಲ್ಲಿ ನಾನಾ ವಿಧದ ನಿರೂಪಣೆ ವಿಶೇಷಗಳಿವೆ. ಮಧ್ವಾಚಾರ್ಯರು ಪುರಾಣಗಳಿಗೆ ಹೇಗೆ ಅರ್ಥ ಹಚ್ಚಬೇಕು ಎನ್ನುವುದನ್ನು ವಿವರಿಸುತ್ತಾ, ಅಲ್ಲಿರುವ ಮೂರು ಭಾಷೆಗಳು ಮತ್ತು ಸಪ್ತಭೇದಗಳನ್ನು ವಿವರಿಸಿದ್ದಾರೆ. ಮೂರು ಭಾಷೆಗಳು: ೧. ದರ್ಶನಭಾಷೆ: ಇದು ಕಂಡದ್ದನ್ನು ಹೇಳುವ ಭಾಷೆ. ೨, ಗುಹ್ಯಭಾಷೆ: ಏನು ಹೇಳಿದ್ದಾರೆ ಎಂದು ನೇರವಾಗಿ ತಿಳಿಯದಂತೆ ಒಗಟಿನರೂಪದಲ್ಲಿ ಹೇಳುವ ಭಾಷೆ. ೩. ಸಮಾಧಿಭಾಷೆ: ಇದ್ದದ್ದನ್ನು ಇದ್ದಂತೆ ಹೇಳುವ ಭಾಷೆ. ಈ ಮೂರು ಬಗೆಯ ಭಾಷಾ ಪ್ರಯೋಗ ವೇದಗಳಲ್ಲಿಯೂ ಬಳಕೆಯಲ್ಲಿದೆ. ಇದನ್ನು ತಿಳಿಯದೆ ವೇದ ಓದಿದರೆ ಎಲ್ಲವೂ ನಿಗೂಢ.  ಇನ್ನು ಏಳು ರೀತಿಯಲ್ಲಿ ಪುರಾಣ ನಿರೂಪಣೆ ಇದೆ. ಅವುಗಳೆಂದರೆ: ೧. ವ್ಯತ್ಯಾಸ: ಕಾಲ-ದೇಶ-ವ್ಯಕ್ತಿಗಳನ್ನು ವ್ಯತ್ಯಾಸ ಮಾಡಿ ಹೇಳುವುದು. ೨.ಪ್ರಾತಿಲೋಮ್ಯ: ಮುಂದೆ ಹಿಂದೆ ಮಾಡಿ ಹೇಳುವುದು. ೩.ಗೋಮೂತ್ರಿ : ಗಾಡಿಗೆ ಕಟ್ಟಿದ ಎತ್ತು ಮೂತ್ರ ಮಾಡಿದಂತೆ ಸುತ್ತುಬಳಸಿ ಹೇಳುವುದು. ೪.ಪ್ರಘಸ: ಹುಲ್ಲುಗಾವಲಿನಲ್ಲಿ ಹಸುಗಳು ಹುಲ್ಲು ತಿಂದಂತೆ ಅಲ್ಲಲ್ಲಿ ವಿಷಯಗಳನ್ನು ತುರುಕಿ ಹೇಳುವುದು. ೫. ಉಕ್ಷಣಾ: ವಿಷಯಗಳನ್ನು ಪ್ರೋಕ್ಷಣೆ ಮಾಡಿದಂತೆ ಸ್ವಲ್ಪಸ್ವಲ್ಪ ಹೇಳುವುದು. ೬.ಸುಧುರ: ಇದ್ದದ್ದನ್ನು ಸಮರ್ಪಕವಾಗಿ ಹೇಳುವುದು ೭. ಸಾಧು: ಸಮಾಧಿಭಾಷೆಯಲ್ಲಿ ಸ್ಪಷ್ಟವಾಗಿ ಹೇಳುವುದು. ಹೀಗೆ ಪುರಾಣಗಳನ್ನು ಈ ಮೂರು ಭಾಷೆಗಳು ಮತ್ತು ಏಳು ವಿಧಾನವನ್ನು ತಿಳಿದು ಅರ್ಥಚಿಂತನೆ ಮಾಡಬೇಕು.
ಆ ಕಾಲದಲ್ಲಿ ಪುರಾಣಗಳ ಹಿನ್ನೆಲೆಯನ್ನು ತಿಳಿದು ಅರ್ಥಮಾಡಿ ಪ್ರವಚನ ಮಾಡಬಲ್ಲ ಶಕ್ತಿ ಪಡೆದವರು ಉಗ್ರಶ್ರವಸ್. ಅದಕ್ಕಾಗಿ ಋಷಿಗಳು ಇಲ್ಲಿ ಅವರನ್ನು ‘ಅನಘ’ ಎಂದು ಸಂಬೋಧಿಸಿದ್ದಾರೆ. ಈ ವಿಶೇಷಣದ ಹಿಂದೆ ಒಂದು ಅಪೂರ್ವ ವಿಷಯ ಅಡಗಿದೆ. ಅನಘ ಎಂದರೆ ಪಾಪವಿಲ್ಲದವನು ಎಂದರ್ಥ.  ಪುರಾಣದ ರಹಸ್ಯಾರ್ಥವನ್ನು ತಿಳಿದುಕೊಳ್ಳದೆ, ಮೇಲ್ನೋಟದ ಅರ್ಥವನ್ನು ಹೇಳುವುದು ಘೋರ ನರಕ ಸಾಧನ  ಎನ್ನುತ್ತಾರೆ. ಆದರೆ ಉಗ್ರಶ್ರವಸ್ ಯಥಾರ್ಥವಾದ ಪುರಾಣದ ರಹಸ್ಯ ತಿಳಿದ ಮತ್ತು ಅದನ್ನು ಜನರಿಗೆ ಹೇಳಿ, ಅವರನ್ನು ಸ್ವರ್ಗಕ್ಕೆ ವಯ್ಯಬಲ್ಲ ಸಾಮರ್ಥ್ಯವುಳ್ಳ ಪುಣ್ಯಾತ್ಮರಾಗಿದ್ದುದರಿಂದ ಅವರನ್ನು ಇಲ್ಲಿ ‘ಅನಘ’ ಎಂದು ಸಂಬೋಧಿಸಿದ್ದಾರೆ.
ಇಲ್ಲಿ ಹೇಳಿರುವಂತೆ ಉಗ್ರಶ್ರವಸ್ ಮಹಾಭಾರತ, ಅಷ್ಟಾದಶಪುರಾಣಗಳ ಜೊತೆಗೆ, ಧರ್ಮಶಾಸ್ತ್ರವನ್ನು ಬಲ್ಲ ಜ್ಞಾನಿಗಳಾಗಿದ್ದರು. ನಮಗೆ ತಿಳಿದಂತೆ ಪುರಾಣ ಮತ್ತು ಮಹಾಭಾರತ ವೇದಾರ್ಥ ನಿರ್ಣಯಕ್ಕೋಸ್ಕರ ರಚಿತವಾದ ಗ್ರಂಥಗಳು. ಆದರೆ ಧರ್ಮಶಾಸ್ತ್ರ ವೇದಕ್ಕೆ ಅನುಗುಣವಾಗಿರುವ ಗ್ರಂಥಗಳು. ವೇದಗಳು ಸನಾತನ ಮತ್ತು ಅವು ಸಾರ್ವಕಾಲಿಕ ಅರ್ಥವನ್ನು ಹೇಳುವಂತಹ ಗ್ರಂಥವಾದರೆ, ಧರ್ಮಗ್ರಂಥಗಳು ಸಾರ್ವಕಾಲಿಕ ಸತ್ಯದ ಜೊತೆಗೆ ಆಯಾ ಕಾಲದ ಸಮಾಜ ಧರ್ಮವನ್ನೂ ಹೇಳುವ ಸಂವಿಧಾನವಿದ್ದಂತೆ. ಈ ಕಾರಣದಿಂದ ಧರ್ಮಗ್ರಂಥಗಳು ಕಾಲಬಾಧಿತ ಮತ್ತು ಅವುಗಳನ್ನು ಎಲ್ಲಾ ಸಂದರ್ಭದಲ್ಲಿ  ನೇರವಾಗಿ ಪ್ರಮಾಣ ಮಾಡಲು ಬರುವುದಿಲ್ಲ. ಉದಾಹರಣೆಗೆ ನಿಯೋಗ ಪದ್ಧತಿಯನ್ನು  ಕೆಲವು ಧರ್ಮಶಾಸ್ತ್ರಗಳು ಹೇಳುತ್ತವೆ. ಅದು ಪಾಂಡವರ ಕಾಲದಲ್ಲಿ ಆಚರಣೆಯಲ್ಲಿತ್ತು. ಆದರೆ ಅದು ಇಂದು ಸಿಂಧುವಲ್ಲ. ಈ ಎಲ್ಲಾ ಕಾರಣದಿಂದ ಸಮಾಜಧರ್ಮ, ವ್ಯಕ್ತಿಧರ್ಮ ಮತ್ತು ಸನಾತನಧರ್ಮ ತಿಳಿದ ಜ್ಞಾನಿಗಳಷ್ಟೇ ಧರ್ಮಶಾಸ್ತ್ರ ಚಿಂತನೆ ಮಾಡಬಲ್ಲರು. ಹೀಗಾಗಿ ಇವೆಲ್ಲವನ್ನೂ ಬಲ್ಲ ಸೂತರನ್ನು ಇಲ್ಲಿ ಋಷಿಗಳು ಗೌರವಪೂರ್ವಕವಾಗಿ ಕೊಂಡಾಡಿದ್ದಾರೆ. 

Thursday, December 27, 2012

Shrimad BhAgavata in Kannada -Skandha-01 -Ch-01(10)


ಪ್ರಶಂಸೆ ಮತ್ತು ವಿಧಿ

ಮುಂದಿನ ಶ್ಲೋಕ ಗ್ರಂಥದ ಮಹತ್ವವನ್ನು ಹೇಳುವ ಶ್ಲೋಕ. ಇಲ್ಲಿ ಭಾಗವತವನ್ನು ಹಿಂದಿನವರು ಆಚರಿಸಿದ ವಿಧಾನವನ್ನು ಹೇಳಿ, ಅವರು ಪಡೆದ ಮಹಾಫಲವನ್ನು ಹೇಳಿ,  ಅದರ ಪ್ರಶಂಸೆಯ ಮೂಲಕ “ನೀವೂ ಕೂಡಾ ಅಂತಹ ಮಹಾಫಲವನ್ನು ಪಡೆಯಿರಿ” ಎಂದು ಒತ್ತುಕೊಟ್ಟು ಹೇಳುವ ಶ್ಲೋಕ.

ನಿಗಮಕಲ್ಪತರೋರ್ಗಳಿತಂ ಫಲಂ ಶುಕಮುಖಾದಮೃತದ್ರವಸಂಯುತಮ್ ।
ಪಿಬತ ಭಾಗವತಂ ರಸಮಾಲಯಂ ಮುಹುರಹೋ ರಸಿಕಾ ಭುವಿ ಭಾವುಕಾಃ          ॥೩॥  

ಭಾಗವತ ವೇದವೆಂಬ ಕಲ್ಪವೃಕ್ಷದಲ್ಲಿ ಅರಳಿದ ರಸಪೂರಿತವಾದ ಹಣ್ಣು. ಬ್ರಹ್ಮಾಂಡಪುರಾಣದಲ್ಲಿ ಹೇಳಿರುವಂತೆ: “ಧರ್ಮ ಪುಷ್ಪಸ್ತ್ವರ್ಥಪತ್ರಃ ಕಾಮಪಲ್ಲವ ಸಂಯುತಃ ।  ಮಹಾಮೋಕ್ಷ ಫಲೋ ವೃಕ್ಷೋ ವೇದೋSಯಂ ಸಮುದೀರಿತಃ”  ವೇದವೆಂಬ ಕಲ್ಪವೃಕ್ಷ  ಧರ್ಮವೆಂಬ ಪುಷ್ಪ, ಅರ್ಥವೆಂಬ ಎಲೆ ಮತ್ತು ಕಾಮ ಎನ್ನುವ ಚಿಗುರೆಲೆಯಿಂದ ಯುಕ್ತವಾಗಿದೆ. ಆದರೆ ಆ ವೃಕ್ಷದಲ್ಲಿ ಮಹಾಫಲವಾದ ಮೋಕ್ಷವನ್ನು ಕೊಡುವ ಹಣ್ಣುಗಳೂ ತುಂಬಿವೆ. ಇಂತಹ ಅಮೂಲ್ಯವಾದ ಹಣ್ಣುಗಳನ್ನು ಮರಹತ್ತಿ ಪಡೆಯಲು ಯೋಗ್ಯರಾದವರಿಗಾಗಿ ವೇದವ್ಯಾಸರು ವೇದವಿಭಾಗ ಮಾಡಿ ಕೊಟ್ಟರೆ, ಮರ ಹತ್ತಲು ಸಾಧ್ಯವಾಗದೇ ಇದ್ದವರಿಗಾಗಿ ಭಾಗವತ ಮತ್ತು ಮಹಾಭಾರತ ಎನ್ನುವ ಎರಡು ರಸಪೂರಿತ ಹಣ್ಣನ್ನು ಕಳಚಿ ಕೊಟ್ಟಿದ್ದಾರೆ.
ಯಾವಾಗಲೂ ಮರದಲ್ಲಿ ಅತ್ಯಂತ ರಸಪೂರಿತ ಮತ್ತು ಸಿಹಿಯಾಗಿರುವ ಹಣ್ಣನ್ನು ಗಿಳಿ ಮೊದಲು ಕುಕ್ಕಿ ತಿನ್ನುತ್ತದೆ. ಭಾಗವತವೆಂಬ ರಸಪೂರಿತ ಸಿಹಿ ಹಣ್ಣು ಶುಕಮುನಿಯೆಂಬ ಗಿಳಿ ಮುಟ್ಟಿದ, ವೇದವೆಂಬ ಕಲ್ಪವೃಕ್ಷದಲ್ಲಿ ಗಳಿತ, ಅತ್ಯಂತ ರಸಪೂರಿತ ಹಣ್ಣು. ವೇದವ್ಯಾಸರು ತಮ್ಮ ಹದಿನೇಳು ಪುರಾಣಗಳನ್ನು ‘ರೋಮಹರ್ಷಣ’ನಿಗೆ ಉಪದೇಶ ಮಾಡಿದರೆ, ಹದಿನೆಂಟನೇ ಪುರಾಣ ಭಾಗವತವನ್ನು ತನ್ನ ಮಗನಾದ ಶುಕಮುನಿಗೆ ಉಪದೇಶ ಮಾಡಿದರು. ಶುಕಮುನಿಯಂತಹ ಅಪರೋಕ್ಷ ಜ್ಞಾನಿಗಳು ಸವಿದ ಈ ಹಣ್ಣು ಅಮೃತದ್ರವ.
ಭಾಗವತ ಎನ್ನುವ ಗ್ರಂಥದಲ್ಲಿ ಭಗವದ್ ಭಕ್ತಿ ಎನ್ನುವ ರಸವನ್ನು ಕುಡಿಯಿರಿ ಎನ್ನುತ್ತಾರೆ ವ್ಯಾಸರು. ನಾವು ಭಾಗವತ ಗ್ರಂಥದಲ್ಲಿ ಪ್ರತಿಪಾಧ್ಯನಾದ ಭಗವಂತನ ಗುಣಗಳ ಆಸ್ವಾದರೂಪವಾದ ರಸವನ್ನು ನಿರಂತರ ಕುಡಿಯುತ್ತಿರಬೇಕು. ಕೆಲವರು ಎಷ್ಟು ದಿನ ಭಾಗವತ ಕೇಳಬೇಕು ಎನ್ನುವ ಪ್ರಶ್ನೆಯನ್ನು ಕೇಳುತ್ತಾರೆ. ಪರೀಕ್ಷಿತ ರಾಜ ಏಳು ದಿನ ಕೇಳಿರುವುದರಿಂದ ನಾವೂ ಕೂಡಾ ಏಳು ದಿನ ಕೇಳಬೇಕು ಎನ್ನುವವರಿದ್ದಾರೆ. ಆದರೆ ಭಾಗವತವನ್ನು ನಾವು ನಮ್ಮ ದೇಹದಲ್ಲಿ ಉಸಿರಿರುವಷ್ಟು ಕಾಲ ಕೇಳಬೇಕು.[ಪರೀಕ್ಷಿತ ಕೂಡಾ ತನ್ನ ಸಾವಿನ ತನಕ ಭಾಗವತ ಶ್ರವಣ ಮಾಡಿದ. ಆದರೆ ಆಗ ಅವನಲ್ಲಿದ್ದದ್ದು ಕೇವಲ ಏಳೇ ದಿನವಾದ್ದರಿಂದ ಆತ ಏಳು ದಿನ ಶ್ರವಣ ಮಾಡಿದ] ಸಂಸಾರ ಲಯವಾಗಿ ಮೋಕ್ಷಪ್ರಾಪ್ತಿಯಾಗುವ ತನಕವೂ(ಆ-ಲಯಂ) ನಾವು ಭಾಗವತವನ್ನು ನಿರಂತರ ಕೇಳಬೇಕು. ಒಮ್ಮೆ ಕೇಳಿದರೆ ಸಾಲದು, ಮತ್ತೆಮತ್ತೆ (ಮುಹುಃ)ಕೇಳಬೇಕು. ಆನಂದ-ಆಶ್ಚರ್ಯಪಟ್ಟು  ಈ ರಸಪಾನಮಾಡಬೇಕು. ಇದು ಅತಿಯಾಗಿ ಅಜೀರ್ಣವಾಗುವ ರಸವಲ್ಲ. ಇದರ ಅರ್ಥವ್ಯಾಪ್ತಿ ಅಪರಂಪಾರ. ಇದರಲ್ಲಿ ಭಗವತನನ್ನು ಕಂಡು-ಕೇಳಿ- ತಿಳಿದು ಅಚ್ಚರಿಪಡಿ(ಅಹೋ) ಎಂದಿದ್ದಾರೆ ವ್ಯಾಸರು.
ಭಾಗವತ ಶ್ರವಣ ಮಾಡುವವನು ಭಕ್ತಿರಸಗ್ರಹಣಶಕ್ತಿಯುಳ್ಳ ರಸಿಕನಾಗಿರಬೇಕು. ಭಗವಂತನ ಬಗೆಗೆ ಅನನ್ಯಭಕ್ತಿ ಬೆಳೆಸಿಕೊಂಡು ಪ್ರೀತಿಯಿಂದ ಅಧ್ಯಯನ ಮಾಡಬೇಕು. ನಿರಂತರ ಭಕ್ತಿರಸ ಬೆಳೆಸಿಕೊಳ್ಳಲು ನಮ್ಮಲ್ಲಿ “ನಾನು ಜ್ಞಾನ ಶಿಖೆಯನ್ನು ಏರಬೇಕು(ಎತ್ತರಕ್ಕೇರಬೇಕು)” ಎನ್ನುವ ಬಯಕೆ(ಭಾವುಕಾಃ) ಇರಬೇಕು. ಹೀಗೆ ಈ ಸಂಸಾರದಿಂದ ಲಯಹೊಂದಿ ಮೋಕ್ಷಗಳಿಸುವ ತನಕವೂ ಭಾಗವತದ ರಸಪಾನ ಮಾಡಿ ಎಂದಿದ್ದಾರೆ ಆಚಾರ್ಯರು.  

Wednesday, December 26, 2012

Shrimad BhAgavata in Kannada -Skandha-01 -Ch-01(9)


ಶ್ರೀಮದ್ಭಾಗವತೇ ಮಹಾಮುನಿಕೃತೇ ಕಿಂ ವಾSಪರೈರೀಶ್ವರಃ” ಇಲ್ಲಿ ಭಾಗವತವನ್ನು “ಶ್ರೀಮದ್ಭಾಗವತ” ಎಂದು ಕರೆದಿದ್ದಾರೆ. ಸಾಮಾನ್ಯವಾಗಿ ಗುರು-ಹಿರಿಯರನ್ನು, ದೇವತಾಸ್ಥಾನಗಳನ್ನು ‘ಶ್ರೀ’ ಸೇರಿಸಿ ಗೌರವ ಪೂರ್ವಕವಾಗಿ ಹೇಳಬೇಕು ಎನ್ನುವುದು ಸಂಪ್ರದಾಯ. ಇಲ್ಲಿ ಭಾಗವತ ಗ್ರಂಥವನ್ನು ‘ಶ್ರೀಮದ್ಭಾಗವತ’ ಎಂದು ‘ಶ್ರೀ’ ಸೇರಿಸಿ ಕರೆದಿದ್ದಾರೆ. ಇದಕ್ಕೆ ವಿಶೇಷ ಕಾರಣವಿದೆ. ವೇದವ್ಯಾಸರು ತಾನು ರಚಿಸಿದ ಮೊದಲ ಹದಿನೇಳು ಪುರಾಣಗಳ ಸಾರಸಂಗ್ರಹದ ಉಪಾಸನೆಯನ್ನು, ಜನರಿಗೆ ಕೊಡಬೇಕು ಎನ್ನುವ ಉದ್ದೇಶದಿಂದ ಭಾಗವತವನ್ನು ರಚಿಸಿದರು. ಇದು ಭಗವಂತನ ವಿಶೇಷ ಜ್ಞಾನಕ್ಕೋಸ್ಕರ, ತಾತ್ಪರ್ಯಪೂರ್ವಕವಾಗಿ  ಅವರು  ರಚಿಸಿಕೊಟ್ಟ ಗ್ರಂಥವಾದುದರಿಂದ, ಇದನ್ನು  “ಶ್ರೀಮದ್ಭಾಗವತ” ಎಂದು ಕರೆದಿದ್ದಾರೆ.
ಈ ಶ್ಲೋಕದಲ್ಲಿ ಭಾಗವತದ ಕರ್ತೃ: ‘ಮಹಾಮುನಿ’ ಎನ್ನಲಾಗಿದೆ. “ಮೌನಂ  ಮನನಂ ಮನನಯುಕ್ತೋ ಮುನಿಃ ಅಪರೋಕ್ಷಜ್ಞಾನಮ್ ಅಮೌನಮ್” [ಇದು ‘ಮುನಿ’ ಎನ್ನುವ ಪದಕ್ಕೆ ಹೃಶೀಕೇಶತೀರ್ಥರು ಆಚಾರ್ಯರಿಂದ ಕೇಳಿ ಬರೆದಿಟ್ಟಿರುವ ಶಬ್ದಾರ್ಥ]. ಮನನ ಮಾಡುವವನು ಮುನಿ. ಇಡೀ ವಿಶ್ವವನ್ನು, ತನ್ನ ಅಖಂಡ ಸ್ವರೂಪವನ್ನು ಮನನಮಾಡಬಲ್ಲ, ಓಂಕಾರದ ಪೂರ್ಣರಹಸ್ಯ ಬಲ್ಲ, ಭಗವಂತನ ಅವತಾರವಾದ ವೇದವ್ಯಾಸರೇ ಭಾಗವತದ ಕರ್ತೃ.  ಈ ರೀತಿ ಭಗವಂತನಿಂದ ನೇರವಾಗಿ ಬಂದಿರುವ ಈ ಮಹಾಪುರಾಣವನ್ನು ಕೇಳುವುದರಿಂದ, ಭಾಗವತ ಅಧ್ಯಯನ ಮಾಡುವುದರಿಂದ, ಸ್ವಯಂ ಭಗವಂತನೇ ನಿಮ್ಮ ಹೃದಯದಲ್ಲಿ ಬಂದು ನೆಲೆಸಿ, ನಿಮ್ಮ ಅರಿವಿಗೆ  ಗೋಚರನಾಗುತ್ತಾನೆ. ಈ ಮಹಾಫಲದ ಮುಂದೆ ಇತರ ಫಲವನ್ನು ಹೇಳಿ ಏನು ಪ್ರಯೋಜನ ಎಂದು ಕೇಳುತ್ತಾರೆ ವ್ಯಾಸರು. ಇಲ್ಲಿ ‘ಈಶ್ವರ’ ಎನ್ನುವ ಪದ ಬಳಕೆಯಾಗಿದೆ. ಬ್ರಹ್ಮಾದಿ ಸಕಲ ದೇವತೆಗಳು ಈಶರು. ಇಂತಹ ಈಶರಿಗೂ ಬಯಸಿದ ಫಲವನ್ನು(ವರ) ಕೊಡುವ ಭಗವಂತ ಈಶ್ವರ. ಭಾಗವತ ಇಂತಹ ಭಗವಂತನನ್ನು ನಮ್ಮ ಹೃದಯದಲ್ಲಿ ಸೆರೆಹಿಡಿಯತಕ್ಕಂತಹ ಪರಮಪವಿತ್ರ ಮಹಾಗ್ರಂಥ.
ಭಾಗವತ ಅಧ್ಯಯನ ಮಾಡುವವರ ಪ್ರಯತ್ನ ಹೇಗಿರಬೇಕು ಎನ್ನುವುದನ್ನು ವಿವರಿಸುತ್ತಾ ಹೇಳುತ್ತಾರೆ: “ಸದ್ಯೋ ಹೃದ್ಯವರುಧ್ಯತೇSತ್ರ ಕೃತಿಭಿಃ ಶುಶ್ರೂಷುಭಿಸ್ತತ್ ಕ್ಷಣಾತ್”  ಎಂದು. ನಾವು ಶಾಸ್ತ್ರದ ನಿರಂತರ ಶ್ರವಣ-ಮನನ  ಮಾಡುವ ಪ್ರಯತ್ನಶೀಲರಾಗಿರಬೇಕು. ಜ್ಞಾನಕ್ಕೋಸ್ಕರ ನಿರಂತರ ಸಾಧನೆ ಮಾಡುತ್ತಾ,  “ಭಾಗವತ ಅಧ್ಯಯನ ಮಾಡಬೇಕು” ಎನ್ನುವ ಅದಮ್ಯ ಬಯಕೆಯನ್ನು ಬೆಳೆಸಿಕೊಂಡು, ಶ್ರದ್ಧಾ-ಭಕ್ತಿಯಿಂದ, ಹೃದಯದ ಬಾಗಲನ್ನು ತೆರೆದು, ಜ್ಞಾನ ಕೊಡುವವರ ಸೇವೆಯನ್ನು ಮಾಡುತ್ತಾ, ಭಾಗವತ ಅಧ್ಯಯನ ಮಾಡುವವರಿಗೆ ತತ್-ಕ್ಷಣದಲ್ಲಿ ಮಹಾಫಲ ದೊರೆಯುತ್ತದೆ, ಇಲ್ಲವೇ ಸಾಧನೆಗನುಗುಣವಾಗಿ  ಕಾಲಕ್ರಮದಲ್ಲಿ ಫಲಪ್ರಾಪ್ತಿಯಾಗುತ್ತದೆ.
ಹೀಗೆ ಎರಡನೇ ಶ್ಲೋಕ ಭಾಗವತವನ್ನು ವೇದವ್ಯಾಸರು ಏಕೆ ರಚಿಸಿದರು, ಇದರಲ್ಲಿರುವ ವಿಷಯವೇನು, ಇದರ ಅಧಿಕಾರಿ ಯಾರು ಮತ್ತು ಇದನ್ನು ಅಧ್ಯಯನ ಮಾಡುವುದರ ಫಲವೇನು ಎನ್ನುವುದನ್ನು ಸ್ಪಷ್ಟವಾಗಿ ನಮ್ಮ ಮುಂದೆ ತೆರೆದಿಟ್ಟಿದೆ. ಇಷ್ಟು ತಿಳಿಸಿದಮೇಲೆ ಸಂಬಂಧದ ಕುರಿತು ಇಲ್ಲಿ ವಿವರಿಸಿಲ್ಲ. ಅದನ್ನು ನಾವೇ  ಅರ್ಥ ಮಾಡಿಕೊಳ್ಳಬೇಕು. ನಮಗೆ ತಿಳಿದಂತೆ: ವಿಷಯ-ಭಗವಂತ, ಅಧಿಕಾರಿ-ಸಾಧಕ. ಆದ್ದರಿಂದ ವಿಷಯ-ಜ್ಞೇಯ ಮತ್ತು ಅಧಿಕಾರಿ ಜ್ಞಾತೃ. ಆದ್ದರಿಂದ ವಿಷಯಕ್ಕೂ ಅಧಿಕಾರಿಗೂ ಜ್ಞಾತೃ-ಜ್ಞೇಯ ಸಂಬಂಧ.  ಅದೇ ರೀತಿ ಪ್ರಯೋಜನ-ಧ್ಯೇಯ, ಭಗವಂತ-ದಾತೃ ಮತ್ತು ಅಧಿಕಾರಿಗಳು-ಪ್ರತಿಗ್ರಹಿತೃಗಳು. ಇದು ಇಲ್ಲಿರುವ ಸಂಬಂಧಗಳು.  ಹೀಗೆ ಪ್ರತಿಪಾಧ್ಯ, ವಿಷಯ, ಅಧಿಕಾರ, ಫಲವನ್ನು ತಿಳಿದುಕೊಂಡಾಗ ನಮಗೆ “ಕರೋತೀಶೋ ಮಹತ್ಫಲಮ್”-ಭಗವಂತನ ವಿಶೇಷ ಅನುಗ್ರಹವಾಗುತ್ತದೆ. ಇದನ್ನು ತಿಳಿದು ಮುಂದೆ ಗ್ರಂಥಾಧ್ಯಯನ ಮಾಡಿದರೆ ವಿಶೇಷ ಅನುಗ್ರಹದಿಂದ ವಿಶೇಷ ಅನುಸಂಧಾನ ನಮಗೆ ಸಾಧ್ಯ. 

Tuesday, December 25, 2012

Shrimad BhAgavata in Kannada -Skandha-01 -Ch-01(8)


ಭಾಗವತ ಓದುಲು ಅಧಿಕಾರಿಗಳು ಯಾರು ಎನ್ನುವುದನ್ನು ವಿವರಿಸುತ್ತಾ ವ್ಯಾಸರು ಹೇಳುತ್ತಾರೆ: “ನಿರ್ಮತ್ಸರಾಣಾಂ ಸತಾಮ್” ಎಂದು. “ಮತ್ಸರವಿಲ್ಲದ ಸಜ್ಜನರಿಗಾಗಿ ಈ ಭಾಗವತ ನಿರ್ಮಾಣ ಮಾಡಿದೆ” ಎಂದಿದ್ದಾರೆ ವೇದವ್ಯಾಸರು. ಈ ಮಾತು ಅರ್ಥವಾಗಬೇಕಾದರೆ ನಮಗೆ ‘ಸಜ್ಜನ’ ಅನ್ನುವ ಪದದ ಅರ್ಥ ತಿಳಿದಿರಬೇಕು. ಇದನ್ನು ವ್ಯಾಸರೇ ಹಿಂದೆ ತಮ್ಮ ಕಪಿಲಾವತಾರದಲ್ಲಿ ತನ್ನ ತಾಯಿ ದೇವಹೂತಿಗೆ ವಿವರಿಸಿರುವುದನ್ನು ಕಾಣುತ್ತೇವೆ. ಇದನ್ನು ಭಾಗವತದಲ್ಲೇ ಮುಂದೆ ಮೂರನೇ ಸ್ಕಂಧದಲ್ಲಿ ವಿವರಿಸಲಾಗಿದೆ. ಅಲ್ಲಿ ಹೇಳುವ ‘ಸಜ್ಜನ’ ಪದದ ಸಂಕ್ಷಿಪ್ತ ಅರ್ಥವಿವರಣೆ ಹೀಗಿದೆ:

ತಿತಿಕ್ಷವಃ ಕಾರುಣಿಕಾಃ ಸುಹೃದಾಃ ಸರ್ವದೇಹಿನಾಮ್  ।
ಅಜಾತಶತ್ರವಃ  ಶಾಂತಾಃ ಸಾಧವಃ ಸಾಧುಭೂಷಣಾಃ ॥೦೩-೨೬-೨೧॥

ಮಯ್ಯನನ್ಯೇನ ಭಾವೇನ ಭಕ್ತಿಂ ಕುರ್ವಂತಿ ಯೇ ದೃಢಾಮ್।
ಮತ್ಕೃತೇ ತ್ಯಕ್ತಕರ್ಮಾಣಸ್ತ್ಯಕ್ತಸ್ವಜನಬಾಂಧವಾಃ        ॥೦೩-೨೬-೨೨॥

ಮದಾಶ್ರಯಾಃ ಕಥಾ ಹೃಷ್ಟಾಃ ಶೃಣ್ವಂತಿ ಕಥಯಂತಿ ಚ ।
ತಪಂತಿ ವಿವಿಧಾಂಸ್ತಾಪಾ ನೈಕಾತ್ಮ್ಯಗತಚೇತಸಃ       ॥೦೩-೨೬-೨೩॥

ತ ಏತೇ ಸಾಧವಃ ಸಾಧ್ವಿ ಸರ್ವಸಂಗವಿವರ್ಜಿತಾಃ        ।
ಸಂಗಸ್ತೇಷ್ವಥ ತೇ ಪ್ರಾರ್ಥ್ಯಃ ಸಂಗದೋಷಹರಾ ಹಿ ತೇ ॥೦೩-೨೬-೨೧॥

ಜೀವನದಲ್ಲಿ ಎಂತಹ ಕಷ್ಟ ಕಾರ್ಪಣ್ಯ ಬಂದರೂ ಕೂಡಾ, ಮರುಗದೆ, ಸಹನೆಯಿಂದಿದ್ದು, ಆತ್ಮವಿಶ್ವಾಸದಿಂದ ಬದುಕಿನ ದುರ್ಬರತೆಯನ್ನು ಎದುರಿಸುವ ತಾಕತ್ತಿರುವುದು ಸಜ್ಜನಿಕೆಯ ಒಂದು ಮುಖ. ಯಾರಾದರೂ ಏನಾದರೂ ಅಪಮಾನ- ತಿರಸ್ಕಾರ ಮಾಡಿದರೆ, ರೇಗಾಡದೆ, ತಾಳ್ಮೆಗೆಡದೆ, ಸಹನೆಯಿಂದ ಇರಬಲ್ಲವ ಸಜ್ಜನ.  ಕಷ್ಟ-ಕಾರ್ಪಣ್ಯ-ದುಃಖವನ್ನು ಕಂಡು ಕರಗುವ ಕಾರುಣ್ಯಮೂರ್ತಿ, ಕೇವಲ ತನ್ನವರನ್ನಷ್ಟೇ ಅಲ್ಲ, ಪ್ರಾಣಿ-ಪಕ್ಷಿಗಳಿಂದ ಹಿಡಿದು ಎಲ್ಲಾ ಜೀವಮಾತ್ರರನ್ನು ಪ್ರೀತಿಸಬಲ್ಲ ಅಜಾತಶತ್ರು-ಸಜ್ಜನ. [ಅಜಾತಶತ್ರು= ಯಾರೇ ತನ್ನನ್ನು ದ್ವೇಷಿಸಲಿ, ಆದರೆ ತಾನು ಮಾತ್ರ ಯಾರನ್ನೂ ದ್ವೇಷಿಸದೇ ಇರುವುದು. ಉದಾಹರಣೆಗೆ ಧರ್ಮರಾಯ]. ತಟ್ಟನೆ ಉದ್ವೇಗಕ್ಕೊಳಗಾಗದೆ, ಕಾಮ-ಕ್ರೋಧಕ್ಕೊಳಗಾಗದೆ, ಬದುಕಿನಲ್ಲಿ ಸ್ಥಿರವಾಗಿ ನಿಲ್ಲಬಲ್ಲವ ಸಜ್ಜನ. ಇದು ಸಾಮಾಜಿಕವಾಗಿ ಇರಬೇಕಾದ ಸಜ್ಜನಿಕೆಯ ವಿವರಣೆ. ಆದರೆ ಈ ಎಲ್ಲಾ ಗುಣಧರ್ಮಗಳು ಸಾರ್ಥಕವಾಗುವುದು ಭಗವಂತನ ಮೇಲೆ ನಂಬಿಕೆ ಇದ್ದಾಗ ಮಾತ್ರ. ಭಗವಂತನನ್ನು ನಿರಾಕರಣೆ ಮಾಡುವವರು ಸಜ್ಜನರಲ್ಲ.  ಅನನ್ಯಭಾವದಿಂದ, ಗೌರವದೃಷ್ಟಿಯಿಂದ ಭಗವಂತನನ್ನು ಪ್ರೀತಿಸುವುದು; ತನ್ನ ಬದುಕನ್ನು ಭಗವಂತನ ಅರಿವಿಗೋಸ್ಕರ, ಭಗವಂತನ ಸಾಕ್ಷಾತ್ಕಾರಕ್ಕೋಸ್ಕರ ಮೀಸಲಿಡುವುದು; ಸಮಸ್ತ ಕ್ರಿಯೆಯನ್ನು ಭಗವದರ್ಪಣಾ ಭಾವದಿಂದ ಮಾಡುವುದು ಸಜ್ಜನಿಕೆಯ ಮೂಲಮಂತ್ರ.  ಸದಾ ಭಗವದ್ ವಿಷಯಿಕವಾದ ಕಥೆಗಳನ್ನು ಕೇಳುವುದು ಮತ್ತು ಹೇಳುವುದು, ಯಾವುದೇ ಲೇಪವಿಲ್ಲದೆ ನಿರ್ಲಿಪ್ತ ಬದುಕು ಬಾಳುವುದು ಸಜ್ಜನಿಕೆ. ಇಂತಹ ಸಜ್ಜನರಿಗೆ ಭಗವಂತನನ್ನು ತಿಳಿಸುವ, ಹಾಗೂ ಭಗವಂತನನ್ನು ಸೇರುವ ಮಾರ್ಗವನ್ನು ತಿಳಿಸತಕ್ಕ  ಗ್ರಂಥ ಈ ಭಾಗವತ.
ಇಲ್ಲಿ ಮತ್ಸರವಿಲ್ಲದ ಸಜ್ಜನ ಎಂದಿದ್ದಾರೆ. ಸಂಸ್ಕೃತದಲ್ಲಿ ಮತ್ಸರ ಎಂದರೆ  ಹೊಟ್ಟೆಕಿಚ್ಚಲ್ಲ. ಅಸೂಯೆ ಎಂದರೆ ಹೊಟ್ಟೆಕಿಚ್ಚು. ಇಲ್ಲಿ ಮತ್ಸರ ಎಂದರೆ ಜಿದ್ದು, ಸ್ಪರ್ಧೆ. ಸಮಾನಸ್ಕಂದರೊಂದಿಗೆ ಅಥವಾ ತಮ್ಮಿಂದ ಕೆಳಗಿನವರೊಂದಿಗೆ ಸ್ಪರ್ಧೆ ಇರುತ್ತದೆ. ಆದರೆ ತಮ್ಮಿಂದ ಜ್ಞಾನದಲ್ಲಿ ದೊಡ್ದವರಾಗಿರುವವರ ಜೊತೆಗೆ ಮತ್ಸರ ಸಲ್ಲದು.
“ವೇದ್ಯಂ ವಾಸ್ತವಮತ್ರ ವಸ್ತು ಶಿವದಂ ತಾಪತ್ರಯೋನ್ಮೂಲನಮ್”. ಅಂದರೆ: ಎಲ್ಲವುದರ ಒಳಗೂ-ಹೊರಗೂ ತುಂಬಿರುವ, ಎಲ್ಲವುದರ ಒಳಗಿದ್ದು, ಅದನ್ನು ಇತರ ವಸ್ತುವಿಗಿಂತ ಭಿನ್ನರೂಪದಲ್ಲಿ, ಅದರದರ ಯೋಗ್ಯತೆಗನುಗುಣವಾಗಿ  ಪ್ರೇರೇಪಿಸುತ್ತಿರುವ, ಮೋಕ್ಷಪ್ರದ ಭಗವಂತ ಭಾಗವತದಲ್ಲಿ ಪ್ರತಿಪಾಧ್ಯನಾಗಿದ್ದಾನೆ ಎಂದರ್ಥ. ಇಲ್ಲಿ ‘ವಾಸ್ತವ ವಸ್ತು’ ಎನ್ನುವ ಪದ ಬಳಕೆಯಾಗಿದೆ. ವಸ್ತು ಅನ್ನುವ ಪದಕ್ಕೆ ಸಂಬಂಧಿಸಿದಂತೆ  ಸಂಸ್ಕೃತದಲ್ಲಿ ಅನೇಕ ಧಾತುಗಳಿವೆ. ೧. ವಸ-ನಿವಾಸೇ; ೨. ವಸ-ಆಚ್ಛಾದನೆ; ೩. ವಸ-ಛೇದನೆ; ೪. ವಸು-ಸ್ಥಿತೌ; ೫. ವಸ್ತ-ಪ್ರೇರಣೆ; ಇತ್ಯಾದಿ. ಎಲ್ಲರ ಒಳಗೆ ನಿವಾಸ ಮಾಡುವ ಭಗವಂತ ವಸ್ತು; ಎಲ್ಲರ ಹೊರಗೂ ತುಂಬಿರುವ ಸರ್ವಗತ ಭಗವಂತ ವಸ್ತು; ಪ್ರತಿಯೊಂದರ ಒಳಗೂ ಭಿನ್ನ ರೂಪನಾಗಿ ನೆಲೆಸಿರುವ ಭಗವಂತ ವಸ್ತು; ಪ್ರತಿಯೊಂದರ ಸ್ಥಿತಿಗೆ ಕಾರಣನಾಗಿರುವ ಭಗವಂತ ವಸ್ತು; ಪ್ರತಿಯೊಬ್ಬರ ಒಳಗೂ ಹೊರಗೂ ತುಂಬಿ ಪ್ರೇರೇಪಿಸುವ ಭಗವಂತ ವಸ್ತು. ಆಚಾರ್ಯರು ತಮ್ಮ ನಿರ್ವಚನದಲ್ಲಿ ಹೀಗೆ ಹೇಳುತ್ತಾರೆ: “ವಸ್ತು ಅಪ್ರತಿಹತಂ ನಿತ್ಯಂ ಚ । ಸ್ಕಾಂದೇ ಚ ವಸನಾದ್ ವಾಸನಾದ್ ವಸ್ತು ನಿತ್ಯಾಪ್ರತಿಹತಂ ಯತಃ ।” ಎಂದು. ಇಲ್ಲಿ 'ವಸ(ನಿವಾಸೇ) ಮತ್ತು ತುದ' ಧಾತುವನ್ನು ಹೇಳುತ್ತಾರೆ.  ಸಾಮಾನ್ಯವಾಗಿ ‘ತುದ’ ಎಂದರೆ ದುಃಖೀ ಎನ್ನುವ ಅರ್ಥವಿದೆ. ಆದರೆ ಇಲ್ಲಿ ‘ತುದ’ ಧಾತು ಛೇದನೆ/ಪ್ರೇರಣೆ ಎನ್ನುವ ಅರ್ಥದಲ್ಲಿ ಬಳಕೆಯಾಗಿದೆ. ತಾನು ಅಂತರ್ಯಾಮಿಯಾಗಿ ಒಳಗಿದ್ದು, ಅದರಿಂದಾಗಿ ಒಂದು ವಸ್ತುವನ್ನು ಬೇರೆ ವಸ್ತುವಿಗಿಂತ ಭಿನ್ನವಾಗಿರಿಸಿ, ಪ್ರೇರೇಪಿಸುವ ಭಗವಂತ ‘ವಸ್ತು’ ಎನ್ನುವುದು ಇಲ್ಲಿನ ನಿರ್ವಚನ ಅರ್ಥ. ಇದಲ್ಲದೆ ರೂಡಾರ್ಥದಲ್ಲಿ ಹೇಳುತ್ತಾರೆ: “ಅಪ್ರತಿಹತಂ ನಿತ್ಯಂ ವಸ್ತು” ಎಂದು. ಅಂದರೆ ಎಲ್ಲೆಡೆ, ಎಲ್ಲಾ ಕಾಲದಲ್ಲಿ ತುಂಬಿರುವ ನಿತ್ಯ ತತ್ತ್ವ ಭಗವಂತ ‘ವಸ್ತು’. ಅಂತಹ ಭಗವಂತನ ಗತಿಗೆ ತಡೆ ಇಲ್ಲ.     
ವೇದವ್ಯಾಸರು ಇಲ್ಲಿ ಭಗವಂತನನ್ನು ಕೇವಲ ‘ವಸ್ತು’ ಎಂದು ಹೇಳದೇ, ‘ವಾಸ್ತವ ವಸ್ತು’ ಎಂದಿದ್ದಾರೆ. ಇಲ್ಲಿ ವಾಸ್ತವ ಎಂದರೆ : ನಿತ್ಯ ನಿರಸ್ತದೋಷ ಪೂರ್ಣಗುಣಂ ವಾಸ್ತವಮ್- ಯಾವುದು ಸರ್ವಗತವಾಗಿ ಸರ್ವಕಾಲದಲ್ಲಿ ಸರ್ವವನ್ನೂ ನಿಯಂತ್ರಣ ಮಾಡುತ್ತದೋ, ಅದು ದೋಷರಹಿತಗುಣಪೂರ್ಣವಾದ-ವಾಸ್ತವ. ಹೇಗೆ ಬ್ರಹ್ಮಸೂತ್ರದ ಮೊದಲ ನಾಲ್ಕು ಅಧ್ಯಾಯಗಳಲ್ಲಿ  “ಭಗವಂತ ಗುಣಪೂರ್ಣ, ದೋಷದೂರ, ಸರ್ವಶಾಸ್ತ್ರಗಳಿಂದ ಜ್ಞೇಯನಾದವ” ಎಂದು ಹೇಳಿದ್ದಾರೋ, ಅದನ್ನೇ ಇಲ್ಲಿ  “ವೇದ್ಯಂ ವಾಸ್ತವಮತ್ರ ವಸ್ತು” ಎಂದು ಹೇಳಲಾಗಿದೆ.
ಶಿವದಂ ತಾಪತ್ರಯೋನ್ಮೂಲನಮ್ ಎನ್ನುವಲ್ಲಿ  ‘ಶಿವ’ ಎಂದರೆ ಪರಮಮಾಂಗಲಿಕ ಸ್ಥಿತಿ. ಅವರವರ ಯೋಗ್ಯತೆಗನುಗುಣವಾದ ಪೂರ್ಣವಾದ ಜ್ಞಾನದ ಅಭಿವ್ಯಕ್ತಿಯೇ ‘ಶಿವ’. ಅಂದರೆ ಮೋಕ್ಷಸ್ಥಿತಿ.  ಅದೇ ರೀತಿ ‘ತಾಪತ್ರಯ’. ತಾಪಗಳು ಮೂರು. ೧. ಆಧ್ಯಾತ್ಮಿಕ: ಅಂದರೆ ಮಾನಸಿಕವಾದ ದುಃಖ, ವ್ಯಥೆ, ವೇದನೆ ಇತ್ಯಾದಿ. ೨. ಆದಿದೈವಿಕ: ಪ್ರಕೃತಿಯಿಂದ ಬರುವ ತಾಪಗಳು. ಉದಾಹರಣೆಗೆ: ಅತಿವ್ರಷ್ಟಿ,  ಸಿಡಿಲು ಇತ್ಯಾದಿ. ೩. ಆದಿಭೌತಿಕ: ಅಪಘಾತ, ದರೋಡೆ, ಇತ್ಯಾದಿ ಭೌತಿಕ ತಾಪ. ಇದಲ್ಲದೆ ಸಂಚಿತ, ಪ್ರಾರಾಬ್ಧ ಮತ್ತು ಆಗಾಮಿ ಪಾಪಗಳೂ ಕೂಡಾ ತಾಪತ್ರಯಗಳು.  ಅದೇ ರೀತಿ ಸ್ವಕೃತ, ಮಿತ್ರಕೃತ ಮತ್ತು ಶತ್ರುಕೃತ ತಾಪಗಳೂ ತಾಪತ್ರಯಗಳು. ಈ ತಾಪತ್ರಯಗಳನ್ನು ಮೀರಿನಿಲ್ಲುವ ಏಕೈಕ ಸ್ಥಿತಿ ಮೋಕ್ಷಸ್ಥಿತಿ. ಭಾಗವತ ಮೋಕ್ಷಪ್ರದ ಭಗವಂತನನ್ನು ಪ್ರತಿಪಾದಿಸುವ ಅತ್ಯಮೂಲ್ಯ ಗ್ರಂಥ. ಒಟ್ಟಿನಲ್ಲಿ ಹೇಳಬೇಕೆಂದರೆ: ಎಲ್ಲಾ ದುಃಖಗಳನ್ನು ಪರಿಹರಿಸುವ, ಆನಂದ-ಜ್ಞಾನಗಳ ಪೂರ್ಣ ಸ್ಥಿತಿಯನ್ನು ಕೊಡುವ, ಎಲ್ಲಿಯೂ ತಡೆ ಇಲ್ಲದೆ, ಎಲ್ಲೆಡೆ ಸದಾಕಾಲ ತುಂಬಿರುವ, ಎಲ್ಲಾ ದೋಷಗಳಿಂದ ದೂರನಾದ ಭಗವಂತ-ಭಾಗವತ ಪ್ರತಿಪಾಧ್ಯ.